ಕೆಸರೆರಚುವುದಕ್ಕಷ್ಟೇ ಸೀಮಿತವಾದ ನಮ್ಮ ವೈಚಾರಿಕತೆ!
ಮೊನ್ನೆ ದೀಪಾವಳಿಗೆ ಅಮ್ಮ ಒಬ್ಬಟ್ಟು ಮಾಡಿ ಹಬ್ಬದೂಟವನ್ನು ಎಲೆಗೆ ಬಡಿಸಿ...
ಮೊನ್ನೆ ದೀಪಾವಳಿಗೆ ಅಮ್ಮ ಒಬ್ಬಟ್ಟು ಮಾಡಿ ಹಬ್ಬದೂಟವನ್ನು ಎಲೆಗೆ ಬಡಿಸಿ ಎಲ್ಲರನ್ನು ಊಟಕ್ಕೆ ಕರೆದ್ಲು. ಊಟ ಆರಂಭಿಸಿದ ಅಜ್ಜಿ, "ಲೇ ಹೇಮ, ಕೋಸಂಬ್ರಿಗೆ ಇಷ್ಟು ಉಪ್ಪನ್ನು ಹಾಕೋದಾ? ಇದನ್ನು ತಿಂದರೆ ಬಿ.ಪಿ ಬರುತ್ತೆ ಅಂದ್ಲು. ಅದರ ಜೊತೆ ಜೊತೆಗೆ ಅಪ್ಪ, 'ಅದಿರಲಿ ಒಬ್ಬಟ್ಟು ತಿಂದು ನೋಡು ಇದನ್ನು ತಿಂದ್ರೆ ಶುಗರ್ ಬರೋದು ಗ್ಯಾರಂಟಿ, ತಂದಿರೋ ಎರಡು ಕೆ.ಜಿ ಬೆಲ್ಲ ಪೂರ್ತಿ ಖಾಲಿಯಾಗಿರ್ಬೇಕು' ಅಂದ್ರು. ಇವರಿಬ್ಬರ ಜೊತೆಗೆ ಅಕ್ಕ, 'ಈ ಬಜ್ಜಿ-ಬೋಂಡ ತಿಂದ್ರೆ ಕೊಲೆಸ್ಟ್ರಾಲ್ ಜಾಸ್ತಿಯಾಗಿ ಡಯೆಟ್ ಮಾಡಬೇಕಾಗುತ್ತೆ' ಅಂದ್ಲು. ಇವರೆಲ್ಲರ ಮಾತುಗಳನ್ನಾಲಿಸಿದ ಅಮ್ಮ ಪೆಚ್ಚು ಮೋರೆ ಮಾಡಿ ಕುಳಿತಾಗ ಅಪ್ಪನ ಸ್ನೇಹಿತ ತನ್ನ ಮಗಳ ಮದುವೆ ಪತ್ರ ಕೊಡಲು ಮನೆಗೆ ಬಂದರು. ಅವರನ್ನು ಊಟಕ್ಕೆ ಕರೆದು ಊಟ ಬಡಿಸಿದ ಅಮ್ಮ ಅವರ ಪ್ರತಿಕ್ರಿಯೆಗೆ ಕಾಯುತ್ತಿದ್ದರು. ಅಷ್ಟರಲ್ಲಿ ಆತ ಅಮ್ಮನ ಅಡುಗೆಯನ್ನು ಹೊಗಳಲಾರಂಭಿಸಿದ- ಪಾಯಸ, ಕೋಸಂಬ್ರಿ, ಒಬ್ಬಟ್ಟು, ಪಲ್ಯ, ಬಜ್ಜಿ ಎಲ್ಲವೂ ಚೆನ್ನಾಗಿದೆ. ಅದ್ಭುತ. ಆದ್ರೆ ಸಾಂಬಾರಿಗೆ ಸ್ವಲ್ಪ ಹುಳಿ ಹಾಕ್ಬೇಕಿತ್ತು ಎಂದ. ಇದನ್ನೆಲ್ಲ ನೋಡ್ತಿದ್ದ ನನಗೆ ಅನ್ನಿಸಿದ್ದು "ಲೋಕೋಭಿನ್ನರುಚಿ:". ಹೌದು ಇದು ಸತ್ಯ. ಪ್ರತಿಯೊಂದು ಸಂದರ್ಭ, ಸನ್ನಿವೇಶಗಳನ್ನು ನಾವು ವಿಭಿನ್ನ ದೃಷ್ಟಿಕೋನದಿಂದ ನೋಡುತ್ತೇವೆ. ನಮ್ಮ ವ್ಯಕ್ತಿತ್ವ, ವಿಚಾರ, ಸ್ಥಿತಿ, ಆಲೋಚನೆಗಳಿಗೆ ತಕ್ಕಂತೆ ಆ ಸಂದರ್ಭವನ್ನು ಅಳೆದು ತೂಗಲು ಮುಂದಾಗುತ್ತೇವೆ. ಜೋಗ ಜಲಪಾತದ ರಮಣೀಯ ದೃಶ್ಯ ನೋಡಿ ಆನಂದಿಸುವ ಉಲ್ಲಾಸ ಮನಸ್ಸು, ಅದೇ ಜಲಪಾತ ನೋಡಿ ಅಬ್ಬಾ ಇಷ್ಟು ಎತ್ತರದಿಂದ ಬಿದ್ದರೆ ಪ್ರಾಣ ಹೋಗುವುದು ಖಚಿತ ಎಂಬ ನಕಾರಾತ್ಮಕ ಚಿಂತನೆ ಖಿನ್ನ ಮನಸ್ಸಿನದ್ದು.
ಹೌದು, ಸಂದರ್ಭಕ್ಕೆ ಸರಿಯಾಗಿ ತೂಗುವ, ಕಾಲಕ್ಕೆ ತಕ್ಕಂತೆ ಕುಣಿಯುವ ನಮ್ಮೆಲ್ಲರಲ್ಲಿರುವ ಮಹಾನ್ ರಕ್ಕಸ ಈ ವ್ಯಕ್ತಿನಿಷ್ಠ ನಿರ್ಣಾಯಕ ಗುಣ. ತನಗೆ ಏನು ಭಾಸವಾಗುತ್ತದೋ ಅದೇ ಸತ್ಯ. ಉಳಿದುದೆಲ್ಲ ಮಿಥ್ಯ ಎಂಬ ಧೋರಣಾತ್ಮಕ ನಿಲುವು ನಮ್ಮದು. ಸಲಿಂಗರತಿ ವಿರುದ್ಧ ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಬೆನ್ನಲ್ಲೇ ಪ್ರಾರಂಭವಾಗಿರೋದು ನಮ್ಮ ಕೋಳಿ ಜಗಳ. ಅದು ಬೇಕು-ಬೇಡ, ನೈಸರ್ಗಿಕ-ಅನೈಸರ್ಗಿಕ ಎಂಬ ವಾದ, ಅದು ಪ್ರೇಮ-ಕಾಮ ಎಂಬ ದ್ವಂದ್ವ. ಹೀಗೆ ಸಮಾಜದಲ್ಲಿ ದಿನನಿತ್ಯ ನೆಡೆಯುವ ಅನೇಕ ವಿದ್ಯಮಾನಗಳನ್ನು ಅವಲೋಕಿಸುವ ನಾವು ನಮ್ಮ ಮೂಗಿನ ನೇರಕ್ಕೇ ಎಲ್ಲವನ್ನೂ ತೂಗಿ ನೋಡುತ್ತೇವೆ.
ಇಂದು ನವ ವಿಜ್ಞಾನದ ಪಿತಾಮಹ ಎಂದು ಕರೆಯಲ್ಪಡುವ ಗೆಲಿಲಿಯೋ ಗೆಲಿಲಿ ಮೂಲತಃ ಗಣಿತಶಾಸ್ತ್ರ್ರಜ್ಞ. ಭೌತಶಾಸ್ತ್ರದಲ್ಲಿನ ಪ್ರಯೋಗಗಳು ಮತ್ತು ತಂತ್ರಜ್ಞಾನದ ಅನ್ವೇಷಣೆಗಳು ಆತ ಖಗೋಳಶಾಸ್ತ್ರಜ್ಞನಾಗಲು ಪೂರಕವಾದವು. 1589 ರಲ್ಲಿ ಪಿಸಾ ವಿಶ್ವವಿದ್ಯಾನಿಲಯದಲ್ಲಿ ಉಪನ್ಯಾಸಕ ವೃತ್ತಿ ಆರಂಭಿಸಿದ ಗೆಲಿಲಿಯೊ ಆಗಿನ ಕಾಲಕ್ಕೆ ಶ್ರೇಷ್ಠ ಎಂದು ಕರೆಯಲ್ಪಟ್ಟಿದ್ದ, ಮಾನ್ಯನಾಗಿದ್ದ ಅರಿಸ್ಟಾಟಲ್ನ ಸಿದ್ಧಾಂತಗಳನ್ನು ತರ್ಕ ಮಾಡಲಾರಂಭಿಸಿದ. ಅದರ ಪರಿಣಾಮ ಹುಚ್ಚನೆಂಬ ಬಿರುದು ಸನ್ಮಾನಗಳು, ವಿಶ್ವವಿದ್ಯಾನಿಲಯದಿಂದ ಪದಚ್ಯುತಿ! ಅಂತಹ ನಿಂದನೆಗಳನ್ನು ಎದುರಿಸುತ್ತಲೇ ತನ್ನ ಸಂಶೋಧನೆ ಮುಂದುವರಿಸಿದ ಗೆಲಿಲಿಯೋ ಆರಂಭದಿಂದಲೂ ಅರಿಸ್ಟಾಟಲ್ನ "ಭೂಮಿಯ ಸುತ್ತ ಗ್ರಹಗಳ ಚಲನೆಯ 'ಭೂಕೇಂದ್ರ ಸಿದ್ಧಾಂತ'ವನ್ನು ತರ್ಕಿಸುತ್ತಾ, ಕೋಪರ್ನಿಕಸ್ನ 'ಸೂರ್ಯನ ಸುತ್ತ ಗ್ರಹಗಳ ಚಲನೆಯ' "ಸೌರಕೇಂದ್ರ ಸಿದ್ದಾಂತ"ವನ್ನು ಉತ್ತೇಜಿಸುತ್ತಾ ಬಂದವನು. ಇವನ ಸೌರಕೇಂದ್ರ ಸಿದ್ದಾಂತ ಆಗಿನ ಸಮಯದ ಚರ್ಚೆ. ಇದು ಚರ್ಚ್ ಮತ್ತು ಅರಿಸ್ಟಾಟಲ್ನನ್ನು ಆರಾಧಿಸುತ್ತಿದ್ದ ಸಮಾಜಕ್ಕೆ ಕಹಿಯಾಗಿತ್ತು. ಇದರ ಪರಿಣಾಮ 1616 ರಲ್ಲಿ ಗೆಲಿಲಿಯೋಗೆ ಸಮಾಜ ನೀಡಿದ ಬಹಿಷ್ಕಾರ, ಚಿತ್ರಹಿಂಸೆಯ ಮೂಲಕ ಬೆದರಿಕೆ, ನಾಸ್ತಿಕವಾದಿ ಎಂಬ ಪಟ್ಟ. ಉಳಿದ ದಿನಗಳು ಗೃಹಬಂಧನ. ಆಗಿನ ಕೋರ್ಟ್ ಇಟಲಿಯಿಂದ ಹೊರಗೆ ಹೋಗದಂತೆ, ವ್ಯವಹರಿಸದಂತೆ ನೀಡಿದ ಆದೇಶ. ಇವೆಲ್ಲವನ್ನು ಮತ್ತೆ ಧಿಕ್ಕರಿಸಿ ನಿಂತ ಗೆಲಿಲಿಯೊ ತನ್ನ ಸಂಶೋಧನಾ ಲೇಖನಗಳನ್ನು, ಬರಹಗಳನ್ನು, ಅಭಿಪ್ರಾಯಗಳನ್ನು ಹೇಳುತ್ತಲೇ ಸಾಗಿದ. 1758ರಲ್ಲಿ ಚರ್ಚ್, ತನ್ನ ನಿಲುವಿಗೆ ವಿರೋಧವಾದ ಕೋಪರ್ನಿಕಸ್ನ ಸೌರಕೇಂದ್ರ ಸಿದ್ಧಾಂತವನ್ನು ಎತ್ತಿಹಿಡಿಯುವ ಎಲ್ಲಾ ದಾಖಲೆಗಳನ್ನು, ಪ್ರಯೋಗಗಳನ್ನು ಬಹಿಷ್ಕರಿಸಿತು. ಆದರೆ ಕಾಲಾನಂತರದಲ್ಲಿ ತಂತ್ರಜ್ಞಾನದ ಬೆಳವಣಿಗೆಯಿಂದ, ಅಂದಿನ ಸಮಾಜದ ಕಟ್ಟುಪಾಡಿಗೆ ಎದುರಾಗಿ ನಿಂತ ಅನೇಕ ನಿಷ್ಟುರ ವಿಜ್ಞಾನಿಗಳ ಪರಿಶ್ರಮದಿಂದ ಚರ್ಚ್/ ಸಮಾಜಕ್ಕೆ ಕಹಿಯಾದ ಸೌರಕೇಂದ್ರ ಸಿದ್ಧಾತ ಸಾಬೀತಾಯಿತು. 15ನೇ ಶತಮಾನದಲ್ಲಿ ಸಮಾಜದಿಂದ ಬಹಿಷ್ಕರಿಸಲ್ಪಟ್ಟ, ತಿರಸ್ಕರಿಸಲ್ಪಟ್ಟ ಹುಚ್ಚ-ನಾಸ್ತಿಕ ಗೆಲಿಲಿಯೋ 20ನೇ ಶತಮಾನದಲ್ಲಿ ಸಮಾಜದಲ್ಲಿ ಮಾನ್ಯನಾದ, ಆಧುನಿಕ ವಿಜ್ಞಾನದ ಪಿತಾಮಹನಾದ. 1992ರಲ್ಲಿ ಪೋಪ್ ಜಾನ್ ಪಾಲ್ 2, ಗೆಲಿಲಿಯೋ ಮೇಲಿನ ಚರ್ಚ್ನ ನಿಷ್ಠುರತೆಯ ಬಗ್ಗೆ ಬೇಸರ ವ್ಯಕ್ತಪಡಿಸಿತ್ತಾರೆ.
ಆರೋಗ್ಯಕರ ಸಮಾಜವನ್ನು ಕಟ್ಟಲು ಹೋರಾಡುತ್ತಿದ್ದೇವೆ ಎಂಬ ನಮ್ಮ ವೈಚಾರಿಕತೆ ಮಕ್ಕಳಂತೆ ಒಬ್ಬರ ಮೇಲೊಬ್ಬರು ಕೆಸರೆರೆಚಾಡುವುದಕ್ಕಷ್ಟೇ ಸೀಮಿತವಾಗಿದೆ. ಪೂರ್ವಾಗ್ರಹ ಪೀಡಿತರಂತೆ ಅಹಂ ಭಾವದಿಂದ ನಮ್ಮ ನಿಲುವನ್ನು ಅಭಿಪ್ರಾಯಗಳನ್ನು ಮಂಡಿಸಿ, ಬೇರೆಯವರ ಅಭಿಪ್ರಾಯಗಳನ್ನು ಧಿಕ್ಕರಿಸುವ ತಾತ್ಸಾರ ಮಾಡುವ ನಮ್ಮ ವ್ಯಕ್ತಿನಿಷ್ಠ ನಿರ್ಣಯ ಸಲ್ಲದು. ನಾವೆಲ್ಲ ವ್ಯಕ್ತಿನಿಷ್ಠ ನಿರ್ಣಾಯಕರು. ಈ ವ್ಯಕ್ತಿನಿಷ್ಠ ನಿರ್ಣಾಯಕ ಗುಣ ಮನುಷ್ಯನ ಸಹಜ ಸ್ವಭಾವ ಎಂದು ಅನೇಕ ಬಾರಿ ಅನ್ನಿಸುವುದಿದೆ. ಆದರೆ, ಎಲ್ಲಾ ಸಮಯದಲ್ಲೂ ಈ ಗುಣ ಹಿತಕರ ಅಲ್ಲ. ಹಾಗಂತ ನಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಳೆದುಕೊಳ್ಳಬೇಕು ಅಂತ ಹೇಳ್ತಿಲ್ಲ. ಅಭಿಪ್ರಾಯ ಮತ್ತು ತೀರ್ಪಿಗೆ ಬಹಳಷ್ಟು ವ್ಯತ್ಯಾಸವಿದೆ. ಅಭಿಪ್ರಾಯ ನಮ್ಮ ದೃಷ್ಟಿಯನ್ನು ಹೇಳುತ್ತದೆ, ತೀರ್ಪು ನನ್ನ ದೃಷ್ಟಿಯೇ ವಾಸ್ತವ ಎನ್ನುತ್ತದೆ. ಹುಡುಗ ಪೆನ್ನನ್ನು ಕದ್ದಿರ್ಬೇಕು ಎನ್ನುವುದು ಅಭಿಪ್ರಾಯ ಆದರೆ, ಹುಡುಗ ಕಳ್ಳ ಎನ್ನುವುದು ತೀರ್ಪು. ಅಭಿಪ್ರಾಯಕ್ಕೆ ಸಮ್ಮತಿ-ಅಸಮ್ಮತಿಗೆ ಅವಕಾಶ ಇರುತ್ತದೆ. ಆದರೆ ತೀರ್ಪಿಗೆ ಅವಕಾಶ ಇರುವುದಿಲ್ಲ. ವ್ಯಕ್ತಿನಿಷ್ಠ ನಿರ್ಣಯ ಸ್ವಕೇಂದ್ರಿತವಾದದ್ದು, ಅಹಂಭಾವದ್ದು. ಅದು ನಮ್ಮ ಅಭಿಪ್ರಾಯವೇ ಹೊರತು ಅದರ ಸಾರ್ವತ್ರೀಕರಣ ಸಲ್ಲದು. ಮನಃಶಾಸ್ತಜ್ಞರು ವ್ಯಕ್ತಿಯ ಮನಃಸ್ಥಿತಿಯನ್ನು ಅರಿಯಲು ಪ್ರಯೋಗ-ಪರೀಕ್ಷೆಗಳನ್ನು ಮಾಡುವುದುಂಟು. ಅಂಥವುಗಳಲ್ಲಿ ಒಂದು ಸಾಮಾನ್ಯ ವ್ಯಕ್ತಿಗೆ ಅರ್ಧ ನೀರು ತುಂಬಿದ ಲೋಟವನ್ನು ತೋರಿಸಿದಾಗ, ಅದು ಅರ್ಧ ತುಂಬಿದೆ ಅಂತ ಒಬ್ಬ ವ್ಯಕ್ತಿ ಅಂದ್ರೆ, ಮತ್ತೊಬ್ಬ ಅದು ಅರ್ಧ ಖಾಲಿ ಇದೆ ಎನ್ನುತ್ತಾನೆ. ಇನ್ನೊಬ್ಬ ಲೋಟ ಅರ್ಧ ನೀರಿನಿಂದ ಅರ್ಧ ಗಾಳಿಯಿಂದ ಪೂರ್ಣವಾಗಿ ತುಂಬಿದೆ ಎನ್ನುತ್ತಾನೆ. ಇದು ಪ್ರತಿ ಪರಿವೀಕ್ಷಕನ ಮನಃಸ್ಥಿತಿಯನ್ನು, ಅವರ ಆಶಾ-ನಿರಾಶಾ ಭಾವವನ್ನು ತೋರುತ್ತದೆ. ನಮ್ಮ ನಿರ್ಣಯಗಳು ನಮ್ಮ ಮೌಲ್ಯಗಳನ್ನು ಹೇಳುತ್ತವೆ ಎಂಬುದರಲ್ಲಿ ಸಂಶಯವಿಲ್ಲ. ಕಾಲಿನ ಗ್ಯಾಂಗ್ರೀನ್ ಆಗಿರುವ ಮಧುಮೇಹಿ ಸಂಬಂಧಿಯನ್ನು ವೈದ್ಯರ ಬಳಿಗೆ ಕರೆದುಕೊಂಡು ಹೋದಾಗ, ನಮಗೂ ವೈದ್ಯನಿಗೂ ರೋಗದ ತೀವ್ರತೆಯ ಅರಿವಿದ್ದರೂ, ಪ್ರಾಣಭೀತಿಯದೆಂದು ತಿಳಿದಿದ್ದರೂ ನಮ್ಮ ಹಿತದೃಷ್ಟಿಯಿಂದ ಏನೂ ಆಗಿಲ್ಲ, ಪ್ರಾಣಕ್ಕೆ ಅಪಾಯದ ಸ್ಥಿತಿ ಏನಿಲ್ಲ ಎಂಬ ಆತ್ಮಸ್ಥೈರ್ಯವನ್ನು ಹೆಚ್ಚಿಸುವ ಆಲೋಚನೆಗಳು ಧುಮ್ಮಿಕ್ಕುತ್ತಿರುತ್ತವೆ. ರೋಗಿಯ ಕಾಲಿಗೆ ಗ್ಯಾಂಗ್ರೀನ್ ಆಗಿದೆ ಅಂತ ರೋಗಿಯ ಪ್ರಾಣವೇ ಉಳಿಯುವುದಿಲ್ಲ ಎಂಬ ನಿಲುವು ನಮ್ಮದಲ್ಲ. ಇಂತಹ ವಿಶಾಲ ಭಾವ ಹೊಂದಿರುವ ನಾವು ಒಬ್ಬ ವ್ಯಕ್ತಿಯ ಒಂದು ಗುಣವನ್ನು ನೋಡಿ, ವ್ಯಕ್ತಿಯ ಇಡೀ ಸ್ವಭಾವವನ್ನು ಹೇಳಲು ಮುಂದಾಗುವುದರಲ್ಲಿ ಯೋಚಿಸಬೇಕಿದೆ. ನಿನಗೆ ನನ್ನ ಹೆಸರು ಮಾತ್ರ ಗೊತ್ತು, ಆದರೆ ನನ್ನ ಕಥೆ ಗೊತ್ತಿಲ್ಲ. ನೀನು ನಾನೇನು ಮಾಡಿದ್ದೇನೆ ಎಂಬುದನ್ನು ಕೇಳಿದ್ದೀಯ, ಆದರೆ ನಾನೇಕೆ ಮಾಡಿದ್ದೇನೆ ಎಂಬುದನ್ನು ಕೇಳಿಲ್ಲ ಎಂಬ ಹೇಳಿಕೆಯನ್ನು ವ್ಯಕ್ತಿನಿಷ್ಠ ನಿರ್ಣಾಯಕರಾದ ನಾವು ಮನನ ಮಾಡಬೇಕಾದ ಅವಶ್ಯಕತೆಯಿದೆ.
ಇದರ ಬದಲಾಗಿ ವಸ್ತುನಿಷ್ಠ ನಿರ್ಣಯಗಳನ್ನು ಮಾಡಬೇಕಿದೆ. ನಮ್ಮ ನಿರ್ಣಯಗಳು ಸ್ವಪ್ರತಿಷ್ಠೆಯದಾಗದೆ ಸರ್ವರಪ್ರತಿಷ್ಠೆಯದ್ದಾಗಬೇಕಿದೆ. ವಸ್ತುನಿಷ್ಠ ನಿರ್ಣಯಗಳು ನೈಜವಾದದ್ದು, ವಾಸ್ತವಿಕವಾದದ್ದು. ಅದೇ ರೀತಿ ಪ್ರತಿಯೊಬ್ಬನ ಮನಸ್ಸಿನಲ್ಲಿ ಒಳ್ಳೆಯದು-ಕೆಟ್ಟದ್ದು, ಆಚಾರ-ಅನಾಚಾರ, ಧರ್ಮ-ಅಧರ್ಮ, ನ್ಯಾಯ-ಅನ್ಯಾಯ, ಪರ-ವಿರೋಧ, ಎಲ್ಲಾ ವಿಚಾರಗಳು ಸುಳಿಯುತ್ತಿರಬೇಕು. ಕೆಟ್ಟದ್ದರ ಬೆಲೆ ತಿಳಿದಾಗ ಮಾತ್ರ ಒಳ್ಳೆಯದು-ಕೆಟ್ಟದ್ದಕ್ಕೆ ಇರುವ ವ್ಯತ್ಯಾಸ ಮತ್ತು ಒಳ್ಳೆಯದರ ಮೌಲ್ಯ ತಿಳಿಯುತ್ತದೆ. ಜಗತ್ತು ಹುಟ್ಟಿರುವುದೇ ಸಂಘರ್ಷದಿಂದ. ಪರ-ವಿರೋಧದ ಸಂಘರ್ಷ ಆರೋಗ್ಯಕರ ಸಮಾಜಕ್ಕೆ ನಾಂದಿ. ಈ ಸಂಘರ್ಷ ವ್ಯಕ್ತಿ-ವ್ಯಕ್ತಿಗಳ ನಡುವೆ ನಡೆಯದೆ ಪ್ರತಿಯೊಬ್ಬ ಚಿಂತಕನ ಮನೆ-ಮನಗಳಲ್ಲಿ ನಡೆಯಬೇಕಿದೆ. ಬೆಣ್ಣೆಯನ್ನು ಮುಟ್ಟದೆ ಅದು ಬೆಣ್ಣೆಯೋ ಸುಣ್ಣವೋ ಎಂಬ ವ್ಯಕ್ತಿನಿಷ್ಠ ನಿರ್ಣಯ ಬೇಡ. ಎಲ್ಲ ಬಲ್ಲವರಿಲ್ಲ, ಬಲ್ಲವರು ಬಹಳಿಲ್ಲ ಎಂಬ ಸರ್ವಜ್ಞನ ಮಾತುಗಳನ್ನು ಕೇಳುವಾಗ ಗೊತ್ತಾಗುತ್ತದೆ
"ಸರ್ವಜ್ಞನೆಂಬುವನು ಗರ್ವದಿಂದಾದವನೆ? ಸರ್ವರೊಳಗೊಂದು ನುಡಿಗಲಿತು ವಿದ್ಯೆಯ
ಪರ್ವತವೇ ಆದ ಸರ್ವಜ್ಞ..."
- ಸಿಂಧುರ ಬಿ.ಆರ್.
ಸಂಶೋಧನಾ ವಿದ್ಯಾರ್ಥಿ
ಧಾರವಾಡ