ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ವಿಶಾಲಹೃದಯಿ ಅಧಿಕಪ್ರಸಂಗಿಗಳು!

'ಪೊಲೀಸ್ ದರ್ಪ ಮೆರೆದ ಪೇದೆ' ಶೀರ್ಷಿಕೆಯ ವರದಿ (ಡಿ.27) ಓದಿ ಈ ಪತ್ರ ಬರೆಯುತ್ತಿದ್ದೇನೆ. ಆ ಪೊಲೀಸ್ ಪೇದೆಯ ದರ್ಪ ಖಂಡನಾರ್ಹ...

Rashmi Kasaragodu
Updated On : 31 Dec 2013, 12:54 pm

'ಪೊಲೀಸ್ ದರ್ಪ ಮೆರೆದ ಪೇದೆ' ಶೀರ್ಷಿಕೆಯ ವರದಿ (ಡಿ.27) ಓದಿ ಈ ಪತ್ರ ಬರೆಯುತ್ತಿದ್ದೇನೆ. ಆ ಪೊಲೀಸ್ ಪೇದೆಯ ದರ್ಪ ಖಂಡನಾರ್ಹ. ಅದೇ ವೇಳೆ, ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡಿದವನ ಪರವಾಗಿ ಮಾತನಾಡಿದ ಅಧಿಕಪ್ರಸಂಗಿಯ ವರ್ತನೆಯೂ ಖಂಡನಾರ್ಹ. ಇಂಥ ಧೂಮಪಾನಿಗಳಿಂದಾಗಿ ಪ್ರತಿನಿತ್ಯ ಈ ದೇಶದಲ್ಲಿ ಕೋಟ್ಯಂತರ ಜನ ಅಮಾಯಕರು 'ನಿಷ್ಕ್ರಿಯ ಹೊಗೆ'ಯ (ಪ್ಯಾಸಿವ್ ಸ್ಮೋಕ್) ಅಪಾಯಕ್ಕೆ ತುತ್ತಾಗುತ್ತಿದ್ದಾರೆ. ನಾನು ವಾಸವಾಗಿರುವ ಪ್ರದೇಶದಲ್ಲಿರುವ ಒಂದು ಹೋಟೆಲ್ ಮತ್ತು ಅದರ ಪಕ್ಕದ ನ್ಯೂಸ್ಪೇಪರ್ ಅಂಗಡಿಗಳೆದುರು ಫುಟ್ಪಾತ್ನಲ್ಲಿ ಸದಾ ಇಂಥ ಧೂಮಪಾನಿಗಳು ಹೊಗೆಯುಗುಳುತ್ತ ನಿಂತಿರುತ್ತಾರೆ. ಬೆಳಗಿನ ಹೊತ್ತಂತೂ, ಸುಮಾರು ಒಂದು ಗಂಟೆಯ ಅವಧಿಯಲ್ಲಿ 40 ರಿಂದ 50 ಜನ ಇಂಥ ಧೂಮಪಾನಿಗಳು ಅಲ್ಲಿ ನಿಷ್ಕ್ರಿಯ ಹೊಗೆ ಹಬ್ಬಿಸಿರುತ್ತಾರೆ. ನ್ಯೂಸ್ಪೇಪರ್ ಹಂಚಿ ವಾಪಸಾದ ಚಿಕ್ಕ ಹುಡುಗರು, ಪೇಪರ್ಕೊಳ್ಳಲು ಬರುವ ಗಿರಾಕಿಗಳು, ಫುಟ್ಪಾತ್ನಲ್ಲಿ ಓಡಾಡುವವರು, ಇವರೆಲ್ಲ ಪ್ರತಿದಿನ ಈ ನಿಷ್ಕ್ರಿಯ ಧೂಮವನ್ನು ಕುಡಿಯಬೇಕು! ಆ ಎಳೆ ಹುಡುಗರ ಭವಿಷ್ಯತ್ತಿನ ಆರೋಗ್ಯದ ಮೇಲಂತೂ ತುಂಬ ಕೆಟ್ಟ ಪರಿಣಾಮ ಬೀರುತ್ತದೆ ಈ ನಿಷ್ಕ್ರಿಯ ಧೂಮ. ಸ್ವಂತ ವಾಹನಗಳಲ್ಲಿ ಅಲ್ಲಿಗೆ ಬಂದು ಚಟ ತೀರಿಸಿಕೊಂಡು ಹೋಗುವ ಆ ವಿದ್ಯಾವಂತ ಅನಾಗರಿಕ ಧೂರ್ತರ ಬಳಿ ನಾನು ಎಷ್ಟೇ ವಿನಂತಿಸಿಕೊಂಡರೂ ಏನೇನೂ ಪ್ರಯೋಜನವಾಗಿಲ್ಲ. ಬದಲಿಗೆ, ಅವರಿಂದಲೂ, ಅವರ ಅಕ್ಕಪಕ್ಕದಲ್ಲಿ ಚಹಾ ಕುಡಿಯುತ್ತ ನಿಂತ ಅಧಿಕಪ್ರಸಂಗಿಗಳಿಂದಲೂ ನನಗೇ ಉಪದೇಶ ದೊರೆತಿದೆ! ಇಂಥವರನ್ನೆಲ್ಲ ನೋಡಿ ನೋಡಿ ಬೇಸತ್ತು ಆ (ವರದಿಯ) ಪೊಲೀಸ್ ಪೇದೆ ಆ ದಿನ ಆ ರೀತಿ ದರ್ಪ ತೋರಿರಬಹುದು.
ಆ ಟ್ಯಾಕ್ಸಿ ಚಾಲಕನಿಗೆ ಧೂಮಪಾನ ಸಂಬಂಧಿ ನಿಯಮ ಗೊತ್ತಿಲ್ಲವೆಂದರೆ ನಂಬಲು ಸಾಧ್ಯವಿಲ್ಲ. ಆ ಚಾಲಕನ ಪರವಾಗಿ ಪೇದೆಗೆ ಹೇಳುವ ಬದಲು ಆ ಮೂರನೇ ವ್ಯಕ್ತಿಯು ಚಾಲಕನಿಗೇ ತಿಳಿ ಹೇಳಿದ್ದರೆ ಒಳ್ಳೆಯದಿತ್ತು. ಇನ್ನು, ಈ ದೃಶ್ಯಗಳನ್ನು ಮೊಬೈಲ್ನಲ್ಲಿ ಸೆರೆ ಹಿಡಿದು ಪತ್ರಿಕೆಗಳಿಗೆ ಕಳಿಸಿರುವ ವ್ಯಕ್ತಿ ಕೂಡಾ, ತನ್ನ ಅದೇ ಸಾಮಾಜಿಕ ಹೊಣೆಗಾರಿಕೆಯನ್ನು ಧೂಮಪಾನಿಗೆ ತಿಳಿಹೇಳುವ ಮೂಲಕ ತೋರಿಸಬಹುದಿತ್ತು. ಇಂಗ್ಲಿಷ್ ಪತ್ರಿಕೆಯೂ ಸೇರಿದಂತೆ ಬೇರೆ ಪತ್ರಿಕೆಗಳಲ್ಲೂ ಈ ಸಚಿತ್ರ ವರದಿ ಪ್ರಕಟವಾಗಿದೆ. ಇಷ್ಟೊಂದು ಉತ್ಸಾಹವಿರುವ ಆ ವ್ಯಕ್ತಿಯು ಅಲ್ಲಿ ಧೂಮಪಾನ ಮಾಡುತ್ತಿದ್ದವರ ಚಿತ್ರ ಸೆರೆ ಹಿಡಿದು ಪತ್ರಿಕೆಗಳಿಗೆ ಕಳಿಸಿದ್ದರೆ ಇನ್ನೂ ದೊಡ್ಡ ಸಾಮಾಜಿಕ ಹೊಣೆಗಾರಿಕೆ ನಿಭಾಯಿಸಿದಂತಾಗುತ್ತಿತ್ತು.
ಹ್ಞಾ! ಅದೊಂದು ದಿನ ನನ್ನ ವಸತಿ ಪ್ರದೇಶದ ಆ ಹೋಟೆಲ್ ಎದುರು ಲಾರಿಯೊಂದು ರಸ್ತೆಯಲ್ಲಿ ಕೆಟ್ಟು ನಿಂತಿತ್ತು. ಅದರಿಂದಾಗಿ ಅಸ್ತವ್ಯಸ್ತಗೊಂಡ ವಾಹನ ಸಂಚಾರವನ್ನು ನಿಯಂತ್ರಿಸಲು ಇಬ್ಬರು ಪೊಲೀಸರು ದೀರ್ಘಕಾಲ ಅಲ್ಲಿ ಕಾರ್ಯನಿರತರಾಗಿದ್ದರು. ಅಷ್ಟೂ ಹೊತ್ತು, ಒಬ್ಬನಾದರೂ ಅಲ್ಲಿ ಧೂಮಪಾನ ಮಾಡಿದ್ದರೆ ಕೇಳಿ! ಜನರಿಗೆ ಕಾನೂನು ಗೊತ್ತು. ಆದರೂ ಉಲ್ಲಂಘಿಸುತ್ತಾರೆ. ಬಸ್ನಲ್ಲಿ ಟಿಕೆಟ್ ಕೊಡದೆ ಹಣ ಕಿಸೆಗಿಳಿಸುವ ಕಂಡಕ್ಟರು, ಸಂಚಾರ ನಿಯಮ ಉಲ್ಲಂಘಿಸುವ ವಾಹನ ಸವಾರ, ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುವವ, ಇಂಥವರೇನಿದ್ದಾರೆ ಇಂತಹ ತಪ್ಪಿತಸ್ಥರ ಪರವಾಗಿ ಮಾತನಾಡುವ ವಿಶಾಲಹೃದಯಿ ಅಧಿಕಪ್ರಸಂಗಿಗಳು ನಮ್ಮಲ್ಲಿ ಸಾಕಷ್ಟಿದ್ದಾರೆ. ಇಂಥ ಅಧಿಕಪ್ರಸಂಗಿಗಳು ಸಮಾಜಕ್ಕೆ ನೇತ್ಯಾತ್ಮಕ ಕೊಡುಗೆ ಮಾತ್ರ ನೀಡಬಲ್ಲರು.

- ಎಚ್. ಆನಂದರಾಮ ಶಾಸ್ತ್ರಿ
ಬೆಂಗಳೂರು


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement