ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಹಳಬರೊಂದಿಗೆ ಹೊಸ ಹಾದಿ ಸಾಧ್ಯವೇ?

ಕ್ರಿಸ್ಮಸ್ ದಿನದಂದು ಮುಂಬೈನ ತುಂಬೆಲ್ಲ ವಾಜಪೇಯಿಯವರ ಪೋಸ್ಟರ್ಗಳು ಕಾಣಿಸಿಕೊಂಡವು. ಮನೆಯಿಂದ ಹೊರಗೆ ಹೆಜ್ಜೆ ಇಟ್ಟವರಿಗೆಲ್ಲ ...

Rashmi Kasaragodu
Updated On : 31 Dec 2013, 12:53 pm

ಕ್ರಿಸ್ಮಸ್ ದಿನದಂದು ಮುಂಬೈನ ತುಂಬೆಲ್ಲ ವಾಜಪೇಯಿಯವರ ಪೋಸ್ಟರ್ಗಳು ಕಾಣಿಸಿಕೊಂಡವು. ಮನೆಯಿಂದ ಹೊರಗೆ ಹೆಜ್ಜೆ ಇಟ್ಟವರಿಗೆಲ್ಲ ಅಂದು ವಾಜಪೇಯಿಯವರ ಜನ್ಮದಿನವನ್ನು ನೆನಪಿಸಲಾಯಿತು. ಇನ್ನು  ಮನೆಯೊಳಗೆ ಕುಳಿತು ಪೇಪರ್ ಓದಿದವರಿಗೂ ಈ ಸಂದೇಶ ತಲುಪಿತು. ಬಹುತೇಕ ಪತ್ರಿಕೆಗಳಲ್ಲಿ ವಾಜಪೇಯಿಯವರಿಗೆ ಶುಭಾಷಯ ಕೋರಿದ್ದ ಜಾಹೀರಾತುಗಳಿದ್ದವು. ವಾಜಪೇಯಿಯವರು 2004ರ ಚುನಾವಣೆಯಲ್ಲಿ ಸೋತರು ಮತ್ತು ಆ ನಂತರ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ ಎನ್ನುವ ವಿಷಯವನ್ನು ಬಿಜೆಪಿಯ ಹಿರಿಯ ಮಂದಿ ಮರೆತುಬಿಟ್ಟಿದ್ದಾರಾ? 2014ರ ಚುನಾವಣೆಗಳಲ್ಲಿ ಪ್ರಮುಖ ಪಾತ್ರ ವಹಿಸಲಿರುವವರು 30 ಮತ್ತು ಅದಕ್ಕಿಂತ ಕಡಿಮೆ ವಯೋವಾನದ ಮತದಾರರು. ವಾಜಪೇಯಿಯವರ ಬಗ್ಗೆ ಇಷ್ಟೊಂದು ಪ್ರಮಾಣದಲ್ಲಿ ಜಾಹೀರಾತು ನೀಡಿ ಈ ವಯೋವಾನದವರನ್ನು ಸೆಳೆಯುವುದಕ್ಕೆ ಸಾಧ್ಯವೇ? ಇದರಲ್ಲಿ ತಪ್ಪೇನು ಇಲ್ಲ ಬಿಡಿ.
ಆದರೆ ಇದೇ ವೇಳೆಯಲ್ಲಿ ಬಿಜೆಪಿಯನ್ನು ನಿಜಕ್ಕೂ ಬದಲಾಯಿಸುವ ಸಾಮರ್ಥ್ಯವಿರುವ ನರೇಂದ್ರ ಮೋದಿಯವರತ್ತ ಹೆಚ್ಚು ಗಮನ ಹರಿಸಬೇಕು ಎನ್ನುವುದು ಬಿಜೆಪಿಯ ಮಂದಿಗೆ ಅರ್ಥವಾಗುತ್ತಿಲ್ಲ. ನರೇಂದ್ರ ಮೋದಿ, ದೆಹಲಿಗೆ ಕಾಲಿಟ್ಟಾಗಲೆಲ್ಲ ಅವರ ಚಿತ್ರವನ್ನು, 2004ರಿಂದ ನಿರಂತರವಾಗಿ ಸೋಲುತ್ತಲೇ ಬಂದಿರುವ ನಾಯಕರೊಂದಿಗೇ ಪ್ರಕಟಿಸಲಾಗುತ್ತದೆ. ಅಂದರೆ ಬಿಜೆಪಿ 'ನಾವು ಬದಲಾಗಿಲ್ಲ, 10 ವರ್ಷದ ಹಿಂದೆ ಹೇಗಿದ್ದೆವೋ ಈಗಲೂ ಹಾಗೇ ಇದ್ದೇವೆ' ಎನ್ನುವುದನ್ನು ಮತದಾರರಿಗೆ ತೋರಿಸಲು ಪ್ರಯತ್ನಿಸುತ್ತಿರುವಂತಿದೆ. ಬಿಜೆಪಿಯನ್ನು ಆಡಳಿತದಿಂದ ದೂರವಿಡಬೇಕು ಎಂದು ಹಪಾಹಪಿಸುತ್ತಿರುವವರಿಗೂ ಇದೇ ಬೇಕು. "ನಿಜವಾಗಲೂ ಬದಲಾವಣೆಯನ್ನು ಪ್ರತಿನಿಧಿಸುತ್ತಿರುವವರು ನರೇಂದ್ರ ಮೋದಿಯಲ್ಲ, ಬದಲಾಗಿ ಕೇಜ್ರಿವಾಲ್" ಎಂದು ಜನ ಭಾವಿಸಬೇಕು ಎಂಬುದು ಬಿಜೆಪಿ ವಿರೋಧಿಗಳ ಮನದಿಂಗಿತ.
ಇನ್ನು ಎಲ್.ಕೆ. ಆಡ್ವಾಣಿಯವರ ವಿಷಯಕ್ಕೆ ಬಂದರೆ, ಮೊದಲು 2009ರ ಅವರ ಸೋಲನ್ನು ನಾವು ಪರಾಮರ್ಶಿಸುವುದು ಒಳಿತು. ಆಡ್ವಾಣಿಯವರ ಕೈಗೆ ದೇಶದ ಚುಕ್ಕಾಣಿ ಕೊಡುವುದಕ್ಕೆ ಮತದಾರರಿಗೆ ಮನಸ್ಸಿಲ್ಲ ಎನ್ನುವುದನ್ನು ಆ ಫಲಿತಾಂಶ ಸ್ಪಷ್ಟವಾಗಿ ಸಾರಿತು. ಇನ್ನು ಮನಮೋಹನ್ ಸಿಂಗ್ ಅವರ ಆಡಳಿತದ ನಂತರ, 80 ವರ್ಷ ದಾಟಿದ ಮತ್ತೊಬ್ಬ ವೃದ್ಧ ನಾಯಕನನ್ನು ಪ್ರಧಾನಿ ಹುದ್ದೆಯಲ್ಲಿ ನೋಡುವ ಮನಸ್ಸು ದೇಶಕ್ಕಿಲ್ಲ. ಆಡ್ವಾಣಿಯವರಿಗೆ ಪ್ರಧಾನಿ ಹುದ್ದೆ ಅಲಂಕರಿಸಲು 2003ರಲ್ಲಿ ಉತ್ತಮ ಅವಕಾಶ ಎದುರಾಗಿತ್ತು. ವಾಜಪೇಯಿಯವರು ತಮ್ಮ ಆರೋಗ್ಯ ಕ್ಷೀಣಿಸುತ್ತಿರುವುದರಿಂದ ತಾವು ರಾಜೀನಾಮೆ ನೀಡುವುದಾಗಿ ಆಗ ಹೇಳಿದ್ದರು ಎನ್ನುತ್ತವೆ ಕೆಲವು ವರದಿಗಳು. ಆ ವರದಿಗಳಲ್ಲಿ ಸತ್ಯಾಂಶವೂ ಇದೆ.  
ವಾಜಪೇಯಿಯವರಡಿಯಲ್ಲಿನ ಸರ್ಕಾರ ಅನೇಕ ಗೊಂದಲಮಯ ಹೆಜ್ಜೆಗಳನ್ನಿಟ್ಟಿತ್ತು. ಕಂದಹಾರ್ನಲ್ಲಿ ಉಗ್ರರಿಗೆ ತಲೆಬಾಗಿದ್ದು ಮತ್ತು ಸಂಸತ್ತಿನ ಮೇಲೆ ದಾಳಿಯಾದ ನಂತರ ಯಾವುದೇ ಕಠಿಣ ನಿಲುವನ್ನು ತಾಳದೇ ಇದ್ದದ್ದಷ್ಟೇ ಅಲ್ಲದೆ, ಅವರ ಸರ್ಕಾರ ಕಾಶ್ಮೀರದಲ್ಲಿ ಏಕಪಕ್ಷೀಯ ಕದನವಿರಾಮ ಘೋಷಿಸುವ ತಪ್ಪು ಹೆಜ್ಜೆಯನ್ನೂ ಇಟ್ಟುಬಿಟ್ಟಿತು. ಈ ನಡೆ ಕಾಶ್ಮೀರ ಕಣಿವೆಯಲ್ಲಿದ್ದ ಉಗ್ರರಿಗೆ ವರವಾಗಿ ಪರಿಣಮಿಸಿತು. 1998ರಲ್ಲಿ ಪೋಖ್ರಾನ್ ಪರೀಕ್ಷೆಯ ನಂತರ, ವಾಜಪೇಯಿ ಕೂಡ, ಪೋಖ್ರಾನ್-1ರಲ್ಲಿ ಇಂದಿರಾ ಗಾಂಧಿ ನಡೆದುಕೊಂಡಂತಹ ರೀತಿಯಲ್ಲೇ ವರ್ತಿಸಿದರು. 1974ರಲ್ಲಿ ಪೋಖ್ರಾನ್ 1 ಪರೀಕ್ಷೆಯಾಯಿತಾದರೂ, ಆ ನಂತರ ನಡೆಯಬೇಕಿದ್ದ ಹೆಚ್ಚುವರಿ ಪರೀಕ್ಷೆಗಳನ್ನು ಅವರು ತಡೆಹಿಡಿದುಬಿಟ್ಟರು. ಹೀಗಾಗಿ ಪರಮಾಣು ಶಸ್ತ್ರಾಸ್ತ್ರ ಅಭಿವೃದ್ಧಿಗೆ ಭಾರೀ ಹೊಡೆತ ಬಿದ್ದಿತು. ವಾಜಪೇಯಿಯವರೂ ಕೂಡ ಹೆಚ್ಚುವರಿ ಪರೀಕ್ಷೆಗಳನ್ನು ನಿಲ್ಲಿಸಿಬಿಟ್ಟರು. ಆಗ ಎಲ್ಲವೂ ಸರಿಯಾಗಿ ನಡೆದಿದ್ದರೆ ಅಮೆರಿಕದೊಂದಿಗೆ ಪರಮಾಣು ಒಪ್ಪಂದ ಮಾಡಿಕೊಳ್ಳುವ ಸಮಯದಲ್ಲಿ ಭಾರತಕ್ಕೆ ಇಷ್ಟೊಂದು ಮುಜುಗರ ಅನುಭವಿಸುವ ಸನ್ನಿವೇಶವೇ ಎದುರಾಗುತ್ತಿರಲಿಲ್ಲ.  
ವಾಜಪೇಯಿಯವರ ಬಿಜೆಪಿ-1 ಸರ್ಕಾರ 2004ರಲ್ಲಿ ಸೋತಿತು. ಆಡ್ವಾಣಿಯವರ ಬಿಜೆಪಿ-2 ಸರ್ಕಾರ 2009ರಲ್ಲಿ. ಇದೇನೇ ಇದ್ದರೂ ನರೇಂದ್ರ ಮೋದಿಯವರನ್ನು ಈಗ ಪ್ರಧಾನಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿರುವುದು ಬೇರು ಮಟ್ಟದಲ್ಲಿ ಅವರಿಗಿರುವ ಬೆಂಬಲವನ್ನು ನೋಡಿಯಷ್ಟೆ. ಹಾಗಾಗೇ ಈಗ ಮೋದಿ ಮಾಡಬೇಕಾದ ಮೊದಲ ಕೆಲಸವೆಂದರೆ, ತಮ್ಮದು ವಾಜಪೇಯಿಯವರ ತಂಡದಲ್ಲಿ ಉಳಿದುಹೋಗಿದ್ದ ಅದೇ ಜನರ ಗುಂಪಲ್ಲ ಎನ್ನುವುದನ್ನು ರುಜುವಾತು ಮಾಡುವುದು. ಸರಳವಾಗಿ ಹೇಳಬೇಕೆಂದರೆ, ಗೃಹ, ವಿದೇಶಾಂಗ, ವಿತ್ತ ಮತ್ತು ರಕ್ಷಣಾ ಸಚಿವಾಲಯಗಳಂಥ ಪ್ರಮುಖ ಸ್ಥಾನಗಳಲ್ಲಿ ತಾವು ಯಾರನ್ನು ನೋಡಲು ಇಚ್ಛಿಸುತ್ತಾರೆ ಎನ್ನುವುದನ್ನು ಮೋದಿ ಸ್ಪಷ್ಟವಾಗಿ ಹೇಳಬೇಕು. ಅವರು ಹೊಸಬರನ್ನು ಆಯ್ಕೆ ಮಾಡಲಿದ್ದಾರೋ ಅಥವಾ ವಾಜಪೇಯಿ ತಂಡದಲ್ಲಿದ್ದ ಅವೇ ಹಳೆಯ ತಲೆಗಳನ್ನೋ? ಒಂದು ವೇಳೆ ಹಳಬರನ್ನೇ ಎನ್ನುವುದಾದರೆ ಮತದಾರ ಬಿಜೆಪಿಯತ್ತ ವಾಲುವುದು ಅನುಮಾನವೇ ಸರಿ.  
ಕೂತೂಹಲಕರ ಸಂಗತಿಯೆಂದರೆ, ಮೋದಿ ಪ್ರಧಾನಿ ಅಭ್ಯರ್ಥಿಯಾಗುತ್ತಿದ್ದಂತೆಯೇ, "ಬಿಜೆಪಿಯ ಆರ್ಥಿಕ ನೀತಿಗಳಲ್ಲಿ ಆಮೂಲಾಗ್ರ ಬದಲಾವಣೆಗಳನ್ನು ಮಾಡಬೇಕು" ಎನ್ನುವವರ ಸಂಖ್ಯೆಯೂ ಹೆಚ್ಚಿರುವುದು.
ಕಡಿಮೆ ನಿಯಂತ್ರಣ, ಕಡಿಮೆ ಬಡ್ಡಿ ಮತ್ತು ಕಡಿಮೆ ತೆರಿಗೆ ದರಗಳ ಅವಶ್ಯಕತೆ ಆರ್ಥಿಕತೆಗಿರುತ್ತದೆ. ಈ ವಿಷಯದಲ್ಲಿ ನರೇಂದ್ರ ಮೋದಿಯವರ ಮೇಲೆ ಬಹಳ ನಂಬಿಕೆಯನ್ನಿಡಲಾಗಿದೆ. ಆದರೆ ವಾಜಪೇಯಿವರ ಸಂಪುಟದಲ್ಲಿ ಕೆಲಸ ಮಾಡಿರುವವರಲ್ಲಿ ಕುತೂಹಲವಂತೂ ಕಾಣುತ್ತಿಲ್ಲ. ಭಾರತದಿಂದ ವಿದೇಶಕ್ಕೆ ಹರಿದುಹೋಗುತ್ತಿರುವ ಕಪ್ಪು ಹಣವನ್ನು ತಡೆಯುವುದಕ್ಕೂ ಅವರುಗಳಿಗೆ ಆಗಲಿಲ್ಲ ಅಥವಾ ಒಟ್ಟಾವಿಯೋ ಕ್ವಟ್ರೋಚಿಯನ್ನು ಕರೆತರುವುದಕ್ಕೂ ಸಾಧ್ಯವಾಗಲಿಲ್ಲ.
 ಇನ್ನು ಸಂಸತ್ತಿನಲ್ಲಿ ಬಿಜೆಪಿಯ ಪ್ರದರ್ಶನವಂತೂ ಹೇಳಿಕೊಳ್ಳುವಂತೆ ಇಲ್ಲ. "ಸಮಯೋಚಿತವಾಗಿ ಹೊರನಡೆಯುವ" ಮೂಲಕ ಕೆಲವು ಕೆಟ್ಟ ಕಾನೂನುಗಳು ಜಾರಿಯಾಗುವುದಕ್ಕೆ ಅದು ಪರೋಕ್ಷವಾಗಿ ಕಾರಣವಾಯಿತು. ಕೆಲವು ತೆರಿಗೆ ನಿಯಮಗಳು ತನ್ನ ಮತದಾರರಿಗೆ ಘಾಸಿ ಮಾಡುತ್ತವೆ ಎನ್ನುವುದು ಗೊತ್ತಿದ್ದರೂ ಅದನ್ನು ವಿರೋಧಿಸುವ ಕೆಲಸವನ್ನು ಬಿಜೆಪಿ ಮಾಡಲಿಲ್ಲ.
ಮೋದಿಯವರ ವೃದ್ಧಿ, ದೆಹಲಿಯಲ್ಲಿ ಕುಸಿದುಬೀಳುತ್ತಿರುವ ದರ್ಬಾರಿ ರಾಜಕೀಯವನ್ನು ಪ್ರತಿಬಿಂಬಿಸುತ್ತದೆ. ಈ ಕಾರಣಕ್ಕಾಗಿಯೇ ಅವರು ತಮ್ಮಂಥದ್ದೇ ದೃಷ್ಟಿಕೋನ ಹೊಂದಿರುವ ನಾಯಕರನ್ನು ಗುರುತಿಸಿ ಅವರನ್ನು ಬೆಳಕಿಗೆ ತರುವ ಕೆಲಸವನ್ನು ಮಾಡಬೇಕಿದೆ. ಅವರ ನೇತೃತ್ವದಲ್ಲಿನ ಬಿಜೆಪಿ- 3, ಇಪ್ಪತ್ತೊಂದನೇ ಶತಮಾನದ ಪಕ್ಷ ಎನ್ನುವುದನ್ನು ಅವರು ತೋರಿಸಬೇಕು. ಹಾಗಾಗೇ ಅವರು ದೇಶದ ಮುಂದೆ ತಮ್ಮನ್ನಷ್ಟೇ ಅಲ್ಲದೆ, ಬಿಜೆಪಿಯ ಹೊಸ ಅವತಾರವನ್ನು, ಟೀಂ ಮೋದಿಯನ್ನು ಪರಿಚಯ ಮಾಡಿಕೊಡಬೇಕು. ಈ ಬಾರಿ ವಿಧಾನಸಭಾ ಚುನಾವಣೆಗಳಲ್ಲಿ ದೆಹಲಿಯಲ್ಲಿ ಬಿಜೆಪಿ ಅಧಿಕ ಮತಗಳನ್ನು ಪಡೆದರೂ, ವಿರೋಧ ಪಕ್ಷದ ಸ್ಥಾನದಲ್ಲಿ ಕೂರಬೇಕಾಯಿತು. ಅಂಥ ಸನ್ನಿವೇಶ ಮತ್ತೆ ಎದುರಾಗದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಈಗ ಮೋದಿಯವರ ಮೇಲಿದೆ.


 -ಮಾಧವ ನಳಪತ್
ಅಂಕಣಕಾರರು


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement