ಅತಿಮುಖ್ಯ ಬೆಳವಣಿಗೆ ಎಂದರೆ ಈಗ ಅಂತಾರಾಷ್ಟ್ರೀಯ ಸಮುದಾಯವು ಮೋದಿಯವರನ್ನು ಅಸ್ಪೃಶ್ಯರಂತೆ ನೋಡುತ್ತಿಲ್ಲ.
ಮುಂಬರುವ ತಿಂಗಳುಗಳಲ್ಲಿ ಹೊಸದೆಹಲಿಯ ರಷ್ಯಾ ರಾಯಭಾರ ಕಚೇರಿಯು ಪ್ರಮುಖ ಪ್ರತಿಪಕ್ಷವಾದ ಬಿಜೆಪಿಯೊಂದಿಗೆ ಹೆಚ್ಚಿನ ಸಖ್ಯ ಬೆಳೆಸುವ ಆಸಕ್ತಿ ಪ್ರದರ್ಶಿಸಿದರೆ ಅದರಲ್ಲಿ ಆಶ್ಚರ್ಯ ಪಡುವಂಥದ್ದೇನಿಲ್ಲ. ರಾಷ್ಟ್ರ ರಾಜಧಾನಿಯಲ್ಲಿ ಈ ಕುರಿತ ವದಂತಿಗಳು ದಟ್ಟವಾಗಿದ್ದು, ರಷ್ಯನ್ನರು ಸದ್ಯದಲ್ಲೇ ಬಿಜೆಪಿಯ ಉನ್ನತ ವ್ಯಕ್ತಿಗಳೊಂದಿಗೆ ಸೌಹಾರ್ದ ಮಾತುಕತೆ ಪ್ರಮಾಣವನ್ನು ಹೆಚ್ಚಿಸಿಕೊಳ್ಳಲಿದ್ದಾರೆ ಎಂದೇ ಹೇಳಲಾಗುತ್ತಿದೆ.
ಇದಕ್ಕೆ ಕಾರಣವನ್ನು ತುಂಬ ತಡಕಾಡಬೇಕಾಗಿಲ್ಲ. ಬಿಜೆಪಿ ಕೇಂದ್ರದಲ್ಲಿ ಅಧಿಕಾರ ಗದ್ದುಗೆಯನ್ನು ಮತ್ತೆ ಸಮೀಪಿಸುವ ಸಾಧ್ಯತೆಗಳ ವಾಸನೆ ಗಾಢವಾಗಿದೆ. ಭ್ರಷ್ಟಾಚಾರ ವಿರೋಧಿ ಆಂದೋಲನಗಳಿಂದ ಸಾಕಷ್ಟು ತೊಂದರೆ ಅನುಭವಿಸಿರುವ ಯುಪಿಎ, ದೆಹಲಿ ಅತ್ಯಾಚಾರ ಪ್ರಕರಣದಲ್ಲೂ ಭಾರಿ ಅಸಮಧಾನವನ್ನು ಎದುರಿಸಬೇಕಾಯಿತು. ಇದೀಗ ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿ ವರ್ಚಸ್ವಿ ನಾಯಕ ನರೇಂದ್ರ ಮೋದಿ ಅವರ ಉಮೇದುವಾರಿಕೆಯ ಸಂಭವನೀಯತೆ ಹೆಚ್ಚಿರುವುದು ಅದಕ್ಕೆ ಇನ್ನೊಂದು ತಲೆನೋವನ್ನು ತಂದೊಡ್ಡಿದೆ. ಈ ಎಲ್ಲ ರಾಜಕೀಯ ವಿದ್ಯಮಾನಗಳನ್ನು ಹೊಸದೆಹಲಿಯ ರಾಜತಾಂತ್ರಿಕ ವರ್ಗವು ನೋಡುತ್ತಲೇ ಬಂದಿದ್ದು, ಯುಪಿಎ ಮುಳುಗುತ್ತಿರುವ ಹಡಗಿನಂತೆ ಅದಕ್ಕೆ ಕಾಣುತ್ತಿದೆ. ರಷ್ಯಾ ಸಹ ಭಾರತದಲ್ಲಿ ಬದಲಾಗುತ್ತಿರುವ ವಿದ್ಯಮಾನಗಳಿಗೆ ಕುರುಡಾಗಿರುವುದಕ್ಕೆ ಬಯಸದು.
ಫೆಬ್ರವರಿ 6ರಂದು ಪ್ರತಿಷ್ಠಿತ ಶ್ರೀರಾಂ ಕಾಲೇಜ್ ಆಫ್ ಕಾಮರ್ಸ್ನಲ್ಲಿ ನೀಡಿದ ಉಪನ್ಯಾಸದಲ್ಲಿ ಮೋದಿ ಅದ್ಭುತವಾಗಿ ಮಿಂಚಿದರು. ಮೂರನೇ ಬಾರಿಗೆ ಮುಖ್ಯಮಂತ್ರಿಯಾದ ನಂತರ ರಾಷ್ಟ್ರ ರಾಜಧಾನಿಯ ಸಾರ್ವಜನಿಕ ವೇದಿಕೆಯಲ್ಲಿ ಮೋದಿಯವರ ಮೊದಲನೇ ಕಾರ್ಯಕ್ರಮ ಅದಾಗಿತ್ತು. ಮೋದಿಯವರ ಭಾಷಣವನ್ನು
ಎಲ್ಲಾ ನೆಟ್ವರ್ಕ್ಗಳೂ ಪ್ರಸರಿಸಿದವು. ಏಕೆಂದರೆ ಅದಕ್ಕೆ ಇರುವ ರಾಜಕೀಯ ಪ್ರಾಮುಖ್ಯ ಎಂಥಾದ್ದು ಎಂಬ ಬಗ್ಗೆ ಅವುಗಳಿಗೆ ಅರಿವಿತ್ತು. ದೇಶದ ಪರಮೋಚ್ಛ ಕಾರ್ಯಾಂಗ ಹುದ್ದೆಯತ್ತ ಮೋದಿ ಪ್ರಯಾಣ ಶುರುವಾಗಿದೆ ಎಂಬುದರ ಸೂಚನೆಯೂ ಅದಾಗಿತ್ತು. ಜಗತ್ತಿನಲ್ಲೇ ಅತಿದೊಡ್ಡ ಧಾರ್ಮಿಕ ಸಮಾವೇಶವೆಂದು ಪರಿಗಣಿಸಲ್ಪಡುವುದು ಈಗ ಅಲಹಾಬಾದ್ನಲ್ಲಿ ನಡೆಯುತ್ತಿರುವ ಕುಂಭಮೇಳ. ಅದಾಗಲೇ ರಾಜಕೀಯ ಬಣ್ಣವನ್ನು ಕಂಡಿದ್ದು, ಮೋದಿ ಪ್ರಧಾನಿಯಾಗಲಿ ಎಂಬ ಘೋಷಣೆಗಳು ಅನುರಣಿಸಿವೆ.
ಬಿಜೆಪಿಯ ಒಂದು ಪ್ರಭಾವಿ ವರ್ಗ ನಂಬುವುದೇನೆಂದರೆ- ಮೋದಿಯವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಬಿಂಬಿಸಿದ್ದೇ ಹೌದಾದರೆ ಯಾವ ಮೈತ್ರಿಯ ಅವಶ್ಯಕತೆ ಇಲ್ಲದೇ ಬಿಜೆಪಿಯು ಅಧಿಕಾರ ಗದ್ದುಗೆಯತ್ತ ಸಾಗಬಹುದು ಎಂಬುದಾಗಿದೆ. ಕಾಂಗ್ರೆಸ್ ಪಾಳಯದಲ್ಲಿ ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿಯಾಗಿ ಹೊರಹೊಮ್ಮಬಹುದು ಎಂಬ ನಿರೀಕ್ಷೆ ಹೊರತಾಗಿಯೂ ಮೋದಿ ಬಗ್ಗೆ ಈ ಆಶಾಭಾವ ವ್ಯಕ್ತವಾಗಿದೆ.
ಅತಿಮುಖ್ಯ ಬೆಳವಣಿಗೆ ಎಂದರೆ ಈಗ ಅಂತಾರಾಷ್ಟ್ರೀಯ ಸಮುದಾಯವು ಮೋದಿಯವರನ್ನು ಅಸ್ಪೃಶ್ಯರಂತೆ ನೋಡುತ್ತಿಲ್ಲ. ದಶಕಗಳ ಹಿಂದೆ ಗುಜರಾತ್ನಲ್ಲಿ ಕೋಮುಗಲಭೆಗಳಾದಾಗ ಇಂಥದೊಂದು ನಿಲುವು ತೆಗೆದುಕೊಳ್ಳಲಾಗಿತ್ತು. ಆದರೀಗ ಎಲ್ಲವೂ ಬದಲಾಗಿದೆ. ಗುಜರಾತ್ ಚುನಾವಣೆಗೆ ಎರಡು ತಿಂಗಳು ಪೂರ್ವದಲ್ಲಿ ಮೋದಿಯವರನ್ನು ಭೇಟಿಯಾಗುವುದಕ್ಕೆ ಗಾಂಧಿನಗರಕ್ಕೆ ಬಂದಿದ್ದ ಬ್ರಿಟಿಷ್ ಹೈ ಕಮಿಷನರ್ ಜೇಮ್ಸ್ ಬಿವಾನ್ ಈ ಬದಲಾದ ಅಂತಾರಾಷ್ಟ್ರೀಯ ಲಹರಿಯ ಸೂಚನೆ ನೀಡಿದ್ದರು. ಮೋದಿಗೆ ಚುನಾವಣೆಯಲ್ಲಿ ಗೆಲುವಾಗಲೆಂದು ಹಾರೈಸಿದ್ದಲ್ಲದೇ ಅವರ ನಾಯಕತ್ವದ ಗುಜರಾತ್ನೊಂದಿಗೆ ಬಾಂಧವ್ಯ ಹೊಂದುವುದಕ್ಕೆ ಲಂಡನ್ ಖುಷಿಪಡಲಿದೆ ಎಂದೂ ಹೇಳಿದ್ದರು.
ಮೋದಿ ಗೆದ್ದಿದ್ದೇ ತಡ, ಬ್ರಿಟನ್ನ ನಡೆಯನ್ನೇ 27 ರಾಷ್ಟ್ರಗಳ ಐರೋಪ್ಯ ಒಕ್ಕೂಟವೂ ಅನುಸರಿಸಿತು. ದಶಕಗಳ ಅವಧಿಯ ಮೋದಿ ಮೇಲಿನ ರಾಜತಾಂತ್ರಿಕ ನಿರ್ಬಂಧವನ್ನು ಅದು ತೆರವುಗೊಳಿಸಿತು. ಜನವರಿ 7ರಂದು ಜರ್ಮನಿಯ ರಾಯಭಾರಿ ಮೈಖೆಲ್ ಸ್ಟೈನರ್ಸ್ ನಿವಾಸದಲ್ಲಿ ಸಭೆ ಸೇರಿದ ಯುರೋಪ್ನ ರಾಷ್ಟ್ರಗಳ ರಾಯಭಾರಿಗಳು ಮೋದಿ ಜತೆ ಭೋಜನಕೂಟ ನಡೆಸಿದರು.
ಇದೀಗ ರಷ್ಯಾವು ಐರೋಪ್ಯ ಒಕ್ಕೂಟಗಳಿಗಿಂತ ಒಂದು ಹೆಜ್ಜೆ ಮುಂದೆಯೇ ದಾಪುಗಾಲು ಇಟ್ಟೀತು ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಬಿಜೆಪಿಯನ್ನು ಖುಷಿಗೊಳಿಸುವುದಕ್ಕೆ ಎಲ್ಲ ಗೆರೆಗಳನ್ನು ದಾಟಿದೆವು ಎಂದು ತೋರಿಸಿಕೊಳ್ಳುವುದಕ್ಕೆ ಅದು ಅಷ್ಟಾಗಿ ತಯಾರಿಲ್ಲ. ಕೆಲ ಸಮಯಗಳ ಹಿಂದೆ, ರಾಜತಾಂತ್ರಿಕ ಆವಾರದಲ್ಲೇ ಯಾರೂ ಕಂಡಿರದ ವಿದ್ಯಮಾನವೊಂದು ನಡೆಯಿತು. ನವಂಬರ್ 2012ರಲ್ಲಿ ಬಿಜೆಪಿಯ ಅಗ್ರನಾಯಕ ಎಲ್.ಕೆ. ಆಡ್ವಾಣಿಯವರಿಗೆ 85ನೇ ಜನ್ಮದಿನದ ಶುಭಾಶಯ ತಿಳಿಸುವುದಕ್ಕೆ ಆಡ್ವಾಣಿ ನಿವಾಸಕ್ಕೆ ಮೊದಲಿಗರಾಗಿ ಧಾವಿಸಿದ್ದರು ಭಾರತಕ್ಕೆ ರಷ್ಯಾದ ರಾಯಭಾರಿಯಾಗಿರುವ ಅಲೆಂಕ್ಸಾಂಡರ್ ಕಡಾಕಿನ್. ಆಗವರು ಎಲ್ಲ ರಾಜತಾಂತ್ರಿಕ ಶಿಷ್ಟಾಚಾರಗಳನ್ನು ಬದಿಗೆ ಒತ್ತಿ ಆಡ್ವಾಣಿಯವರ ಕಾಲುಮುಟ್ಟಿ ನಮಸ್ಕರಿಸಿದರು!
ಬಿಜೆಪಿ ಮುಂದಿನ ಲೋಕಸಭೆ ಚುನಾವಣೆ ಗೆಲ್ಲಬಹುದು ಎಂಬ ಆಶಯದಲ್ಲಿ ಅವರೊಂದಿಗಿನ ಸಂವಾದ ತೀವ್ರಗೊಳಿಸಲಾಗಿದೆ ಎಂಬ ಮಾತನ್ನು ದೆಹಲಿಯ ರಷ್ಯಾ ರಾಯಭಾರ ಕಚೇರಿ ನಿರಾಕರಿಸಿದೆ. ರಷ್ಯಾ ಎಂಬೆಸಿಯ ವಕ್ತಾರ ಸೆರ್ಗೆ ಕರ್ಮಲಿತೊ ಅವರನ್ನು ಈ ಲೇಖಕ ಸಂಪರ್ಕಿಸಿದಾಗ, 'ನಿಮ್ಮ ವ್ಯಾಖ್ಯಾನ ಸರಿಯಲ್ಲ. ನಾವು ಭಾರತದ ಎಲ್ಲ ಪ್ರಮುಖ ರಾಜಕೀಯ ಪಕ್ಷಗಳೊಂದಿಗೂ ಸಂವಾದ ಇಟ್ಟುಕೊಂಡಿದ್ದೇವೆ. ಕಡಾಕಿನ್ ಅವರು ಆಡ್ವಾಣಿ ಕಾಲಿಗೆರಗಿದ್ದು ವಿಶೇಷ ಸಂದರ್ಭದಲ್ಲಿ. ಅದವರ 85ನೇ ಹುಟ್ಟುಹಬ್ಬವಾಗಿತ್ತು' ಎಂಬ ಉತ್ತರ ಬಂದಿದೆ.
ಕಳೆದ ಆರು ದಶಕಗಳಲ್ಲಿ ಯುರೋಪ್ ಅಲ್ಲದೇ ಬ್ರಿಟನ್ಗಿಂತಲೂ ಭಾರತವನ್ನು ಮತ್ತೂ ಸನಿಹದಿಂದ ನೋಡಿಕೊಂಡು ಬಂದಿರುವುದು ರಷ್ಯಾವೇ. ಅದು ಭಾರತದ ರಾಜಕೀಯ ಪಕ್ಷಗಳೊಂದಿಗೆ ವ್ಯವಹರಿಸುವ ರೀತಿಯಲ್ಲೇ ಬದಲಾಗುತ್ತಿರುವ ಅಂತಾರಾಷ್ಟ್ರೀಯ ಆಲೋಚನೆಗಳನ್ನು ಅಳೆದು ಬಿಡಬಹುದು.
- ರಾಜೀವ್ ಶರ್ಮಾ
ವಿದೇಶಿ ವಿದ್ಯಮಾನ ವಿಶ್ಲೇಷಕ
bhootnath004@yahoo.com