ಅಫ್ಜಲ್ ಗುರು: ದೇಶ ರಕ್ಷಕರ ಕುತಂತ್ರ
ಅಫ್ಜಲ್ ಗುರುನನ್ನು ನೇಣು ಹಾಕಿದ್ದನ್ನು ಕುರಿತು ನಾವು ತಕರಾರು ಎತ್ತುವುದರಲ್ಲಿ ಅರ್ಥವಿಲ್ಲ. ವೈಯಕ್ತಿಕವಾಗಿ ನಾನೂ ಸಹ ಗಲ್ಲು ಶಿಕ್ಷೆಯ ವಿರುದ್ಧ. ಆದರೆ ನಮ್ಮ ದೇಶದಲ್ಲಿ ಎಲ್ಲಿಯವರೆಗೆ ಗಲ್ಲು ಶಿಕ್ಷೆ ಜಾರಿಯಲ್ಲಿರುತ್ತದೊ, ಅಲ್ಲಿಯವರೆಗೂ ಗುರುತರ ಅಪರಾಧ ಎಸಗಿದವರನ್ನು ಗಲ್ಲಿಗೇರಿಸಲೇಬೇಕಾಗುತ್ತದೆ. ಅದು ನ್ಯಾಯಾಂಗ ಪ್ರಕ್ರಿಯೆ. ಅದರಲ್ಲೂ ಪಾರ್ಲಿಮೆಂಟ್ ಭವನದ ಮೇಲಿನ ದಾಳಿ ಸಾಮಾನ್ಯ ಕೃತ್ಯವಲ್ಲದ ಇಡೀ ದೇಶದ ರಕ್ಷಣೆಗೆ ಸವಾಲೆಸೆದ ಕೃತ್ಯ.
ಆದರೆ ಹಾಗೆಂದು ಅಫ್ಜಲ್ ಗುರು ಪ್ರಕರಣದ ಇತರೆ ಮಗ್ಗುಲುಗಳನ್ನು ಕುರಿತು ಪ್ರಶ್ನಿಸಬಾರದೆಂದರೆ, ಸಂಶಯಗಳನ್ನು ವ್ಯಕ್ತಪಡಿಸಬಾರದೆಂದರೆ, ಅದನ್ನು ನಾವು ತೀವ್ರವಾಗಿ ವಿರೋಧಿಸಬೇಕಾಗುತ್ತದೆ. ಆ ರೀತಿ ಪ್ರತಿಕ್ರಿಯಿಸುವವರನ್ನು 'ದೇಶದ್ರೋಹಿ'ಗಳೆನ್ನುವಂತೆ ಬಿಂಬಿಸಲು ಯತ್ನಿಸುತ್ತಿರುವವರ ಮನಸ್ಥಿತಿ, ಬುದ್ಧಿ ಸಾಮರ್ಥ್ಯ ಮತ್ತು ನೈತಿಕತೆಗಳನ್ನು ಬಲವಾಗಿ ಖಂಡಿಸಬೇಕಾಗುತ್ತದೆ.
ಅಫ್ಜಲ್ ಗುರುವಿನ ಪ್ರಕರಣ ಕಸಬ್ನ ಪ್ರಕರಣದಂತಲ್ಲ. ಆತ ವೈರಿ ದೇಶದಿಂದ ನುಸುಳಿ ಬಂದು ದಾಳಿ ಎಸಗಿದ್ದ ಬಾಡಿಗೆ ಯೋಧ. ಆತ ಎಸಗಿದ ಕೃತ್ಯದ ದೃಶ್ಯಗಳು ನಮ್ಮ ಕಣ್ಣೆದುರಿನಲ್ಲಿ ಸಾಕಷ್ಟು ಕಾಲ ಹರಿದಾಡಿವೆ. ಮತ್ತು ಆತ ಕೇವಲ ಆರ್ಥಿಕ ಸಂಕಷ್ಟದ ಕಾರಣಕ್ಕೆ ಬೇರೊಂದು ದೇಶದೊಳಗೆ ನುಸುಳಿ ಹಲವಾರು ಮುಗ್ಧರನ್ನು ತಣ್ಣಗೆ ಕೊಂದು ಹಾಕಿದ್ದ.
ಆದರೆ ಅಫ್ಜಲ್ ಗುರು ಪರಿಸ್ಥಿತಿ ತೀರ ಭಿನ್ನ. ಆತ ಸ್ವತಂತ್ರ ಕಾಶ್ಮೀರಕ್ಕಾಗಿ ಚಡಪಡಿಸುತ್ತಿದ್ದವನು. ತಮ್ಮದು ಪ್ರತ್ಯೇಕ ರಾಷ್ಟ್ರವಾಗಬೇಕೆಂದು ಬಯಸುತ್ತಿದ್ದವನು. ಅದು ನಮಗೆ ಒಪ್ಪಿಗೆಯಾಗದಿರಬಹುದು. ಆದರೆ ಆತನ ತುಡಿತದ ನೆಲೆ ನಮ್ಮ ನೆಲೆಯಲ್ಲ. ಹಾಗಾಗಿ ನಮ್ಮ ಒಪ್ಪಿಗೆ ಆತನಿಗೆ ಅಪ್ರಸ್ತುತವಾಗಿತ್ತು. ಆತ ಎಲ್ಲ ಸಾಮಾನ್ಯರ ರೀತಿ ಬದುಕು ಸಾಗಿಸಬಹುದಾಗಿತ್ತು. ಆದರೆ ಆತ ಹಾಗೆ ಮಾಡದೆ ತನ್ನ ತುಡಿತಕ್ಕಾಗಿ ತನ್ನ ಬದುಕನ್ನು ಬಲಿ ನೀಡಿದ.
ಅಂದರೆ ಆತ ಕಾಶ್ಮೀರದ ಸಂಗೊಳ್ಳಿ ರಾಯಣ್ಣ. ಗಂಭೀರವಾಗಿ ಕ್ಷಣಕಾಲ ಯೋಚಿಸಿ ನೋಡಿ. ಬ್ರಿಟಿಷರು ಆಗ ಆಡಳಿತ ನಡೆಸುತ್ತಿದ್ದರು. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ರಾಯಣ್ಣ ಅವರಿಗೆ ದೇಶದ್ರೋಹಿಯಾಗಿ ಕಾಣಿಸಿದ. ಆತನನ್ನು ಬಹಿರಂಗವಾಗಿ ಗಲ್ಲಿಗೇರಿಸಿದರು. ಇಂದೂ ಸಹ ಬ್ರಿಟಿಷರ ಆಡಳಿತವೆ ಇದ್ದಿದ್ದರೆ ಸಂಗೊಳ್ಳಿ ರಾಯಣ್ಣನನ್ನು 'ದೇಶಭಕ್ತ'ನೆಂದು ಕರೆಯಲು, ಗುರುತಿಸಲು ಕಾನೂನು ಅವಕಾಶ ನೀಡುತ್ತಿರಲಿಲ್ಲ. ಅಂದೇನಾದರೂ ಈಗ ಇರುವ 24/7 ಚಾನೆಲ್ಗಳಿದ್ದಿದ್ದರೆ, ಆತನ ಗಲ್ಲನ್ನು ಖಂಡಿಸಿ ಹೇಳಿಕೆ ನೀಡಿದವರನ್ನು ಖಂಡಿತವಾಗಿಯೂ ಮೂರಾಬಟ್ಟೆ ಹರಾಜು ಹಾಕುತ್ತಿದ್ದರು.
ಹಾಗಾದರೆ ಅಫ್ಜಲ್ನನ್ನು ಗಲ್ಲಿಗೇರಿಸಿದ್ದು ತಪ್ಪೆ? ನಾನು ಆರಂಭದಲ್ಲೇ ಹೇಳಿದ ಹಾಗೆ, ಕಾನೂನಿನ ಪ್ರಕ್ರಿಯೆ ತಾರ್ಕಿಕ ಅಂತ್ಯ ಕಂಡಿದೆ. ಹಾಗಾಗಿ ಅದು ತಪ್ಪಲ್ಲ. ಆದರೆ ಆ ಪ್ರಶ್ನೆಯ ಜೊತೆ ತಳುಕು ಹಾಕಿಕೊಂಡಿರುವ ಮತ್ತೊಂದು ಪ್ರಶ್ನೆ ನಮ್ಮ ಮುಗ್ಧ ಭಾರತೀಯ ಮನಸ್ಸುಗಳೊಡನೆ ಸಾರ್ವಜನಿಕವಾಗಿ ಪ್ರಮುಖ ಹಂತಗಳಲ್ಲಿರುವ ರಾಜಕಾರಣಿಗಳು, ಸಾಮಾಜಿಕ ಮಾಧ್ಯಮಗಳು ಮತ್ತು ಶೋಷಕ ಜನಾಂಗಗಳ ಕಪಟತನವನ್ನು ಬೆತ್ತಲುಗೊಳಿಸುತ್ತದೆ.
ಆ ಪ್ರಶ್ನೆ- ರಾಜೀವ್ ಗಾಂಧಿಯ ಹಂತಕರನ್ನು ಇನ್ನೂ ಏಕೆ ನೇಣು ಗಂಭ ಏರಿಸಿಲ್ಲ?
ಒಂದು ಸಂಗತಿಯನ್ನು ಈ ಹಂತದಲ್ಲಿ ಸ್ಪಷ್ಟಗೊಳಿಸಲು ಬಯಸುತ್ತೇನೆ- ರಾಜೀವ್ ಗಾಂಧಿ ಹಂತಕರಿರಲಿ, 'ಸಾಧ್ವಿ ಪ್ರಜ್ಞಾ'ಳನ್ನೂ ಸಹ ನೇಣಿಗೇರಿಸುವುದು ನನಗೆ ಸಮ್ಮತವಾಗುವುದಿಲ್ಲ. ರಾಜೀವ್ ಗಾಂಧಿಯ ಹಂತಕರು ಶ್ರೀಲಂಕಾ ತಮಿಳರ ರಾಯಣ್ಣರುಗಳು. ಹಾಗೆಯೆ ಸಾಧ್ವಿ ಪ್ರಜ್ಞಾ ವೈದಿಕ ಜನಾಂಗದ ಸ್ತ್ರೀ ಅಫ್ಜಲ್ ಗುರು. ಇವರುಗಳಲ್ಲಿ ಯಾರೂ ವೈಯಕ್ತಿಕ ಲಾಭಕ್ಕಾಗಿ ಕೃತ್ಯ ಎಸಗಿದವರಲ್ಲ. ತಾವು ನಂಬಿದ ಧ್ಯೇಯಗಳ ದಾರಿಯಲ್ಲಿ ಬಹು ದೂರಕ್ಕೆ ಸಾಗಿದವರು. ನಾವು ಅವರಿಗೆ ನೀಡುವ ದಂಡನೆ ಅಂತಹ ಕೃತ್ಯಗಳಿಗೆ ಕಾರಣವಾದ ಸೈದ್ಧಾಂತಿಕ ವಾತಾವರಣವನ್ನು ಬದಲಿಸುವುದಿಲ್ಲ. ಬದಲಾಗಿ ಹೆಚ್ಚು ಗಟ್ಟಿಗೊಳಿಸುತ್ತದೆ.
ಆದರೆ ಹಿಂದಿನಿಂದಲೂ ಒಂದು ಕಟುವಾದ, ನೇರವಾದ, ತಿರುಚಲು ಸಾಧ್ಯವಾಗದ ಸಂಪ್ರದಾಯವನ್ನು ನಾವು ಅಂತಹ ಕೃತ್ಯ ಎಸಗಿದವರ ವಿರುದ್ಧ ರೂಢಿಸಿಕೊಂಡು ಬಂದಿದ್ದರೆ ಇಂದು ಅಫ್ಜಲ್ಗುರು ಪ್ರಸಂಗ ಇಷ್ಟು ಬಿಗಡಾಯಿಸುತ್ತಿರಲಿಲ್ಲ. ಆದರೆ ಇಂದಿರಾ ಗಾಂಧಿಯನ್ನು ಕೊಂದ ಸಿಖ್ ಹಂತಕರನ್ನು ಗಲ್ಲಿಗೇರಿಸಿ, ಪಾರ್ಲಿಮೆಂಟ್ ಭವನದ ಮುತ್ತಿಗೆಗೆ ಸಹಕರಿಸಿದನೆನ್ನುವ ಕಾರಣಕ್ಕಾಗಿ ಮುಸ್ಲಿಂ ಅಪರಾಧಿಯನ್ನು ಗಲ್ಲಿಗೇರಿಸಿ, ರಾಜೀವ್ ಗಾಂಧಿಯ ಹಿಂದೂ ಹಂತಕರನ್ನು ಉಳಿಸಿಕೊಂಡಿರುವುದು ಎಷ್ಟರ ಮಟ್ಟಿಗೆ ರಾಷ್ಟ್ರೀಯ ಘನತೆಯೆನಿಸುತ್ತದೆ?
-----
ಇನ್ನು ಪ್ರಕರಣದ ಮತ್ತೊಂದು ಮಗ್ಗುಲಿನತ್ತ ಗಮನಹರಿಸುವ...
ಆತನನ್ನು ಅಷ್ಟು ತರಾತುರಿಯಲ್ಲಿ ನೇಣಿಗೇರಿಸಿದ್ದು ನ್ಯಾಯಾಂಗದ ಗೌರವವನ್ನಂತೂ ಮುಕ್ಕು ಮಾಡಿದೆ. ಯಾವುದೆ ಶಿಕ್ಷಿತನಿಗೆ ಸಿಗುವ ಸವಲತ್ತುಗಳು ಎಲ್ಲ ಶಿಕ್ಷಿತರಿಗೂ ದೊರಕಬೇಕೆನ್ನುವುದು ನ್ಯಾಯಾಂಗದ ಆಶಯವಾಗಿರುತ್ತದೆ. ಆದರೆ ನಮ್ಮ ಶಾಸಕಾಂಗ ಅಫ್ಜಲ್ಗುರುವಿನ ಪ್ರಕರಣದಲ್ಲಿ ಅದಕ್ಕೆ ನಿರ್ದಾಕ್ಷಿಣ್ಯವಾಗಿ ತಿಲಾಂಜಲಿ ನೀಡಿದೆ. ರಾಜೀವ್ ಗಾಂಧಿ ಮತ್ತು ಬಿಯಾಂತ್ ಸಿಂಗ್ರ ಹಂತಕರಿಗೆ ರಾಷ್ಟ್ರಪತಿಗಳು ಕ್ಷಮಾದಾನ ನಿರಾಕರಿಸಿದ ನಂತರವೂ ನ್ಯಾಯಾಲಯದ ಮೆಟ್ಟಿಲೇರಿ ಗಲ್ಲು ಶಿಕ್ಷೆಗೆ ತಡೆಯಾಜ್ಞೆ ತರಲು ಯಾವ ಅಡೆತಡೆಯನ್ನೂ ಒಡ್ಡದ ಸರ್ಕಾರ ಈ ಬಾರಿ ಅಂತಹ ಯತ್ನಕ್ಕೆ ಅನುವು ಮಾಡಿಕೊಡಲಿಲ್ಲ. ಇತರೆ ಅಂಗಗಳು ಯಾವ ರೀತಿಯೆ ವರ್ತಿಸಲಿ, ನ್ಯಾಯಾಂಗದ ಕಣ್ಣಿನಲ್ಲಿ ಎಲ್ಲರೂ ಸಮಾನರೆ. ಹಾಗಾಗಿಯೆ ನ್ಯಾಯದೇವತೆಯ ಕಣ್ಣುಗಳಿಗೆ ಕಪ್ಪು ಪಟ್ಟಿಯನ್ನು ಕಟ್ಟಿರುವುದು. ಆದರೆ ಹಲವು ಪ್ರಕರಣಗಳಲ್ಲಿ ಆ ಪಟ್ಟಿಯನ್ನು ಸಾಕಷ್ಟು ಸಡಿಲಿಸಿ ಅಫ್ಜಲ್ಗುರು ಪ್ರಕರಣದಲ್ಲಿ ಅದನ್ನು ಹೆಚ್ಚು ಬಿಗಿಗೊಳಿಸಿದ್ದು ಸಮಂಜಸವೆ? ಒಂದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಅದು ಘನತೆ ತರುತ್ತದೆಯೆ? ಅಫ್ಜಲ್ಗುರುವನ್ನು ಮಾಧ್ಯಮಗಳು ಬಿಂಬಿಸಿದ ಹಾಗೆ ಕೇವಲ ಭಯೋತ್ಪಾದಕ ಮುಸ್ಲಿಮನೆಂದು ಮಾತ್ರ ಪರಿಗಣಿಸದೆ, ನಮ್ಮನಿಮ್ಮ ರೀತಿಯ ರಕ್ತಮಾಂಸಗಳ ಮನುಷ್ಯನನ್ನಾಗಿ ಪರಿಗಣಿಸಿ ನೋಡಿದಾಗ, ಸರ್ಕಾರ ಎಸಗಿರುವ ಪ್ರಮಾದ ನಿಚ್ಚಳವಾಗಿ ಗೋಚರಿಸುತ್ತದೆ. ರಾಜೀವ್ ಗಾಂಧಿ ಮತ್ತು ಬಿಯಾಂತ್ ಸಿಂಗ್ರ ಹಂತಕರು ತಾವು ಎಸಗಿದ ಕೃತ್ಯದ ಬಗ್ಗೆ ಸಾಕಷ್ಟು ಬಾರಿ ಪಶ್ಚಾತ್ತಾಪ ಸೂಚಿಸಿರುವುದು ಮತ್ತು ಅಫ್ಜಲ್ಗುರು ತಾನು ಯಾವ ರೀತಿಯಲ್ಲೂ ಆ ಕೃತ್ಯದಲ್ಲಿ ಭಾಗಿಯಾಗಿರಲಿಲ್ಲವೆಂದು ಪದೇ ಪದೆ ತೋಡಿಕೊಂಡಿರುವುದು ಈ ಸಂದರ್ಭದ ವ್ಯಂಗ್ಯಕ್ಕೆ ಕನ್ನಡಿ ಹಿಡಿಯುವಂತಿದೆ. ಕೃತ್ಯ ಎಸಗಿದ್ದವರಿಗೆ ನ್ಯಾಯಾಂಗ ಒದಗಿಸಬಹುದಾದ ಎಲ್ಲ ಸವಲತ್ತುಗಳನ್ನೂ ನೀಡಿ ತಾನು ಎಸಗಿರಲಿಲ್ಲವೆಂದು ಅಳಲು ತೋಡಿಕೊಂಡ ವ್ಯಕ್ತಿಗೆ ಅವನ್ನು ನಿರಾಕರಿಸಿದ್ದನ್ನು ನಾವು ಖಂಡಿಸದಿರುವುದು ನಮಗೆ ನಾವೆ ಬಗೆದುಕೊಳ್ಳುವ ದ್ರೋಹವಲ್ಲವೆ?
ಇಷ್ಟಕ್ಕೂ ಬಹಳ ಜನ ಆತನ ವಿರುದ್ಧವಾಗಿ ರೊಚ್ಚಿಗೆದ್ದಿರುವುದು ಆತ ಪೊಲೀಸರ ಮುಂದೆ ನೀಡಿದ ಹೇಳಿಕೆಯನ್ನು ಪರಮ ಸತ್ಯವೆಂದು ಭಾವಿಸಿರುವುದರಿಂದ. ದಯವಿಟ್ಟು ಒಮ್ಮೆ ಪೊಲೀಸರ ಮುಂದೆ ಹೇಳಿಕೆ ನೀಡಿರುವ ಯಾರನ್ನಾದರೂ ಕೇಳಿ ನೋಡಿ. ಅವರ ವಶದಲ್ಲಿದ್ದಾಗ ಅವರು ಹೇಳಿಕೊಟ್ಟ ಹೇಳಿಕೆಯನ್ನು ಮಾಧ್ಯಮದವರ ಮುಂದೆ ಹೇಳಲೇಬೇಕಾಗುತ್ತದೆ. ಪ್ರಾಸಂಗಿಕವಾಗಿ ಇಲ್ಲಿ ಒಂದು ಸಂಗತಿಯನ್ನು ಪ್ರಸ್ತಾಪಿಸಬೇಕಿದೆ. ನಾನು ದಂಡುಪಾಳ್ಯದ ಹಂತಕರಿಗೆ ನೀಡಿರುವ ಶಿಕ್ಷೆಯನ್ನು ತಿರಸ್ಕರಿಸುವುದು ಆ ಕಾರಣದಿಂದಾಗಿಯೆ. ಅವರ ಶಿಕ್ಷೆ ಬಹುತೇಕ ಅವರುಗಳು ಪೊಲೀಸರ ಎದುರಿಗೆ ನೀಡಿದ ವಿಡಿಯೊ ಚಿತ್ರಣಗಳ ಮೇಲೆ ನಿಂತಿದೆ. ಒಂದು ಸಂಗತಿಯನ್ನು ನೀವು ಗಮನಿಸಬೇಕು ಮತ್ತು ಗ್ರಹಿಸಬೇಕು- ನಮ್ಮ ನ್ಯಾಯಾಲಯಗಳು ಯಾವುದೆ ಆರೋಪಿ ಪಾತಕವನ್ನು 'ವಾಸ್ತವ'ವಾಗಿ ಎಸಗಿದ್ದಾನೆಯೆ, ಇಲ್ಲವೆ ಎಂದು ವಿಚಾರಣೆ ನಡೆಸುವುದಿಲ್ಲ; ತಮ್ಮ ಮುಂದಿರುವ ಪಾತಕವನ್ನು ಸಾಕ್ಷ್ಯಾಧಾರಗಳ ಮೂಲಕ, ಕಾನೂನಿನ ಮಿತಿಯಲ್ಲಿ ಸಾಬೀತುಪಡಿಸಲು ಸಾಧ್ಯವೆ ಎಂದಷ್ಟೆ ವಿಚಾರಣೆ ನಡೆಸುವುದು. ಅಂತಹ ನಿಯಮ(ಅಥವಾ ಕೊರತೆ)ದಿಂದಾಗಿಯೆ ನಾನು ನನ್ನ ಬದುಕಿನಲ್ಲಿ ಭಾಗವಹಿಸಬೇಕಾಗಿ ಬಂದ ಹತ್ಯೆಗಳನ್ನು ಕುರಿತು ಸಿನಿಮಾಗಳನ್ನು ನಿರ್ಮಿಸಲು ಸಾಧ್ಯವಾಗಿದ್ದು. ಮತ್ತು ಆ ಅನುಭವಗಳನ್ನು ಸಾಹಿತ್ಯವಾಗಿ ಮಾರ್ಪಡಿಸಿದ್ದು. ಏಕೆಂದರೆ, ನಾವೆ ಖುದ್ದಾಗಿ ಆ ಹತ್ಯೆಗಳಲ್ಲಿ ಭಾಗವಹಿಸಿರುವುದಾಗಿ ಬಹಿರಂಗವಾಗಿ ನಿವೇದಿಸಿಕೊಂಡರೂ ಅದನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸುವುದಿಲ್ಲ. ಏಕೆಂದರೆ, ಅವನ್ನು ಸಾಬೀತುಪಡಿಸುವ ಸಾಕ್ಷ್ಯಾಧಾರ ಪರಿಕರಗಳು ಅದರ ಎದುರಿಗಿರುವುದಿಲ್ಲ. ಅಂದಮೇಲೆ ಅಫ್ಜಲ್ಗುರುವಿನ ಪ್ರಕರಣದಲ್ಲಿ ಕೆಳಗಿನ ನ್ಯಾಯಾಲಯದ ಹಂತದಲ್ಲಿ ಆತನಿಗೆ ಸೂಕ್ತ ವಕೀಲರ ರಕ್ಷಣೆ ನೀಡದಿದ್ದುದು ತಪ್ಪಲ್ಲವೆ? ಒಂದು ಗುರುತರವಾದ ಪ್ರಕರಣವನ್ನು ನ್ಯಾಯಾಂಗ ಇಷ್ಟು 'ಉಡಾಫೆ'ಯಾಗಿ ಪರಿಗಣಿಸಬಾರದಿತ್ತು. (ಸಾರಿ, 'ಹಗುರ'ವಾಗಿ ಎಂದು ಓದಿಕೊಳ್ಳಿ). ತೀವ್ರವಾಗಿ ನ್ಯಾಯಾಂಗ ಕುಲುಮೆಗೆ ಪ್ರಕರಣವನ್ನು ಒಡ್ಡಬೇಕಾಗಿತ್ತು. ಅಂತಹ ನ್ಯಾಯವಾದಿಗಳ ನೆರವು ಆತನಿಗೆ ಸಿಗದಿದ್ದರಿಂದಾಗಿಯೆ, ಸುಪ್ರೀಂ ಕೋರ್ಟ್ನ ಹಂತದಲ್ಲಿ ತಾವು ಹೆಚ್ಚೇನನ್ನೂ ಮಾಡಲಾಗಲಿಲ್ಲವೆಂದು ಆತನ ಪರವಾಗಿ ಅಲ್ಲಿ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಸುನೀಲ್ ಕುಮಾರ್ ಅವರು ಪರಿತಪಿಸಿದ್ದು. ಅಫ್ಜಲ್ಗುರುವಿನ ನೇಣಿನ ನಂತರ ಜರುಗಿದ ಸಂವಾದಗಳಲ್ಲಿ ಅಷ್ಟೇನೂ ಮುಖ್ಯವಲ್ಲದ ವಾಹಿನಿಯೊಂದನ್ನು ಹೊರತುಪಡಿಸಿ, ಮತ್ತೆ ಯಾವ ವಾಹಿನಿಯೂ ಸುನೀಲ್ ಕುಮಾರ್ ಅನ್ನು ಸಂಪರ್ಕಿಸಲು ಹೋಗಲೇ ಇಲ್ಲ. ಆ ವಾಹಿನಿಯ ಸಂದರ್ಶಕರು, '...ಸುಪ್ರೀಂ ಕೋರ್ಟ್ ತೀರ್ಪನ್ನು ಬದಿಗಿರಿಸಿ ಹೇಳಿ... ಅಫ್ಜಲ್ಗುರು ನಿಜವಾಗಿಯೂ ಕೃತ್ಯದಲ್ಲಿ ಭಾಗಿಯಾಗಿರಲಿಲ್ಲವೆ...' ಎಂದು ಪ್ರಶ್ನಿಸಿದಾಗ, ಅವರು ತಕ್ಷಣ ಉತ್ತರಿಸಿದರು '..ಖಂಡಿತವಾಗಿಯೂ ಇಲ್ಲ...'.
ಅದೇ ಪ್ರಶ್ನೆಯನ್ನು ನಾನು ಐದು ವರ್ಷಗಳ ಹಿಂದೆ ಆ ಪ್ರಕರಣದಲ್ಲಿ ಖುಲಾಸೆಯಾಗಿರುವ ಸೈಯದ್ ಗಿಲಾನಿಯವರಿಗೆ ಕೇಳಿದ್ದೆ. ಆಗ ಅವರು ಸಭೆಯೊಂದರಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಬಂದಿದ್ದರು. ಲೇಖಕ-ಕವಿ ಮಿತ್ರ ಲಕ್ಷ್ಮಣ್ ಅವರು ಅವರನ್ನು ನಮ್ಮ ಕಚೇರಿಗೆ ಕರೆದುಕೊಂಡು ಬಂದಿದ್ದರು. ನಮ್ಮೊಡನೆಯೆ ಮಧ್ಯಾಹ್ನದ ಊಟ ಮುಗಿಸಿ, ಎರಡು ಗಂಟೆಗಳ ಕಾಲ ಮಾತುಕತೆಯಲ್ಲಿ ಅವರು ತೊಡಗಿದ್ದರು. ಅವರ ಧ್ವನಿಯಲ್ಲಿ ಆಕ್ರೋಶವಿರಲಿಲ್ಲ; ಯಾತನೆಯಿತ್ತು. ಆ ಪ್ರಕರಣದಿಂದ ಖುಲಾಸೆಯಾಗಿದ್ದ ಅವರಿಗೆ, ತಮ್ಮ ಬಗ್ಗೆಯಿರಲಿ, ಅಫ್ಜಲ್ಗುರು ಬಗ್ಗೆ ಅಂತಃಕರಣದಿಂದ ಮಾತನಾಡುವ ಅಗತ್ಯವಾಗಲಿ, ಅನಿವಾರ್ಯತೆಯಾಗಲಿ ಇರಲಿಲ್ಲ. ಅವರಿಗೆ ಭಾರತ ಸರ್ಕಾರ ಕಾಶ್ಮೀರದ ವಿಷಯದಲ್ಲಿ ನಡೆದುಕೊಳ್ಳುತ್ತಿರುವ ರೀತಿಗೆ ಸಹಮತವಿರದಿದ್ದರೂ, ಪಾರ್ಲಿಮೆಂಟ್ ಅಟ್ಯಾಕ್ನಲ್ಲಿ ತಾವೆಲ್ಲರೂ ನಿರ್ದೋಷಿಗಳೆಂದರು. ಅವರು ಪಾರ್ಲಿಮೆಂಟ್ ಅಟ್ಯಾಕ್ ನಂತರ ಸೆಲ್ ಫೋನಿನಲ್ಲಿ ಅದನ್ನು ಕುರಿತು ಲೇವಡಿ ಮಾಡಿದ್ದ ಸಂಗತಿಯನ್ನು ಅವರ ಪುಸ್ತಕದಲ್ಲಿ ನಿರಾಕರಿಸಿದ್ದರೂ, ಅದನ್ನು ಕುರಿತು ನಾವು ಪ್ರಶ್ನಿಸಲಿಲ್ಲ. ಏಕೆಂದರೆ, ಆ ರೀತಿ ರಾಜೀವ್ ಗಾಂಧಿ ಹತ್ಯೆಯಾದಾಗ ಮತ್ತು ನಮ್ಮ ರಾಜ್ ಕುಮಾರ್ ಕಿಡ್ನ್ಯಾಪ್ ಆದಾಗ ಲೇವಡಿ ಮಾಡಿದ್ದವರ ದೊಡ್ಡ ದಂಡೆ ನನಗೆ ತಿಳಿದಿತ್ತು. ಆ ಕಾರಣವನ್ನು ಮುಂದಿಟ್ಟುಕೊಂಡು ಅವರನ್ನು ಆರೋಪಿಗಳನ್ನಾಗಿ ಪರಿಗಣಿಸುವುದು ತೀರ ಕ್ಷುಲ್ಲಕತನವೆಂದು ನನಗೆ ತಿಳಿದಿತ್ತು. ಕಾಶ್ಮೀರದ ಪ್ರತ್ಯೇಕತೆಯನ್ನು ಕನಸಿಸುವವರು ಸಹಜವಾಗಿಯೆ ಪಾರ್ಲಿಮೆಂಟ್ ಅಟ್ಯಾಕ್ ಅನ್ನು ಕಂಡು ಹರ್ಷಿಸಿರುವ ಸಾಧ್ಯತೆಗಳು ಹೆಚ್ಚು. ಹಾಗೆಂದು ಅವರಿಗೆ ದಂಡನೆ ವಿಧಿಸುವುದಾದರೆ ನಾವು ನಾಝಿಗಳಾಗುತ್ತೇವೆ.
------
ಈಗ ನನ್ನಂಥವರಿಗೆ ಮಾತ್ರ ಆಳವಾಗಿ ತಿಳಿದಿರುವ ಪ್ರಮುಖ ಸಂಗತಿಯ ಮಗ್ಗುಲನ್ನು ನಿಮಗೆ ಪರಿಚಯಿಸಲು ಯತ್ನಿಸುತ್ತೇನೆ. ಆದರೆ ಈ ಹಂತದಲ್ಲಿ ನೀವು ಸಂಪೂರ್ಣವಾಗಿ ತೆರೆದ, ಮುಕ್ತ ಮನಸ್ಸನ್ನು ಹೊಂದಿರಬೇಕೆಂದು ನನ್ನ ವಿನಂತಿ.
2001ರ ಮೇ-ಜೂನ್ ಇರಬಹುದು. ಆಗ ಬೆಂಗಳೂರಿನ ದಿನಪತ್ರಿಕೆಯೊಂದರಲ್ಲಿ ವರದಿಗಾರರಾಗಿದ್ದ ನನ್ನ ಆತ್ಮೀಯರೊಬ್ಬರು ಒಂದು ಬೆಳಿಗ್ಗೆ ಫೋನಾಯಿಸಿ ಮೂವರು important ವ್ಯಕ್ತಿಗಳು ನನ್ನನ್ನು ಸಂಪರ್ಕಿಸಲು ಬಯಸುತ್ತಿರುವುದಾಗಿ ಹೇಳಿ, ಅವರೊಡನೆ ಗಾಢವಾದ ಸಂಪರ್ಕ ಮತ್ತು ಸಂಬಂಧ ಬೆಳೆಸಿಕೊಂಡರೆ ನನಗೂ ಸಾಕಷ್ಟು ಅನುಕೂಲಗಳಾಗಬಹುದೆಂದು ಸೂಚಿಸಿ, ಮಧ್ಯಾಹ್ನ ಅವರು ನಮ್ಮ ಮನೆಗೆ ಬರುತ್ತಿರುವುದಾಗಿ ತಿಳಿಸಿದರು. ಸಾಕಷ್ಟು ಕುತೂಹಲದಿಂದಲೆ ನಾನೂ ಒಪ್ಪಿಗೆ ನೀಡಿದ್ದೆ.
ಅವರು ತಿಳಿಸಿದಂತೆ ಕರಾರುವಾಕ್ಕಾಗಿ ನಾಲ್ಕು ಗಂಟೆಯ ಹೊತ್ತಿಗೆ ಮೂವರು ಬಂದರು. ನೋಡುವುದಕ್ಕೆ ತೀರ ಸಾಮಾನ್ಯವಾಗಿ ಕಾಣುತ್ತಿದ್ದರು. ಒಬ್ಬರು ಬಾಲ್ಡ್ ಆಗಿ ಸಂಪ್ರದಾಯಸ್ಥ ಬ್ರಾಹ್ಮಣರ ರೀತಿ ಕಾಣಿಸುತ್ತಿದ್ದರೆ, ಮತ್ತೊಬ್ಬರು ಮದ್ರಾಸಿಗಳ ರೀತಿ ಕಾಣಿಸುತ್ತಿದ್ದರು. ಮತ್ತೊಬ್ಬರು ಉತ್ತರ ಭಾರತದ ಕಡೆಯವರು. ಎಲ್ಲರೂ ಮಧ್ಯಮ ಎತ್ತರ. ನನಗಿಂತಲೂ ಒಂದು ಇಂಚಿಗಿಂತಲೂ ಹೆಚ್ಚು ಕುಳ್ಳಗಿದ್ದರು.
ಆರಂಭದಲ್ಲಿ ಕೇಂದ್ರ ಐಇಗೆ ಸೇರಿದವರೆಂದು ಹೇಳಿಕೊಂಡರೂ ನನ್ನನ್ನು ಗಂಭೀರವಾಗಿ ಪರಿಗಣಿಸಬಹುದೆಂದು ಗೊತ್ತಾದಾಗ ಖಆಗಿ ದವರೆಂದು ಹೇಳಿಕೊಂಡರು. ಖಆಗಿ ಎಂದರೆ ನಿಮಗೆ ತಿಳಿದಿರಬಹುದು-research and analysis win ಅದೇನೊ ವೈಜ್ಞಾನಿಕ ಸಂಸ್ಥೆಯೆಂದು ಪರಿಗಣಿಸಬೇಡಿ; ಇಂಡಿಯಾದ ಗೂಢಚಾರ ಸಂಸ್ಥೆ. ಅಮೆರಿಕಾದ ಈಐಆ ಮತ್ತು ಪಾಕಿಸ್ತಾನದ ISI ಗಳ ಗುಂಪಿಗೆ ಸೇರಿದ್ದು.
ಅವರು ನನ್ನ ಹತ್ತಿರ ಬಂದಿದ್ದು ಒಂದೇ ಒಂದು ಉದ್ದೇಶದಿಂದ: ಭವಿಷ್ಯದಲ್ಲಿ ಸಾಕಷ್ಟು ಇಸ್ಲಾಮಿಕ್ ಟೆರರಿಸ್ಟ್ ಕೃತ್ಯಗಳು ಇಂಡಿಯಾದಲ್ಲಿ ಸಂಭವಿಸಲಿವೆ; ಎಷ್ಟು ಎಚ್ಚರ ವಹಿಸಿದರೂ ಸಾಲುವುದಿಲ್ಲ; ಬೆಂಗಳೂರಿನಲ್ಲಿ ನನಗೆ ಸಾಕಷ್ಟು ಸಂಪರ್ಕವಿರುವುದರಿಂದ ನಾನು ಅಂತಹ ಭಯೋತ್ಪಾದಕ ಕೃತ್ಯಗಳಿಗೆ ಕುಮ್ಮಕ್ಕು ನೀಡಬಹುದಾದ ವ್ಯಕ್ತಿಗಳನ್ನು ಕುರಿತು ಮಾಹಿತಿ ನೀಡಲು ಸಾಧ್ಯವೆ? ಅಂತಹ ವ್ಯಕ್ತಿಗಳನ್ನು ಯಾವ ರೀತಿ ಗುರುತಿಸಬಹುದೆನ್ನುವುದರ ಬಗ್ಗೆಯೂ ಬಚ್ಚನ್ ಮತ್ತು ನನ್ನೊಡನೆ ಸುದೀರ್ಘವಾಗಿ ಮಾತನಾಡಿದರು.
ಅವರು ನನ್ನ ಹತ್ತಿರ ಬರುವ ಮುಂಚೆ ಸಾಕಷ್ಟು ಹೋಂ ವರ್ಕ್ ಮಾಡಿಕೊಂಡಿದ್ದರು. ನಾನು ಭೂಗತ ಜಗತ್ತಿನಲ್ಲಿ ಏರಿದ್ದ ಎತ್ತರ, ನನ್ನೊಡನೆ ಇರುವ ಬಚ್ಚನ್ ಮುಸ್ಲಿಂ ಜನಾಂಗಕ್ಕೆ ಸೇರಿರುವುದು, ಅಲ್ಪಸಂಖ್ಯಾತರ ಪರವಾದ ನನ್ನ ನಿಲುವು ಮತ್ತು ಆ ಕಾರಣಕ್ಕಾಗಿ ಆ ಸಮುದಾಯಕ್ಕೆ ನನ್ನ ಬಗ್ಗೆ ಇರುವ ನಂಬಿಕೆ ಮತ್ತು ಭರವಸೆ ಎಲ್ಲದರ ಬಗ್ಗೆ ಅವರಿಗೆ ಆಳವಾಗಿ ತಿಳಿದಿತ್ತು. ಬಚ್ಚನ್ ಮತ್ತು ನಾನು ಮನಸ್ಸು ಮಾಡಿದರೆ ಭಯೋತ್ಪಾದಕ ಕೃತ್ಯಗಳನ್ನು ತಡೆಗಟ್ಟುವ ಅವರ ಯತ್ನಕ್ಕೆ ಸಾಕಷ್ಟು ಸಹಕಾರಿಯಾಗಬಹುದೆಂದರು.
ನೋಡಲು ಹೈಸ್ಕೂಲಿನ ಮಾಸ್ತರುಗಳಂತೆ ಕಾಣುತ್ತಿದ್ದ ಅವರೊಡನೆ ಎರಡು ಗಂಟೆಗಳ ಕಾಲ ಮಾತನಾಡತೊಡಗಿದಂತೆ ನಮಗೆ ಒಂದು ಅಂಶ ಎದ್ದುಕಾಣತೊಡಗಿತು: ಅವರ ಕಣ ಕಣಗಳಲ್ಲಿ ಹರಿಯುತ್ತಿರುವುದು ತೀವ್ರವಾದ, ಅತಿ ತೀವ್ರವಾದ ದೇಶಬದ್ಧತೆ. ಅವರಿಗೆ ಭೂಗತ ಜಗತ್ತು ನಿಷಿದ್ಧವಾಗಿರಲಿಲ್ಲ. ಅಲ್ಲಿರುವವರು ಭಯೋತ್ಪಾದಕರ ವಿರುದ್ಧ ಹೋರಾಡಲು ತಮಗೆ ಸಹಕಾರ ನೀಡುವುದಾದರೆ ಅವರಿಗೆ ಯಾವ ರೀತಿಯ ರಕ್ಷಣೆಯನ್ನೂ ನೀಡಲು ಸಿದ್ಧವಿದ್ದರು. ಹಾಗೆಯೆ ಯಾರಾದರೂ ಭಯೋತ್ಪಾದಕ ಕೃತ್ಯಗಳಿಗೆ ನೆರವು ನೀಡುವ ಮನಸ್ಥಿತಿಯವರಾಗಿದ್ದರೆ ಅವರನ್ನು 'ಹಠಾವ್' ಮಾಡಲು ಒಂದು ಕ್ಷಣವೂ ಹಿಂದುಮುಂದೆ ಯೋಚಿಸುತ್ತಿರಲಿಲ್ಲ.
ನೋಡಲು ಅತ್ಯಂತ ಸಾಮಾನ್ಯರಂತಿದ್ದರೂ, ಅವರ ಕಣ್ಣುಗಳು, ತಣ್ಣಗಿನ ಧ್ವನಿ ಮತ್ತು ಭಾವನಾರಹಿತ ವರ್ತನೆ ಅವರು ಸಾಕಷ್ಟು ಆಳವಾಗಿ ತರಬೇತಿ ಹೊಂದಿದ 'ನಿಗೂಢ' ವ್ಯಕ್ತಿತ್ವದವರೆಂದು ನನಗೆ ಮೊದಲ ಭೇಟಿಯಲ್ಲೆ ಖಾತರಿಯಾಗಿಬಿಟ್ಟಿತು. ನಮ್ಮನ್ನು ಆಗಾಗ ಸಂಪರ್ಕಿಸುವುದಾಗಿ ಹೇಳಿ ಹೋದರು. ಅವರು ಹೋದ ನಂತರ ಅವರನ್ನು ನನ್ನ ಬಳಿಗೆ ಕಳಿಸಿದ ವರದಿಗಾರರಿಗೆ ಫೋನ್ ಮಾಡಿ, ಅವರನ್ನು ಎಷ್ಟರ ಮಟ್ಟಿಗೆ ನಂಬಬಹುದೆಂದು ಕೇಳಿದೆ. ಅವರು ನೂರಕ್ಕೆ ನೂರರಷ್ಟು ದೇಶ ಹಿತಕ್ಕಾಗಿ ದುಡಿಯುವ ವ್ಯಕ್ತಿಗಳೆಂದು ತಿಳಿಸಿದ ಮಿತ್ರರು, ಅವರೊಡನೆ ನಡೆಯುವ ಮಾತುಕತೆಯನ್ನು ಯಾರಿಗೂ ತಿಳಿಸದಿರಲು ಹೇಳಿ, ಎಚ್ಚರಿಕೆಯಿಂದ ಅವರನ್ನು cultivate ಮಾಡಿಕೊಳ್ಳಲು ಸಲಹೆ ನೀಡಿದರು.
ನಂತರದಿಂದ ಅವರು ವಾರ, ಎರಡು ವಾರಗಳಿಗೊಮ್ಮೆ ನಮ್ಮನ್ನು ಸಂಪರ್ಕಿಸತೊಡಗಿದರು. ನನಗೆ ಅವರನ್ನು ಹಚ್ಚಿಕೊಳ್ಳುವ ಮನಸ್ಸಿರಲಿಲ್ಲ. ಆದರೆ ನನ್ನೊಡನಿರುವ ಬಚ್ಚನ್ಗೆ 'ಅಥಾರಿಟಿ'ಯೆಂದರೆ ಎಲ್ಲಿಲ್ಲದ ಗೌರವ. ಮತ್ತು ಹಿಂದುಮುಸ್ಲಿಂ ದ್ವೇಷವನ್ನು ಬಿತ್ತುವ ಮುಸ್ಲಿಮರ ಬಗ್ಗೆ ಅವರಿಗೆ ಎಲ್ಲಿಲ್ಲದ ಸಿಟ್ಟು. ಅವರುಗಳು ಬಂದಾಗ ಅಂತಹ ವ್ಯಕ್ತಿಗಳನ್ನು ಕುರಿತು ಮಾಹಿತಿ ನೀಡಿ, ಅವರನ್ನು ಬಲಿ ಹಾಕಲು ಹೇಳುತ್ತಿದ್ದರು. ಆದರೆ ಆ ಖಆಗಿ ಏಜೆಂಟರಿಗೆ ಸಾಮಾನ್ಯ ಹಿಂದೂ ಮುಸ್ಲಿಂ ಗಲಭೆಗಳ ಬಗ್ಗೆ ಯಾವ ಕಾಳಜಿಯೂ ಇರಲಿಲ್ಲ. ಅದು ಜನಭರಿತ ಭಾರತದಲ್ಲಿ ಸಹಜ ಕ್ರಿಯೆಯೆನ್ನುವುದನ್ನು ಪ್ರಬುದ್ಧವಾಗಿ ವಿವರಿಸಿ, ಅಂತಹ ಗಲಭೆಗಳು ಯಾವುದೊ ಮೂಲೆಯಲ್ಲಿ, ಯಾರ ಕಣ್ಣಿಗೂ ಕಾಣದ ಹಾಗೆ ಭಯೋತ್ಪಾದಕರಿಗೆ ಕುಮ್ಮಕ್ಕು ನೀಡುವ ವ್ಯಕ್ತಿಗಳು ಇರುತ್ತಾರೆಂದು ಹೇಳಿ, ಅವರ ಬಗ್ಗೆ ನಿಗಾ ವಹಿಸಲು ಕೇಳಿಕೊಳ್ಳುತ್ತಿದ್ದರು. ದಾವೂದ್ ಇಬ್ರಾಹಿಂನ ಬಲಗೈ ಬಂಟ ಛೋಟಾ ಶಕೀಲ್ಗೆ ಬೆಂಗಳೂರಿನಲ್ಲಿ ಸಾಕಷ್ಟು ಹುಡುಗರೊಡನೆ ಸಂಪರ್ಕವಿರುವುದಾಗಿ ತಿಳಿಸಿದ್ದರು.
2001ರ ಆಗಸ್ಟ್ನಲ್ಲಿ ಒಂದು ಘಟನೆ ಸಂಭವಿಸಿತ್ತು. ಮುಂಬೈನ encounter specialist ವಿಜಯ್ ಸಾಲಸ್ಕರ್ ಎನ್ನುವ ಅಧಿಕಾರಿ ಬೆಂಗಳೂರು ಏರ್ರ್ಪೋರ್ಟ್(ಹಳೆಯದು)ಗೆ ಅರ್ಧ ಕಿಲೋಮೀಟರ್ ದೂರದಲ್ಲಿ ಛೋಟಾ ರಾಜನ್ ಗ್ಯಾಂಗ್ಗೆ ಸೇರಿದ ಮೂವರನ್ನು ಕೊಂದು ಹಾಕಿದ್ದರು. ಅವರಲ್ಲಿ ಮಂಗಳೂರು ಮೂಲದ ಜಗ್ಗು ಶೆಟ್ಟಿ ಎನ್ನುವವನೂ ಸಹ ಒಬ್ಬನಾಗಿದ್ದ. ಆತ ಹಲವು ತಿಂಗಳುಗಳ ಹಿಂದೆ ಛೋಟಾ ರಾಜನ್ನ ವೈರಿ ಚೆಂಬೂರು ವಿನೋದ್ ಶೆಟ್ಟಿಯನ್ನು ಮುಂಬೈನಲ್ಲಿ ಹತ್ಯೆ ಮಾಡಿದ್ದ.
ಅದರ ಬಗ್ಗೆ ಮಾರನೆಯ ದಿನ ಪತ್ರಿಕೆಗಳಲ್ಲಿ ಓದಿ ಮುಗಿಸುವ ಹೊತ್ತಿಗೆ ಆ ತ್ರಿಮೂರ್ತಿಗಳಲ್ಲಿ ಒಬ್ಬರು ಫೋನ್ ಮಾಡಿ, ಆ ಸಂಜೆ ಮುಖ್ಯವಾದ ಸಂಗತಿಯೊಂದನ್ನು ಚರ್ಚಿಸಲು ಬರುತ್ತಿರುವುದಾಗಿ ತಿಳಿಸಿದರು.
ಸಂಜೆ ಬಂದಾಗ ಅವರ ಮುಖಗಳು ಎಂದಿನಂತೆ ಸಾಮಾನ್ಯವಾಗಿರಲಿಲ್ಲ. ವರ್ತನೆ ಮಾಮೂಲಿಯಾಗಿ ಕಾಣುತ್ತಿದ್ದರೂ ಕಣ್ಣುಗಳಲ್ಲಿ ಆಕ್ರೋಶ ಮಡುಗಟ್ಟಿತ್ತು. ಛೋಟಾ ರಾಜನ್ ತಮ್ಮ ಸಂಸ್ಥೆಗೆ ಮತ್ತು ತನ್ಮೂಲಕ ದೇಶಕ್ಕೆ ಎಷ್ಟು ಸಹಾಯ ಮಾಡಿದ್ದಾನೆಂದು ನಿರ್ವಿಕಾರ ಧ್ವನಿಯಲ್ಲಿ ತಿಳಿಸಿ, ಮುಂಬೈ ಬ್ಲಾಸ್ಟ್ನ ಎಲ್ಲ ಸಂಚುಕೋರರನ್ನು ಅವನು ಮುತುವರ್ಜಿ ವಹಿಸಿ ನಾಶ ಮಾಡಿದ್ದಾಗಿ ಹೇಳಿ, ವಿಜಯ್ ಸಾಲಸ್ಕರ್ನನ್ನು ದಾವೂದ್ ಏಜೆಂಟನೆಂದು ಟೀಕಿಸಿ, ಬೆಂಗಳೂರಿನಲ್ಲಿ ಅಡಗಿದ್ದ ಛೋಟಾ ರಾಜನ್ನ ಆ ಮೂವರ ಸಹಚರರನ್ನು ಕುರಿತು ಮಾಹಿತಿ ನೀಡಿದವರ ಪತ್ತೆಗೆ ತಮಗೆ ಸಹಕರಿಸಬೇಕೆಂದು ಕೇಳಿಕೊಂಡರು. ಪತ್ರಿಕೆಗಳಲ್ಲಿ ಬೆಂಗಳೂರಿನ ಪೊಲೀಸರೂ ಸಹ ಆ ಎನ್ಕೌಂಟರ್ನಲ್ಲಿ ಪಾಲುಗೊಂಡಿದ್ದರೆಂದು ವರದಿಯಾಗಿದ್ದರೂ ಅವರಿಗೆ ಯಾವ ಮಾಹಿತಿಯೂ ತಿಳಿದಿರಲಿಲ್ಲವೆಂದರು.
ಬೆಂಗಳೂರಿನಲ್ಲಿ ನಮಗೆ ತಿಳಿದಿದ್ದ ಮುಸ್ಲಿಮರಲ್ಲಿ ಒಬ್ಬ ಯುವ ವ್ಯಾಪಾರಿಗೆ ಛೋಟಾ ಶಕೀಲ್ ಜೊತೆ ಸಂಪರ್ಕವಿರುವುದು ನಮಗೆ ತಿಳಿದಿತ್ತು. ಆತ ಆಗಾಗ ಅದನ್ನು ಕುರಿತು ಗೌಪ್ಯ ಧ್ವನಿಯಲ್ಲಿ ಹೇಳುತ್ತಿದ್ದ. ಮತ್ತು ಆತ ಛೋಟಾ ಶಕೀಲ್ಗೆ ಫೋನ್ ಮಾಡಲು ಹದಿನೈದು-ಇಪ್ಪತ್ತು ದಿನಗಳಿಗೊಮ್ಮೆ ದುಬಾಯ್ಗೆ ಹೋಗುತ್ತಿದ್ದುದೂ ಸಹ ನಮಗೆ ತಿಳಿದಿತ್ತು. ಆತನ ನಡವಳಿಕೆ ಯಾರಿಗೂ ಹಿತವೆನಿಸುತ್ತಿರಲಿಲ್ಲ. ಅದರಲ್ಲೂ ಅವನನ್ನು ಕಂಡರೆ ಬಚ್ಚನ್ಗೆ ಎಲ್ಲಿಲ್ಲದ ಸಿಟ್ಟಿತ್ತು. ನನ್ನ ಸಮ್ಮತಿಗೂ ಕಾಯದೆ ಆತನ ವಿಷಯವನ್ನು ಅವರಿಗೆ ತಿಳಿಸಿಬಿಟ್ಟರು. ಅವರ ಕಣ್ಣುಗಳು ಅರಳಿದವು. ಅವನ ಒಂದು ಫೋನ್ ನಂಬರ್ ಮಾತ್ರ ನಮಗೆ ತಿಳಿದಿತ್ತು. ಅದನ್ನು ಅವರಿಗೆ ಬಚ್ಚನ್ ನೀಡಿದರು. ಅವನದೇನಿದ್ದರೂ ಛೋಟಾ ಶಕೀಲ್ನೊಡನೆ ಬಿಸಿನೆಸ್ ಸಂಬಂಧವೆಂದು ನಾನು ಹೇಳಿದರೂ, ಅವರು ಅದಕ್ಕೆ ಒತ್ತು ನೀಡಲಿಲ್ಲ. ಅಂತಹ ಸಂಬಂಧಗಳನ್ನು ಸುಲಭವಾಗಿ ಟೆರರಿಸ್ಟ್ ಸಂಬಂಧಗಳಾಗಿ ಪರಿವರ್ತಿಸಿಕೊಳ್ಳಬಹುದೆಂದು ಹಲವು ನಿದರ್ಶನಗಳನ್ನು ನೀಡಿ ವಿವರಿಸಿದರು. ಮತ್ತು ಆತನಿಗೆ ನಮ್ಮ ಬಗ್ಗೆ ಸಾಕಷ್ಟು ಗೌರವವಿರುವುದರಿಂದ ಆಗಾಗ ಅವನನ್ನು ಮಾತನಾಡಿಸುತ್ತಾ, ಅವನ ಮನಸ್ಸಿನಲ್ಲಿರುವುದನ್ನು ಬಗೆದು ತಿಳಿದುಕೊಳ್ಳಲು ಬಚ್ಚನ್ ಕೈ ಹಿಡಿದು ಕೇಳಿಕೊಂಡರು. ಬಚ್ಚನ್ ಉಬ್ಬಿಹೋಗಿ ಮಾರನೆಯ ದಿನದಿಂದಲೆ ಸೀರಿಯಸ್ಸಾಗಿ ವರ್ಕ್ ಮಾಡುವುದಾಗಿ ಆಶ್ವಾಸನೆ ನೀಡಿದರು.
ನಂತರ ನಾಲ್ಕು ದಿನಗಳ ಕಾಲ ಬಚ್ಚನ್ ಮತ್ತು ನನ್ನ ನಡುವೆ ಜರುಗಿದ ವಾಗ್ವಾದ ಅಷ್ಟಿಷ್ಟಲ್ಲ. ಛೋಟಾ ಶಕೀಲ್ನೊಡನೆ ಸಂಪರ್ಕ ಹೊಂದಿರುವ ವ್ಯಕ್ತಿಯನ್ನು ನಾನು ಬೇಡವೆಂದರೂ ಒಂದು ವಾರದಲ್ಲಿ ಮೂರು ಬಾರಿ ಕರೆಸಿ ಮಾತನಾಡಿದರು. ಅವನ ಮತ್ತು ಶಕೀಲನ ನಡುವೆ ಇರುವ ದುಬಾಯ್ನ ಹಲವು ಭಾರತೀಯರ ಹೆಸರುಗಳನ್ನು ತಿಳಿದುಕೊಂಡರು. ಒಂದು ಸಂಜೆಯಂತೂ ಬಚ್ಚನ್ ತೋರಿಸುತ್ತಿದ್ದ ಉತ್ಸಾಹ ನನ್ನನ್ನು ಅಕ್ಷರಶಃ ದಂಗುಬಡಿಸಿಬಿಟ್ಟಿತು.
ಅದುವರೆಗೂ ಆ ಮೂವರು ಒಂದು ಬಾರಿಯೂ ತಮ್ಮ ಸೆಲ್ ಫೋನ್ ನಂಬರ್ ನೀಡಿರಲಿಲ್ಲ. ಪ್ರತಿ ಬಾರಿಯೂ ಪಬ್ಲಿಕ್ ಲ್ಯಾಂಡ್ಲೈನ್ಗಳಿಂದ ಫೋನ್ ಮಾಡುತ್ತಿದ್ದರು. ಮತ್ತು ಅವರ ಆಫೀಸಿನ ಅಡ್ರೆಸ್ ಕೇಳಿದರೆ ಈಇಐ ಆಫೀಸಿನ ಒಂದು ಕೋಣೆಯಲ್ಲಿದೆಯೆನ್ನುತ್ತಿದ್ದರು. ಅವರು ಅವರ ಅಡ್ರೆಸ್ ನೀಡದಿರುವುದಕ್ಕೆ ಕಾರಣ ನನಗೆ ತಿಳಿದಿತ್ತು: ಅವರ ಜಗತ್ತಿನಲ್ಲಿ ಡಬಲ್ ಕ್ರಾಸ್ ಸಾಮಾನ್ಯ. ಅದನ್ನು ಬಚ್ಚನ್ಗೆ ವಿವರಿಸಿ, ನಾವೂ ಸಹ ಡಬಲ್ ಕ್ರಾಸ್ಗೆ ಒಳಗಾಗುವ ಸಂಭವಗಳಿವೆಯೆಂದು ತಿಳಿಸಿದೆ.
ಸುಮಾರು ಹತ್ತು ದಿನಗಳು ಕಳೆದ ನಂತರ ಅವರುಗಳು ಬಂದರು. ಈ ಬಾರಿ ಅವರು ಬಚ್ಚನ್ ಜೊತೆ ವ್ಯವಹರಿಸುವುದಕ್ಕಿಂತಲೂ ಮೊದಲೆ ಕಟ್ಟುನಿಟ್ಟಾಗಿ ಎರಡು ಸಂಗತಿಗಳನ್ನು ತಿಳಿಸಿದೆ: ಒಂದು, ಅವರುಗಳ ಸುಪೀರಿಯರ್ ಆಫೀಸರ್ ಒಬ್ಬರಿಂದ ನಮಗೆ ಅಫಿಷಿಯಲ್ ಆಗಿ ಒಂದು ಭರವಸೆಯ ಪತ್ರ ಬೇಕು. (ಅದನ್ನು ನನ್ನ ವಕೀಲರ ಸುಪರ್ದಿನಲ್ಲಿರಿಸುವುದಾಗಿ ತಿಳಿಸಿದ್ದೆ). ಎರಡು, ಅವರುಗಳ ಯಾವುದಾದರೂ ಒಂದು ಪರ್ಮನೆಂಟ್ ನಂಬರ್ ಬೇಕು.
ಹದಿನೈದು ದಿನಗಳ ಒಳಗೆ ಸಂಪರ್ಕಿಸುತ್ತೇವೆಂದು ಹೋದವರು ಇಂದಿನವರೆಗೂ ಮರಳಿಲ್ಲ. ಕಾರಣ ಹೇಳಲೆ? ನನ್ನನ್ನು ಅಷ್ಟು ಸುಲಭವಾಗಿ ಆಳಕ್ಕೆ ತಳ್ಳಲಾಗುವುದಿಲ್ಲವೆಂದು ಅವರಿಗೆ ಮನವರಿಕೆಯಾಗಿಬಿಟ್ಟಿತ್ತು. ಮತ್ತೊಂದು ಸಂಗತಿಯನ್ನು ನಂಬಲು ನಿಮಗೆ ಕಷ್ಟವಾಗಬಹುದು: ಅವರಿಗೆ ಬೆಂಗಳೂರಿನಲ್ಲಿ ಒಂದಾದರೂ ಕೃತ್ಯ ಎಸಗುವಂತೆ ಮಾಡಿ, ಇಲ್ಲಿರಬಹುದಾದ sleeper cellಗಳನ್ನು ಬೇಟೆಯಾಡಬೇಕಿತ್ತು! ಎಲ್ಲ ಗೂಢಚಾರ ಸಂಸ್ಥೆಗಳು ಕಾರ್ಯನಿರ್ವಹಿಸುವ ಪರಿ ಅದು. ಜಗತ್ತಿನೆಲ್ಲೆಡೆ ಅವು ಜರುಗುತ್ತವೆ. ಅಕಸ್ಮಾತ್ ಬೆಂಗಳೂರಿನಲ್ಲಿ ಅಂತಹ ಕೃತ್ಯ ಸಂಭವಿಸಿದ್ದು, ಆ ಕೃತ್ಯದಲ್ಲಿ ಭಾಗಿಯಾಗಿರುವ ಒಬ್ಬ ವ್ಯಕ್ತಿಯ ಹತ್ತಿರ ಬಚ್ಚನ್ ನಂಬರ್ ಇದ್ದರೆ... ಆಗ ನಾವು ಖಆಗಿ ಏಜೆಂಟ್ಗಳೊಡನೆ ಸಂಪರ್ಕ ಹೊಂದಿದ್ದೇವೆಂದು ಹೇಳಿದರೆ ಯಾರು ನಂಬುತ್ತಿದ್ದರು? ನಿಮ್ಮನ್ನೂ ಸೇರಿದಂತೆ..
ನಂತರದಲ್ಲಿ ಛೋಟಾ ಶಕೀಲ್ನೊಡನೆ ಸಂಪರ್ಕ ಹೊಂದಿದ್ದ ವ್ಯಕ್ತಿ ಸಾಕಷ್ಟು ಬೆಳೆಯತೊಡಗಿದ. ಆತನೊಡನೆ ಆ ಏಜೆಂಟ್ಗಳು ಸಂಪರ್ಕ ಬೆಳೆಸಿಕೊಂಡಿದ್ದಾರೆಂದು ಊಹಿಸಲು ನಮಗೆ ಕಷ್ಟವಾಗಲಿಲ್ಲ!
ಅಂದಹಾಗೆ ಈ ಪ್ರಸಂಗ ನನ್ನ ಸೃಷ್ಟಿಯೆಂದು ನೀವು ಸಂದೇಹಿಸುವುದಾದರೆ, ನಿಮಗೆ ನಾನು ಇಷ್ಟು ಮಾತ್ರ clue ನೀಡಬಲ್ಲೆ: ಅವರನ್ನು ನನ್ನ ಹತ್ತಿರ ಕಳಿಸಿದ ಅಂದಿನ ಪತ್ರಕರ್ತ ಇಂದು ದೃಶ್ಯ ಮಾಧ್ಯಮದಲ್ಲಿ ಸಾಕಷ್ಟು ಪ್ರಖ್ಯಾತರು. ಬೇಕಿದ್ದರೆ ಅವರಿಂದ ನಾನು ಖಾತರಿಪಡಿಸಬಲ್ಲೆ. ಆದರೆ ಅವರೂ ಸಹ ಇದರ ಆಳವನ್ನು ಗ್ರಹಿಸಿರಲಾರರು.
-----
ಅಮೆರಿಕಾದ ಅವಳಿ ಕಟ್ಟಡಗಳ ಮೇಲೆ ಸೆಪ್ಟೆಂಬರ್ 2001ರಲ್ಲಿ ಭಯೋತ್ಪಾದಕ ಕೃತ್ಯ ಜರುಗಿದರೆ, ಇಂಡಿಯಾದ ಪಾರ್ಲಿಮೆಂಟ್ ಅಟ್ಯಾಕ್ ಡಿಸೆಂಬರ್ 2001ರಲ್ಲಿ ಜರುಗಿತು. ಆ ಪ್ರಮಾಣದ ಕೃತ್ಯಗಳು ಜರುಗಿದಾಗ ಯಾವುದಾದರೂ ಭಯೋತ್ಪಾದಕ ಸಂಘಟನೆ ಆ ಕೃತ್ಯದ ವಾರಸುದಾರಿಕೆ ತನ್ನದೆಂದು ಘೋಷಿಸಿಕೊಳ್ಳುತ್ತದೆ. ಆದರೆ ಯಾವ ಸಂಘಟನೆಯೂ ಅಮೆರಿಕಾದ ಕೃತ್ಯವನ್ನು claim ಮಾಡಲಿಲ್ಲ. 2004ರಲ್ಲಿ ಬಿನ್ ಲಾಡೆನ್ ಅದಕ್ಕೆ ಜವಾಬ್ದಾರನೆಂದು ಹೇಳಿಕೊಂಡ ಕ್ಯಾಸೆಟ್ ಒಂದನ್ನು ಅಮೆರಿಕಾ ಸರ್ಕಾರ ಬಿಡುಗಡೆ ಮಾಡಿತು.
ಹಾಗೆಯೆ ಈ ಕ್ಷಣದವರೆಗೂ ಇಂಡಿಯಾದ ಪಾರ್ಲಿಮೆಂಟ್ ಅಟ್ಯಾಕ್ ಅನ್ನು ಯಾರೂ claim ಮಾಡಿಲ್ಲ. ಆ ದಾಳಿಯಲ್ಲಿ ಸತ್ತವರ ವೈಯಕ್ತಿಕ ವಿವರಗಳು ಯಾರಿಗೂ ತಿಳಿದಿಲ್ಲ.
ಅಫ್ಜಲ್ಗುರು 1993ರಲ್ಲಿ ಇಖಋಗೆ ಶರಣಾಗಿದ್ದ ಒಬ್ಬ ಪ್ರತ್ಯೇಕತಾವಾದಿ. ಆ ರೀತಿ ಶರಣಾಗಿದ್ದವನಿಗೆ ಪಾರ್ಲಿಮೆಂಟ್ನ ಅಟ್ಯಾಕ್ ಕುರಿತು ಹೇಳುವಷ್ಟು ಬಾಲಿಶರಾಗಿರುತ್ತಾರೆಯೆ ಟೆರರಿಸ್ಟ್ಗಳು? ಹಲವು ಸಂಗತಿಗಳನ್ನು ಈ ಸಂದರ್ಭದಲ್ಲಿ ನಾವು ಅರ್ಥ ಮಾಡಿಕೊಳ್ಳಬೇಕಿದೆ: ಅಮೆರಿಕಾದ ಅಧ್ಯಕ್ಷ ಜಾನ್ ಎಫ್ ಕೆನಡಿಯ ಹತ್ಯೆಯಾಗುವುದು ಈಐಆಗೆ ತಿಳಿದಿತ್ತು; ಮ್ಯೂನಿಕ್ನಲ್ಲಿ ಯೆಹೂದಿ ಕ್ರೀಡಾಪಟುಗಳ ಹತ್ಯೆಯಾಗುವುದೂ ಸಹ ಈಐಆಗೆ ತಿಳಿದಿತ್ತು; ಹಾಗೆಯೆ ಅಮೆರಿಕದ ಅವಳಿ ಕಟ್ಟಡಗಳ ಮೇಲೆ ನಡೆಯುವ ಕೃತ್ಯ ಇಸ್ರೇಲಿನ ಮೊಸಾದ್ಗೆ ತಿಳಿದಿತ್ತು. ಹಾಗೆಯೆ ಇಂಡಿಯಾದ ಪಾರ್ಲಿಮೆಂಟ್ ಮೇಲಿನ ಅಟ್ಯಾಕ್ ಸಹ ಗೂಢಚಾರ ಸಂಸ್ಥೆಗಳ ಸಾಕಷ್ಟು ಮಂದಿಗೆ ತಿಳಿದಿತ್ತು. ಬಹುಶಃ ನಮ್ಮ ಟಿವಿ ಆ್ಯಂಕರ್ಗಳಷ್ಟು ಆಗಿನ ಪ್ರಧಾನಿ ವಾಜಪೇಯಿ ಅವಿವೇಕಿಯಾಗಿದ್ದರೆ, ಅಮೆರಿಕದ ಇರಾಕ್ ಯುದ್ಧಕ್ಕೆ ಮುನ್ನವೆ ಇಂಡಿಯಾ-ಪಾಕಿಸ್ತಾನ ಯುದ್ಧ ಆರಂಭವಾಗಿಬಿಡುತ್ತಿತ್ತು.
ಅಫ್ಜಲ್ ಗುರು ದೇಶದ ಗೂಢಚಾರ ಸಂಸ್ಥೆ ತನ್ನ 'ದೇಶಭಕ್ತಿ' ಚೆಸ್ನಲ್ಲಿ sacrifice ಮಾಡಿದ ಒಬ್ಬ ಕಾಲಾಳು ಅಷ್ಟೆ. ಆತ ಬದುಕಿದ್ದರೆ ಹೊರಬರಬಹುದಾಗಿದ್ದ ಅನೇಕ ಸತ್ಯಗಳು ಆತನೊಡನೆ ಹುದುಗಿ ಹೋಗಿವೆ.
-----
ಹಾಗೆಂದು ವೈಯಕ್ತಿಕವಾಗಿ ಅಫ್ಜಲ್ಗುರುವಿನ ಬಗ್ಗೆ ನನಗೆ ಅನುಕಂಪವಿದೆಯೆಂದು ನೀವು ನಿರ್ಧರಿಸಿದರೆ ಅದು ತಪ್ಪು. ಆತನಲ್ಲಿ ತೀವ್ರವಾಗಿ ಖಂಡಿಸಬೇಕಾದ ಒಂದು ಅಂಶವನ್ನು ಮಾಧ್ಯಮಗಳು ಗುರುತಿಸಿಲ್ಲ. ಅರೆಸ್ಟ್ ಆದ ಆರಂಭದಲ್ಲಿ ಆತನ ಶೇವ್ ಮಾಡಿದ ಮುಖ, ಮೀಸೆ, ತಲೆಗೂದಲು ಎಲ್ಲವೂ ಸಹಜವಾದ ಮಧ್ಯಮ ವರ್ಗದ ವಿದ್ಯಾವಂತ ಭಾರತೀಯನಂತಿದ್ದವು. ಆದರೆ ಮರಣ ದಂಡನೆ ವಿಧಿಸಿದ ಮೇಲೆ ಗಡ್ಡ ಬಿಟ್ಟು ಟೋಪಿ ಹಾಕಿದ. ಗಡ್ಡ ತೀರ ಉದ್ದವಾಗುತ್ತಾ ಹೋಯಿತು. ಟೋಪಿ ಮತ್ತು ಹೆಗಲ ಮೇಲೆ ಇರುತ್ತಿದ್ದ ಮಫ್ಲರ್ ಮೂಲಭೂತವಾದಿ ಮುಸ್ಲಿಂ ಗೆಟಪ್ಪನ್ನು ಅವನಿಗೆ ನೀಡಿದ್ದವು. ಆತ ಕೇವಲ ಪ್ರತ್ಯೇಕತಾವಾದಿಯಾಗದೆ ಮೂಲಭೂತವಾದಿಗಳ ಸಂಕೇತವಾಗಲು ಹೆಣಗತೊಡಗಿದ್ದ. ಅದು ನನ್ನಲ್ಲಿ ಆತನ ಬಗ್ಗೆ ಅಪಾರ ತಿರಸ್ಕಾರವನ್ನು ಹುಟ್ಟಿಸಿತ್ತು.
ಆರ್ಥಿಕವಾಗಿ ಕೆಳಸ್ತರದಿಂದ ಬಂದ ಆತನಲ್ಲಿ ತನ್ನ ಕುಟುಂಬಕ್ಕೆ, ತನ್ನ ಪತ್ನಿಪುತ್ರನಿಗೆ ಹೆಚ್ಚು ಆದ್ಯತೆ ನೀಡಬೇಕೆನ್ನುವ ಕನಿಷ್ಠ ತಿಳಿವಳಿಕೆಯೂ ಇರಲಿಲ್ಲ. ಕುಟುಂಬವೆನ್ನುವುದು ಅತ್ಯಂತ ಮಿನಿ ರಾಷ್ಟ್ರ ಮತ್ತು ಧರ್ಮವೆನ್ನುವುದನ್ನೂ ಕಂಡುಕೊಂಡಿರಲಿಲ್ಲ.
Let him rot in the hell.
ಹಾಗೆಯೆ, ಬೃಹತ್ ಭಾರತೀಯ ಸಾಮೂಹಿಕ ಪ್ರಜ್ಞೆಯನ್ನು ಶಾಂತಗೊಳಿಸಲು ಅಫ್ಜಲ್ಗುರುವಿಗೆ ಮರಣ ದಂಡನೆ ಶಿಕ್ಷೆ ವಿಧಿಸಲೇಬೇಕಾಗಿದೆಯೆನ್ನುವ ನ್ಯಾಯಾಲಯದ ಹೇಳಿಕೆ ನ್ಯಾಯಾಂಗದ ಘನತೆಗೆ ಕಪ್ಪು ಮಸಿ ಬಳಿದಿದೆ. ಭ್ರಷ್ಟ ಮಂತ್ರಿಗಳನ್ನೂ ಸಹ ನೇಣು ಹಾಕಿದರೆ ಜನ ಖುಷಿ ಪಡುತ್ತಾರೆ. ಅದು ನ್ಯಾಯಾಲಯಗಳಿಗೆ ತಿಳಿದಿದೆಯಲ್ಲವೆ? ಏಕೆ ಸುಮ್ಮನಿವೆ? ಜನರನ್ನು ಶಾಂತಗೊಳಿಸಲು ಆರೋಪಿಯೊಬ್ಬನನ್ನು ನೇಣಿಗೇರಿಸುವುದು ವಿಜೃಂಭಣೆಯ spectacle ಆಗುತ್ತದೆ; ನ್ಯಾಯಾಲಯದ ತೀರ್ಪಾಗುವುದಿಲ್ಲ. ಆಗಬಾರದು. ಆ ಹೇಳಿಕೆಗೆ ನನ್ನ ಧಿಕ್ಕಾರ.
- ಅಗ್ನಿ ಶ್ರೀಧರ್
ಪತ್ರಕರ್ತ