ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಚುನಾವಣಾ ಪದ್ಧತಿಯಲ್ಲಿ ಆಗಬೇಕಿರುವ ಸುಧಾರಣೆಗಳು ಏನು?

Mainashree
Updated On : 14 Feb 2013, 11:06 am

ಇನ್ನು ಮುಂದಿನ ಕೆಲವೇ ತಿಂಗಳಲ್ಲಿ ರಾಜ್ಯದ ವಿಧಾನಸಭಾ ಚುನಾವಣೆಗಳು ಜರುಗಲಿದ್ದು ಈ ಹಿನ್ನೆಲೆಯಲ್ಲಿ ಮತದಾರರ ಪಟ್ಟಿ ಸಿದ್ಧವಾಗುತ್ತಿದ್ದು ಇದರಲ್ಲಿ ಅನೇಕ ರೀತಿಯ ಪಕ್ಷಪಾತ ದುರುದ್ದೇಶ ಮತ್ತು ದೂರಾಲೋಚನೆಗಳು ತುಂಬಿದೆ ಎನ್ನುವ ವ್ಯಾಪಕವಾದ ಟೀಕೆ ಎಲ್ಲ ಕಡೆಯಲ್ಲಿಯೂ ಕೇಳಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಚುನಾವಣಾ ಆಯುಕ್ತರು ಕೆಲವೊಂದು ಕಠಿಣವಾದಂತಹ ಆಡಳಿತಾತ್ಮಕವಾದಂತಹ ನಿಲುವುಗಳನ್ನು ಕೇಂದ್ರ ಚುನಾವಣಾ ಆಯೋಗದ ಸಹಕಾರದಿಂದ ಕೈಗೊಂಡಲ್ಲಿ ಪ್ರಜಾಪ್ರಭುತ್ವದ ವ್ಯವಸ್ಥೆ ಜನರಲ್ಲಿ ನಂಬಿಕೆಯನ್ನು ಹುಟ್ಟಿಸುತ್ತದೆ.
ಮತದಾರರ ಪಟ್ಟಿಯ ತಯಾರಿಕೆ ಪರಿಷ್ಕರಣೆ ಇವುಗಳ ವಿಚಾರದಲ್ಲಿ ಪಕ್ಷಪಾತ, ಜಾತಿಧರ್ಮಗಳ ಮೇಲೆ ದ್ವೇಷ, ದುರುದ್ದೇಶ ಇವುಗಳ ಆಧಾರದ ಮೇಲೆ ಮತದಾರರ ಪಟ್ಟಿಯಲ್ಲಿ ಲೋಪಗಳು ಕಂಡು ಬಂದರೆ ಆಯಾ ರೆವಿನ್ಯೂ ಅಧಿಕಾರಿಗಳನ್ನು ಗುರಿಯನ್ನಾಗಿ ಮಾಡಿ ಅವರಿಗೆ 6 ತಿಂಗಳ ಕಾಲ ಜೈಲು ಶಿಕ್ಷೆ ನೀಡುವಂತಹ ಕಾನೂನು ರೂಪಿಸಬೇಕು. ಏಕೆಂದರೆ ಬಹಳಷ್ಟು ಅಧಿಕಾರಿಗಳು ಆಡಳಿತ ಪಕ್ಷದ ಇಲ್ಲವೇ ಸ್ಥಳೀಯ ಶಾಸಕರ ಪ್ರಭಾವಕ್ಕೆ ಒಳಗಾಗಿ ಅನಾವಶ್ಯಕವಾಗಿ ಮೋಸದಿಂದ ಹೆಸರುಗಳನ್ನು ಸೇರಿಸಿರುವುದು ಇಲ್ಲವೇ ಹೆಸರನ್ನು ತೆಗೆದುಹಾಕಿರುವ ಸಾಕಷ್ಟು ಉದಾಹರಣೆಗಳಿವೆ. ಸತ್ತವರ ಹೆಸರು, ಮನೆ ಬಿಟ್ಟವರ ಹೆಸರು, ಊರಿನಲ್ಲಿ ಇಲ್ಲದವರ ಹೆಸರು ಅನೇಕ ಕಡೆಗಳಲ್ಲಿದ್ದು ನಿಜವಾದಂತಹ ಮತದಾರರ ಹೆಸರುಗಳನ್ನು ರಾಜಕೀಯ ಕಾರಣಗಳಿಗಾಗಿ ಕೈಬಿಡಲಾಗಿದೆ.
ಮತದಾನ ಕೇಂದ್ರಗಳನ್ನು ಒಂದೇ ಕಟ್ಟಡದಲ್ಲಿ ಹಲವಾರು ಮತ ಕೇಂದ್ರಗಳನ್ನು ಸ್ಥಾಪಿಸುವುದರ ಬದಲಿಗೆ ಒಂದು ಕಟ್ಟಡದಲ್ಲಿ ಒಂದೇ ಮತಗಟ್ಟೆ ಸೀಮಿತಗೊಳಿಸಬೇಕು. ಮತದಾರರಿಗೆ ಹತ್ತಿರವಾಗುವ ಪ್ರದೇಶಗಳಲ್ಲಿ ಒಂದು ಸುವ್ಯವಸ್ಥಿತ ಕಟ್ಟಡ ಇದ್ದ ಕಡೆಯಲ್ಲಿಯೇ ಮತದಾನ ಕೇಂದ್ರಗಳನ್ನು ಮಾಡಬೇಕು. ಈಗಿರುವ ರೀತಿಯಲ್ಲಿ ಒಂದೇ ಕಟ್ಟಡದಲ್ಲಿ 3-4 ಮತಗಟ್ಟೆಗಳಿದ್ದರೆ ಒಂದು ಮತಗಟ್ಟೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನವಾಗುತ್ತದೆ. ಉಳಿದ ಮತಗಟ್ಟೆಯಲ್ಲಿ ಕಡಿಮೆ ಮತದಾನವಾಗುತ್ತದೆ. ಯಾವ ಮತಗಟ್ಟೆ ಈ ಮತಗಟ್ಟೆ ಕೇಂದ್ರದ ಸಮೀಪದಲ್ಲಿರುತ್ತದೋ ಆ ಮತಗಟ್ಟೆಯಲ್ಲಿ ಮಾತ್ರ ಹೆಚ್ಚಿನ ಮತದಾರರು ಮತದಾನದಲ್ಲಿ ಭಾಗವಹಿಸುತ್ತಾರೆ. ಆದುದರಿಂದ ಇದರ ಕಡೆ ಮೊದಲು ಗಮನವನ್ನು ಹರಿಸಬೇಕು.
ಚುನಾವಣೆಯ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಸಾರ್ವಜನಿಕ ಸಭೆಗಳಿಗಾಗಿ ಹೆಚ್ಚಿನ ಪ್ರಮಾಣದಲ್ಲಿ ಹಣವನ್ನು ಖರ್ಚು ಮಾಡುತ್ತಾರೆ. ಇದನ್ನು ತಪ್ಪಿಸುವ ಸಲುವಾಗಿ ಚುನಾವಣಾ ಆಯೋಗವೇ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲಿಯೂ ಒಂದಷ್ಟು ಸಾರ್ವಜನಿಕ ಸಭೆಗಳನ್ನು ಏರ್ಪಡಿಸಿ ಎಲ್ಲ ಪ್ರಮುಖ ಅಭ್ಯರ್ಥಿಗಳು ತಮ್ಮ ಅಭಿಪ್ರಾಯ ತಿಳಿಸುವ ವ್ಯವಸ್ಥೆ ಮಾಡಬೇಕು. ಚುನಾವಣೆಯ ಸಂದರ್ಭದಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ನಾಯಕರುಗಳು ನಡೆಸುವಂತಹ ಬಹಿರಂಗ ಸಭೆಗಳ ಖರ್ಚು ವೆಚ್ಚವನ್ನು ಅಭ್ಯರ್ಥಿಗಳ ಲೆಕ್ಕಕ್ಕೆ ಹಾಕಬೇಕು. ಈಗ ಇರುವ ಪಕ್ಷದ ಲೆಕ್ಕವನ್ನು ರದ್ದು ಮಾಡಬೇಕು.
ಚುನಾವಣೆಯಲ್ಲಿ ಹೆಂಡ ಮತ್ತು ಹಣ ಪ್ರಮುಖವಾದಂತಹ ಪಾತ್ರವನ್ನು ನಿರ್ವಹಿಸುವುದರಿಂದ ಚುನಾವಣೆ ಪ್ರಕ್ರಿಯೆಗಳು ಆರಂಭವಾದ ದಿನದಿಂದ ಮತದಾನ ಮುಗಿಯುವ ತನಕ ಆ ರಾಜ್ಯಗಳಲ್ಲಿ ಮದ್ಯದ ಉತ್ಪಾದನೆ ವಿತರಣೆ ಮತ್ತು ಅಂಗಡಿಗಳಲ್ಲಿ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಎಲ್ಲ ಡಿಸ್ಟೆಲರಿಗಳನ್ನು ಚುನಾವಣಾ ಆಯೋಗ ತನ್ನ ಸ್ವಾಧೀನಕ್ಕೆ ತೆಗೆದುಕೊಳ್ಳಬೇಕು. ಅದೇ ರೀತಿಯಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ  ಬ್ಯಾಂಕಿನ ಎಲ್ಲ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡು ಫಲಿತಾಂಶದ ನಂತರ ಬಿಡುಗಡೆ ಮಾಡಬೇಕು. ಚುನಾವಣೆಯ ಎರಡು ದಿನಕ್ಕೆ ಮುನ್ನ ಸಾರ್ವಜನಿಕ ಸಭೆಗಳು ರದ್ದಾದರೂ ಸಹ ಮನೆಯ ಪ್ರಚಾರ ಎಂಬ ಮತ್ತೊಂದು ನಾಟಕ ನಡೆಯುತ್ತದೆ. ಈ ಅವಧಿಯಲ್ಲಿ ಮತದಾರರಿಗೆ ಹಣ ಹಂಚುವುದು, ಹೆಂಡ ನೀಡುವುದು ಇತರೆ ಪದಾರ್ಥಗಳನ್ನು ಹಂಚುವುದು ಮಾಡುತ್ತಾರೆ. ಚುನಾವಣೆಯ ಮುನ್ನ 48 ಗಂಟೆಗಳ ಈ ಅವಧಿಯಲ್ಲಿ ನಿಷೇಧಾಜ್ಞೆಯನ್ನು ಜಾರಿ ಮಾಡಿ ಎಲ್ಲ ರೀತಿಯ ಪ್ರಚಾರಗಳಿಗೂ ತಡೆಯೊಡ್ಡಬೇಕು.
ಚುನಾವಣೆಯಲ್ಲಿ ಜಾತಿ, ಮತ, ಧರ್ಮ, ದೇವಾಲಯಗಳು, ಮಸೀದಿ, ಚರ್ಚು ಇವುಗಳು ಪ್ರಮುಖ ಪಾತ್ರ ವಹಿಸುತ್ತಿರುವುದರಿಂದ ಜಾತಿ ಮತ್ತು ಧರ್ಮದ ಆಧಾರದ ಮೇಲೆ ಮತ ಕೇಳುವುದಾಗಲೀ ಅಥವಾ ಯಾವುದೇ ಒಬ್ಬ ಅಭ್ಯರ್ಥಿಯನ್ನು ಇವುಗಳ ಆಧಾರದ ಮೇಲೆ ನಿಂದಿಸಿ ಕರಪತ್ರ ಪತ್ರಿಕೆಗಳಲ್ಲಿನ ಜಾಹೀರಾತು ನೀಡಿದರೆ ಅಂತಹವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಿ ಚುನಾವಣೆ ಮುಗಿಯುವ ತನಕ ಸೆರೆಮನೆಗೆ ಹಾಕಬೇಕು.
ಚುನಾವಣೆಯಲ್ಲಿ ತೋಳ್ಬಲ ಪ್ರಮುಖವಾಗಿ ಪಾತ್ರವನ್ನು ವಹಿಸುವುದರಿಂದ ಆಯಾ ಕ್ಷೇತ್ರದಲ್ಲಿರುವ ದುಷ್ಟ ಶಕ್ತಿಗಳನ್ನು ಗುರ್ತಿಸಿ ಅಥವಾ ಠಾಣೆಯಲ್ಲಿರುವ ಮಾಹಿತಿಯ ಆಧಾರದ ಮೇಲೆ ಅಂತಹ ವ್ಯಕ್ತಿಗಳು ಚುನಾವಣೆ ಮುಗಿಯುವ ತನಕ ಗೃಹಬಂಧನದಲ್ಲಿಡಬೇಕು. ಒಂದು ವೇಳೆ ಮನೆಯಿಂದ ಹೊರಬಂದು ತಮ್ಮ ಪ್ರವೃತ್ತಿಯನ್ನು ತೋರಿಸಿದರೆ ನಿರ್ದಾಕ್ಷಿಣ್ಯವಾಗಿ ಚುನಾವಣೆ ಮುಗಿಯುವ ತನಕ ಇವರನ್ನು ಬೇರೆ ಊರಿಗೆ ಗಡಿಪಾರು ಮಾಡಬೇಕು. ಮಿತಿ ಮೀರಿದರೆ ಬಂಧನವನ್ನು ಮಾಡಬೇಕು. ಚುನಾವಣೆ ಘೋಷಣೆ ಆದ ನಂತರ ತಿಥಿ, ನಾಮಕರಣ, ವೈಕುಂಠ ಸಮಾರಾಧನೆ, ಹುಟ್ಟಿದ ಹಬ್ಬ ಮತ್ತು ಊರಹಬ್ಬ ಎಂಬ ನೆಪಗಳನ್ನು ಹೇಳಿಕೊಂಡು ಸಹಸ್ರಾರು ಜನರಿಗೆ ಮಾಂಸದ ಊಟ ಇಲ್ಲವೇ ಇತರೆ ಊಟದ ವ್ಯವಸ್ಥೆಗಳನ್ನು ಮಾಡುವುದು, ಆಹಾರ ಪದಾರ್ಥಗಳನ್ನು, ದಿನಬಳಕೆ ವಸ್ತುಗಳನ್ನು ದಾನ ಮಾಡುವುದು ಸಾಮಾನ್ಯವಾಗಿರುತ್ತದೆ. ಆದುದರಿಂದ ಈ ಸಮಯದಲ್ಲಿ ನಡೆಯುವಂತಹ ಇಂತಹ ಎಲ್ಲ ಕಾರ್ಯಗಳ ಬಗ್ಗೆ ವಿಶೇಷ ಗಮನವನ್ನು ನೀಡಬೇಕು. ಇಲ್ಲಿ ರಾಜಕೀಯದ ಸುಳಿವು ಕಂಡರೆ ಅದರ ಸಂಪೂರ್ಣವಾದ ವೆಚ್ಚವನ್ನು ಅಭ್ಯರ್ಥಿಯ ಚುನಾವಣಾ ವೆಚ್ಚಕ್ಕೆ ಸೇರಿಸಬೇಕು.
ಚುನಾವಣೆಗಳು ನಡೆಯುವ ಸಂದರ್ಭದಲ್ಲಿ ಅಕ್ರಮ ಮತದಾನ, ನಕಲಿ ಮತದಾನ ಮತ್ತು ಇತರೆ ಅಧಿಕಾರ ದುರುಪಯೋಗದ ಮೊಕದ್ದಮೆಗಳು ಯಾವ ಅಭ್ಯರ್ಥಿಗಳ ಮೇಲೆ ದಾಖಲಾಗುತ್ತದೆಯೋ ಅಂತಹ ಅಭ್ಯರ್ಥಿಗಳು ಒಮ್ಮೆ ಚುನಾವಣೆಯಲ್ಲಿ ಜಯಶೀಲರಾದರೂ ಸಹ ಮೊಕದ್ದಮೆಗಳು ಇತ್ಯರ್ಥವಾಗುವ ತನಕ ಫಲಿತಾಂಶವನ್ನು ತಡೆಹಿಡಿಯಬೇಕು. ಚುನಾವಣಾ ಆಯೋಗಗಳು ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸದಿದ್ದರೆ ಚುನಾವಣೆಯ ಫಲಿತಾಂಶ ಹಣ, ಹೆಂಡ, ತೋಳ್ಬಲ ಮತ್ತು ಜಾತೀಯ ಬಲದ ಮೇಲೆ ನಿರ್ಧಾರವಾಗುತ್ತದೆ. ಅಕ್ರಮ ಸಂಪತ್ತು ಹೊಂದಿಲ್ಲದವರು, ಪ್ರಬಲ ಜಾತಿಯಲ್ಲದವರು ಚುನಾವಣೆಯಲ್ಲಿ ಗೆಲ್ಲುವುದು ಕನಸುಗಳಾಗುತ್ತದೆ.

- ಕೆ.ಎಸ್.ನಾಗರಾಜ್, ಬೆಂಗಳೂರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement