ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಹಿಂದುಳಿದವರ ಉದ್ಧಾರದ ಬೊಬ್ಬೆಯನ್ನು ಅಣಕಿಸುವಂತಿರುವ ಹಾಸ್ಟೆಲ್‌ಗಳು

Mainashree
Updated On : 15 Feb 2013, 11:51 am

ಚಿತ್ರಣ: 1
ಕಾರವಾರದ ಹೊರವಲಯದ ಎಸ್ಸಿ-ಎಸ್ಟಿ  ಹಾಸ್ಟೆಲ್. 200ಕ್ಕೂ ಅಧಿಕ ವಿದ್ಯಾರ್ಥಿಗಳು ಇಲ್ಲಿದ್ದಾರೆ. ನಾಲ್ಕೈದು ವಿದ್ಯಾರ್ಥಿಗಳಿರಬಹುದಾಗಿದ್ದ ಕೊಠಡಿಯಲ್ಲಿ 15 ವಿದ್ಯಾರ್ಥಿಗಳು. 200 ಜನ ವಿದ್ಯಾರ್ಥಿಗಳಿಗೆ ಒಂದೇ ಶೌಚಾಲಯ! ಒಂದೇ ಬಚ್ಚಲು ಮನೆ!  ಇಲ್ಲಿಯ ಬಿ.ಸಿ.ಎಂ ಹಾಸ್ಟೆಲ್‌ನ ಮೇಲ್ಭಾಗದಲ್ಲೇ ಲಾಡ್ಜ್ ಇದೆ. ಪರಿಸ್ಥಿತಿ ಹೇಗಿರಬಹುದು?

ಚಿತ್ರಣ: 2
ಹುಬ್ಬಳ್ಳಿ ಮಹಾನಗರದ ಕಮರ್ಷಿಯಲ್ ಕಾಂಪ್ಲೆಕ್ಸ್‌ನ ಮೇಲೊಂದು ವಿದ್ಯಾರ್ಥಿನಿಯರ ಬಿ.ಸಿ.ಎಂ. ಹಾಸ್ಟೆಲ್. ಕಾವಲುಗಾರರ್ಯಾರೂ ಇಲಿಲ್ಲ. ಹಾದಿಬದಿಯ ಪುಂಡಪೋಕರಿಗಳು ವಿದ್ಯಾರ್ಥಿನಿಯರನ್ನು ಚುಡಾಯಿಸುವುದು ನಿತ್ಯದ ಸಂಗತಿ. ಮೇಲಾಧಿಕಾರಿಗಳ ಗಮನಕ್ಕೆ  ತಂದಾಗ ಸಿಕ್ಕಿದ ಅಮೂಲ್ಯ ಸಲಹೆ- ಸ್ವಲ್ಪ ಅಡ್ಜೆಸ್ಟ್ ಮಾಡ್ಕೋಳಿ.

ಚಿತ್ರಣ: 3
ಕೊಪ್ಪಳದ ಹಾಸ್ಟೆಲ್ ಗೋಡೆಯ ಮೇಲೆ ಪಲಾವ್, ಅವಲಕ್ಕಿ, ಚಿತ್ರಾನ್ನ, ಇಡ್ಲಿ-ಸಾಂಬಾರ್ ಎಂದು ಬಾಯಲ್ಲಿ ನಿರೂರಿಸುವ ಮೆನು ಚಾರ್ಟ್ ಇದೆ. ಅದರೆ ಅಲ್ಲಿನ ವಿದ್ಯಾರ್ಥಿಗಳನ್ನು ಕೇಳಿದರೆ ಕಳೆದ ಎರಡು ವರ್ಷಗಳಿಂದ ಬೆಳಿಗ್ಗೆ ತಿಂಡಿಗೆ ಉಪ್ಪಿಟ್ಟು ಬಿಟ್ಟರೆ ಬೇರೆ ಯಾವ ತಿಂಡಿಯನ್ನೂ ಮಾಡಿಲ್ಲ ಅಂತಾರೆ.

ಚಿತ್ರಣ: 4
ಪ್ರಜ್ಞಾವಂತರ ನಾಡೆಂದು ಪ್ರಸಿದ್ಧವಾದ ಮಲೆನಾಡಿನ ಶಿವಮೊಗ್ಗದ ಹಳೇ ಬಸ್ ಸ್ಟ್ಯಾಂಡಿನಲ್ಲಿರುವ ವಿದ್ಯಾರ್ಥಿನಿಯರ- ಬಿ.ಸಿ.ಎಂ.ಹಾಸ್ಟೆಲ್‌ನಲ್ಲಿರುವ ವಿದ್ಯಾರ್ಥಿನಿಯರ ಸಂಖ್ಯೆ 300. ಅಲ್ಲಿರುವ ಶೌಚಾಲಯಗಳ ಸಂಖ್ಯೆ -6, ಆ 6ರಲ್ಲಿ ಬಳಸಲು ಯೋಗ್ಯವಾದುದು 2 ಮಾತ್ರ. ಅಂದರೆ, 150 ವಿದ್ಯಾರ್ಥಿನಿಯರಿಗೆ 1 ಶೌಚಾಲಯ. ಪೇಟೆಯ ನಡುವಿರುವ ಹಾಸ್ಟೇಲ್ ಪಕ್ಕ ಶೌಚಕ್ಕೆ ಬಯಲೂ ಇಲ್ಲ. ಹೀಗಾಗಿ ಮಧ್ಯರಾತ್ರಿ 3.00 ಗಂಟೆಯಿಂದಲೇ ಶೌಚಾಲಯ ಬಳಸುವುದಕ್ಕಾಗಿ ಏಳಬೇಕಾದ ಪರಿಸ್ಥಿತಿಯಲ್ಲಿ ಇಲ್ಲಿನ ವಿದ್ಯಾರ್ಥಿನಿಯರಿದ್ದಾರೆ.
ಈ ಮೇಲಿನ ಚಿತ್ರಣಗಳು ಉತ್ಪ್ರೇಕ್ಷಿತ ಸಂಗತಿಗಳೇನೂ ಅಲ್ಲ. ಓದಿದ ಯಾರಿಗಾದರೂ ಅಚ್ಚರಿಯಾಗಬಹುದು. ದೇಶದಲ್ಲಿ ವೈಚಾರಿಕ ವಿದ್ಯಾರ್ಥಿ ಅಂದೋಲನವನ್ನು ಕಟ್ಟಿದ  'ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌' (ಎಬಿವಿಪಿ) ಕರ್ನಾಟಕ ರಾಜ್ಯದಲ್ಲಿರುವ ಎಸ್.ಸಿ, ಎಸ್.ಟಿ, ಓ.ಬಿ.ಸಿ. ಹಾಸ್ಟೆಲ್‌ಗಳ ಸಮೀಕ್ಷೆಯನ್ನು ನಡೆಸಿದಾಗ ಕಣ್ಮುಂದೆ ರಾಚಿದ ಸತ್ಯ ಇದು.

ಕರ್ನಾಟಕದ ಒಟ್ಟು 260 ಹಾಸ್ಟೆಲ್‌ಗಳನ್ನೂ, 1452 ಹಾಸ್ಟೆಲ್ ವಿದ್ಯಾರ್ಥಿ ವಿದ್ಯಾರ್ಥಿನಿಯರನ್ನೂ ಸಂದರ್ಶಿಸಿ ನಡೆಸಿದ ಸಮೀಕ್ಷೆಯು ಕರ್ನಾಟಕದ ಹಿಂದುಳಿದ ವರ್ಗಗಳ ಹಾಸ್ಟೆಲ್‌ಗಳ ಭಯಾನಕ ಪರಿಸ್ಥಿಯನ್ನು ಕಂಡು ಕೊಂಡಿತು. ಬಡಗುಡಿಸಲುಗಳ ಒಳಗೆ ಕಮರಿ ಹೋಗಬಹುದಾಗಿದ್ದ ಪ್ರತಿಭಾವಂತರ ಕನಸುಗಳನ್ನು ನನಸು ಮಾಡುವ ಹಿನ್ನೆಲೆಯಿಂದ ಆರಂಭವಾದ ಈ ಅರಿವಿನ ಮನೆಗಳು ಇಂದು ಅತ್ಯಂತ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಸಮಾಜದಲ್ಲಿ ಅತ್ಯಂತ ಹಿಂದುಳಿದ ಸಮುದಾಯಗಳ ಜನರೂ ಕೂಡ ತಮ್ಮ ಶಿಕ್ಷಣದ ಕನಸನ್ನು ನನಸಾಗಿಸಲು ಕಾರಣವಾದದ್ದು ಸರ್ಕಾರ ಸ್ಥಾಪಿಸಿದ ಇಂತಹ ಹಾಸ್ಟೆಲ್‌ಗಳು. ಇಂದಿನ ಅದೆಷ್ಟೋ ಜನ ಉನ್ನತ ಶ್ರೇಣಿಯ ಐ.ಎ.ಎಸ್-ಕೆ.ಎ.ಎಸ್ ಅಧಿಕಾರಿಗಳು, ಪ್ರಾಧ್ಯಾಪಕರು, ವೈದ್ಯರು, ಇಂಜಿನಿಯರುಗಳು, ರಾಜಕಾರಣಿಗಳು ಮೇಲೆ ಬಂದದ್ದು ಇಂತಹ ಹಾಸ್ಟೆಲ್‌ಗಳ ಆಧಾರದಿಂದ. ಮನೆಯಿಂದ ಬಹುದೂರದ ಊರಿಗೆ ಬಂದು ತಮ್ಮ ಶಿಕ್ಷಣದ ಹಲವು ವರ್ಷಗಳ ಕಾಲ ಹಾಸ್ಟೆಲ್‌ನಲ್ಲೇ ನೆಲೆಸಿ ಶಿಕ್ಷಣ ಪೂರೈಸಬೇಕಾದ ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಸ್ಟೆಲ್‌ಗಳು ವರ್ತಮಾನದಲ್ಲಿ ಹೇಗಿದೆ ಸ್ವಂತ ಕಟ್ಟಡಗಳಿಲ್ಲದ, ಶೌಚಾಲಯಗಳಿಲ್ಲದ, ಮುರಿದ ಬಾಗಿಲುಗಳ, ಕೆಟ್ಟ ಆಹಾರದ, ಭದ್ರತೆಗಳಿಲ್ಲದ ಈ ಹಾಸ್ಟೆಲ್‌ಗಳು ಕರ್ನಾಟಕದ ಜನರ ಹೆಮ್ಮೆ ಪಡುವ ಬದುಕಿನ ಕಿರೀಟಕ್ಕೆ ಇದೊಂದು ಕಪ್ಪು ಚುಕ್ಕೆಯಾಗಿ ಪರಿಣಮಿಸಿದೆ.

ಅದೆಷ್ಟೋ ಜನರ ಬಡ ಪ್ರತಿಭಾವಂತರ ಬಾಳನ್ನು ಬೆಳಗಿಸಿದ ಈ ಹಾಸ್ಟೆಲ್‌ಗಳು ಇಂದು, ಶಿಕ್ಷಣದ ಮೂಲಕ ಸ್ವಾಭಿಮಾನಿ ಬದುಕಿನ ಕನಸು ಕಟ್ಟಿಕೊಂಡು ಬಂದ ವಿದ್ಯಾರ್ಥಿಗಳ ಪಾಲಿಗೆ ನರಕವಾಗಿ ಪರಿಣಮಿಸಿದೆ. ಪರಿಣಾಮವಾಗಿ ಅದೆಷ್ಟೇ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿ ಊರಿಗೆ ಮರಳುತ್ತಿದ್ದಾರೆ. ಯಾರೋ ಮಾಲಿಕರ ಕೈ ಕೆಳಗೆ ಕೂಲಿಗಳಾಗುತ್ತಿದ್ದಾರೆ.

ಈ ಹಾಸ್ಟೆಲ್ ಸಮೀಕ್ಷೆ ಬಯಲುಗೊಳಿಸಿದ ಕೆಲವು ಭಯಾನಕ ಅಂಕಿ ಅಂಶಗಳು ಹೀಗಿದೆ. ನೋಡಿ.

- ನಮ್ಮ ರಾಜ್ಯದ ಹಾಸ್ಟೆಲ್‌ಗಳ ಸಂಖ್ಯೆ ತೀರಾ ಕಡಿಮೆ ಇದೆ. ಒಂದು ಅಂದಾಜಿನ ಪ್ರಕಾರ ಪ್ರತಿ ವರ್ಷ 1,30,000 ವಿದ್ಯಾರ್ಥಿಗಳು ಹಾಸ್ಟೆಲ್ ಬಯಸಿ ಅರ್ಜಿ ಸಲ್ಲಿಸುತ್ತಾರೆ. ಅದರೆ ಲಭ್ಯವಿರುವ ಹಾಸ್ಟೆಲ್‌ಗಳಲ್ಲಿ ಪ್ರವೇಶ ಪಡೆದವರು 32,916. ಅಂದರೆ ಶೇಕಡಾ 74ರಷ್ಟು ವಿದ್ಯಾರ್ಥಿಗಳಿಗೆ ಹಾಸ್ಟಲ್‌ಗೆ ಪ್ರವೇಶವನ್ನು ನಿರಾಕರಿಸಲಾಗಿದೆ. ಅಂದರೆ ಇಷ್ಟು ಜನ ವಿದ್ಯಾರ್ಥಿಗಳ ಶಿಕ್ಷಣದ ಕನಸನ್ನೂ ಸರ್ಕಾರವೇ ಚಿವುಟಿ ಹಾಕುತ್ತಿದೆಯೆ?

- ಸಮೀಕ್ಷೆ ನಡೆಸಿದ 260 ಹಾಸ್ಟೆಲ್‌ಗಳಲ್ಲಿ 140 ಹಾಸ್ಟೆಲ್‌ಗಳಷ್ಟೇ ಸ್ವಂತ ಕಟ್ಟಡ ಹೊಂದಿದ್ದು, ಉಳಿದ 120 ಹಾಸ್ಟೆಲ್‌ಗಳು ಬಾಡಿಗೆ ಕಟ್ಟಡಗಳಲ್ಲಿದೆ. ಇದರಿಂದಾಗಿ ಪ್ರತಿವರ್ಷ ಸರ್ಕಾರ ಬಾಡಿಗೆ ರೂಪದಲ್ಲಿ ಹಲವಾರು ಕೋಟಿ ರೂಪಾಯಿಯನ್ನೂ ವ್ಯಯಿಸಬೇಕಾಗಿದೆ.

- ನಾಲ್ಕು ವಿದ್ಯಾರ್ಥಿಗಳು ವಾಸ ಮಾಡಬಹುದಾದ ಒಂದೊಂದು ಕೊಠಡಿಗಳಲ್ಲಿ 10-15 ವಿದ್ಯಾರ್ಥಿಗಳನ್ನು ತುಂಬಿಸಲಾಗುತ್ತಿದೆ. ಕೆಲವು ಹಾಸ್ಟೆಲ್‌ಗಳಲ್ಲಿ ಉದ್ದಕ್ಕೆ ಒಂದೇ ಹಾಲ್‌ನಲ್ಲಿ ಬೇರೆ ಬೇರೆ ತರಗತಿಗಳಲ್ಲಿ ಓದುತ್ತಿರುವ 50-60 ವಿದ್ಯಾರ್ಥಿಗಳನ್ನೂ ತುಂಬಿಸಲಾಗಿದೆ. ಇಂತಹ ವಾತಾವರಣದಲ್ಲಿ ವಿದ್ಯಾರ್ಥಿಗಳು ಎಷ್ಟು ಏಕಾಗ್ರತೆಯಲ್ಲಿ ತನ್ನ ಓದನ್ನೂ ನಡೆಸಬಹುದಾಗಿದೆ?

- ಸಾಮಾನ್ಯವಾಗಿ ಹತ್ತು ವಿದ್ಯಾರ್ಥಿಗಳಿಗೆ ಒಂದು ಶೌಚಾಲಯ, ಸ್ನಾನಗೃಹದ ಅಗತ್ಯವಿದೆ. ಅದರೆ ಕೆಲವು ಕಡೆ ಸುಮಾರು 100 ಜನಕ್ಕೆ ಒಂದು ಶೌಚಾಲಯ, ಸ್ನಾನ ಗೃಹವೂ ಲಭ್ಯವಿಲ್ಲ. ಪ್ರಸ್ತುತ 32,916 ವಿದ್ಯಾರ್ಥಿಗಳಿಗೆ 1502 ಶೌಚಾಲಯಗಳೂ, 1639 ಸ್ನಾನಗೃಹಗಳೂ ಲಭ್ಯವಿದೆ. 10:1 ಅನುಪಾತದಂತೆ ಒದಗಿಸಿ ಕೊಡುವುದಾದರೆ ಇನ್ನೂ 3291 ಶೌಚಾಲಯಗಳೂ, 1639 ಸ್ನಾನಗೃಹಗಳು ಅಗತ್ಯವಿದೆ. ನಮ್ಮ ಶಾಸಕರು, ಸಂಸದರು, ಮಂತ್ರಿಗಳು ತಮಗೆ ಒದಗಿಸಿದ ಸರ್ಕಾರಿ ಬಂಗ್ಲೆ, ಕಚೇರಿಗಳ ರಿಪೇರಿ, ಸ್ನಾನ ಗೃಹದ ನಿರ್ಮಾಣಕ್ಕೆ ಪ್ರತಿವರ್ಷ ಹಲವಾರು ಕೋಟಿ ರೂಪಾಯಿಗಳಷ್ಟು ಜನತೆಯ ತೆರಿಗೆಯ ಹಣವನ್ನು ಬಳಸಿದರೂ, ವಿದ್ಯೆಯ ಆಸೆ ಹೊತ್ತು ಬರುವ ಈ ವಿದ್ಯಾರ್ಥಿಗಳ ಅವಶ್ಯಕತೆಯನ್ನು ಪೂರೈಸಲು ನಮ್ಮ ಸರಕಾರದಲ್ಲಿ ಹಣ ಇಲ್ಲ !

- ಹಾಸ್ಟೆಲ್‌ಗಳು ವ್ಯವಸ್ಥಿತವಾಗಿರಬೇಕಾದರೆ ಅದನ್ನು ಮುನ್ನಡೆಸುವ ಅಧಿಕಾರಿ ವರ್ಗ ಸರಿಯಾಗಿರಬೇಕು. ಈ ಸಮೀಕ್ಷೆಯು ಕಂಡು ಕೊಂಡ ಸಂಗತಿ ಎಂದರೆ, 260 ಹಾಸ್ಟೆಲ್‌ಗಳಿಗೆ 202 ನಿಲಯ ಪಾಲಕರಿದ್ದಾರೆ. ಅದೂ ಸರಾಸರಿ ಒಬ್ಬ ನಿಲಯ ಪಾಲಕನಿಗೆ 162 ವಿದ್ಯಾರ್ಥಿಗಳು ಶೇ.50 ಅಡುಗೆಯವರಷ್ಟೇ ಖಾಯಂ ಸಿಬ್ಬಂದಿಗಳು. 260 ಹಾಸ್ಟೆಲ್‌ಗಳಿಗೆ 157 ಕ್ಲೀನರ್‌ಗಳಿದ್ದಾರೆ. ಅಂದರೆ ಸುಮಾರು 103 ಹಾಸ್ಟೆಲ್‌ಗಳಿಗೆ ಕ್ಲೀನರ್‌ಗಳಿಲ್ಲ. ಹೀಗಿದ್ದಾಗ ಅಲ್ಲಿನ ಅಡುಗೆಮನೆ, ಸ್ನಾನಗೃಹ, ಶೌಚಾಲಯ ಯಾವ ಸ್ಥಿತಿಯಲ್ಲಿರಬಹುದು ಊಹಿಸಿ?
-ಆರೋಗ್ಯವಂತ ದೇಹ- ಅರೋಗ್ಯವಂತ ಮನಸ್ಸು ಎಂಬ ಮಾತಿದೆ. ಶಾಲೆ-ಕಾಲೇಜುಗಳಿಗೆ ಹೋಗುತ್ತಿರುವ ಭಾರತದ ಭವಿಷ್ಯವನ್ನು ಕಟ್ಟುವ ತಾರುಣ್ಯದ ಹೊಟ್ಟೆಗಳಿಗೆ ನಮ್ಮ ಸರಕಾರ ಖರ್ಚು ಮಾಡುತ್ತಿರುವ ಹಣವೆಷ್ಟು? ಅನ್ನ ಅರಿವಿಗೆ ಮೂಲ. ಹೀಗಿದ್ದೂ ವಿದ್ಯಾರ್ಥಿಯೊಬ್ಬನ ದಿನವೊಂದರ ಊಟ- ಉಪಹಾರಕ್ಕೆ ಸರ್ಕಾರ ಖರ್ಚು ಮಾಡುತ್ತಿರುವುದು 28 ರೂಪಾಯಿಗಳನ್ನು. ಕಬ್ಬಿಣದ ಮಾಂಸಖಂಡ, ಉಕ್ಕಿನ ನರಮಂಡಲ ಈ 28 ರೂಪಾಯಿಗಳಿಂದ ರೂಪುಗೊಂಡಿತೆ? ಅದೇ ಸರ್ಕಾರ ನಮ್ಮ ಜೈಲುಗಳಲ್ಲಿರುವ ಖೈದಿಗಳಿಗೆ ದಿನವೊಂದಕ್ಕೆ ಊಟಕ್ಕಾಗಿ ಮಾಡುವ ವೆಚ್ಚ 78 ರೂಪಾಯಿಗಳು. ಅಂದರೆ ಹಾಸ್ಟೆಲ್ ವಿದ್ಯಾರ್ಥಿಗಳೆಂದರೆ ನಮ್ಮ ಸರ್ಕಾರಕ್ಕೆ ಕಳ್ಳಕಾರರು-ದರೋಡೆಕೋರರು, ಕೊಲೆಗಾರರಾಗಿ ಜೈಲು ಸೇರಿದ ಖೈದಿಗಳಿಗಿಂತಲೂ ಕೀಳು. ನಮ್ಮ ಪಕ್ಕದ ರಾಜ್ಯಗಳು ಹಾಸ್ಟೆಲ್ ವಿದ್ಯಾಥರ್‌ರ್ಥಿಗಳಿಗೆ ದಿನವೊಂದಕ್ಕೆ 85 ರುಪಾಯಿಗಳಷ್ಟು ವೆಚ್ಚ ಮಾಡುತ್ತಿದೆ.

- ವಿದ್ಯಾರ್ಥಿಗಳಿಗೆ ಓದಲು ಮೇಜು- ಕುರ್ಚಿಗಳಿಲ್ಲ. ಪುಸ್ತಕ ಇಡಲು ಕಪಾಟುಗಳಿಲ್ಲ. ಸ್ನಾನಕ್ಕೆ ಬಿಸಿ ನೀರು ಪೂರೈಸುವ ಸೋಲಾರ್‌ಗಳಿಲ್ಲ. ಬಿಸಿಲ ಧಗೆಯ ನಾಡಿನ ಹಾಸ್ಟೆಲ್‌ಗಳಲ್ಲೂ ಫ್ಯಾನ್‌ಗಳಿಲ್ಲ. ಮಲಗಲು ಮಂಚ ಇಲ್ಲ. ವಿದ್ಯಾರ್ಥಿಗಳ ಟ್ರಂಕ್‌ಗಳೇ ಮೇಜುಗಳಾಗಿ, ಕಪಾಟುಗಳಾಗಿ, ಮಂಚಗಳಾಗಿ, ಕುರ್ಚಿಗಳಾಗಿ ಬಳಕೆಯಾದರೆ, ಒಂದು ಕೈಯಲ್ಲಿನ ಪುಸ್ತಕವೇ ಫ್ಯಾನ್ ಆಗಿ ಗಾಳಿ ಬೀಸಬೇಕಾಗಿದೆ.

- ಹಾಸ್ಟೆಲ್‌ಗಳು ಅನಾಥರ ತಂಗುದಾಣಗಳಲ್ಲ. ತಮ್ಮ ನಾಳೆಯ ಬದುಕಿನ ಕನಸುಗಳನ್ನು ನನಸಾಗಿಸಲು, ಅಕ್ಷರದ ಮೂಲಕ ಸ್ವಾಭಿಮಾನದ ಬದುಕನ್ನು ರೂಪಿಸಲು ಸಹಾಯಕವಾಗಬೇಕಾದ ಹಾಸ್ಟೆಲ್‌ಗಳು ಕೊರತೆಗಳಿಂದ ಜೀವಂತಿಕೆಯನ್ನು ಕಳೆದುಕೊಂಡಿದೆ. ಅರಿವಿನ ಹಸಿವನ್ನು ನೀಗಿಸಬೇಕಾದ ಗ್ರಂಥಾಲಯಗಳು ಹಾಸ್ಟೆಲ್‌ಗಳಲ್ಲಿ ಇರಬೇಕಾಗಿತ್ತು. ಅದರೆ 260 ಹಾಸ್ಟೆಲ್‌ಗಳಲ್ಲಿ 57 ಹಾಸ್ಟೆಲ್‌ಗಳಲ್ಲಿ ಮಾತ್ರ ಗ್ರಂಥಾಲಯಗಳಿವೆ. ಜ್ಞಾನಯುಗದಲ್ಲಿ ಬದುಕುತ್ತಿರುವ ನಮಗೆ ಕಂಪ್ಯೂಟರಿನ ಮಹತ್ವ ಎಂತಹದು ಎಂದು ಗೊತ್ತಿದೆ. ಅದರೆ 260 ಹಾಸ್ಟೆಲ್‌ಗಳಲ್ಲಿ ಇರುವ ಒಟ್ಟು ಕಂಪ್ಯೂಟರ್‌ಗಳು 73 ಮಾತ್ರ. ಅದೂ ಇಂಟರ್ನೆಟ್ ಇಲ್ಲ. ಕರೆಂಟ್ ಕೈಕೊಟ್ಟಾಗ ಓದಲು ಬೇಕಾದ ಬೆಳಕನ್ನೂ ಪೂರೈಸಲು ಯುಪಿಎಸ್ ಇರಲೇಬೇಕಾಗಿತ್ತು. ಆದರೆ ಇರುವುದು ಕೇವಲ 95 ಹಾಸ್ಟೆಲ್‌ಗಳಲ್ಲಿ ಮಾತ್ರ.

ಈ ಸಮೀಕ್ಷೆ ಸರಕಾರಕ್ಕೆ ಹಲವಾರು ಶಿಫಾರಸ್ಸುಗಳನ್ನು ಮಾಡಿದೆ.

- ಪ್ರವೇಶ ಬಯಸಿ ಬರುವ ವಿದ್ಯಾರ್ಥಿಗಳಿಗೆ ಇನ್ನಷ್ಟು ಹಾಸ್ಟೆಲ್‌ಗಳು ಲಭ್ಯವಾಗುವಂತೆ ತುರ್ತಾಗಿ ಹೊಸ ಹಾಸ್ಟೆಲ್‌ಗಳು ಲಭ್ಯವಾಗುವಂತೆ ಮಂಜೂರು ಮಾಡಬೇಕು.
- ಕೊರತೆ ಇರುವ ಕೊಠಡಿ, ಶೌಚಾಲಯ, ಸ್ನಾನಗೃಹಗಳನ್ನು ತುರ್ತಾಗಿ ನಿರ್ಮಿಸಲು ಕ್ರಮ ತೆಗೆದು ಕೊಳ್ಳಬೇಕು.
- ಪ್ರತಿ ವಿದ್ಯಾರ್ಥಿಗೆ ಈಗ ನೀಡುತ್ತಿರುವ 850ರೂಪಾಯಿ ಮಾಸಿಕ ಆಹಾರ ಭತ್ಯೆಯನ್ನು 2500ಕ್ಕೆ ಏರಿಸಬೇಕು.
- ಬಯೋ ಮೆಟ್ರಿಕ್ ವ್ಯವಸ್ಥೆಯನ್ನು ಪ್ರತಿ ಹಾಸ್ಟೆಲ್‌ನಲ್ಲಿಯೂ ಜಾರಿಗೆ ತರಬೇಕು.
- ಉತ್ತಮ ಊಟ-ತಿಂಡಿ, ಗ್ರಂಥಾಲಯ ಸೋಲಾರ್, ಯು.ಪಿ.ಎಸ್, ಪೂರ್ಣಾವಧಿ ನಿಲಯ ಪಾಲಕರನ್ನೂ ಪ್ರತಿ ಹಾಸ್ಟೆಲ್‌ಗಳಿಗೂ ಸಿಗುವಂತೆ ವ್ಯವಸ್ಥೆ ಮಾಡುವುದು.
- ಪೋಷಕರ ಸಭೆ ನಡೆಸಬೇಕು. ಜನ ಪ್ರತಿನಿಧಿ, ಅಧಿಕಾರಿಗಳ ಹಾಸ್ಟೆಲ್ ಭೇಟಿ ಕಡ್ಡಾಯಗೊಳಿಸಬೇಕು.
- ಹಾಸ್ಟೆಲ್‌ಗಳ ಸಮರ್ಥ ನಿರ್ವಹಣೆಗಾಗಿ ಒಂದು ಸ್ವಾಯತ್ತ ಪ್ರಾಧಿಕಾರವನ್ನೂ ಸರ್ಕಾರ ಈ ಕೂಡಲೇ ರಚಿಸುವುದು.

ಈಗಾಗಲೇ ರಾಜ್ಯದೆಲ್ಲೆಡೆ  ಹಾಸ್ಟೆಲ್ ಅವ್ಯವಸ್ಥೆ ವಿರುದ್ಧ ಹಲವು ಪ್ರತಿಭಟನೆಗಳಾಗಿವೆ. ಜಿಲ್ಲಾಧಿಕಾರಿ ಕಚೇರಿ ಎದುರು ಸಾಮೂಹಿಕ ಸ್ನಾನ ಮಾಡಿ, ರಾತ್ರಿ ರಸ್ತೆಯ ಮೇಲೆ ಮೇಣದ ಬತ್ತಿ ಹಚ್ಚಿ ಅದರ ಬೆಳಕಿನಲ್ಲಿ ಓದಿ ಪ್ರತಿಭಟಿಸಲಾಗಿದೆ. ಕಳಪೆ ಆಹಾರ, ನೀರಿನ ಕೊರತೆ ಅವ್ಯವಸ್ಥೆಯ ವಿರುದ್ಧ ದ್ವನಿ ಎತ್ತಲಾರಂಭಿಸಿದ್ದಾರೆ. ಒಡಲ ಬೆಂಕಿ ಸುಡುವ ಬೆಂಕಿಯಾಗಿ ಸ್ಪೋಟಗೊಳ್ಳುವ ಮೊದಲೇ ಸರ್ಕಾರ ಎಚ್ಚೆತ್ತು ಕೊಳ್ಳಬೇಕಾಗಿದೆ.

ತಾವು ಮಾತ್ರ ಹಿಂದುಳಿದ ವರ್ಗಗಳ ಉದ್ದಾರಕರು ಎಂಬಂತೆ ಭಾಷಣ ಮಾಡುವ ಡಾ. ಸಿ.ಎಸ್.ದ್ವಾರಕನಾಥ್, ಅಹಿಂದ ಮತಗಳ ಮೇಲೆ ಕಣ್ಣಿಟ್ಟು ಓಟ್ ಬ್ಯಾಂಕ್ ಸೃಷ್ಟಿಸುತ್ತಿರುವ ಸಿದ್ದರಾಮಯ್ಯ, ಮಠಗಳಿಗೆ ಕೋಟ್ಯಂತರ ಅನುದಾನ ನೀಡುವ ಪ್ರಸ್ತುತ ಸರ್ಕಾರ ತಮಗೆ  ನಿಜವಾಗಿಯೂ ಹಿಂದುಳಿದ ಜನರ ಬಗ್ಗೆ ಕಾಳಜಿ ಇರುವುದೇ ಹೌದಾದರೆ, ಎಸ್.ಸಿ- ಎಸ್.ಟಿ, ಬಿ.ಸಿ.ಎಂ ಹಾಸ್ಟೆಲ್‌ಗಳ ಸುಧಾರಣೆಗೆ ಕಿಂಚಿತ್ತಾದರೂ ದೃಷ್ಟಿ ಹರಿಸುವುದು ಉತ್ತಮ.
ರೋಗಗ್ರಸ್ಥವಾಗಿರುವ ಹಾಸ್ಟೆಲ್‌ಗಳಿಗೆ ಸೂಕ್ತ ಚಿಕಿತ್ಸೆ ನೀಡಬೇಕಾದ ಜವಾಬ್ದಾರಿ ಪ್ರಜ್ಞಾವಂತ ಸರಕಾರದ್ದು. ಒಂದು ಲಕ್ಷ ಕೋಟಿ ರೂಪಾಯಿಯ ಬಜೆಟ್ ಮಂಡಿಸುವ, ಮಠ-ಮಂದಿರಗಳಿಗೆ 200 ಕೋಟಿಗಿಂತಲೂ ಅಧಿಕ ಹಣ ಮೀಸಲಿಡುವ ಸರ್ಕಾರ, ಜೀವಂತ ಮಾನವೀಯ ಸಮಾಜವನ್ನು ಕಟ್ಟಬೇಕಾಗಿದ್ದ ಹಾಸ್ಟೆಲ್‌ಗಳಿಗೆ ಮೀಸಲಿಟ್ಟದ್ದು ಜುಬುಬಿ ಹಣವನ್ನು ಮಾತ್ರ ಎಂಬುದು ನಾಚಿಕೆ ಗೇಡಿನ ಸಂಗತಿ.

ಯುವ ಭಾರತದ ಬಗ್ಗೆ ಭಾಷಣ ಕುಟ್ಟುವ ನೇತಾರರು ನೈಜ ಕಾಳಜಿ ಹೊಂದಿದ್ದೇ ಆದರೆ ಹಾಸ್ಟೆಲ್‌ಗಳ ಉದ್ಧಾರದ ಬಗ್ಗೆ ಯೋಚಿಸಬೇಕು. ಎಬಿವಿಪಿಯ ಮಹತ್ವದ ಸಮೀಕ್ಷೆ ಶ್ಲಾಘನೀಯ.

- ರೋಹಿಣಾಕ್ಷ ಶಿರ್ಲಾಲು
ಉಪನ್ಯಾಸಕರು
anisikeprabha@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement