ಗೋಳು ಹೊಯ್ದುಕೊಂಡ್ರೂ ಮಜಾ ಕೊಡುತ್ತೆ...
ಡಿಗ್ರಿ ಮುಗಿಸಿದ್ದ ಹೆಚ್ಚಿನ ಯುವಕ ಯುವತಿಯರು ಸರ್ಕಾರಿ ಕೆಲಸ, ಐಟಿ, ಬಿಟಿ ಕೆಲಸ, ಆಫೀಸ್‌ಗಳಲ್ಲಿ ಕೆಲಸ ಸಿಗಲಿಲ್ಲ ಎಂದು ಕೊರಗುತ್ತಿರುತ್ತಾರೆ. ಹೀಗೆ ಮಾಡುವುದು ತಪ್ಪು. ಏಕೆಂದರೆ ಓದಿದವರೆಲ್ಲಾ ಸರ್ಕಾರಿ ಕೆಲಸ ಮಾಡಲು ಆಗುವುದಿಲ್ಲ. ಜಾಸ್ತಿ ಓದಿದೆ ಎಂಬ ಅಹಂ ಇಲ್ಲದೆ ಯಾವುದೇ ಕೆಲಸವನ್ನು ಶ್ರದ್ಧೆ, ಭಕ್ತಿ, ಪ್ರೀತಿಯಿಂದ 'ಕಾಯಕವೇ ಕೈಲಾಸ' ಎಂದು ದುಡಿದರೆ ಅದು ಖಂಡಿತ ನಮ್ಮನ್ನು ಯಶಸ್ಸಿನ ಉತ್ತುಂಗಕ್ಕೆ ಏರಿಸುತ್ತೆ ಎಂಬುದಕ್ಕೆ 'ಕನ್ನಡಪ್ರಭ'ದ ಫೆಬ್ರವರಿ 7ನೇ ತಾರೀಖಿನ 'ನೂರೆಂಟು ನೋಟ'ದಲ್ಲಿ ಬಂದ ಲೇಖನವೇ ಸಾಕ್ಷಿ. 'ಮುಳ್ಳಿನ ಹಾದಿಗೆ ಹೂ ಹಾಸಿದವರ ಹೃದಯಂಗಮ ಕಥೆ' ಹೂ ವ್ಯಾಪಾರಿ ಮಹೇಶ್‌ರವರು ಕೋಟ್ಯಧೀಶನಾದ ಕಥೆ ನಿಜಕ್ಕೂ ಓದಿ ಮನಸ್ಸಿಗೆ ಸಂತೋಷವಾಯಿತು.
-ರವಿಕುಮಾರ್ ಜಿ.ಬಿ., ಬೆಂಗಳೂರು, ಮೊ. 944 966 9897
ನಾನು ಕ.ಪ್ರ. ಖಾಯಂ ಓದುಗನಾಗಿದ್ದು ಪತ್ರಿಕೆಯಲ್ಲಿ ಬರುವ ಹಲವು ಅಂಕಣಗಳು ತುಂಬಾ ಚೆನ್ನಾಗಿ ಮೂಡಿ ಬರುತ್ತಿವೆ. ನಾನು ವಕ್ರತುಂಡೋಕ್ತಿಯ ಕಟ್ಟಾ ಅಭಿಮಾನಿ. ಅದೇ ರೀತಿಯ 'ಪಂಚ್' ನೀಡುವಲ್ಲಿ 'ಪದಪದರ' ಅಂಕಣ ಕೂಡ ಹಿಂದೆ ಬಿದ್ದಿಲ್ಲ. ಕಳೆದ ಒಂದೂವರೆ ವರ್ಷಕ್ಕೂ ಅಧಿಕ ಸಮಯದಿಂದ ನಿರಂತರವಾಗಿ ಮೂಡಿ ಬರುತ್ತಿರುವ ಪದಪದರವನ್ನು ನಿತ್ಯವೂ ಬಿಡದೇ ಓದುತ್ತಿದ್ದೇನೆ. ಕನ್ನಡ ಭಾಷೆಯ ವಿಸ್ತಾರವನ್ನು ತಿಳಿಸುವ ಈ ಅಂಕಣ ನನ್ನ ಫೇವರಿಟ್. ವ್ಯಂಗ್ಯ, ಪಂಚ್, ಹಾಸ್ಯ, ಗಂಭೀರ, ಮೊದಲಾದ ಹಲವು ಕೋನಗಳಲ್ಲಿ ಒಂದು ಪದಕ್ಕೆ ಅಷ್ಟೊಂದು ಪದರವನ್ನು ಬಿಡಿಸುವ ಲೇಖಕರಿಗೊಂದು ಸೆಲ್ಯೂಟ್. ಕೆಲವೊಂದು ಪದರ ತೀರ ಸಾಮಾನ್ಯ ಎನಿಸಿದರೂ ಒಂದೇ ಪದಕ್ಕೆ ಅಷ್ಟೊಂದು ಅರ್ಥ ಬರೆಯೋ ಕುರಿತು ಆಶ್ಚರ್ಯವಾಗುತ್ತೆ. ಇದು ಹೀಗೇ ಮುಂದುವರಿಯಲಿ. ಕೆಲವೊಮ್ಮೆ ಹೆಂಗಸರನ್ನು ವಿನಾಕಾರಣ ಗೋಳು ಹೊಯ್ದುಕೊಳ್ಳುವುದು ಸ್ವಲ್ಪ ಕ್ಲೀಷೆ ಎನಿಸಿದರೂ ಮಜಾ ಇರುತ್ತೆ. ವಕ್ರತುಂಡೋಕ್ತಿ ಮತ್ತು ಅದರ ಸಂಬಂಧಿಕನಂತೆ ಇರುವ ಪದಪದರ ಅಂಕಣಗಳಿಗೆ ಜೈ ಹೋ.
-ಮೈತ್ರೇಯಿ ಹೆಚ್.ಎನ್., ಕೊಪ್ಪ- ಚಿಕ್ಕಮಗಳೂರು
ಫೆ.10ರ ಭಾನುವಾರದ ಗೋಡೆಬರಹದಲ್ಲಿ ಜಿ. ಗೋಪಾಲಕೃಷ್ಣ ಕಂಪ್ಲಿ ಇವರು ಬೈಟು ಕಾಫಿಯಲ್ಲಿನ ಲೇಖನದ ಬಗ್ಗೆ ಆಕ್ಷೇಪಿಸಿದ್ದಾರೆ. 'ಚಟ್ಟ ಏರುವವರೆಗೂ ಚಟ ಬಿಡದಿರುವವರೇ ಬಹಳ ಜನರಿದ್ದಾರೆ. ಇಂತಹವರಲ್ಲಿ ಕೊಳ್ಳೇಗಾಲದ ಚಿಕ್ಕಲ್ಲೂರಿನ ಜಾತ್ರೆಯಲ್ಲಿ ದೇವರ ಹೆಸರಿನಲ್ಲಿ ಮದ್ಯ, ಮಾಂಸ, ಧೂಮಪಾನ ಮಾಡಿದ್ದು ಸರಿಯಲ್ಲ. ಅದನ್ನು ಎಲ್ಲರೂ ಅನುಕರಿಸುತ್ತಾರೆ' ಎಂಬುದು ಅವರ ದೂರು. ರಾಜಮಹಾರಾಜರ ಕಾಲದಿಂದಲೂ ಭಾರತಾಂಬೆಯ ಮಡಿಲ ಮಕ್ಕಳಲ್ಲಿ ಮೂಢನಂಬಿಕೆಗಳ ಗುಡಾಣವೇ ಅಡಗಿದೆ. ಇಂತಹ ಲೇಖನಗಳು ಬೇಡ ಎಂದಿದ್ದಾರೆ. ಜೀವನದ ಉನ್ನತ ಮೌಲ್ಯಗಳನ್ನು ಪ್ರತಿಪಾದಿಸಬೇಕು ಎಂದಿದ್ದಾರೆ. ನಮ್ಮ ಮಹಾತ್ಮ ಗಾಂಧೀಜಿ, ರಾಮಕೃಷ್ಣ ಪರಮಹಂಸರು, ಸ್ವಾಮಿ ವಿವೇಕಾನಂದರು, ಶಾರದಾಮಾತೆ, ಬುದ್ಧ, ಮಹಾವೀರರು ಏನು ಹೇಳಿದರೂ ಕೇಳದ ಇಂದಿನ ಕಲಿಯುಗದ ಕಲಿಜನರು ತಾವು ಮಾಡಿದ್ದೇ ಸರಿ ಎಂದು ಬೀಗುವವರಿಗೆ ಈ ಲೇಖನವೇನು ಲೆಕ್ಕ ಹೇಳಿ. ಆದರೂ ಇಂದಿನ ಯುವಜನತೆ, ಅಜ್ಜ, ತಂದೆಯರಂತೆ, ಮದ್ಯದ, ಧೂಮಪಾನದ ಚಟದಾಸರಾಗಿಲ್ಲ. ಆದರೆ ಬೇರೆಯವರು ಹಾಳಾಗಿದ್ದಾರೆ ಎನ್ನುವ ಅರಿವು ಇದ್ದರೆ ಮಾತ್ರ ಬೇಡದ ಚಟಗಳಿಗೆ ದಾಸರಾಗೋದಿಲ್ಲ. ಈ ಲೇಖನದಿಂದೇನು ಜನ ಹಾಳಾಗೋಲ್ಲ ಎನ್ನಿಸುತ್ತದೆ. ಈ ಆಮ್ಲಜನಕ ಹೀರಿ ಬದುಕುವ, ಮಾತನಾಡುವ ಪ್ರಾಣಿಗೆ ಕಾಮ, ಕ್ರೋಧ, ಮದ, ಮತ್ಸರ, ಅಹಂಕಾರ, ಮಮಕಾರ, ಸಂಶಯ ಇರುವ ತನಕ ಇಂತಹ ಜಾತ್ರೆಗಳು ನಡೆದೇ ನಡೆಯುತ್ತವೆ.
-ರಾಜೇಂದ್ರ ಹೆಗಡೆ, ಹಾವೇರಿ
ಈ ವಿಷಯದ ಬಗ್ಗೆ ಇದು ನಾನು ಬರೆಯುತ್ತಿರು ವ ಎರಡನೇ ಪತ್ರ. ಶಿವಮೊಗ್ಗ ಆವೃತ್ತಿಯ ಕನ್ನಡಪ್ರಭದಲ್ಲಿ ತಾವು ಪ್ರಕಟಿಸುತ್ತಿರುವ 'ದಾವಣಗೆರೆ ಸಿನೆಮಾ' ಪಟ್ಟಿ ಎಂದಿಗೂ 'ಅಪ್‌ಡೇಟೆಡ್' ಆಗಿರುವುದಿಲ್ಲ. ಉದಾಹರಣೆಗೆ ಇಂದಿನ (ಕ.ಪ್ರ. ಫೆ.10) ಪಟ್ಟಿಯಲ್ಲಿನ ಚಲನಚಿತ್ರಗಳು ಆ ಎಲ್ಲಾ ಚಿತ್ರಮಂದಿರಗಳಲ್ಲಿ ಜಾಗ ಖಾಲಿ ಮಾಡಿ ಎಷ್ಟೋ ವಾರಗಳಾಗಿವೆ! ನಿಮ್ಮ ಪಟ್ಟಿ ನೋಡಿ ಚಿತ್ರಮಂದಿರಕ್ಕೆ ಹೋದರೆ ಭ್ರಮನಿರಸನಗೊಂಡು ಶಪಿಸುತ್ತಾ ವಾಪಸ್ ಬರುವುದು ಖಚಿತ. ನಿಮ್ಮ ಪತ್ರಿಕೆಯ ದಾವಣಗೆರೆ ಪ್ರತಿನಿಧಿಯಿಂದ ಖಚಿತ ಪಟ್ಟಿ ಪಡೆದು ಪ್ರಕಟಿಸಬಾರದೇಕೆ?
-ಕೆ. ಶ್ರೀನಿವಾಸರಾವ್, ಆದಿತ್ಯ ಬ್ರೆಡ್ ಬಜಾರ್, ಹರಪನಹಳ್ಳಿ, ದಾವಣಗೆರೆ ಜಿಲ್ಲೆ
ಕ.ಪ್ರ. ದಿ, 9.2.13ರ ಕನ್ನಡಪ್ರಭ ಮುಖಪುಟ ಸುದ್ದಿ ಆಯವ್ಯಯ ವರದಿ ಖುಷಿಕೊಟ್ಟಿತು. ಅದರ ವಿವರ, ಮತದಾರರ ಓಲೈಕೆ, ಮಠಗಳ ಅನುಗ್ರಹಕ್ಕಾಗಿ ಆಮಿಷ. ಶ್ರೀಮಾನ್ ಯಡಿಯೂರಪ್ಪನವರ ಅಡ್ಡಗಾಲಿನಿಂದ ಪಾರಾದ ಸರ್ಕಾರ ಆಯವ್ಯಯಕ್ಕಿಂತ 15,000 ಕೋಟಿ ಹೆಚ್ಚುವರಿ ಮಾಡಿದ ಹೆಗ್ಗಳಿಕೆ, ಪತ್ರಿಕೆ ವ್ಯಂಗ್ಯ ಚಿತ್ರಕಾರ ರಚಿಸಿರುವ 'ಕಿಂದರ ಜೋಗಿ', ಬ್ಯಾಗ್ ಪೈಪರ್ ಹಿಡಿದು ನುಡಿಸುತ್ತಿರುವ ಮು.ಮಂ. ಶೆಟ್ಟರ ಚಿತ್ರ ಮನಮೋಹಕವಾಗಿತ್ತು. ಅದರ, ಅರ್ಥಗಂಭೀರ ನಾದ ತರಂಗದಲ್ಲಿ ಬರುತ್ತಿರುವ ಚುನಾವಣೆ ಚಿಹ್ನೆ, ಕೇಸರಿಯವರ ಓಂಕಾರ, ಕ್ರಿಸ್ತರವರ ಶಿಲುಬೆ, ರುಪಾಯಿ ಚಿಹ್ನೆ. ಆದರೆ ಅದರಲ್ಲಿ ಮುಸಲ್ಮಾನರ ಚಾಂದೇ ಸಿತಾರ್ ಕಾಣಲಿಲ್ಲ. ಜನಸಾಮಾನ್ಯನಿಗೆ ಸುಖ ತರದ ಬೊಗಳೆ ಆಯವ್ಯಯ ಇದಾಗಿದೆ.
-ಎಂ. ಮೃತ್ಯುಂಜಯಪ್ಪ, ಚಿತ್ರದುರ್ಗ