ಪೊಲೀಸರ ಶ್ರಮಕ್ಕೆ ವ್ಯವಸ್ಥೆ ಸಾಥ್ ನೀಡಲಿಲ್ಲ
ವೀರಪ್ಪನ್ ಕಾರ್ಯಾಚರಣೆಯಲ್ಲಿ ರಾಜ್ಯದ ಪೊಲೀಸರ ಕೊಡುಗೆ ಅಪಾರವಾಗಿದ್ದರು, ಇತ್ತೀಚೆಗೆ ಬಿಡುಗಡೆಯಾದ ಅಟ್ಟಹಾಸ ಚಿತ್ರದಲ್ಲಿ ಅದನ್ನು ಕಡೆಗಣಿಸಲಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆಯಲ್ಲ ?
ನನಗೆ ಗೊತ್ತಿರುವ ಮಟ್ಟಿಗೆ ಸಿನಿಮಾ ಫೋಕಸ್ ಆಗುತ್ತಾ ಇರುವುದು ಆಪರೇಷನ್ 'ಕಕೂನ್' ಹೆಸರಿನಲ್ಲಿ ವೀರಪ್ಪನ್ ಜತೆಗೆ ತಮಿಳುನಾಡು ಪೊಲೀಸರು ನಡೆಸಿದ ಕೊನೆಯ ಎನ್ಕೌಂಟರ್ ಬಗ್ಗೆ. ವೀರಪ್ಪನ್ ವಿರುದ್ಧ ಉಭಯ ರಾಜ್ಯಗಳು ನಡೆಸಿದ ಕಾರ್ಯಾಚರಣೆಗಳ ಪೈಕಿ ಆಪರೇಷನ್ ಕಕೂನ್ ಅತ್ಯಂತ ಮಹತ್ವದ ಕಾರ್ಯಾಚರಣೆ. ಮತ್ತು ಯಶಸ್ವಿ ಕಾರ್ಯಾಚರಣೆ. ಉಳಿದ ಕಾರ್ಯಾಚರಣೆಗಳು ಯಶಸ್ವಿಯಾದರೂ ವೀರಪ್ಪನ್ನ್ನು ಹಿಡಿಯುವಲ್ಲಿ, ಸಾಯಿಸುವಲ್ಲಿ ಸಫಲವಾಗಿರಲಿಲ್ಲ. ಇದರರ್ಥ ಉಳಿದವಕ್ಕೆ ಮಹತ್ವವಿಲ್ಲ, ಪ್ರಯತ್ನ ನಡೆದಿಲ್ಲ ಎಂದಲ್ಲ. ಪ್ರಯತ್ನ ಬಹಳ ದೊಡ್ಡ ಪ್ರಮಾಣದಲ್ಲಿ ನಡೆಯಿತು. ಈ ಯಶಸ್ಸಿಗೆ ಎಲ್ಲರೂ ಕಾರಣಕರ್ತರು. ಯಾವುದೇ ಒಬ್ಬ ವ್ಯಕ್ತಿಯಲ್ಲ. ವೀರಪ್ಪನ್ ಕಾರ್ಯಾಚರಣೆ ವ್ಯವಸ್ಥೆಯನ್ನು ಸ್ಟ್ರೀಮ್ಲೈನ್ ಮಾಡಿಸಿ ಹೋರಾಟಕ್ಕೆ ಅಣಿಗೊಳಿಸಿದ್ದು ಕರ್ನಾಟಕದ ಕಡೆಯಿಂದ ಶಂಕರ ಬಿದರಿ, ತಮಿಳುನಾಡು ರಾಜ್ಯದಿಂದ ಹಿರಿಯ ಅಧಿಕಾರಿ ವಾಲ್ಟರ್ ದೇವಾರಂ. ಅಂತಾರಾಜ್ಯ ಸಮಸ್ಯೆ ಸರಿ ಪಡಿಸುವುದಕ್ಕಾಗಿ ಆಗ ಜಂಟಿ ಕಾರ್ಯಾಪಡೆ ರಚಿಸಿದರು. ಅದಾದ ನಂತರ ಸಾಕಷ್ಟು ಪ್ರಗತಿಯಾಯ್ತು. ವೀರಪ್ಪನ್ ಚಟುವಟಿಕೆ ಹೆಚ್ಚಾಗಿ ಕರ್ನಾಟಕದಲ್ಲಿ ಇದ್ದುದರಿಂದ ಮತ್ತು ಅವನ ಅನುಯಾಯಿಗಳಲ್ಲಿ ಹೆಚ್ಚಿನವರು ನಮ್ಮ ರಾಜ್ಯದವರಾಗಿದ್ದುದರಿಂದ ತೀವ್ರತೆ ನಮ್ಮ ಮೇಲೆ ಜಾಸ್ತಿ ಇತ್ತು.
ಹೀಗಿದ್ದೂ ಕಾರ್ಯಾಚರಣೆ ಸಫಲವಾಗಲು ತಡವಾಗಿದ್ದು ಏಕೆ ?
ನನ್ನ ಪ್ರಕಾರ ಇಡಿ ವೀರಪ್ಪನ್ ಕಾರ್ಯಾಚರಣೆಯೇ ಒಂದು ವಿಫಲ ಯತ್ನ. ಏಕೆಂದರೆ ಈ ಕಾರ್ಯಾಚರಣೆ 22 ವರ್ಷ ನಡೆಯಿತು. ಆದರೆ ಈ ವೈಫಲ್ಯಕ್ಕೆ ಪೊಲೀಸರಾಗಲಿ, ಅದರ ದಂಡನಾಯಕತ್ವ ವಹಿಸಿದ್ದ ಅಧಿಕಾರಿಗಳಾಗಲಿ ಕಾರಣರಲ್ಲ. ವ್ಯವಸ್ಥೆಯೇ ಇದಕ್ಕೆ ಹೊಣೆ. ನಕ್ಸಲ್ ಸಮಸ್ಯೆಯ ರೀತಿ. ಆದರೆ ವೀರಪ್ಪನ್ಗೆ ಯಾವುದೇ ಸಿದ್ಧಾಂತ ಇರಲಿಲ್ಲ. ಐಡಿಯಾಲಜಿ ಇಲ್ಲದ ಗ್ಯಾಂಗ್ ಜತೆ ನಾವು ಸೆಣಸಬೇಕಿತ್ತು. ವೀರಪ್ಪನ್ಗೆ ಚತುರತೆ ಇತ್ತು. ವ್ಯವಸ್ಥೆಯ ನ್ಯೂನತೆಗಳನ್ನು ಸರಿಯಾಗಿ ಉಪಯೋಗ ಮಾಡಿಕೊಳ್ಳುತ್ತಿದ್ದ. ಉದಾಹರಣೆಗೆ ಅಂತಾರಾಜ್ಯ ಗಡಿ ಸಮಸ್ಯೆ ಆತನಿಗೆ ವರವಾಗಿತ್ತು. ತನಗೆ ಬೇಕೆನಿಸಿದಾಗ ಆತ ಗಡಿ ಬದಲಾಯಿಸಿಕೊಳ್ಳುತ್ತಿದ್ದ. ಜನರ ಭಾವನೆಗೆ ಸ್ಪಂದಿಸುತ್ತಿದ್ದ ಮತ್ತು ಭಯ ಹುಟ್ಟಿಸುತ್ತಿದ್ದ. ಇದೆಲ್ಲಕ್ಕಿಂತ ಹೆಚ್ಚಾಗಿ ಪೊಲೀಸರಿಗೆ ಇಂಥ ಕಾರ್ಯಾಚರಣೆ ನಡೆಸಿದ ಅನುಭವ ಇರಲಿಲ್ಲ. ನಮ್ಮ ಪೊಲೀಸರು ಕಾನೂನು-ಸುವ್ಯವಸ್ಥೆಯಲ್ಲಿ, ಅಪರಾಧ ಪತ್ತೆಯಲ್ಲಿ ಪರಿಣತಿ ಹೊಂದಿದ್ದರೆ ವಿನಾ, ಇಂಥ ಕಾರ್ಯಾಚರಣೆ ಅನುಭವ ಇರಲಿಲ್ಲ. ಎಲ್ಲವನ್ನು ನಾವು ಕೆಲಸ ಮಾಡುತ್ತ ಕಲಿಯಬೇಕಿತ್ತು. ಅರಣ್ಯ ಪ್ರದೇಶದ ಭೌಗೋಳಿಕ ಲಕ್ಷಣ ಅರ್ಥ ಮಾಡಿಕೊಳ್ಳುವುದಕ್ಕೆ, ಮಾಹಿತಿದಾರರನ್ನು ಹುಟ್ಟು ಹಾಕುವುದಕ್ಕೆ ಅನುಭವಿಗಳು ಮತ್ತು ಪರಿಣತರು ಇರಲಿಲ್ಲ. ಇದೆಲ್ಲವನ್ನೂ ಕೆಲಸ ಆರಂಭಿಸದ ಮೇಲೆಯೇ ನಾವು ಕಲಿಯಲು ಆರಂಭಿಸಿದೆವು. ಹೀಗಾಗಿ ವಿಳಂಬವಾಯ್ತು.
ಇದೆಲ್ಲದರ ಜತೆಗೆ ಕಾರ್ಯಾಚರಣೆಗೆ ದೊಡ್ಡ ಅಡ್ಡಿಯಾಗಿದ್ದು ಏನು ?
ಅಲ್ಲಿದ್ದಂಥ ಸಾಮಾಜಿಕ ವ್ಯವಸ್ಥೆ, ಅಂತಾರಾಜ್ಯ ಗಡಿ ವಿವಾದ, ಭಾಷೆ ಹಾಗೂ ಕಾವೇರಿ ಸಮಸ್ಯೆ. ಎಲ್ಲಕ್ಕಿಂತ ಹೆಚ್ಚಾಗಿ ರಾಜಕೀಯ ಹಿತಾಸಕ್ತಿ. ಇವೆಲ್ಲವೂ ಕಾರ್ಯಾಚರಣೆ ಮೇಲೆ ಪ್ರತೀಕೂಲ ಪರಿಣಾಮ ಬೀರುತ್ತಾ ಬಂತು. ಹೀಗಾಗಿ ವಿಳಂಭವಾಯ್ತು. ಅದಕ್ಕಾಗಿಯೇ ನಾನು ಇದನ್ನೊಂದು ವಿಫಲ ಪ್ರಯತ್ನ ಎಂದು ಹೇಳಿದ್ದು.
ಅಟ್ಟಹಾಸ ಸಿನಿಮಾದಲ್ಲಿ ನಮ್ಮ ದಿಟ್ಟ ಅಧಿಕಾರಿಗಳಾದ ಶಕೀಲ್ ಅಹ್ಮದ್ ಸೇರಿದಂತೆ ಹಲವರು ಸಾಯುವುದಕ್ಕಾಗಿಯೇ ಪೊಲೀಸ್ ಪಡೆಯನ್ನು ಸೇರಿದ್ದರು ಎಂಬಂತೆ ಚಿತ್ರಿಸಿದ್ದಾರಲ್ಲ.
ನಾನು ಇನ್ನೂ ಸಿನಿಮಾ ನೋಡಿಲ್ಲ. ಮಾರ್ಚ್ 3ಕ್ಕೆ ನೋಡುತ್ತೇನೆ.
ನೀವೆಲ್ಲ ಇಷ್ಟೆಲ್ಲ ಪ್ರಯತ್ನ ಮಾಡಿದ್ದರೂ ಕೊನೆಯಲ್ಲಿ ಶ್ರೇಯಸ್ಸು ತಮಿಳುನಾಡಿನ ಪಾಲಾಗಲಿಲ್ಲವೇ ?
ನಾವು ಬಹಳಷ್ಟು ರಹಸ್ಯ ಕಾರ್ಯಾಚರಣೆಯನ್ನು ಮಾಡಿದ್ದೆವು. ಆದರೆ ದುರ್ದೈವದಿಂದ ಅವೆಲ್ಲವೂ ಯಶಸ್ವಿಯಾಗಲಿಲ್ಲ. ಗೆಲುವಿಗೆ ಜನಕರು ಜಾಸ್ತಿ, ಸೋಲು ಅನಾಥ ( ಸಕ್ಸಸ್ ಹ್ಯಾಸ್ ಮೆನಿ ಫಾದರ್, ಫೇಲ್ಯೂರ್ ಇಸ್ ಆನ್ ಆರ್ಪನ್ ). ಇದಕ್ಕೆ ಕಾರಣ ನಮ್ಮಲ್ಲೂ ಇದೆ. ಮೊದಲನೆಯದಾಗಿ ಅನುಭವದ ಕೊರತೆ ಇತ್ತು. ಆರಂಭದಲ್ಲಿ ನಾವು ಕಾರ್ಯಾಚರಣೆಯನ್ನು ಬಂದೋಬಸ್ತ್ ರೀತಿ ಮಾಡುತ್ತಿದ್ದೆವು. ಯಾವುದೇ ಕಾರ್ಯಾಚರಣೆ ಯಶಸ್ಸು ಗುಪ್ತ ಮಾಹಿತಿಯನ್ನು ಆಧರಿಸಿರುತ್ತದೆ. ಭಯೋತ್ಪಾದಕರ ವಿರುದ್ಧವಾಗಲಿ, ಸಂಘಟಿತ ಅಪರಾಧದ ವಿರುದ್ಧದ ಕಾರ್ಯಾಚರಣೆಯೇ ಆಗಲಿ ಗುಪ್ತ ಮಾಹಿತಿ ಬಹಳ ಮುಖ್ಯ. ಅದು ಸರಿಯಾಗಿದ್ದರೆ ಕಡಿಮೆ ಪರಿಶ್ರಮದಲ್ಲಿ ಬೇಗ ಗೆಲುವು ಪಡೆಯಬಹುದು. ಶಸ್ತ್ರಾಸ್ತ್ರದಲ್ಲಿ, ಸಂಖ್ಯಾಬಲದಲ್ಲಿ, ಸಂಪರ್ಕದಲ್ಲಿ ನಮಗೂ ವೀರಪ್ಪನ್ಗೂ 1ಅನುಪಾತ 10 ಸಾವಿರ ಅಂತರವಿತ್ತು. ನಮ್ಮಲ್ಲಿ ಬುಲೆಟ್ಪ್ರೂಫ್ಗಳು, ನೈಟ್ವಿಷನ್ ಕ್ಯಾಮೆರಾಗಳು, ಶಸ್ತ್ರಾಸ್ತ್ರಗಳು ಎಲ್ಲವೂ ಜಾಸ್ತಿ ಇತ್ತು. ಆದರೆ ಗುಪ್ತಮಾಹಿತಿ ಬಡವಾಗಿತ್ತು. ಅದು ದೊರಕುವುದು ಸ್ಥಳೀಯ ಜನರ ಮನಗೆದ್ದಾಗ ಮಾತ್ರ. ಆ ವಾತಾವರಣವನ್ನು ನಮ್ಮ ವಿಶೇಷ ಕಾರ್ಯಪಡೆಗೆ ಸೃಷ್ಟಿ ಮಾಡುವುದಕ್ಕೆ ಸಾಧ್ಯವಾಗಲಿಲ್ಲ.
ಅದರಲ್ಲಿ ಏಕೆ ವಿಫಲರಾದಿರಿ ?
ಏಕೆಂದರೆ ಕಾರ್ಯಾಚರಣೆ ಪದ್ಧತಿಯಲ್ಲಿ ಕೆಲವು ಲೋಪಗಳಿತ್ತು. ಬುದ್ದಿವಂತಿಕೆಯಿಂದ ಮನಸ್ಸನ್ನು ಗೆದ್ದು ಮಾಹಿತಿ ಪಡೆಯುವಲ್ಲಿ ಸ್ವಲ್ಪ ವಿಫಲರಾದೆವು.
ಈ ಕಾರ್ಯಾಚರಣೆಯಲ್ಲಿ ಮಾನವ ಹಕ್ಕು ಉಲ್ಲಂಘನೆ ಬಗ್ಗೆ ದೊಡ್ಡ ಆರೋಪ ಕೇಳಿ ಬಂದಿದೆಯಲ್ಲ ?
ಕಾರ್ಯಾಚರಣೆಯ ಹರವು ಮತ್ತು ವೀರಪ್ಪನ್ ಮೆರೆಯುತ್ತಿದ್ದ ಅಟ್ಟಹಾಸದ ಹಿನ್ನೆಲೆಯಲ್ಲಿ ನಾವು ಬಲ ಪ್ರಯೋಗ ಮಾಡುವುದು ಅನಿವಾರ್ಯವಾಗಿತ್ತು. ಇಂಥ ಕಾರ್ಯಾಚರಣೆ ಸಂದರ್ಭದಲ್ಲಿ ಎಲ್ಲ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಆ ಮಾತನ್ನು ಆಪರೇಷನ್ ಕಕೂನ್ಗೂ ಹೇಳಬಹುದು. ನೀವ್ಯಾಕೆ ವೀರಪ್ಪನ್ಗೆ ತಪ್ಪು ಸಂದೇಶವನ್ನು ಕಳುಹಿಸಿ ಹೊರಕ್ಕೆ ಕರೆ ತಂದಿರಿ ಎಂದು ಪ್ರಶ್ನಿಸಬಹುದು. ಅದನ್ನು ಮಾನವ ಹಕ್ಕುಗಳ ಉಲ್ಲಂಘನೆ ಎಂದು ಆರೋಪಿಸಬಹುದೇ ? ಇದೆಲ್ಲವೂ ತಂತ್ರಗಾರಿಕೆಯಲ್ಲಿ ಬರುತ್ತದೆ. ಆಲ್ ಇಸ್ ಫೇರ್ ಇನ್ ಹೈ ಲೇವಲ್ ಆಪರೇಷನ್.
ವೀರಪ್ಪನ್ ಕಾರ್ಯಾಚರಣೆಯಲ್ಲಿ ಬಿದರಿ ಅವರ ಪಾತ್ರ ಹೇಗಿತ್ತು ?
ಬಿದರಿ ಕ್ವಾಂಟ್ರಿಬ್ಯೂಷನ್ ಇಸ್ ಮೋರ್. ತಂತ್ರಗಾರಿಕೆ ಕಾರ್ಯಾಚರಣೆ, ಅಧಿಕಾರಿಗಳಲ್ಲಿ ಧೈರ್ಯ ತುಂಬುವುದು ಸೇರಿದಂತೆ ಎಲ್ಲ ದೃಷ್ಟಿಯಿಂದಲೂ ಕಾರ್ಯಪಡೆಗೆ ಸ್ಪಷ್ಟ ರೂಪ ಕೊಟ್ಟವರೇ ಶಂಕರ ಬಿದರಿ. ಆತನನ್ನು ನಿಗ್ರಹಿಸುವುದರಲ್ಲಿ ಅವರ ಯೋಗದಾನ ಬಹಳಷ್ಟಿದೆ. ಇದನ್ನು ಅಲ್ಲಗಳೆಯುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ. ಕಾರ್ಯಪಡೆಗೆ ಸರ್ಕಾರದ ಅಧಿಕೃತ ಮುದ್ರೆ ದೊರಕುವುದಕ್ಕೆ, ಸಿಬ್ಬಂದಿಗಳಿಗೆ ಸೌಲಭ್ಯ ಕೊಡಿಸುವುದಕ್ಕೆ, ಹೋರಾಟದ ರೂಪುರೇಷೆ ರಚಿಸುವುದಕ್ಕೆ ಅವರು ಸಾಕಷ್ಟು ಕೊಡುಗೆ ನೀಡಿದ್ದಾರೆ.
ಕಾರ್ಯಾಚರಣೆ ಸಂದರ್ಭದಲ್ಲಿ ರಾಜ್ಯದ ಪೊಲೀಸ್ ಬಲದ ಮುಂದೆ ಇದ್ದ ಸವಾಲೇನು ?
ಬಹಳ ಶ್ರಮ ಪಡುವ ಸಂದರ್ಭವಿತ್ತು. ಏಕೆಂದರೆ ನಾವೆಲ್ಲರೂ ಸ್ವಯಂಪ್ರೇರಣೆಯಿಂದ ಕಾರ್ಯಾಚರಣೆಗೆ ಹೋಗಿದ್ದೆವು. 80 ಸಾವಿರ ಇದ್ದ ಪೊಲೀಸ್ ಪಡೆಯಲ್ಲಿ ಸ್ವಯಂ ಪ್ರೇರಣೆಯಿಂದ ಯಾರೂ ಮುಂದೆ ಬಂದಿರಲಿಲ್ಲ. ಇಡಿ ರಾಜ್ಯ ಸಶಸ್ತ್ರ ಪಡೆಯ ಶೇ.2ರಷ್ಟು ಬಲವು ಸ್ವಯಂಪ್ರೇರಣೆಯಿಂದ ನಾವು ಕಾರ್ಯಾಚರಣೆಯಲ್ಲಿ ಭಾಗವಹಿಸುತ್ತೇವೆ ಎಂಬ ಇಚ್ಛೆ ವ್ಯಕ್ತಪಡಿಸಿರಲಿಲ್ಲ. ರಾಜ್ಯದ ಇಡೀ ಪೊಲೀಸ್ ವ್ಯವಸ್ಥೆಗೆ ಸವಾಲು ಇದ್ದಾಗ ಅಧಿಕಾರಿಗಳು ನಾಮುಂದೆ, ನೀಮುಂದೆ ಎಂದು ಮುನ್ನುಗ್ಗಿ ಬರಬಹುದಿತ್ತು. ಆದರೆ ಯಾರೂ ಬರಲಿಲ್ಲ. ಅದೇ ಸ್ಥಳಕ್ಕೆ ಪೋಸ್ಟಿಂಗ್ ಆದವರನ್ನು ಬಿಟ್ಟರೆ ಸ್ವಯಂ ಪ್ರೇರಣೆಯಿಂದ ಬಂದವರು 25-30 ಮಂದಿ ಮಾತ್ರ.
ಕಾಡಿನಲ್ಲಿ ನೀವು ಎದುರಿಸಿದ ಸನ್ನಿವೇಶ ಹೇಗಿತ್ತು ?
ನಾನು ಕಾಡಿಗೆ ಹೋದಾಗ ಮೂರು ವಿಚಾರಗಳ ಮೇಲೆ ಗಮನ ಹರಿಸಿದ್ದೆ. ಕಾರ್ಯಾಚರಣೆ ಯಶಸ್ವಿಯಾಗಬೇಕಿದ್ದರೆ ಸ್ಥಳೀಯ ಜನರ ಸಹಕಾರ ಬೇಕು. ಆಗ ನಮಗೆ ಅದು ಸಿಗುತ್ತಾ ಇರಲಿಲ್ಲ. ನಮ್ಮ ನಡತೆ ಮತ್ತು ಉದ್ದೇಶದ ಮೇಲೆ ನಂಬಿಕೆ ಬಂದಾಗ ಮಾತ್ರ ಅವರು ನಮ್ಮೊಂದಿಗೆ ಬೆರೆಯುತ್ತಾರೆ. ಮಾಹಿತಿ ಕೊಟ್ಟವರಿಗೆ ರಕ್ಷಣೆ ಕೊಡಬೇಕಾಗುತ್ತದೆ. ಇದಕ್ಕಾಗಿ ನಾನು ಅನೇಕ ಸಭೆ ನಡೆಸುತ್ತಿದ್ದೆ. ಜತೆಗೆ ವಿಶೇಷ ತಂಡಕ್ಕೆ ಸಮಸ್ಯೆಗಳು ಎದುರಾದಾಗ ಹೇಗೆ ಪ್ರತಿಕ್ರಿಯಿಸಬೇಕೆಂಬ ಅನುಭವದ ಕೊರತೆ ಇತ್ತು. ಹೀಗಾಗಿ ಅವರಿಗೆ ತರಬೇತಿ ನೀಡಿದೆವು. ಮೂರನೆಯದಾಗಿ ಅಲ್ಲಿ ರ್ಯಾಂಕ್ ಎಂಬುದು ಮಹತ್ವದ್ದಾಗಿರಲಿಲ್ಲ. ನಾವು ಹೋಗಿ ಕ್ಯಾಂಪ್ನಲ್ಲಿ ಕುಳಿತುಕೊಳ್ಳುತ್ತಿದ್ದೆವು. ಅಲ್ಲಿ ಕಾನ್ಸ್ಟೇಬಲ್, ಕಮಾಂಡರ್ ಎಂಬ ಭೇದವಿರುತ್ತಿರಲಿಲ್ಲ. ಎಲ್ಲರೊಂದಿಗೆ ಭ್ರಾತೃತ್ವದ ಭಾವನೆ ಇತ್ತು. ಒಗ್ಗಟ್ಟು ಮೂಡಿಸಲು ಶ್ರಮಿಸಿದೆವು. ನಾನು ಎರಡನೇ ಬಾರಿಗೆ ಹೋದಾಗ ಕೇವಲ ಹದಿನೈದು ದಿನ ಇದ್ದೆ. ಆದರೆ ಆ ಅವಧಿಯಲ್ಲಿ ಹದಿನೈದಕ್ಕೂ ಹೆಚ್ಚು ಸಭೆ ನಡೆಸಿದ್ದೆ.
ನೀವು ಗುಂಡೇಟು ತಿಂದ ನಂತರ ಪುನರ್ ಜನ್ಮ ಪಡೆದಂತೆ ಅನಿಸುತ್ತಿಲ್ಲವೇ ?
ನಿಜಕ್ಕೂ ಅದು ಪುನರ್ ಜನ್ಮ. ಆಗ ನಮ್ಮ ಪಡೆಯ ಕಮಾಂಡರ್ ಆಗಿದ್ದ ಶಂಕರ ಬಿದರಿ, ಅಧಿಕಾರಿಗಳಾದ ಬಿ.ಬಿ.ಅಶೋಕ್ಕುಮಾರ್, ಜಿ.ಎ.ಬಾವಾ, ತಮಿಳುನಾಡಿನ ಐಪಿಎಸ್ ಅಧಿಕಾರಿ ವಿಜಯಕುಮಾರ್, ಎಲ್ಲಕ್ಕಿಂತ ನಮ್ಮ ಸರ್ಕಾರ ಹಾಗೂ ನನ್ನ ಕುಟುಂಬ ವರ್ಗ ನಡೆದುಕೊಂಡ ರೀತಿ ನಿಜಕ್ಕೂ ಶ್ಲಾಘನೀಯ. ರಾಜ್ಯದ ಜನತೆಯ ಆಶೀರ್ವಾದದಿಂದ ನಾನು ಬದುಕಿದೆ.
- ರಾಘವೇಂದ್ರ ಭಟ್ , ಕನ್ನಡಪ್ರಭ