ಅಂಕಣಗಳು

ಅಧ್ಯಯನದ ಅವಧಿಯಲ್ಲಿ ಆಸ್ಟ್ರೇಲಿಯಾದ ಅನುಭವ

ಆಸ್ಟ್ರೇಲಿಯಾದಲ್ಲಿ ನಾನು ವಿದ್ಯಾರ್ಥಿಯಾಗಿದ್ದಾಗ  ಸುಲಭ ಬೆಲೆಯಲ್ಲಿ ಸಿಗುವ ಉಪಯೋಗಿಸಿದ ವಸ್ತುಗಳ ಬಗ್ಗೆ ಮಾಹಿತಿ ನೀಡಲು ವ್ಯವಸ್ಥಿತ ಜಾಲವೊಂದಿತ್ತು. ಅಷ್ಟೊಂದು ಆದಾಯವಿಲ್ಲದಿದ್ದರೂ ಅಲ್ಲಿ ಎಲ್ಲರ ಹತ್ತಿರ ಕಾರು ಮತ್ತಿತರ ಸವಲತ್ತುಗಳು ಇದ್ದವು. ಅಲ್ಲಿ 'ಉಪಯೋಗಿಸಿದ (second hand)  ವಸ್ತುಗಳು' ಅತಿ ಕಡಿಮೆ ದರದಲ್ಲಿ ಅಥವಾ ಕಂತುಗಳಲ್ಲಿ ಸಿಗುತ್ತವೆ. ಆದುದರಿಂದ ಆದಾಯ ಉತ್ತಮ ಮಟ್ಟದಲ್ಲಿಲ್ಲದಿದ್ದರೂ ಸಹ, ಜನರ ಜೀವನದ ಗುಣಮಟ್ಟ ಚೆನ್ನಾಗಿರುತ್ತದೆ. ಹಾಗಾಗಿ ಅಲ್ಲಿನ ಸಮಾಜದಲ್ಲಿ ಸಮಾನತೆಯನ್ನು ಕಾಣಬಹುದು. ಒಬ್ಬ ಪೌರಕಾರ್ಮಿಕ ಅಥವಾ ಗಾರೆ ಕೆಲಸದವನೂ ಸಹ ತಮ್ಮ ಸ್ವಂತ ಕಾರಿನಲ್ಲಿ ಕೆಲಸಕ್ಕೆ ಬರುತ್ತಾರೆ. ಅಧುನಿಕ ಯಂತ್ರಗಳ ಸಹಾಯದಿಂದ ಕ್ಷಣ ಮಾತ್ರದಲ್ಲಿ ಉತ್ತಮ ಕೆಲಸ ಮಾಡಿ ಹೋಗುತ್ತಾರೆ. ಅವರು ವಿದ್ಯಾವಂತರಿಗಿಂತ ಅಥವಾ ಉನ್ನತ ಹುದ್ದೆಯಲ್ಲಿರುವವರಿಗಿಂತ ಯಾವುದರಲ್ಲಿಯೂ ಕಡಿಮೆ ಇಲ್ಲ. ಎಲ್ಲ ಕೆಲಸಗಳಿಗೂ, ಎಲ್ಲ ಕೆಲಸಗಾರರಿಗೂ ಸಮಾನ ಗೌರವ ಸಿಗುತ್ತದೆ. ನಾನು ವಿಶ್ವವಿದ್ಯಾಲಯಕ್ಕೆ ಸೇರುವಾಗ ರಜನೀಶ್ ಹದಿನೈದು ದಿನಗಳ ರಜೆ ತೆಗೆದುಕೊಂಡು ಬಂದಿದ್ದರು. ನಂತರ ಅವರು ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ನಿರ್ದೇಶಕರಾಗಿದ್ದಾಗ ವರ್ಗಾವಣೆ ಆಗಿದ್ದುದರಿಂದ ಎರಡು ತಿಂಗಳ ರಜೆ ತೆಗೆದುಕೊಂಡು ಬಂದಿದ್ದರು. ನಾನು ತರಗತಿಗೆ ಹೋದಾಗ ಅವರು ಹೇಗೆ ಕಾಲ ಕಳೆಯುತ್ತಾರೋ ಎಂದು ಆಲೋಚಿಸುತ್ತಿದ್ದಾಗ ಅಲ್ಲಿನ ಒಬ್ಬ ನಾಗರಿಕರು ಒಂದು ಸಲಹೆ ಕೊಟ್ಟರು- ಟ್ಯಾಕ್ಸಿಯ ಚಾಲಕನಾಗಿ ಕೆಲಸ ಮಾಡಿದರೆ ದಿನಕ್ಕೆ ಇನ್ನೂರು ಡಾಲರ್ ದುಡಿಯಬಹುದು ಎಂದು!
ಅಲ್ಲಿದ್ದಾಗ ನಾನು ಸೆಲ್ವಾರ್ ಕಮೀಜ್ ಧರಿಸಿ ಹಣೆಗೆ ಕುಂಕುಮವಿಡುತ್ತಿದ್ದೆ. ಒಂದು ದಿನ ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದ್ದಾಗ ಅದರ ಡ್ರೈವರ್ 'ಏಕೆ ಹಣೆಗೆ ಕುಂಕುಮವಿಡುತ್ತೀರಿ, ನೀವು ರಗ್ಬಿ ಆಟದ ತಂಡಕ್ಕೆ ಸೇರಿದವರಾ?' ಎಂದು ಕೇಳಿದರು. ನಾನು ನಗುತ್ತಾ 'ನಾನು ಮದುವೆಯಾದವಳು, ಆದುದರಿಂದ ದೂರವಿರಿ ಎಂದು ಆ ಕುಂಕುಮ ಅನ್ಯ ಪುರುಷರಿಗೆ ಸಂದೇಶವನ್ನು ನೀಡುತ್ತದೆ' ಎಂದು ಹೇಳಿದೆ.
ಹಾಸ್ಟೆಲ್ಲಿನ ಒಂಟಿ ವಾಸ ಬೇಜಾರಾಗಿತ್ತು. ಮೂರು ಜನ ಚಂದೀಗಢ್ನಿಂದ ಓದಲು ಅಲ್ಲಿಗೆ ಬಂದಿದ್ದರು. ಅವರೆಲ್ಲರೂ ಸೇರಿ ಮನೆಯೊಂದನ್ನು ಬಾಡಿಗೆಗೆ ತೆಗೆದುಕೊಂಡರು. ನಾನೂ ಅವರೊಂದಿಗೆ ವಾಸಿಸಲು ಆರಂಭಿಸಿದೆ. ಎಲ್ಲರೂ ಜವಾಬ್ದಾರಿಗಳನ್ನು ಹಂಚಿಕೊಂಡು ಕೆಲಸ ಮಾಡುತ್ತಿದ್ದೆವು. ಇನ್ನು ಊಟದ ರೀತಿಯೂ ಒಂದೇ ತೆರನಾಗಿದ್ದುದರಿಂದ ಅಡ್ಜಸ್ಟ್ ಮಾಡಿಕೊಂಡಿರಲು ಎಲ್ಲರಿಗೂ ಸುಲಭವಾಯಿತು. ಒಬ್ಬಳೇ ಎಲ್ಲ ಕೆಲಸಗಳನ್ನು ಮಾಡಿಕೊಳ್ಳಬೇಕೆಂಬ ಬೇಸರವೂ ತಪ್ಪಿತು.
ಆಸ್ಟ್ರೇಲಿಯನ್ನರಿಗೆ ಭಾರತೀಯ ಅಡುಗೆಗಳೆಂದರೆ ಬಹಳ ಇಷ್ಟ. ವಿಶ್ವವಿದ್ಯಾಲಯದಲ್ಲಿ ಕೂಡ ಭಾರತೀಯ ಖಾದ್ಯ ಸಿಗುವ ಉಪಹಾರ ಗೃಹಗಳಿದ್ದವು. ಅವುಗಳನ್ನು 'ಕರ್ರಿ ರೆಸ್ಟುರಾಂಟ್' ಎಂದು ಕರೆಯುತ್ತಾರೆ. ಒಂದು ಸಲ ನಮ್ಮ ಕಾಲೇಜಿನ ನಿರ್ದೇಶಕರು 'ಭಾರತೀಯ ಸೇವೆ'ಯಿಂದ ಓದಲು ಬಂದ ಐದಾರು ಅಧಿಕಾರಿಗಳನ್ನು ಒಂದು ಹೊಟೆಲ್ಲಿಗೆ ಊಟಕ್ಕೆ ಕರೆದುಕೊಂಡು ಹೋದರು. ಭಾರತದ ಮಸಾಲೆಯ ಖಾದ್ಯಗಳನ್ನು ತಿನ್ನುತ್ತಾ ಸಂತೋಷದಿಂದ ಉಬ್ಬಿದ ಅವರ ತುಟಿಗಳು, ಈ ತುದಿಯಿಂದ ಆ ತುದಿಯವರೆಗೆ ಅರಳಿದ್ದವು. ಖಾರ ತಿಂದ ಅವರ ಕಣ್ಣಿನಲ್ಲಿ ನೀರು ಬರುತ್ತಿತ್ತು. ಆದರೆ ಅವರು ನಗುತ್ತಾ 'ಕರ್ರಿ ತುಂಬಾ ಚೆನ್ನಾಗಿದೆ ಅಲ್ವಾ?' ಎನ್ನುತ್ತಿದ್ದರು!
ಅಲ್ಲಿನ ವಿಶ್ವವಿದ್ಯಾಲಯದಲ್ಲಿ ವಿಶೇಷವಾಗಿ ನನ್ನ ಗಮನ ಸೆಳೆದ ಅಂಶವೆಂದರೆ, ವಾಚನಾಲಯದಿಂದ ನಮಗೆ ಬೇಕಿರುವ ಪ್ರತಿಯೊಂದು ಪುಸ್ತಕಗಳನ್ನೂ ತಂದು ಓದಬೇಕಾಗಿರಲಿಲ್ಲ. ಅಂತರ್ಜಾಲದ ಮೂಲಕ ವಾಚನಾಲಯದಲ್ಲಿ ಇರುವ ಪುಸ್ತಕಗಳನ್ನು ವೀಕ್ಷಿಸಿ, ಕಂಪ್ಯೂಟರಿನಲ್ಲಿ ಓದಬಹುದಾದಂಥಹ ವ್ಯವಸ್ಥೆ ಇತ್ತು. ಹಾಗಾಗಿ ವಿದ್ಯಾರ್ಥಿಗಳು ಯಾವಾಗ ಬೇಕಾದರೂ ಇಂಟರ್ನೆಟ್ ಮುಖಾಂತರ ಓದಬಹುದಾಗಿತ್ತು. ಅದನ್ನು ನೋಡಿದಾಗ, ನಾನು ಐ.ಎ.ಎಸ್. ಪರೀಕ್ಷೆಗಾಗಿ ಪಟ್ಟ ಕಷ್ಟ ನೆನಪಿಗೆ ಬಂತು. ಈ ರೀತಿಯ ಸೌಲಭ್ಯ ನನಗೂ ಇದ್ದಿದ್ದರೆ ಪರೀಕ್ಷೆಯ ತಯಾರಿ ಇನ್ನೂ ಅಚ್ಚುಕಟ್ಟಾಗಿ, ಸುಲಭವಾಗಿ ಆಗುತ್ತಿತ್ತು ಎನ್ನಿಸದೇ ಇರಲಿಲ್ಲ.
ಅಲ್ಲಿ ನಾನು ಒಬ್ಬಂಟಿಯಾಗಿ ಇರುವಾಗ 'ಹವ್ಯಾಸಿ ಸಾಹಸಿಗರ' ಸಂಘಕ್ಕೆ ಸೇರಿದೆ. ಆಸ್ಟ್ರೇಲಿಯಾದ ಹುಡುಗಿಯರು ಹುಡುಗರಿಗೆ ಸರಿ ಸಮನಾಗಿ, ನಿರ್ಭಯವಾಗಿ ಕಷ್ಟಕರವಾದ ಎಲ್ಲಾ ಆಟಗಳನ್ನು ಆಡಲು ಮುಂದಾಗುತ್ತಾರೆ. ಅವರ ಜೊತೆಗೂಡಿ ನಾನೂ ಸಹ ಬೆಟ್ಟ ಗುಡ್ಡಗಳನ್ನು ಹತ್ತುವುದು, ಕಾಡಿನಲ್ಲಿ ತಿರುಗುವುದು, ಗುಹೆಗಳಲ್ಲಿ ನುಸುಳಿಕೊಂಡು ಅನ್ವೇಷಣೆ ಮಾಡುವುದು, ಜಲಕ್ರೀಡೆಗಳು, ಪ್ಯಾರಾಚೂಟಿನಿಂದ ಹಾರಾಡುವುದು, ಮುಂತಾದ ಸಾಹಸ ಕಾರ್ಯಗಳನ್ನು ವಾರಾಂತ್ಯದಲ್ಲಿ ಮಾಡಿ ಆನಂದಿಸಿದೆ. ಸಾಹಸ ಕ್ರೀಡೆಗಳಲ್ಲಿ ತೊಡಗಿಕೊಳ್ಳುವ ಮೊದಲು ಭಯವಿರುತ್ತದೆ. ಆದರೆ ಅದರಲ್ಲಿ ಪಾಲ್ಗೊಂಡ ಮೇಲೆ ಒಂದು ರೀತಿಯ ವಿಜಯೀ ಮನೋಭಾವ ಬೆಳೆಯುತ್ತದೆ.
ಸಾಮಾನ್ಯವಾಗಿ, ಅಲ್ಲಿನ ಜನ ಹಣ ಖರ್ಚು ಮಾಡಿ ವಿಲಾಸಿ ಜೀವನ ನಡೆಸಿ, ಆನಂದವಾಗಿರಲು ಬಯಸುವವರು. ಆದರೆ ನಾವು ಆದಷ್ಟೂ ಉಳಿಸುವ ಮತ್ತು ಕಡಿಮೆ ಖರ್ಚಿನಲ್ಲಿ ಬಾಳಬೇಕೆನ್ನುವ ಮನೋಭಾವದವರು. ಪ್ರತಿ ಶನಿವಾರ ಮತ್ತು ಭಾನುವಾರದಂದು ಕುಟುಂಬ ಸಮೇತರಾಗಿ ಪ್ರವಾಸಕ್ಕೆ ತೆರಳುತ್ತಾರೆ ಅವರು. ಹಾಗಾಗಿ ಆ ಎರಡು ದಿನಗಳಂದು ಭಾರತೀಯರಿಗೆ ಸುಲಭವಾಗಿ ಕೆಲಸ ದೊರೆಯುತ್ತದೆ. ಅಲ್ಲದೆ ಭಾರತೀಯರು ತಮ್ಮ ಕೆಲಸದಲ್ಲಿ(ನಮ್ಮ ದೇಶದ ಹೊರಗೆ) ಅಚ್ಚುಕಟ್ಟುತನಕ್ಕೆ ಹೆಸರಾದವರು. ಈ ಕಾರಣದಿಂದಾಗಿಯೇ ಈಗೀಗ ಭಾರತೀಯ ವಿದ್ಯಾರ್ಥಿಗಳ ಮೇಲೆ ಅಲ್ಲಿನವರಿಂದ ಹಲ್ಲೆಗಳು ನಡೆಯಲು ಆರಂಭವಾಗಿರುವುದು.
ಅಲ್ಲಿನ ಆರೋಗ್ಯ ಸೌಲಭ್ಯಗಳು ನಿಜಕ್ಕೂ ನನ್ನ ಕುತೂಹಲ ಕೆರಳಿಸಿದವು. ಪ್ರತಿಯೊಬ್ಬ ವಿದ್ಯಾರ್ಥಿಗೆ ಒಂದು ಆರೋಗ್ಯದ ಕಾರ್ಡನ್ನು ಕೊಡುತ್ತಿದ್ದರು. ಅದನ್ನು ಬಳಸಿಕೊಂಡು ಚಿಕಿತ್ಸಾ ಸೌಲಭ್ಯವನ್ನು ಯಾವಾಗ ಬೇಕಾದರೂ ಪಡೆಯಬಹುದಾಗಿತ್ತು. ಅಲ್ಲಿ ಆಸ್ಪತ್ರೆಗೆ ಹೋಗುವುದೇ ಒಂದು ಆನಂದದ ಸಂಗತಿಯಾಗಿತ್ತು! ಏಕೆಂದರೆ ಜನ ಜಂಗುಳಿಯಾಗಲೀ, ಕಾಯಬೇಕೆನ್ನುವುದಾಗಲೀ, ಗೊಂದಲದಲ್ಲಿ ಅತ್ತಿಂದಿತ್ತ ಅಲೆಯುವ ಪ್ರಮೇಯವಾಗಲಿ ಇರಲಿಲ್ಲ. ಶುಭ್ರ, ಅಚ್ಚುಕಟ್ಟಾದ, ಉತ್ತಮವಾದ ತಂತಜ್ಞಾನವನ್ನೊಳಗೊಂಡ ಮೂಲಭೂತ ಸುವ್ಯವಸ್ಥೆ ಇದ್ದೀತು. ಅಲ್ಲಿನ ವ್ಯವಸ್ಥೆಯನ್ನು ನೋಡಿಯೇ ರೋಗಿಯ ಖಾಯಿಲೆ ಅರ್ಧ ವಾಸಿಯಾಗುತ್ತದೆ. ರೋಗಿಗಳಲ್ಲಿ ಆತ್ಮ ವಿಶ್ವಾಸವನ್ನು ಹೆಚ್ಚಿಸುವ ವೈದ್ಯರಿರುವುದರಿಂದ ಇನ್ನರ್ಧ ಖಾಯಿಲೆ ವಾಸಿ. ಇನ್ನು ವೈದ್ಯರ ಚೀಟಿಯಿಲ್ಲದೆ ಯಾವುದೇ ಔಷಧಿಗಳನ್ನು ಕೊಳ್ಳುವ ಹಾಗಿಲ್ಲ. ಆದರೆ ನಮ್ಮಲ್ಲಿ ಒಬ್ಬ ವೈದ್ಯರಿಗೆ ಸಾವಿರಾರು ರೋಗಿಗಳು! ಯಾರನ್ನು ನೋಡಬೇಕು, ಯಾರನ್ನು ಬಿಡಬೇಕು? ಜನಸಂಖ್ಯೆಯ ಮೇಲೆ ನಿಯಂತ್ರಣ ಇದ್ದಿದ್ದರೆ ಆರೋಗ್ಯದ ಗುಣಮಟ್ಟವೂ ನಮ್ಮಲ್ಲಿ ಸುಧಾರಣೆಯಾಗುತ್ತಿತ್ತು.
 ವಯಸ್ಸಾದವರಿಗೆ, ವಿಕಲಚೇತನರಿಗೆ ಇರುವ ಸೌಲಭ್ಯಗಳಂತೂ ಮೆಚ್ಚುವಂಥದ್ದು. ಅವರಿಗೆ ಎಲ್ಲ ರೀತಿಯ ಸುರಕ್ಷೆಯ ವ್ಯವಸ್ಥೆಗಳಿವೆ. ವಯಸ್ಸಾದವರಾಗಲೀ, ವಿಕಲಚೇತನರಾಗಲೀ ರಸ್ತೆಯನ್ನು ದಾಟಲು ಬಂದರೆ ಇಡೀ ಸಂಚಾರವೇ ನಿಂತು ಅವರು ಆರಾಮವಾಗಿ ಹೋಗಲು ಅನುವು ಮಾಡಿಕೊಡಲಾಗುತ್ತದೆ.
ಎಂ.ಬಿ.ಎ.ನಲ್ಲಿ  ನಾನು ಎರಡು ಸಂಶೋಧನಾ ಟಿಪ್ಪಣಿಗಳನ್ನು ತಯಾರಿಸಿದೆ. ಮೊದಲನೆಯದು- ತಂತ್ರಜ್ಞಾನದ ಬಳಕೆಯಿಂದ ಪ್ರಾದೇಶಿಕ ಭೂಗೋಳವನ್ನು ವೈಜ್ಞಾನಿಕವಾಗಿ ಸಮೀಕ್ಷೆ ಮಾಡುವುದು. ಈ ತಂತ್ರಜ್ಞಾನವನ್ನು ಉತ್ತಮವಾಗಿ ಬಳಸುವುದನ್ನು ನಾನು ನಗರ ಅಭಿವೃದ್ಧಿ ಯೋಜನೆ, ತೆರಿಗೆ ಸಂಗ್ರಹಣೆ ಯೋಜನೆ ಮುಂತಾದ ಮುನಿಸಿಪಾಲಿಟಿಯ ಕೆಲಸಗಳಲ್ಲಿ ನೋಡಿದೆ. ಇದರಿಂದಾಗಿ ಪಾರದರ್ಶಕತೆ ಮತ್ತು ವಸ್ತುನಿಷ್ಠವಾಗಿ ವಿಷಯಗಳನ್ನು ಅರಿಯುವುದು ಸಾಧ್ಯವಾಯಿತು. ಮಧ್ಯವರ್ತಿಗಳ ಕಾಟವೂ ದೂರವಾಯಿತು.
ಎರಡನೆಯ ಸಂಶೋಧನೆಯ ಟಿಪ್ಪಣಿ- ಅಂತಾರಾಷ್ಟ್ರೀಯ ಹಣಕಾಸಿನ ಆಡಳಿತ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೇಗೆ ಬೆಲೆಗಳ ಏರಿಳಿತವಾಗುತ್ತದೆ ಎಂಬುದರ ಅರಿವು ನನಗಾಯಿತು. ನನ್ನ ಬ್ಯಾಂಕ್ ಖಾತೆಯಲ್ಲಿ 2 ಲಕ್ಷ ರುಪಾಯಿಗಳಿದ್ದವು. ನಾನು ಅಲ್ಲಿಗೆ ಹೋದಾಗ ಒಂದು ಡಾಲರಿಗೆ ಇಪ್ಪತ್ತಾರು ರು.ಗಳ ಬೆಲೆ ಇತ್ತು. ನಾನು ಹಿಂತಿರುಗುವಾಗ ರುಪಾಯಿಯ ಮೌಲ್ಯ ಕುಸಿದು ಒಂದು ಡಾಲರಿಗೆ ಇಪ್ಪತ್ನಾಲ್ಕು ರು.ಗಳಾಗಿತ್ತು. ದೇಶಕ್ಕೆ ವಾಪಸ್ಸು ಬರುವಾಗ ನಾನು ಓದಿ ತಿಳಿದುಕೊಂಡದ್ದನ್ನು ಅಳವಡಿಸಿಕೊಳ್ಳದೇ ನನ್ನ ಬ್ಯಾಂಕಿನ ಖಾತೆಯಲ್ಲಿರುವ ಹಣವನ್ನು ರುಪಾಯಿಗಳಲ್ಲಿ ಕೊಡಲು ಮನವಿ ಮಾಡಿಕೊಂಡೆ. ರುಪಾಯಿಯ ಮೌಲ್ಯ ಕುಸಿದಿದ್ದರಿಂದ, ಅಲ್ಲದೆ ಡಾಲರಿನಿಂದ ರುಪಾಯಿಯ ರೂಪಾಂತರಕ್ಕೆ ಬ್ಯಾಂಕುಗಳು ಹೆಚ್ಚುವರಿ ಶುಲ್ಕವನ್ನೂ ವಿಧಿಸಿದ್ದರಿಂದ ಸುಮಾರು 40 ಸಾವಿರ ರು.ಗಳ ನಷ್ಟವಾಯಿತು. ನಾನು ಡಾಲರಿನಲ್ಲಿಯೇ ಹಣ ಪಡೆದು ತಂದು ನಂತರದ ದಿನಗಳಲ್ಲಿ ರೂಪಾಯಿಯ ಮೌಲ್ಯ ಏರಿಕೆಯಾದಾಗ ಅದನ್ನು ರೂಪಾಂತರ ಮಾಡಿಕೊಂಡಿದ್ದರೆ ನಷ್ಟವಾಗುವುದನ್ನು ತಪ್ಪಿಸಬಹುದಾಗಿತ್ತು
ಎರಡು ವರ್ಷಗಳ ಅಧ್ಯಯನದ ಅವಧಿಯಲ್ಲಿ ನಾನು ಆಸ್ಟ್ರೇಲಿಯಾದ ಅನುಭವದಿಂದ ಬಹಳಷ್ಟನ್ನು ಕಲಿತಿದ್ದೆ. ಮುಂದಿನ ವಾರ ಅಲ್ಲಿನ ಪ್ರವಾಸೋದ್ಯಮದ ಬಗ್ಗೆ, ನಾವು ಸುತ್ತಾಡಿದ ಜಾಗಗಳ ಬಗ್ಗೆ ಹೇಳುತ್ತೇನೆ.
(ಮುಂದುವರೆಯುವುದು)

- ಶಾಲಿನಿ ರಜನೀಶ್, ಐಎಎಸ್
anisikeprabha@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಸ್ಪರ್ಧೆಗೆ ಯಾರೇ ಬರಲಿ, ಹೆದರುವ ಪ್ರಶ್ನೆಯೇ ಇಲ್ಲ, ಕಾನೂನು ಪಾಲನೆ ಕಡ್ಡಾಯ: ಎಲಾನ್ ಮಸ್ಕ್ 'ಏಕಸ್ವಾಮ್ಯ' ಆರೋಪಕ್ಕೆ Reliance ತಿರುಗೇಟು..!'

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಶತ್ರುತ್ವ ತೀವ್ರ ಕಳವಳಕಾರಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಅಸಮಾಧಾನ..!

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

CJP ಯ 'ತಿರಂಗಾ ಮೆರವಣಿಗೆ: 6,000 ಪೊಲೀಸರು, 220 ಸಿಎಪಿಎಫ್ ತುಕಡಿಗಳ ನಿಯೋಜನೆ, ಸಿಸಿಟಿವಿ ಕಣ್ಗಾವಲು!

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ