ಮುಸ್ಲಿಮರಿಗೆ ಮಾತ್ರ ಗಲ್ಲಾಗಿದ್ದರೆ ಗೋಡ್ಸೆ ಕತೆ?
ಅಲ್ಪಸಂಖ್ಯಾತರ ಪರ ನಿಲುವು ತಳೆಯುತ್ತಾ ಕೇಸರಿ ವಿರುದ್ಧದ ಘೋಷಣೆ ಕೂಗಿದರೆ ಈ ದೇಶದಲ್ಲಿ ಬಹುಬೇಗನೆ ಎತ್ತರಕ್ಕೇರಬಹುದು ಎಂಬ ಸತ್ಯ ಎಲ್ಲರಿಗೂ ತಿಳಿದಿರುವುದೇ. ಅಫ್ಜಲ್ ಗುರು ಕುರಿತ ಅಗ್ನಿ ಶ್ರೀಧರ ಅವರ ಲೇಖನವೂ ಇದೇ ಜಾಡಿನದ್ದು. ಸುಮಾರು ಮುಕ್ಕಾಲು ಪುಟದ ಅವರ ಲೇಖನ ಯಾವುದೇ ದಾಖಲೆಗಳನ್ನು ಹೊಂದದೆ ಸ್ವತಃ ತಮ್ಮ ಮೂಗಿನ ನೇರಕ್ಕೆ ಮಾಡಿರುವ ಚಿಂತನೆಗಳಾಗಿವೆ.
ಕಸಬ್ ಹಾಗೂ ಅಫ್ಜಲ್ಗೆ ಮರಣದಂಡನೆ ಸುಲಭವಾಗಿ ನೀಡಿರುವುದು ಅವರಿಬ್ಬರೂ ಮುಸಲ್ಮಾನರು ಎಂಬ ಕಾರಣಕ್ಕೆ ಎಂಬ ಧ್ವನಿ ಶ್ರೀಧರರದ್ದು. ರಾಜೀವ್ ಹಂತಕರನ್ನು, ಸಾಧ್ವಿ ಪ್ರಜ್ಞಾಳನ್ನು ಉದಾಹರಿಸಿ ಅವರು ತಮ್ಮ ಪ್ರತಿಪಾದನೆಯನ್ನು ಸಮರ್ಥಿಸಿಕೊಳ್ಳುತ್ತಾರೆ. ಹಿಂದೂಗಳೆಂಬ ಕಾರಣಕ್ಕೆ ರಾಜೀವ್ ಹಂತಕರನ್ನು ಗಲ್ಲಿಗೇರಿಸಿಲ್ಲ ಎನ್ನುವುದಾದರೆ ಮಹಾತ್ಮಗಾಂಧಿಯನ್ನು ಕೊಂದ ಗೋಡ್ಸೆ, ಅತ್ಯಾಚಾರ ಪ್ರಕರಣದಲ್ಲಿ ಧನಂಜಯ ಚಟರ್ಜಿ ಇವರನ್ನೂ ಗಲ್ಲಿಗೇರಿಸಬಾರದಿತ್ತಲ್ಲ? ಇವರೂ ಹಿಂದೂಗಳಾಗಿದ್ದರಲ್ಲ? ಸಾಧ್ವಿ ಪ್ರಜ್ಞಾಳನ್ನು ಕೂಡ ಗಲ್ಲಿಗೇರಿಸುವುದು ನಮಗೆ ಸಮ್ಮತವಾಗಲಾರದು ಎನ್ನುತ್ತಾರಲ್ಲ, ಶ್ರೀಧರರೇ ಸಾಧ್ವಿ ಪ್ರಜ್ಞಾಗೆ ಅದ್ಯಾವ ಕೋರ್ಟ್ ಮರಣದಂಡನೆ ವಿಧಿಸಿದೆ ಹೇಳುವಿರಾ? ಪ್ರಕರಣ ಇನ್ನೂ ಇತ್ಯರ್ಥವಾಗಿಲ್ಲವಾದರೂ ನೀವು ಮಾತ್ರ ಏಕಾಏಕಿ ಮರಣದಂಡನೆಯವರೆಗೂ ಯೋಚಿಸುತ್ತೀರೆಂದಾದರೆ ಅವಳು 'ಹಿಂದು' ಎನ್ನುವ ಒಂದೇ ಒಂದು ಕಾರಣಕ್ಕೆ ಎಂದು ನಾವೂ ಹೇಳಬಹುದು ತಾನೆ? 2007 ರಲ್ಲಿ ನಡೆದ ಸಂಜೋತಾ ಎಕ್ಸ್ಪ್ರೆಸ್ ಸ್ಫೋಟದ ಹಿಂದೆ ಇರುವುದು ಅಲ್ ಖೈದಾ ಉಗ್ರ ಸಂಘಟನೆ ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯೇ ಸತ್ಯ ಬಹಿರಂಗ ಪಡಿಸಿದೆಯಾದರೂ ನೀವು ಮಾತ್ರ ಇನ್ನೂ ಅಸೀಮಾನಂದ ಅಸೀಮಾನಂದ ಎಂದು ಉರು ಹೊಡೆಯುತ್ತಿದ್ದೀರಲ್ಲ, ನಿಮ್ಮ ಉದ್ದೇಶವಾದರೂ ಏನು?
ಅಫ್ಜಲ್ಗುರುವಿಗೆ ಮರಣದಂಡನೆ ನೀಡಿರುವುದು ಸುಪ್ರೀಂಕೋರ್ಟ್. ಈ ಕಾರಣಕ್ಕೆ ಇಂದು ನೀವು ರಾಷ್ಟ್ರದ ನ್ಯಾಯಾಂಗ ವ್ಯವಸ್ಥೆಯನ್ನೇ ಅಪಹಾಸ್ಯ ಮಾಡುತ್ತಿದ್ದೀರಲ್ಲ? ಹಾಗಾದರೆ ನಿಮ್ಮ ಪ್ರಕಾರ ನಮ್ಮ ನ್ಯಾಯಾಲಯಗಳು ಕೂಡ ನಿಮ್ಮ ಹಾಗೆಯೇ ಅಲ್ಪಸಂಖ್ಯಾತ ಧೋರಣೆಯನ್ನು ತಳೆದರೆ ಮಾತ್ರ ಅದು ಪರಿಪೂರ್ಣ ಅಥವಾ ನ್ಯಾಯ ಸಮ್ಮತ ಎನ್ನಿಸುವುದೇ?
ಅಫ್ಜಲ್ ಗುರುವಿನಂತಹ ಸಾಮಾನ್ಯ ಪ್ರತ್ಯೇಕತಾವಾದಿಯ ಜೊತೆ ಪಾರ್ಲಿಮೆಂಟ್ ಅಟ್ಯಾಕ್ ಕುರಿತು ಹೇಳುವಷ್ಟು ಬಾಲಿಶರಾಗಿರುತ್ತಾರೆಯೇ ಟೆರರಿಸ್ಟ್ಗಳು ಎಂದು ನೀವು ಪ್ರಶ್ನಿಸಿದ್ದೀರಿ. ನಿಮ್ಮಂತಹ ಒಬ್ಬ ಪತ್ರಕರ್ತನಲ್ಲಿ 'ನಾವು ಗೂಢಾಚಾರಿ'ಗಳೆಂದು ಹೇಳಿಕೊಂಡು ವ್ಯವಹರಿಸುವಷ್ಟು ಬಾಲಿಶರೇ ನಮ್ಮ ಗೂಢಾಚಾರ ಸಂಸ್ಥೆಯವರು ಎಂದು ನಮ್ಮಲ್ಲೂ ಪ್ರಶ್ನೆಗಳೇಳುತ್ತವೆ! ನಿಮ್ಮ ಬಳಿಗೆ ಆಗಮಿಸಿದ ಆ ಮೂರು ಅನಾಮಿಕರು ಭಯೋತ್ಪಾದಕ ಗುಂಪಿನವರೇ ಆಗಿದ್ದಿರಬಹುದಲ್ಲ? ನಿಮ್ಮನ್ನು ಸೇರಿಸಿಕೊಂಡು ಇನ್ನೇನೋ ನಡೆಸುವ ಉದ್ದೇಶದಿಂದ ಗೂಢಚಾರರ ಹೆಸರಿನಲ್ಲಿ ಬಂದಿದ್ದಿರಬಹುದು.
ಇನ್ನು ಪ್ರತ್ಯೇಕತಾವಾದದ ಬೆನ್ನು ಬಿದ್ದು ಭಾರತದ ವಿರುದ್ದ ಆಕ್ರಮಣ ಮಾಡಿದರೆ ಅವರನ್ನು ಶಿಕ್ಷಿಸುವುದು ನಮ್ಮ ನಾಝೀತನವಾಗುತ್ತದೆ ಎನ್ನುವ ನೀವು ಮತ್ತೇನು ಮಾಡಬೇಕು ಎನ್ನುವುದಕ್ಕೆ ಉತ್ತರ ನೀಡಿಲ್ಲ! ಕಾಶ್ಮೀರವನ್ನು ಕೊಟ್ಟು ಕೈತೊಳೆದುಕೊಳ್ಳೋಣವೇ? ಆ ಬಳಿಕ ಪಂಜಾಬ್, ತದನಂತರ ಈಶಾನ್ಯದ ರಾಜ್ಯಗಳು ಸರದಿ ಪ್ರಕಾರ ಪ್ರತ್ಯೇಕತೆಯ ಕೂಗೆಬ್ಬಿಸುವುದು ಖಂಡಿತ. ಒಂದಾದ ಬಳಿಕ ಒಂದನ್ನು ನೀಡುತ್ತಾ ಹಾಯಾಗಿರೋಣವೇ?
- ಪ್ರಸಾದ್ ಕುಮಾರ್
ಮಾರ್ನಬೈಲ್