ಮೂರು ಶತಮಾನ ದಾಟಿದರೂ ಮನದಿಂದ ಮರೆಯಾಗದ ಶಿವಾಜಿ
ಇತ್ತೀಚೆಗಷ್ಟೇ ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಕರೆನ್ಸಿ ನೋಟುಗಳಲ್ಲಿ ಮಹಾತ್ಮ ಗಾಂಧಿಯವರೊಂದಿಗೆ ದೇಶದ ಇತರ ಗಣ್ಯರ, ನೇತಾರರ ಚಿತ್ರಗಳನ್ನು ಮುದ್ರಿಸುವ ಬಗ್ಗೆ ಸಾರ್ವಜನಿಕ ಅಭಿಪ್ರಾಯವನ್ನು ಕೇಳಿತ್ತು. ಈ ಗಣ್ಯರ ಹೆಸರುಗಳಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಹೆಸರೂ ಇತ್ತು. ಬಹುಶಃ ಶಿವಾಜಿಯ ಬಗ್ಗೆ ಅವಲೋಕಿಸಲು ಜನಸಾಮಾನ್ಯರಿಗೆ ದೊರೆತ ಅವಕಾಶವೂ ಇದಾಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಶಿವಾಜಿ ಜನ್ಮದಿನ ಸಂದರ್ಭದಲ್ಲಿ ಇಲ್ಲೊಂದು ಪುಟ್ಟ ಅವಲೋಕನ.
ಸತತ 388 ವರ್ಷಗಳು ದಾಟಿದರೂ ಸಹಿತ ಒಬ್ಬ ಶ್ರೇಷ್ಠ ಚಕ್ರವರ್ತಿಯ ಜೀವನ-ಆದರ್ಶ-ಸಾಧನೆಗಳನ್ನು ನಾವಿಂದಿಗೂ ಮನನ ಮಾಡುತ್ತಿದ್ದೇವೆ. ಸಾಮಾಜಿಕವಾಗಿ, ರಾಜಕೀಯವಾಗಿ, ಆಡಳಿತಾತ್ಮಕವಾಗಿ ಆ ಜನತಾ ನಾಯಕನ ನಡೆ ಅನುಕರಣ ಯೋಗ್ಯ ಎಂದು ನಾವು ಭಾವಿಸುತ್ತಿದ್ದೇವೆಂದರೆ, ಶಿವಾಜಿ ಮಹಾರಾಜರು ಅಂತಹ ಶ್ರೇಷ್ಠ ಬದುಕನ್ನು ಬಾಳಿದರು ಎಂಬುದೇ ಆದಕ್ಕೆ ಮುಖ್ಯ ಕಾರಣ .
ಕಳೆದು ಹೋದದ್ದನ್ನು, ಎದ್ದು ಬಿದ್ದವರ ಸಂಗತಿಗಳನ್ನು ಕಟ್ಟಿಕೊಂಡು ಮಾಡುವುದಾದರೂ ಏನು ಎನ್ನುವ ಭಾವನೆ ಕೆಲವರಲ್ಲಿದೆ. ಆದರೆ ನಿನ್ನೆಯ ಜೀವನದ ಅನುಭವಗಳೇ ನಾಳಿನ ಬಾಳಿಗೆ ಬುತ್ತಿಯಲ್ಲವೆ? ನಿನ್ನೆಯದನ್ನೇ ಸ್ಮರಿಸದಿರುವವನು ನಾಳಿನ ಬಾಳಿಗೆ ಇಂದಿನ ಬದುಕಿನಿಂದಾದರೂ ಏನನ್ನು ಸಿದ್ಧಪಡಿಸಿಕೊಳ್ಳುತ್ತಾನೆ. ಕೊನೆಗೆ ಎಲ್ಲಿಯೂ ಸಲ್ಲದೆ ಒಂದು ದಿನ ಸಾಗಿಹೋಗುತ್ತಾನೆ. ಇತಿಹಾಸವನ್ನು ಅರಿಯದೆ ಇರುವವರಿಂದ ಇತಿಹಾಸ ನಿರ್ಮಾಣ ಮಾಡಲು ಸಾಧ್ಯವೇ ಇಲ್ಲ.
ಭಾರತದ ಚರಿತ್ರೆಯಲ್ಲಿ ಶಿವಾಜಿಯದು ಅತಿ ಗಣ್ಯಮಾನ್ಯವಾದ ವ್ಯಕ್ತಿತ್ವ. ಅತ್ಯಂತ ಸಾಮಾನ್ಯ ಮನೆತನದಲ್ಲಿ ಹುಟ್ಟಿದ ಶಿವಾಜಿ ಮೊಗಲರ ಜೊತೆ ಜೊತೆಗೇ ಬ್ರಿಟಿಷರು ಹಾಗೂ ಪೋರ್ಚುಗೀಸರ ವಿರುದ್ಧವೂ ಹೋರಾಡಿ ಗೆದ್ದು ಛತ್ರಪತಿಯಾಗಿ ಸಿಂಹಾಸನಾರೋಹಣ ಮಾಡಿದುದು ಸಾಮಾನ್ಯ ಸಂಗತಿಯಂತೂ ಅಲ್ಲ. ಅಲ್ಲದೆ ಶೂನ್ಯದಿಂದ ಸಾಮ್ರಾಜ್ಯ ನಿರ್ಮಾಣದ ಆ ಕಥೆ ಇಂದಿನವರಿಗೆ ದಾರಿದೀಪವೂ ಹೌದು.
1674ರ ಜೂನ್ನಲ್ಲಿ ಶಿವಾಜಿ ರಾಯಗಢ ಕೋಟೆಯಲ್ಲಿ ಛತ್ರಪತಿಯಾಗಿ, ನೂತನ ಮಹಾರಾಷ್ಟ್ರದ ಮಹಾನ್ ದೊರೆಯಾಗಿ ಪಟ್ಟಾಭಿಷಿಕ್ತನಾದ. ದಕ್ಷಿಣ ಭಾರತದಲ್ಲಿ ಹಿಂದೂ ಸಾಮ್ರಾಜ್ಯವನ್ನು ಸ್ಥಾಪಿಸುವಲ್ಲಿ ಶತ್ರುಗಳೊಂದಿಗೆ ಅಹರ್ನಿಶಿ ಹೋರಾಡಿದ ಶಿವಾಜಿ ಸ್ವತಂತ್ರ ದೊರೆಯಾಗಿ ಮಾಡಿದ ಸುಧಾರಣೆಗಳನ್ನು ನೋಡುವುದಾದರೆ, ಪ್ರಪ್ರಥಮ ಬಾರಿಗೆ ರಾಜ್ಯ ವ್ಯವಹಾರ ಕೋಶ ಎಂಬ ಪರಿಭಾಷಾ ನಿಘಂಟನ್ನು ಪಂಡಿತರಿಂದ ರಚಿಸಿದ. ಮನು ಹೇಳಿರುವ ಆಡಳಿತ ಹಿತದೃಷ್ಟಿಯ ಅಷ್ಟ ಪ್ರಧಾನರ ವ್ಯವಸ್ಥೆಯನ್ನು ಆರಂಭಿಸಿದ ಮೊದಲ ದೊರೆ! ಅಶ್ವದಳ, ಫಿರಂಗಿ ಬಳಕೆ, ನೌಕಾದಳಗಳನ್ನು ಯಶಸ್ವಿಯಾಗಿ ರೂಪಿಸಿದ ಕೀರ್ತಿಯೂ ಶಿವಾಜಿಗೇ ಸಲ್ಲುತ್ತದೆ.
ತನ್ನ ಹದಿನಾಲ್ಕನೇ ವಯಸ್ಸಿನಲ್ಲಿ ತೋರಣಕಿಲ್ಲೆ ಎಂಬ ಕೋಟೆಯನ್ನು ಗೆದ್ದು, ತನ್ನ ನಲವತ್ತನಾಲ್ಕನೇ ವಯಸ್ಸಿನಲ್ಲಿ ಛತ್ರಪತಿ ಆಗುವ ವೇಳೆಗೆ ಅಂದರೆ ಮೂವತ್ತು ವರ್ಷಗಳ ಅಂತರದಲ್ಲಿ ಗೆದ್ದ ಕೋಟೆಗಳ ಸಂಖ್ಯೆ ಇನ್ನೂರ ಐವತ್ತು. ಈ ಎಲ್ಲಾ ಕೋಟೆಗಳ ತಾಂತ್ರಿಕ ಪರಿಶೀಲನೆ ಹಾಗೂ ನಿರ್ಮಾಣದ ಬಗ್ಗೆ ಸ್ವತಃ ಶಿವಾಜಿಯೇ ನಿಗಾ ವಹಿಸುತ್ತಿದ್ದ ಎಂಬುದು ಪ್ರಮುಖವಾದ ಸಂಗತಿ. ಅವನ ಕೋಟೆಗಳಿಗೂ ಸಹ ಧೀರೋದಾತ್ತ ಹೆಸರುಗಳನ್ನೇ ಇಡುತ್ತಿದ್ದ. ಪ್ರತಾಪಗಢ, ಸಿಂಹಗಢ, ವಿಶಾಲಗಢ, ವಲ್ಲಭಗಢ, ಭೀಮಗಢ, ಸಿಂಧುಗಢ, ರಾಯಗಢ...ಹೀಗೆ.
ಶಿವಾಜಿಯು ನೇರವಾಗಿ ಮೊಘಲರ ವಿರುದ್ಧ ಯುದ್ಧ ಸಾರಿ ಛತ್ರಪತಿಯಾದರೂ ಸಹಿತ ಆತನಲ್ಲಿ ಪರಧರ್ಮ ದ್ವೇಷವಿರಲಿಲ್ಲ. ಸಂತ ರಾಮದಾಸರಿಗೆ ತಾನು ನೀಡುತ್ತಿದ್ದ ಗೌರವವನ್ನೇ ಮುಸ್ಲಿಂ ಗುರುಗಳಿಗೂ ಸಲ್ಲಿಸುತ್ತಿದ್ದ. ಮುಲ್ಲಾ ಹೈದರ್ ಶಿವಾಜಿಯ ವಿಶ್ವಾಸಿ ಕಾರ್ಯದರ್ಶಿಯಾಗಿದ್ದ. ಇಬ್ರಾಹಿಂಖಾನ್, ದೌಲತ್ಖಾನ್, ಸಿದ್ದಿ ಮಿಸ್ತ್ರಿ ಇವರೆಲ್ಲ ಶಿವಾಜಿಯ ಪ್ರಮುಖ ಸೇನಾಧಿಪತಿಗಳಾಗಿದ್ದವರು. ತನ್ನ ರಾಜಧಾನಿ ರಾಯಗಢದಲ್ಲಿ ಮುಸ್ಲಿಂ ಬಾಂಧವರಿಗಾಗಿ ಮಸೀದಿಯನ್ನು ಕಟ್ಟಿಸಿದ್ದನು. ಸೋತ ಮುಸ್ಲಿಂ ದೊರೆಗಳ ಸ್ತ್ರೀಯರನ್ನು ಗೌರವದಿಂದ ಕಾಣುವಂತೆ ದೊರೆಯುತ್ತಿದ್ದ ಖುರಾನ್ ಪ್ರತಿಗಳನ್ನು ಗೌರವಪೂರ್ಣವಾಗಿ ಮಸೀದಿಗಳಿಗೆ ನೀಡುತ್ತಿದ್ದ.
"ಸರ್ಕಾರದ ಕೆಲಸ ದೇವರ ಕೆಲಸ" ಎನ್ನುವ ಮೈಸೂರು ಸಂಸ್ಥಾನದ ದೊರೆಗಳ ಧ್ಯೇಯ ವಾಕ್ಯದ ಮೊದಲ ಪರಿಪಾಲಕ ಶಿವಾಜಿ. ಆತನು ಶತ್ರುರಾಜರಿಗೆ ಬರೆದ ಪತ್ರಗಳಲ್ಲಿ 'ದೊರೆತನದ ಅಧಿಕಾರ ಪರಮಾತ್ಮನದು-ದೊರೆ ಕೇವಲ ಆತನ ಪ್ರತಿನಿಧಿ' ಎಂಬುದಾಗಿ ಉಲ್ಲೇಖಿಸಿ ಉದಾತ್ತತೆಯನ್ನು ತೋರಿದ್ದಾನೆ.
ಇಡೀ ಭಾರತವನ್ನು ತಮ್ಮ ತೆಕ್ಕೆಯಲ್ಲಿ ತೆಗೆದುಕೊಳ್ಳಬೇಕೆಂದಿದ್ದವರ ಪಾಲಿಗೆ ಸಿಂಹಸ್ವಪ್ನವಾಗಿ ಸ್ವರಾಜ್ಯ ಹೋರಾಟ ಮಾಡಿ ವಿಜಯಶಾಲಿಯಾದ ಶಿವಾಜಿಗೆ ತಮ್ಮ ಪ್ರಾಣಗಳನ್ನಾದರೂ ಒತ್ತೆ ಇಟ್ಟು ಆತನನ್ನು ಕಾಪಾಡಿ ದಿಗ್ವಿಜಯಿಯಾಗಿ ಮುಂದುವರೆಯಲು ಸಹಕರಿಸುತ್ತಿದ್ದ ಪ್ರಾಣ ಸ್ನೇಹಿತರಿದ್ದರು. ಅವರನ್ನೆಲ್ಲ ತನ್ನ ವ್ಯಕ್ತಿತ್ವ ಮಾತ್ರದಿಂದಲೇ ಆತ ಸಂಪಾದಿಸಿಕೊಂಡಿದ್ದ.
ಅಫಜಲ್ಖಾನ್ ಎಂಬ ದೈತ್ಯಾಕಾರದ ಶತ್ರುವನ್ನು ಸಾಮಾನ್ಯನಾದ ಶಿವಾಜಿ ಚಾಣಾಕ್ಷವಾಗಿ ಏಕಾಂಗಿಯಾಗಿ ಕೊಂದದ್ದು, ಶತ್ರು ಪಾಳಯದ ಮೊಘಲ್ ಕನ್ಯೆ ತನ್ನನ್ನು ಮೋಹಿಸಿ ಬಂದು ಶತ್ರು ರಹಸ್ಯಗಳನ್ನು ತಿಳಿಸುವೆನೆಂದಾಗ ಆಕೆಗೆ ತಾಯಿಯ ಸ್ಥಾನ ನೀಡಿ ಮನೋ ನಿಗ್ರಹಿಯಾದದ್ದು, ಔರಂಗಜೇಬನ ಭದ್ರ ಸೆರೆಯಿಂದ ಯುಕ್ತಿಯ ಮೂಲಕ ತಪ್ಪಿಸಿಕೊಂಡು ಬಂದದ್ದು, ಸನ್ಯಾಸಿ ವೇಷ ಧರಿಸಿ ಔರಂಗಜೇಬನಿಗೇ ಹಿತೋಪದೇಶ ನೀಡಿದ್ದು, ಪ್ರತಿ ವಿಜಯವನ್ನೂ ತಾಯಿಯ ಪಾದಗಳಿಗೆ ಅಂಕಿತಗೊಳಿಸುತ್ತಿದ್ದುದು, ಅಚಾತುರ್ಯದಿಂದ ಬೆಳವಡಿ ಮಲ್ಲಮ್ಮನ ಪತಿ ಯುದ್ಧದಲ್ಲಿ ಮಡಿದಾಗ ಆಕೆಯ ರಾಜ್ಯವನ್ನು ಹಿಂತಿರುಗಿಸಿ ಆಕೆಯ ಮಗನಿಗೆ ಪಟ್ಟ ಕಟ್ಟಿದ್ದು, ತನ್ನ ಯುದ್ಧ ಬಿಡಾರದಲ್ಲಿ ಸದಾ ನೆಲದಲ್ಲಿ ತಾಟಿನ ಮೇಲೆ ಮಲಗಿ ಭೋಗ ಜೀವನವನ್ನು ತ್ಯಜಿಸಿದ್ದು, ತನ್ನ ಮಗನಿಂದಲೇ ತಪ್ಪಾದಾಗ ಸೆರೆಗೆ ಕಳುಹಿಸಿದ್ದು! ಒಂದೇ, ಎರಡೇ? ಶಿವಾಜಿ ಕಥನದಲ್ಲಿ ಇಂಥ ನೂರೆಂಟು ಸ್ಮರಣೀಯ ಪ್ರಸಂಗಗಳಿವೆ.
ನಿರಂತರ ಯುದ್ಧಗಳು, ಹೋರಾಟಗಳು, ಸಾವು-ನೋವುಗಳ ಮಧ್ಯೆ ಶಿವಾಜಿ ಒಮ್ಮೆ ಜೀವನದಿಂದ ವಿರಕ್ತಿಯನ್ನು ಹೊಂದಲು ಆಧ್ಯಾತ್ಮ ಜೀವನಕ್ಕೆ ಶರಣಾಗಲು ಯೋಚಿಸಿದ್ದ. ಆದರೆ ಸಮರ್ಥ ರಾಮದಾಸರ ಯೋಗ್ಯ ಮಾರ್ಗದರ್ಶನ ಪಡೆದು ಜನಕಲ್ಯಾಣಕ್ಕಾಗಿ ಮತ್ತೆ ರಾಜ ಜೀವನಕ್ಕೆ ಮರಳಿದ. ಅಂದರೆ ಶಿವಾಜಿಗೆ ರಾಜ್ಯ ದಾಹವಾಗಲಿ, ಅಧಿಕಾರ ಪಡೆಯಬೇಕೆಂಬ ವಾಂಛೆಯಾಗಲಿ, ಹಿಂಸೆ ನೀಡಿ ಆನಂದಿಸುವ ವಿಕೃತಿಯಾಗಲಿ ಮುಖ್ಯ ಗುರಿಗಳಾಗಿರಲಿಲ್ಲ. ಆತನಲ್ಲಿ ಸದಾ ಜನಹಿತಪರನಾದ ಸಂತನಿದ್ದ ಎಂಬುದರ ಪ್ರತೀಕವಿದು.
ಒಮ್ಮೆ ಇಂಗ್ಲೆಂಡಿನ ಒಂದು ಸಾಮಾಜಿಕ ಸಂಸ್ಥೆ ಜಗತ್ತಿನ ಸರ್ವಶ್ರೇಷ್ಠ ವೀರಪುರುಷರು ಯಾರು? ಎಂಬ ಪ್ರಶ್ನೆಯನ್ನು ದೇಶ ವಿದೇಶಗಳ ವಿದ್ವಾಂಸರಿಗೆ ಹಾಕಿತು. ಇದಕ್ಕೆ ಉತ್ತರವಾಗಿ ಬಂದ ಹೆಸರುಗಳಲ್ಲಿ ಹ್ಯಾನಿಬಾಲ್, ಸೀಸರ್, ಅಲೆಗ್ಸಾಂಡರ್, ನೆಪೋಲಿಯನ್ ಮುಂತಾದವರ ಹೆಸರುಗಳು ಇದ್ದವು. ಈ ಮಾಲಿಕೆಯಲ್ಲಿ ಸರ್ವರ ದೃಷ್ಟಿಯಲ್ಲಿ ಈ ಲೋಕೋತ್ತರ ನಾಯಕ ಪಟ್ಟಕ್ಕೆ ಆಯ್ಕೆಯಾದವರು ಬೇರಾರೂ ಅಲ್ಲ. ಅದು "ಛತ್ರಪತಿ ಶಿವಾಜಿ".
ಶಿವಾಜಿ ಕುರಿತು ದೇಶದ ಎಲ್ಲಾ ಭಾಷೆಗಳಲ್ಲಿಯೂ ವಿಫುಲವಾದ ಸಾಹಿತ್ಯ ರಚನೆಯಾಗಿದೆ. ಮಹಾ ಕಾವ್ಯಗಳಿವೆ. ವಿಶ್ವವಿದ್ಯಾನಿಲಯಗಳಲ್ಲಿ ಆಕರ ಗ್ರಂಥಗಳಿವೆ. ಜಾಗತಿಕ ಮಟ್ಟದಲ್ಲಿಯೂ ಮಹತ್ವದ ಕೃತಿಗಳಿವೆ.
ಶಿವಾಜಿ ಜೀವಿಸಿದ್ದ ಐವತ್ತು ವರ್ಷಗಳಲ್ಲಿ ಸಾಮಾನ್ಯನೊಬ್ಬ ಅಸಾಮಾನ್ಯ ಸಾಹಸದಿಂದ ಸ್ವತಂತ್ರ ಸಾಮ್ರಾಜ್ಯ ಕಟ್ಟಬಲ್ಲ ವಿಸ್ಮಯದ ಸಾಧನೆಗೆ ಸಾಕ್ಷಿಯಾಗಿದ್ದಾರೆ. ಶಿವಾಜಿಯ ಘನತೆಯುಕ್ತ ವ್ಯಕ್ತಿತ್ವದಲ್ಲಿ ಪ್ರಮುಖವಾಗಿ ಆತನ ಮಾತೃಪ್ರೇಮ ಮತ್ತು ಆತನಿಗಿದ್ದ ಸ್ಪಷ್ಟವಾದ ಗುರಿ ಹಾಗೂ ಅದನ್ನು ಈಡೇರಿಸುವಲ್ಲಿ ಸಾಧನೆಗೆ ಬೇಕಾದ ಪ್ರಾಮಾಣಿಕತೆಗಳು ಆತನ ನಂತರದ ಪೀಳಿಗೆಗಳಿಗೆ ಅಷ್ಟೇ ಅಲ್ಲ ಪ್ರಸ್ತುತಕ್ಕೂ ಸಹ ಮೇಲ್ಪಂಕ್ತಿಯಾಗಿವೆ. ವ್ಯಕ್ತಿಯ ಏಳಿಗೆಯಿಂದ ಸಮುದಾಯದ ಏಳಿಗೆ, ಸಮುದಾಯ ಎಚ್ಚೆತ್ತರೆ ಸಮಾಜದ ಏಳಿಗೆ, ಜಾಗೃತ ಸಮಾಜದಿಂದ ರಾಷ್ಟ್ರಕ್ಕೆ ಹಿತ ಎಂಬುದರ ದೃಷ್ಟಾಂತ ಶಿವಾಜಿ ಕಥೆಯ ಸಾರವೂ ಹೌದು.
ಭಾರತಕ್ಕೆ ರಾಷ್ಟ್ರಗೀತೆಯನ್ನು ನೀಡಿದ ವಿಶ್ವಕವಿ ರವೀಂದ್ರನಾಥ ಟಾಗೋರ್ರವರಿಂದ ಹಿಡಿದು ನಾಡಗೀತೆಯನ್ನು ನೀಡಿದ ರಾಷ್ಟ್ರಕವಿ ಕುವೆಂಪು ವರೆಗೆ ಶಿವಾಜಿಯ ಜೀವನಾದರ್ಶನಗಳು ಕುರಿತು ಶ್ರೇಷ್ಠಸಾಹಿತ್ಯ ರಚಿತವಾಗಿದೆ. ಸಮರ್ಥ ರಾಮದಾಸರಿಂದ ಹಿಡಿದು ಸ್ವಾಮಿ ವಿವೇಕಾನಂದರವರೆಗೆ ಚರಿತ್ರೆಯಲ್ಲಿ ಶಿವಾಜಿ ಪಾತ್ರದ ಮೌಲ್ಯವನ್ನು ತೂಗಿ ತೂಗಿ ಈ ದೇಶಕ್ಕೆ ಮಾದರಿಯಾಗಿ ತೋರಿಸಿಯಾಗಿದೆ.
ಸಮಕಾಲೀನ ವಿದೇಶಿ ಬರಹಗಾರರು, ಇತಿಹಾಸಕಾರರೂ ಆದ ಬರ್ನಿಯೆ, ತವರ್ನಿಯೆ, ಆಕ್ಸಿಂಡನ್, ಮನೂಜಿ, ಕಾಫೀಖಾನ್, ಗ್ರಾಂಟ್ಢಪ್, ಕಿನ್ಕೇಡ್, ಎಲ್ಫಿನ್ಸ್ಟನ್, ರಿಚರ್ಡ್ ವೆಂಪ್ಲ್ ಮುಂತಾದವರು ಶಿವಾಜಿಯ ಅಪ್ರತಿಮ ಹೋರಾಟವನ್ನು ನೈಜವಾಗಿ ದಾಖಲು ಮಾಡಿದ್ದಾರೆ.
ಶಿವಾಜಿಯನ್ನು ಆತನ ಶೂರತೆಯನ್ನು ಆತನ ಜೀವನಕಾಲದ ಶತ್ರು ರಾಜ ಔರಂಗಜೇಬನೂ ಸಹ ಕೊಂಡಾಡಿದ್ದಾನೆಂಬುದು ಶಿವಾಜಿಯ ಸಮರ್ಪಣೆಯ ಸಾಧನೆಗೆ ಸಂದ ಗೌರವವೂ ಹೌದು. ಔರಂಗಜೇಬ ಮನದಾಳದಿಂದ ಹೀಗೆ ಹೇಳಿದ್ದಾನೆ. "ಶಿವಾಜಿ ಒಬ್ಬ ಘನ ಸೇನಾನಿ. ನಾನು ಭಾರತದ ಪ್ರಾಚೀನ ರಾಜ್ಯಗಳನ್ನು ನಾಶಪಡಿಸುತ್ತಾ ಸಾಗಿದಾಗ ಹೊರ ರಾಜ್ಯವೊಂದನ್ನು ಕಟ್ಟುವಲ್ಲಿ ಯಶಸ್ವಿಯಾದವನು ಅವನೊಬ್ಬನೇ. ನನ್ನ ಸೈನ್ಯಗಳು 19 ವರ್ಷದಿಂದ ಅವನ ವಿರುದ್ಧ ಹೋರಾಡುತ್ತಲಿದ್ದರೂ ಅವನ ರಾಜ್ಯ ಬೆಳೆಯುತ್ತಲಿದೆ". ಹೀಗೆ ತನ್ನ ಪ್ರಬಲ ಶತ್ರುವಿನಿಂದಲೇ ಪುರಸ್ಕರಿಸಲ್ಪಟ್ಟ ಶಿವಾಜಿ ಹೋರಾಟ ಅದ್ವಿತೀಯವಲ್ಲದೇ ಮತ್ತೇನು?
-ಎಸ್. ಜಗನ್ನಾಥರಾವ್ ಬಹುಳೆ