ಹಿತ್ತಲಲ್ಲೇ ಹೊಂಚು ಹಾಕುತ್ತಿರುವ ಹಾವುಗಳು!
ಎಲ್ಇಟಿ, ಜೆಯುಡಿ, ಯಾಸಿನ್ ಮಲಿಕ್ ಮತ್ತು ಹಫೀಜ್ ಸಯೀದ್ರ ನಡುವಿರುವ ಸಾಮ್ಯತೆಯೇನು? ಇವರೆಲ್ಲರೂ ಉಗ್ರವಾದಿಗಳು. ಭಾರತದ ನಾಶಕ್ಕೆ ಎಲ್ಲರೂ ಪಣ ತೊಟ್ಟವರು, ಅಲ್ಲದೆ ಬಹುತೇಕ ಬಾರಿ ತಮ್ಮ ಇಂಗಿತವನ್ನು ಸಾಕಾರಗೊಳಿಸಿಕೊಳ್ಳಲು ವಿಧ್ವಂಸಕ ಕೃತ್ಯಕ್ಕಿಳಿದವರು. ಹಾಗಿದ್ದರೆ ಇವರುಗಳ ನಡುವೆ ಇರುವ ಇನ್ನೊಂದು ಸಾಮ್ಯತೆಯೇನು? ಇವರೆಲ್ಲರೂ ದೇಶದ್ರೋಹಿ ಮತ್ತು ಭಯೋತ್ಪಾದನಾ ಮಾಸ್ಟರ್ ಮೈಂಡ್ ಅಫ್ಜಲ್ ಗುರುವಿನ ಸಾವಿಗೆ ಕಂಬನಿ ಮಿಡಿದವರು.
ಹಾಗಾದರೆ ಇನ್ಯಾರು ಇಂಥದ್ದೇ ಸಾಮ್ಯತೆ ಹೊಂದಿದ್ದಾರೋ ಊಹೆ ಮಾಡಿ?
ಆನಂದ್ ಪಟವರ್ಧನ್- ಗುಜರಾತ್ ಗಲಭೆಯ ಕಸಗಳಿಂದ ಮೊದಲ ಬಾರಿಗೆ ರದ್ದಿ ಆಯ್ದ ವ್ಯಕ್ತಿಯೀತ. ಅಲ್ಲದೆ ಆ ಹುಸಿ ಹೊಲಸನ್ನೆಲ್ಲ ಅಮೆರಿಕ ಮತ್ತು ಪ್ರಂಪಚಕ್ಕೆಲ್ಲ ತೋರಿಸಿ ರಾತ್ರೋರಾತ್ರಿ ಶ್ರೀಮಂತನಾದವ.
ಅಂಗನಾ ಚಟರ್ಜಿ- ಪಾಕ್ ಏಜೆಂಟ್ 'ಫೈ' ರಂತಹ ಹಿತರಕ್ಷಕರ ಬೆಂಬಲವಿದ್ದ ಮೇಲೆ, ಈಕೆ ಭಾರತದ ವಿರುದ್ಧ ಯುದ್ಧ ಸಾರುವವರನ್ನು ಬೆಂಬಲಿಸುವುದು ಹೇಗೆ ಆಶ್ಚರ್ಯ ಹುಟ್ಟಿಸೀತು?
ಅರುಂಧತಿ ರಾಯ್- ಈಕೆಗೆ Genocide suzie ಎಂಬ ಪರ್ಯಾಯ ಹೆಸರೇ ಇದೆ. ಹಾಗಾಗಿ ಈ ಬಗ್ಗೆ ಹೆಚ್ಚು ಹೇಳುವ ಅವಶ್ಯಕತೆಯಿಲ್ಲ!
ಅಸ್ಗರ್ ಅಲಿ ಇಂಜಿನಿಯರ್- ಈ 'ಕೋಮು ಗಲಭೆಯ ಇತಿಹಾಸ ಲೇಖಕ'ನಿಗೆ ಇದುವರೆಗೂ ಯಾವುದೇ ಹಿಂಸಾಚಾರದಲ್ಲಿ ಹಿಂದುವೊಬ್ಬ ಸತ್ತದ್ದು ಕಣ್ಣಿಗೆ ಬಿದ್ದಿಲ್ಲ! ಹಾಗಾಗೆ ಈತ ಅಫ್ಜಲ್ ಗುರುವಿಗಾಗಿ ಕಂಬನಿಗರೆದರೆ ಆಶ್ಚರ್ಯಪಡಬೇಕಿಲ್ಲ.
ಬಿನಾಯಕ್ ಸೇನ್- ಭಾರತದ ಮೇಲೆ ಯುದ್ಧ ಸಾರಿರುವ ರಕ್ತದಾಹಿ ಮಾವೋವಾದಿಗಳ ಆರೈಕೆಗೆ ನಿಂತಿರುವ ಮಾನವತಾವಾದಿ ವೈದ್ಯನೀತ.
ಡಿ.ಎನ್.ಝಾ- ಅರುಣ್ ಶೌರಿ ಅವರ 'ಎಮಿನೆಂಟ್ ಹಿಸ್ಟೋರಿಯನ್' ಪುಸ್ತಕದಲ್ಲಿ ಬೆತ್ತಲಾಗಿರುವ ವ್ಯಕ್ತಿ.
ಓಮರ್ ಅಬ್ದುಲ್ಲಾ- ಎಂದಿನಂತೆ ರಾಜಕೀಯ ದೊಂಬರಾಟದಲ್ಲಿ ನಿರತವಾಗಿರುವ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ.
ಪ್ರಶಾಂತ್ ಭೂಷಣ್- ಇಸ್ಲಾಮಿಕ್ ಭಯೋತ್ಪಾದನೆ ಮತ್ತು ಅದಕ್ಕೆ ಭಾರತದಲ್ಲಿ ದೊರೆಯುತ್ತಿರುವ ಬೆಂಬಲಕ್ಕೆ ಕುರುಡಾಗಿರುವ ಮತ್ತು ಭ್ರಷ್ಟಾಚಾರದ ವಿರುದ್ಧ ಹುಸಿ ಹೋರಾಟ ನಡೆಸುತ್ತಿರುವ ವ್ಯಕ್ತಿ.
ವಿನೋದ್.ಕೆ. ಜೋಸ್- ಕ್ಯಾರವಾನ್ ನಿಯತಕಾಲಿಕದಲ್ಲಿ ನರೇಂದ್ರ ಮೋದಿಯನ್ನು ಹಿಟ್ಲರ್ಗೆ ಹೋಲಿಸಿ ಕೊಳಕು ಲೇಖನ ಬರೆದ ಮಹಾನುಭಾವ.
ಇವರಷ್ಟೇ ಅಲ್ಲದೆ, ಫರ್ಜಾನಾ ವರ್ಸಿ, ಹರ್ಷ್ ಮಂದೇರ್, ಇರ್ಫಾನ್ ಹಬೀಬ್, ಸಿದ್ದಾರ್ಥ ವರದರಾಜನ್ ಕೂಡ ಇದೇ ಪಟ್ಟಿಯಲ್ಲಿ ಬರುತ್ತಾರೆ.
ಇಂಥದ್ದೇ ಇನ್ನೊಂದು ಕ್ಷಮಾದಾನ ಅರ್ಜಿಗೆ ಸಹಿ ಹಾಕಿದ ಹೆಸರಾಂತ ವ್ಯಕ್ತಿಗಳ ಪಟ್ಟಿಯತ್ತ ಒಮ್ಮೆ ಗಮನ ಹರಿಸೋಣ-
ಎಸ್. ಆನಂದ್- ಪೂರ್ಣ ಹೆಸರು; ಸ್ಟೀಫನ್ ಆನಂದ್. ಮೊದಲು ಔಟ್ಲುಕ್ನಲ್ಲಿ ಕೆಲಸ ಮಾಡಿ ನಂತರ ಉಛಟ್ಝಡಿಡಡಿಛಟಿ.್ಟ್ಠ್ಜ ಎಂಬ ಹಗೆತನದ ಜಾಲತಾಣದಲ್ಲಿ ತನ್ನ ಲೇಖನಿಯಿಂದ ನಿರಂತರವಾಗಿ ವಿಷಕಾರಿಕೊಂಡಾತ.
ದಿಲಿಪ್ ಡಿಸೋಜ- ಎಸ್. ಆನಂದ್ ಅವರ 'ಪಾಲಿಶ್ ಮಾಡಿದ' ಇನ್ನೊಂದು ರೂಪ.
ಅಚಿನ್ ವೈನಿಕ್- ರಾಮಜನ್ಮಭೂಮಿ ಮಾತುಕತೆಯನ್ನು ಹಳಿ ತಪ್ಪಿಸಲು ಕೈಲಾದಷ್ಟು ಪ್ರಯತ್ನ ಪಟ್ಟವ.
ಈ ಕ್ಷಮಾದಾನದ ಅರ್ಜಿಯಲ್ಲಿ ನಂದಿತಾ ದಾಸ್, ಹರ್ಷ್ ಮಂದೇರ್, ಮಹಾಶ್ವೇತಾ ದೇವಿ ಮತ್ತು ಆಕಾರ್ ಪಟೇಲ್ರ ಸಹಿಗಳೂ ಕೂಡ ರಾರಾಜಿಸಿವೆ.
-----
ಮೊದಲಿಗೆ ಇವರೆಲ್ಲರ ಹೃದಯ ಸಂಸತ್ ಭವನದ ದಾಳಿಯ ಸಂಚುಗಾರ ಅಫ್ಜಲ್ ಗುರುವಿಗಾಗಿ ಮಿಡಿಯಿತು. ಅಫ್ಜಲ್ ಅಮಾಯಕನೆಂದು ಹೇಳುತ್ತಾ, ಆತನನ್ನು ಬಚಾವು ಮಾಡುವುದಕ್ಕಾಗಿ ಯುದ್ಧವನ್ನೇ ಸಾರಿದರು. ಯಾವಾಗ ಸುಪ್ರೀಂ ಕೋರ್ಟ್ ಇವರ ಬಾಯಿಗೆ ಬರೆ ಹಾಕಿತೋ, ಆಗ ತಮ್ಮ ರಣತಂತ್ರವನ್ನು ಬದಲಾಯಿಸಿಕೊಂಡು ಅಫ್ಜಲ್ಗೆ ಕ್ಷಮಾದಾನ ನೀಡುವಂತೆ ಕೂಗಾಡಿದರು. ಒಂದು ವೇಳೆ ಅಫ್ಜಲ್ಗೆ ಕ್ಷಮಾದಾನವೇನಾದರೂ ಸಿಕ್ಕಿಬಿಟ್ಟಿತ್ತೆಂದರೆ, ಆತನಿಗೆ ಯಾವ ಪರಿಯ ಸವಲತ್ತುಗಳು ಸಿಗುತ್ತಿದ್ದವೋ ಯಾರಿಗೆ ಗೊತ್ತು? ಆತ ಎಂಪಿ ಆದರೂ ಆಶ್ಚರ್ಯಪಡಬೇಕಿರಲಿಲ್ಲ. ಆ ನಂತರ ಅವರ ಮೃದು ಹೃದಯಗಳೆಲ್ಲ ಪವಿತ್ರ ಯುದ್ಧದ ಹೆಸರಿನಲ್ಲಿ 26/11ರಂದು ಮುಂಬೈನಲ್ಲಿ ಆಟೋಮೆಟಿಕ್ ಗನ್ ಹಿಡಿದು ಹತ್ತಾರು ಅಮಾಯಕರನ್ನು ಕೊಂದ ಅಜ್ಮಲ್ ಕಸಬ್ಗಾಗಿ ಮಿಡಿಯತೊಡಗಿದವು!
ಉಗ್ರರಿಗೆ ಗಲ್ಲಾಗಬಾರದು ಎಂದು ಸಹಿ ಹಾಕಿದವರೆಲ್ಲರೂ ಭಾರತೀಯರೇ. ಇವರೆಲ್ಲರೂ ಸರ್ಕಾರದಲ್ಲಿ ಅತಿ ಬಲಿಷ್ಠ ಸ್ಥಾನಗಳನ್ನು ಆಕ್ರಮಿಸಿಕೊಂಡವರು ಎಂಬುದನ್ನು ಗಮನಿಸಿ. ವರ್ಷಗಳು ಕಳೆದಂತೆ ಇವರೆಲ್ಲ ತಮ್ಮ ಜಾತ್ಯತೀತ/ಸ್ವಚ್ಛ ಮನಸ್ಸಿನ ಅಥವಾ ಇನ್ನು ಎಂಥೆಂಥದ್ದೋ ಮುಖವಾಡಗಳನ್ನೆಲ್ಲ ಕಳಚಿ ಈಗ ತಮ್ಮ ನೈಜ ರೂಪದ ದರ್ಶನ ಮಾಡಿಸಿದ್ದಾರೆ: ಅದು ಸ್ವಹಿತಾಸಕ್ತಿಗಾಗಿ ದೇಶವನ್ನು ಅಪಾಯಕ್ಕೆ ದೂಡಲು ಒಂದು ಕ್ಷಣವೂ ಯೋಚಿಸದ 'ವಂಚಕರ' ರೂಪ.
ಅದರಲ್ಲೂ ಪಟ್ಟಿಯಲ್ಲಿರುವ ಬಿನಾಯಕ್ ಸೇನ್, ಹರ್ಷ್ ಮಂದೇರ್, ಅಂಗನಾ ಚಟರ್ಜಿ ಮತ್ತು ಅರುಂಧತಿರಾಯ್ರಂಥವರು ಕ್ಷಮಾದಾನ ಅರ್ಜಿಗೆ ಸಹಿಹಾಕಿದ್ದಕ್ಕಿಂತಲೂ, ದೇಶದ ಮೇಲೆ ಹೆಚ್ಚಿನ ಅನಾಹುತಗಳನ್ನು ಎಸಗಿದ್ದಾರೆ ಎನ್ನುವುದು ದುರಂತದ ವಿಷಯ. ಆದರೂ ಅವರ ಮೇಲೆ ಯಾವ ಕ್ರಮವೂ ಜರುಗಿಸಲಾಗುವುದಿಲ್ಲ. ಹಾಗಾಗೆ ನಿರ್ಭಯವಾಗಿ ಅರುಂಧತಿ ರಾಯ್ ಭಾರತದ ಪ್ರಜಾಪ್ರಭುತ್ವವನ್ನು ಹಂಗಿಸುತ್ತಾ ಪತ್ರಿಕೆಯೊಂದರಲ್ಲಿ ತಮ್ಮ ವಿಕೃತಿ ಕಾರಿಕೊಂಡಿದ್ದಾರೆ. ಇನ್ನು ಆ ಲೇಖನ ಸಿದ್ದಾರ್ಥ ವರದರಾಜನ್ ನೇತೃತ್ವದ 'ದಿ ಹಿಂದೂ' ಪತ್ರಿಕೆಯಲ್ಲಿ ಪ್ರಕಟವಾಗಿದ್ದು ಸರಿಯಾಗಿಯೇ ಇದೆ. ಎನ್.ರಾಮ್ ಅವರ ಸಂಪಾದಕತ್ವದಲ್ಲಿ ಅದನ್ನು ಭಾರತೀಯರ ಪತ್ರಿಕೆ ಎಂಬ ಸುಳ್ಳು ಪುಕಾರು ಎಬ್ಬಿಸಲಾಗಿತ್ತು, ಹಾಗಿದ್ದರೆ ವರದರಾಜನ್ ಅವರ ನೇತೃತ್ವದಲ್ಲಿ ಅದನ್ನೀಗ ಪಾಕಿಸ್ತಾನದ ಪ್ರಚಾರ ಯಂತ್ರದ ಅವಿಭಾಜ್ಯ ಅಂಗ ಎಂದು ಕರೆಯಬೇಕೋ?! ಎಲ್ಲಕ್ಕಿಂತ ಮುಖ್ಯವಾಗಿ ಈ ವರದರಾಜನ್, ಗುಲಾಮ್ ನಬಿ ಫೈಯವರ ಗೌರವಾನ್ವಿತ ಅತಿಥಿಗಳ ಪಟ್ಟಿಯಲ್ಲಿ ಜಾಗಪಡೆದಿದ್ದರು ಎನ್ನುವುದನ್ನು ಒಮ್ಮೆ ನೆನಪುಮಾಡಿಕೊಳ್ಳಿ.
ಅದಾಗ್ಯೂ ನಮ್ಮ ದೇಶದ ಪ್ರತಿಷ್ಠಿತ ವ್ಯಕ್ತಿಗಳು ಬೆಂಬಲಿಸುತ್ತಿರುವ ಉಗ್ರರ ಮನಸ್ಥಿತಿಯಾದರೂ ಎಂಥದ್ದು? ಭಾರತವನ್ನು ಇಲ್ಲವಾಗಿಸಬೇಕೆಂದು ಹವಣಿಸುತ್ತಿರುವ ಶತ್ರುರಾಷ್ಟ್ರದಿಂದ ತಯಾರಾದ ಉಗ್ರರವರು. ನಮ್ಮವರು ಅಂತಹ ಉಗ್ರರಿಗೆ ಕ್ಷಮೆ ನೀಡಬೇಕು ಎಂದು ಕೂಗಾಡುತ್ತಾರೆ ಎನ್ನುವುದಕ್ಕಿಂತ ಹೆಚ್ಚು ವಿಪರ್ಯಾಸದ ಸಂಗತಿಯೆಂದರೆ, ಉಗ್ರರನ್ನು ರಕ್ಷಿಸುವ ಭರದಲ್ಲಿ ಅವರುಗಳು ಭಾರತದ ಖಂಡನೆಗೆ ನಿಂತಿರುವುದು.
ಇದೇ ಕಾರಣಕ್ಕಾಗಿಯೇ ಇವರುಗಳು ಉಗ್ರರಿಗಿಂತ ಹೆಚ್ಚು ಅಪಾಯಕಾರಿಗಳು. ಉಗ್ರರ ಸಂಚಿನ ಮೇಲೆ ನಿಗಾ ಇಡಲು ನಮ್ಮಲ್ಲಿ ಸೂಕ್ತ ಯಂತ್ರಗಳಿವೆ. ಆದರೆ ಕಾನೂನಿನ ಕೈಗೆ ನಿಲುಕದಷ್ಟು ಬೆಳೆದಿರುವ ನೂರಾರು ಹರ್ಷ್ ಮಂದೇರ್, ಚಾಟರ್ಜಿಗಳ ಚಟುವಟಿಕೆಗಳ ಮೇಲೆ ಹೇಗೆ ನಿಗಾ ಇಡುವುದು? ಪ್ರಧಾನಿ ಜುಟ್ಟನ್ನು ಹಿಡಿದಿರುವ ಸೋನಿಯಾರಿಂದಲೇ ಹರ್ಷ್ ಮಂದೇರ್ ನೇರವಾಗಿ ಆದೇಶಗಳನ್ನು ಸ್ವೀಕರಿಸುವಾಗ
ಕಾನೂನು ಜಾರಿಗೆ ತರುವ ಸಂಸ್ಥೆಗಳು ಏನು ಮಾಡುತ್ತಿದ್ದವು? ಇದಕ್ಕಿಂತ ಹೆಚ್ಚು ಕಾಡುವ ಪ್ರಶ್ನೆಯೆಂದರೆ, ಅಫ್ಜಲ್ ಅಥವಾ ಕಸಬ್ರ ಸಾವಿಗೆ ಎಲ್ಇಟಿ ಮತ್ತು ಜೆಯುಡಿಗಳ ಜೊತೆ ಸೇರಿ ಕಣ್ಣೀರು ಹಾಕುವವರ ವಿರುದ್ಧ ಸರ್ಕಾರವಾಗಲಿ, ವಿರೋಧಪಕ್ಷಗಳಾಗಲಿ ಅಥವಾ ಸಾರ್ವಜನಿಕ ಜೀವನದಲ್ಲಿ ಉನ್ನತ ಮಟ್ಟದಲ್ಲಿರುವವರಾಗಲಿ ಏಕೆ ಎಚ್ಚೆತ್ತುಕೊಳ್ಳುತ್ತಿಲ್ಲ ಎನ್ನುವುದು. ಅಫ್ಜಲ್ನ ಸಾವಿಗೆ ಈ ಜಿಹಾದಿಗಳು ಅಳುತ್ತಾರೆಂದರೆ, ಅವನು ತಮ್ಮವನೆಂದೇ ಅವರು ಭಾವಿಸುತ್ತಾರೆ ಎಂದೇ ಅರ್ಥವಲ್ಲವೇ? ಇದರಿಂದ ಅರುಂಧತಿ ರಾಯ್ ಮತ್ತು ಇನ್ನಿತರರು ಸಂಸತ್ ದಾಳಿಯ ಬಗ್ಗೆ ಬರೆದ ಪುಸ್ತಕ ಸುಳ್ಳಿನ ಕಂತೆಯೆಂಬುದು ಸಾಬೀತಾದಂತೆ ಆಗುವುದಿಲ್ಲವೇ? ಇಂತಹ ಹುಚ್ಚಾಟದ, ದೌರ್ಭಾಗ್ಯದ, ಅಪಾಯಕಾರಿ ವ್ಯವಹಾರಕ್ಕೆ ನಾವು ಬಂದು ತಲುಪಿದ್ದಾದರೂ ಹೇಗೆ? ಇದಕ್ಕೆ ಉತ್ತರವನ್ನು ನಾನು ನಿಮ್ಮ ಬುದ್ಧಿವಂತಿಕೆಗೇ ಬಿಡುತ್ತೇನೆ. ಆದರೆ ಒಂದು ಪ್ರಶ್ನೆಯಂತೂ ಸ್ಪಷ್ಟವಾಗಿ ಕೇಳಿಕೊಳ್ಳಲೇಬೇಕಿದೆ. ಕಾಂಗ್ರೆಸ್ ಕೇವಲ ಭ್ರಷ್ಟಾಚಾರಕ್ಕಷ್ಟೆ ತನ್ನನ್ನು ಸೀಮಿತಗೊಳಿಸಿಕೊಂಡಿದೆಯೋ ಅಥವಾ ದೇಶದ ಸಾರ್ವಭೌಮತೆಯನ್ನು ಧಕ್ಕೆ ಮಾಡುವ ವಿಧ್ವಂಸಕ ರೂಪ ಪಡೆದಿದೆಯೋ?
ಭಾರತದ ಸಾರ್ವಭೌಮತೆ, ಏಕತೆ ಮತ್ತು ಸಮಗ್ರತೆಯನ್ನು ಕಾಪಾಡುವುದಾಗಿ ಅದು ಪ್ರಮಾಣ ಮಾಡಿರುವುದರಿಂದಾಗಿ ನೇರವಾಗಿ ಅದು ವಿಧ್ವಂಸಕ್ಕೆ ಇಳಿಯಲಾರದು. ಆದರೆ ಅದರ ವರ್ತನೆ ನಿಜಕ್ಕೂ ಮನಸ್ಸಿಗೆ ಆಘಾತ ಮಾಡುವಂತಿದೆ. ಮೊದಲನೆಯದಾಗಿ ಅದು ರಾಷ್ಟ್ರ ವಿರೋಧಿ ಜನರಿಗೆ ನಿರ್ಭಯವಾಗಿ ಅಧಿಕಾರವನ್ನು ನಿರ್ವಹಿಸುವುದಕ್ಕೆ ಅನುವು ಮಾಡಿಕೊಡುತ್ತದೆ. ಯಾವಾಗ ಅವರು ಆ ಅಧಿಕಾರವನ್ನು ಅಷ್ಟೇ ನಿರ್ಭಯವಾಗಿ ದುರುಪಯೋಗಪಡಿಸಿಕೊಂಡು ಸಿಕ್ಕಿಬೀಳುತ್ತಾರೋ, ಆಗ ಅದು ತನಗೇನು ಕಾಣುತ್ತಿಲ್ಲ ಎನ್ನುವಂತೆ ಸುಮ್ಮನಾಗಿಬಿಡುತ್ತದೆ. ದುಷ್ಟ ಶಕ್ತಿಗಳಿಗೆ ಶಿಕ್ಷೆ ಕೊಡದಿದ್ದರೆ ಅವಕ್ಕೆ ಇನ್ನಷ್ಟು ದುಷ್ಟತನ ಮೆರೆಯುವುದಕ್ಕೆ ಪುಷ್ಟಿನೀಡಿದಂತಾಗುತ್ತದಲ್ಲವೇ?
ಅದಾಗಲೇ ದೇಶ ಅಪಾಯದ ಅಂಚಿಗೆ ಬಂದು ಸಿಲುಕಿದೆ. ಆಡಳಿತ ವರ್ಗವಂತೂ ಏನೂ ಆಗಿಲ್ಲವೇನೋ ಎಂಬಂತೆ ಕುಳಿತು ಈ ನಿಟ್ಟಿನಲ್ಲಿ ತಮ್ಮ ಮೌನಸಮ್ಮತಿ ನೀಡುತ್ತಿದೆ. ಇನ್ನು ರಾಷ್ಟ್ರೀಯ ಹಿತಾಸಕ್ತಿಯ ಶರಣಾಗತಿಯ ಹಂತದಲ್ಲಿ ಹೆಜ್ಜೆಯಿಟ್ಟವರಿಗೆ ಬಹಳಷ್ಟು ಪ್ರತಿಫಲಗಳು ಸಿಕ್ಕೇ ಸಿಗುತ್ತವೆ. ವರ್ತಮಾನದ ಘಟನೆಗಳೆಲ್ಲ ಇತಿಹಾಸದೊಂದಿಗೆ ತಾಳೆಯಾಗುತ್ತಿವೆ. ನಿವೃತ್ತ ನ್ಯಾಯಾಧೀಶರು, ಪ್ರಧಾನ ಮಂತ್ರಿಗಳ ಮಾಧ್ಯಮ ಸಲಹೆಗಾರರು, ಪತ್ರಿಕೆಗಳ ಮುಖ್ಯ ಸಂಪಾದಕರು... ಒಟ್ಟಿನಲ್ಲಿ ಇವರೆಲ್ಲರೂ ಸೇರಿ ರಾಷ್ಟ್ರೀಯ ಹಿತಾಸಕ್ತಿಯನ್ನು ಅಪಾಯದ ಆಳಕ್ಕೆ ತಳ್ಳುವಲ್ಲಿ ಪ್ರಯತ್ನ ಮಾಡುತ್ತಲೇ ಇದ್ದಾರೆ.
-ಸಂದೀಪ್ ಬಾಲಕೃಷ್ಣ
deepu.sandeep@gmail.com