ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಕೊಂದು ಕೇಕೆ ಹಾಕಿದವರಿಗೆ ಕುಣಿಕೆಯೇ ಸರಿ!

Srinivasa Murthy VN
Updated On : 21 Feb 2013, 11:30 am

ಅದೊಂದು ಭೀಬತ್ಸ ಕ್ಷಣ. ಮರದ ಟೊಂಗೆಗಳ ಮೇಲೆ ನೇತಾಡುತ್ತಿದ್ದ ಕೈ-ಕಾಲುಗಳು, ರುಂಡವಿಲ್ಲದ ದೇಹ, ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಕರುಳು...
ಅಬ್ಬಾ. ಕ್ರೌರ್ಯ ಎಂಬ ಶಬ್ದ ಆಕಾರ ತಳೆದು ನಮ್ಮ ಮುಂದೆ ನಿಂತಿದೆಯೇನೋ ? ಎಂಬಂತಿದ್ದ ಆ ದೃಶ್ಯವನ್ನು ಕಂಡಾಗ ಆಕ್ರೋಶ, ಕಣ್ಣೀರು, ಅಸಹಾಯಕತೆ. ಸಾಯುವುದಕ್ಕಾಗಿಯೇ ನಾವು ಇಲ್ಲಿಗೆ ಬಂದಿದ್ದೇವೇನೋ ಎಂಬ ನೋವು. ಏಪ್ರೀಲ್ 9, 1993ರಲ್ಲಿ ಕರ್ನಾಟಕ-ತಮಿಳುನಾಡು ರಾಜ್ಯದ ಗಡಿ ಭಾಗದ ಸೋರೆಕಾಯಿಪಟ್ಟಿ ಸಮೀಪದ ಪಾಲಾರ್ ಬಳಿ ವೀರಪ್ಪನ್ ಹಾಗೂ ಆತನ ಸಹಚರರು ನಡೆಸಿದ ನೆಲಬಾಂಬ್ ಸ್ಫೋಟ ಪ್ರಕರಣವನ್ನು ಉಭಯ ರಾಜ್ಯಗಳ ಪೊಲೀಸರು ಮರೆಯುವುದಂತೂ ಅಸಾಧ್ಯ. ಈ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಆರೋಪಿಗಳಿಗೆ ನೇಣು ಜಾರಿ ವಿಚಾರದಲ್ಲಿ 'ಸೌಜನ್ಯ' ಬೇಕು ಎಂದು ಸಮಾಜದ ಒಂದು ವರ್ಗ ಈಗ ಪ್ರತಿಪಾದಿಸುವುದನ್ನು ಕಂಡಾಗ ಬೇಡ ಎಂದರೂ ಆ ದುರ್ಘಟನೆ ಚಿತ್ರ ನನ್ನಲ್ಲಿ ಮತ್ತೆ ಪ್ರತಿಫಲಿಸುತ್ತಿದೆ.
ವೀರಪ್ಪನ್ ಸಹಚರರಿಗೆ ಗಲ್ಲು ಬೇಡ ಎಂದು ವಾದಿಸುವವರ ಎದುರು ಘರ್ಜಿಸಬೇಕೆಂಬ ಸಿಟ್ಟು ಬರುತ್ತಿದೆಯಾದರೂ ಅದರಿಂದ ಏನು ಪ್ರಯೋಜನವಿಲ್ಲ. ಏಕೆಂದರೆ ನಾವು ನಾಗರಿಕ ಸಮಾಜದಲ್ಲಿ ಇದ್ದೇವೆ ಎಂದು ವಾದಿಸುವವರಿಗೆ ಸಶಶ್ತ್ರ ಪಡೆಯ ಸಂಕಟ ಎಂದೂ ಅರ್ಥವಾಗುವುದಿಲ್ಲ. ಗಲ್ಲು ಶಿಕ್ಷೆಯಾಗಿ ಒಂಬತ್ತು ವರ್ಷವಾದರೂ ಈ ಐವರು ಆರೋಪಿಗಳನ್ನು ನೇಣಿಗೇರಿಸದೇ ಇದ್ದದ್ದು ಅಮಾನವೀಯ ಎನ್ನುವವರ ಕಣ್ಣು ತೆರೆಸುವುದಕ್ಕೆ ಅಲ್ಲದಿದ್ದರೂ ಎಸ್‌ಟಿಎಫ್ ಪಡೆಯಲ್ಲಿದ್ದ ಪೊಲೀಸರು ನಿತ್ಯ ಅನುಭವಿಸುತ್ತಿದ್ದ ತಾಕಲಾಟವನ್ನು ದಾಖಲಿಸೋಣ ಎನ್ನಿಸುತ್ತಿದೆ.
ಮಾನವ ಹಕ್ಕು ಹೋರಾಟಗಾರರು ಹಾಗೂ ವೀರಪ್ಪನ್ ಪತ್ನಿ ಮುತ್ತುಲಕ್ಷ್ಮಿ ವಾದಿಸುವ ಹಾಗೆ ಈ ಪ್ರಕರಣದ ಆರೋಪಿಗಳ್ಯಾರು ದನಗಾಹಿಗಳಲ್ಲ, ಬಡಪಾಯಿ ಗ್ರಾಮಸ್ಥರಂತೂ ಅಲ್ಲವೇ ಅಲ್ಲ. ನೆಲಬಾಂಬ್ ಸ್ಫೋಟಿಸಿ 22 ಜನರ ಮಾರಣ ಹೋಮ ನಡೆಸಿದ ನಂತರ ಕೇಕೆ ಹಾಕಿ ಸಂಭ್ರಮ ಪಟ್ಟವರು. ಅಂದು ತಮಿಳುನಾಡು ಪಡೆಯ ದಂಡನಾಯಕತ್ವ ವಹಿಸಿದ್ದ ಎಸ್ಪಿ ರ್ಯಾಂಬೋ ಗೋಪಾಲಕೃಷ್ಣ ಹಾಗೂ ತನ್ನ ಪಾಲಿಗೆ ಸಿಂಹಸ್ವಪ್ನವಾಗುತ್ತಿದ್ದ ಕರ್ನಾಟಕದ ಕೆಲ ಅಧಿಕಾರಿಗಳನ್ನು ಕೊಲ್ಲಬೇಕೆಂದು ವೀರಪ್ಪನ್ ಹೆಣೆದ ವ್ಯವಸ್ಥಿತ ರಣತಂತ್ರ ಇದಾಗಿತ್ತು. ವೀರಪ್ಪನ್ ಜನಾಂಗವಾದ ಪಡಿಯಚ್ಚಿ ಗೌಂಡರ್ ಸಮುದಾಯಕ್ಕೆ ಸೇರಿದ ರ್ಯಾಂಬೋ ಬರಬರುತ್ತಾ ಆತನ ಪಾಲಿಗೆ ಮೃತ್ಯುವಾಗುತ್ತಿದ್ದರು. ಇದರಿಂದ ರೊಚ್ಚಿಗೆದ್ದ ಆತ ಪಾಲಾರ್ ಸಮೀಪದ ಕೊಳ್ತೂರು ಸಂತೆಯಲ್ಲಿ ಒಂದು ಬಿತ್ತಿ ಪತ್ರ ಬರೆಸಿದ್ದ. ' ನಾಡಿನಲ್ಲಿ ಆಡು ಕಳ್ಳತನ ಮಾಡುವ ಗೋಪಾಲಕೃಷ್ಣ, ನೀನು ಒಬ್ಬ ಅಪ್ಪನಿಗೆ ಹುಟ್ಟಿದ್ದಾದರೆ ಕಾಡಿಗೆ ಬಂದು ನನ್ನನ್ನು ಹಿಡಿ' ಎಂದು ಬಿಳಿ ಬಟ್ಟೆಯ ಮೇಲೆ ಕೆಂಪು  ಬಣ್ಣದ ಶಾಯಿಯಲ್ಲಿ ಬರೆದು ಸಂತೆಯಲ್ಲಿ ಅಂಟಿಸಿದ್ದ. ಪ್ರಾಮಾಣಿಕ ಹಾಗೂ ದಕ್ಷ ಅಧಿಕಾರಿಯಾಗಿದ್ದ ರ್ಯಾಂಬೋ ಅವಮಾನದಿಂದ ಕುದಿಯಲಾರಂಭಿಸಿದ್ದರು. ಈ ಘಟನೆಯಾದ ಕೆಲ ದಿನಗಳ ನಂತರ ಕರ್ನಾಟಕ ಪಡೆ ಬೀಡು ಬಿಟ್ಟಿದ್ದ ಎಂಎಂ ಹಿಲ್ಸ್‌ಗೆ ಬಂದಿದ್ದ ರ್ಯಾಂಬೋ ಚರ್ಚೆ ನಡೆಸಿ ವಾಪಸ್ ಆಗುವ ಸಂದರ್ಭದಲ್ಲಿ ಅವರು ತಂದಿದ್ದ ಒಂದು ಪೊಲೀಸ್ ವ್ಯಾನ್ ಕೆಟ್ಟು ನಿಂತಿತ್ತು. ಹೀಗಾಗಿ ನಮ್ಮ ರಾಜ್ಯದ ಪೊಲೀಸ್ ವ್ಯಾನ್ ಕೊಂಡೊಯ್ದರು. ಅದರಲ್ಲಿ 7 ಪೊಲೀಸರು, 4 ಅರಣ್ಯ ಸಿಬ್ಬಂದಿ ಹಾಗೂ ಉಳಿದವರು ನಮಗೆ ಮಾಹಿತಿ ನೀಡುತ್ತಿದ್ದ ನಾಗರಿಕರು.
ನಾವು ಕಾಡಿನಲ್ಲಿ ಕಾರ್ಯಾಚರಣೆ ನಡೆಸಬೇಕಿದ್ದರೆ ಸೋರೆಕಾಯಿಪಟ್ಟಿ ಗ್ರಾಮದಲ್ಲಿ ಹಾದು ಹೋದ ಮಣ್ಣು ರಸ್ತೆಯನ್ನೇ ಬಳಸಬೇಕಿತ್ತು. ಇದು ವೀರಪ್ಪನ್‌ಗೆ ಗೊತ್ತಿತ್ತು. ಹೀಗಾಗಿ ಈ ರಸ್ತೆಯನ್ನೇ ಆತ ಸಂಚಿಗೆ ಬಳಸಿಕೊಂಡ. ನೆಲ್ಲಿಕಾಯಿ ಹಾಗೂ ಇತರೆ ಕಾಡು ಉತ್ಪನ್ನಗಳನ್ನು ಸಾಗಿಸಲು ಬರುತ್ತಿದ್ದ ವಾಹನಗಳು ಇಲ್ಲಿ ಒಡಾಡುತ್ತಿತ್ತು. ಇವುಗಳನ್ನು ತಪ್ಪಿಸಿ ಪೊಲೀಸ್ ವಾಹನವನ್ನೇ ಉಡಾಯಿಸಲು ಆತ ತಂತ್ರ ಹೂಡಿದ್ದ. ಈ ರಸ್ತೆಯಲ್ಲಿ 15 ಮೀಟರ್ ಅಂತರದಲ್ಲಿ 14 ಗುಂಡಿಗಳನ್ನು ತೋಡಿದ್ದ ವೀರಪ್ಪನ್ ಪ್ರತಿ ಗುಂಡಿಯಲ್ಲಿ 10ರಿಂದ 15 ಕೆಜಿಯಷ್ಟು ಸ್ಫೋಟಕ ತುಂಬಿದ್ದ. ಪೊಲೀಸ್ ವಾಹನಗಳು ಈ ಗುಂಡಿ ಮಧ್ಯ ಬಂದಾಗ ಉಡಾಯಿಸುವುದು ಆತನ ಉದ್ದೇಶವಾಗಿತ್ತು. ವೀರಪ್ಪನ್ ಇಂಥದೊಂದು ಹುನ್ನಾರ ನಡೆಸಿದ್ದಾನೆ ಎಂಬ ಸಣ್ಣ ಸುಳಿವೂ ನಮಗೆ ದೊರೆತಿರಲಿಲ್ಲ.
ಇಂದು ಬುದ್ಧಿಜೀವಿಗಳ ಒಂದು ವರ್ಗ ದನಗಾಹಿ ಎಂದು ಪಟ್ಟಕಟ್ಟುತ್ತಿರುವ ಸೈಮನ್ ಈ ದುರ್ಘಟನೆ ತಂತ್ರಗಾರ. ಸ್ಫೋಟ ಕಾರ್ಯಾಚರಣೆಯಲ್ಲಿ ಈತನದ್ದು ಎತ್ತಿದ ಕೈ. ಈ ಭಾಗದಲ್ಲಿ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದ ಕೊಯಮತ್ತೂರಿನ ಓಬಳಶೆಟ್ಟಿ ಎಂಬ ಧನಿಕನ ಕ್ವಾರಿಯಲ್ಲಿ ಈತ ಕಲ್ಲು ಸ್ಫೋಟ ನಡೆಸುತ್ತಿದ್ದ. ನಂತರ ವೀರಪ್ಪನ್ ಗ್ಯಾಂಗ್ ಸೇರಿದ್ದ. 14 ಗುಂಡಿಗಳಲ್ಲಿ ತುಂಬಿದ್ದ ಸ್ಫೋಟಕಕ್ಕೆ ವೈರ್ ಸಂಪರ್ಕ ಕಲ್ಪಿಸಿದ್ದ ಸೈಮನ್ ಹಾಗೂ ಆತನ ಸಹಚರರು ಅಲ್ಲಿಂದ 200 ಅಡಿ ದೂರದಲ್ಲಿ ಕುಳಿತು ಪೊಲೀಸ್ ವಾಹನ ಬಂದ ತಕ್ಷಣ ಸ್ಫೋಟಿಸಿದ್ದರು. ಯಾರ ಸಾವಿಗೆ ವೀರಪ್ಪನ್ ಹಪಹಪಿಸುತ್ತಿದ್ದನೋ ಆ ರ್ಯಾಂಬೋ ಅದೃಷ್ಟವಶಾತ್ ಪಾರಾದರು. ಆದರೆ ಅವರ ದೇಹದ 40 ಕಡೆ ಮೂಳೆ ಮುರಿದಿತ್ತು. ಬದುಕಿದ್ದೆ ಆಶ್ಚರ್ಯ.
ಈ ಘಟನೆ ನಂತರ ನನ್ನನ್ನೂ ಸೇರಿ ಟಾಸ್ಕ್‌ಪೋರ್ಸ್‌ನಲ್ಲಿದ್ದ ಪ್ರತಿಯೊಬ್ಬರು ಸಾವನ್ನು ಎದುರು ನೋಡುತ್ತಿದ್ದೆವು. ನಂತರ ನಡೆದ ಪ್ರತಿ ಕಾರ್ಯಾಚರಣೆ ಸಂದರ್ಭದಲ್ಲಿ ಯಾರು ಮೊದಲು ಬಂದೂಕಿನ ಟ್ರಿಗರ್ ಒತ್ತಿದ್ದರೋ ಅಂಥವರು ಮಾತ್ರ ಬದುಕಿದ್ದಾರೆಯೇ ಹೊರತು ವೀರಪ್ಪನ್ ಯಾರಿಗೂ ಜೀವದಾನ ಮಾಡಿಲ್ಲ ಎಂಬುದನ್ನು ಇಂದು ಮಾನವ ಹಕ್ಕು ಉಲ್ಲಂಘನೆ ಬಗ್ಗೆ ಮಾತನಾಡುವವರು ಮರೆಯಕೂಡದು.
ಆ ಸಮಯದ ತೊಳಲಾಟ, ನೋವನ್ನು ಯಾರ ಬಳಿ ಹೇಳಿಕೊಂಡರೂ ಅರ್ಥವಾಗುವುದಿಲ್ಲ. ಏಕೆಂದರೆ ಸಾವಿನೊಂದಿಗಿನ ಸರಸ ಅನುಭವಿಸಿದವರಿಗೆ ಮಾತ್ರ ಗೊತ್ತು. ಕಾರ್ಯಾಚರಣೆಗೆ ತೆರಳುವ ಸಂದರ್ಭದಲ್ಲೇ ನನಗೆ ಇಬ್ಬರು ಮಕ್ಕಳು ಜನಿಸಿದ್ದರು. ಒಂದಿಲ್ಲೊಂದು ದಿನ ಸಾಯಬಹುದು ಎಂಬ ನಿರ್ಧಾರಕ್ಕೆ ಬಂದಿದ್ದ ನಾನು ಆಗ ಮಾಡಿದ ಮೊದಲ ಕೆಲಸವೇನು ಗೊತ್ತೆ ? 'ವೈಧವ್ಯ' ಸ್ವೀಕರಿಸುವುದಕ್ಕೆ ಇಂದಿನಿಂದಲೇ ಅಣಿಯಾಗು ಎಂದು ನನ್ನ ಪತ್ನಿಯನ್ನು ಸಿದ್ದಗೊಳಿಸಿದ್ದು. ಚಿಕ್ಕಮಕ್ಕಳ ಪಾಲನೆ ಜತೆಗೆ ಏಕಾಂಗಿಯಾಗಿ ಬದುಕು ಎದುರಿಸುವುದಕ್ಕಾಗಿ ನನ್ನ ಪತ್ನಿಗೆ ತರಬೇತಿ ಕೊಟ್ಟಿದ್ದೆ. ಸಮಾಜ ರಕ್ಷಣೆಗಾಗಿ ಸರ್ಕಾರಿ ಸೇವೆಗೆ ಸೇರಿದ ನಾನು ಹಾಗೂ ನನ್ನಂಥ ಅದೆಷ್ಟೋ ಮಂದಿಗೆ ಇದು ಅನಿವಾರ್ಯವೂ ಆಗಿತ್ತು. ತಿಂಗಳಿಗೊಮ್ಮೆ ಮನೆಗೆ ಬರುತ್ತಿದ್ದೆ. ಆಗ ಮನೆಯಲ್ಲಿ ಇರುತ್ತಿದ್ದದ್ದು ಸಂಭ್ರಮವಲ್ಲ. ಈ ಬಾರಿ ಹೋದವರು ಮರಳಿ ಬರುತ್ತಾರೋ ಇಲ್ಲವೋ ಎಂಬ ಆತಂಕ. ಹೀಗಾಗಿ ನನಗಿಷ್ಟವಾದ ಬಗೆ ಬಗೆಯ ತಿನಿಸುಗಳನ್ನು ಮಾಡಿ ಬಡಿಸುತ್ತಿದ್ದರು. ಅಪ್ಪಾ ಇವತ್ತೊಂದು ದಿನ ಇದ್ದು ಹೋಗು ಎಂದು ರೋದಿಸುತ್ತಿದ್ದ ಮಕ್ಕಳು... ಅಂದ ಹಾಗೆ ಇದು ನನ್ನೊಬ್ಬನ ಮನೆಯ ಚಿತ್ರಣವಾಗಿರಲಿಲ್ಲ.
ಈ ಸಂದರ್ಭದಲ್ಲಿ ಇನ್ನೊಂದು ಮರೆಯಲಾಗದ ಘಟನೆಯನ್ನು ಹೇಳಲೇಬೇಕು. ಶಂಕರ ಬಿದರಿಯವರು ನಮ್ಮ ದಂಡ ನಾಯಕರಾಗಿ ಬರುವುದಕ್ಕೆ ಮುನ್ನ ಎಸ್ಪಿ ಹರಿಕೃಷ್ಣ ನೇತೃತ್ವ ವಹಿಸಿದ್ದರು. ಅವರೊಂದಿಗೆ ನನ್ನದು ಆತ್ಮೀಯ ಸಂಬಂಧ. ಜತೆಯಲ್ಲಿ ಉತ್ಸಾಹಿ ತರುಣ ಶಕೀಲ್ ಅಹ್ಮದ್. ನಮ್ಮದು ಸೋದರ ಸಂಬಂಧ. ಶಕೀಲ್ ಅಹ್ಮದ್‌ಗೆ ಎಂಜಿ ರಸ್ತೆಯಲ್ಲಿರುವ ನೀಲಗಿರೀಸ್ ಬೇಕರಿಯಲ್ಲಿ ತಯಾರಿಸುತ್ತಿದ್ದ ವಿಶಿಷ್ಟ ಬಗೆಯ ಸ್ವೀಟ್ ಎಂದರೆ ತುಂಬಾ ಇಷ್ಟ. ಡಬ್ಬಿಯಲ್ಲಿ ತುಂಬಿಸಿಕೊಂಡು ಜತೆಯಲ್ಲಿಟ್ಟುಕೊಂಡಿರುತ್ತಿದ್ದ ಆತ ಕೂಂಬಿಂಗ್ ಸಂದರ್ಭದಲ್ಲಿ ಆಗಾಗ ಅದನ್ನು ತೆಗೆದು ಬಾಯಲ್ಲಿಟ್ಟುಕೊಳ್ಳುತ್ತಿದ್ದ. ಹರಿಕೃಷ್ಣ ಸಾಹೇಬರಿಗೆ ನನ್ನ ಪತ್ನಿ ತಯಾರಿಸುತ್ತಿದ್ದ ಹಂದಿ ಮಾಂಸ ತುಂಬ ಇಷ್ಟ. ಅವರ ಸಾವಿಗೆ ಎರಡು ದಿನ ಮೊದಲು ನಾನು ರಜಾ ಮೇಲೆ ಬೆಂಗಳೂರಿಗೆ ಬಂದಿದ್ದೆ. ಬರುವಾಗ ತಮಗೆ ಇಷ್ಟವಾದ ವಸ್ತುವನ್ನು ಮರೆಯದೇ ತರುವಂತೆ ಇಬ್ಬರು ತಿಳಿಸಿದ್ದರು. ಆದರೆ ವಾಪಸಾಗುವ ಹೊತ್ತಿಗೆ ಇಬ್ಬರೂ ಹೆಣವಾಗಿದ್ದರು. ವೀರಪ್ಪನ್ ಮೋಸದಿಂದ ಅವರ ಹತ್ಯೆ ಮಾಡಿದ್ದ. ನಾನು ತಂದಿದ್ದ ಹಂದಿ ಮಾಂಸ ಹಾಗೂ ಸ್ವೀಟನ್ನು ಅವರಿಬ್ಬರ ಫೋಟೋದ ಮುಂದಿಟ್ಟು ಕಣ್ಣೀರಿಡುವಾಗ ಆದ ಸಂಕಟ ಈಗ ಯಾರಿಗೂ ಅರ್ಥವಾಗುವುದಿಲ್ಲ ಬಿಡಿ.
ಎಸ್‌ಟಿಎಫ್ ಪಡೆ ಮಾನವ ಹಕ್ಕುಗಳ ಉಲ್ಲಂಘನೆ ನಡೆಸಿತು ಎಂಬ ಆರೋಪ ಮಾಡಲಾಗುತ್ತಿದೆ. ಆದರೆ ವಾಸ್ತವವಾಗಿ ನಡೆದಿದ್ದು ಪೊಲೀಸರ ಮಾನವ ಹಕ್ಕು ಉಲ್ಲಂಘನೆ. ಎಸ್‌ಟಿಎಫ್‌ನವರು ಗ್ರಾಮದ ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿದರು ಎಂಬ ಆರೋಪ ಸೃಷ್ಟಿಸಿದವನೇ ವೀರಪ್ಪನ್. ಆತನಿಗೆ ಈ ಉಪಾಯ ಕೊಟ್ಟಿದ್ದು ನಕ್ಕೀರನ್ ಗೋಪಾಲ್ ಎಂಬ ಪತ್ರಕರ್ತ ! ಪೊಲೀಸರ ನೈತಿಕ ಬಲ ಕುಗ್ಗಿಸಲು ಆತ ಈ ಅಸ್ತ್ರ ಬಳಸಿದ್ದ.1995ರಿಂದ ಪೊಲೀಸರ ವಿರುದ್ಧ ಅತ್ಯಾಚಾರ ಕಿರುಕುಳ ಆರಂಭವಾಯ್ತು. ಒಟ್ಟು 52 ದೂರು ದಾಖಲಿಸಲಾಯ್ತು. ಬಿ.ಎ.ಪೂಣಚ್ಚ ಎಂಬ ಇನ್‌ಸ್ಪೆಕ್ಟರ್ ವಿರುದ್ಧ ತಮಿಳುನಾಡಿನಲ್ಲಿ ದೂರು ದಾಖಲಿಸಿ ಐಡೆಂಟಿಫಿಕೇಷನ್ ಪರೇಡ್ ಕೂಡಾ ನಡೆಸಿದರು. ಆದರೆ ದೂರು ನೀಡಿದ ಮಹಿಳೆಗೆ ಆರೋಪ ಹೊತ್ತ ಅಧಿಕಾರಿಯನ್ನು ಗುರುತಿಸಲು ಸಾಧ್ಯವಾಗಲಿಲ್ಲ. ನಮ್ಮ ವಿರುದ್ಧ ದಾಖಲಾದ ದೂರುಗಳ ಸ್ವರೂಪ ಈ ತರದವಾಗಿದ್ದವು.
ಇಂಥ ಡೆತ್ ಟ್ರ್ಯಾಪ್‌ನಲ್ಲಿ ಕೆಲಸ ಮಾಡಿದ ನಾವು ಬದುಕಿರುವಾಗಲೇ ಪಾತಕಿಗಳ ಪರವಾಗಿ ಮಿಡಿಯುವ ಒಂದು ವರ್ಗ ಸೃಷ್ಟಿಯಾಗಿರುವುದನ್ನು ಕಂಡಾಗ ಮಾತೇ ಹೊರಡುತ್ತಿಲ್ಲ. ಮರಣ ದಂಡನೆ ವಿಧಿಸಿ ಒಂಬತ್ತು ವರ್ಷ ಕಳೆದರೂ ಜಾರಿ ಮಾಡಿಲ್ಲ ಎಂಬ ತಾಂತ್ರಿಕ ಕಾರಣ ನೀಡಿ 22 ಜನರ ಮಾರಣ ಹೋಮ ನಡೆಸಿದವರ ಪರ ವಕಾಲತ್ತು ವಹಿಸಲಾಗುತ್ತಿದೆ. ಅವರು ಪ್ರತಿ ದಿನ ಸಾವಿನ ಭಯದಲ್ಲಿ ಬದುಕುತ್ತಿದ್ದಾರೆ ಎಂಬ ವಾದ ಮುಂದೊಡ್ಡುತ್ತಿದ್ದಾರೆ. ಹಾಗಾದರೆ ಅಂದು ಸಾವನ್ನು ಮಡಿಲಲ್ಲೇ ಕಟ್ಟಿಕೊಂಡು ಕರ್ತವ್ಯ ನಿರ್ವಹಿಸಿದ, ಸಮಾಜಕ್ಕಾಗಿ ಸಾವನ್ನಪ್ಪಿದವರ ಶ್ರಮಕ್ಕೆ ಬೆಲೆಯಿಲ್ಲವೇ ? ಕಾನೂನು ಜ್ಞಾನ ಇಲ್ಲದೇ ಅಪರಾಧ ಮಾಡುವವರಿಗೂ ಕ್ಷಮೆ ಇಲ್ಲ ಎಂದು ಅಪರಾಧ ದಂಡ ಪ್ರಕ್ರಿಯೆ ಹೇಳುತ್ತದೆ. ಹೀಗಿರುವಾಗ ನಿಮ್ಮ ಕಾನೂನಿಂದ ಏನು ಮಾಡಲು ಸಾಧ್ಯ ? ಎಂದು ಅಟ್ಟಹಾಸ ಮೆರೆದವರಿಗೆ ಫಾಶಿಯಲ್ಲದೇ ಬೇರೆ ಶಿಕ್ಷೆಯೇಕೆ ?

-ಬಿ.ಬಿ.ಅಶೋಕ್‌ಕುಮಾರ್, ನಿವೃತ್ತ ಎಸಿಪಿ
anisikeprabha@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement