ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ತರಾತುರಿಯ ನೇಮಕಾತಿಗೆ ತರಹೇವಾರಿ ಸಮಸ್ಯೆಗಳು!

Srinivasa Murthy VN
Updated On : 21 Feb 2013, 11:31 am

ಕೊನೆಗೂ, ಪ್ರಾಥಮಿಕ ಶಾಲಾ ಶಿಕ್ಷಕರ ಕೊರತೆಯ ಸಮಸ್ಯೆಯ ಬಗೆಗಿನ ದಿವ್ಯ ನಿರ್ಲಕ್ಷ್ಯದಿಂದ ಎಚ್ಚೆತ್ತುಕೊಂಡಿರುವ ಶಿಕ್ಷಣ ಇಲಾಖೆಯು 4000 ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಮನಸ್ಸುಮಾಡಿದೆ. ಅಷ್ಟೇ ತರಾತುರಿಯಲ್ಲಿ ಅಧಿಸೂಚನೆ ಹೊರಡಿಸಿದ್ದು ಸದ್ಯ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಆದರೆ ಪ್ರಾಥಮಿಕ ಶಾಲಾ ಶಿಕ್ಷಕರ  ನಿವೃತ್ತಿ ಮತ್ತು ಅದರಿಂದ ಉಂಟಾಗುತ್ತಿದ್ದ ಶಿಕ್ಷಕರ ಕೊರತೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಸಾಗುತ್ತಿದ್ದರೂ ಶಿಕ್ಷಣ ಇಲಾಖೆಯು ಅದನ್ನು ಹಾಗೂ ಹೀಗೂ ಹೆಣಗಾಡಿಕೊಂಡು ಸಂಭಾಳಿಸಿಕೊಳ್ಳುತ್ತಾ ಬಂದಿದೆ. ಅದರ ಫಲವೇ ಏಕೋಪಾಧ್ಯಾಯ ಶಾಲೆಗಳು. ಮತ್ತು ಅದೆಷ್ಟೋ ಶಾಲೆಗಳಲ್ಲಿ ಶಿಕ್ಷಕರೇ ಇಲ್ಲದೆ ಆ ಮಕ್ಕಳಿಗೆ ನೆರೆಯ ಶಾಲೆಯ ಶಿಕ್ಷಕರ ಎರವಲು ಬೋಧನೆಯೇ ಗತಿಯಾಗಿರುವುದು. ಆದಾಗ್ಯೂ ನಮ್ಮ ಮಾನ್ಯ ಶಿಕ್ಷಣ ಮಂತ್ರಿಗಳು ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಮಾಡಿಕೊಳ್ಳುವುದಾಗಿ ಕಳೆದ 4-5 ವರ್ಷಗಳಿಂದ ನಿರಂತರವಾಗಿ ಹೇಳಿಕೆ ನೀಡುತ್ತಲೇ ಬಂದಿದ್ದಾರೆ. ಮಂತ್ರಿಗಳ ಬಾಯಿಂದ ಈ ಬಗೆಯ ಹೇಳಿಕೆ ಹೊರಟಾಗಲೆಲ್ಲ ಶಿಕ್ಷಕ ಹುದ್ದೆಯ ನಿರೀಕ್ಷೆಯಲ್ಲಿರುವ ಲಕ್ಷಾಂತರ ನಿರುದ್ಯೋಗಿ ಡಿ.ಇಡಿ ಪದವೀಧರರ, ಉದ್ಯೋಗದ ಕನಸು ಸಾಕಾರಗೊಳ್ಳುವ ಸಾಧ್ಯತೆ ರೆಕ್ಕೆ ಬಡಿಯಲಾರಂಭಿಸಿ ಮತ್ತೆ ಅವರ ಹೇಳಿಕೆಗಳು ಕೇವಲ ಆಶ್ವಾಸನೆಗಳಾಗಿ ಮೂಲೆಗುಂಪಾದಾಗಲೆಲ್ಲ ಅವರು ನಿರಾಶರಾಗಿ ಮತ್ತದೇ ಕಾತುರತೆಯಲ್ಲಿ ಕಿವಿನೆಟ್ಟಗೆ ಮಾಡಿಕೊಂಡು ಕುಳಿತುಕೊಳ್ಳಬೇಕಾದ ಅನಿವಾರ್ಯತೆಯಲ್ಲಿರುತ್ತಿದ್ದರು.
ಅಂತೂ ಶಿಕ್ಷಣ ಮಂತ್ರಿಗಳ ಹೇಳಿಕೆ ಕಾರ್ಯರೂಪಕ್ಕೆ ಬರುವ ಹೊತ್ತಿಗೆ ಸರ್ಕಾರವೇ ಚುನಾವಣೆಯ ಹೊಸ್ತಿಲಿನಲ್ಲಿ ಬಂದು ನಿಂತಿರುವುದು ಕಾಕತಾಳೀಯ(?), ಇದು ವಿಳಂಬವಾದರೂ ಒಳ್ಳೆಯ ನಿರ್ಧಾರವೇ. ಇದು ಚುನಾವಣಾ ತಂತ್ರ, ಮತ ಬೇಟೆಯ ಪ್ರಯತ್ನದ ಭಾಗ ಎಂಬಿತ್ಯಾದಿ ಅಭಿಪ್ರಾಯಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದ್ದರೂ ಅದು ಶಿಕ್ಷಕರ ಕೊರತೆಯಿಂದ ಬೋಧನೆಯಲ್ಲಿ ಉಂಟಾಗುತ್ತಿರುವ ವ್ಯತ್ಯಯದ ಪರಿಣಾಮವಾಗಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಆಗುತ್ತಿರುವ ನಷ್ಟದ ಬಗೆಗಿನ ಕಾಳಜಿಯೋ ಅಥವಾ ಚುನಾವಣಾ ಪೂರ್ವ ಕಸರತ್ತುಗಳ ಒಂದು ಭಾಗವೋ, ಒಟ್ಟಾರೆ ಈ ನಿರ್ಧಾರ ಶಿಕ್ಷಕ ಹುದ್ದೆಯ ನಿರೀಕ್ಷೆಯಲ್ಲಿರುವವರಿಗೆ ಒಂದು ಭರವಸೆಯ ಕಿರಣವನ್ನು ಸ್ಪುರಿಸಿದೆ. ಇದರ ಹಿಂದಿನ ಹಿತಾಸಕ್ತಿ ಅದೇನೇ ಇರಲಿ ಆದರೆ ಇದು ವಿದ್ಯಾರ್ಥಿಗಳ ಶ್ರೇಯೋಭಿವೃದ್ದಿಗೆ ಕಿಂಚಿತ್ತಾದರೂ ಪೂರಕ ಎಂಬುದರಲ್ಲಿ ಎರಡು ಮಾತಿಲ್ಲ.
ಕೆಲವು ದಿನಗಳ ಹಿಂದೆಯಷ್ಟೇ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಸದ್ಯ ಅಸಾಧ್ಯ ಎಂಬ ಬಗ್ಗೆ ಪತ್ರಿಕೆಗಳಲ್ಲಿ ವರದಿ ಪ್ರಕಟವಾಗಿತ್ತು. ಎನ್.ಸಿ.ಇ.ಆರ್.ಟಿ ಯ ನಿಯಮದಂತೆ ಟಿ.ಇ.ಟಿ (ಶಿಕ್ಷಕರ ಅರ್ಹತಾ ಪರೀಕ್ಷೆ)ಯ ಅಂಕಗಳ ಆಧಾರದಲ್ಲಿಯೇ ನೇಮಕ ಪ್ರಕ್ರಿಯೆಗಳು ನಡೆಯ ಬೇಕಾಗಿರುವುದರಿಂದ ಮತ್ತು ಟಿ.ಇ.ಟಿ ಯು ರಾಷ್ಟೀಯ ಮಟ್ಟದ ಕಾಠಿಣ್ಯತೆಯನ್ನು ಹೊಂದಿರಬೇಕಾಗಿರುವುದರಿಂದ ಆ ಬಗ್ಗೆ ಸಿದ್ದತೆಗಳಿಗೆ ಹೆಚ್ಚು ಸಮಯಾವಕಾಶ ಬೇಕಾಗುತ್ತದೆ. ಹಾಗಾಗಿ ಮುಂದಿನ ಒಂದು ವರ್ಷದವರೆಗೆ ನೇಮಕಾತಿ ಪ್ರಕ್ರಿಯೆಗಳು ಅಸಾಧ್ಯ ಎಂಬುದಾಗಿ ಶಿಕ್ಷಣ ಇಲಾಖೆಯೇ ತಿಳಿಸಿತ್ತು. ಆದರೆ ಅದಾದ ಅಲ್ಪ ದಿನಗಳಲ್ಲಿಯೇ ಸೋಜಿಗವೆಂಬಂತೆ ಇಲಾಖೆ ಅರ್ಜಿಗಳನ್ನು ಆಹ್ವಾನಿಸಿಯೇ ಬಿಟ್ಟಿತು. ಅದೂ ಕೂಡ ನೂತನ ಪರೀಕ್ಷಾ ಕ್ರಮದಲ್ಲಿಯೇ.
ಈ ಪರೀಕ್ಷಾ ಕ್ರಮದಲ್ಲಿ ಆಮೂಲಾಗ್ರ ಬದಲಾವಣೆಗಳನ್ನು ಮಾಡಲಾಗಿದ್ದು, ಈ ನೂತನ ಪದ್ದತಿಯಲ್ಲಿ ತಲಾ 30 ಪ್ರಶ್ನೆಗಳಂತೆ 5 ವಿಷಯಗಳಿಂದ ಒಟ್ಟಾರೆ 150 ಬಹು ಆಯ್ಕೆಯ ಪ್ರಶ್ನೆಗಳನ್ನು 300 ಅಂಕಗಳಿಗೆ ನೀಡಲಾಗುತ್ತಿದ್ದು ಪ್ರತೀ ಪ್ರಶ್ನೆ ತಲಾ 2 ಅಂಕಗಳನ್ನು ಹೊಂದಿರುತ್ತದೆ.  ಶಿಶು ಮನೋವಿಜ್ಞಾನ ಮತ್ತು ವಿಕಸನವೆಂಬ ವಿಷಯವನ್ನು ಹೊಸದಾಗಿ ಸೇರ್ಪಡೆಗೊಳಿಸಲಾಗಿದ್ದು ಸಾಮಾನ್ಯ ಜ್ಞಾನ ವಿಷಯವನ್ನು ಕೈಬಿಡಲಾಗಿದೆ. ವಿಜ್ಞಾನ ಮತ್ತು ಸಮಾಜ ವಿಷಯವನ್ನು ಒಟ್ಟಾಗಿ ಪರಿಸರ ಅಧ್ಯಯನ ಎಂಬ ಒಂದೇ ವಿಷಯವಾಗಿ ಪರಿಗಣಿಸಲಾಗಿದೆ. 150 ಪ್ರಶ್ನೆಗಳಿಗೆ ಉತ್ತರಿಸಲು ನೀಡಲಾಗುತ್ತಿದ್ದ 3 ಗಂಟೆಗಳ ಅವಧಿಯನ್ನು ಕೇವಲ ಒಂದೂವರೆ ಗಂಟೆಗಳ ಅವಧಿಗೆ ಇಳಿಸಲಾಗಿದೆ ಹಾಗೆಯೇ ವಿಜ್ಞಾನ ಶಿಕ್ಷಕ ಹುದ್ದೆಗೆ ವಿಜ್ಞಾನ ವಿಷಯದಲ್ಲಿ ಪಿ.ಯು.ಸಿ ಮಾಡಿದವರಿಗೆ ಆದ್ಯತೆ, ಆಂಗ್ಲಭಾಷಾ ಶಿಕ್ಷಕ ಹುದ್ದೆಗಳಿಗೆ ಆದ್ಯತೆ, ಹಿಂದಿ ಭಾಷಾ ಶಿಕ್ಷಕರ ಹುದ್ದೆಗಳಿಗೆ ಹಿಂದಿ ವಿಷಯಕ್ಕೆ ಸಂಬಂಧಿಸಿದ ಹೆಚ್ಚುವರಿ ಕೋರ್ಸ್ ಮಾಡಿದವರಿಗೆ ಆದ್ಯತೆ ನೀಡುತ್ತಿರುವುದು ಹಾಗೆಯೇ TET ಯಲ್ಲಿ 60 ಪ್ರತಿಶತ ಅಂಕ ಗಳಿಸಿದವರನ್ನು ಮಾತ್ರ ನೇಮಕಾತಿಗೆ ಪರಿಗಣಿಸುವ ಕ್ರಮಗಳು ಅರ್ಹ ಅಭ್ಯರ್ಥಿಗಳನ್ನೇ ಆಯ್ಕೆ ಮಾಡಿಕೊಳ್ಳವಲ್ಲಿನ ಅತ್ಯಂತ ಸೂಕ್ತ ಮತ್ತು ಪ್ರಶಂಸಾರ್ಹ ಅಂಶಗಳಾಗಿವೆ.
ಹೊಸತನ ಎಲ್ಲಾ ಕ್ಷೇತ್ರಗಳಲ್ಲಿಯೂ ಅಗತ್ಯ. ಬೋಧನೆಯಲ್ಲಿನ ಕೌಶಲ್ಯ, ಜಾಣ್ಮೆ, ತಂತ್ರಗಾರಿಕೆ, ಬೌದ್ಧಿಕಮಟ್ಟ, ಸಮಯದ ಹೊಂದಾಣಿಕೆ ಮತ್ತು ವಿಷಯ ಜ್ಞಾನಗಳನ್ನು ಒರೆಗೆ ಹಚ್ಚುವಲ್ಲಿ ಇಂತಹ ಪದ್ದತಿಗಳು ಯಶಸ್ವಿಯಾಗಬಲ್ಲವೆನೋ ನಿಜ, ಆದರೆ ಈ ಬಗೆಯ ಭಿನ್ನವಾದ ಪರೀಕ್ಷಾ ಕ್ರಮವನ್ನು ಸಮಗ್ರವಾಗಿ ಅರ್ಥೈಸಿಕೊಂಡು ಅದರಂತೆ ಸಿದ್ಧರಾಗಲು ಸ್ಪರ್ಧಿಗಳಿಗೆ ಸಿಗುವ ಸಮಯಾವಕಾಶ ಅತ್ಯಂತ ಕಡಿಮೆ. ಪ್ರಶ್ನೆಪತ್ರಿಕೆ ಸ್ವರೂಪ, ಪ್ರಶ್ನೆಗಳ ಮಟ್ಟ, ಉತ್ತರಿಸುವಲ್ಲಿನ ಕೌಶಲ್ಯಗಳು, ವಿಧಾನಗಳು, ಪಠ್ಯಕ್ರಮದ ವ್ಯಾಪಕತೆ ಇತ್ಯಾದಿ ವಿಚಾರಗಳ ಬಗ್ಗೆ ಅಭ್ಯರ್ಥಿಗಳಿಗೆ ಹಲವಾರು ಗೊಂದಲಗಳಿವೆ. ಈ ಬಗೆಯ ಮಾದರಿ ಪ್ರಶ್ನೆಪತ್ರಿಕೆಗಳ ಲಭ್ಯತೆ, ಅಧ್ಯಯನ ಸಾಮಾಗ್ರಿಗಳ ದೊರೆಯುವಿಕೆ ಕೂಡ ಕಡಿಮೆ. ಇಂತಹ ಸಂದಿಗ್ಧತೆಯಲ್ಲಿಯೂ ಹುದ್ದೆಯ ಆಕಾಂಕ್ಷಿಗಳು ಬೇರೆ ಬೇರೆ ನೇಮಕಾತಿ ಪರೀಕ್ಷೆಗಳು ಹಾಗೂ ಇತರ ಪರೀಕ್ಷೆಗಳ ಸಿದ್ದತೆಗಳನ್ನು ಬದಿಗೊತ್ತಿ ಅಧ್ಯಯನದಲ್ಲಿ ತೊಡಗಿದ್ದಾರೆ.
ಒಂದಷ್ಟು ಗೊಂದಲಗಳಿದ್ದರೂ ಹೇಗೊ, ಬಹುದಿನಗಳ ನಂತರ ಒದಗಿ ಬಂದಿರುವ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕೆಂಬ ಸದಾಶಯದೊಂದಿಗೆ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಅಧ್ಯಯನದಲ್ಲಿ ನಿರತರಾಗಿರುವ ಅಭ್ಯರ್ಥಿಗಳಿಗೆ ಅಲ್ಲಿಯೂ ನೆಮ್ಮದಿಯಿಲ್ಲ. ಈ ನೇಮಕಾತಿಯ ಬಗ್ಗೆ ಹಲವಾರು ಅಪಸ್ವರಗಳು ಕೇಳಿಬರುತ್ತಿರುವುದರಿಂದ ಈ ನೇಮಕಾತಿ ರದ್ದಾಗುತ್ತದೆಯೋ ಎಂಬ ಆತಂಕದಲ್ಲಿದ್ದಾರೆ. ಹೈದರಾಬಾದ್ ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 371(ಜೆ) ತಿದ್ದುಪಡಿ ವಿಧೇಯಕವನ್ನು ಸಂಸತ್ ಅಂಗೀಕರಿಸಿದ್ದು ಅದಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳು ಪ್ರಗತಿಯಲ್ಲಿರುವುದರಿಂದ ಎಲ್ಲಾ ನೇಮಕಾತಿ ಪ್ರಕ್ರಿಯೆಗಳನ್ನು ನಿಲ್ಲಿಸಿ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಬಗ್ಗೆ ಸದನದಲ್ಲಿ ಚರ್ಚೆಗಳು ನಡೆಯುತ್ತಿವೆ. ಅಲ್ಲದೆ, ಮಾನ್ಯ ಮುಖ್ಯಮಂತ್ರಿಗಳು ಎಲ್ಲಾ ನೇಮಕಾತಿಗಳನ್ನು ರದ್ದುಗೊಳಿಸುವುದಾಗಿ ಭರವಸೆ ನೀಡಿದ್ದಾರೆ. ಈ ವಿಧೇಯಕದನ್ವಯ ಹೈದರಾಬಾದ್ ಕರ್ನಾಟಕ ಜಿಲ್ಲೆಗಳ ವ್ಯಾಪ್ತಿಯ ಹುದ್ದೆಗಳ ಭರ್ತಿಯಲ್ಲಿ ಸ್ಥಳೀಯರಿಗೆ. ಶೇ.90 ರಷ್ಟು ಉದ್ಯೋಗ ಮೀಸಲಾತಿ ನೀಡುವ ಸಾಧ್ಯತೆ ಇರುವುದರಿಂದ ನೇಮಕಾತಿ ಪ್ರಕ್ರಿಯೆಯನ್ನು ನಡೆಸಬಾರದೆಂಬುದು ಹಲವರ ವಾದ. ಈ ಬಗ್ಗೆ ಹೈ-ಕ ಭಾಗದ ಜನರೂ ಕೂಡ ಧ್ವನಿಗೂಡಿಸುತ್ತಿದ್ದಾರೆ. ಆದರೆ ಶೇ.90 ಮೀಸಲಾತಿ ನೀಡುವ ಬಗ್ಗೆ ಸರ್ಕಾರವೇ ಗೊಂದಲದಲ್ಲಿದೆ. ಒಂದೊಮ್ಮೆ ವಿಧೇಯಕದ ನಿಯಮದಂತೆ ಶೇ.90ರ ಸ್ಥಳೀಯ ಮೀಸಲಾತಿಯಲ್ಲಿ ನೇಮಕಾತಿ ಪ್ರಕ್ರಿಯೆ ನಡೆದರೆ ಒಟ್ಟು ಹುದ್ದೆಗಳ ಹೆಚ್ಚು ಪ್ರಮಾಣ ಹೈ-ಕ ಭಾಗಗಳಲ್ಲಿಯೇ ಇರುವುದರಿಂದ ರಾಜ್ಯದ ಇನ್ನುಳಿದ ಅಭ್ಯರ್ಥಿಗಳಿಗೆ ಉದ್ಯೋಗ ದೊರಕಿಸಿಕೊಳ್ಳುವುದು ಕಷ್ಟ ಸಾಧ್ಯವಾಗಲಿದೆ. ತರಾತುರಿಯಲ್ಲಿ ಅಳವಡಿಸಿರುವ ಟಿ.ಇ.ಟಿ ಯ ಬಗ್ಗೆಯೇ ಹಲವಾರು ಸಂದೇಹಗಳನ್ನಿಟ್ಟುಕೊಂಡು ಆತಂಕದಿಂದ ಸಿದ್ದರಾಗುತ್ತಿರುವ ಅಭ್ಯರ್ಥಿಗಳಿಗೆ ಇದೀಗ ನಿಗದಿಪಡಿಸಿದಂತೆಯೆ ಪರೀಕ್ಷೆಯು ನಡೆಯುತ್ತದೋ ಇಲ್ಲವೋ ಎನ್ನುವ ಹೊಸ ಅನುಮಾನ ಕಾಡಲಾರಂಭಿಸಿದೆ. ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಆರಂಭದಿಂದಲು ನಿರಾಶೆಯನ್ನೇ ಬಳುವಳಿಯಾಗಿ ನೀಡುತ್ತಾ ಬಂದಿರುವ ಶಿಕ್ಷಣ ಇಲಾಖೆ ಈ ವಿಚಾರದಲ್ಲಿ ತನ್ನ ನಿಲವನ್ನು ಸ್ಪಷ್ಟಪಡಿಸಿ ಗೊಂದಲಗಳಿಗೆ ತೆರೆ ಎಳೆಯುವುದು ಒಳಿತು.

-ಸಂದೇಶ್ ಎಚ್.ನಾಯ್ಕ, ಮದ್ದೂರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement