ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಭ್ರಷ್ಟಾಚಾರದ ಮಹಾಸೌಧಕ್ಕೆ ಆಧಾರ ಸ್ತಂಭವಾದ ಕಾಟ್ಜು

Srinivasa Murthy VN
Updated On : 21 Feb 2013, 11:30 am

ನಾನಾ...ನೀನಾ...ಎಂಬ ಮಾರ್ಕಂಡೇಯ ಕಾಟ್ಜು ಮತ್ತು ಅರುಣ್ ಜೇಟ್ಲಿ ಅವರ ಜಗಳದಲ್ಲಿ, ಕಾಂಗ್ರೆಸ್ ಮತ್ತು ಬಿಜೆಪಿಯ ವಾಕ್‌ಯುದ್ಧದ ಗದ್ದಲದಲ್ಲಿ ಸರಳ ಸತ್ಯವೊಂದು ಕಣ್ಮರೆಯಾಗಿದೆ. ಭಾರತದಲ್ಲಿನ ಭ್ರಷ್ಟಾಚಾರದ ಮಹಾಸೌಧಕ್ಕೆ ಆಧಾರ ಸ್ತಂಭವಾಗಿ ನಿಂತಿರುವ ವ್ಯವಸ್ಥಿತ ಅಂಶ ಯಾರ ಕಣ್ಣಿಗೂ ಬೀಳುತ್ತಿಲ್ಲ. ಈ ಅಂಶದ ವಿರುದ್ಧ ಹೊರಾಡುವ ಬದಲು, ಅದನ್ನು ಇನ್ನಷ್ಟು ಸದೃಢಗೊಳಿಸುವುದಕ್ಕಾಗಿ ಕಾಟ್ಜು ಅವರನ್ನು ಆಯ್ಕೆ ಮಾಡಲಾಗಿದೆ.
ಕಾಟ್ಜು ನರೇಂದ್ರ ಮೋದಿಯವರ ಬಗ್ಗೆ ಯಾವ ಭಾವನೆ ಹೊಂದಿದ್ದಾರೆ ಎನ್ನುವುದು ಮುಖ್ಯ ಸಮಸ್ಯೆಯಲ್ಲ. ಬದಲಾಗಿ ಅವರು ನ್ಯಾಯಮೂರ್ತಿ ಸ್ಥಾನದಿಂದ ನಿವೃತ್ತಿಯಾಗಿ ಪ್ರೆಸ್ ಕೌನ್ಸಿಲ್‌ನ ಮುಖ್ಯಸ್ಥರಾದಾಕ್ಷಣ ಹೇಗೆ ಭ್ರಷ್ಟಾಚಾರದ ಮಹಾಸೌಧದ ಪ್ರಮುಖ ಸ್ತಂಭಕ್ಕೆ ಇನ್ನಷ್ಟು ಬಲ ಬಂದಿದೆ ಎನ್ನುವುದು. ಜೇಟ್ಲಿ ತಮ್ಮ ಹೇಳಿಕೆಯನ್ನು ತಿರುಚಿದ್ದಾರೆ ಎಂದು ಕಾಟ್ಜು ಹೇಳುತ್ತಾರೆ. ಕಾಟ್ಜು ಅರೆ ನ್ಯಾಯಾಂಗ ಹುದ್ದೆಯನ್ನು ದುರುಪಯೋಗಪಡಿಸಿಕೊಂಡು, ತಮ್ಮನ್ನು ನೇಮಿಸಿದ ಕಾಂಗ್ರೆಸ್‌ಗೆ ಪ್ರತ್ಯುಪಕಾರ ಮಾಡಲು ಹೊರಟಿದ್ದಾರೆ, ಅವರು ಕೂಡಲೇ ಕೆಳಕ್ಕಿಳಿಯಬೇಕು ಎನ್ನುವುದು ಜೇಟ್ಲಿ ಅವರ ವಾದ.
ಆದರೆ ಜೇಟ್ಲಿ ಒಂದು ವಿಷಯ ಅರ್ಥ ಮಾಡಿಕೊಳ್ಳಬೇಕು. ಒಂದು ವೇಳೆ ಕಾಟ್ಜು ನಿಜಕ್ಕೂ ಶಿಷ್ಟಾಚಾರಕ್ಕೆ ಪ್ರಾಮುಖ್ಯತೆ ನೀಡುವ ವ್ಯಕ್ತಿಯಾಗಿದ್ದರೆ, ತಮ್ಮ ನೇಮಕಾತಿಯನ್ನು ಮೊದಲೇ ನಿರಾಕರಿಸಿಬಿಡುತ್ತಿದ್ದರು. ಹಾಗಾಗೆ ಜೇಟ್ಲಿಯ ಮಾತನ್ನು ಕೇಳಿ ಕಾಟ್ಜುರ ಅಂತಃಸಾಕ್ಷಿಗೆ ಪೆಟ್ಟಾಗುವ ಸಂಭವವಂತೂ ಇಲ್ಲ. ಕೇವಲ ಆ ಹುದ್ದೆಯನ್ನು ಸ್ವೀಕರಿಸಿದ್ದಷ್ಟೇ ಅಲ್ಲ, ಮಾಧ್ಯಮಗಳ ಮೇಲೆ ಇನ್ನಷ್ಟು ಕಟ್ಟಪಾಡು ಹೇರಲು ಹೆಚ್ಚಿನ ಅಧಿಕಾರವನ್ನು  ಆಗ್ರಹಿಸಿ, ತಮಗೆ ಕೆಲಸ ಕೊಟ್ಟ ವ್ಯವಸ್ಥೆಯ ಜೊತೆ ಸ್ಪಷ್ಟವಾಗಿ ರಾಜಿ ಮಾಡಿಕೊಂಡಿದ್ದೇನೆಂದು ಅವರು ತೋರಿಸಿಕೊಂಡಿದ್ದಾರೆ.   
ಇನ್ನು ಕಾಟ್ಜು ಅವರನ್ನು ಎಷ್ಟು ಸುಲಭವಾಗಿ ಪ್ರೆಸ್ ಕೌನ್ಸಿಲ್‌ನ ಮುಖ್ಯಸ್ಥನ ಸ್ಥಾನದಲ್ಲಿ ಕೂರಿಸಲಾಯಿತು ಎನ್ನುವುದನ್ನು ನಾವು ಗಮನಿಸಬೇಕು. ಅವರು ಸುಪ್ರೀಂ ಕೋರ್ಟ್‌ನಿಂದ ನಿವೃತ್ತಿಯಾಗಿದ್ದು 20 ಸೆಪ್ಟೆಂಬರ್ 2011ರಂದು, ಅದಾದ 15 ದಿನಗಳ ಒಳಗೆಯೇ ಪ್ರೆಸ್ ಕೌನ್ಸಿಲ್‌ನ ಮುಖ್ಯಸ್ಥರಾಗಿ ಅವರನ್ನು ನೇಮಕ ಮಾಡಲಾಯಿತು. ಆದರೆ ಇದನ್ನು ಓನ್‌ಜಿಸಿ ಅಥವಾ ಕೋಲ್ ಇಂಡಿಯಾದಂತಹ ಪ್ರಮುಖ ಕಂಪೆನಿಗಳ ಮುಖ್ಯಸ್ಥರ ನೇಮಕಾತಿಯ ಸಮಯದೊಂದಿಗೆ ಹೋಲಿಸಿ ನೋಡಿ! ಈ ಎರಡೂ ಕಂಪೆನಿಗಳು ಒಂದು ವರ್ಷದಷ್ಟು ಸಮಯವನ್ನು ಮುಖ್ಯಸ್ಥರಿಲ್ಲದೇ ಕಳೆದವು.  ಕೋಲ್ ಇಂಡಿಯಾದ ಹಂಗಾಮಿ ಚೇರ್‌ಮನ್ ಕೆಲಸ ಕನ್ಫರ್ಮ್ ಆಗುವುದಕ್ಕಿಂತ ಮುಂಚೆಯೇ ನಿವೃತ್ತಿಯಾದರು.  
'ಇಂಡಿಯನ್ ಎಕ್ಸ್‌ಪ್ರೆಸ್‌' ಪ್ರಕಟಿಸಿದ ವರದಿಯೊಂದರ ಪ್ರಕಾರ 2008ರಿಂದ ನಿವೃತ್ತಿಯಾಗಿರುವ ಸುಪ್ರೀಂ ಕೋರ್ಟ್‌ನ 21 ನ್ಯಾಯಾಧೀಶರುಗಳಲ್ಲಿ 18 ಮಂದಿಯನ್ನು ಲಾಭದಾಯಕ ಹುದ್ದೆಗೆ ತ್ವರಿತವಾಗಿ ಕೂರಿಸಲಾಗಿದೆ. ಜಸ್ಟಿಸ್ ದಲ್‌ವೀರ್ ಭಂಡಾರಿಯವರು ಕಚೇರಿಯನ್ನು ಬಿಡುವುದಕ್ಕಿಂತ ಮುಂಚೆಯೇ ಇಂಟರ್ನ್ಯಾಷನಲ್ ಕೋರ್ಟ್ ಆಫ್ ಜಸ್ಟಿಸ್‌ನ ನ್ಯಾಯಾಧೀಶ ಸ್ಥಾನವನ್ನು ಗಿಟ್ಟಿಸಿಕೊಂಡರು. ಇನ್ನು ಕಾಟ್ಜುಗಿಂತ 2 ದಿನದ ನಂತರ ನಿವೃತ್ತರಾದ ಜಸ್ಟಿಸ್ ಮುಕುಂದಮ್ ಶರ್ಮ ಅವರಿಗೆ ತಮಗೆ ಯಾವ ಹುದ್ದೆ ಸಿಗಲಿದೆ ಎನ್ನುವುದು ನಿವೃತ್ತಿಗಿಂತ 4 ತಿಂಗಳಿನ ಮೊದಲೇ ಖಾತ್ರಿಯಾಗಿತ್ತು! ಇದು ಸಾಲದೆಂಬಂತೆ, ಖುದ್ದು ಸುಪ್ರೀಂ ಕೋರ್ಟೇ ನಿವೃತ್ತಿಯ ನಂತರದ ಕೆಲಸ ಸೃಷ್ಟಿಸುವಲ್ಲಿ ತೊಡಗಿದೆ. ರಾಜ್ಯದ ಅಥವಾ ಕೇಂದ್ರದ ಮಾಹಿತಿ ಆಯೋಗಗಳಲ್ಲಿ ಮುಖ್ಯಸ್ಥರಾಗಿ ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್‌ನ ನ್ಯಾಯಾಧೀಶರನ್ನು ನೇಮಕ ಮಾಡಬೇಕು ಎಂದು ಅದು ತೀರ್ಪಿತ್ತಿದೆ.
ಇನ್ನು ನಮ್ಮ ದೇಶದಲ್ಲಿ ಸೃಷ್ಟಿಯಾಗಿರುವ ಭ್ರಷ್ಟ ವ್ಯವಸ್ಥೆ, ಹಣ, ಅಧಿಕಾರ ಮತ್ತು ಸ್ಥಾನದ ನಡುವಿನ ಸಂಬಂಧವನ್ನು ಗಮನಿಸಿದಾಗ ನಿವೃತ್ತಿಯ ನಂತರ ಅಂತಹ ಹುದ್ದೆಗೆ ಏರಿದವರ ಉದ್ದೇಶವನ್ನು ಅನುಮಾನದಿಂದ ನೋಡದೇ ಇರಲಾಗದು. ಈ ವಿಷಯ ಕಾಟ್ಜು ಅವರಿಗೂ ಅನ್ವಯಿಸುತ್ತದೆ. ಹಗರಣಗಳಿಂದ ಹೈರಾಣಾಗಿದ್ದ ಸರ್ಕಾರವನ್ನು ಗೋಳುಹೊಯ್ದುಕೊಳ್ಳುತ್ತಿದ್ದ ಮಾಧ್ಯಮಗಳನ್ನು ಹಿಡಿತದಲ್ಲಿಡಲೆಂದೇ ಸೃಷ್ಟಿಯಾದ ಹುದ್ದೆಯನ್ನು ಅವರು ಅಲಂಕರಿಸಿದ್ದಾರೆ. ಆ ಹುದ್ದೆಯನ್ನು ಒಪ್ಪಿಕೊಳ್ಳುವಾಗ ಅವರ ಮನಸ್ಸಿನಲ್ಲಿ ನೈತಿಕ ಸಂಘರ್ಷ ಏರ್ಪಡಲೇ ಇಲ್ಲ.
ಇಂತಹ ವರ್ತನೆಯನ್ನು ತಡೆಗಟ್ಟಲು ಇರುವ ಏಕೈಕ ಪರಿಹಾರವೆಂದರೆ ಅಧಿಕಾರಿಗಳು ಮತ್ತು ನ್ಯಾಯಾಧೀಶರು ನಿವೃತ್ತಿಯಾದ ಎರಡು ವರ್ಷಗಳವರೆಗಾದರೂ ಯಾವುದೇ ಸರ್ಕಾರಿ ಹುದ್ದೆಗಳನ್ನು ಅಲಂಕರಿಸದಿರುವಂತಹ ನಿಯಮಗಳನ್ನು ತರುವುದು. ಹಾಗೆ ನೋಡಿದರೆ, ಅಂತಹ ಹುದ್ದೆಗಳನ್ನು ಅಲಂಕರಿಸಲು ನಿವೃತ್ತ ನ್ಯಾಯಾಧೀಶರುಗಳೇ ಬೇಕೇ? ಭಾರತದಲ್ಲಿ ಬೇರೆ ಅರ್ಹ ವ್ಯಕ್ತಿಗಳೇ ಇಲ್ಲವೇ?
ಸಮಸ್ಯೆ ಕೇವಲ ನ್ಯಾಯಾಧೀಶರುಗಳ ವಿಷಯಕ್ಕಷ್ಟೇ ಸೀಮಿತವಾಗಿಲ್ಲ. ರಾಜಕೀಯ ನಿರ್ಧಾರಗಳಿಗೆ ನೇರ ಸಂಪರ್ಕ ಹೊಂದಿರುವ ಸರ್ಕಾರಿ ಅಧಿಕಾರಿಗಳಿಗೂ ಇದು ಅನ್ವಯವಾಗುತ್ತದೆ. ಅವರೂ ಇದೇ ಪಟ್ಟಿಯಲ್ಲಿ ಬರುತ್ತಾರೆ. ರಾಜಕಾರಣಿಗಳು ಅಧಿಕಾರ ಬಲದಿಂದ ತಮ್ಮ ಆಪ್ತರನ್ನು ಎಲ್ಲಾ ರೀತಿಯಿಂದಲೂ ಬೆಳೆಸುತ್ತಾ ಹೋಗುತ್ತಾರೆ. ಅವರನ್ನು ತಡೆಯುವ ಶಕ್ತಿ ಅಧಿಕಾರಿಗಳಿಗಿದೆ, ಆದರೆ ಅವರು ಹಾಗೆ ಮಾಡುವುದಿಲ್ಲ. ಹಾಗಾಗಿ ರಾಜಕಾರಣಿಗಳ ಕೃಪಾಕಟಾಕ್ಷದಿಂದ ನಿವೃತ್ತಿಯ ನಂತರ ಕೇಂದ್ರ ಸರ್ಕಾರದ ಪ್ರಮುಖ ಸಂಸ್ಥೆಯಲ್ಲಿ ಅವರಿಗೊಂದು ಸ್ಥಾನ ಮೀಸಲಾಗಿಬಿಡುತ್ತದೆ. ಹೀಗೇ ಆಗುತ್ತಾ ಹೋದರೆ ಈ ವ್ಯವಸ್ಥೆಯಿಂದ ಒಳ್ಳೆಯ ಆಡಳಿತ ನಿರೀಕ್ಷಿಸುವುದಾದರೂ ಹೇಗೆ?
ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯಲ್ಲಿ ಈ ಕುರಿತು ಇನ್ನೊಂದು ವರದಿ ಪ್ರಕಟವಾಗಿತ್ತು. 'ಎಣಿಕೆಗೂ ಮೀರಿದ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು ನಿವೃತ್ತಿಯ ನಂತರ ಹೆಚ್ಚು ಹೈರಾಣಿಲ್ಲದ ಲಾಭಪ್ರದ ಕೆಲಸ ಗಿಟ್ಟಿಸಿಕೊಂಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಾದ ಅಂತಹ 90 ನೇಮಕಾತಿಗಳ ವಿವರವನ್ನು ಗಮನಿಸಿದಾಗ. ನಿವೃತ್ತಿಯ ನಂತರ ಇವರುಗಳೆಲ್ಲ ಕೇಂದ್ರ ನಾಗರಿಕ ಸೇವಾ ಆಯೋಗ, ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗ, ಕೇಂದ್ರ ಮಾಹಿತಿ ಆಯೋಗ, ಗ್ರಾಹಕ ವಿವಾದ ನಿವಾರಣಾ ಆಯೋಗಗಳಂತಹ ಸಂಸ್ಥೆಗಳ ಮುಖ್ಯಸ್ಥ ಸ್ಥಾನಗಳನ್ನು ಗಿಟ್ಟಿಸಿಕೊಂಡಿರುವ ವಿಷಯ ತಿಳಿಯಿತು. ಇನ್ನು ಕೆಲವು ಸಂದರ್ಭಗಳಲ್ಲಂತೂ ಅಧಿಕಾರಿಗಳನ್ನು ಭರ್ತಿ ಮಾಡಿಕೊಳ್ಳುವುದಕ್ಕೋಸ್ಕರವೇ ಹೊಸ ಹುದ್ದೆಗಳನ್ನು ಸೃಷ್ಟಿಸಲಾಗಿದೆ!' ಎಂದದು ಹೇಳಿದೆ.  
ಇಷ್ಟೇ ಅಲ್ಲ, ಸಾರ್ವಜನಿಕ ವಲಯದ 21 ಕಂಪನಿಗಳಿಗೆ ನೇಮಕವಾದ 133 ನಿರ್ದೇಶಕರಲ್ಲಿ, 46 ಮಂದಿ ಮಾಜಿ ಅಧಿಕಾರಿಗಳೇ ಇದ್ದಾರೆ. ತಾವು ದುಡಿದ ಸರ್ಕಾರದಡಿಯಲ್ಲೇ ನಿವೃತ್ತಿಯಾದ ನಂತರವೂ ಅವರು ಕೆಲಸ ಮಾಡಲು ಮುಂದಾಗಿದ್ದಾರೆ.
'ನಿವೃತ್ತಿಯ ನಂತರವೂ ನ್ಯಾಯಾಧೀಶರುಗಳಿಗೆ ಬೇರೇ ಲಾಭದಾಯಕ ಕೆಲಸಗಳು ಸಿಕ್ಕೇ ಸಿಗುತ್ತವೆ' ಎಂದು ಹೇಳುತ್ತಾರೆ ಸುಪ್ರೀಂ ಕೋರ್ಟ್‌ನ ನಿವೃತ್ತ ಜಡ್ಜ್ ಕೆ.ಜಿ. ಬಾಲಕೃಷ್ಣ. ಆದರೆ ಅವಕ್ಕಿಂತ, ಹೆಚ್ಚು ಅಧಿಕಾರ ತಂದುಕೊಡುವ ದೆಹಲಿಯಲ್ಲಿನ ಉದ್ಯೋಗಗಳತ್ತಲೇ ಎಲ್ಲರ ಗಮನ. ಒಟ್ಟಿನಲ್ಲಿ ಭ್ರಷ್ಟಾಚಾರವನ್ನೇ ಬಂಡವಾಳವಾಗಿಸಿಕೊಂಡಿರುವ ವ್ಯವಸ್ಥೆಯೊಂದಿಗೆ ರಾಜಿ ಮಾಡಿಕೊಂಡ ಕಾಟ್ಜು ನೈತಿಕತೆಯ ಪರೀಕ್ಷೆಯಲ್ಲಿ ಸೋತಿದ್ದಾರೆ ಎನ್ನುವುದಂತೂ ಸ್ಪಷ್ಟ!

-ಆರ್.ಜಗನ್ನಾಥನ್
ಸಂಪಾದಕರು, ಫಸ್ಟ್‌ಪೋಸ್ಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement