ಸ್ಫೋಟ ನೀಡುತ್ತಿರುವ ಸಂದೇಶ ಇದೇ ನೆಲದ ಸೈತಾನರಿವರು!
ಒಂದಿನಿತೂ ಭಯವಿಲ್ಲದಂತೆ ಉಗ್ರರು ಮತ್ತೆ ತಮ್ಮ ಕಾರ್ಯದಲ್ಲಿ ಸಫಲರಾಗಿದ್ದಾರೆ. ಫೆಬ್ರವರಿ 22ರ ಹೈದರಾಬಾದ್ ಬಾಂಬ್ ಸ್ಫೋಟದ ನಂತರ ಹುಟ್ಟಿಕೊಳ್ಳುವ ಪ್ರಶ್ನೆಗಳು:
ಈ ಕೃತ್ಯದ ಹಿಂದಿರುವವರು ಯಾರು ಮತ್ತು ಏಕಾಗಿ?
ಯಾವ ಥರದ ಸ್ಫೋಟಕಗಳನ್ನು ಬಳಸಲಾಗಿತ್ತು, ಅದರ ಮೂಲ ಯಾವುದು?
ಈ ಸ್ಫೋಟದಲ್ಲಿ ವಿದೇಶಿ ಕೈವಾಡ ಇದೆಯೇ?
ಹೈದರಾಬಾದ್ನಲ್ಲೇ ಏಕೆ ಮತ್ತು ಸ್ಫೋಟಕ್ಕೆ ಆರಿಸಿಕೊಂಡ ಕಾಲದ ಹಿನ್ನೆಲೆ ಏನು?
ಈ ಎಲ್ಲ ಪ್ರಶ್ನೆಗಳನ್ನು ಕೇಳಿಕೊಂಡ ನಂತರ ದೊಡ್ಡ ಚಿತ್ರಣ ದೊರಕಿಸಿಕೊಳ್ಳುವ ನಿಟ್ಟಿನಲ್ಲಿ ಮೂಡುವ ಮತ್ತೊಂದಿಷ್ಟು ಪ್ರಶ್ನೆಗಳು:
ರಾಷ್ಟ್ರೀಯ ಭದ್ರತೆಗೆ ಈ ಸ್ಫೋಟ ಉಂಟುಮಾಡಬಹುದಾದ ಪರಿಣಾಮಗಳೇನು?
ಇಂಥ ಉಗ್ರಕೃತ್ಯಗಳನ್ನು ಚಿಗುರಿನಲ್ಲೇ ಕಿತ್ತುಹಾಕುವುದಕ್ಕೆ ಅನುಸರಿಸಬೇಕಾದ ಮಾರ್ಗವೇನು?
ಹೈದರಾಬಾದ್ ಸ್ಫೋಟವು ಉಗ್ರರ ಸಿದ್ಧತಾ ಸಾಮರ್ಥ್ಯದ ಬಗ್ಗೆ ಏನನ್ನಾದರೂ ಅರುಹುತ್ತಿದೆಯೇ?
ತನಿಖೆ ನಡೆಯುತ್ತಲೇ ಇವೆಲ್ಲಕ್ಕೆ ಉತ್ತರಗಳು ಬಿಚ್ಚಿಕೊಳ್ಳಬಹುದು. ಹಾಗಲ್ಲದೇ ಈ ಹಿಂದಿನ ಸ್ಫೋಟಗಳ ವಿಷಯದಲ್ಲಿ ಆದಂತೆ ಯಾವುದಕ್ಕೂ ಉತ್ತರಗಳು ದೊರಕದೇ ಹೋಗಬಹುದು.
ಈ ಲೇಖನ ಅಚ್ಚಿಗೆ ಹೋಗುವವರೆಗೂ ಹೈದರಾಬಾದ್ ಸ್ಫೋಟವನ್ನು ತಾವೇ ಮಾಡಿದ್ದು ಎಂಬುದಾಗಿ ಯಾವ ಉಗ್ರ ಸಂಘಟನೆಗಳೂ ಹೊಣೆ ಹೊತ್ತುಕೊಂಡಿಲ್ಲ. ಆದರೆ ನಿಷೇಧಿತ ಸಿಮಿ (ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾ)ದಿಂದ ರೂಪುಗೊಂಡಿರುವ ಇಂಡಿಯನ್ ಮುಜಾಹಿದೀನ್ (ಐಎಮ್) ಉಗ್ರ ಸಂಘಟನೆಯೇ ಈ ಕೃತ್ಯ ನಡೆಸಿರಬಹುದು ಎಂಬ ಅನುಮಾನಕ್ಕೆ ಪುಷ್ಟಿ ನೀಡುವ ಸಾಕಷ್ಟು ಅಂಶಗಳು ಕಣ್ಣ ಮುಂದೆ ತೆರೆದುಕೊಳ್ಳುತ್ತಿವೆ.
ಐಎಮ್ನ ಚಹರೆಯನ್ನು ಬಿಂಬಿಸುವ ಅದರ ಜಾಯಮಾನಗಳ ಗುರುತು ಸ್ಫೋಟದ ವಿಧಾನಗಳಲ್ಲಿ ಕಂಡುಬರುತ್ತಿದೆ. ಅವುಗಳನ್ನು ಹೀಗೆ ಗುರುತಿಸಬಹುದು: ಜನ ಸಂಚಾರ ತೀವ್ರವಾಗಿರುವ ಅವಧಿಯಲ್ಲೇ ಬೈಕ್ ಮತ್ತು ಟಿಫಿನ್ ಬಾಕ್ಸ್ಗಳಲ್ಲಿ ಬಾಂಬ್ ಇಡುವುದು, ಸುಲಭ ಗುರಿಗಳನ್ನೇ ಆಯ್ದುಕೊಳ್ಳುವುದು, ಯಾರನ್ನು ಕೊಲ್ಲುತ್ತಿದ್ದೇವೆ ಅನ್ನುವುದಕ್ಕಿಂತ ಎಷ್ಟು ಹೆಚ್ಚಿನ ಜನರನ್ನು ಕೊಲ್ಲಬಹುದು ಎಂಬುದರ ಮೇಲೆ ಗಮನ, ಸ್ಥಳೀಯವಾಗಿ ದೊರೆಯುವ ಪದಾರ್ಥಗಳನ್ನೇ ಬಳಸಿಕೊಂಡು ಬಾಂಬ್ ತಯಾರಿಸಿರುವುದು- ಇವೆಲ್ಲವೂ ಐಎಮ್ನ ಸ್ಪಷ್ಟ ಗುರುತುಗಳು!
ಬಹುಶಃ ಈ ಹೈದರಾಬಾದ್ ಸ್ಫೋಟಕ್ಕೆ ಬಳಕೆಯಾಗಿರುವುದು ಅಮೋನಿಯಮ್ ನೈಟ್ರೇಟ್ನಂಥ ಸುಲಭವಾಗಿ ಲಭ್ಯವಿರುವ ಪದಾರ್ಥ. ಇಂಡಿಯನ್ ಮುಜಾಹಿದೀನ್ನ ಉಗ್ರರು ದೇಶದ ಇತರ ಭಾಗಗಳಲ್ಲಿ ಈ ಹಿಂದೆ ನಡೆಸಿದ ವಿಧ್ವಂಸಕ ಕೃತ್ಯಗಳಲ್ಲೆಲ್ಲ ಬಳಕೆಯಾಗಿರುವುದು ಇದೇ ರಸಾಯನಿಕವೇ. ಬಾಂಬ್ ಸ್ಫೋಟಗೊಂಡ ಸ್ಥಳದಲ್ಲಿ ಅದಕ್ಕೆ ಪೂರಕ ಸಾಧನ ನಿರ್ಮಿತಿಗಳೇನೂ ಕಂಡುಬಂದಿಲ್ಲವಾದ್ದರಿಂದ ಆರ್ಡಿಎಕ್ಸ್ನಂಥ ಉನ್ನತ ಮಟ್ಟದ ಸ್ಫೋಟಕಗಳು ಬಳಕೆಯಾಗಿಲ್ಲ ಎಂಬುದು ನಿಚ್ಚಳ. ಸುಲಭವಾಗಿ ದೊರೆಯುವ ರಸಗೊಬ್ಬರದಲ್ಲೇ ಸ್ಫೋಟಕವೊಂದನ್ನು ತಯಾರಿಸಿ ತಮ್ಮ ವಿಧ್ವಂಸಕ ಕೃತ್ಯದಿಂದ ಇಡೀ ಜಗತ್ತಿನ ಗಮನ ಸೆಳೆಯಬಹುದು ಎಂದಾದರೆ ಉಗ್ರರೇಕೆ ನಾಜೂಕಿನ ಮಾರ್ಗಗಳನ್ನು ತಮ್ಮದಾಗಿಸಿಕೊಳ್ಳುತ್ತಾರೆ?
ಹೈದರಾಬಾದ್ನ ಸ್ಫೋಟವು ಇದೇ ನೆಲದಲ್ಲಿ ತಯಾರಾಗಿರುವ ಉಗ್ರ ಸಂಘಟನೆ ಮಾಡಿದ ಕಾರ್ಯವೇ ಹೊರತು ವಿದೇಶಿ ಶಕ್ತಿಯಲ್ಲ ಎಂಬ ಸಂದೇಶವನ್ನು ಕೊಡುವ ಎಲ್ಲ ಪ್ರಯತ್ನಗಳೂ ಇಲ್ಲಿ ಕಾಣುತ್ತಿವೆ. ಇದು ಐಎಮ್ ಅನುಸರಿಸುವ ಎಂದಿನ ತಂತ್ರ. ವಿದೇಶಿ ಶಕ್ತಿಗಳನ್ನು ನೇರವಾಗಿ ಆಪಾದಿಸುವುದಕ್ಕೆ ಆಗಬಾರದು ಎಂಬಂತೆ ಇರುತ್ತದೆ ಈ ಉಗ್ರರ ನಡೆ. ಫೆಬ್ರವರಿ 9ರಂದು ಗಲ್ಲಿಗೇರಿದ ಅಫ್ಜಲ್ ಗುರು ಮರಣಕ್ಕೆ ಪ್ರತೀಕಾರವಾಗಿ ಈ ಧಾಳಿ ನಡೆದಂತಿದೆ. ಹೈದರಾಬಾದ್ನಲ್ಲಿ ತನಗೆ ಸಾಧ್ಯವಾದದ್ದನ್ನು ಭಾರತದ ಇತರ ಭಾಗಗಳಲ್ಲಿ ಅದರಲ್ಲೂ ಹೊಸ ದೆಹಲಿ ಹಾಗೂ ಮುಂಬೈಗಳಲ್ಲಿ ಮರು ಪ್ರದರ್ಶನ ಮಾಡುವುದಕ್ಕೆ ಉಗ್ರರು ಬಯಸಿಯೇ ಇರುತ್ತಾರೆ. ಉಗ್ರರು ಹೇಗೆ ಇಂಥ ಧಾಳಿಗಳಿಗೆ ಸನ್ನದ್ಧ ಸ್ಥಿತಿಯಲ್ಲೇ ಇದ್ದಾರೆ ಎಂಬುದು ಇದರಿಂದ ತಿಳಿದು ಬರುವ ಅಂಶ.
ಬರುವ ಕೆಲವಾರ ಹಾಗೂ ತಿಂಗಳುಗಳಲ್ಲಿ ಇದೇ ನಮೂನೆಯ ಸ್ಫೋಟ ಭಾರತದ ಇತರ ನಗರಗಳಲ್ಲೂ ಆಗದಿದ್ದರೆ ಸ್ಥಳೀಯ ಪೊಲೀಸ್ ವೈಫಲ್ಯಕ್ಕೆ ಇದು ಕನ್ನಡಿಯಾಗುತ್ತದೆ. ತೆಲಂಗಾಣಕ್ಕೆ ಸಂಬಂಧಿಸಿದ ಪ್ರತಿಭಟನೆಗಳ ಕಡೆಗೇ ಅತಿ ಹೆಚ್ಚಿನ ಗಮನವನ್ನು ನೀಡುವುದರ ಮೂಲಕ ರಾಷ್ಟ್ರೀಯ ಭದ್ರತೆಯ ದೊಡ್ಡ ಆಯಾಮವನ್ನು ಅವಗಣಿಸಿದ ತಪ್ಪಿಗೆ ಆಂಧ್ರ ಪ್ರದೇಶ ಪೊಲೀಸರು ಉತ್ತರದಾಯಿ ಆಗುತ್ತಾರೆ.
ಇದೇ ನೆಲದಲ್ಲಿ ತಲೆ ಎತ್ತುತ್ತಿರುವ ಉಗ್ರರನ್ನು ಸದೆ ಬಡೆಯುವುದು ಹೇಗೆ ಎಂಬ ಬಹುದೊಡ್ಡ ಪ್ರಶ್ನೆಯನ್ನು ಇಂಥ ಧಾಳಿಗಳು ಭದ್ರತಾ ಪಡೆಯ ಮುಂದೆ ಇರಿಸುತ್ತವೆ. ಭಾರತದ ಮಣ್ಣಿನಲ್ಲೇ ರೂಪುಗೊಳ್ಳುತ್ತಿರುವ ಉಗ್ರರ ತಲೆನೋವು ಶುರುವಾಗಿ ವರ್ಷಗಳೇ ಕಳೆದುಹೋಗಿವೆ. ಪಾಕಿಸ್ತಾನದ ಐಎಸ್ಐಗೆ ಸಹಾಯ ಹಸ್ತವಾಗಿ ಕಾರ್ಯ ನಿರ್ವಹಿಸುತ್ತಿರುವ ಐಎಮ್, 2008ರಲ್ಲಿ ಸಾಲು ಸಾಲು ಆಘಾತಗಳನ್ನೇ ನೀಡಿತು. ಜೈಪುರ- ಮೇ 13, 68 ಸಾವು; ಬೆಂಗಳೂರು- ಜುಲೈ 25, 2 ಸಾವು; ಅಹಮದಾಬಾದ್- ಜುಲೈ 26, 50ಕ್ಕೂ ಹೆಚ್ಚು ಸಾವು. ಅದೃಷ್ಟವಶಾತ್ ಜುಲೈ 27-29ರ ಸಮಯದಲ್ಲಿ ಸೂರತ್ನಲ್ಲಿ ಉಗ್ರಕೃತ್ಯವೊಂದನ್ನು ತಡೆಯಲಾಯಿತು. ಮೂರು ದಿನಗಳಲ್ಲಿ ಪತ್ತೆಮಾಡಿ ನಿಷ್ಕ್ರಿಯಗೊಳಿಸದ ಬಾಂಬ್ಗಳ ಸಂಖ್ಯೆ 22!
ಇಂಥ ಎಲ್ಲ ದಾಳಿಗಳಲ್ಲಿ ಐಎಸ್ಐ ಕಡೆ ಬೊಟ್ಟು ಮಾಡುವುದಕ್ಕೆ ಭಾರತಕ್ಕೆ ಸೂಕ್ತ ಆಧಾರಗಳು ಸಿಗಲಿಲ್ಲ. ಅದರರ್ಥ ಐಎಸ್ಐ ಭಯೋತ್ಪಾದನೆಯನ್ನು ನಿಲ್ಲಿಸಿದೆ ಅಂತಲ್ಲ. ಭಾರತದಲ್ಲೇ ಇರುವವರಿಂದ ಉಗ್ರಕೃತ್ಯಗಳನ್ನು ಮಾಡಿಸುವ ಕುತಂತ್ರವನ್ನು ತನ್ನದಾಗಿಸಿಕೊಳ್ಳುವಮಟ್ಟಿಗೆ ಅದು ಇನ್ನಷ್ಟು ಬಲಿಷ್ಠಗೊಂಡಿದೆ ಎಂದಾಯಿತು. ಹೈದರಾಬಾದ್ ಸ್ಫೋಟದಲ್ಲೂ ಇಂಡಿಯನ್ ಮುಜಾಹಿದೀನ್ನ ಕೈವಾಡ ಇರುವುದು ಸಾಬೀತಾದರೆ ಭಾರತದ ಗುಪ್ತಚರ ವಿಭಾಗಕ್ಕೆ ಅದು ಪ್ರಬಲ ಎಚ್ಚರಿಕೆ ಗಂಟೆ. ಏಕೆಂದರೆ ತಾವು ಐಎಮ್ನ ಬೆನ್ನು ಮುರಿಯುವುದಕ್ಕೆ ಸಫಲರಾಗಿದ್ದೇವೆ ಎಂದು ಕೆಲಕಾಲಗಳ ಹಿಂದೆ ಏಜೆನ್ಸಿಗಳು ಹೇಳಿದ್ದವು. ಐಎಮ್ 2005ರಿಂದಲೇ ಸಕ್ರಿಯವಾಗಿದ್ದರೂ 2007ರ ನಂತರ ನಿರಂತರವಾಗಿ ಹಾಗೂ ದೊಡ್ಡಮಟ್ಟದಲ್ಲಿ ಸಾರ್ವಜನಿಕ ಪ್ರದೇಶಗಳಲ್ಲಿ ಸ್ಫೋಟಗಳನ್ನು ನಡೆಸಿ ಭಾರತದ ಕಾನೂನು ವ್ಯವಸ್ಥೆಯನ್ನೇ ಅಲುಗಾಡಿಸುತ್ತಿದೆ ಐಎಮ್.
ಒಂದೊಮ್ಮೆ ಹೈದರಾಬಾದ್ ಸ್ಫೋಟ ನಡೆಸಿದ್ದು ಐಎಮ್ ಸಂಘಟನೆಯೇ ಹೌದಾಗಿದ್ದರೆ, 2011ರ ಸೆಪ್ಟೆಂಬರ್ನಲ್ಲಿ ಅಮೆರಿಕದ ಗೃಹಖಾತೆ ಇದನ್ನು ಉಗ್ರ ಸಂಘಟನೆ ಪಟ್ಟಿಗೆ ಸೇರಿಸಿದ ನಂತರದಲ್ಲಿ ನಡೆಸಿದ ಬೃಹತ್ ವಿಧ್ವಂಸಕ ಕಾರ್ಯ ಇದಾಗುತ್ತದೆ. ಐಎಮ್ ಪಾಕಿಸ್ತಾನದ ಲಷ್ಕರೆ ತಯ್ಬಾದಂಥ ಉಗ್ರ ಸಂಘಟನೆಗಳ ಸಂಪರ್ಕದಲ್ಲಿದೆ ಎಬುದನ್ನು ಅಮೆರಿಕ ಹೇಳಿದೆ. ಇದನ್ನೇ ಅದಕ್ಕೂ ಮೊದಲಿನಿಂದ ನಮ್ಮ ಭದ್ರತಾ ಏಜೆನ್ಸಿಗಳು ಪ್ರತಿಪಾದಿಸುತ್ತ ಬಂದಿದ್ದವು.
ಆದರೆ ಅಮೆರಿಕವು ಐಎಮ್ ಅನ್ನು ಉಗ್ರ ಸಂಘಟನೆ ಪಟ್ಟಿಯಲ್ಲಿ ಸೇರಿಸಿರುವುದು ಅಂಥ ಪರಿಣಾಮವೇನನ್ನೂ ಉಂಟುಮಾಡಿಲ್ಲ. ಹೀಗೆ ನಿಷೇಧಗೊಂಡಂಥವು ಅಮೆರಿಕದ ಮಣ್ಣಿನಲ್ಲಿ ಕಾರ್ಯ ನಿರ್ವಹಿಸುವಂತಿಲ್ಲ. ನಿಷೇಧಿತ ಸಂಘಟನೆಯೊಂದಿಗೆ ಒಡನಾಟವಿರುವವರಿಗೆ ಅಮೆರಿಕ ಪ್ರವಾಸ ನಿರಾಕರಿಸಲಾಗುತ್ತದೆ. ಅಂಥ ಸಂಘಟನೆಗಳ ಬ್ಯಾಂಕ್ಖಾತೆ ಸ್ಥಗಿತಗೊಳಿಸಲಾಗುತ್ತದೆ. ಆದರೆ ಐಎಮ್ ಸಂಘಟನೆ ಅಮೆರಿಕದಲ್ಲಿ ಅಸ್ತಿತ್ವ ಹೊಂದಿಯೂ ಇಲ್ಲ; ಅದರ ಬ್ಯಾಂಕ್ ಖಾತೆಗಳೂ ಅಲ್ಲಿಲ್ಲ. ಅಲ್ಲದೇ ಉನ್ನತಮಟ್ಟದ ಸ್ಫೋಟಕಗಳನ್ನು ಬಳಸದೇ ಇರುವ ಅದರ ನಡೆಯಿಂದಲೇ ಅದರ ನೆಟ್ಟಗಿಲ್ಲದ ಆರ್ಥಿಕ ಪರಿಸ್ಥಿತಿಯೂ ಸ್ಪಷ್ಟವಾಗುತ್ತದೆ.
ಭಾರತವನ್ನು ಸಾವಿರ ಚೂರುಗಳನ್ನಾಗಿಸಬೇಕು ಎಂಬ ತನ್ನ ಉದ್ದೇಶವನ್ನು ಪಾಕ್ ಮಿಲಿಟರಿ ವ್ಯವಸ್ಥೆಯು ನೇಪಥ್ಯದಲ್ಲೇ ನಿಂತು ನೆರವೇರಿಸಿಕೊಳ್ಳುವುದಕ್ಕೆ ಇಂಡಿಯನ್ ಮುಜಾಹಿದೀನ್ ಸಾಧನವಾಗುತ್ತಿದೆ.
- ರಾಜೀವ್ ಶರ್ಮಾ
ರಕ್ಷಣಾ ಪರಿಣತ