ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಹೋರಾಟದ ನಾಯಕನಿಗೆ ಈ ಪರಿಸ್ಥಿತಿ ಏಕೆ?

Parashurama
Updated On : 26 Feb 2013, 10:14 am

ನಾಲ್ಕು ದಶಕಗಳ ಹೋರಾಟಕ್ಕೆ ಸಿಕ್ಕ ಫಲವೇನು ? ಕಟ್ಟಿ ಬೆಳಿಸಿ ಮತ್ತು ಅಧಿಕಾರಕ್ಕೆ ತಂದ ಪಕ್ಷದಿಂದ ಕೊನೆಗೆ ದೊರೆತ ಉಡುಗೊರೆಯಾದರೂ ಏನು ? ಇಷ್ಟಕ್ಕೂ ಅವರಿಗೆ ರಾಜಕೀಯದಲ್ಲಿ ಇಂತಹ ಸ್ಥಿತಿಯಾದರೂ ಏಕೆ ಬಂತು..?
ಮಾಜಿ ಮುಖ್ಯಮಂತ್ರಿ, ಕರ್ನಾಟಕ ಜನತಾಪಕ್ಷದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ನೋಡಿದಾಗ ಇಂತಹ ಪ್ರಶ್ನೆಗಳು ಮನದಾಳದಲ್ಲಿ ಮೂಡುತ್ತವೆ.
ಇಂದು ಯಡಿಯೂರಪ್ಪ ಅವರ 71ನೇ ಜನ್ಮದಿನ. ಈ ಸಂದರ್ಭದಲ್ಲಿ ರಾಜ್ಯ ರಾಜಕಾರಣದಲ್ಲಿ ಅವರು ನಡೆಸಿದ ಹೋರಾಟ, ಇದುವರೆಗೆ ಕಂಡ ಏಳು, ಬೀಳು, ನೆನಪಿಗೆ ಬಂತು. ಆ ಎಲ್ಲದರ ಸಿಂಹಾವಲೋಕನದ ಬಳಿಕ ಯಡಿಯೂರಪ್ಪ ಅವರಿಗೆ ಇಂತಹ ಪರಿಸ್ಥಿತಿ ಏಕೆ ಬಂತು ? ಅದಕ್ಕೆ ಕಾರಣರು ಯಾರು ? ಎಂಬ ಪ್ರಶ್ನೆ ಕಾಡತೊಡಗಿತು.
ಯಡಿಯೂರಪ್ಪ ಅವರೇನೂ ರಾತ್ರೋ ರಾತ್ರಿ ನಾಯಕರಾದವರಲ್ಲ. ನಾಯಕ ಪಟ್ಟ ಅಲಂಕರಿಸಲು ಅವರು ಬೆವರು ಹರಿಸಿದ್ದರು. ಲೆಕ್ಕವಿಲ್ಲದಷ್ಟು ಹೋರಾಟಗಳನ್ನು ನಡೆಸಿದ್ದರು. ಈ ಮೂಲಕ ಜನರ ಮೆಚ್ಚುಗೆ ಗಳಿಸಿದ್ದರು. ರಾಜಕೀಯದಲ್ಲಿ ತಾವು ಬೆಳೆಯುವುದರ ಜೊತೆಗೆ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಊರೂರು ತಿರುಗುತ್ತಾ ಬಿಜೆಪಿಯನ್ನು ಭದ್ರವಾಗಿ ಸಂಘಟಿಸಿದರು. ಅಷ್ಟೇ ಅಲ್ಲ, ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ರಾಜ್ಯದಲ್ಲಿ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯುವಂತೆ ಮಾಡಿ ತಾವು ಮುಖ್ಯಮಂತ್ರಿಯೂ ಆದರು.
ಹಟವಾದಿ, ಹೋರಾಟಗಾರ
ಅಂದಹಾಗೆ ಹಟಗಾರ, ಹೋರಾಟಗಾರರಾದ ಯಡಿಯೂರಪ್ಪ ಅವರ ರಾಜಕೀಯ ಬದುಕು ಹೂವಿನ ಹಾಸಿಗೆ ಆಗಿರಲಿಲ್ಲ. ಅವರ ದಾರಿಯಲ್ಲಿ ಮುಳ್ಳುಗಳೇ ಹೆಚ್ಚಾಗಿದ್ದವು. ಅದರೂ ಮಂಡ್ಯ ಜಿಲ್ಲೆಯ ಬೂಕನಕೆರೆಯಿಂದ ಶಿಕಾರಿಪುರಕ್ಕೆ ಬಂದು, ಪುರಸಭೆ ಸದಸ್ಯತ್ವದಿಂದ ಮುಖ್ಯಮಂತ್ರಿ ಕುರ್ಚಿವರೆಗೆ ಅವರು ಹೋಗಿದ್ದು ಸಾಧನೆಯೇ ಸರಿ. ಅದಕ್ಕಾಗಿ ಅವರು ಪ್ರತಿ ಹಂತದಲ್ಲೂ ಹೋರಾಟ ನಡೆಸಿದ್ದು ಸುಳ್ಳಲ್ಲ.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ತಾಲೂಕು ಕಾರ್ಯನಿರ್ವಾಹಕರಾಗಿ 1970ರಲ್ಲಿ ತಮ್ಮ ರಾಜಕೀಯ ಜೀವನ ಆರಂಭಿಸಿದ ಯಡಿಯೂರಪ್ಪ ಅವರು, 1970ರಲ್ಲಿ ಶಿಕಾರಿಪುರ ಪುರಸಭೆಯ ಸದಸ್ಯರಾದರು. 1977ರಲ್ಲಿ ಆದೇ ಪುರಸಭೆಗೆ ಆಧ್ಯಕ್ಷರೂ ಆದರು. ಬಳಿಕ ಮೂರೇ ವರ್ಷದಲ್ಲಿ ಬಿಜೆಪಿಯ ತಾಲೂಕು ಘಟಕದ ಅಧ್ಯಕ್ಷರಾದ ಅವರು, ಸಕ್ರಿಯ ರಾಜಕಾರಣಕ್ಕೆ ಪ್ರವೇಶ ಪಡೆದುಕೊಂಡರು. ಅಂದಿನಿಂದ ಅವರ ರಾಜಕೀಯ ಬದುಕು ಹೋರಾಟದ ಕಡೆಗೆ ತಿರುಗಿತು.  ಶಿಕಾರಿಪುರದ ಅಂದಿನ ಶಾಸಕ ಮತ್ತು ತೋಟಗಾರಿಕೆ, ಬಂಧೀಖಾನೆ ಸಚಿವರಾಗಿದ್ದ ಕೆ. ವೆಂಕಟಪ್ಪ ವಿರುದ್ಧ ಹೋರಾಟಕ್ಕೆ ಮುಂದಾದ ಯಡಿಯೂರಪ್ಪ ಅವರ ಮೇಲೆ ಹಲ್ಲೆ ನಡೆಯಿತು. ಆದರೆ ಎದೆಗುಂದಲಿಲ್ಲ. ಹೋರಾಟ ನಿಲ್ಲಿಸಲಿಲ್ಲ. ಹೀಗಾಗಿಯೇ ಅವರು ಬಿಜೆಪಿಯ ಪಡಸಾಲೆಯಲ್ಲಿ ಮುಂಚೂಣಿಗೆ ಬಂದು ನಿಂತರು. ಇದರ ಪರಿಣಾಮ 1980ರಲ್ಲಿ ಪಕ್ಷದ ಅಧ್ಯಕ್ಷರಾದರು.
ಹೋರಾಟದ ಎರಡನೇ ಹಂತ
ಅಲ್ಲಿಂದ ಶುರುವಾಯಿತು ಯಡಿಯೂರಪ್ಪ ಅವರ ಹೋರಾಟದ ಎರಡನೇ ಹಂತ. ಅಧ್ಯಕ್ಷರಾಗಿ ಅವರ ಮೊದಲ ಹೋರಾಟ ಆರಂಭವಾಗಿದ್ದು ಕೂಲಿಗೆ ಕಾಳು ಯೋಜನೆ ವಿರುದ್ಧ. ಯೋಜನೆಯಲ್ಲಿ ಭಾರಿ ಅವ್ಯವಹಾರ ಆಗಿದೆ ಎಂದು ಆರೋಪಿಸಿ ಚಳವಳಿ ನಡೆಸಿದ ಯಡಿಯೂರಪ್ಪ ಅವರು, ಸರ್ಕಾರ ಸಿಐಡಿ ತನಿಖೆಗೆ ವಹಿಸುವವರೆಗೆ ಸುಮ್ಮನೆ ಕೂರಲೇ ಇಲ್ಲ. ನಂತರ ಅವರು ಜೀತಾದಾಳುಗಳ ಪರವಾಗಿ ಧ್ವನಿ ಎತ್ತಿದರು. 1,700 ಜೀತದಾಳುಗಳೊಂದಿಗೆ ಶಿಕಾರಿಪುರದಿಂದ ಶಿವಮೊಗ್ಗದವರೆಗೆ 1981ರಲ್ಲಿ ಪಾದಯಾತ್ರೆ ನಡೆಸಿದರು. ಅವರ ಈ ಹೋರಾಟ ರಾಜ್ಯ ರಾಜಕಾರಣದಲ್ಲಿ ಚರ್ಚೆಗೆ ವಸ್ತುವೂ ಆಯಿತು. 
ಇಂದಿನಂತೆ ರಾಜಕೀಯದಲ್ಲಿ ಹಣದ ಪ್ರಭಾವ ಇರಲಿಲ್ಲ. ಜನರ ಆಶೀರ್ವಾದವೇ ಆಗ ರಾಜಕಾರಣಿಗಳ ಪಾಲಿಗೆ ಶ್ರೀರಕ್ಷೆ ಆಗಿತ್ತು. ಅದನ್ನು ಗಳಿಸಿದ್ದರಿಂದಲೇ ಯಡಿಯೂರಪ್ಪ ಅವರು 1983ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಎದುರಾಳಿ ವೆಂಕಟಪ್ಪ ಅವರನ್ನು ಸೋಲಿಸಿ ಶಾಸಕರಾದರು. ಈ ಫಲಿತಾಂಶ ಅವರ ರಾಜಕೀಯದ ದಿಕ್ಕನ್ನೇ ಬದಲಿಸಿತು. ಸದನದ ಒಳಗೂ ಹೋರಾಟ ಮುಂದುವರಿಸಲು ದಾರಿ ಮಾಡಿಕೊಟ್ಟಿತು.  ಶಿಕಾರಿಪುರದಲ್ಲಿ ತಾವು ಗೆಲ್ಲುವುದರ ಜೊತೆಗೆ ಮುಂದಿನ ಚುನಾವಣೆಗಳಲ್ಲಿ ಜಿಲ್ಲೆಯ ನಾನಾ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೂ ಯಡಿಯೂರಪ್ಪ ಕಾರಣರಾದರು. ಯಾತ್ರೆಗಳಿಗೂ ಯಡಿಯೂರಪ್ಪ ಅವರಿಗೂ ಭಾರಿ ನಂಟು.  1987ರಲ್ಲಿ ರಾಜ್ಯದಲ್ಲಿ ಭೀಕರ ಬರಗಾಲ ಎದುರಾದಾಗ ಅವರು ನಡೆಸಿದ ಪಾದಯಾತ್ರೆ, 1988ರಲ್ಲಿ ರೈತರಿಗಾಗಿ ಬಸವನ ಬಾಗೇವಾಡಿಯಿಂದ ಬೆಂಗಳೂರು ವರೆಗೆ ನಡೆಸಿದ ಜಾಥಾ, ಮತ್ತೆ ಬಸವ ಕಲ್ಯಾಣದಿಂದ ಬೆಂಗಳೂರು ಮತ್ತು ಬನವಾಸಿಯಿಂದ ಬೆಂಗಳೂರು ವರೆಗೆ ಜಾಥಾ ನಡೆಸಿದ್ದರು.
ಅಷ್ಟೇ ಅಲ್ಲ, 1994ರಲ್ಲಿ ಗ್ರಾಮ ರಾಜ್ಯ ಉಳಿಸಿ ಹೋರಾಟ ಕೈಗೆತ್ತಿಕೊಂಡು ಶಿವಮೊಗ್ಗದಿಂದ ಬೆಂಗಳೂರು ವರೆಗೆ 18 ದಿನ ಪಾದಯಾತ್ರೆ ನಡೆಸಿದ್ದರು. ಅರಣ್ಯ ಭೂಮಿಯಲ್ಲಿ ಬಗರ್‌ಹುಕುಂ ಸಾಗುವಳಿ ಮಾಡುತ್ತಿದ್ದ ರೈತರನ್ನು ಒಕ್ಕಲೆಬ್ಬಿಸದಂತೆ ಒತ್ತಾಯಿಸಿ ಶಿಕಾರಿ ಪುರದಿಂದ ಶಿವಮೊಗ್ಗದವರೆಗೆ ಪಾದಯಾತ್ರೆ ನಡೆಸಿದ್ದು ಮಾತ್ರವಲ್ಲ, ಮೂರು ದಿನ ಹಗಲು-ರಾತ್ರಿ ಧರಣಿ ನಡೆಸಿ ಸರ್ಕಾರದ ಬೆವರಿಳಿಸಿದ್ದರು. ಪಡಿತರ ಚೀಟಿ ವಿಚಾರದಲ್ಲೂ ಇದೇ ರೀತಿ ಧರಣಿ ಮಾಡಿದ್ದರು ಯಡಿಯೂರಪ್ಪ.
ಇನ್ನು ಶಾಸಕರಾಗಿ, ಪ್ರತಿಪಕ್ಷ ನಾಯಕರಾಗಿ ವಿಧಾನಸಭೆಯಲ್ಲಂತೂ ಅವರು ನಡೆಸಿದ ಹೋರಾಟಗಳಿಗೆ ಲೆಕ್ಕವೇ ಇಲ್ಲ. ಜನಪರ ವಿಚಾರಗಳು ಬಂದಾಗ ಧ್ವನಿ ಎತ್ತದೇ ಇರುತ್ತಿರಲಿಲ್ಲ. ಅವರು ಮಾತಿಗೆ ನಿಂತರೆ ಗುಡುಗು, ಸಿಡಿಲಿನ ಆಬ್ಬರ. ಇದರಿಂದಾಗಿ ಆಡಳಿತ ನಡೆಸುವವರೂ ತತ್ತರ ಎಂಬಂತಹ ಸ್ಥಿತಿ ಇತ್ತು. ಒಟ್ಟಿನಲ್ಲಿ ಹೋರಾಟ ಜನ್ಮಸಿದ್ಧ ಹಕ್ಕು ಎಂಬಂತೆ ಇದ್ದವರು ಯಡಿಯೂರಪ್ಪ.
ಅಧಿಕಾರದ ಬಾಗಿಲವರೆಗೆ
ಇಂತಹ ಹೋರಾಟಗಳ ಫಲ ಅವರನ್ನು ಅಧಿಕಾರದ ಬಾಗಿಲವರೆಗೆ ಕರೆತಂದಿತು. ಪರಿಣಾಮ 2007ರಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾದರು. ಆದರೆ, ಒಪ್ಪಂದದ ಪ್ರಕಾರ ಜೆಡಿಎಸ್ ಅಧಿಕಾರ ಬಿಟ್ಟುಕೊಡಲಿಲ್ಲ. ಇದನ್ನೂ ಯಡಿಯೂರಪ್ಪ ಅವರು ಹೋರಾಟಕ್ಕೆ ಅಸ್ತ್ರವಾಗಿ ಮಾಡಿಕೊಂಡರು. ಜೆಡಿಎಸ್‌ನ ವಚನಭ್ರಷ್ಟತೆ ಕುರಿತು ಊರೂರು ತಿರುಗಿ ಹೇಳಿದರು. ಅಂದುಕೊಂಡಂತೆ ರಾಜ್ಯದ ಮತದಾರರು ಬಿಜೆಪಿಯ ಕೈ ಹಿಡಿದರು. ಜೊತೆಗೆ ಯಡಿಯೂರಪ್ಪ ಅವರು 2008ರಲ್ಲಿ ರಾಜ್ಯದ ಮುಖ್ಯಮಂತ್ರಿಯಾದರು. ಅಧಿಕಾರದಲ್ಲಿದ್ದಾಗ ಹಲವಾರು ಜನಪರ ಯೋಜನೆಗಳನ್ನು ಅವರು ಜಾರಿಗೆ ತಂದರು. ಪ್ರತ್ಯೇಕ ಕೃಷಿ ಬಜೆಟ್, ರಾಜ್ಯದ ಸಮಗ್ರ ಅಭಿವೃದ್ಧಿಗೆ ವಿಷನ್-2020, ಶೇ.1ರ ಬಡ್ಡಿ ದರದಲ್ಲಿ ರೈತರಿಗೆ ಸಾಲ ಸೌಲಭ್ಯ, ಭಾಗ್ಯಲಕ್ಷ್ಮಿ , ಭೂ ಚೇತನ, ಜನಸ್ಪಂದನ, ಆಸರೆ ಯೋಜನೆಗಳ ಜಾರಿ, ವೃದ್ಧರು, ವಿದವೆಯರು, ವಿಕಲಚೇತನರ ಪಿಂಚಣಿ ಏರಿಕೆ, ಸಾವಯವ ಕೃಷಿ ಮಿಷನ್ ಸ್ಥಾಪನೆ, ಹಾಲಿಗೆ 2 ರೂ.ಗಳ ಪ್ರೋತ್ಸಾಹ ಧನ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಬೈಸಿಕಲ್, ಹೀಗೆ ಹಲವಾರು ಯೋಜನೆಗಳು ಆವರ ಆಡಳಿತದ ಅವಧಿಯಲ್ಲಿ ಅನುಷ್ಠಾನಕ್ಕೆ ಬಂತು.
ಅಧಿಕಾರ ಉಳಿಸಿಕೊಳ್ಳಲೂ ಹೋರಾಟ
ಕನಸುಗಳ ಮೂಟೆಯನ್ನು ಕಟ್ಟಿಕೊಂಡು ಆಡಳಿತ ಆರಂಭಿಸಿದ ಯಡಿಯೂರಪ್ಪ ಅವರು ಅಕ್ಷರಶ: ಮುಳ್ಳುಗಳ ಮೇಲೆ ನಿಂತರು. ಏಕೆಂದರೆ, ಪಕ್ಷವನ್ನು ಅಧಿಕಾರಕ್ಕೆ ತರಲು ನಾಲ್ಕು ದಶಕಗಳ ಕಾಲ ಎಷ್ಟು ಹೋರಾಟ ನಡೆಸಿದರೋ ಕೈಗೆ ಸಿಕ್ಕ ಅಧಿಕಾರವನ್ನು ಉಳಿಸಿಕೊಳ್ಳಲು ಮೂರು ವರ್ಷ ಎರಡು ತಿಂಗಳು ಅಷ್ಟೇ ಹೋರಾಟವನ್ನು ನಡೆಸಿದರು. ನಂಬಿದವರೇ ಬೆನ್ನಿಗೆ ಇರಿದರು. ಅಧಿಕಾರದಿಂದ ಕೆಳಗಿಳಿಸಲು ನಾನಾ ತಂತ್ರಗಳನ್ನು ಹೂಡಿದರು. ಕೊನೆಗೆ ಪಕ್ಷದಿಂದಲೇ ಹೊರಗೆ ಹೋಗುವಂತೆ ಮಾಡಿದರು.
ಅಧಿಕಾರಕ್ಕೆ ಏರಿದರೂ ಅವರು ಪಕ್ಷ ಸಂಘಟನೆ ಬಿಡಲಿಲ್ಲ. ಲೋಕಸಭೆ ಚುನಾವಣೆಯಲ್ಲಿ 19 ಸ್ಥಾನಗಳನ್ನು ಪಕ್ಷಕ್ಕೆ ತಂದುಕೊಡುವಲ್ಲಿ ಯಶಸ್ವಿಯಾದರು. ಲೋಕಸಭೆ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೂ ಅಷ್ಟು ಸ್ಥಾನ ಬಂದ ಉದಾಹರಣೆ ಇಲ್ಲ. ಬಳಿಕ ಬಿಬಿಎಂಪಿ ಚುನಾವಣೆಯಲ್ಲೂ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುವಂತೆ ಮಾಡಿದರು. ಅದರೆ, ಈ ಎಲ್ಲವೂ ಹೊಟ್ಟೆಕಿಚ್ಚಿನ ನಾಯಕರ ಲೆಕಕ್ಕೆ ಸಿಗಲೇ ಇಲ್ಲ.
ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದ ಕೆಲವೇ ದಿನಗಳಲ್ಲಿ ಮೊದಲ ಬಾರಿಗೆ ಬಂಡಾಯದ ಬಾವುಟ ಹಾರಿಸಿದವರು ಅಂದಿನ ವಿಧಾನಸಭೆ ಸ್ಪೀಕರ್ ಮತ್ತು ಹಾಲಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು. ತಮಗೆ ಸಚಿವ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ಅವರು ಮುನಿಸಿಕೊಂಡರು. ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಲು ಮುಂದಾದಾಗ ಬಳ್ಳಾರಿಯ ಗಣಿಧಣಿಗಳು ಸಿಟ್ಟಾದರು. ಅಷ್ಟೇ ಅಲ್ಲ, ಬಂಡಾಯದ ಬಾವುಟ ಹಾರಿಸಿ ಭಿನ್ನ ಶಾಸಕರನ್ನು ಹೈದಾರಾಬಾದ್‌ಗೆ ಕರೆದುಕೊಂಡು ಹೋಗಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರ ಜೊತೆ ಸೇರಿಕೊಂಡು ಯಡಿಯೂರಪ್ಪ ಅವರ ಪದಚ್ಯುತಿಗೆ ಬ್ಲಾಕ್‌ಮೇಲ್ ತಂತ್ರ ಅನುಸರಿಸಿದರು. ಭಿನ್ನಮತದ ಬಾವುಟ ಆಗಾಗ ಹಾರಲು ಶುರುವಾಯಿತು. ಸರ್ಕಾರ ಉಳಿಸಿಕೊಳ್ಳುವುದೇ ಮುಖ್ಯ ಕೆಲಸ ಎಂಬಂತೆ ಆಯಿತು.
ನೆಮ್ಮದಿ ಕದಡಿದ ಲೋಕಾಯುಕ್ತ
ಈ ಮಧ್ಯೆ ಲೋಕಾಯುಕ್ತ ನ್ಯಾಯಮೂರ್ತಿಯಾಗಿದ್ದ ಸಂತೋಷ್ ಹೆಗ್ಡೆಯನ್ನು ಅಕ್ರಮ ಗಣಿಗಾರಿಕೆ ಕುರಿತು ವರದಿ ಕೊಟ್ಟು ಯಡಿಯೂರಪ್ಪ ಅವರ ನೆಮ್ಮದಿ ಕದಡಿದರು. ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ.ಕೃಷ್ಣ, ಧರ್ಮಸಿಂಗ್ ಅವರನ್ನು ತನಿಖೆಯ ವ್ಯಾಪ್ತಿಯಿಂದ ಹೊರಗಿಟ್ಟು ಯಡಿಯೂರಪ್ಪ ಅವರ ನೆತ್ತಿಯ ಮೇಲೆ ಕತ್ತಿ ಇಟ್ಟು ಹೋದರು. ಅಕ್ರಮ ಗಣಿಗಾರಿಕೆಯಲ್ಲಿ ಪಾತ್ರ ಇಲ್ಲದಿದ್ದರೂ ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಅವರ ವಿರೋಧಿಗಳು ಆ ವರದಿಯನ್ನೇ ಅಸ್ತ್ರವಾಗಿ ಮಾಡಿಕೊಂಡರು.
ಏನೇ ಹೋರಾಟ ನಡೆಸಿದರೂ ಯಡಿಯೂರಪ್ಪ ಅವರು ಅಧಿಕಾರ ಉಳಿಸಿಕೊಳ್ಳಲು ಆಗಲಿಲ್ಲ. ಅಂತಿಮವಾಗಿ ಮುಖ್ಯಮಂತ್ರಿ ಹುದ್ದೆಗೆ ರಾಜಿನಾಮೆ ನೀಡಿದರು. ಅವರಿಂದಾಗಿಯೇ ಡಿ.ವಿ. ಸದಾನಂದಗೌಡ ಮತ್ತು ಜಗದೀಶ ಶೆಟ್ಟರ್ ಅವರುಗಳು ಮುಖ್ಯಮಂತ್ರಿಯಾದರು.
ಆದರೂ ಕುತಂತ್ರಗಳು ಅವರ ಬೆನ್ನು ಬಿಡಲಿಲ್ಲ. ಇದೆಲ್ಲದರ ಜೊತೆಗೆ ಯಡಿಯೂರಪ್ಪ ಅವರು ಜೈಲಿಗೂ ಹೋಗಿ ಬಂದರು. ಇಷ್ಟಾದರೂ ದುರದೃಷ್ಟ ಎಂಬುದು ಅವರಿಂದ ದೂರ ಸರಿಯಲೇ ಇಲ್ಲ.  ಜತೆಗಿದ್ದವರು, ಅವರಿಂದಾಗಿ ಅಧಿಕಾರದ ರುಚಿ ಅನುಭವಿಸಿದವರೂ ಕೈ ಹಿಡಿಯಲಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಅವರೇ ಯಡಿಯೂರಪ್ಪ ಅವರ ಪ್ರತಿ ನಡೆಯಲ್ಲೂ ಹುಳುಕು ನೋಡಲು ಆರಂಭಿಸಿದರು. ಬಿಜೆಪಿ ಎಂದರೆ ಯಡಿಯೂರಪ್ಪ, ಯಡಿಯೂರಪ್ಪ ಎಂದರೆ ಬಿಜೆಪಿ ಎನ್ನುವ ವಾತಾರವಣವೇ ಕೆಲವರ ಅಸಹನೆಗೆ ಕಾರಣ ಆಯಿತು.
ಅಧಿಕಾರದಿಂದ ಕೆಳಗಿಳಿದರೂ ಮಾನಸಿಕವಾಗಿ ಸಾಕಷ್ಟು ಯಾತನೆ ಅನುಭವಿಸಿದ ಯಡಿಯೂರಪ್ಪ ಅವರು ಅನ್ಯ ಮಾರ್ಗವಿಲ್ಲದೆ ತಾವೇ ಕಟ್ಟಿ ಬೆಳೆಸಿದ ಪಕ್ಷ ತೊರೆಯುವ ನಿರ್ಧಾರಕ್ಕೆ ಬಂದರು. ಅಷ್ಟೇ ಅಲ್ಲ, ಹೊಸ ಪಕ್ಷ ಸ್ಥಾಪನೆ ಕುರಿತು ಆಲೋಚಿಸಿದರು. ಅಂದುಕೊಂಡಂತೆ ಬಿಜೆಪಿಯಿಂದ ಹೊರ ಬಂದ ಅವರು, ಕರ್ನಾಟಕ ಜನತಾಪಕ್ಷ ಸ್ಥಾಪಿಸಿದ್ದಾರೆ.
ಅದೃಷ್ಟ ಎಂಬುದು ನೆಟ್ಟಗಿದ್ದಿದ್ದರೆ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಅವರು ಮುಂದಿನ ಮೇ 30ಕ್ಕೆ ಐದು ವರ್ಷ ಪೂರೈಸುತ್ತಿದ್ದರು. ಮುಂದಿನ ಚುನಾವಣೆಯಲ್ಲಿ ಯಡಿಯೂರಪ್ಪ ಅವರ ಪಕ್ಷ ಅಧಿಕಾರಕ್ಕೆ ಬರುವುದೋ ಅಥವಾ ಬಿಡುವುದೋ ಗೊತ್ತಿಲ್ಲ. ಆದರೆ, ಹೋರಾಟವನ್ನೇ ಬದುಕಾಗಿಸಿಕೊಂಡಿದ್ದ ನಾಯಕನಿಗೆ ಇಂತಹ ಸ್ಥಿತಿ ಬರಬಾರದಿತ್ತು. ಆದರೆ, ಎಲ್ಲವೂ ಇಲ್ಲಿಗೆ ಮುಗಿದು ಹೋಗಲಿಲ್ಲ. ಹೋರಾಟ ಎಂಬುದು ಯಡಿಯೂರಪ್ಪ ಅವರ ಪಾಲಿಗೆ ಇದ್ದೇ ಇದೆ.

-  ಕೆ.ವೈ. ಈಶ್ವರ ಕುಮಾರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement