ಅಂಕಣಗಳು

ಬಂಡಾಯವೇ ಪಕ್ಷಾಂತರ ರಾಜಕೀಯ ಪ್ರಥಮ ಅಧ್ಯಾಯ

ರಾಜ್ಯದ ಪೇಟೆ ಪಟ್ಟಣಗಳ 208 ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಅಭ್ಯರ್ಥಿಗಳಿಗೆ ನಾಮಪತ್ರ ಸಲ್ಲಿಸುವ ಕಾಲ ಮುಗಿದು ಹೋಗಿದೆ. ಇನ್ನು ಮುಂದಿನ ಚುನಾವಣೆ ಪರ್ವ ಈಗಷ್ಟೇ ಪ್ರಾರಂಭ. ಸ್ಥಳೀಯ ಸಂಸ್ಥೆಗಳ ಚುನಾವಣೆ ಎಂದರೆ ರಾಜ್ಯದ ಮತದಾರರಲ್ಲಿ ಪ್ರತಿಶಥ ಮೂವತ್ತಕ್ಕೂ ಹೆಚ್ಚಿನ ಸಂಖ್ಯೆಯ ಮತದಾರರು ತಮ್ಮ ರಾಜಕೀಯ ಒಲವನ್ನು ಪ್ರದರ್ಶಿಸುವ ಸಮಯ. ನಿಜ. ಈ ಮಾತು ನೂರಕ್ಕೆ ನೂರರಷ್ಟು ಸತ್ಯವಲ್ಲದೇ ಇದ್ದರೂ, ರಾಜ್ಯದಲ್ಲಿನ ಜನಮತದ ಒಲವಿನ ದಿಕ್ಕು ದೆಸೆ ಕುರಿತಂತೆ ಒಂದು ಸೂಚನೆ ಸಿಗುವುದಂತೂ ಖಚಿತ. ವಿಧಾನಸಭೆ ಚುನಾವಣೆ ನಡೆಯಲಿಕ್ಕೆ ಇನ್ನು ಬಹುಕಾಲ ಉಳಿದಿಲ್ಲ, ಸ್ಥಳೀಯ ಸಂಸ್ಥೆಗಳ ಚುನಾವಣೆಯ ಪ್ರಚಾರದಿಂದಲೇ ಪ್ರಮುಖ ರಾಜಕೀಯ ಪಕ್ಷಗಳು ತಮ್ಮ ವಿಧಾನಸಭೆ ಚುನಾವಣೆ ಪ್ರಚಾರ ಸಮರದ ಕಹಳೆಯನ್ನು ಮೊಳಗಿಸುವುದು ನಿರೀಕ್ಷಿತವೇ.
ಆದರೆ ಈಗಿನ ರಾಜಕೀಯದ ಗೊಂದಲದ ಗೋಜಿನಲ್ಲಿ ಸಿಕ್ಕಿ ಬಿದ್ದಿರುವ ರಾಜಕಾರಣಿಗಳಿಗೆ ದಿಕ್ಕೇ ತೋಚದಂತೆ ಆಗಿದೆ. ಕಳೆದ ಐದು ವರ್ಷಗಳಲ್ಲಿ ಅವರು ಆಡಿದ್ದೇ ಆಟವಾಗಿತ್ತು. ರಾಜಕೀಯದಲ್ಲಿ ಯಾವಾಗ ಬೇಕಾದರೂ, ಏನು ಬೇಕಾದರೂ ಆಗಬಹುದು ಎನ್ನುವ ಮಾತು ಈಗ ಸಿದ್ಧಾಂತದ ಪೀಠಕ್ಕೇ ಏರಿದಂತಾಗಿದೆ. ಸ್ಥಾನಗಳಿಸಿರುವವರು, ಜಪ್ಪಯ್ಯ ಅಂದರೂ ಆ ಸ್ಥಾನ ಬಿಡಲಿಕ್ಕೆ ಸಿದ್ಧವಾಗಿಲ್ಲ. ಯಾರ ಕೈ ಕಾಲನ್ನಾದರೂ ಕಟ್ಟಿ, ಗೆಲ್ಲುವ ಪಕ್ಷದ ಟಿಕೆಟ್ ಪಡೆಯಲೇಬೇಕೆನ್ನುವ ಛಲ ಎಲ್ಲರದ್ದೂ.
ಈ ಹಿನ್ನೆಲೆಯಲ್ಲಿ ಈಗ ಕಾಂಗ್ರೆಸ್ಸೇ ದೊಡ್ಡ ರೀತಿಯಲ್ಲಿ ಸುದ್ದಿ ಮಾಡುತ್ತಿರುವುದು. ಯಡಿಯೂರಪ್ಪ, ಬಿಜೆಪಿಯಲ್ಲಿರುವಾಗ ಅವರು ಏನು ಮಾಡಿದರೂ ಸುದ್ದಿಯಾಗಿ, ಆಗ ಕಾಂಗ್ರೆಸ್ಸಿಗೆ ಪ್ರಚಾರ ಅಥವಾ ಅಪಪ್ರಚಾರದಲ್ಲಿ ಪಾಲು ಸಿಕ್ಕಿರಲಿಲ್ಲ, ಈಗ ಯಡಿಯೂರಪ್ಪ ಅವರ ಕೆಜಿಪಿ ತನ್ನ ಅಸ್ತಿತ್ವವನ್ನು ಸಾಬೀತು ಮಾಡಬೇಕಾಗಿದೆ. ಆದರೆ ಅದಕ್ಕೆ ಹಿಂದಿನಷ್ಟು ಪ್ರಚಾರದ ಬೆಂಬಲ ಸಿಕ್ಕಿಲ್ಲ. ಕಾಂಗ್ರೆಸ್ - ಬಿಜೆಪಿ ಅನಂತರದ ಪಕ್ಷಗಳ ಸಾಲಿನಲ್ಲಿ ಕೆಜೆಪಿಯೂ ನಿಂತಿದೆ ಅಷ್ಟೇ.
ಕಾಂಗ್ರೆಸ್ಸಿಗರಲ್ಲಿ, ಈಗಾಗಲೇ ತಾವು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ, ವಿಧಾನ ಸಭೆ ಚುನಾವಣೆಯಲ್ಲಿ ಗೆದ್ದು ಸರ್ಕಾರದ ರಚನೆಯ ಸಮೀಪ ಬಂದಿರುವ ಮನೋಧರ್ಮ ಮೂಡಿದೆ. ಆ ಪಕ್ಷದ ನಾಯಕರ ಮಾತಿನಲ್ಲಿ ಅದು ಸ್ಪಷ್ಟವಾಗಿ ಗೋಚರವಾಗುತ್ತಿದೆ. ಮೊದಲ ಬಾರಿಗೆ, ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಾ॥ ಪರಮೇಶ್ವರ ಅವರು ಸುಮಾರು ಇಪ್ಪತ್ತು ಮಂದಿ ಶಾಸಕರು ಬಿಜೆಪಿ - ಜೆಡಿಎಸ್‌ಗಳಿಂದ ತಮ್ಮ ಪಕ್ಷಕ್ಕೆ ಬರುವ ಸಂಭವವಿದೆ ಎಂದಿದ್ದಾರೆ. ಆದರೆ ಅವರಿಗೆಲ್ಲ ಅವರವರ ಕ್ಷೇತ್ರಗಳಲ್ಲಿ ಟಿಕೆಟ್ ಸಿಕ್ಕೇ ಸಿಗುತ್ತದೆ ಎನ್ನುವ ಖಾತ್ರಿ ಇಲ್ಲ, ಅದು ವರಿಷ್ಠರಿಗೆ ಬಿಟ್ಟದ್ದು ಎಂದೂ ಹೇಳಿದ್ದಾರೆ. ಈ ಪರಿಸ್ಥಿತಿಯ ಗರ್ಭದಲ್ಲೇ ಬಂಡಾಯ ಅಡಗಿದೆ. ಬಿಜೆಪಿ ನಾಯಕರು ಹೇಳಿದವರಿಗೆ ಟಿಕೆಟ್ ಕೊಟ್ಟರೆ ನಿಷ್ಟಾವಂತ ಕಾಂಗ್ರೆಸ್‌ನವರ ಬಂಡಾಯ ಖಚಿತ. ಹಾಗೆಯೇ ಬಿಜೆಪಿ ಶಾಸಕರಿಗೆ ನೀಡಿದ ವಚನದ ಪಾಲನೆಯಾಗದಿದ್ದರೆ, ಅವರ ಬೆಂಬಲಿಗರ ಬಂಡಾಯ ಖಚಿತ, ಹೀಗಾಗಿ ಈಗಿನ ರಾಜಕೀಯದ ಮೊದಲ ಅಧ್ಯಾಯ ಬಂಡಾಯದಿಂದಲೇ ಆರಂಭವಾಗುವ ಸಂಭವವಿದೆ. ಅದಕ್ಕೆ ಹೆಚ್ಚು ಕಾಲ ಕಾಯಬೇಕಾಗಿಲ್ಲ. ಯಾರಿಗೂ ಭರವಸೆ ಇಲ್ಲ ಸೋನಿಯಾ ಗಾಂಧಿಯವರ ಆತ್ಮೀಯ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಫರ್ನಾಂಡಿಸ್ ಅವರು ಇದುವರೆಗೆ ಯಾರಿಗೂ ತಾವು ಟಿಕೆಟ್ ಕೊಡಿಸುವ ಭರವಸೆ ನೀಡಿಲ್ಲ ಎಂದೂ ಹೇಳಿದ್ದಾರೆ. ಇದರ ಅರ್ಥ, ಸದ್ಯಕ್ಕೆ, ಬಿಜೆಪಿಯಿಂದ ಕಾಂಗ್ರೆಸ್ ಸೇರಿಕೊಂಡಿರುವವರ, ಶಾಸಕರ ಸ್ಥಾನಕ್ಕೆ ರಾಜಿನಾಮೆ ನೀಡಿರುವ "ನಾಯಕರ" ಸ್ಥಾನ ತ್ರಿಶಂಕು ಸ್ಥಾನವೇ.    ಈಗ ಗಾಳಿಯಲ್ಲಿರುವ ವರ್ತಮಾನದಂತೆ, ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವ ಸಂಭವ ಹೆಚ್ಚಾಗಿರುವುದರಿಂದ ಹೊರಗಡೆಯಿಂದ ಆ ಪಕ್ಷಕ್ಕೆ ಬಂದು ಅಧಿಕಾರದ ಕುರ್ಚಿಗಳನ್ನು ಹಿಡಿದು ಕೊಳ್ಳುವವರ ಬಯಕೆ ಅರ್ಥವಾಗುವಂತಹದ್ದು. ಆದರೆ ಗೆಲ್ಲುವ ಅವಕಾಶವಿರುವ ಕಾಂಗ್ರೆಸ್ಸಿಗೇಕೆ ಹೊರಗಿನವರನ್ನು ಸ್ವಾಗತಿಸುವ ಬಯಕೆ?
ರಿಸಾರ್ಟ್ ರಾಜಕೀಯದಲ್ಲಿ ಪಳಗಿರುವವರು, ಪಕ್ಷಾಂತರವನ್ನೇ ಒಂದು ಸಿದ್ಧಾಂತವೆಂದು ನಂಬಿರುವವರು, ಬಿಜೆಪಿಯಲ್ಲಿರುವವರೆಗೆ ರಾಷ್ಟ್ರೀಯತೆಯ ಘೋಷಣೆ ಕೂಗಿದವರು, ಕೋಮುವಾದಿಗಳು ಎನಿಸಿಕೊಂಡವರು ಕಾಂಗ್ರೆಸ್ ಕಾರ್ಯಾಲಯವನ್ನು ಪ್ರವೇಶಿಸಿದ ಕೂಡಲೇ ಸೆಕ್ಯುಲರ್ ಪವಿತ್ರಾತ್ಮ ಪ್ರಾಮಾಣಿಕರಾಗಿಬಿಡುತ್ತಾರೆ ಎಂದು ಕಾಂಗ್ರೆಸ್ಸಿಗರು ಹೇಳಿದರೆ, ಅದನ್ನು ಮುತ್ತೈದೆಯರ ಮಕ್ಕಳು ಯಾರಾದರೂ ನಂಬುತ್ತಾರಾ? ನಂಬಬೇಕಾ? ಅಧಿಕಾರ ಬೇಕು, ಅದಕ್ಕಾಗಿ ಹೋಗ್ತೀವಿ ಅಂತ ಪ್ರಾಮಾಣಿಕವಾಗಿ ಹೇಳಬಾರದೇಕೆ?   ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆಯ ಸಂಬಂಧದಲ್ಲಿ ಪಕ್ಷದಲ್ಲಿ ಈಗ ನಿರ್ಣಾಯಕ ಅಧಿಕಾರವನ್ನು ವಿಧಿವತ್ತಾಗಿ ಪಡೆದಿರುವ ರಾಹುಲ ಗಾಂಧಿ, ಚುನಾವಣೆಯಲ್ಲಿ ಎರಡು ಬಾರಿ ಸೋತವರಿಗೆ ಅವಕಾಶ ಕೊಡುವುದಿಲ್ಲ ಎಂದು ಮಹಾರಾಷ್ಟ್ರ ಕಾಂಗ್ರೆಸ್ಸಿಗೆ ಹೇಳಿರುವುದು ಕರ್ನಾಟಕಕ್ಕೂ ಅನ್ವಯವಾಗಲೇ ಬೇಕಲ್ಲವೇ? ಅವರ ಆದೇಶವೂ ಪಕ್ಷದ ವಿರುದ್ಧ ಸೋತವರ ಬಂಡಾಯಕ್ಕೆ ದಾರಿ ಮಾಡಿಕೊಡುವ ಸಂಭವವೂ ಇದೆ. ಈ ಆದೇಶ ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್ಸಿನ ಕುತ್ತಿಗೆಯನ್ನು ಹಿಸುಕುವ ಶಕ್ತಿ ಪಡೆದಿದೆ. ಆದರೆ ಕಾಂಗ್ರೆಸ್ ಯಾವ ನಿಯಮವನ್ನೂ ಕಟ್ಟುನಿಟ್ಟಾಗಿ ಪಾಲಿಸುವ ಖ್ಯಾತಿಯ ಪಕ್ಷವಲ್ಲ, ಅನುಕೂಲಕ್ಕೆ ತಕ್ಕಂತೆ ಬೇಕಾದಾಗ, ಸಮಾಜವಾದಿ ಸಿದ್ಧಾಂತವನ್ನು ಸಂವಿಧಾನದ ಮಟ್ಟಕ್ಕೇರಿಸಿ, ಬೇಡವಾದಾಗ ಅದರ ಸೊಲ್ಲನ್ನೇ ಎತ್ತದೇ ಇರುವ ಪಕ್ಷ ಅದು. ಕರ್ನಾಟಕ ಕಾಂಗ್ರೆಸ್ಸಿನಲ್ಲಿ ಲಾಗಾಯ್ತಿನಿಂದಲೂ ಕಾಂಗ್ರೆಸ್ಸಿಗೆ ನಿಷ್ಠೆಯಿಂದಿರುವ ಕಾರ್ಯಕರ್ತರಿಗೆ, ಹಿರಿಯರಿಗೆ ಮರ್ಯಾದೆಯನ್ನು ಕೊಟ್ಟು, ಅವರ ಸ್ಥಾನ-ಮಾನದ ರಕ್ಷಣೆಗೆ ಬದ್ಧವಾಗಿರುವ ಇಬ್ಬರು ನಾಯಕರೆಂದರೆ, ಮಾಜಿ ರೈಲ್ವೆ ಮಂತ್ರಿ ಸಿ.ಕೆ. ಜಾಫರ್ ಷರೀಫ್ ಮತ್ತು ಈಗಿನ ಪೆಟ್ರೋಲಿಯಂ ಸಚಿವ ವೀರಪ್ಪ ಮೊಯಿಲಿ, ಅವರೇನೂ ಈಗ ಸುಮ್ಮನೆ ಕೂತಿಲ್ಲ, ಮಾಡಬೇಕಾದ ಕೆಲಸವನ್ನು ಮಾಡಲು ಸಿದ್ಧತೆ ನಡೆಸಿದ್ದಾರೆ.

ಎಸ್ಸೆಮ್ ಕೃಷ್ಣ ಮೌನ:  ಕಾಂಗ್ರೆಸ್ ಈಗ ಗಂಭೀರವಾಗಿ ಪರಿಗಣಿಸಬೇಕಾಗಿರುವ ಇನ್ನೊಂದು ವಿಚಾರ ಎಂದರೆ ಹಿರಿಯ ನಾಯಕ, ಎಂಬತ್ತರ ಗಡಿದಾಟಿರುವ ಎಸ್ಸೆಮ್ ಕೃಷ್ಣಅವರದ್ದು.  ದೇವೇಗೌಡರ, ಜಾತ್ಯತೀತ ಜನತಾ ದಳ, ಒಕ್ಕಲಿಗರ ಪ್ರಾಬಲ್ಯದ ದಕ್ಷಿಣ ಕರ್ನಾಟಕದ ಸೀಮೆಯಲ್ಲಿ ತನ್ನ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಪ್ರಬಲ ಜನಾಂಗೀಯ ನಾಯಕರೆನ್ನಬಹುದಾದ ಜಿ.ಟಿ. ದೇವೇಗೌಡರು, ಶಂಕರಲಿಂಗೇಗೌಡರು ಅವರನ್ನು ಬಾರಿ ಉತ್ಸಾಹ, ಅಬ್ಬರದ ಸಮಾರಂಭದಲ್ಲಿ ಬರಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ಸಿಗೆ ಜನರ ಮುಂದೆ ತೋರಿಸಲು ಒಂದು ಪ್ರತಿಷ್ಠಿತ ಒಕ್ಕಲಿಗ "ಮುಖ" ಬೇಕಾಗಿದೆ. ಆದರೆ ಕೃಷ್ಣ ಅಂತಹ ಪಾತ್ರಧಾರಿಯಾಗಲು ಒಪ್ಪುತ್ತಾರೇನು? ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಪರಮೇಶ್ವರ, ವಿಧಾನ ಸಭೆಯಲ್ಲಿನ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ,ಪ್ರಣಾಳಿಕೆ ರಚನೆ ಸಮಿತಿಗೆ ಮಾಜಿ ಸ್ಪೀಕರ್ ರಮೇಶ ಕುಮಾರ್ ಹಾಗೂ ಪ್ರಚಾರ ಸಮಿತಿಗೆ ವೀರಣ್ಣ ಮತ್ತಿಕಟ್ಟಿ ಅವರನ್ನು ನೇಮಿಸುವ ಮೂಲಕ ಎಲ್ಲ ಪ್ರಮುಖ ಸ್ಥಾನಗಳನ್ನೂ ನಾಲ್ಕು ಪ್ರತಿಷ್ಠಿತ ಜಾತಿಗೆ ಹಂಚಿದ್ದಾಗಿದೆ. ಈ ಪ್ರತಿಷ್ಠಿತ ಜಾತಿಗಳ ಸಾಲಿನಲ್ಲಿ ಒಕ್ಕಲಿಗರ ಜನಾಂಗದವರು ಯಾರೂ ಇಲ್ಲ.  ಎಸ್ಸೆಮ್ ಕೃಷ್ಣ ಅವರಿಗೆ ಬೇರೆ ಯಾವುದಾದರೊಂದು ದೊಡ್ಡ ಹುದ್ದೆಯನ್ನು ಹೊಸದಾಗಿ ಹುಡುಕುವ ಕೆಲಸ ಕಾಂಗ್ರೆಸ್ಸಿನಲ್ಲಿ ಆರಂಭವಾಗಿರುವಂತಿದೆ. ಸಿದ್ದರಾಮಯ್ಯ ಇತ್ತೀಚೆಗೆ ಕೃಷ್ಣ ಅವರ ಮನೆಗೇ ಹೋಗಿ ಅವರ ಜತೆ ಮಾತುಕತೆ ನಡೆಸಿ ಬಂದಿದ್ದಾರೆ.  ಕೃಷ್ಣ ಹಾಗೂ ಸಿದ್ದರಾಮಯ್ಯ ಅವರಿಬ್ಬರೂ ರಾಜಕೀಯವನ್ನು ಆರಂಭಿಸಿದ್ದು ಕಾಂಗ್ರೆಸ್ ವಿರೋಧಿ ಸಮಾಜವಾದಿಗಳಾಗಿ. ಕೃಷ್ಣ ಅವರ ರಾಜಕೀಯ ಶಕ್ತಿಯಲ್ಲಿ, ಸ್ವತಂತ್ರ ವೀಕ್ಷಕರಿಗೆ ಇರುವಷ್ಟು ವಿಶ್ವಾಸ ಕಾಂಗ್ರೆಸ್ಸಿನ ಸ್ಥಳೀಯ ನಾಯಕರಿಗೇ ಇಲ್ಲವಾಗಿದೆ.

ಬಿಜೆಪಿಯ ಅಸ್ತಿತ್ವ: ಕರ್ನಾಟಕ ಬಿಜೆಪಿ ನಾಯಕರಿಗೆ ಪಕ್ಷದ ತಳಮಳವೇ ಅರ್ಥವಾದಂತಿಲ್ಲ. ಪಕ್ಷದ ನೂತನ ಅಧ್ಯಕ್ಷ, ರಾಜನಾಥ ಸಿಂಗ್ ಅವರು, ನೇರವಾಗಿ, ಅಧಿಕಾರವನ್ನು ಉಳಿಸಿಕೊಳ್ಳಲು ಅನೈತಿಕ ವಕ್ರಮಾರ್ಗವನ್ನು ಅನುಸರಿಸುವುದು ಬೇಡ ಎನ್ನುವ ಆದೇಶ ನೀಡಿದ್ದಾರೆ.
ಉತ್ತರ ಪ್ರದೇಶದಲ್ಲಿನ ಪಕ್ಷದ ಬಿಕ್ಕಟ್ಟಿನ ಒಂದು ಸಂದರ್ಭದಲ್ಲಿ ಮುಖ್ಯಮಂತ್ರಿಯ ಸ್ಥಾನವನ್ನು ಹಾಗೇ ಬಿಟ್ಟುಕೊಟ್ಟ ಇತಿಹಾಸವಿರುವ ನಾಯಕ ರಾಜನಾಥ ಸಿಂಗ್. ಅವರ ಮಾತನ್ನು ಜಗದೀಶ ಶೆಟ್ಟರ್, ಕೆ.ಎಸ್. ಈಶ್ವರಪ್ಪ, ಅವರೆಲ್ಲ ಗಂಭೀರವಾಗಿ ಗಮನಿಸಬೇಕು. ರಾಜಕೀಯದಲ್ಲಿ ನಾಯಕರು, ಉದ್ಭವಮೂರ್ತಿಗಳಾಗಿ ಭೂಮಿಯಿಂದ ಎದ್ದು ಬರುವುದಿಲ್ಲ, ಅದನ್ನು ಈಗಿನ ನಾಯಕರು ತಿಳಿದುಕೊಂಡು ಕಾರ್ಯಕರ್ತರಲ್ಲಿ ಆತ್ಮ ವಿಶ್ವಾಸವನ್ನು ಮೂಡಿಸಲು ಪ್ರಯತ್ನಿಸಬೇಕು. ಇನ್ನೆರಡು ತಿಂಗಳ ಸರ್ಕಾರದ ಅಧಿಕಾರ ಇದ್ದರೆಷ್ಟು ಹೋದರೆಷ್ಟು. ಜಾತ್ಯತೀತ ಜನತಾದಳದ ನಾಯಕರು ವಿಧಾನಸಭೆಯಲ್ಲಿ 130 ಸ್ಥಾನಗಳನ್ನು ಗೆಲ್ಲುವ ಮಾತನ್ನಾಡಲು ಆರಂಭಿಸಿದ್ದಾರೆ. ಆಸೆ, ನಿರೀಕ್ಷೆಗೆ ಬಡತನದ ಸೋಂಕು ಬೇಕಾಗಿಲ್ಲ ಎನ್ನುವ ಮಾತು ಅಂಥವರಿಗೇ ಹೇಳಿ ಮಾಡಿಸಿದ್ದು. ಜಾತ್ಯತೀತ ಜನತಾದಳಕ್ಕೆ ಪಶ್ಚಿಮ ಘಟ್ಟವನ್ನೇರಿ ಇಳಿದು ಕರಾವಳಿಯನ್ನ ಮುಟ್ಟುವುದು, ತುಂಗಭದ್ರೆಯನ್ನು ದಾಟಿ ಉ.ಕರ್ನಾಟಕಕ್ಕೆ ಜಿಗಿಯುವುದು ಸುಲಭವಾದ ಕೆಲಸವಲ್ಲ. ಯಡಿಯೂರಪ್ಪ ನೇತೃತ್ವದ ಕರ್ನಾಟಕ ಜನತಾ ಪಾರ್ಟಿ, ಶ್ರೀರಾಮುಲು ನೇತೃತ್ವದ ಬಿಎಸ್ಸಾರ್ ಕಾಂಗ್ರೆಸ್‌ನ ಶಕ್ತಿ ಪರೀಕ್ಷೆ ಈಗ ಆಗಬೇಕಷ್ಟೇ.

ಕಿಡಿಗೇಡಿತನ - ರೈಲ್ವೆ ಬಜೆಟ್‌ಗೆ ಪ್ರತಿಕ್ರಿಯೆ ನೀಡುವ ಸಂಬಂಧದಲ್ಲಿ ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ್, ಬಂಗಾಳ, ಬಿಹಾರ, ಕರ್ನಾಟಕ ರಾಜ್ಯಗಳ ನಾಯಕರೆಲ್ಲರೂ ತಮಗೆ ಅನ್ಯಾಯವಾಗಿದೆ ಎನ್ನುತ್ತಿದ್ದಾರೆ. ಹಾಗಾದ್ರೆ ನ್ಯಾಯ ಸಿಕ್ಕಿರುವುದು ಯಾರಿಗೆ?

- ಸತ್ಯ
anisikeprabha@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಚು.ಆಯೋಗದ ವಿರುದ್ಧ INDIA ಪ್ರತಿಭಟನೆ; 'ಕೈ' ನಾಯಕರು ಪೊಲೀಸ್ ವಶಕ್ಕೆ: ವ್ಯಾನ್ ನಿಂದ ಇಳಿದು ರಾಹುಲ್ ಜೊತೆ ಮರದ ಕೆಳಗೆ ಕುಳಿತ ಪ್ರಿಯಾಂಕ!

ಬೆಂಗಳೂರಿನಲ್ಲಿ 5 ಪ್ರತ್ಯೇಕ ಕಮಿಷನರೇಟ್‌ ಸ್ಥಾಪನೆ; 1,022 ಹೊಸ ಹುದ್ದೆ ಸೃಷ್ಟಿಗೆ ಸಚಿವ ಸಂಪುಟ ಅಸ್ತು

ಹಬ್ಬಗಳ ಹೊತ್ತಲ್ಲೆ ಕಾಂಗ್ರೆಸ್‌ನಿಂದ ಜನತೆಗೆ ಮತ್ತೊಂದು ಶಾಕ್: Nandini ಹಾಲಿನ ದರ ಹೆಚ್ಚಳಕ್ಕೆ ಸಂಪುಟ ಸಮ್ಮತಿ, ಲೀಟರ್‌ಗೆ 8 ರೂ. ಏರಿಕೆ?

ನೈಸ್ ಯೋಜನೆ ನನ್ನ ಕೂಸಾದರೆ, ಸೂಲಗಿತ್ತಿ ಯಾರು? ನನ್ನ ಕಿಡ್ನಿಗೆ ಸಮಸ್ಯೆ ಇರಬಹುದು, ಬ್ರೇನ್‌ಗೆ ಅಲ್ಲ: ಕಾಂಗ್ರೆಸ್ ವಿರುದ್ಧ ಗುಡುಗಿದ ದೇವೇಗೌಡ