ರಜನೀಶ್: ಕಳೆದ ವಾರ ಧಾರವಾಡದಲ್ಲಿನ ನಮ್ಮ ಅನುಭವಗಳನ್ನು ನಿಮಗೆ ಹೇಳುತ್ತಿದ್ದೆ. ಬ್ರಿಟಿಷರ ಕಾಲದಿಂದಲೂ ಜಿಲ್ಲಾಧಿಕಾರಿಗಳಿಗೆ ಜಿಲ್ಲಾ ಆಡಳಿತದ ನೇತೃತ್ವ ನೀಡಲಾಗುತ್ತಿದೆ. ಆದರೆ ಯಾವುದೇ ಒಂದು ವಿಚಾರದಲ್ಲಾಗಲಿ ಜಿಲ್ಲಾಧಿಕಾರಿ, ಪೊಲೀಸ್ ಅಧೀಕ್ಷಕರು ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪರಸ್ಪರ ಹೊಂದಾಣಿಕೆಯಿಂದ ಕೆಲಸ ಮಾಡಿದರೆ ಅಭಿವೃದ್ಧಿಯನ್ನು ತೀವ್ರ ಗತಿಯಲ್ಲಿ ಸಾಧಿಸುವುದು ಶತಸಿದ್ಧ. ದೇವರ ದಯೆಯಿಂದ ಧಾರವಾಡದಲ್ಲೂ ಇದೇ ರೀತಿಯಾಯಿತು. ಆಗ ಅಲ್ಲಿ ಅಲೋಕ್ ಮೋಹನ್ ಎಂಬುವವರು ಪೊಲೀಸ್ ಅಧೀಕ್ಷಕರಾಗಿದ್ದರು. ಹೊಂದಾಣಿಕೆ, ಮಾತು ಮತ್ತು ಕೆಲಸದ ಬಗ್ಗೆ ಗೌರವ ಆ ಅಧಿಕಾರಿಗಳಲ್ಲಿ ಬಹಳ ಚೆನ್ನಾಗಿ ಇತ್ತು. ಧಾರವಾಡದ ಹೆಚ್ಚುವರಿ ಜಿಲ್ಲಾಧಿಕಾರಿಯಾದ ಭೀಮ್‌ಸೇನ್‌ರಾವ್ ಶಿಂಧೆ ಮತ್ತು ಸಹಾಯಕ ಆಯುಕ್ತರಾದ ಬೊಮ್ಮನಹಳ್ಳಿ ಅವರೋಂದಿಗೇ ನಾನು ಎ.ಟಿ.ಐ.ನಲ್ಲಿ ತರಬೇತಿ ಪಡೆದದ್ದರಿಂದ ನಮ್ಮ ಹೊಂದಾಣಿಕೆ ಚೆನ್ನಾಗಿತ್ತು. ಹಾಗಾಗೇ ನಮ್ಮದು ಉತ್ತಮ ತಂಡವಾಗಿದ್ದಿತು. ಎಲ್ಲರಲ್ಲೂ ಶ್ರದ್ದೆ, ಕಾರ್ಯತತ್ಪರತೆ ಇದ್ದುದ್ದರಿಂದ ಕೆಲಸವನ್ನು ಯಶಸ್ವಿಯಾಗಿ ಪೂರೈಸಲು ಸಾಧ್ಯವಾಯಿತು.
ಒಂದು ದಿನ ಸಂಜೆ ಶುರುವಾದ ಕುಂಭದ್ರೋಣ ಮಳೆ 6 ಗಂಟೆಯಿಂದ ರಾತ್ರಿ 9 ಗಂಟೆವರೆಗೂ- ಸುಮಾರು 700 ಮಿಲಿ ಮೀಟರ್‌ಗಳಷ್ಟು ಸತತವಾಗಿ ಹೊಡೆಯಿತು. ಇಡೀ ಧಾರವಾಡ ನಗರ ಪ್ರವಾಹದಿಂದ ತುಂಬಿ ಹೋಗಿತ್ತು. ಸಹಾಯಕ ಆಯುಕ್ತರಾದ ಬೊಮ್ಮನಹಳ್ಳಿಯವರು ಮತ್ತು ತಹಶೀಲದಾರರಾಗಿದ್ದ ನದಾಫ್ ಎಂಬುವವರು ಬಹಳ ಚುರುಕಾಗಿ ಇಡೀ ರಾತ್ರಿ ನನ್ನೊಂದಿಗೆ ಜವಾಬ್ದಾರಿಯುತವಾಗಿ ಕೆಲಸ ಮಾಡಿದರು. ಚರಂಡಿಗಳ ಮೇಲೆ ಕಟ್ಟಿದ ಮನೆಗಳಿಗೆಲ್ಲ ಅಪಾರವಾದ ನಷ್ಟ ಆಗಿತ್ತು. ಮಳೆಯಿಂದ ಮನೆಯನ್ನು ಕಳೆದುಕೊಂಡ ನತದೃಷ್ಟರಿಗೆ ಅಂದೇ ರಾಷ್ಟ್ರೀಯ ವಿಪತ್ತು ಸಂಗ್ರಹದ ಪರಿಹಾರ ಠೇವಣಿಯಿಂದ ಪರಿಹಾರ ವಿತರಿಸಲಾಯಿತು. ಸರ್ಕಾರದ ವತಿಯಿಂದ ಸಮಯಕ್ಕೆ ಸರಿಯಾಗಿ ನಾಗರಿಕರಿಗೆ ಪರಿಹಾರ ಸಿಕ್ಕರೆ ಅವರು ಬಹುಬೇಗ ತಮ್ಮ ಕಷ್ಟವನ್ನು ಮರೆಯಲು ಸಾಧ್ಯವಾಗುತ್ತದೆ.
ಒಂದು ದಿನ ನ್ಯಾಯಾಲಯದ ಒಂದು ಮುಖ್ಯ ಆದೇಶ ನನ್ನ ಕೈಗೆ ತಲುಪಿತು. ಸಾಮಾನ್ಯವಾಗಿ ಅಂತಹ ಪತ್ರಗಳು ಮೊದಲು ಕಚೇರಿಯ ಡಾಕ್‌ನಲ್ಲಿ ದಾಖಲಾಗಿ ನಂತರ ನನ್ನ ಕೈಗೆ ಸೇರುತ್ತಿದ್ದವು. ಸರ್ಕಾರದ ಭೂಮಿ ಮೇಲೆ ಒತ್ತುವರಿ ಮಾಡಿಕೊಂಡು ಒಂದು ಅರಮನೆ ಕಟ್ಟಲಾಗಿತ್ತು. ಅದನ್ನು ತಪ್ಪೆಂದು ಪರಿಗಣಿಸಿ ಉಚ್ಚ ನ್ಯಾಯಾಲಯ ಅತಿಕ್ರಮಣವನ್ನು ತೆರವು ಮಾಡಬೇಕೆಂದೂ ಮತ್ತು ಆ ಕಟ್ಟಡವನ್ನು ಸರ್ಕಾರದ ವಶಕ್ಕೆ ತೆಗೆದುಕೊಂಡು ಪ್ರಾದೇಶಿಕ ಕಚೇರಿಯನ್ನಾಗಿ ಉಪಯೋಗಿಸಬೇಕೆಂದು ಆದೇಶ ನೀಡಿತ್ತು. ನಗರದಲ್ಲಿ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿ ಸುಮಾರು ನಾಲ್ಕು ಸಾವಿರ ಅನಧಿಕೃತ ಕಟ್ಟಡಗಳನ್ನು ಕಟ್ಟಲಾಗಿತ್ತು. ಸರ್ಕಾರದಿಂದ ಸರ್ವೇ ಮಾಡಿದ ವರದಿಗಳು ಕೂಡ ಸಿದ್ದವಿದ್ದವು. ಆದರೆ ನೋಟೀಸ್ ಕೊಡಲು ಯಾವ ಅಧಿಕಾರಿಯೂ ತಯಾರಿರಲಿಲ್ಲ. ದಿಟ್ಟತನದಿಂದ ನಾನು ಒಮ್ಮೆಲೆ ನಾಲ್ಕು ಸಾವಿರ ನೋಟೀಸ್‌ಗಳನ್ನು ಜಾರಿ ಮಾಡಿಸಿದೆ. ಆದರೆ ಹಲವಾರು ಜನರು ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತಂದರು. ಸರ್ಕಾರಿ ಭೂಮಿಯ ಬಗ್ಗೆ ಕಾಳಜಿ ವಹಿಸಿ ಸರ್ಕಾರಿ ನೌಕರರು ಮುಂಜಾಗ್ರತೆ ಕ್ರಮ ವಹಿಸಿದರೆ ಅತಿಕ್ರಮಣ ಆಗುವುದು ಸಾಧ್ಯವಿಲ್ಲ. ಈ ಭೂಮಿಗಳನ್ನು ಉಳಿಸಿ ಬೇರೆ ಸಾಮಾಜಿಕ ಸೌಕರ್ಯಗಳಿಗೆ ಉಪಯೋಗಿಸಲು ಸಾಧ್ಯ. ಉದಾಹರಣೆಗೆ ಶಾಲೆ, ಉದ್ಯಾನವನ ಇತ್ಯಾದಿ. ಆದರೆ ನಾಗರಿಕರು ಸಹ ಈ ಬಗ್ಗೆ ನಿಗಾ ವಹಿಸಿದರೆ ಕೆಲವು ವ್ಯಕ್ತಿಗಳು ಸರ್ಕಾರಿ ಜಮೀನಿನ ದುರುಪಯೋಗ ಮಾಡುವುದನ್ನು ತಡೆಯಬಹುದು.
ಒಂದು ಸಲ ನಾನು ಹಳ್ಳಿಯ ಪ್ರವಾಸ ಮಾಡುವಾಗ, ಒಂದು ಹಳೆಯ ಪ್ರಕರಣದಲ್ಲಿ ತುಂಬಾ ಕಷ್ಟವನ್ನು ಅನುಭವಿಸಿದ್ದ ಒಬ್ಬ ನಾಗರಿಕರು ಬಂದು ನನ್ನಲ್ಲಿ ತಮ್ಮ ಅಹವಾಲನ್ನು ಹೇಳಿಕೊಂಡರು. ಈ ಬಗ್ಗೆ ನಮ್ಮ ಅಧೀನ ಅಧಿಕಾರಿಗಳನ್ನು ಕೇಳಿದಾಗ, 'ಆ ಕಡತ ಲಭ್ಯವೇ ಇಲ್ಲ' ಎಂದರು. ಆಗ ನಾನು ಸ್ವತಃ ನಮ್ಮ ಕಡತಗಳನ್ನಿಡುವ ಕೊಠಡಿಗೆ ಹೋದೆ. ಅಲ್ಲಿ ಎಲ್ಲಾ ಕಡತಗಳೂ ಅವ್ಯವಸ್ಥೆಯಿಂದ ಬಿದ್ದಿದ್ದವು. ಯಾವುದೇ ಕಡತವನ್ನು ಹುಡುಕುವುದು ಸಾಧ್ಯವೇ ಇರಲಿಲ್ಲ. ಸರ್ಕಾರದಿಂದ ಕಡತಗಳ ಕೊಠಡಿ ನಿರ್ವಹಣೆಯ ಬಗ್ಗೆ ಸೂಕ್ಷ್ಮವಾದ ಮಾರ್ಗದರ್ಶನ ಸೂತ್ರಗಳು ಇವೆ. ಆದರೆ ಅದನ್ನು ಅನುಸರಿಸಲು ಯಾರಿಗೂ ಸಮಯವಾಗಲೀ, ಕಾಳಜಿಯಾಗಲೀ ಇರಲಿಲ್ಲ. ನಮ್ಮ ಕಡತಗಳ ಸರಿಯಾದ ನಿರ್ವಹಣೆ ಆಗದೆ ಇದ್ದರೆ ನಾಗರಿಕರಿಗೆ ಎಷ್ಟು ಕಷ್ಟವಾಗಬಹುದು ಎಂಬುದನ್ನು ನಾವು ಯೋಚಿಸುವುದೇ ಇಲ್ಲ. ಹಾಗಾಗಿ ನನ್ನ ಎಲ್ಲಾ ಗ್ರಾಮ ಲೆಕ್ಕಾಧಿಕಾರಿಗಳ ಒಂದು ತಂಡವನ್ನು ರಚಿಸಿ, ಸಮರೋಪಾದಿಯಲ್ಲಿ ಎಲ್ಲಾ ಕಡತಗಳನ್ನೂ ಐದು, ಹತ್ತು, ಹದಿನೈದು, ಇಪ್ಪತ್ತು ವರ್ಷಗಳ ವಿಭಾಗಗಳನ್ನಾಗಿ ವಿಂಗಡಿಸಿದೆವು. ಕಡತಗಳ ಮೇಲೆ ಆವರಿಸಿದ್ದ ಧೂಳನ್ನೆಲ್ಲ ಕೊಡವಿ, ಇಡೀ ಕಡತಗಳನ್ನಿಡುವ ಕೊಠಡಿಯನ್ನು ಸ್ವಚ್ಛಗೊಳಿಸಿದ್ದಾಯಿತು. ವಿಷಯ ಸೂಚಿಯ ಪ್ರಕಾರ ಬೇರೆ ಬೇರೆ ಬಣ್ಣಗಳಲ್ಲಿ ಹಳೆಯ ಕಡತಗಳನ್ನು ಕಟ್ಟಿದೆವು. ಆಗ ಯಾವುದೇ ಕಡತ ಬೇಕಾದರೆ ಕೆಲವೇ ನಿಮಿಷಗಳಲ್ಲಿ ತೆಗೆಯಬಹುದಿತ್ತು.
ಅದೇ ರೀತಿ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ನೆನಗುದಿಗೆ ಬಿದ್ದಿದ್ದ ಎಲ್ಲಾ ಕಡತಗಳನ್ನು ನೋಡಿ ವಿಲೇವಾರಿ ಮಾಡಿದೆ. ಪ್ರತಿಯೊಂದು ಕಡತದ ಹಿಂದೆಯೂ ನ್ಯಾಯಾಲಯದಿಂದ ಒಂದು ತಡೆಯಾಜ್ಞೆ ಇದ್ದಿತು. ಎಲ್ಲ ಕಡತಗಳನ್ನು ಪರಿಶೀಲಿಸಿ ವಿಂಗಡಿಸಲಾಯಿತು. ಹಳೆಯ ಕಡತಗಳನ್ನು ಮೊದಲು ವಿಲೇವಾರಿ ಮಾಡಲಾಯಿತು. ಒಂದೂವರೆ ಲಕ್ಷ ಕಡತಗಳನ್ನು ದಾಖಲೆ ಕೊಠಡಿಗೆ ಕಳುಹಿಸಲಾಯಿತು. ಸಮಯದ ಮಿತಿ ಮೀರಿದ್ದರಿಂದ ಇನ್ನೂ ಒಂದೂವರೆ ಲಕ್ಷ ಕಡತಗಳನ್ನು ನಾಶಪಡಿಸಲಾಯಿತು. ನೆನಗುದಿಗೆ ಬಿದ್ದ ಕಡತಗಳ ವಿಲೇವಾರಿಯಷ್ಟು ಕಠಿಣವಾದ ಕೆಲಸ ಬೇರೊಂದಿರಲಿಲ್ಲ. ಆದರೆ ಕಡತಗಳ ವಿಲೇವಾರಿ ಉತ್ತಮವಾಗಿ ಆಗಿದ್ದರಿಂದ ತಮ್ಮ ಕೆಲಸದ ಬಗ್ಗೆ ವಿಚಾರಿಸಲು ಪದೇ ಪದೇ ಕಚೇರಿಗೆ ಎಡತಾಕುತ್ತಿದ್ದ ಸಾರ್ವಜನಿಕರು ಕಡಿಮೆಯಾದರು. ಈಗ ಕರ್ನಾಟಕ ಸಕಾಲ ಸೇವೆ ಅಧಿನಿಯಮ ಬಂದಿದೆ. ನಮ್ಮ ಕೆಲಸಗಳನ್ನು ನಾವು ನಿಷ್ಠೆಯಿಂದ ಸಮಯಬದ್ಧವಾಗಿ ಮಾಡುತ್ತಾ ಇದ್ದಿದ್ದರೆ ನಾಗರಿಕರಿಗೆ ಈ ಅಸ್ತ್ರ ಬೇಕಾಗುತ್ತಿರಲಿಲ್ಲ, ಸಿಬ್ಬಂದಿಯ ಮೇಲೆಯೂ ಒತ್ತಡ ಬರುತ್ತಿರಲಿಲ್ಲ.
ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಧಾರವಾಡದಲ್ಲಿ ಒಂದು ವೈದ್ಯಕೀಯ ಕಾಲೇಜನ್ನು ಸ್ಥಾಪಿಸಲು ಇಚ್ಛಿಸಿದರು. ಅದಕ್ಕಾಗಿ ಅವರಿಗೆ ಜಾಗದ ಅವಶ್ಯಕತೆ ಇತ್ತು. ಅಂದು ಸರ್ಕಾರಿ ಜಾಗ ನೀಡುವ ಅಧಿಕಾರ ನನ್ನ ಕೈಯಲ್ಲಿ ಇತ್ತು. ನಾನು ಒಂದು ಸೂಕ್ತ ಸ್ಥಳದ ಬಗ್ಗೆ ಪ್ರಸ್ತಾಪಿಸಿದೆ. ಆದರೆ, ಅವರು ಕಾರಣಾಂತರಗಳಿಂದ ಬೇರೆ ಖಾಸಗಿ ಜಾಗವನ್ನು ಕೊಂಡುಕೊಂಡರು. ಇಂದು ಅಲ್ಲಿ ಒಂದು ಅತ್ಯುತ್ತಮ ವೈದ್ಯಕೀಯ ಕಾಲೇಜು ತಲೆಯೆತ್ತಿ ನಿಂತಿದೆ. ವೀರೇಂದ್ರ ಹೆಗ್ಗಡೆಯವರು ಯಾವ ಕೆಲಸವನ್ನು ಮಾಡಿದರೂ ಅದು ಶ್ರೇಷ್ಟ ಮಟ್ಟದ ಕೆಲಸವೇ ಆಗಿರುತ್ತದೆ. ಮಾಡುವ ಕೆಲಸಗಳಲ್ಲಿ ಅವರು ತಮ್ಮ ಶ್ರದ್ಧೆ ಮತ್ತು ಶ್ರೇಷ್ಠತೆಯ ಛಾಪನ್ನು ಮೂಡಿಸದೇ ಇರುವುದಿಲ್ಲ. ಅದೇ ಸಮಯದಲ್ಲಿ, ಖ್ಖಉಖಊಖಿಖಿಐ ಎಂಬ ಹೊಸ ಸಂಸ್ಥೆಯನ್ನು ಸಹ ಅವರ ನೇತೃತ್ವದಲ್ಲಿ ಉತ್ತಮ ಸ್ವಉದ್ಯೋಗ ಹಾಗೂ ಕೌಶಲ್ಯ ಅಭಿವೃದ್ಧಿ ಕೆಲಸದಲ್ಲಿ ತೊಡಗಿಸಿದ್ದು. ಸಣ್ಣ ಉದ್ಯಮಗಳು ನಮ್ಮ ಹಳ್ಳಿಗಳಲ್ಲಿ ಬಂದರೆ ಆರ್ಥಿಕ ಸುಧಾರಣೆ ಆಗಬಹುದು ಎನ್ನುವುದರಲ್ಲಿ ಸಂಶಯವಿಲ್ಲ. ಆದರೆ ಹಿಂದಿನ ಸುಮಾರು ಫಲಾನುಭವಿಗಳು ಸರಿಯಾಗಿ ಸಾಲ ಕಟ್ಟದೆ ಇರುವುದರಿಂದ ಬ್ಯಾಂಕುಗಳು ಸಾಲ ನೀಡಲು ಹಿಂಜರಿಯುತ್ತವೆ. ಬಡವರ ಹತ್ತಿರ ಭದ್ರತೆ ಒದಗಿಸಲು ಏನೂ ಇರುವುದಿಲ್ಲ. ಇರುವುದು ಕೇವಲ ಕೌಶಲ್ಯ ಮತ್ತು ಸ್ವಾವಲಂಭನೆಯ ಕುರಿತು ಆಸಕ್ತಿ ಮಾತ್ರ. ಇಂಥಹ ಅಭ್ಯರ್ಥಿಗಳು ಸ್ವಸಹಾಯ ಗುಂಪುಗಳನ್ನು ಕಟ್ಟಿ ಸಾಲಕ್ಕಾಗಿ ಮುಂದೆ ಬಂದರೆ, ತಕ್ಷಣ ಅವರಿಗೆ ಸಾಲ ಸಿಗುತ್ತದೆ. ಐದು ಲಕ್ಷ ರುಪಾಯಿಗಳನ್ನು ಖರ್ಚು ಮಾಡಿ ಧಾರವಾಡದ ಬಾಲಭವನವನ್ನು ನವೀಕರಿಸಲಾಯಿತು. ಇಂದು ಉತ್ತಮವಾದ ಕಟ್ಟಡದಲ್ಲಿ ಬಾಲಭವನ ಕಾರ್ಯನಿರ್ವಹಿಸುತ್ತಿದೆ.
ಅದೇ ಸಮಯದಲ್ಲಿ 'ಹುಬ್ಬಳ್ಳಿ-ಧಾರವಾಡದ ಬೈಪಾಸ್ ರಸ್ತೆ' ಯೋಜನೆಯನ್ನು ಕೈಗೆತ್ತಿಕೊಳ್ಳಲಾಯಿತು. ಮುಖ್ಯಮಂತ್ರಿಗಳು ಈ ಯೋಜನೆಗೆ ತಳಪಾಯ ಹಾಕಿದರು. ಈ ರಸ್ತೆಯನ್ನು ಮಾಡಲು ಭೂಮಿ ಸ್ವಾಧೀನಪಡಿಸಿಕೊಂಡರು. ಇದರ ನಿರ್ಮಾಣವಾಗಿದ್ದರಿಂದ ಭಾರವಾದ ಟ್ರಕ್‌ಗಳು ಊರಿನೊಳಗೆ ಬಾರದೆ, ಬೈಪಾಸ್ ರಸ್ತೆ ಮೂಲಕ ಸಂಚಾರ ಮಾಡಬಹುದಾಗಿದೆ. ಇದು ಅಶೋಕ್ ಖೇಣಿಯವರ ಮೊದಲನೇ ಪ್ರಾಜೆಕ್ಟ್ ಆಗಿತ್ತು. ಎರಡು ವರ್ಷದ ಒಳಗೇ ಅವರು ಈ ಯೋಜನೆಯನ್ನು ಮುಗಿಸಿಕೊಟ್ಟರು. ಇನ್ನು ಕೃಷಿ ವಿಶ್ವವಿದ್ಯಾಲಯಕ್ಕಾಗಿಯೂ ಬಹಳಷ್ಟು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಯಿತು. ಕೆಲವು ಜನರಿಗೆ ಹತು,್ತ ಇಪ್ಪತ್ತು ವರ್ಷಗಳ ಹಿಂದೆಯೇ ಪರಿಹಾರ ಕೊಡಲಾಗಿತ್ತು, ಆದರೂ ಅವರು ಸ್ಥಳವನ್ನು ಖಾಲಿ ಮಾಡಿರಲಿಲ್ಲ. ನಾನು ಜಿಲ್ಲಾಧಿಕಾರಿಯಾಗಿ ಬಂದಾಗ ಪರಿಹಾರ ಕೊಟ್ಟಾಗಿರುವ ಜಾಗಗಳನ್ನು ಸ್ವಾಧೀನಕ್ಕೆ ತೆಗೆದುಕೊಂಡು ವಿಶ್ವವಿದ್ಯಾಲಯಕ್ಕೆ ಹಸ್ತಾಂತರಿಸಿದೆ. ಇವತ್ತು ಒಂದು ಭವ್ಯವಾದ ಸಂಶೋಧನಾ ಪ್ರಯೋಗಾಲಯ ಅಲ್ಲಿ ಕಾರ್ಯಗತವಾಗಿದೆ.
(ಮುಂದುವರೆಯುವುದು)
- ಶಾಲಿನಿ ರಜನೀಶ್, ಐಎಎಸ್
anisikeprabha@gmail.com