ಅಂಕಣಗಳು

ಹರಾಜಾಯಿತು ರಾಜ್ಯದ ಗಂಭೀರ ರಾಜಕಾರಣ

ಸುಮಾರು ಐದು ವರ್ಷಗಳ ಹಿಂದೆ (ಒಂದೆರಡು ತಿಂಗಳು ಹೆಚ್ಚು ಕಡಿಮೆ) ಕರ್ನಾಟಕ ವಿಧಾನ ಸಭೆ ಚುನಾವಣೆಯ ಸಮಯದಲ್ಲಿ ಭಾರತೀಯ ಜನತಾ ಪಾರ್ಟಿ ಮೊಳಗಿಸಿದ್ದ ಘೋಷಣೆ: 'ರಾಜ್ಯದಲ್ಲಿ ಲಿಂಗಾಯತರಿಗೆ ಅನ್ಯಾಯವಾಗಿದೆ'.
 ಏನದು ಅನ್ಯಾಯ? ಕಾಂಗ್ರೆಸ್- ಜೆಡಿಎಸ್ ಸರ್ಕಾರವನ್ನು ಎಚ್.ಡಿ. ಕುಮಾರಸ್ವಾಮಿ ಅವರು ಉರುಳಿಸುವಾಗ ಯಡಿಯೂರಪ್ಪ ಅವರನ್ನು ಇಪ್ಪತ್ತು ತಿಂಗಳ ಅನಂತರ ಮುಖ್ಯಮಂತ್ರಿಯನ್ನಾಗಿ ಮಾಡುವ ವಚನ ನೀಡಿದ್ದರು. 2008ರಲ್ಲಿ ಆ ವಚನವನ್ನು ಪಾಲಿಸಲಿಲ್ಲ. ಆದ್ದರಿಂದ ಲಿಂಗಾಯತರಿಗೆ ಅನ್ಯಾಯವಾಗಿದೆ.
 ಆ ಘೋಷಣೆಯನ್ನೇ ನಂಬಿ, ರಾಜ್ಯದ ಜನ ಯಡಿಯೂರಪ್ಪ ನೇತೃತ್ವದ ಬಿಜೆಪಿಗೆ ಬಹುಮತ ನೀಡಿದರೋ ಇಲ್ಲವೋ ಗೊತ್ತಿಲ್ಲ. ಆದರೆ ಯಡಿಯೂರಪ್ಪ ಅವರಿಗೆ ಸರ್ಕಾರವನ್ನು ರಚಿಸುವುದಕ್ಕೆ, ತಂತ್ರಗಾರಿಕೆಯ ಪ್ರದರ್ಶನಕ್ಕೆ, ಅವಕಾಶವನ್ನಂತೂ ನೀಡಿದರು. ಅದನ್ನು ಅವರು ಆಪರೇಷನ್ ಕಮಲದ ಮೂಲಕ ಯಶಸ್ವಿಗೊಳಿಸಿದರು. ಅದನ್ನು ವೀರಶೈವ ಸಮಾಜ ತನ್ನ ಯಶಸ್ಸು ಎಂದು ಭಾವಿಸೀತೇ? ಆ ಪ್ರಶ್ನೆಗೆ ಉತ್ತರ ಸಿಗುವುದಕ್ಕೆ ಇನ್ನು ನೂರು ದಿನಗಳು ಬೇಕು.
 ಯಡಿಯೂರಪ್ಪ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಸುಮಾರು ಸಾವಿರ ದಿನಗಳ ಅನಿರ್ಭಂದಿತ, ದೆವ್ವದ ಕಾಟವಿಲ್ಲ, ಅರಸನ ಅಂಕೆ ಇಲ್ಲ, ಎನ್ನುವಂತೆ ಆಡಳಿತ ನಡೆಸಿದರು. ಬೇಕು ಬೇಕಾದವರಿಗೆ ಬೊಕ್ಕಸದ ಹಣವನ್ನು ಹಂಚಿದರು. ತಮ್ಮ ಜನಕಲ್ಯಾಣ ಕಾರ್ಯಕ್ರಮಗಳಿಂದ ಜನಪ್ರಿಯತೆಯನ್ನು ಗಳಿಸಿದರು.
 ಆದರೆ, ಅದೇ ಸಮಯದಲ್ಲೇ, ರಾಜ್ಯದ ಆಡಳಿತದ ಎಲ್ಲ ವಿಭಾಗಗಳಲ್ಲಿ, ಅತ್ಯುನ್ನತ ಮಟ್ಟದಲ್ಲಿ ಕೈಗೊಳ್ಳಲಾದ ಸೂಕ್ಷ್ಮ ಹಾಗೂ ಮಹತ್ವದ ನಿರ್ಧಾರಗಳ ಹಿಂದೆ ಬ್ರಹ್ಮಾಂಡ ಸ್ವರೂಪದ ಭ್ರಷ್ಟಾಚಾರ ಅಡಗಿದೆ ಎನ್ನುವ ಪ್ರಚಾರವೂ ವಿಪರೀತದ ಮಟ್ಟಕ್ಕೆ ಹೋಗಿತ್ತು. ಅದೇನೂ ಪೂರ್ತಿ ಸುಳ್ಳಲ್ಲ.
 ಮೂರು ಬಾರಿ ಬಿಜೆಪಿಯಲ್ಲಿ ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಇಳಿಸುವ ಪ್ರಯತ್ನ ನಡೆದಿದ್ದೂ ನಿಜ. ಆದರೆ ಆ ಪ್ರಯತ್ನ ಯಶಸ್ವಿಯಾಗಿದ್ದು ಬಿಜೆಪಿಯ ವರಿಷ್ಠರ ಪ್ರತಿನಿಧಿಗಳಾಗಿ, ದೆಹಲಿಯಿಂದ ಅರುಣ ಜೈಟ್ಲಿ, ರಾಜನಾಥ ಸಿಂಗ್ (ಈಗಿನ ಅಧ್ಯಕ್ಷರು) ಬೆಂಗಳೂರಿಗೆ ಬಂದಾಗಲೇ. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ಕೊಡಲೇಬೇಕಾಗಿ ಬಂದಾಗ, ಅವರು ರಾಜಭವನಕ್ಕೆ ಪತ್ರ ಸಲ್ಲಿಸಲು ಮೆರವಣಿಗೆಯಲ್ಲಿ ಹೋದಾಗ, ಅವರ ಜತೆಯಲ್ಲಿ ಪಾದಯಾತ್ರೆಯಲ್ಲಿ ಸೇರಿಕೊಂಡ ಶಾಸಕರ ಸಂಖ್ಯೆ ಸುಮಾರು ಎಪ್ಪತ್ತು.
 ಆಗ ಸಚಿವೆ ಶೋಭಾ ಕರಂದ್ಲಾಜೆ ಮೊಳಗಿಸಿದ ಘೋಷಣೆ: ನೀವು (ಬಿಎಸ್‌ವೈ) ಮುಖ್ಯಮಂತ್ರಿಯಾಗಿರಲಿ, ಅಧಿಕಾರದಲ್ಲಿರದೇ ಹೋಗಲಿ, ನೀವೇ ನಮ್ಮ ನಾಯಕರು.
 ಆದರೆ ಈಗ ಜಗದೀಶ ಶೆಟ್ಟರ್ ಸರ್ಕಾರದ ಪತನಕ್ಕೆ ನಾಂದಿಯ ರೂಪದಲ್ಲಿ ಶಾಸಕರ (ವಿಧಾನ ಸಭೆ ಸದಸ್ಯರು) ರಾಜಿನಾಮೆ ಕೊಡಿಸುವ ಭಗೀರಥ ಪ್ರಯತ್ನ ನಡೆಸಿದರೂ, ಯಡಿಯೂರಪ್ಪ ಅವರಿಗೆ, ಹದಿಮೂರಕ್ಕಿಂತ ಹೆಚ್ಚು ಮಂದಿ ಶಾಸಕರನ್ನು ಜಮಾಯಿಸುವುದು ಸಾಧ್ಯವಾಗಲಿಲ್ಲ.
 ಅದು ರಾಜಕೀಯದಲ್ಲಾಗಿರುವ ಬದಲಾವಣೆ. ಯಡಿಯೂರಪ್ಪ ಬಂಡಾಯವೆದ್ದ ಕೂಡಲೇ ಬಿಜೆಪಿಯ ಲಿಂಗಾಯತ ಶಾಸಕರೆಲ್ಲರೂ ಬಂಡಾಯದ ಬಾವುಟವನ್ನೇ ಹಿಡಿದು ವಿಧಾನ ಸಭೆಯ ಸ್ಪೀಕರ್ ಮುಂದೆ ನಿಲ್ಲುತ್ತಾರೆನ್ನುವ ಚಿತ್ರ ಕನಸಾಗಿಯೇ ಉಳಿದಿತ್ತು. ಅದು ಈಗ ದುಸ್ವಪ್ನವಾಗಲಿದೆ.
 ಯಡಿಯೂರಪ್ಪ ಅವರು ಶೆಟ್ಟರ್ ಸರ್ಕಾರದ ಪತನಕ್ಕೆ ಹಲವಾರು ಲಗ್ನಗಳನ್ನು ನಿಶ್ಚಯ ಮಾಡಿದ್ದರೂ, ಎಲ್ಲವೂ ನಿಷ್ಫಲವಾಯಿತು. ಈಗ ಆ ಪಾಳೆಯದ ವಕ್ತಾರರು ಸರ್ಕಾರವನ್ನು ಉರುಳಿಸುವುದು ತಮ್ಮ ಗುರಿಯಲ್ಲ ಎಂದಿದ್ದಾರೆ. ಅಲ್ಲಿಗೆ ಇದುವರೆಗೆ ನಡೆದಿದ್ದೇನು?
 ಒಂದೇ ಮಾತಿನಲ್ಲಿ ಹೇಳುವುದಾದರೆ, ಕರ್ನಾಟಕ ರಾಜ್ಯದ ಗಂಭೀರ ರಾಜಕೀಯ ಹರಾಜಾಗಿದೆ. ಇನ್ನು ಮುಂದಿನದ್ದು ಸಿಕ್ಕಿದವರಿಗೆ ಸೀರುಂಡೆಯ ರಾಜಕೀಯವೇ.
ಲಿಂಗಾಯತರ ಗೊಂದಲ
ಉತ್ತರ ಕರ್ನಾಟಕದ ಲಿಂಗಾಯತ ಸಮುದಾಯಗಳ ನಾಯಕತ್ವದ ಗುತ್ತಿಗೆ ಪಡೆದಂತಹ ಹಲವು ಯಡಿಯೂರಪ್ಪ ಬೆಂಬಲಿಗ ಶಾಸಕರು ಆ ಭಾಗದ ಲಿಂಗಾಯತ ಸಮುದಾಯದ ಮಧ್ಯದಿಂದಲೇ ಎದ್ದು ಬಂದಿರುವ ಜಗದೀಶ ಶೆಟ್ಟರ್ ಅವರನ್ನು ತೆಗೆಯುವುದರಲ್ಲಿ ಸಹಕರಿಸಲು ಸಿದ್ಧರಿಲ್ಲವೆನ್ನುವುದು ಸ್ಪಷ್ಟವಾಗಿದೆ.
 ಆ ನಾಯಕರಲ್ಲಿ ಕೆಲವರು ಅವಕಾಶ ಸಿಕ್ಕರೆ, ಕಾಂಗ್ರೆಸ್ ಒಪ್ಪಿದರೆ, ಕಾಂಗ್ರೆಸ್ ಶಿಬಿರಕ್ಕೇ ಹೋಗಲು ಸಿದ್ಧರಾಗಿರುವಂತಿದೆ. ಈಗಲೂ ಅವರು ಜಗದೀಶ ಶೆಟ್ಟರ್ ನೇತೃತ್ವದ ಬಿಜೆಪಿ ಮಂತ್ರಿಮಂಡಲದಲ್ಲಿನ ಪ್ರಮುಖ ನಾಯಕರೇ.
 ಇಂತಹ ಚೋದ್ಯದ ರಾಜಕೀಯಕ್ಕೆ ಹಿಂದಿನ ಉದಾಹರಣೆಗಳನ್ನು ಕೊಡುವುದು ಕಷ್ಟ. ಮುಖ್ಯಮಂತ್ರಿಯಲ್ಲಿ ವಿಶ್ವಾಸವಿಲ್ಲದೇ, ಆಳುವ ಪಕ್ಷದಲ್ಲಿ ನಂಬಿಕೆ ಇಲ್ಲದೇ ಇದ್ದರೂ, ಆ ಮಂತ್ರಿಮಂಡಲದಲ್ಲೇ ಮುಂದುವರಿಯುತ್ತೀವಿ ಎನ್ನುವುದು ಸಜ್ಜನಿಕೆಯ ರಾಜಕೀಯಕ್ಕೆ ತಿಲಾಂಜಲಿ ನೀಡಿದಂತೆಯೇ.
 ಅಂದ ಹಾಗೆ ಸದಾನಂದ ಗೌಡರನ್ನು ಮುಖ್ಯಮಂತ್ರಿಯಾಗಿ ಮಾಡಿ, ಅನಂತರ ಅವರನ್ನು ಯಾವ ಕಾರಣವನ್ನೂ ಕೊಡದೇ ಅಲ್ಲಿಂದ ತೆಗೆದುಹಾಕಿ, ಆ ಸ್ಥಾನಕ್ಕೆ ಲಿಂಗಾಯತರಾದ ಜಗದೀಶ ಶೆಟ್ಟರನ್ನೇ ನೇಮಿಸಲು ಕಾರಣವಾಗಿದ್ದು ಯಡಿಯೂರಪ್ಪ ಅವರೇ. ಈಗ ಅದೇ ಶೆಟ್ಟರ್, ಪರಮ ಶತ್ರುವಾಗಿದ್ದಾರೆ.
ಸ್ಪೀಕರ್ ಬೋಪಯ್ಯ ವರ್ತನೆ
ಯಡಿಯೂರಪ್ಪ ಅವರ ಆದೇಶವನ್ನು ಪಾಲಿಸುವುದಕ್ಕೆ ಮುಂದಾದ ಹದಿಮೂರು ಮಂದಿ ವಿಧಾನಸಭೆ ಸದಸ್ಯರನ್ನು ಅವರ ರಾಜಿನಾಮೆಯನ್ನು ಅಂಗೀಕರಿಸುವ ಸಮಯದಲ್ಲಿ, ಸ್ಪೀಕರ್ ಕೆ.ಜಿ. ಬೋಪಯ್ಯ ನಡೆಸಿಕೊಂಡ ರೀತಿ-ನೀತಿ ಖಂಡಿತವಾಗಿಯೂ ಯಾವುದೇ ಸಂಸದೀಯ ಸದನಕ್ಕೂ ಮರ್ಯಾದೆ ತರುವಂತಹದ್ದಲ್ಲ.
ಎರಡು ದಿನ ಕರ್ನಾಟಕ ವಿಧಾನ ಸಭೆ ಸ್ಪೀಕರ್ ಎಲ್ಲಿದ್ದಾರೆ ಎನ್ನುವುದೇ ಯಾರಿಗೂ ಗೊತ್ತಿಲ್ಲವೆನ್ನುವ ಸ್ಥಿತಿಯನ್ನು ನಿರ್ಮಿಸಿದ್ದು, ಅನಂತರ ರಾಜಿನಾಮೆ ಸ್ವೀಕಾರದ ಔಚಿತ್ಯ ಕುರಿತಂತೆ, ಅನೌಪಚಾರಿಕವಾಗಿ ಲೋಕ ಸಭೆಯ ಅಧಿಕಾರಿಗಳ ಸಲಹೆ ಪಡೆದಿದ್ದು ನಿಜಕ್ಕೂ ಸಲ್ಲದ ವರ್ತನೆ.
ಕರ್ನಾಟಕ ವಿಧಾನ ಮಂಡಲದ ಕಾರ್ಯದರ್ಶಿಗಳಲ್ಲಿ ಕೆಲವರನ್ನು ಹಿಂದೆ ಲೋಕಸಭೆಯ ಹಿರಿಯ ಅಧಿಕಾರಿಗಳು ಮಾರ್ಗದರ್ಶನಕ್ಕಾಗಿ ಸಂಪರ್ಕಿಸಿದ ಉದಾಹರಣೆಗಳಿವೆ. ಈಗ ರಾಜಕೀಯ, ಸಂವಿಧಾನ, ವಿಧಾನ ಮಂಡಲದ ಸ್ವರೂಪ ಕುರಿತ ಸಾಮಾನ್ಯ ಜ್ಞಾನವಿರುವವರಿಗೂ, ರಾಜಿನಾಮೆಯನ್ನು ಶಾಸಕರು ಸ್ವಂತ ಇಚ್ಛೆಯಿಂದ, ಬಾಹ್ಯ ಒತ್ತಡವಿಲ್ಲದೆ ಕೊಟ್ಟರೆ, ಅದನ್ನು ಒಪ್ಪಲೇ ಬೇಕೆನ್ನುವುದು ಗೊತ್ತು. ಆದರೆ ಸ್ಪೀಕರ್ ದೆಹಲಿಗೇ ಫೋನ್ ಮಾಡಿದ್ದರಂತೆ.
ನಿಜ. ಕರ್ನಾಟಕ ಬಿಜೆಪಿ ಹೋಳಾಗಿದೆ. ಸ್ಪಷ್ಟವಾದ ಉದ್ದೇಶ ರಹಿತ, ಸಮರ್ಥ ನಾಯಕತ್ವದ ಅಭಾವ ಹಾಗೂ ಪ್ರಮುಖ ವಿಷಯಗಳಲ್ಲಿ ಅನಿಶ್ಚಿತತೆಯ ತೊಳಲಾಟದಿಂದ ನರಳುತ್ತಿದೆ. ಆದರೆ ಅದನ್ನು ರಾಜಿನಾಮೆ ಪ್ರಕರಣದಂತಹ ಪ್ರಹಸನದ ಪ್ರದರ್ಶನಗಳಿಂದ ಜಗಜ್ಜಾಹೀರು ಮಾಡಬೇಕಾದ ಅಗತ್ಯವಿರಲಿಲ್ಲ.
ಈಗಿನ ವಿಧಾನ ಸಭೆ, ತನ್ನ ಉಪಯುಕ್ತತೆಯನ್ನು ಕಳೆದುಕೊಂಡು ಒಂದು ವರ್ಷವೇ ಉರುಳಿದೆ. ಇನ್ನು ಹಾಗೂ-ಹೀಗೂ, ಎರಡು ತಿಂಗಳಷ್ಟೇ ಉಳಿದಿರುವುದು. ಆ ಅವಧಿಯಲ್ಲೇ ಜಗದೀಶ ಶೆಟ್ಟರ್ ಮುಖ್ಯಮಂತ್ರಿಯಾಗಿ ತಮ್ಮ ಚೊಚ್ಚಲ ಬಜೆಟ್ ಮಂಡಿಸಬೇಕಾಗಿದೆ. ಅದು ಪಕ್ಷಧ ಪ್ರಣಾಳಿಕೆಯ ಸ್ವರೂಪದಲ್ಲೇ ಇರಬಹುದು. ಹಾಗೆಂದು ಈಗಾಗಲೇ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಹೇಳಿದ್ದಾಗಿದೆ.
 ವಿಧಾನ ಸಭೆ ಚುನಾವಣೆಯ ಪ್ರಚಾರ ಸಮಯದಲ್ಲಿ ಬಿಜಿಪಿಗೆ ಜಗದೀಶ ಶೆಟ್ಟರ್‌ರ ಬಜೆಟ್ ಒಂದು ಅನುಕೂಲವಾದ ದಾಖಲೆಯಾಗಬಹುದಷ್ಟೇ. ಆ ದಾಖಲೆಗೆ ಅದಕ್ಕಿಂತ ಹೆಚ್ಚು ಮೌಲ್ಯವನ್ನು ಆರೋಪಿಸುವ ಅಗತ್ಯವಿಲ್ಲ.
ಕಾಂಗ್ರೆಸ್ ಶಿಬಿರದಲ್ಲಿ
ಕಾಂಗ್ರೆಸ್ಸಿನ ಅತಿರಥ- ಮಹಾರಥರು, ಜೈಪುರದ ಚಿಂತನ ಶಿಬಿರದ ಮಹತ್ವದ ಚರ್ಚೆಗಳಲ್ಲಿ ಪಾಲುಗೊಂಡು ಅಥವಾ ಅದಕ್ಕೆ ಸಾಕ್ಷಿಗಳಾಗಿ, ರಾಹುಲ ಗಾಂಧಿ ಅವರನ್ನು ಅಟ್ಟಕ್ಕೇರಿಸಿ ಉಘೇ ಉಘೇ ಘೋಷಣೆಯ ಗುಂಗಿನಲ್ಲೇ ಬೆಂಗಳೂರಿಗೆ ಹಿಂದಿರುಗಿದ್ದಾರೆ. ಪಕ್ಷ ಈಗ ಇನ್ನೊಂದು ಪಾದಯಾತ್ರೆಗೆ ಸಜ್ಜಾಗುತ್ತಿದೆ. ಅದಕ್ಕೆ ಬೇರೆ ಯಾವ ರೀತಿಯ ರಾಜಕೀಯ ಹೋರಾಟವೂ ಸಾಧ್ಯವಿಲ್ಲ. ಭ್ರಷ್ಟಾಚಾರ, ದುರಾಡಳಿತದ ವಿರುದ್ಧ ಹೋರಾಡಲು ರಾಜಕೀಯ ಸಂಕಲ್ಪ ಶಕ್ತಿ ಬೇಕು. ನೈತಿಕ ಹಕ್ಕು ಬೇಕು. ಸದ್ಯಕ್ಕೆ ಅವೆರಡೂ ವಿಭಾಗಗಳಲ್ಲಿ ಕಾಂಗ್ರೆಸ್ಸಿನ ಸಂಪತ್ತು ಕರಗಿಹೋಗಿದೆ.
ಆದರೂ, ಕಾಂಗ್ರೆಸ್ಸಿನಲ್ಲಿ ಎಷ್ಟೇ ಒಳಜಗಳಗಳಿರಲಿ, ಭ್ರಷ್ಟಾಚಾರಿಗಳಿಗೆ ಮಣೆ ಹಾಕುವ ಪ್ರವೃತ್ತಿಯೂ ಇರಲಿ, ನಾಯಕತ್ವಕ್ಕಾಗಿ ಇತರ ಪಕ್ಷಗಳಲ್ಲಿನ ಪ್ರಭಾವಿಗಳನ್ನು ಸೆಳೆಯುವ ಕೆಟ್ಟ ತಂತ್ರದಲ್ಲಿ ವಿಶ್ವಾಸವಿದ್ದರೂ, ಈಗಲೂ ಕಾಂಗ್ರೆಸ್ಸೇ ರಾಜ್ಯದಲ್ಲಿ ಅತಿ ದೊಡ್ಡ ಹಾಗೂ ಸಂಘಟಿತ ರಾಜಕೀಯ ಪಕ್ಷ.
ಕಾಂಗ್ರೆಸ್ ಮುಖ್ಯಮಂತ್ರಿ ಸ್ಥಾನಕ್ಕೆ ವ್ಯಕ್ತಿಗಳನ್ನು ಚುನಾವಣೆಗೆ ಮುಂಚೆ ಹೆಸರಿಸುವ ಸಂಪ್ರದಾಯವಿಲ್ಲ ಎನ್ನುವುದು ಅರ್ಥಹೀನ. ಹಿಂದೆ, ದೇವರಾಜ ಅರಸು, ವೀರೇಂದ್ರ ಪಾಟೀಲ್ ಹಾಗೂ ಎಸ್ಸೆಮ್ ಕೃಷ್ಣ ಅವರ ಹೆಸರನ್ನು ಬಹಿರಂಗವಾಗಿ ಡಂಗುರ ಹೊಡೆಯದೇ ಇದ್ದರೂ, ಅವರೇ ಚುನಾವಣೆ ನಂತರದ ಮುಖ್ಯಮಂತ್ರಿ ಎನ್ನುವಂತೆ ದೆಹಲಿ ದರ್ಬಾರಿನ ಪ್ರಮುಖರೂ ನಡೆದುಕೊಂಡಿದ್ದರು, ರಾಜ್ಯದ ನಾಯಕರೂ ವರ್ತಿಸಿದ್ದರು.
ಈಗ ಅಂತಹದ್ದೇನೂ ಕಂಡು ಬರುತ್ತಿಲ್ಲ. ಎಲ್ಲವೂ ದೆಹಲಿಗೇ ಬಿಟ್ಟದ್ದು ಎಂದು ಬಹಿರಂಗವಾಗಿ ಹೇಳಿ, ಅಂತರಂಗದಲ್ಲಿ ತಮ್ಮವರಿಗೇ ಹೆಚ್ಚು ಟಿಕೆಟ್‌ಗಳನ್ನು ಕೊಡಿಸುವ ಪ್ರಯತ್ನ ಕೆಲವು ನಾಯಕರಿಂದ ನಡೆದಿರುವುದು ನಿಜ.
ಕಾಂಗ್ರೆಸ್, ಜಾತ್ಯತೀತ ಜನತಾ ದಳಗಳು ಬಿಜೆಪಿಯನ್ನು ವಾಚಾಮಗೋಚರವಾಗಿ ತೆಗಳುವ ಕಾಯಕವನ್ನು ಮುಂದುವರಿಸಿವೆ. ಅದಕ್ಕೆ ಪ್ರತಿಕ್ರಿಯೆ ರೂಪದಲ್ಲಿ ಯಡಿಯೂರಪ್ಪ ಅವರು ಕಾಂಗ್ರೆಸ್, ಜೆಡಿಎಸ್‌ಗಳನ್ನು ಟೀಕಿಸುವುದನ್ನು ಕಡಿಮೆ ಮಾಡಿದ್ದಾರೆ.
ಯಡಿಯೂರಪ್ಪ ಅವರ ಮಟ್ಟಿಗೆ ಹೇಳುವುದಾದರೆ, ಅವರ ಪಕ್ಷದ (ಅದರ ಹೆಸರು ಏನಾದರೂ ಇರಲಿ) ಪ್ರಚಾರಕ್ಕೆ, ನಾಯಕರ ಪಲ್ಲಕ್ಕಿ ಹೊರುವುದಕ್ಕೆ ಈಗ ಸಂಘ ಪರಿವಾರದ ಪದಾತಿ ಪಡೆಗಳ ಸೇವೆ ಲಭ್ಯವಿಲ್ಲ. ವೀರಶೈವ ಮಠಗಳಲ್ಲಿ ಅಂತಹ ಪಡೆಗಳಿಲ್ಲ.
ಎಪ್ಪತ್ತು ಶಾಸಕರ ಮಾತು ಹಾಗಿರಲಿ, ಯಡಿಯೂರಪ್ಪ ಅವರ ಹಿಂದೆ ಭದ್ರವಾಗಿ ನಿಲ್ಲಲು ಇಪ್ಪತ್ತು ಮಂದಿ ಶಾಸಕರಿದ್ದರೂ ಶೆಟ್ಟರ್ ಸರ್ಕಾರದ ಪತನವಾಗುತ್ತಿತ್ತು. ಈಗ ಇಲ್ಲದ ಜನಪ್ರತಿನಿಧಿಗಳ ಶಕ್ತಿಯನ್ನು ಯಡಿಯೂರಪ್ಪ ಮುಂದೆ ಜನಸಮುದಾಯಗಳಿಂದ ಗಳಿಸುವುದಾದರೂ ಹೇಗೆ? ಅದು ಕೇಳಬಾರದ ಪ್ರಶ್ನೆ

ಕಿಡಿಗೇಡಿತನ: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಾವೇ ಆರಿಸಿದ್ದ ವಿಧಾನಸಭೆ ಸ್ಪೀಕರ್ ಕೆ.ಜಿ. ಬೋಪಯ್ಯ ಅವರನ್ನು ಮುಖ್ಯಮಂತ್ರಿಯ ಕೈಗೊಂಬೆ ಎಂದು ಕರೆಯುತ್ತಿದ್ದಾರೆ. ಅವರಿಗೆ ಜ್ಞಾನೋದಯವಾಗಿದ್ದು ಯಾವಾಗ?

- ಸತ್ಯ
anisikeprabha@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್-ಪ್ರಿಯಾಂಕಾ ವಶಕ್ಕೆ ಪಡೆದ ದೆಹಲಿ ಪೊಲೀಸರು: ಇಂಡಿಯಾ ಕೂಟದ 9 ಗಂಟೆಗಳ ಧರಣಿಗೆ ಬ್ರೇಕ್!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಚುನಾವಣಾ ಆಯೋಗದ ವಿರುದ್ಧ INDIA ಪ್ರತಿಭಟನೆ; 'ಕೈ' ನಾಯಕರು ಪೊಲೀಸ್ ವಶಕ್ಕೆ: ವ್ಯಾನ್ ನಿಂದ ಇಳಿದು ರಾಹುಲ್ ಜೊತೆ ಮರದ ಕೆಳಗೆ ಕುಳಿತ ಪ್ರಿಯಾಂಕ!

ಕಲಬುರಗಿಯಲ್ಲಿ ಶಾಕಿಂಗ್ ಘಟನೆ: ತೊಗರಿ ಹೊಲದಲ್ಲಿ ತರಬೇತಿ ವಿಮಾನ ತುರ್ತು ಭೂಸ್ಪರ್ಶ!