ಟಿಆರ್ಪಿ ಲೆಕ್ಕಾಚಾರದಲ್ಲಿ ಎಲ್ಲಿ ಹೋಯಿತು ಕಳಕಳಿ?
ಅಜಿತ್ ಹನುಮಕ್ಕನವರ್ ಅವರು ಮಾಧ್ಯಮಗಳ ಟಿಆರ್ಪಿ ಬಗ್ಗೆ ಬರೆದಿದ್ದಾರೆ. ಅದರ ಜೊತೆಗೆ ಸುಮ್ಮನೆ ಒಂದು ಪ್ರಪೋಸಲ್ ಅನ್ನೂ ಮುಂದಿಟ್ಟಿದ್ದಾರೆ.
ಟಿ.ಆರ್.ಪಿ ಗೊಡವೆ ಇಲ್ಲದೆ ಯಾರಾದರೂ ಧರ್ಮಾರ್ಥವಾಗಿ 100 ಕೋಟಿ ಬಂಡವಾಳ ಹೂಡುವವರು ಬೇಕಂತೆ. ಅಲ್ಲ 100 ಕೋಟಿ ಧರ್ಮಾರ್ಥವಾಗಿ ಬಂಡವಾಳ ಹೂಡುವವರು ಹೋಗಿ ಹೋಗಿ ಟಿ.ವಿ.ಚಾನಲ್ಗೆ ಹಣ ಹಾಕುತ್ತಾರಾ? ಅವರು ಅದಕ್ಕಿಂತ ಇನ್ನೂ ಒಳ್ಳೆಯ ಕೆಲಸ ಮಾಡಿಯಾರು.
ಇನ್ನು ಬಂಡವಾಳ ಹಾಕಿದವರು ಲಾಭ ಬರುವಂತಹ ಕಾರ್ಯಕ್ರಮ ಬಯಸುವುದು ಸಹಜ. ಹಾಗೆಂದು ಮೌಲ್ಯಯುತ ಕಾರ್ಯಕ್ರಮ ಕೊಟ್ಟವರನ್ನು ಹೊರಗೆ ಕಳಿಸುವುದು ಸರಿಯೆ? ಪತ್ರಿಕೆಗಳಲ್ಲಿ, ಮಾಧ್ಯಮಗಳಲ್ಲಿ ಕನ್ನಡ ಚಿತ್ರರಂಗವನ್ನು ವಿಶ್ಲೇಷಿಸುತ್ತ, 'ಒಳ್ಳೆಯ ಚಿತ್ರವನ್ನು ಕೊಟ್ಟರೆ ಜನರು ತಾವಾಗೆ ಚಿತ್ರ ನೋಡುತ್ತಾರೆ. ಬರಿ ದುಡ್ಡು ಮಾಡುವುದಕ್ಕೋಸ್ಕರ ಚಿತ್ರರಂಗಕ್ಕೆ ಬಂದವರಿಂದಾಗಿ ಚಿತ್ರ ರಂಗ ಈ ಪರಿಸ್ಥಿತಿಗೆ ಬಂದಿದೆ' ಎನ್ನುವವರು ಈ ಮಾಧ್ಯಮದ ಮಂದಿ. ಇದೇ ತತ್ವ ಮಾಧ್ಯಮದವರಿಗೆ ಅನ್ವಯವಾಗುವುದಿಲ್ಲವೆ?
ಇನ್ನು ಪತ್ರಿಕೆ ಮತ್ತು ಸುದ್ದಿ ವಾಹಿನಿಗಳು ವಿಭಿನ್ನ ಮಾಧ್ಯಮಗಳು. ಒಂದು ಬರಹ ಇನ್ನೊಂದು ದೃಶ್ಯ. ದೃಶ್ಯ ಮಾಧ್ಯಮ ಹೆಚ್ಚು ಪರಿಣಾಮಕಾರಿ. ಬರಹದಲ್ಲಿ ಎಲ್ಲವನ್ನೂ ಇಳಿಸಿದ ಹಾಗೆ ದೃಶ್ಯ ಮಾಧ್ಯಮದಲ್ಲಿ ತೊರಿಸುವುದಕ್ಕೆ ಆಗುವುದಿಲ್ಲ. ಅದಕ್ಕೆ ಕಾರಣವೂ ಇದೆಯಾದ್ದರಿಂದ ಅದನ್ನು ವಿಭಿನ್ನವಾಗಿ ಯೋಚಿಸಬೇಕು. ಇದರಲ್ಲೇ ದೃಶ್ಯ ಮಾಧ್ಯಮವಾದ ಚಿತ್ರರಂಗ ಹಾಗೂ ಅದರ ಅವಿಭಾಜ್ಯ ಅಂಗದಂತೆ ಕಾಣುವ ವಾಹಿನಿಗಳು ಸೋಲುವುದು. 'ಹಸಿ, ಬಿಸಿ' ಚಿತ್ರರಂಗದ ಕೊಡುಗೆಯಾದರೆ 'ಬಿಸಿ, ಬಿಸಿ' ವಾಹಿನಿಗಳ ಕೊಡುಗೆ. ಅಜಿತ್ ಅವರು ಸುದ್ದಿ ವಾಹಿನಿಗಳಲ್ಲಿ ಬರುವ ಎಲ್ಲಾ ಕಾರ್ಯಕ್ರಮಗಳನ್ನೂ ಸಮರ್ಥಿಸಿಕೊಂಡಿದ್ದಾರೆ. ಇದರ ಬಗ್ಗೆ ಟೀಕಿಸಿದವರನ್ನು ಹಿಂತಿರುಗಿ ಹಿಗ್ಗಾಮುಗ್ಗಾ ಜಾಡಿಸಿದ್ದಾರೆ. 'ನನಗೆ ಫೋನ್ ಮಾಡಿದವರದ್ದು ಸಿದ್ಧ ಭಾಷಣ, ಸಾಮಾಜಿಕ ತಾಣಗಳಲ್ಲಿ ಜನ ಓತಪ್ರೊತವಾಗಿ ಬರೆಯುತ್ತಾರೆ, ನಮ್ಮ ಸಮಸ್ಯೆ ಇವರಿಗೆ ಅರ್ಥವಾಗುವುದಿಲ್ಲ' ಇತ್ಯಾದಿ.
ಒಂದು ವಿಷಯವನ್ನು ಅವರು ಅರ್ಥ ಮಾಡಿಕೊಳ್ಳಬೇಕು. ಹೇಗೆ ಚಿತ್ರ ಚೆನ್ನಾಗಿದ್ದರೆ ಜನ ನೋಡುತ್ತಾರೋ ಹಾಗೆಯೇ ವಾಹಿನಿಗಳಲ್ಲಿ ಒಳ್ಳೆಯ ಕಾರ್ಯಕ್ರಮ ಇದ್ದರೆ ಖಂಡಿತ ನೋಡಿಯೇ ನೋಡುತ್ತಾರೆ. ಪ್ರಳಯದ ಬಗ್ಗೆ ಎಲ್ಲಾ ವಾಹಿನಿಗಳೂ ಒಂದರ ಮೇಲೊಂದು ಕಾರ್ಯಕ್ರಮ ಕೊಟ್ಟರು. ನಂತರ ಪ್ರಳಯದ ಬಗ್ಗೆ ಜನರು ಯಾಕೆ ಭಯಪಡುತ್ತಾರೆ ಎಂದು ಸ್ಟುಡಿಯೋದಲ್ಲಿ ಕಾರ್ಯಕ್ರಮ ನಡೆಸಿದರು. ಒಂದು ಕೈಯಲ್ಲಿ ಚಿವುಟುವುದು ಇನ್ನೊಂದು ಕೈಯಲ್ಲಿ ನೇವರಿಸುವುದು!
ರಾಷ್ಟ್ರೀಯ ವಾಹಿನಿಯೊಂದರ ಆಡಳಿತ ಮಂಡಳಿಯವರೇ ಕೆಲವರು ಹಣ ಪಡೆದು ಸುದ್ದಿ ತಿರುಚಲು ಯತ್ನಿಸಿ ವಿಷಯ ನ್ಯಾಯಾಲಯದ ಮೆಟ್ಟಿಲು ಏರಿದ್ದು ಹಲವರಿಗೆ ಗೊತ್ತಿದೆ. ಇದು ಮಾಧ್ಯಮದೊಳಗೆ ನಡೆಯುವ ಕಥೆ. ಒಂದು ಚಾನೆಲ್ನವರು ಒಬ್ಬನನ್ನು ಕರೆಸಿ ವಿಷಯ ಚರ್ಚಿಸಿದರೆ ಇನ್ನೊಂದು ವಾಹಿನಿ ಅವರ ವಿರೊಧಿಯನ್ನು ಕರೆಸಿ ಅವರೇ ಸರಿ ಎಂದು ಬಿಂಬಿಸಲು ಹೊರಡುತ್ತದೆ.
ಇನ್ನು ಕಾರ್ಯಕ್ರಮಗಳ ಜೊತೆಗೆ ಲಾಭವನ್ನೂ ಲೆಕ್ಕಹಾಕಬೇಕಾಗುತ್ತದೆ, ಟಿ.ಆರ್.ಪಿ ಹೆಚ್ಚಿದರೆ ಹೆಚ್ಚು ಜಾಹಿರಾತುಗಳು ಬರುತ್ತವೆ, ಅದರಿಂದ ಹೆಚ್ಚು ಲಾಭವಾಗುತ್ತದೆ ಎನ್ನುವುದೇನೋ ಸರಿ. ಅದಕ್ಕೆ ಬೇಸರ ಇಲ್ಲ. ಆದರೆ ಅದನ್ನೆಲ್ಲ ಮುಚ್ಚಿಟ್ಟು ಸಾಮಾಜಿಕ ಕಳಕಳಿಯ ಮುಖವಾಡವೇಕೆ ಹಾಕಿಕೊಳ್ಳುತ್ತೀರಿ? ನಮ್ಮದು ಏನಿದ್ದರೂ ಲಾಭದ ಕುರಿತು ಯೋಚನೆ ಎಂದೇಕೆ ದಿಟ್ಟತನದಿಂದ ಹೇಳುವುದಿಲ್ಲ?
-ಭೀಮಗುಳಿ ಶ್ಯಾಮ್