ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಈ ದಲ್ಲಾಳಿಗಳನ್ನು ನಿಯಂತ್ರಿಸಿ!

Vishwanath S
Updated On : 2 Jul 2013, 11:51 am

ಮಾನ್ಯ ದೇಶಪಾಂಡೆಯವರೇ,
ತಮಗೆ ತಿಳಿದಿರುವಂತೆ 1997 ರಲ್ಲಿ ಜನತಾದಳ ಸರ್ಕಾರದಲ್ಲಿ ನಾನು ಉನ್ನತ ಶಿಕ್ಷಣ ಸಚಿವನಾಗಿದ್ದಾಗ (ತಾವು ಕೂಡಾ ನನ್ನ ಸಹೋದ್ಯೋಗಿಗಳಾಗಿದ್ದಿರಿ) ಇಡೀ ದೇಶಕ್ಕೆ ಮಾದರಿಯಾದಂತಹ ಸಿಇಟಿ ವ್ಯವಸ್ಥೆಯನ್ನು ತಂದಿದ್ದು ಶೇ. 85 ರಷ್ಟು ವೈದ್ಯಕೀಯ ಸೀಟುಗಳನ್ನು ಹಾಗೂ ಶೇ 95ರಷ್ಟು ಇಂಜಿನಿಯರಿಂಗ್ ಸೀಟುಗಳನ್ನು ಸರ್ಕಾರದ ವತಿಯಿಂದ ತುಂಬುವ ಮತ್ತು ವಿದ್ಯಾರ್ಥಿಗಳು ತಮ್ಮ ಸೀಟು ಮತ್ತು ಕಾಲೇಜುಗಳನ್ನು ಅರ್ಹತೆಯ ಆಧಾರದ ಮೇಲೆ ತಾವೇ ಆಯ್ಕೆ ಮಾಡಿಕೊಳ್ಳುವ ಪಾರದರ್ಶಕ ವ್ಯವಸ್ಥೆ ಇತ್ತು. ಆದರೆ ನಂತರ ಬಂದಂತಹ ಸರ್ಕಾರಗಳು ಈ ವ್ಯವಸ್ಥೆಯನ್ನು ವಿಕೃತಗೊಳಿಸಿ ನ್ಯಾಯಾಲಯಗಳ ಆದೇಶದ ನೆಪ ಒಡ್ಡಿ ಕೆಲವು ನಿಯಮಾವಳಿಗಳನ್ನು ರಚಿಸಿಕೊಂಡು ಬರುತ್ತಿವೆ. ಅದರಡಿಯಲ್ಲಿ ಸರ್ಕಾರದ ಒಂದು ವ್ಯವಸ್ಥೆಯಲ್ಲಿ ಒಟ್ಟಾರೆ ವೈದ್ಯಕೀಯ, ಡೆಂಟಲ್ ಮತ್ತು ಇಂಜಿನಿಯರಿಂಗ್ ಸೀಟುಗಳಲ್ಲಿ ಪ್ರತಿಶತ 40 ಹಾಗೂ ಖಾಸಗಿ ಕಾಲೇಜುಗಳೇ ಸದಸ್ಯರಾಗುಳ್ಳ ಕಾಮೆಡ್ ಕೆ ಮತ್ತು ಕೆ.ಆರ್.ಎಲ್.ಎಂ ಮುಖಾಂತರ ಪ್ರತಿಶತ 40, ಅನಿವಾಸಿ ಭಾರತೀಯ ವಿದ್ಯಾರ್ಥಿಗಳಿಗೆ ಶೇ. 15 ಮತ್ತು ಶೇ.5 ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗೆ ಅವಕಾಶ ಮಾಡಿಕೊಟ್ಟಿದ್ದು ಸರಿಯಷ್ಟೆ.
ಆದರೆ ಖಾಸಗಿ ಕಾಲೇಜುಗಳೇ ಮಾಡಿಕೊಂಡಿರುವ ಒಕ್ಕೂಟವಾದ ಕಾಮೆಡ್-ಕೆ ಮುಖಾಂತರ ಭಾರತದ ಎಲ್ಲಾ ರಾಜ್ಯಗಳ ವಿದ್ಯಾರ್ಥಿಗಳ ಮತ್ತು ಸರ್ಕಾರದ ವತಿಯಿಂದ ಸಿಇಟಿ ಮೂಲಕ ಕರ್ನಾಟಕ ರಾಜ್ಯದ ಅರ್ಹ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲು ಕಾನೂನು ರೀತಿ ಅವಕಾಶವಿದ್ದು, ಸಿಇಟಿ ಮೂಲಕ ಈ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಕರ್ನಾಟಕ ರಾಜ್ಯ ಖಾಸಗಿ ಕಾಲೇಜುಗಳ ವ್ಯವಸ್ಥಾಪಕ ವರ್ಗದ ಒಕ್ಕೂಟವಾದ ಕಾಮೆಡ್-ಕೆ ಮತ್ತು ಕೆ.ಆರ್.ಎಲ್.ಎಂ ನಿಂದ ಆಯ್ಕೆಯಾಗುತ್ತಿರುವ ವಿದ್ಯಾರ್ಥಿಗಳು ಇತ್ತೀಚಿನ ವರ್ಷಗಳಲ್ಲಿ ಅರ್ಹತೆಗೆ ಅನುಗುಣವಾಗಿ ಆಯ್ಕೆಯಾಗುತ್ತಿಲ್ಲ ಎಂದು ಅನೇಕ ದೂರುಗಳು ಬಂದಿದ್ದು ಇದರಿಂದ ನೈಜ ಪ್ರತಿಭಾವಂತ, ಮಧ್ಯಮ ಮತ್ತು ಬಡವರ್ಗಗಳ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ. ವರ್ಷಕ್ಕೆ ವೈದ್ಯಕೀಯ ಕಾಲೇಜುಗಳಲ್ಲಿ ನಿಗದಿಯಾಗಿರುವ ಸುಮಾರು 700 ವಿದ್ಯಾರ್ಥಿಗಳಲ್ಲಿ ಸುಮಾರು ಅರ್ಧದಷ್ಟು ಹಣದ ಥೈಲಿ ಹೊಂದಿರುವ ಅನರ್ಹ ವಿದ್ಯಾರ್ಥಿಗಳು ಡ್ರಾಪ್ ಔಟ್ ವ್ಯವಸ್ಥೆಯ ಮೂಲಕ ಖಾಸಗಿ ವೈದ್ಯಕೀಯ, ದಂತ ವೈದ್ಯ ಮತ್ತು ಇಂಜಿನಿಯರಿಂಗ್ ವಿಭಾಗಗಳಲ್ಲಿ ಕಾಮೆಡ್-ಕೆ ಮುಖಾಂತರ ಪ್ರವೇಶ ಗಿಟ್ಟಿಸುತ್ತಿದ್ದಾರೆ.
ಹೇಗೆಂದರೆ: ನಕಲಿ ಪ್ರತಿಭಾವಂತ ವೈದ್ಯಕೀಯ ವಿದ್ಯಾರ್ಥಿಗಳಿಂದಲೇ ಕಾಮೆಡ್-ಕೆ ಪರೀಕ್ಷೆಯನ್ನು ಬರೆಸಿ ಆ ಸೀಟುಗಳನ್ನು ಕೃತಕ ಡ್ರಾಪ್‌ಔಟ್ ಸೀಟುಗಳಾಗಿ ಪರಿವರ್ತಿಸಿಕೊಳ್ಳಲಾಗುತ್ತಿದೆ. ಈ ಡ್ರಾಪ್‌ಔಟ್ ವ್ಯವಸ್ಥೆಯಲ್ಲಿ ಕರ್ನಾಟಕ ರಾಜ್ಯದ ಬಹುತೇಕ ವೈದ್ಯಕೀಯ, ಇಂಜಿನಿಯರಿಂಗ್ ಮತ್ತು ದಂತ ವೈದ್ಯ ಕಾಲೇಜುಗಳ ವ್ಯವಸ್ಥಾಪಕ ವರ್ಗದವರು ಕಾಮೆಡ್-ಕೆ ಜೊತೆಯಾಗಿ ಸಾವಿರಾರು ಕೋಟಿ ರುಪಾಯಿಗಳನ್ನು ಹಲವಾರು ವರ್ಷಗಳಿಂದ ಅವ್ಯಾಹತವಾಗಿ ಹಣವುಳ್ಳ ವಿದ್ಯಾರ್ಥಿಗಳಿಂದ ಲೂಟಿ ಮಾಡುತ್ತಿರುವ ಅನುಮಾನ ದಟ್ಟವಾಗಿದೆ. ಇದರಿಂದ ಪ್ರತಿಭಾನ್ವಿತ ಅರ್ಹ ಬಡ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದ್ದು ಕಾಮೆಡ್-ಕೆ ಯಿಂದ ಆಯ್ಕೆಯಾಗುವ ಬಹುತೇಕ ವಿದ್ಯಾರ್ಥಿಗಳು ಹೊರ ರಾಜ್ಯದ ವಿದ್ಯಾರ್ಥಿಗಳಾಗಿದ್ದರೆ. ಖಾಸಗಿ ಕಾಲೇಜುಗಳ ವ್ಯವಸ್ಥಾಪಕ ಮಂಡಳಿ, ದಳ್ಳಾಳಿಗಳು ಹಾಗೂ ಕಾಮೆಡ್-ಕೆ ಶಾಮೀಲಾಗಿರಬಹುದಾದ ಬಹುಕೋಟಿ ಅವ್ಯವಹಾರದಲ್ಲಿ ಡ್ರಾಪ್‌ಔಟ್ ಪ್ರವೇಶದ ಬಗ್ಗೆ ಸಾಕಷ್ಟು ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಹಲವಾರು ಬಾರಿ ಚರ್ಚೆಯಾಗಿದ್ದರೂ ಕೂಡ, ಸರ್ಕಾರಕ್ಕೆ, ಶಿಕ್ಷಣ ಮಂತ್ರಿಗಳಿಗೆ ಮತ್ತು ಪೊಲೀಸ್ ಇಲಾಖೆಗೆ ಈ ಹಿಂದೆ ಸಾಕಷ್ಟು ಬಾರಿ ದೂರನ್ನು ಕೊಟ್ಟಿದ್ದಾಗಿಯೂ ಕೆಲವು ಬೇರೆ ರಾಜ್ಯಗಳ ದಳ್ಳಾಳಿಗಳನ್ನು ಮಾತ್ರ ಪತ್ತೆ ಹಚ್ಚಿ ವಿಚಾರಣೆ ನಡೆಸುತ್ತಿರುವುದಾಗಿ ಮಾಧ್ಯಮಗಳಲ್ಲಿ ನೋಡಿದ್ದೇನೆ. ಆದರೆ ಕಾಮೆಡ್-ಕೆ ಮತ್ತು ಖಾಸಗಿ ಆಡಳಿತ ಮಂಡಳಿಗಳ ಪರೋಕ್ಷ ಬೆಂಬಲವಿಲ್ಲದೇ ಈ ಬಹುಕೋಟಿ ಹಗರಣ ನಡೆಯಲು ಸಾಧ್ಯವಿಲ್ಲ ಎಂಬುದು ಎಲ್ಲರಿಗೂ ತಿಳಿದ ವಿಷಯ. ಆದರೆ ವಿಚಾರಣೆ ಕೇವಲ ದಳ್ಳಾಳಿಗಳಿಗೆ ಸೀಮಿತವಾಗಿರುವುದು ತಲೆಬಿಟ್ಟು ಬಾಲವನ್ನು ಹಿಡಿದಂತಿದೆ.
ಖಾಸಗಿ ಕಾಲೇಜು ಮತ್ತು ಕಾಮೆಡ್-ಕೆ ವಿದ್ಯಾರ್ಥಿಗಳ ಡ್ರಾಪ್‌ಔಟ್ ಬಹುಕೋಟಿ ಅವ್ಯವಹಾರಕ್ಕೆ ಇನ್ನೂ ಯಾವುದೇ ಕಡಿವಾಣ ಬಿದ್ದಿಲ್ಲ. ಬದಲಿಗೆ ಡ್ರಾಪ್‌ಔಟ್ ಪ್ರವೇಶವನ್ನು ಖಾಸಗಿ ಕಾಲೇಜುಗಳು ಯಾವುದೇ ಕಾನೂನುಗಳಿಗೆ ಜಗ್ಗದೇ ಪ್ರತಿವರ್ಷವೂ ರಾಜೀವ್ ಗಾಂಧಿ ವೈದ್ಯಕೀಯ ವಿಶ್ವವಿದ್ಯಾಲಯದ ಸಹಕಾರದಿಂದ ಮುಂದುವರಿಸಿಕೊಂಡು ಬಂದಿವೆ.
ಇದನ್ನೆಲ್ಲಾ ಗಮನಿಸಿದಾಗ ಸರ್ಕಾರದ ವೈಫಲ್ಯ ಎದ್ದು ಕಾಣುತ್ತಿದ್ದು ಇದರಿಂದ ಪ್ರತಿಭಾನ್ವಿತ, ಬಡ, ಮದ್ಯಮವರ್ಗದ ವಿದ್ಯಾರ್ಥಿಗಳಿಗೆ ತುಂಬಾ ಅನ್ಯಾಯವಾಗಿದ್ದು ಸರ್ಕಾರ ತನ್ನ ಸಂವಿಧಾನಾತ್ಮಕ ಕರ್ತವ್ಯದಿಂದ ವಿಮುಖವಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಇನ್ನಾದರೂ ಸರ್ಕಾರ ತನ್ನ ಗಾಢ ನಿದ್ರೆಯಿಂದ ಎಚ್ಚೆತ್ತು ತನ್ನ ಸಂವಿಧಾನಾತ್ಮಕ ಕರ್ತವ್ಯದಿಂದ ಈ ಕೂಡಲೇ ಖಾಸಗೀ ಕಾಲೇಜುಗಳ ವ್ಯವಸ್ಥಾಪಕ ಮಂಡಳಿ, ದಳ್ಳಾಳಿಗಳ ಮತ್ತು ಕಾಮೆಡ್-ಕೆ ಬಹುಕೋಟಿ ಅವ್ಯವಹಾರವನ್ನು ಸೂಕ್ತ ತನಿಖೆಯನ್ನು ಸಿಬಿಐ ಮೂಲಕ ನಡೆಸಬೇಕು. ಏಕೆಂದರೆ ಈ ಅವ್ಯವಹಾರಗಳಲ್ಲಿ ಹೊರ ರಾಜ್ಯಗಳ ವಿದ್ಯಾರ್ಥಿಗಳು ಮತ್ತು ದಳ್ಳಾಳಿಗಳು ಶಾಮೀಲಾಗಿದ್ದು ನಿಷ್ಪಕ್ಷಪಾತ ತನಿಖೆಯನ್ನು ಸಿಬಿಐ ಮುಖಾಂತರವೇ ನಡೆಸಿ ಈ ಕೂಡಲೇ ಬಹುಕೋಟಿ ಅವ್ಯವಹಾರವನ್ನು ನಿಲ್ಲಿಸುವುದರ ಮೂಲಕ ಹಿಂದಿನಿಂದಲೂ ಶಾಮೀಲಾಗಿರುವ ಆಡಳಿತ ಮಂಡಳಿ ಮತ್ತು ತಪ್ಪಿತಸ್ಥ ವ್ಯಕ್ತಿಗಳ ಮೇಲೆ ಅತ್ಯಂತ ಕಠಿಣ ಕ್ರಮವನ್ನು ಜರುಗಿಸುವ ಮೂಲಕ ಪ್ರತಿಭಾನ್ವಿತ, ಬಡ ವಿದ್ಯಾರ್ಥಿಗಳ ಹಿತವನ್ನು ಕಾಪಾಡಬೇಕು. ತನ್ಮೂಲಕ ರಾಜ್ಯದ, ದೇಶಕ್ಕೆ, ಜನತೆಗೆ ಹಾಗೂ ಸಮಾಜಕ್ಕೆ ಉತ್ತಮ ಸಂದೇಶವನ್ನು ತಾವು ಕೊಡುತ್ತೀರಿ ಎಂದು ಭಾವಿಸಿದ್ದೇನೆ. ಸರ್ಕಾರದ ಯಾವುದೇ ಕ್ರಮವಿಲ್ಲವಾದ ಪಕ್ಷದಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಮೂಲಕ ನ್ಯಾಯಾಂಗದ ಬಾಗಿಲನ್ನು ತಟ್ಟಬೇಕಾಗಬಹುದೆಂದು ಈ ಮೂಲಕ ತಮಗೆ ತಿಳಿಸಲಿಚ್ಛಿಸುತ್ತೇನೆ.

- ಬಿ.ಸೋಮಶೇಖರ್, ಮಾಜಿ ಸಚಿವರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement