ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಕರ್ನಾಟಕದಲ್ಲಿ ಕೃಷ್ಣಾವತಾರದ ದಿನಗಳು

Srinivasa Murthy VN
Updated On : 3 Jul 2013, 11:42 am

ಕರ್ನಾಟಕದಲ್ಲಿ ರಾಜಕೀಯ ಸ್ಥಿತಿಗತಿಗಳನ್ನು ಅವಲೋಕಿಸುತ್ತಾ ಹೋದಾಗ ದಿವಂಗತ ದೇವರಾಜ ಅರಸ್ ನಂತರದ ಸ್ಥಾನವನ್ನು ಯಾರು ಅಲಂಕರಿಸಿರುತ್ತಾರೆ ಎನ್ನುವುದನ್ನು ನಿರ್ಧರಿಸುವುದು ನನಗೆ ತುಂಬಾ ಕಷ್ಟವಾಯಿತು. ಏಕೆಂದರೆ ಆ ಸ್ಥಾನದಲ್ಲಿ ಕರ್ನಾಟಕವನ್ನಾಳಿದ ಮೂರು-ನಾಲ್ಕು ಜನ ಮುಖ್ಯಮಂತ್ರಿಗಳು ಬಂದು ನಿಲ್ಲುತ್ತಾರೆ. ಆದರೆ ಎಲ್ಲೊ ಒಂದು ಕಡೆ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣರವರ ರಾಜಕೀಯ ಜೀವನವು ನನ್ನ ಗಮನವನ್ನು ಹೆಚ್ಚು ಸೆಳೆಯಿತು. ದೇವರಾಜ ಅರಸ್ ಅವರಂತೆ ಹಲವು ಸವಾಲುಗಳನ್ನು, ಕಠಿಣ ಪರಿಸ್ಥಿತಿಗಳನ್ನು ಎದುರಿಸಿ ಸಮರ್ಥ ನಿರ್ಧಾರಗಳಿಂದ ಸಾಮಾಜಿಕ, ಆರ್ಥಿಕ ಸುಧಾರಣೆಯತ್ತ ಹೆಜ್ಜೆ ಇಟ್ಟು ವಿಶೇಷವಾಗಿ ಐ.ಟಿ ಕ್ಷೇತ್ರವನ್ನು ಬೆಂಗಳೂರಿನಲ್ಲಿ ನೆಲೆಯೂರುವಂತೆ ಮಾಡಿದರು. ಸಮಾಜವಾದಿ ಹಿನ್ನೆಲೆಯಿಂದ ಬಂದಿರತಕ್ಕಂತಹ ಮೇಲ್ಪಂಕ್ತಿಯ ವಿದ್ಯಾವಂತ ರಾಜಕಾರಣಿ ಇವರು.
ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವೀಧರರಾದ ನಂತರ, ಬೆಂಗಳೂರಿನ ಸರ್ಕಾರಿ ಕಾನೂನು ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿ, ನಂತರ ಅಮೆರಿಕಾದ ಟೆಕ್ಸಾಸ್‌ನಲ್ಲಿರುವ ಸದರ್ನ್ ಮೆಥಡಿಸ್ಟ್ ವಿಶ್ವವಿದ್ಯಾಲಯದಲ್ಲಿ ಓದಿ ನಂತರ ಜಾರ್ಜ್ ವಾಷಿಂಗ್ಟನ್ ವಿಶ್ವವಿದ್ಯಾಲಯದಿಂದ ಪ್ರತಿಷ್ಠಿತ ಫುಲ್‌ಬ್ರೈಟ್ ವಿದ್ಯಾರ್ಥಿ ವೇತನವನ್ನು ಪಡೆದರು.
ಅವರು ಅಮೆರಿಕದಲ್ಲಿ ಇದ್ದಂತಹ ಸಂದರ್ಭದಲ್ಲಿ ಅಲ್ಲಿ ಅಧ್ಯಕ್ಷರ ಚುನಾವಣೆ ಎದುರಾಗಿತ್ತು. ಆ ಸಂದರ್ಭದಲ್ಲಿ ವಿದ್ಯಾರ್ಥಿಯಾಗಿದ್ದ ಕೃಷ್ಣರವರು, ಜಾನ್ ಎಫ್. ಕೆನಡಿ ಅವರ ಅಭಿವೃದ್ಧಿಪರ ಚಿಂತನೆಗಳಿಂದ ಪ್ರಭಾವಿತರಾಗಿ ಅವರ ಪರವಾಗಿ ಪ್ರಚಾರ ಕೈಗೊಂಡಿದ್ದರು. ಆಗಲೇ ಇವರನ್ನು ಗುರುತಿಸಿದ್ದ ಕೆನಡಿ, ಚುನಾವಣೆ ಗೆದ್ದ ನಂತರ ಕೃಷ್ಣರವರಿಗೆ ಪತ್ರವೊಂದನ್ನು ಬರೆದು ಧನ್ಯವಾದ ತಿಳಿಸಿದ್ದರು. ಆ ಪತ್ರವನ್ನು ಈಗಲೂ ಸಹ ತನ್ನ ಮನೆಯ ಕಚೇರಿಯಲ್ಲಿ ಫ್ರೇಮ್ ಹಾಕಿ ಇಟ್ಟುಕೊಂಡಿದ್ದಾರೆ. ಒಂದು ಕಾಲದಲ್ಲಿ ಅಧ್ಯಕ್ಷರ ಪರ ಪ್ರಚಾರ ಮಾಡಿದ್ದ ಈ ಯುವಕ ಮುಂದೊಂದು ದಿನ ಅದೇ ದೇಶದ ಅಧ್ಯಕ್ಷರೊಡನೆ ರಾಜ ತಾಂತ್ರಿಕರಾಗಿ, ನಮ್ಮ ದೇಶದ ಪ್ರತಿನಿಧಿಯಾಗಿ ಮಾತುಕತೆ ನಡೆಸುತ್ತಾರೆ ಎಂದಾದರೆ ಬಹುಶಃ ಇದನ್ನು ಕೃಷ್ಣ ರವರೇ ನಿರೀಕ್ಷಿಸಿರಲಿಕ್ಕಿಲ್ಲ.
ಕೃಷ್ಣರವರ ತಂದೆಯವರು ಮೈಸೂರು ರಾಜ್ಯ ವಿಧಾನಸಭೆಯ ಸದಸ್ಯರು ಹಾಗೂ ಮಂಡ್ಯ ಜಿಲ್ಲಾ ಬೋರ್ಡ್ ಅಧ್ಯಕ್ಷರಾಗಿದ್ದರು. ವಿದೇಶದಿಂದ ಮರಳಿದ ಇವರಿಗೆ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಅವರನ್ನು ಮದ್ದೂರು ಜನತೆ ಒತ್ತಾಯಿಸಿದ್ದರು. 1962 ರಲ್ಲಿ ನಡೆದ ವಿಧಾನಸಭೆಯ ಚುನಾವಣೆಯಲ್ಲಿ ತಾವು ಗುರುತಿಸಿಕೊಂಡಿದ್ದ ಪ್ರಜಾ ಸಮಾಜವಾದಿ ಪಕ್ಷ (ಪಿ.ಎಸ್.ಪಿ) ಯಿಂದ ಸ್ಪರ್ಧಿಸಿದ್ದರು. ಆಗಿನ ಕಾಲದ ಪ್ರಮುಖ ನಾಯಕರಾದ ಮತ್ತು ಮೈಸೂರು ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಹೆಚ್ ವೀರಣ್ಣ ಗೌಡರ ವಿರುದ್ದ ಭಾರೀ ಬಹುಮತದಿಂದ ಗೆದ್ದು ಮೊದಲಬಾರಿಗೆ ವಿಧಾನ ಸಭೆ ಪ್ರವೇಶಿಸಿದರು.
ವೈಯಕ್ತಿಕ ಮತ್ತು ಸೈದ್ಧಾಂತಿಕ ಕಾರಣಗಳಿಂದಾಗಿ ಪ್ರಜಾ ಸಮಾಜವಾದಿ ಪಕ್ಷ ವಿಭಜನೆಯಾಗುವ ಸಂದರ್ಭದಲ್ಲಿ, ಸಮಾಜವಾದಿ ಪಕ್ಷದ ವಿಚಾರಗಳು ಹಾಗೂ ಸಿದ್ಧಾಂತಗಳು ಮತ್ತು ಕಾಂಗ್ರೆಸ್ ಪಕ್ಷದ ವಿಚಾರಧಾರೆಗಳು ಹೊಂದಾಣಿಕೆಯಾಗುತ್ತಿದ್ದರಿಂದ, ತತ್ವ ಸಿದ್ಧಾಂತದ ಮೇಲೆ ನಂಬಿಕೆ ಇರಿಸಿ ಅಶೋಕ್ ಮೆಹ್ತಾ, ನಾರಾಯಣದತ್ತ ತಿವಾರಿ, ವಸಂತ ಸಾಠೆ, ಚಂದ್ರಶೇಖರ, ಗುರುಪಾದ ಸ್ವಾಮಿ, ಕೃಷ್ಣರವರು ಸೇರಿದಂತೆ ಪ್ರಜಾ ಸಾಮಾಜಿಕ ಪಕ್ಷದ ಪ್ರಮುಖರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಕರ್ನಾಟಕ ರಾಜಕೀಯದಲ್ಲಿ ಅದೃಷ್ಟದ ರಾಜಕಾರಣಿ ಎಂದೇ ಕರೆಯಲ್ಪಡುವ ಕೃಷ್ಣರವರು, 1968ರಲ್ಲಿ ಲೋಕಸಭೆಗೆ ಚುನಾಯಿತರಾದರು. 1971ರಲ್ಲಿ ಅಲ್ಲಿಗೆ ಮರು ಚುನಾಯಿತರಾಗಿ ಮತ್ತೆ 1972ರಲ್ಲಿ ಕರ್ನಾಟಕದ ವಿಧಾನ ಪರಿಷತ್ತಿಗೆ ಚುನಾಯಿತರಾದರು. ಇದೇ ಸಮಯದಲ್ಲಿ ವಾಣಿಜ್ಯ ಉದ್ಯಮ ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದರು. 1983 ರಲ್ಲೂ ಉದ್ಯಮ ಖಾತೆ ಮತ್ತು 1984ರಲ್ಲಿ ವಿತ್ತ ಖಾತೆಯ ಸಚಿವರಾಗಿದ್ದರು. 1989 ರಿಂದ 1992ರ ವರೆಗೆ ವಿಧಾನಸಭೆಯ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದರು. 1992 ರಿಂದ 1994ರ ವರೆಗೆ ಕರ್ನಾಟಕದ ಉಪ ಮುಖ್ಯ ಮಂತ್ರಿಗಳಾಗಿದ್ದರು. 1996ರಲ್ಲಿ ರಾಜ್ಯ ಸಭೆಗೆ ನೇಮಕಗೊಂಡರು. 1998ರಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿ ರಾಜ್ಯಾದ್ಯಂತ ಪಾಂಚಜನ್ಯ ಯಾತ್ರೆ ನಡೆಸಿ ಪಕ್ಷವನ್ನು ಅಧಿಕಾರಕ್ಕೆ ತಂದರು. ಸಹಜವಾಗಿ  1999ರಲ್ಲಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಆಯ್ಕೆಯಾದರು.
ಮುಖ್ಯ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಕೃಷ್ಣರವರ ಆಡಳಿತದ ಅವಧಿ ಅಷ್ಟೊಂದು ಸುಗಮವಾಗಿರಲಿಲ್ಲ. ಪಕ್ಷದೊಳಗೆ ಕೆಲವು ನಾಯಕರು ಅವರ ರಾಜಕೀಯ ಏಳಿಗೆಯನ್ನು ಸಹಿಸುತ್ತಿರಲಿಲ್ಲ. ಅದಕ್ಕಿಂತ ಹೆಚ್ಚಾಗಿ ಸತತ ಮೂರುವರೆ ವರ್ಷಗಳ ಕಾಲ ರಾಜ್ಯ ಭೀಕರ ಬರಗಾಲಕ್ಕೆ ತುತ್ತಾಗಿತ್ತು. ಇವರ ಆಡಳಿತ ಅವಧಿಯಲ್ಲಿ ನಡೆದ ಡಾ. ರಾಜ್‌ಕುಮಾರ್ ಅಪಹರಣ, ಕಾವೇರಿ ವಿವಾದದ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು, ಎಲ್ಲವನ್ನು ಸರಿದೂಗಿಸಿಕೊಂಡು ಆಡಳಿತ ನಡೆಸುವುದು ನಿಜವಾಗಿಯೂ ಅವರ ಪಾಲಿಗೆ ಮುಳ್ಳಿನ ಮೇಲಿನ ನಡಿಗೆಯಾಗಿತ್ತು. ಈ ಎಲ್ಲದರ ನಡುವೆ ಅವರು ಪಾರದರ್ಶಕ ಮತ್ತು ಕ್ರಿಯಾಶೀಲತೆ ತುಂಬಿದ ಆಡಳಿತ ನೀಡುವಲ್ಲಿ ಯಶಸ್ವಿಯಾದರು. ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆ, ಬಡವರಿಗಾಗಿ ಜಾರಿಗೆ ತಂದ ಯಶಸ್ವಿನಿ ಯೋಜನೆ, ರಾಜೀವಗಾಂಧಿ ವಸತಿ ಯೋಜನೆ, ಸ್ತ್ರೀಶಕ್ತಿ ಯೋಜನೆಗಳು ದೇಶದಲ್ಲೇ ಪ್ರಥಮ ಬಾರಿಗೆ ಜಾರಿಗೆ ತಂದ ಪ್ರತ್ಯೇಕ ಐ.ಟಿ ಮತ್ತು ಬಿ.ಟಿ ನೀತಿ ಅವರ ಜನಪ್ರಿಯ ಕೆಲಸಗಳು. ಈ ಯೋಜನೆಗಳ ಜಾರಿಗೆ ಅವರ ಸಮರ್ಥ ನಾಯಕತ್ವಗಳಿಂದಾಗಿ ಕರ್ನಾಟಕ ರಾಜ್ಯವು ಅಭಿವೃದ್ಧಿಯಲ್ಲಿ ಸತತವಾಗಿ 2 ವರ್ಷ ಪ್ರಥಮ ಸ್ಥಾನದಲ್ಲಿರುವಂತೆ ಮಾಡಿತ್ತು. ಇತಿಹಾಸ ಕಂಡ ಹಾಗೆ ಎಲ್ಲಾ ಕಾಲದಲ್ಲೂ ಎಲ್ಲರ ಆಡಳಿತದಲ್ಲೂ ಒಂದೊಂದು ಲಾಬಿ ಎನ್ನುವುದು ಕೆಲಸ ಮಾಡುತ್ತಿತ್ತು ಎನ್ನುವುದು ಜಗಜ್ಜಾಹೀರ. ಕೃಷ್ಣರವರ ಕಾಲದಲ್ಲೂ ಸ್ವಲ್ಪ ಮಟ್ಟಿಗೆ ಮದ್ಯದ ಲಾಬಿಯ ಪ್ರಭಾವವಿತ್ತು. ಸೆಕೆಂಡ್ಸ್ ಮದ್ಯ ಮರಾಟದಿಂದ ರಾಜ್ಯದ ಬೊಕ್ಕಸಕ್ಕೆ ಬಹಳ ನಷ್ಟವಾಗುತ್ತಿತ್ತು. ಇದನ್ನರಿತ ಕೃಷ್ಣರವರು ಎಲ್ಲಾ ರೀತಿಯ ಮದ್ಯ ಮಾರಾಟವನ್ನು ಸರ್ಕಾರದ ಹತೋಟಿಗೆ ತಂದು ಎಂಎಸ್‌ಐಎಲ್ ಮುಖಾಂತರ ಮದ್ಯ ಸರಬರಾಜು ಮಾಡಲು ಕ್ರಮ ಕೈಗೊಂಡರು. ಇದರಿಂದಾಗಿ ಆಗ 420 ಕೋಟಿ ಇದ್ದ ಅಬಕಾರಿ ಇಲಾಖೆ ಆದಾಯ 2012ರಲ್ಲಿ  12000 ಕೋಟಿಗೆ ಹೆಚ್ಚಾಯಿತು.
ಇವರು ತಂದ ಐ.ಟಿ ನೀತಿ ಮತ್ತು ಐ.ಟಿ-ಬಿ.ಟಿ ಕ್ಷೇತ್ರಕ್ಕೆ ನೀಡಿದ ಒತ್ತಿನಿಂದಾಗಿ 1300ಕ್ಕೂ ಹೆಚ್ಚು ವಿದೇಶಿ ಕಂಪೆನಿಗಳು ಬೆಂಗಳೂರಿನಲ್ಲಿ ಬಂದು ನೆಲೆಸಿದವು. ಇದರಿಂದಾಗಿ ದೇಶದ ಐ.ಟಿ ರಪ್ತು ಪ್ರಮಾಣದಲ್ಲಿ  ಶೇಕಡಾ 40ಕ್ಕಿಂತ ಹೆಚ್ಚು ಐ.ಟಿ ರಪ್ತು ಬೆಂಗಳೂರಿನಿಂದ ಆಗುತ್ತಿದೆ. ಬೆಂಗಳೂರು ನಗರವನ್ನು ಐ.ಟಿ ಕ್ಷೇತ್ರದ ಮೂಲಕ ವಿಶ್ವದಲ್ಲೇ ಹೆಸರುಗಳಿಸುವಂತೆ ಮಾಡಿ ಬೆಂಗಳೂರಿಗೆ ಭಾರತದ  ಸಿಲಿಕಾನ್ ಸಿಟಿ ಎಂಬ ಹೆಸರು ತಂದು ಕೊಟ್ಟ ಕೀರ್ತಿ ಇವರಿಗೆ ಸಲ್ಲುತ್ತದೆ. ವಿದ್ಯುತ್ ಖರೀದಿಯಲ್ಲಿದ್ದ ದರದ ಸ್ಲ್ಯಾಬ್‌ಗಳನ್ನು ತೆಗೆದು ಹಾಕಿ, ಏಕ ರೂಪದಲ್ಲಿ ಮೊದಲಿದ್ದ ದರಕ್ಕಿಂತ ಕಡಿಮೆ ದರದಲ್ಲಿ ವಿದ್ಯುತ್ ಖರೀದಿಸುವ ಒಪ್ಪಂದ ಮಾಡಿಕೊಂಡರು. ಇವರ ಈ ಜಾಣ್ಮೆಯ ನಿರ್ಧಾರದಿಂದ ಸರ್ಕಾರಕ್ಕೆ ಕೋಟ್ಯಂತರ ರು. ಲಾಭವಾಯಿತು.
ಇವರು ರಾಜಕೀಯ ವಲಯದಲ್ಲಿ ಹೈಟೆಕ್ ಮುಖ್ಯಮಂತ್ರಿ ಎಂದು ಕರೆಯಲ್ಪಡುತ್ತಾರಾದರೂ ಇವರಿಗೆ ರೈತರ ಬಗ್ಗೆ ಅಪಾರ ಕಾಳಜಿ ಇತ್ತು ಅವರು ತಮ್ಮ ಬಜೆಟ್‌ನಲ್ಲಿ ಶೇಕಡಾ 30 ಪಾಲನ್ನು ನೀರಾವರಿಗೆ ಮೀಸಲಿಟ್ಟಿದ್ದರು. ರೈತರಿಗಾಗಿ ಜಾರಿಗೆ ತಂದ ಭೂಮಿ ಯೋಜನೆ, ಇಡಿ ಕಂದಾಯ ಇಲಾಖೆ ಕಂಪ್ಯೂಟರೀಕರಣ, ಕೃಷಿ ಕ್ಷೇತ್ರದ ಪ್ರಗತಿಗೆ ನೆರವಾದವು.
ಆದರೆ ಅಧಿಕಾರ ಅವಧಿಯನ್ನು ಪೂರ್ಣಗೊಳಿಸುವ 6 ತಿಂಗಳ ಮೊದಲೇ ಚುನಾವಣೆಗೆ ಹೋದದ್ದು ಮತ್ತು ಲೋಕಸಭೆಗೆ ಮತ್ತು ವಿಧಾನಸಭೆಗೆ ಜೊತೆಗೆ ಚುನಾವಣೆ ಎದುರಾದ್ದರಿಂದ ಆ ಸಂದರ್ಭದಲ್ಲಿದ್ದ ವಾಜಪೇಯಿ ಅಲೆ, ಅವರಿಗೆ ಎಲ್ಲೋ ಒಂದು ಕಡೆ ಮುಳುವಾಯಿತು. ನಂತರದ ರಾಜಕೀಯ ಬೆಳವಣಿಗೆಯಲ್ಲಿ ಕೇಂದ್ರ ಸರ್ಕಾರ ಇವರನ್ನು ಮಹಾರಾಷ್ಟ್ರದ ರಾಜ್ಯಪಾಲರನ್ನಾಗಿ ನೇಮಿಸಿತು. ಒಲ್ಲದ ಮನಸ್ಸಿನಿಂದಲೇ ಪಕ್ಷದ ಆದೇಶಕ್ಕೆ ತಲೆ ಬಾಗಿದ ಇವರು ರಾಜ್ಯಪಾಲರಾಗಿ ತೆರಳಬೇಕಾಯಿತು. ನಂತರ ಬಯಸದೆ ಬಂದ ಭಾಗ್ಯ ಎಂಬಂತೆ ದೇಶದ ವಿದೇಶಾಂಗ ಮಂತ್ರಿಯಾಗುವ ಅವಕಾಶ ಮತ್ತು ಮಹತ್ವದ ಜವಾಬ್ದಾರಿ ಇವರಿಗೆ ದೊರಕಿತ್ತು.
ಅವರು ಜೀವನದಲ್ಲಿ ಅವರದೇ ಆದ ಅಭಿರುಚಿಯನ್ನು  ಹೊಂದಿದ್ದಾರೆ. ಓದುವುದು ಟಿನ್ನಿಸ್ ಆಡುವುದು ಇವರ ಹವ್ಯಾಸ, ಕ್ರೀಡೆಗಳಲ್ಲಿ ಮತ್ತು ಭಾರತೀಯ ಶಾಸ್ತ್ರೀಯ ಸಂಗೀತದಲ್ಲಿ ವಿಶೇಷ ಆಸಕ್ತಿ, ಮುಂತಾದವು ಇವರ ವೈಯುಕ್ತಿಕ ಜೀವನದ ಮುಖ್ಯಾಂಶಗಳು. ಉಡುಗೆಯ ಕುರಿತ ಅವರ ಅಭಿರುಚಿ- ಅಚ್ಚುಕಟ್ಟು ಅನುಕರಣೀಯ. ಇಂಗ್ಲಿಷ್ ಭಾಷೆಯ ಮೇಲಿನ ಹಿಡಿತ, ಅಧಿಕಾರದಲ್ಲಿದ್ದಾಗ ಕುಟುಂಬವನ್ನು ಹತ್ತಿರಕ್ಕೆ ಬಿಟ್ಟುಕೊಳ್ಳದೆ ಒತ್ತಡಗಳಿಂದ ಮುಕ್ತವಾಗಿದ್ದದ್ದು ಇವೆಲ್ಲ ಆಪ್ತಗುಣಗಳಾಗಿ ಸೆಳೆಯುತ್ತವೆ.
ಆದರೆ ಎಲ್ಲೋ ಒಂದು ಕಡೆ ಇವರು ಹೆಚ್ಚು ಅನುಯಾಯಿಗಳನ್ನು ಬೆಳೆಸಲಿಲ್ಲ, ಜನ ಸಾಮಾನ್ಯರ ಕೈಗೆ ಸಿಗುವುದಿಲ್ಲ ಎಂಬ ಅಪವಾದ ಇದೆ. ಅದೇನೆ ಇರಲಿ ರಾಜ್ಯಕ್ಕೆ ಮತ್ತು ದೇಶಕ್ಕೆ ಕೃಷ್ಣರವರಂತಹ ಒಬ್ಬ ವಿಶೇಷ ರಾಜಕಾರಣಿಯ ಸೇವೆ, ಮಾರ್ಗದರ್ಶನ ಇನ್ನು ಕೆಲವು ವರ್ಷಗಳ ಬಾಕಿ ಉಳಿದಿದೆ ಎಂಬುದು ನನ್ನ ವೈಯುಕ್ತಿಕ ಅಭಿಪ್ರಾಯ. ಇಂತಹ ಒಬ್ಬ ಮೇಲ್ಪಂಕ್ತಿಯ ಆದರ್ಶ ರಾಜಕಾರಣಿಯೊಂದಿಗೆ ಒಡನಾಟದ ಅವಕಾಶ ಸಿಕ್ಕಿರುವುದು ನನ್ನ ಜೀವನದ ಭಾಗ್ಯವೇ ಸರಿ.

- ಡಾ. ಕೆ. ಸುಧಾಕರ್ ಶಾಸಕರು, ಚಿಕ್ಕಬಳ್ಳಾಪುರ
anisikeprabha@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement