ಮುಸ್ಲಿಂ ವಿರೋಧಿಯೆಂಬ ಕುಚೋದ್ಯವೇಕೆ?
ಬಹುಶಃ ಇದನ್ನು ನೀವೂ ಗಮನಿಸಿರಬಹುದು. ಮುಂಬರುವ ದಿನಗಳಲ್ಲಿ ಬಿಜೆಪಿ ಮತ್ತು ಅದರ ನಾಯಕತ್ವ ಮುಸ್ಲಿಂ ಸಮುದಾಯದೊಂದಿಗೆ ಹೇಗೆ ನಡೆದುಕೊಳ್ಳಬೇಕು, ಅವರ ಒಲವು ಗಳಿಸಲು ಏನೇನು ಮಾಡಬೇಕು ಎಂಬುದನ್ನು ವಿವರಿಸುವ ಲೇಖನಗಳು ಸಾಮಾಜಿಕ ಜಾಲತಾಣದಲ್ಲಿ, ಆನ್ಲೈನ್, ದೈನಿಕ ಹಾಗೂ ವಾರಪತ್ರಿಕೆಗಳಲ್ಲಿ ಪ್ರಕಟವಾಗುತ್ತಲೇ ಇವೆ. ವಿಷಾದದ ಸಂಗತಿಯೆಂದರೆ ಹೆಚ್ಚಿನವರು- 'ಅಲ್ಪಸಂಖ್ಯಾತರ ವಿರೋಧಿ ಎಂಬ ಹಣೆಪಟ್ಟಿ ಹೊಂದಿರುವ ಭಾರತೀಯ ಜನತಾಪಕ್ಷವು...' ಎಂದೇ ಲೇಖನ ಆರಂಭಿಸುತ್ತಾರೆ. 'ಬಿಜೆಪಿ ಅಲ್ಪಸಂಖ್ಯಾತರ ವಿರೋಧಿ' ಎಂಬ ಮಾತಿದೆಯಲ್ಲ, ಅದೇ ಕುಚೋದ್ಯದ್ದು. ಪಂಜಾಬ್ನಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿರುವ ಸರ್ಕಾರದ ಮಿತ್ರಪಕ್ಷವಾಗಿ ಹಾಗೂ ಗೋವಾದಲ್ಲಿ ನಮ್ಮದೇ ಪಕ್ಷದ ಆಡಳಿತವನ್ನು ಪ್ರತ್ಯಕ್ಷ ಕಂಡ ನಂತರ ಹೇಳಲೇಬೇಕು ಅನ್ನಿಸಿದ ಮಾತುಗಳಿವು: ಮುಸ್ಲಿಮರ ಭಾವನೆಗಳಿಗೆ ಧಕ್ಕೆಯುಂಟಾಗುವಂಥ ಒಂದೇ ಒಂದು ಕೆಲಸವನ್ನು ಪಂಜಾಬ್ ಹಾಗೂ ಗೋವಾದಲ್ಲಿ ಮಾಡಿಲ್ಲ. ವಸ್ತುಸ್ಥಿತಿ ಹೀಗಿರುವಾಗ, ಬಿಜೆಪಿಯು ಅಲ್ಪಸಂಖ್ಯಾತರ ವಿರೋಧಿ ಎಂದು ಹೇಳುವುದು ಎಷ್ಟರಮಟ್ಟಿಗೆ ಸರಿ? ಮುಸಲ್ಮಾನರು ಮಾತ್ರವಲ್ಲ, ಕ್ರಿಶ್ಚಿಯನ್ ಜನಾಂಗದವರ ಭಾವನೆಗೆ ಧಕ್ಕೆ ಬರುವಂಥ ಯಾವೊಂದು ಕೆಲಸವೂ ಬಿಜೆಪಿಯಿಂದ ಆಗಿಲ್ಲ. ಅದಕ್ಕೆ ಉದಾಹರಣೆ ಬೇಕೆನ್ನುವವರು ಬಿಜೆಪಿಯ ಪ್ರಾಬಲ್ಯವಿರುವ ಜಾರ್ಖಂಡ್ ಮತ್ತು ಛತ್ತೀಸ್ಗಡ ರಾಜ್ಯಗಳಿಗೆ ಹೋಗಿ ವಾಸ್ತವವನ್ನು ಪರಾಂಬರಿಸಿ ನೋಡಬಹುದು. ಮುಸ್ಲಿಮರನ್ನು ನಯವಾದ ಮಾತು ಹಾಗೂ ಹೇಳಿಕೆಗಳಿಂದ ಒಲಿಸಿಕೊಳ್ಳಬೇಕು. ಅವರು ಬಿಜೆಪಿಯ ಕಡೆಗೆ ವಾಲಿಕೊಳ್ಳುವಂತೆ ಪುಸಲಾಯಿಸಬೇಕು ಎಂಬಿತ್ಯಾದಿ ಸಲಹಾ ರೂಪದ ಮಾತುಗಳೂ ಕೇಳಿ ಬರುತ್ತಿವೆ. ನನ್ನ ಅನುಭವದ ಪ್ರಕಾರ ಹೇಳುವುದಾದರೆ- ಹೀಗೆಲ್ಲಾ ಮಾಡಬೇಕಾದ ಅಗತ್ಯವಿಲ್ಲ. ಏಕೆಂದರೆ, ಮುಸ್ಲಿಂ ವರ್ಗದ ಜನತೆ ಮತದಾರರಾಗಿ ತುಂಬ ಬುದ್ಧಿವಂತರು. ಪ್ರತಿಯೊಂದು ಚುನಾವಣೆಯ ಸಂದರ್ಭದಲ್ಲಿ ಯಾರಿಗೆ ಮತ ಹಾಕಬೇಕು ಎಂಬ ವಿಷಯವಾಗಿ ಅವರು ತುಂಬಾ ಜಾಣ್ಮೆಯಿಂದ ನಿರ್ಧಾರ ಕೈಗೊಳ್ಳುತ್ತಾರೆ. ಈ ಮಾತಿಗೆ ಪ್ರತಿಯೊಂದು ಚುನಾವಣೆಯ ಸಂದರ್ಭದಲ್ಲೂ ಸಾಕ್ಷಿಗಳು ಸಿಕ್ಕಿವೆ. ಹಾಗಾಗಿ, ಇನ್ನು ಮುಂದೆ ನೀವು ಇಂಥ ಪಕ್ಷಕ್ಕೇ ವೋಟ್ ಹಾಕಿ ಎಂದು ಸಲಹೆ ಮಾಡುವುದು ಒಂದರ್ಥದಲ್ಲಿ ಅತಿರೇಕದ ಮತ್ತು ಪೆದ್ದರ ನಡೆಯಾಗುತ್ತದೆ. ಹೀಗೆ ಮಾಗದರ್ಶನ ಮಾಡಲು ಯಾರಾದರೂ ಹೊರಟರೆ, ಇವರೆಲ್ಲಾ ನಮ್ಮ ಭಾವನೆಗಳೊಂದಿಗೆ ಹುಡುಗಾಟವಾಡಲು ಬಂದಿದ್ದಾರೆ ಎಂದೂ ಮುಸ್ಲಿಮರು ಭಾವಿಸುವ ಸಾಧ್ಯತೆಗಳೂ ಇವೆ. ಹಾಗಾಗಿ, ಇಂಥ ಪ್ರಯತ್ನಗಳಿಂದ ದೂರವಿರುವುದೇ ಒಳ್ಳೆಯದು ಎಂಬುದು ನನ್ನ ಸ್ಪಷ್ಟ ಅಭಿಪ್ರಾಯ.
ಈಗ ಎಲ್ಲರಿಗೂ ಗೊತ್ತಿರುವಂತೆ, ಗುಜರಾತ್, ಮಧ್ಯಪ್ರದೇಶ, ಛತ್ತೀಸ್ಗಡ ಮುಂತಾದ ರಾಜ್ಯಗಳಲ್ಲಿ ಬಿಜೆಪಿ ಎರಡಕ್ಕೂ ಹೆಚ್ಚು ಅವಧಿಗೆ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಅಧಿಕಾರ ಸೂತ್ರ ಹೊಂದಿದ್ದ ಸಂದರ್ಭದಲ್ಲಿ 'ಯಾವುದೇ ಒಂದು ಕೋಮಿಗೆ ಮಾರಕವಾಗುವಂಥ, ಒಬ್ಬರ ಭಾವನೆಗೆ ಧಕ್ಕೆಯಾಗುವಂಥ ಒಂದೇ ಒಂದು ನಿರ್ಧಾರವನ್ನೂ ಗುಜರಾತ್, ಮಧ್ಯಪ್ರದೇಶ ಹಾಗೂ ಛತ್ತೀಸ್ಗಡದ ಬಿಜೆಪಿ ನಾಯಕರು ಕೈಗೊಂಡಿಲ್ಲ. ಬಿಜೆಪಿಯು ಮುಸ್ಲಿಂ ವಿರೋಧಿ ಎಂದು ಒಂದೇ ಸಮನೆ ಊಳಿಡುವವರನ್ನು ಉದ್ದೇಶಿಸಿಯೇ-'ಬಿಜೆಪಿಯ ಆಡಳಿತವಿರುವ ರಾಜ್ಯಗಳಲ್ಲಿ ಕೈಗೊಂಡಿರಬಹುದಾದ ಮುಸ್ಲಿಮರ ಭಾವನೆಗಳಿಗೆ ಧಕ್ಕೆಯಾಗುವಂಥ ಮೂರೇ ಮೂರು ಪ್ರಸಂಗಗಳನ್ನು ಉದಾಹರಿಸಿ ನೋಡೋಣ' ಎಂದು ಬಹಿರಂಗ ಸವಾಲು ಹಾಕಿದ್ದೆ. ಅದಕ್ಕೆ ಈ ಕ್ಷಣದವರೆಗೂ ಯಾರೊಬ್ಬರಿಂದಲೂ ಉತ್ತರ ಬಂದಿಲ್ಲ. ಹೀಗೆಲ್ಲಾ ನಿಷ್ಠುರವಾಗಿ ಮಾತಾಡುವ ಸಂದರ್ಭದಲ್ಲಿ, ಭಾವನಾತ್ಮಕ ಸಂಗತಿಗಳನ್ನು ಮರೆತು ಮಾತಾಡಬೇಕಾಗುತ್ತದೆ. ಏಕೆಂದರೆ ಯಾವತ್ತೂ, ಯಾವುದೇ ಕಾರಣಕ್ಕೂ ಸೆಂಟಿಮೆಂಟ್ ಎಂಬುದು ಬದುಕಾಗುವುದಿಲ್ಲ. ಹಾಗೆ ಆಗಲೂಬಾರದು. ಹಾಗಾಗಿ, ಪ್ರಗತಿಯ ಪಥದಲ್ಲಿ ಸಾಗಬೇಕಾದರೆ, ನೆಮ್ಮದಿಯಿಂದ ಬಾಳಬೇಕಾದರೆ ಯಾವ ಪಕ್ಷಕ್ಕೆ ಮತ ಹಾಕಬೇಕು ಎಂದು ಮುಸ್ಲಿಮರ ಮುಂದೆ ನಿಂತು 'ಮಾರ್ಗದರ್ಶಕನ' ಧಾಟಿಯಲ್ಲಿ ಮಾತಾಡುವುದು ಖಂಡಿತ ಸರಿಯಲ್ಲ.
ಇಷ್ಟೆಲ್ಲ ಹೇಳಿದ ಮೇಲೂ ಉಳಿಯುವುದು ಅದೇ ಹಳೆಯ ಪ್ರಶ್ನೆ: ಲೋಕಸಭಾ ಚುನಾವಣೆಗಳು ಹತ್ತಿರವಾಗುತ್ತಿರುವ ಈ ಸಂದರ್ಭದಲ್ಲಿ ಮುಸ್ಲಿಮರ ಮನಸ್ಸು ಗೆಲ್ಲಬೇಕಾದರೆ ಬಿಜೆಪಿ ಏನು ಮಾಡಬೇಕು? ಇದಕ್ಕೆ ಒಂದೇ ಮಾತಿನಲ್ಲಿ ಹೀಗೆ ಉತ್ತರಿಸಬಹುದು: ವೋಟ್ ಪಡೆಯಬೇಕು. ಆ ಮೂಲಕ ಅಧಿಕಾರ ಸೂತ್ರ ಹಿಡಿಯಬೇಕು ಎಂಬ ಕಾರಣದಿಂದ ಯಾವುದೋ ಒಂದು ಸಮುದಾಯದ ಮುಂದೆ ಮಂಡಿಯೂರುವುದು, ಅವರನ್ನು ಬಗೆಬಗೆಯಲ್ಲಿ ಓಲೈಸುವುದು ಅಥವಾ ಅವರನ್ನು ಉಳಿದೆಲ್ಲರಿಂದ ಪ್ರತ್ಯೇಕಿಸಿ ಅವರ ಉದ್ಧಾರಕ್ಕೆಂದೇ ಹೊಸ ಯೋಜನೆಗಳನ್ನು ಘೋಷಿಸುವುದು,ಇದೆಲ್ಲಾ ಒಂದು ದೇಶಕ್ಕೆ, ಒಂದಿಡೀ ಸಮುದಾಯಕ್ಕೆ ಮಾಡುವ ಅವಮಾನ. ಹಾಗಾಗಿ, ಮುಸ್ಲಿಮರ ವಿಶ್ವಾಸ ಗಳಿಸಲು ಬಿಜೆಪಿ ಬೇರೇನೂ ಮಾಡದೆ: ದೇಶ ಹಾಗೂ ರಾಜ್ಯಗಳ ಸಮಗ್ರ ಅಭಿವೃದ್ಧಿಯೇ ನಮ್ಮ ಗುರಿ ಎಂದು ಘೋಷಿಸಬೇಕು. ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಗಳನ್ನು ಇಡಬೇಕು. ಒಂದು ಪಕ್ಷ ಅಭಿವೃದ್ಧಿ ಮಂತ್ರ ಜಪಿಸುತ್ತಿದೆ ಎಂದರೆ, ಅದರಿಂದ ಸಮಾಜದ ಉದ್ಧಾರವೂ ಆಗುತ್ತದೆ ಎಂದು ಎಲ್ಲ ವರ್ಗದ ಜನರೂ ಖಂಡಿತ ಭಾವಿಸುತ್ತಾರೆ. ಅಭಿವೃದ್ಧಿ ಮಂತ್ರ ಜಪಿಸುವ ಪಕ್ಷವನ್ನು ಖಂಡಿತ ಕೈ ಹಿಡಿಯುತ್ತಾರೆ. 'ನಮ್ಮ ಪಕ್ಷಕ್ಕೆ ನಿಮ್ಮ ಅಮೂಲ್ಯವಾದ ಮತ ನೀಡಿ. ಆ ಮೂಲಕ ಆಡಳಿತ ಸೂತ್ರ ನಮ್ಮದಾಗಲು ನೆರವಾಗಿ...' ಇದಿಷ್ಟು ಸಹಾಯ ಮಾಡಿದರೆ, ಅತ್ಯುತ್ತಮ ರಸ್ತೆ, ಆಸ್ಪತ್ರೆ, ವಿದ್ಯುತ್, ನೀರು, ಸಮರ್ಪಕ ಒಳಚರಂಡಿ ವ್ಯವಸ್ಥೆ, ಪ್ರತಿ ಊರಿಗೂ ಮಾದರಿ ಶಾಲೆ, ಸ್ಥಳೀಯರಿಗೆ ಉದ್ಯೋಗ ನೀಡುವಂಥ ಫ್ಯಾಕ್ಟರಿಗಳು, ಸುಸಜ್ಜಿತ ಆಸ್ಪತ್ರೆಗಳು, ನೆಮ್ಮದಿ ಹಾಗೂ ಗೌರವದಿಂದ ಬದುಕುವಂಥ ವಾತಾವರಣ ನಿರ್ಮಿಸುತ್ತೇವೆ ಎಂದು ಬಿಜೆಪಿಯ ಮುಖಂಡರು ಘೋಷಿಸಬೇಕು. ಇಂಥದೊಂದು 'ದೃಶ್ಯ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಎದ್ದು ಕಾಣುವಂಥ ಪರಿಸ್ಥಿತಿಯನ್ನು ತಕ್ಷಣವೇ ಸೃಷ್ಟಿಸಬೇಕು. ಹೀಗೆ ಮಾಡಿದರೆ, ಬಿಜೆಪಿಯ ಮೇಲೆ ಮುಸ್ಲಿಂ ಮತದಾರರಿಗೆ ನಂಬಿಕೆ ಹುಟ್ಟುತ್ತದೆ.
ನಮಗೆ ಕೇಂದ್ರದಲ್ಲಿ ಸರ್ಕಾರ ರಚಿಸಲು ಅವಕಾಶ ಮಾಡಿಕೊಟ್ಟರೆ- ಎಲ್ಲರಿಗೂ ಸಮಾನ ನ್ಯಾಯ ಒದಗಿಸುತ್ತೇವೆ. ಆದರೆ ಈ ಕೆಲಸಕ್ಕಾಗಿ ಯಾರನ್ನೂ ಓಲೈಸಲು ಹೋಗುವುದಿಲ್ಲ. ದೇಶವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಬೇಕೆಂಬುದೇ ನಮ್ಮ ಮಹದಾಸೆಯಾಗಿದೆ' ಎಂದು ಬಿಜೆಪಿ ಈಗಾಗಲೇ ಸ್ಪಷ್ಟಪಡಿಸಿದೆ. ಈ ಮಾತುಗಳ ಹಿಂದಿರುವ ವಾಸ್ತವವನ್ನು ಮುಸ್ಲಿಂ ಸಮುದಾಯ ಅರ್ಥಮಾಡಿಕೊಂಡರೆ, ಮುಂಬರುವ ದಿನಗಳಲ್ಲಿ ಬೇರೊಂದು ಸರ್ಕಾರ ಹಾಗೂ ಅಭಿವೃದ್ಧಿ ಮಂತ್ರದ ಜಪ ಮೊಳಗುವುದನ್ನು ಎಲ್ಲರೂ ಕಾಣಲು ಸಾಧ್ಯವಾಗುತ್ತದೆ.
- ಜಿತೇನ್ ಗಜಾರಿಯಾ