ವಿದ್ಯೆ ಬಿಕರಿಗಿಟ್ಟ ಬಿ.ಎಡ್. ಕಾಲೇಜುಗಳ ವಿರುದ್ಧ ಭಯ ಮೂಡಿಸುವ ಕ್ರಮ ಏಕಿಲ್ಲ?
ಇತ್ತೀಚೆಗೆ ಬೆಂಗಳೂರು ವಿಶ್ವವಿದ್ಯಾನಿಲಯ ತನ್ನ ವ್ಯಾಪ್ತಿಯ ಬಿ.ಎಡ್ ಕಾಲೇಜುಗಳ ಸ್ಥಿತಿಗತಿ ಅಧ್ಯಯನಕ್ಕಾಗಿ ಮತ್ತು ಕಾಲೇಜುಗಳಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ಕುರಿತು ತನಿಖೆ ನಡೆಸಲು ಕಾರ್ಯಪಡೆಯನ್ನು ರಚಿಸಿತ್ತು. ಈ ಕಾರ್ಯಪಡೆಯ ವರದಿ ನಮ್ಮ ರಾಜ್ಯದ ಅತಿಮುಖ್ಯ ಶೈಕ್ಷಣಿಕ ತರಬೇತಿಯೊಂದರ ವಸ್ತುಸ್ಥಿತಿಯನ್ನು ತೆರೆದಿಟ್ಟಿದೆ. ಖಾಸಗಿ ಸಂಸ್ಥೆಗಳಲ್ಲಿ ನೀತಿ ನಿಯಮಗಳನ್ನು ಗಾಳಿಗೆ ತೂರಿ ಅಕ್ರಮವಾಗಿ ಈ ಪದವಿಯನ್ನು ಸಂಪಾದಿಸಲು ನಡೆಸುತ್ತಿರುವ ದಂಧೆಯ ಕುರಿತು ನಮ್ಮ ಗಮನ ಸೆಳೆಯುತ್ತದೆ. ಈ ವರದಿ ಸರಕಾರದ ಗಮನವನ್ನು ಸೆಳೆದು ಗಂಭೀರ ಚರ್ಚೆಯನ್ನು ಹುಟ್ಟು ಹಾಕಿ ಇಂತಹ ಸಂಸ್ಥೆಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಕಾರಣವಾಗ ಬೇಕಾಗಿತ್ತು. ದುರಾದೃಷ್ಟ, ಹಾಗಾಗಲಿಲ್ಲ.
ಬಿ.ಎಡ್. ಪದವಿ ಕೇವಲ ಒಂದು ಪದವಿಯಾಗಿಲ್ಲ. ಅದು ಭಾವಿ ತಲೆಮಾರುಗಳ ಭವಿಷ್ಯವನ್ನೂ, ಅದರ ಗುಣಮಟ್ಟವನ್ನೂ ನಿರ್ಧರಿಸುವ ತರಬೇತಿಯಾಗಿದೆ. ಹೀಗಿದ್ದೂ ಇಂದು ಇಂತಹ ಪದವಿಯೊಂದು ಮಾರಾಟದ ಸರಕಾಗಿದ್ದು ದುರಂತವೆನ್ನಬೇಕು. ಒಂದು ದಶಕದ ಹಿಂದೆ ನಮ್ಮ ರಾಜ್ಯ ಸರಕಾರ ತೆಗೆದುಕೊಂಡ ಒಂದು ಮೂರ್ಖ ತೀರ್ಮಾನದ ಅನೈತಿಕ ಕೂಸುಗಳಾಗಿವೆ ಈ ತರಬೇತಿ ಕೇಂದ್ರಗಳು. ಕಟ್ಟಡವೇ ಇಲ್ಲದಿರುವಲ್ಲಿ, ಪರಿಣತ ಅಧ್ಯಾಪಕರೇ ಇಲ್ಲದಿರುವಲ್ಲಿ ಕೂಡ ಬಿ.ಎಡ್ ಕಾಲೇಜುಗಳು ಹುಟ್ಟಿಕೊಂಡವು. ಕಾಣುವುದು ಅಲ್ಲೊಂದು ಬೋರ್ಡ್ ಮಾತ್ರ. ಷೆಡ್ಗಿಂತಲೂ ಕಳಪೆಯಾದ ಕಟ್ಟಡಗಳಲ್ಲಿ ಕೂಡ ಇಂತಹ ಕಾಲೇಜುಗಳು ತಲೆ ಎತ್ತಿದವು. ಇಂದು ಈ ಸಂಸ್ಥೆ ಗಳು ಕೇವಲ ಸರ್ಟಿಫಿಕೇಟ್ ನೀಡುವುದಕ್ಕೆ ಮಾತ್ರ ಸೀಮಿತಗೊಂಡಿದೆ.
ಬದಲಾದ ಶೈಕ್ಷಣಿಕ ಪರಿಸ್ಥಿತಿಯಲ್ಲಿ ಬಿ.ಎಡ್ ಪದವಿ ಐದನೇ ತರಗತಿಯಿಂದ ಪಿಯುಸಿ ಹಂತದವರೆಗೆ ಪಾಠ ಮಾಡಲು ಬೇಕಾದ ಕನಿಷ್ಠ ಅರ್ಹತೆಯಾಯಿತು. ಯಾವಾಗ ಈ ಪದವಿಗಳಿಗೆ ವಿಪರೀತ ಬೇಡಿಕೆ ಹುಟ್ಟಿಕೊಂಡಿತೊ, ಆಗಲೇ ಇಂತಹ ಕಾಲೇಜುಗಳಿಗೆ ಸರಕಾರದ ಮಟ್ಟದಲ್ಲಿ ನ್ಯಾಯದ ಮಾನದಂಡವನ್ನು ಮೀರಿ ಯಾರ್ಯಾರಿಗೋ ಅನುಮತಿ ಸಿಕ್ಕಿತು. ಶಿಕ್ಷಣ ಸಂಸ್ಥೆಗಳನ್ನು ನಡೆಸುವುದನ್ನೆ ತಮ್ಮ ದಂಧೆಯಾಗಿಸಿಕೊಂಡ ಕೆಲವು ವ್ಯಕ್ತಿಗಳು ಹೀಗೆ ಅನುಮತಿ ಪಡೆದುಕೊಂಡ ಕಾಲೇಜುಗಳಲ್ಲಿ ಕೋಟ್ಯಾಂತರ ರೂಪಾಯಿಯ ಫಸಲನ್ನೂ ನಿರೀಕ್ಷಿಸಿದ್ದರು. ಅವರ ನಿರೀಕ್ಷೆ ಕೆಲವೇ ವರ್ಷಗಳಲ್ಲಿ ಈಡೇರಿತು. ಆರಂಭದ ದಿನಗಳಲ್ಲಿ ಸಾವಿರಾರು ಜನ ಪದವೀದರರು, ಖಾಸಗಿ ಸಂಸ್ಥೆಗಳಲ್ಲಿ ತಾತ್ಕಾಲಿಕವಾಗಿ ಕೆಲಸ ಮಾಡುತ್ತಿದ್ದವರು ಕೆಲಸ ಬಿಟ್ಟು ಬದುಕಿಗೊಂದು ಭದ್ರತೆಯನ್ನು ತಂದು ಕೊಡಬಹುದಾಗಿದ್ದ ಈ ಪದವಿಗೆ ಸೇರಿಕೊಂಡರು. ಕಾಲೇಜುಗಳಿಗೆ ವಿದ್ಯಾರ್ಥಿಗಳು ಕೊರತೆಯಾಗಲಿಲ್ಲ. ಅಲ್ಲಿಯವರೆಗೆ ಕಾಲೇಜುಗಳ ಗುಣಮಟ್ಟದಲ್ಲಿ, ಉಪನ್ಯಾಸಕರ ಅರ್ಹತೆಯಲ್ಲಿ ಕೊರತೆಗಳು ಇದ್ದಿರಬಹುದಾದರೂ ಶಿಕ್ಷಣ ಅಪೇಕ್ಷಿಸಿ ಬರುವ ವಿದ್ಯಾರ್ಥಿಗಳಿಗೆ ಕೊರತೆ ಇರಲಿಲ್ಲ. ಆದರೆ ಕೆಲವೇ ವರ್ಷಗಳಲ್ಲಿ ಲಕ್ಷಾಂತರ ಜನ ಬಿ.ಎಡ್ ಪದವೀದರರು ಪದವಿ ಪಡೆದು ಹೊರಗೆ ಬಂದಾಗ ಅದಕ್ಕೆ ತಕ್ಕ ಸರಕಾರಿ ಉದ್ಯೋಗ ಸೃಷ್ಟಿಯಾಗದೆ, ಸಾವಿರಾರು ಜನ ನಿರುದ್ಯೋಗಿಗಳಾದರು. ಇನ್ನು ಸಾವಿರಾರು ಜನ ಖಾಸಗಿ ಸಂಸ್ಥೆಗಳಲ್ಲಿ ಕನಿಷ್ಠ ವೇತನಕ್ಕೆ ದುಡಿಯತೊಡಗಿದರು. ಇದರಿಂದಾಗಿ ಬಿ.ಎಡ್ ಕಾಲೇಜುಗಳಿಗೆ ಆರಂಭದ ವರ್ಷಗಳಲ್ಲಿ ಬಂದಂತೆ ನಿರೀಕ್ಷಿತ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಬರಲಿಲ್ಲ. ಈಗಾಗಲೇ ಹರಿದು ಬಂದ ಹಣದ ಹೊಳೆಯ ರುಚಿ ಕಂಡಿದ್ದ ಖಾಸಗಿ ಆಡಳಿತ ಮಂಡಳಿಗಳಲ್ಲಿ ಅನೇಕರು ಆಗ ಅನೈತಿಕ ಮಾರ್ಗದಲ್ಲಿ ಕಾಲೇಜುಗಳನ್ನು ತುಂಬಿಸಿಕೊಳ್ಳುವ ದಾರಿಯನ್ನು ಕಂಡುಕೊಂಡರು.
ಇದರ ಪರಿಣಾಮವಾಗಿ ವಿದ್ಯಾರ್ಥಿಗಳಿಲ್ಲದೆ ಮುಚ್ಚುವ ಹಂತಕ್ಕೆ ಬಂದಿದ್ದ ಕೆಲವು ಕಾಲೇಜುಗಳು ಹೊಸದೊಂದು ಆಫರನ್ನು ನೀಡಿದವು. ನೀವು ಕಾಲೇಜಿಗೆ ಬಾರದೆಯೂ ನೀವು ಮಾಡಿಕೊಂಡಿರುವ ಉದ್ಯೋಗವನ್ನು ಬಿಡದೆಯೋ ಬಿ.ಎಡ್. ಪದವಿಯನ್ನು ಪಡೆಯಬಹುದು ಎಂಬಂತಹ ಆಮಿಷವನ್ನು ಒಡ್ಡಿದವು. ಈ ಅನೈತಿಕ ಆಫರ್ನಿಂದ ಹಲವು ಕಾಲೇಜುಗಳ ಸೀಟುಗಳೆಲ್ಲ ತುಂಬತೊಡಗಿತು. ಇಲ್ಲಿಂದ ಮುಂದೆ ಹೀಗೆ ಅನೈತಿಕ ಮಾರ್ಗದಲ್ಲೇ ಪದವಿ ಸಂಪಾದಿಸಿದವರು ಶಿಕ್ಷಕರಾಗಿ ಶಾಲೆ, ಕಾಲೇಜುಗಳಲ್ಲಿ ಪಾಠಮಾಡತೊಡಗಿದರು. ಒಮ್ಮೆ ಅಲೋಚಿಸಿ. ತಾನು ಪಾಠ ಮಾಡುವುದಕ್ಕೆ ಬೇಕಾದ ಮೂಲ ಅರ್ಹತೆಯ ಪದವಿಯನ್ನೇ ಕಾಲೇಜಿಗೆ ಹೋಗದೆ, ಅನೈತಿಕವಾಗಿಯೇ ಸಂಪಾದಿಸಿದ ಶಿಕ್ಷಕರು ತಮ್ಮ ಮುಂದಿರುವ ವಿದ್ಯಾರ್ಥಿಗಳನ್ನು ಹೇಗೆ ತಾನೆ ನೈತಿಕತೆಯ ಕಡೆಗೆ ಕರೆದೊಯ್ಯಬಲ್ಲರು? ಒಂದು ಸಮಗ್ರ ತರಬೇತಿಯಾಗಿ ರೂಪುಗೊಳ್ಳಬೇಕಾದ ಪದವಿಯೊಂದು ಕಾಟಾಚಾರದ ಒಂದೆರಡು ಪ್ರಾಯೋಗಿಕ ತರಗತಿಗಳು, ನಕಲು ಮಾಡಿದ ಪ್ರಬಂಧಗಳನ್ನು ಬರೆದು, ಪರೀಕ್ಷೆಯಲ್ಲಿ ಗಳಿಸಿದ ಅಂಕಗಳಿಂದ ಬಿ.ಎಡ್ ಪದವಿದರರಾಗಿ ರೂಪುಗೊಂಡರು. ಇಂತವರು ಈಗ ಅಧಿಕೃತವಾಗಿ ಶಿಕ್ಷಕರ ತರಬೇತಿಯನ್ನು ಪಡೆದ ಶಿಕ್ಷಕರಾದರು!
ಬಿ.ಎಡ್ ಕಾಲೇಜುಗಳನ್ನು ಸಂಯೋಜನೆಗೆ ಒಳಪಡಿಸಿಕೊಂಡ ಪ್ರತಿ ವಿಶ್ವವಿದ್ಯಾಲಯವೂ ಪ್ರತಿ ವರ್ಷ ಎರಡು ವಿಶೇಷ ತಂಡಗಳನ್ನು ರಚಿಸಿ ಕಾಲೇಜುಗಳಿಗೆ ಕಳುಹಿಸಿಕೊಡುತ್ತದೆ. ಕಾಲೇಜುಗಳಿಗೆ ವಿಶ್ವವಿದ್ಯಾಲಯದ ಪರವಾಗಿ ಪ್ರತಿ ಶೈಕ್ಷಣಿಕ ವರ್ಷದ ಆರಂಭದಲ್ಲಿ ಬರುವುದು ವಿ.ವಿ. ಸಂಯೋಜನಾ ಪರಿಶೀಲನಾ ಮಂಡಳಿ. ಇದು ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕರು, ಸರಕಾರಿ ಬಿ.ಎಡ್. ಕಾಲೇಜು ಪ್ರಾಧ್ಯಾಪಕರನ್ನು ಒಳಗೊಂಡ ಮಂಡಳಿಯಾಗಿದ್ದು ಆಯಾ ಕಾಲೇಜುಗಳು ಹೊಂದಿರುವ ಮೂಲಭೂತ ಸೌಕರ್ಯ, ಪ್ರಾಧ್ಯಾಪಕ ವೃಂದ, ಪ್ರಯೋಗಾಲಯಗಳನ್ನು ಪರಿಶೀಲಿಸಿ ವಿಶ್ವವಿದ್ಯಾಲಯಕ್ಕೆ ವರದಿಯನ್ನು ನೀಡಬೇಕು. ಪ್ರತಿ ಶೈಕ್ಷಣಿಕ ವರ್ಷದ ಕೊನೆಯ ಭಾಗದಲ್ಲಿ ವಿ.ವಿ. ರಚಿಸಿದ ಸಮನ್ವಯ ಸಮಿತಿಯು ಪ್ರತಿ ಕಾಲೇಜುಗಳ ವಿದ್ಯಾರ್ಥಿಗಳ ಗುಣಮಟ್ಟ, ಅಂತರಿಕ ಮೌಲ್ಯಮಾಪನ, ನೀಡಲಾದ ಅಂಕಗಳು, ವಿದ್ಯಾರ್ಥಿಗಳ ಪ್ರಾಯೋಗಿಕ ಚಟುವಟಿಕೆಗಳನ್ನು ವೀಕ್ಷಿಸಿ ವರದಿಯನ್ನು ನೀಡುವುದಕ್ಕಾಗಿ ನೇಮಿಸಲ್ಪಟ್ಟದ್ದು. ಹೀಗಿದ್ದೂ ಈ ತರಬೇತಿಯಲ್ಲಿ ಇಷ್ಟು ದೊಡ್ಡ ಪ್ರಮಾಣದ ವಂಚನೆ, ಅವ್ಯವಹಾರ, ತರಗತಿಗೆ ಹಾಜರಾಗದೆ ಕೇವಲ ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ಇರುವುದು ಹೇಗೆ ಸಾಧ್ಯವಾಯಿತು? ಸತ್ಯ ಇಷ್ಟೇ. ಹೀಗೆ ವಿ.ವಿ.ಯಿಂದ ನೇಮಕಗೊಂಡು ಬರುವ ಮಂಡಳಿಗಳ ಸದಸ್ಯರನೇಕರು ವಿ.ವಿ. ಕೊಡುವ ಭತ್ಯೆಗಳಿಗೆ ಹಾಗೂ ಖಾಸಗಿ ಸಂಸ್ಥೆಗಳು (ಕಾಲೇಜುಗಳು) ನೀಡುವ ಭರ್ಜರಿ ಭೋಜನ ಕೂಟಗಳನ್ನಷ್ಟೇ ಪಡೆದು, ತಮ್ಮನ್ನು ಚೆನ್ನಾಗಿ ನೋಡಿಕೊಂಡ ಸಂಸ್ಥೆಗಳ ಎಲ್ಲಾ ದೋಷಗಳನ್ನು, ಮರೆಮಾಚಿ ವಿ.ವಿ.ಗೆ ಚೆನ್ನಾಗಿರುವ ವರದಿಯನ್ನೇ ನೀಡುತ್ತಾರೆ. ಇನ್ನು ಸಮನ್ವಯ ಸಮಿತಿಯಂತೂ ಇಂತಹದೇ ಅನೇಕ ಸಂಸ್ಥೆಗಳ ಪ್ರಾಧ್ಯಾಪಕರ ಒಂದು ಕೂಟವಾಗಿದ್ದು, ಪರಸ್ಪರ ಒಬ್ಬರನೊಬ್ಬರು ರಕ್ಷಿಸುವ ಅಲಿಖಿತ ಒಪ್ಪಂದ ಮಾಡಿಕೊಂಡವರಂತಿರುತ್ತಾರೆ. ಈ ವಿಷಯ ಯಾವ ವಿ.ವಿ.ಗಳ ಕುಲಪತಿಗಳಿಗೂ ಗೊತ್ತಿರದ ಸಂಗತಿ ಆಗಿರಲಾರದು. ಇಷ್ಟೆಲ್ಲ ನಡೆಯುತ್ತಿದ್ದಾಗಲೂ ವಿಶ್ವವಿದ್ಯಾಲಯದ ಅಧಿಕಾರಿಗಳು ಸಿಂಡಿಕೇಟ್ ಸದಸ್ಯರು, ಕುಲಪತಿ, ಕುಲಸಚಿವರು ತಮಗೇನೂ ಅರಿವಿಲ್ಲದವರಂತೆ ನಡೆದುಕೊಳ್ಳುವುದರಿಂದಲೇ ಈ ದಂಧೆ ಎಗ್ಗಿಲ್ಲದೆ ಸಾಗಿದೆ.
ಬೆಂಗಳೂರು, ತುಮಕೂರು, ಹಾವೇರಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಈ ದಂಧೆ ಯಾರ ಭಯವೂ ಇಲ್ಲದೆ ಸಾಗುತ್ತಿದೆ. ಕರಾವಳಿ ಜಿಲ್ಲೆಯಲ್ಲಿ ಮಾಜಿ ಸಚಿವರೊಬ್ಬರಿಗೆ ಸೇರಿದ ಒಂದು ಕಾಲೇಜೂ ಒಳಗೊಂಡಂತೆ ಹಲವು ಕಾಲೇಜುಗಳು ಕಳೆದ ಅನೇಕ ವರ್ಷಗಳಿಂದ ಈ ದಂಧೆಗೆ ಪ್ರಸಿದ್ಧವಾಗಿದೆ. ಸರಕಾರ ಇತ್ತೀಚೆಗೆ ನೇಮಿಸಿದ ಹೈಸ್ಕೂಲ್ ಶಿಕ್ಷಕರಲ್ಲಿ ಹಾಗೂ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರಲ್ಲಿಯೂ ಕೆಲವರು ಇದೇ ರೀತಿಯಲ್ಲಿ ಪದವಿ ಸಂಪಾದಿಸಿರಬಹುದಾದ ಸಾಧ್ಯತೆಯನ್ನು ಅಲ್ಲಗಳೆಯಲಾಗದು. ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಾ ಸಂಬಳ ಪಡೆಯುತ್ತಲೇ ಪದವಿ ಸಂಪಾದಿಸಿದವರು ಅನೇಕರಿದ್ದಾರೆ.
ಬೆಂಗಳೂರು ವಿ.ವಿ.ಯು ಬಿ.ಎಡ್. ಕಾಲೇಜುಗಳ ಒಟ್ಟಾರೆ ವ್ಯವಸ್ಥೆಯ ಮೌಲ್ಯಮಾಪನಕ್ಕೆ ಕಾರ್ಯಪಡೆಯನ್ನು ನೇಮಿಸಿದ್ದು ಶ್ಲಾಘನೀಯ ವಿಚಾರವೇ. ಆದರೂ ಕಾರ್ಯಪಡೆಯವರದಿಯನ್ನು ಆಧರಿಸಿ ಯಾವುದೆ ಕ್ರಮ ತೆಗೆದುಕೊಂಡಂತಿಲ್ಲ. ಈ ಅಕ್ರಮ ಪದವಿ ಸಂಪಾದನೆಯ ಜಾಲ ಬೆಂಗಳೂರಿಗಷ್ಟೆ ಸೀಮಿತವಾದುದಲ್ಲ. ಹೀಗಾಗಿ ಕರ್ನಾಟಕ ಸರ್ಕಾರ ಇಡೀ ರಾಜ್ಯದ ಬಿ.ಎಡ್. ಕಾಲೇಜುಗಳ ಗುಣಮಟ್ಟ, ಅವ್ಯವಹಾರಗಳ ಮೌಲ್ಯಮಾಪನ ಮಾಡಿ ತನಿಖೆಗೆ ಉನ್ನತ ಮಟ್ಟದ ಕಾರ್ಯಪಡೆಯೊಂದನ್ನು ರಚಿಸಬೇಕಾಗಿದೆ. ವ್ಯಾಪಕ ಅವ್ಯವಹಾರ ನಡೆಸಿದ ಬಿ. ಎಡ್. ಕಾಲೇಜುಗಳನ್ನು ನಿರ್ಬಂಧಿಸುವ ಜತೆಗೇ ಬಿ.ಎಡ್ ಕಾಲೇಜುಗಳನ್ನು ನಿರ್ವಹಿಸುವಲ್ಲಿ ವಿಫಲವಾದ ವಿಶ್ವವಿದ್ಯಾಲಯಗಳ ಮೇಲೂ ಕ್ರಮವನ್ನು ತೆಗೆದುಕೊಳ್ಳಬೇಕು.
- ರೋಹಿಣಾಕ್ಷ ಶಿರ್ಲಾಲು
ಕನ್ನಡ ಉಪನ್ಯಾಸಕ