ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಭಾಗ್ ಮಿಲ್ಕಾ ಭಾಗ್ ಎಂಬ ಅದ್ಭುತ ಓಟ

Mainashree
Updated On : 17 Jul 2013, 10:54 am

ತನ್ನ ಜೀವನದ ಅತಿ ದೊಡ್ಡ ರೇಸನ್ನು ಅಲ್ಪ ಅಂತರದಿಂದ ಸೋತ ಚಾಂಪಿಯನ್ ಒಬ್ಬನ ಮೇಲೆ ಸಿನೆಮಾ ಮಾಡುವುದು ಅತಿದೊಡ್ಡ ಸವಾಲೇ ಸರಿ. ತನ್ನ ಸಾರ್ಮರ್ಥ್ಯವನ್ನೆಲ್ಲ ಸಂಪೂರ್ಣವಾಗಿ ಬಳಸಿದ ನಂತರವೂ ವೈಫಲ್ಯ ಕಾಣುವ ವ್ಯಕ್ತಿಯನ್ನು ಮಲ್ಟಿಪ್ಲೆಕ್ಸ್‌ಗಳ ಪರದೆಯ ಮೇಲೆ ನೋಡುವುದಕ್ಕೆ ಯಾರೂ ಬಯಸುವುದಿಲ್ಲ.  ಆದರೆ ಅಂಥ ವೈಫಲ್ಯವನ್ನೂ ಉಗುರುಕಚ್ಚುತ್ತಾ ನೋಡುವಂತೆ ಮಾಡುವಲ್ಲಿ ನಿರ್ದೇಶಕ ರಾಕೇಶ್ ಮೆಹರಾ ಮತ್ತು ಸಂಭಾಷಣೆಕಾರ ಪ್ರಸೂನ್ ಜೋಷಿ ಸಫಲರಾಗಿದ್ದಾರೆ.
'ಭಾಗ್ ಮಿಲ್ಕಾ ಭಾಗ್‌' ನಿಮ್ಮ ಹೃದಯವನ್ನು ತಟ್ಟುತ್ತದೆ, ಮನರಂಜನೆಯ ಜೊತೆಗೆ ಜೀವನ ಸ್ಫೂರ್ತಿಯನ್ನೂ ನೀಡುತ್ತದೆ. ಚಿತ್ರಮಂದಿರದಿಂದ ಹೊರಗೆ ಅಡಿಯಿಟ್ಟಾಗ ನಿಜಕ್ಕೂ ನಿಮ್ಮ ಮನಸ್ಸು ಉಲ್ಲಸಿತವಾಗುತ್ತದೆ. ಗೆಲುವು ಅತ್ಯಂತ ಅವಶ್ಯಕವಾದದ್ದು, ಆದರೆ ಗೆಲ್ಲುವುದೇ ಎಲ್ಲವೂ ಅಲ್ಲ ಎನ್ನುವ ಭಾವನೆಯೊಂದು ಬೆಚ್ಚಗೆ ನಿಮ್ಮ ಮನದಲ್ಲಿ ಗರಿಬಿಚ್ಚಿರುತ್ತದೆ.  ರಾಕೇಶ್ ಮೆಹ್ರಾ ಈ ಚಿತ್ರ ನಿರ್ಮಾಣ ಮಾಡಿದ್ದು ಮಿಲ್ಕಾ ಸಿಂಗ್ ಒಬ್ಬ ಶ್ರೇಷ್ಠ ಅಥ್ಲೀಟ್ ಆಗಿದ್ದರು ಎನ್ನುವದಕಷ್ಟೇ ಅಲ್ಲ, ಮಿಲ್ಕಾರಲ್ಲಿ ಸೋಲೊಪ್ಪಿಕೊಳ್ಳದ ಅದಮ್ಯ ಚೈತನ್ಯವಿತ್ತು ಎನ್ನುವ ಕಾರಣಕ್ಕಾಗಿ.
"ಹಳ್ಳಿಯಿಂದ ಬಂದ ಈ ಹುಡುಗ 11 ವರ್ಷದವನಿದ್ದಾಗಲೇ ಅನಾಥನಾದ. ಆತ ತನ್ನ ಕುಟುಂಬದವರ ಸಾವು ನೋಡಿದ್ದ. ಆತನ ಕಣ್ಣೆದುರೇ ಆತನ ಸಹೋದರ ಮತ್ತು ಸಹೋದರಿಯರನ್ನು ಕೊಚ್ಚಿಹಾಕಲಾಗಿತ್ತು. 11 ವರ್ಷದ ಆ ಹುಡುಗ ಬದುಕುಳಿಯುವುದಕ್ಕೆ ಚಾಕು ಎತ್ತಿಕೊಂಡ! ಸೇನೆಗೆ ಸೇರುವುದಕ್ಕೂ ಮುನ್ನ ಆತ ದೆಹಲಿಯ ತಿಹಾರ್ ಜೈಲಿನಲ್ಲಿದ್ದ. ಎಲ್ಲಾ ಅಭಾವಗಳ ನಡುವೆಯೂ ಆತನಿಗೆ ಗೌರವದ ಅಗತ್ಯವಿತ್ತು, ಮನುಷ್ಯನಾಗುವ ಹಪಾಹಪಿಯಿತ್ತು. ಅಂಥ ಅದ್ಭುತ ವ್ಯಕ್ತಿ ಮಿಲ್ಕಾ ಸಿಂಗ್‌" ಎನ್ನುತ್ತಾರೆ ರಾಕೇಶ್.
'ಭಾಗ್ ಮಿಲ್ಕಾ ಭಾಗ್‌' ಚಿತ್ರದ ವಿಶೇಷತೆಯೇ ಅದು. ಅದು ಸಾಮಾನ್ಯ ಮನುಷ್ಯನೊಬ್ಬನ ಕಥೆ, ಸೂಪರ್‌ಮ್ಯಾನ್‌ನದ್ದಲ್ಲ. ಆತನಲ್ಲೂ ನಮ್ಮಂತೆ ದೌರ್ಬಲ್ಯಗಳಿದ್ದವು, ನ್ಯೂನತೆಗಳಿದ್ದವು. ಶುರುವಾತಿನಲ್ಲಿ ಆತನಿಗೆ ್ಚಗ್ಝಡ್ಝ್ಟಟಿ' ಎನ್ನುವುದೇ ಇರಲಿಲ್ಲ. ತನ್ನಲ್ಲಿ ಎಂಥ ಅದ್ಭುತ ಶಕ್ತಿಯಿದೆ ಎನ್ನುವುದರ ಅರಿವೂ ಆತನಿಗಿರಲಿಲ್ಲ. ಅದಿರಲಿ, ಒಬ್ಬ ವ್ಯಕ್ತಿ ಓಡುವುದಾದರೂ ಏಕೆ? ಮಿಲ್ಕಾ ಒಂದು ಗ್ಲಾಸ್ ಹಾಲಿಗಾಗಿ ಓಡಿದ. ಭಾರತದ 'ನೀಲಿ ಬ್ಲೇಜರ್‌' ಗಳಿಸುವುದಕ್ಕಾಗಿ ಮಿಲಿಟರಿ ಸ್ಫರ್ಧೆಗಳಲ್ಲಿ ಓಡಿದ. ಮೆಲ್ಬರ್ನ್ ಒಲಿಂಪಿಕ್ಸ್‌ನಲ್ಲಿ ಸೋತ ನಂತರ ಮತ್ತೆ ತನ್ನ ಗೌರವವನ್ನು ಗಳಿಸುವುದಕ್ಕಾಗಿ ಓಡಿದ.
ರೋಮ್ ಒಲಿಂಪಿಕ್ಸ್‌ನಲ್ಲಿ ತನ್ನ ತೆಳು ಭುಜಗಳ ಮೇಲೆ ಭಾರತೀಯರ ಭರವಸೆಗಳನ್ನು ಹೊತ್ತು ಓಡಿದ. ಬಹುಶಃ ಆ ಭಾರ ತುಂಬಾ ಅಧಿಕವಿತ್ತೇನೋ!?  ಒಬ್ಬ ವ್ಯಕ್ತಿ ತನ್ನ ಭವಿಷ್ಯದತ್ತ ಅಥವಾ ಆತ ತನ್ನ ಗತದಿಂದ ಓಡಬಲ್ಲ. 'ಭಾಗ್ ಮಿಲ್ಕಾ ಭಾಗ್‌' ಹೆಸರಿನಲ್ಲಿರುವುದು ಕೇವಲ ಮೂರೇ ಪದಗಳು ಆದರೇ, ನೀವು ಯಾವ ಟ್ರ್ಯಾಕ್ ಅಥವಾ ಕ್ಷೇತ್ರದ ಮೇಲೆ ನಿಂತಿದ್ದೀರೆನ್ನುವುದರ ಮೇಲೆ ಎರಡು ವಿಶಾಲ ಅರ್ಥಗಳು ಆ ಹೆಸರಿನಲ್ಲಿ ಗೋಚರವಾಗುತ್ತವೆ. ಚಿತ್ರದಲ್ಲಿ ಮಿಲ್ಕಾನ ಕೋಚ್ ಆತನಿಗೆ ಹೇಳುತ್ತಾನೆ, "ಕ್ರೀಡಾಳುವೊಬ್ಬನ ಜೀವನ ಶಿಸ್ತು ಮತ್ತು ತಪಸ್ಸಿನ ಮೇಲೆ ನಿರ್ಧರಿತವಾಗುತ್ತದೆ". ಮುಖ್ಯ ಪಾತ್ರಧಾರಿ ಫರ್ಹಾನ್ ಅಖ್ತರ್ ಅವರು ಕೂಡ ಒಂದು ರೀತಿಯಲ್ಲಿ ಈ ಮಾತನ್ನು ನಿಜ ಮಾಡಿದ್ದಾರೆ. ಮಿಲ್ಕಾ ಸಿಂಗ್ ಪಾತ್ರಕ್ಕೆ ಜೀವ ತುಂಬಲು ಅವರು ಪಟ್ಟಿರುವ ಶ್ರಮ ಅದ್ಭುತ. ಅಥ್ಲೆಟಿಕ್ ದೇಹ ಪಡೆಯುವುದಕ್ಕಾಗಿ ಅವರು ಬಾಂದ್ರಾದ ಸೆಂಟ್ ಸ್ಟ್ಯಾನಿಸ್ಲಾಸ್ ಹೈ ಸ್ಕೂಲಿನಲ್ಲಿ ನಿರಂತರವಾಗಿ 13 ತಿಂಗಳುಗಳ ಕಾಲ ತರಬೇತುದಾರರಾದ ಸಮೀರ್ ಜೌರಾ ಮತ್ತು ಮೆಲ್ವಿನ್ ಕ್ಯಾಸ್ಟ್ರೋರ ಬಳಿ ತರಬೇತಿ ಪಡೆದಿದ್ದಾರೆ.
ಇಂಥ ಉತ್ಸಾಹ ಮತ್ತು ಸ್ಪಷ್ಟ ಉದ್ದೇಶದಿಂದ ಕೆಲಸ ಮಾಡಿದ ಜನರಿಂದಾಗಿಯೇ ಈ ಚಿತ್ರ ಇಷ್ಟೊಂದು ಪರಿಪೂರ್ಣವಾಗಿ ಮೂಡಿಬಂದಿದೆ. ಸಿನೆಮಾ ತುಂಬಾ ದೊಡ್ಡದಿದೆ, ಅನವಶ್ಯಕ ಹಾಡುಗಳಿವೆ ಎಂದು ವಿಮರ್ಶಕರು ಹೇಳುತ್ತಿದ್ದಾರೆ. ಆದರೆ ಅವರ ಮಾತಿಗೆ ನನ್ನ ಸಹಮತವಿಲ್ಲ. ಕಲೆ 'ಪರ್ಫೆಕ್ಟ್‌' ಆಗಿರಬೇಕೆಂದೇನೂ ಇಲ್ಲ. ಒಂದು ವೇಳೆ ಅದು ಪ್ರಬಲವಾಗಿದ್ದರೆ, ನಮ್ಮ ತಾರ್ಕಿಕ ಬುದ್ಧಿಯನ್ನೂ ಅದು ಇನ್ನೊಂದು ಜಗತ್ತಿಗೆ ಕೊಂಡೊಯ್ಯಬಲ್ಲದು, ಅಲ್ಲೇ ಸುತ್ತಾಡಿಸಬಲ್ಲದು. ಈ ಚಿತ್ರದ ಇನ್ನೊಂದು ಬೋನಸ್ ಎಂದರೆ, ಇದು ಮಕ್ಕಳಿಗೆ ದೊಡ್ಡ ಕನಸನ್ನು ಹೊಂದಲು, ಜೀವನದ ರೇಸ್‌ನಲ್ಲಿ ಹೆಚ್ಚು ಉತ್ಸಾಹದಿಂದ ಮತ್ತು ಆತ್ಮವಿಶ್ವಾಸದಿಂದ ಮುನ್ನುಗ್ಗಲು ಸ್ಫೂರ್ತಿ ನೀಡುವಂತಿದೆ.

- ರಶ್ಮಿ ಬನ್ಸಲ್, ಲೇಖಕಿ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement