ಅಂಕಣಗಳು

ಚೆನ್ನೈನ ಚಹರೆಗೆ ಮೆರುಗು ತಂದ ಪದ್ಮನಾಭನ್!

ಪರಿಶುದ್ಧ ಪುಸ್ತಕಗಳ ಹೊರಗಿನ ಪ್ರಪಂಚಕ್ಕೆ ಕೆ.ಎಸ್. ಪದ್ಮನಾಭನ್ ಅವರ ಹೆಸರು ಅಷ್ಟೇನೂ ಪರಿಚಿತವಲ್ಲ. ಅವರು ಆಡಂಬರದ ವ್ಯಕ್ತಿಯಾಗಿರಲಿಲ್ಲ, ...

ಪರಿಶುದ್ಧ ಪುಸ್ತಕಗಳ ಹೊರಗಿನ ಪ್ರಪಂಚಕ್ಕೆ ಕೆ.ಎಸ್. ಪದ್ಮನಾಭನ್ ಅವರ ಹೆಸರು ಅಷ್ಟೇನೂ ಪರಿಚಿತವಲ್ಲ. ಅವರು ಆಡಂಬರದ ವ್ಯಕ್ತಿಯಾಗಿರಲಿಲ್ಲ, ತಮ್ಮ ಬಗ್ಗೆ ತಾವು ಎಂದಿಗೂ ಅಬ್ಬರಿಸಿದವರಲ್ಲ. ಕವಿಗಳ ಭಾಷೆಯಲ್ಲಿ ಹೇಳಬೇಕೆಂದರೆ, ಅವರು 'ಸರಳತೆಯ ಸಾಕಾರಮೂರ್ತಿ' ಆಗಿದ್ದರು. ಆದರೆ ಅವರ ದೂರದೃಷ್ಟಿ, ಯೋಜನೆಗಳು, ಸಮಕಾಲೀನ ಭಾರತದ ಸಾಂಸ್ಕೃತಿಕ ಇತಿಹಾಸದಲ್ಲಿ ಅವರಿಗೊಂದು ಉನ್ನತಸ್ಥಾನ ಒದಗಿಸಿಕೊಟ್ಟಿದೆ. 'ರೈಟರ್ಸ್ ವರ್ಕ್‌ಶಾಪ್‌' ಪ್ರಕಾಶಕ ಪುರುಷೋತ್ತಮ್ ಲಾಲ್ ಮತ್ತು 'ಸ್ಟ್ರ್ಯಾಂಡ್ ಬುಕ್‌ಸ್ಟಾಲ್‌ನ' ಶಾನ್‌ಭಾಗ್‌ರಂಥ ವಿಭಿನ್ನ ದೃಷ್ಟಿಕೋನದ, ತಮ್ಮ ತಲೆಮಾರಿನಲ್ಲಿ ಬದಲಾವಣೆಗೆ ಕಾರಣರಾದ ವ್ಯಕ್ತಿಗಳ ಸಾಲಿನಲ್ಲಿ ಪದ್ಮನಾಭನ್ ನಿಲ್ಲುತ್ತಾರೆ.
ಭಾರತದಲ್ಲಿಂದು ಪ್ರಕಾಶನ ಎನ್ನುವುದು ಆಕರ್ಷಕ ಉದ್ದಿಮೆಯಾಗಿ ಬದಲಾಗಿದೆ. ತಮ್ಮ ದೇಶದಲ್ಲಿ ಸರಿಯಾದ ನೆಲೆ ಸಿಗದೆ ನಲುಗಿಹೋಗಿರುವ ಪಶ್ಚಿಮ ರಾಷ್ಟ್ರಗಳ ಪ್ರಕಾಶನ ಸಂಸ್ಥೆಗಳು ಇಂದು ಭಾರತದಲ್ಲಿ ಅಂಗಡಿ ತೆರೆಯುತ್ತಿವೆ. ಆ ಸಂಸ್ಥೆಗಳ 'ಲೇಖಕರು' ಲಕ್ಷಾಂತರ ರುಪಾಯಿಗಳ ಅಡ್ವಾನ್ಸ್ ಪಡೆಯುತ್ತಿದ್ದಾರೆ.
ಪುಸ್ತಕ ಪ್ರಕಾಶನದ ಈ ಥಳುಕುಬಳುಕಿನ ಚಹರೆಯನ್ನು ನೋಡಿದವರಿಗೆ, ಹಿಂದೆ, ಅಂದರೆ ಸ್ವಾತಂತ್ರ್ಯಾನಂತರದ ವರ್ಷಗಳಲ್ಲಿ ಪ್ರಕಾಶಕರು ಅನುಭವಿಸುತ್ತಿದ್ದ ಕಷ್ಟದ ಅರಿವು ಇರಲಿಕ್ಕಿಲ್ಲ. ಅಂಥ ಸಮಯದಲ್ಲಿ ಪಿ.ಲಾಲ್ ತಮ್ಮ ಬಳಿ ಬಂದ ಹಸ್ತಪ್ರತಿಗಳನ್ನು ಪ್ರಕಟಿಸಲು ಏಕಾಂಗಿಯಾಗಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಅಪರಿಚಿತ ಲೇಖಕರನ್ನು ಪ್ರಪಂಚಕ್ಕೆ ಪರಿಚಯಿಸುವ ಸಾಹಸಕ್ಕೆ ಅವರು ಮುಂದಾದರು. ಇದರಿಂದಾಗಿ ವಿಕ್ರಂ ಸೇಥ್, ಎ.ಕೆ. ರಾಮಾನುಜನ್ ಮತ್ತು ಕಮಲಾದಾಸ್‌ರಂಥ ಲೇಖಕರು ಬೆಳಕಿಗೆ ಬರುವಂತಾಯಿತು. ಇನ್ನು ಶಾನ್‌ಭಾಗ್ ಅವರಿಗೆ ಪುಸ್ತಕಗಳನ್ನು ಪ್ರಕಟಿಸಲು, ಮಾರಲು, ಬಾಂಬೆಯ ಸ್ಟ್ರಾಂಡ್ ಸಿನೆಮಾದ ಚಿಕ್ಕ ಕೋಣೆಯಷ್ಟೇ ಆಸರೆಯಾಗಿತ್ತು. ಆದರೂ ಅವರಿಗೆ ಪುಸ್ತಕಗಳಲ್ಲಿದ್ದ ಜ್ಞಾನದಿಂದಾಗಿ ಒಳ್ಳೊಳ್ಳೆ ಪುಸ್ತಕಗಳನ್ನು ಮಾರುತ್ತಿದ್ದರು. ಹಾಗಾಗೇ ಮುಲ್ಕ್ ರಾಜ್ ಮತ್ತು ಶಾಮ್‌ಲಾಲ್‌ರಂಥ ಘಟಾನುಘಟಿಗಳು ಅವರಲ್ಲಿಗೆ ಬರುತ್ತಿದ್ದುದು.
ಪದ್ಮನ್ಭನ್ ತಮ್ಮ ಸ್ಟ್ಯಾಂಪು ಒತ್ತಿದ್ದು ಚೈನ್ನೈನ ಮೇಲೆ. ಅಲ್ಲಿ ಅವರ ಹೊಸ ಕಲ್ಪನೆಗಳು ಗರಿಬಿಚ್ಚಿ ಓಡತೊಡಗಿದವು. ಪುಸ್ತಕಗಳನ್ನು ಪ್ರಕಟಿಸುವುದು, ವಿತರಣಾ ಜಾಲವನ್ನು ಆಯೋಜಿಸುವುದು, ಪುಸ್ತಕ ಪ್ರೇಮಿಗಳನ್ನು ಒಗ್ಗೂಡಿಸುವುದು...ಹೀಗೇ ನಡೆಯಿತು ಅವರ ಸಾಹಿತ್ಯ ಸೇವೆ. ಇನ್ನೊಂದು ರೂಪದ ಸಾಹಿತ್ಯಾನುರಾಗವೂ ಅವರ ಕೈ ಹಿಡಿದು ಜಗ್ಗಿತು. ಹಾಗಾಗೇ ಅವರು 1991ರಲ್ಲಿ 'ಇಂಡಿಯನ್ ರಿವೀವ್ ಆಫ್ ಬುಕ್ಸ್‌' ಆರಂಭಿಸಿದರು. ಅದರ ಸಂಪಾದಕರಾಗಿ ಮುತ್ತಯ್ಯ ನೇಮಕವಾದರು. ಪದ್ಮನಾಭ್-ಮುತ್ತಯ್ಯ ಜೋಡಿ ದಕ್ಷಿಣದಲ್ಲೆಲ್ಲ ಮೋಡಿ ಮಾಡಿತು. ಇಂಡಿಯನ್ ರಿವೀವ್‌ನಲ್ಲಿ ವಿಮರ್ಶೆ ಬರೆಯತೊಡಗಿದವರ ಮತ್ತು ವಿಮರ್ಶೆಯಾದ ಪುಸ್ತಕಗಳ/ಲೇಖಕರ ಹೆಸರು ಮುಂದಿನ ದಿನಗಳಲ್ಲಿ ಖ್ಯಾತಿ ಪಡೆಯುತ್ತಾ ಹೋದವು. ಪದ್ಮನಾಭ್-ಮುತ್ತಯ್ಯರ ಇನ್ನೊಂದು ತೊಡಗಿಕೆಯಾದ 'ಮದ್ರಾಸ್ ಬುಕ್ ಕ್ಲಬ್‌'  ಕೂಡ ಈ ಕೆಲಸದ ಭಾಗವಾಯಿತು.
ಅವರ ಸೈದ್ಧಾಂತಿಕ ಸ್ವಾತಂತ್ರ್ಯ ಮತ್ತು ಪಾಂಡಿತ್ಯಪೂರ್ಣ ವಿಧಾನಗಳಿಂದಾಗಿ ಕೆಲವೊಮ್ಮೆ ಅದ್ಭುತ, ಅನಿರೀಕ್ಷಿತ ಫಲಿತಾಂಶಗಳು ಹೊರಹೊಮ್ಮಿವೆ. ಮದ್ರಾಸ್‌ನ ಸ್ಯಾನ್ ಥಾಮ್ ಚರ್ಚ್‌ನ ಬಗೆಗಿನ ಮುತ್ತಯ್ಯ ಅವರ ಬರಹ, ಒಬ್ಬ ಇತಿಹಾಸಕಾರ ಮತ್ತು ಸಂಗ್ರಹಕಾರನನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತದೆ. ಆದರೆ ಇದು ಕೆಲವರ ಕೆಂಗಣ್ಣಿಗೂ ಗುರಿಯಾಯಿತು.  ಮುಂಬೈ ಮೂಲದ ನಿಯತಕಾಲಿಕ 'ಹಿಂದು ವಾಯ್ಸ್‌'ನ ಅಂಕಣಕಾರನೊಬ್ಬ, 'ಪೋರ್ಚುಗೀಸ್ ಮಿಷನರಿಗಳು ಎಸಗಿದ ದೌರ್ಜನ್ಯಗಳ ಬಗ್ಗೆ ಪುಸ್ತಕದಲ್ಲಿ ಉಲ್ಲೇಖವೇ ಇಲ್ಲ' ಎಂದು ಮುತ್ತಯ್ಯ ಅವರನ್ನು ದೂಷಿಸಿದ. 'ಇಂಡಿಯನ್ ರಿವೀವ್ ಆಫ್ ಬುಕ್ಸ್‌' ಎನ್ನುವ ಕಮ್ಯುನಿಸ್ಟ್ ಬೆಂಬಲಿತ ಕೆಟ್ಟ ನಿಯತಕಾಲಿಕದ ಜೊತೆಗೆ ಕೆಲಸ ಮಾಡುತ್ತಿರುವ 'ಕುಖ್ಯಾತ ಅಂಕಣಕಾರ' ಎಂದು ಮುತ್ತಯ್ಯ ಅವರನ್ನು ಆತ ಮೂದಲಿಸಿದ.
ಆದರೆ ಆತ ಹೇಳಿದಂಥ ಬೆಂಬಲ 'ಇಂಡಿಯನ್ ರಿವೀವ್‌'ಗಿರಲಿಲ್ಲ. ಹಾಗಾಗೇ ಅದಕ್ಕೆ ಹೆಚ್ಚು ಕಾಲ ಮಾರುಕಟ್ಟೆಯಲ್ಲಿ ಬದುಕಲಾಗಲಿಲ್ಲ. ನಿಯತಕಾಲಿಕಗಳಿಗಂತೂ ಪ್ರಪಂಚ ಬಹಳ ಕ್ರೂರವಾಗಿದೆ. ಓದುಗರನ್ನು 'ಪ್ರಮಾಣ'ದಿಂದ ನೋಡಲಾಗುತ್ತದೆಯೇ ಹೊರತು 'ಗುಣಮಟ್ಟ'ದಿಂದಲ್ಲ. ಅತ್ಯುನ್ನತ ಸಾಹಿತ್ಯ ನಿಯತಕಾಲಿಕದ ಒಬ್ಬ ಓದುಗ, ಒಂದೇ ಧಾಟಿಯ ಮತ್ತು ಥಳುಕುಬಳುಕಿನ ನಿಯತಕಾಲಿಕಗಳ ನೂರು ಓದುಗರಿಗೆ ಸಮನಾದವನು ಎನ್ನುವ ಸತ್ಯ ಜಾಹಿರಾತುದಾರರ ಅರಿವಿಗೆ ಬರುವುದಿಲ್ಲ. ಜಾಹಿರಾತುಗಳಿಲ್ಲದ ನಿಯತಕಾಲಿಕವನ್ನು ಎಷ್ಟು ದಿನವೆಂದು ಪ್ರಕಾಶನ ಸಂಸ್ಥೆ ನಡೆಸಬಲ್ಲದು?
ಪದ್ಮನಾಭನ್ ಅವರ ಇನ್ನೊಂದು ಕನಸು ನನಸಾಗುವುದರಲ್ಲಿತ್ತೇನೋ? ಆದರೆ, 2006ರಲ್ಲಿ ಅವರ ಸಹಭಾಗಿಗಳಾದ ಈಸ್ಟ್-ವೆಸ್ಟ್ ಬುಕ್ಸ್, ವೆಸ್ಟ್‌ಲ್ಯಾಂಡ್ಸ್ ಮತ್ತು ಲ್ಯಾಂಡ್‌ಮಾರ್ಕ್ ಪುಸ್ತಕ ಮಳಿಗೆಗಳು ಟಾಟಾ ಗ್ರೂಪ್‌ನ ಭಾಗವಾಗಿಬಿಟ್ಟವು. ಅವರು ಈ ಘಟಕದ ಆಪ್ತಸಲಹೆಗಾರರಾಗಿ ಕೆಲಸ ನಿರ್ವಹಿಸಿದರಾದರೂ, 2011ರಲ್ಲಿ ನಿವೃತ್ತಿ ಘೋಷಿಸಿಬಿಟ್ಟರು. ಒಬ್ಬ ಕ್ರಿಯಾಶೀಲ ಮನಸ್ಸಿನ ವ್ಯಕ್ತಿಗೆ '75' ನಿವೃತ್ತಿಯ ವಯಸ್ಸಲ್ಲ! ಬಹುಶಃ ನಿವೃತ್ತಿಯೇ ಅವರ ಆರೋಗ್ಯಕ್ಕೆ ಮಾರಕವಾಯಿತೇನೋ? ಅದಾದ ಎರಡು ವರ್ಷಗಳ ನಂತರ ಅವರು ಕೊನೆಯುಸಿರೆಳೆದರು. ಆಡಂಬರವೊಲ್ಲದ ಸರಳ ಜೀವಿ ಪದ್ಮನಾಭನ್ ಅವರು, ತಮ್ಮನ್ನು ಎಲ್ಲರೂ ಮರೆತಿದ್ದಕ್ಕಾಗಿ ಸಂತೋಷವೇ ಪಡಬಹುದೇನೋ?! ಆದರೆ ಅವರ ಜೊತೆಗಾರರು ಆ ಕೆಲಸ ಮಾಡಬಾರದು. ಅವರಿಗೊಂದು ಜವಾಬ್ದಾರಿ ಹೆಗಲಮೇಲೆ ಏರಿದೆ.  ಬಹುಕಾಲ ಇಂಗ್ಲೆಂಡಿನಲ್ಲಿ ನೆಲೆಸಿ ಭಾರತಕ್ಕೆ ಮರಳಿದ ಮುಲ್ಕ್‌ರಾಜ್ ಆನಂದ್‌ಗೆ ಜೆಆರ್‌ಡಿ ಟಾಟಾ ಮಾಡಿದ ಸಹಾಯದಂಥದ್ದೇ ಕೆಲಸವೂ ಈಗ ಆಗಬೇಕಿದೆ.
 'ಭಾರತದ ಮತ್ತು ಅದಕ್ಕೆ ಸಂಬಂಧಿಸಿದ ನಾಗರಿಕತೆಗಳ ಕಲೆಯ ಬಗೆಗೆ(ಎನ್‌ಸೈಕ್ಲೋಪೀಡಿಯಾದಂತೆ)' ನಿಯತಕಾಲಿಕವೊಂದನ್ನು ಪ್ರಕಟಿಸಬೇಕು ಎನ್ನುವ ಯೋಚನೆ ಮುಲ್ಕ್‌ರಾಜ್‌ರ ಮನಸ್ಸು ಕೊರೆಯುತ್ತಿತ್ತು. ಆದರೆ ಬಹುತೇಕರು ಅವರ ಈ ಯೋಜನೆಯನ್ನು ಬಾಲಿಷತನವೆಂದು ತಳ್ಳಿಹಾಕಿದ್ದರು. ಅಲ್ಲದೆ ಇದು ಬಹಳ ದುಬಾರಿ ಯೋಜನೆ ಕೂಡಾ ಆಗಿತ್ತು. ಜೆಆರ್‌ಡಿ ಟಾಟಾ ಮುಲ್ಕ್‌ರಾಜ್‌ರ ಈ ಯೋಜನೆಗೆ ಹಣಸಹಾಯ ಮಾಡಿದರು. ಪ್ರತಿ ಪ್ರಕಟಣೆಯಲ್ಲೂ ತಮ್ಮ ಕಂಪೆನಿಯ ಏಳು ಜಾಹಿರಾತುಗಳನ್ನು ನೀಡಿದರು. ಐತಿಹಾಸಿಕ 'ಸೇನಾ ಮತ್ತು ನೌಕಾ' ಕಟ್ಟಡವೊಂದರ ಎರಡು ರೂಮುಗಳನ್ನು ಮುಲ್ಕ್‌ರಾಜ್‌ರಿಗೆ ಬಿಟ್ಟು ಕೊಟ್ಟರು. ಟಾಟಾರ ಈ ದೊಡ್ಡ ಗುಣದಿಂದಾಗಿಯೇ ಪ್ರಖ್ಯಾತ 'ಮಾರ್ಗ್‌' ನಿಯತಕಾಲಿಕ ಹುಟ್ಟಿಕೊಂಡಿತು.
ಜೆಆರ್‌ಡಿ ಟಾಟಾ ಪ್ರದರ್ಶಿಸಿದಂಥ ದೊಡ್ಡಗುಣವನ್ನೇ ಅವರ ಉತ್ತರಾಧಿಕಾರಿಗಳು ಪ್ರದರ್ಶಿಸಬೇಕು. ತಮ್ಮ ಕಂಪನಿಯ ಪಾಲುದಾರರಾಗಿದ್ದ, ಕೆ.ಎಸ್. ಪದ್ಮನಾಭ್ ಅವರ ಕೂಸು 'ಇಂಡಿಯನ್ ರಿವೀವ್ ಬುಕ್ಸ್‌'ಗೆ ಅವರು ಪುನರ್ಜೀವ ಕೊಡಬೇಕು. ಅದೇನು ಅಷ್ಟು ಕಷ್ಟದ ಕೆಲಸವೂ ಅಲ್ಲ. 7 ಜಾಹಿರಾತುಗಳು, 2 ರೂಮು ಕೊಟ್ಟರೆ ಸಾಕು. ಮ್ಯಾಜಿಕ್ ಸೃಷ್ಟಿ ಮಾಡಬಹುದು!


ಟಿಜೆಎಸ್ ಜಾರ್ಜ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಚು.ಆಯೋಗದ ವಿರುದ್ಧ INDIA ಪ್ರತಿಭಟನೆ; 'ಕೈ' ನಾಯಕರು ಪೊಲೀಸ್ ವಶಕ್ಕೆ: ವ್ಯಾನ್ ನಿಂದ ಇಳಿದು ರಾಹುಲ್ ಜೊತೆ ಮರದ ಕೆಳಗೆ ಕುಳಿತ ಪ್ರಿಯಾಂಕ!

ಕಲಬುರಗಿಯಲ್ಲಿ ಶಾಕಿಂಗ್ ಘಟನೆ: ತೊಗರಿ ಹೊಲದಲ್ಲಿ ತರಬೇತಿ ವಿಮಾನ ತುರ್ತು ಭೂಸ್ಪರ್ಶ!

ಬೆಂಗಳೂರಿನಲ್ಲಿ 5 ಪ್ರತ್ಯೇಕ ಕಮಿಷನರೇಟ್‌ ಸ್ಥಾಪನೆ; 1,022 ಹೊಸ ಹುದ್ದೆ ಸೃಷ್ಟಿಗೆ ಸಚಿವ ಸಂಪುಟ ಅಸ್ತು

ಹಬ್ಬಗಳ ಹೊತ್ತಲ್ಲೆ ಕಾಂಗ್ರೆಸ್‌ನಿಂದ ಜನತೆಗೆ ಮತ್ತೊಂದು ಶಾಕ್: Nandini ಹಾಲಿನ ದರ ಹೆಚ್ಚಳಕ್ಕೆ ಸಂಪುಟ ಸಮ್ಮತಿ, ಲೀಟರ್‌ಗೆ 8 ರೂ. ಏರಿಕೆ?