ಮಕ್ಕಳೇ ನಾಳಿನ ಪ್ರಜೆಗಳು ಬಲಗೊಳ್ಳಲು ಎಲ್ಲಿದೆ ಅಗುಳು?
"ಮಕ್ಕಳೇ ನಮ್ಮ ಭವಿಷ್ಯ ಎಂಬುದು ನನ್ನ ಭಾವನೆ. ಅವರಿಗೆ ಸರಿಯಾದ ಮಾರ್ಗ ತೋರಿಸಿ, ಆ ಮಾರ್ಗದಲ್ಲಿ ಅವರಿಗೇ ಮುನ್ನಡೆಯಲು ಬಿಡಿ. ಅವರೊಳಗಿರುವ ಸೌಂದರ್ಯ...
"ಮಕ್ಕಳೇ ನಮ್ಮ ಭವಿಷ್ಯ ಎಂಬುದು ನನ್ನ ಭಾವನೆ. ಅವರಿಗೆ ಸರಿಯಾದ ಮಾರ್ಗ ತೋರಿಸಿ, ಆ ಮಾರ್ಗದಲ್ಲಿ ಅವರಿಗೇ ಮುನ್ನಡೆಯಲು ಬಿಡಿ. ಅವರೊಳಗಿರುವ ಸೌಂದರ್ಯ, ಶಕ್ತಿಯ ಪರಿಚಯ ಮಾಡಿಕೊಡಿ. ಸ್ವಾಭಿಮಾನವನ್ನು ಬೆಳೆಸಿ. ಆ ಮಕ್ಕಳ ನಗು, ನಾವು ಮಕ್ಕಳಾಗಿದ್ದಾಗ ಹೇಗಿದ್ದವೆಂಬುದನ್ನು ನೆನಪುಮಾಡಿಕೊಡಲಿ"- ವಿಟ್ನಿ ಹೌಸ್ಟನ್
ಪ್ರಾಚೀನ ವಿಶ್ವವಿದ್ಯಾಲಯಗಳಲ್ಲಿ ಮತ್ತು ಗುರುಕುಲಗಳಲ್ಲಿ ಮಕ್ಕಳಿಗೆ ಬುದ್ಧಿವಂತಿಕೆ ಮತ್ತು ಸಹಾನುಭೂತಿಯ ಪಾಠವನ್ನು ಹೇಳಿಕೊಡುತ್ತಿದ್ದ ನಾಗರಿಕತೆಯ ಭಾಗ ನಾವುಗಳು ಎನ್ನುವುದು ಯಾರಿಗೂ ನೆನಪಿಲ್ಲ.
ಇಂದು ಆಗುತ್ತಿರುವುದೇನು? ಪ್ರತೀ ಸಾರ್ವಜನಿಕ ಅವಗಢಗಳಿಗೂ ಭ್ರಷ್ಟರಾಜಕಾರಣಿಗಳ ಲಂಚಕೋರತನದ, ರಾಜಕೀಯ ಪಿತೂರಿಯ ಲೇಪವಿರುತ್ತದೆ. ಬಿಹಾರದಲ್ಲಿ 22 ಶಾಲಾ ವಿದ್ಯಾರ್ಥಿಗಳು ಕೀಟನಾಶಕ ಮಿಶ್ರಿತ ಆಹಾರ ಸೇವಿಸಿ ಮೃತಪಟ್ಟಾಗ, ನಿತೀಶ್ ಕುಮಾರ್ ಅವರ ಸರ್ಕಾರ ಇದನ್ನು 'ರಾಜಕೀಯ ಪಿತೂರಿ' ಎಂದು ಕರೆಯಿತು.
'ಶಾಲೆಯ ಮುಖ್ಯೋಪಾಧ್ಯಾಯರ ಪತಿಗೆ ಮತ್ತು ವಿರೋಧ ಪಕ್ಷದ ನಾಯಕನೊಬ್ಬನಿಗೆ ಬಹಳ ಆಪ್ತ ಸ್ನೇಹವಿದೆ. ಹಾಗಾಗೇ ಇವರೆಲ್ಲ ಸೇರಿ ಸರ್ಕಾರದ ಹೆಸರು ಕೆಡಿಸಲು ಈ ಹತ್ಯೆ ಮಾಡಿದ್ದಾರೆ' ಎಂದು ಗಂಟಲು ಹರಿದುಕೊಳ್ಳುತ್ತಿದೆ ಜೆಡಿಯು. ಭಾರತದಲ್ಲಿ ರಾಜಕೀಯ ಯಾವ ಪರಿ ಹದಗೆಟ್ಟಿದೆಯೋ ಗಮನಿಸಿ. ಅಭಿವೃದ್ಧಿಯ ಹರಿಕಾರನೆಂದು ತನ್ನನ್ನು ತಾನು ಕರೆದುಕೊಳ್ಳುವ ಪಕ್ಷವೊಂದು ಚುನಾವಣಾ ಲಾಭ ಪಡೆಯಲು ಇಂಥ ಕೀಳು ಮಟ್ಟಕ್ಕಿಳಿಯುವುದೇ? ಈ ಸಾವಿಗೆ ಪ್ರತಿಭಟನೆಯಾಗಿ ಕೆಲವು ಪೋಷಕರು, ಮಕ್ಕಳ ದೇಹವನ್ನು ಶಾಲೆಯ ಮುಂಭಾಗದಲ್ಲೇ ಮಣ್ಣುಮಾಡಲು ನಿರ್ಧರಿಸಿದರು. ನ್ಯಾಯ ದೊರಕಿದಾಗ ಮಾತ್ರ ಸತ್ತ ಮಕ್ಕಳ ಆತ್ಮಕ್ಕೆ ಶಾಂತಿ ದೊರಕುತ್ತದೆ ಎನ್ನುವುದನ್ನು ಸರ್ಕಾರಕ್ಕೆ ನೆನಪು ಮಾಡಿಕೊಡುವುದಕ್ಕೆ ಅವರು ಈ ರೀತಿ ಮಾಡಿದರು. ಆದರೆ ವಿಶೇಷ ಮೀಸಲಾತಿ ಪಡೆಯಲು ದೆಹಲಿಗೆ ದೌಡಿಡುತ್ತಿರುವ ಅಥವಾ 'ಮೋದಿ ವಿರೋಧಿ' ಸೆಕ್ಯುಲರ್ ಒಕ್ಕೂಟವನ್ನು ಸ್ಥಾಪಿಸಲು ಹೆಣಗುತ್ತಿರುವ ನಿತೀಶ್ ಕುಮಾರ್ ಎಷ್ಟು ಬ್ಯುಸಿಯಾಗಿಬಿಟ್ಟಿದ್ದಾರೆಂದರೆ, ಆ ಶಾಲೆಗೆ ಭೇಟಿ ನೀಡುವುದಕ್ಕೂ ಅವರಿಗೆ ಸಮಯವಿಲ್ಲ!
ತಪ್ಪು ಆ ಮಕ್ಕಳದ್ದೇ. ಬಡವರಾಗಿ ಹುಟ್ಟಿದ್ದು ಸಾಮಾನ್ಯ ತಪ್ಪೇ?!
ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಬಡತನ ಜೀವನ ಮೌಲ್ಯವನ್ನು ಕಡಿಮೆ ಮಾಡುತ್ತದೆ. ಅದರಿಂದ ಅತಿ ಹೆಚ್ಚು ಹಾನಿಯಾಗುವುದು ಮಕ್ಕಳಿಗೆ. ಶಿಕ್ಷಣ ಮತ್ತು ಪೌಷ್ಠಿಕತೆಯೆಂಬ ಅಂಶಗಳಿಗೂ ಹೊಡೆತ ಬೀಳುತ್ತದೆ. ಮಕ್ಕಳ ಬಗ್ಗೆ ಗಮನ ಕೊಡದ ಸಮಾಜಕ್ಕೆ ಭವಿಷ್ಯವೆನ್ನುವುದೇ ಇಲ್ಲ. ಯಾವುದೇ ಶತಮಾನವನ್ನು ಬೇಕಿದ್ದರೂ ನೋಡಿ. ಆ ಜನಾಂಗವೆಲ್ಲ ಹೋರಾಡಿದ್ದು, ಕನಸು ಕಂಡಿದ್ದು ತನ್ನ ಮುಂದಿನ ಪೀಳಿಗೆಗಾಗಿಯೇ! ತಮ್ಮ ಮಕ್ಕಳಿಗೆ ಉತ್ತಮ ಬದುಕು/ಭವಿಷ್ಯ ರೂಪಿಸುವುದೇ ಎಲ್ಲಾ ಸಮಾಜಗಳ ಗುರಿಯಾಗಬೇಕು. ಬೆಳವಣಿಗೆಗೆ ಇದೇ ಅಂಶ ಉತ್ತೇಜನ ನೀಡುತ್ತದೆ. ದುರ್ದೈವವಶಾತ್ 'ಭಾರತದ ಪ್ರತಿ ಮೂರು ಮಕ್ಕಳಲ್ಲಿ ಒಂದು ಮಗು ಪೌಷ್ಠಿಕಾಂಶದ ಕೊರತೆಯಿಂದ ಬಳಲುತ್ತದೆ. ಅಂಥ ಮಕ್ಕಳ ಸಂಖ್ಯೆ 57 ಮಿಲಿಯನ್ಗಳಷ್ಟಿದೆ' ಎಂದು ಹೇಳುತ್ತದೆ ಯೂನಿಸೆಫ್.
ಈ ದೇಶದಲ್ಲಿ ಅಪೌಷ್ಠಿಕತೆಯನ್ನು ತಡೆಯುವ ಪ್ರಯತ್ನ ಸ್ವತಂತ್ರ ಪೂರ್ವದಿಂದಲೇ ಶುರುವಾಯಿತು. 1923ರಲ್ಲಿ ಮದ್ರಾಸ್ನ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಆಹಾರ ಒದಗಿಸುವ ಕೆಲಸ ಶುರುವಾಯಿತು. 1960ರಲ್ಲಿ ತಮಿಳುನಾಡಿನ ಅಂದಿನ ಮುಖ್ಯಮಂತ್ರಿ ಕಾಮರಾಜ್ ಅವರು ಮಧ್ಯಾಹ್ನದ ಬಿಸಿ ಊಟ ಯೋಜನೆಯನ್ನು ಶುರುಮಾಡಿದರು. ಇದಕ್ಕೂ ಒಂದು ಕಥೆಯಿದೆ. ಕಾಮರಾಜ್ ಒಮ್ಮೆ ಕಾರಿನಲ್ಲಿ ಹೊರಟಿದ್ದರಂತೆ. ಹೀಗೆ ಹೊರಟಾಗ, ದನಕಾಯುತ್ತಿದ್ದ ನಾಲ್ಕೈದು ಹುಡುಗರು ಅವರಿಗೆ ಎದುರಾದರಂತೆ. ಕಾರು ನಿಲ್ಲಿಸಿದ ಕಾಮರಾಜ್, 'ನೀವೇಕೆ ಶಾಲೆಗೆ ಹೋಗುತ್ತಿಲ್ಲ?' ಎಂದು ಆ ಹುಡುಗರಿಗೆ ಪ್ರಶ್ನಿಸಿದಾಗ, 'ಶಾಲೆಗೆ ಹೋದರೆ ಊಟಕ್ಕೇನು ಮಾಡೋದು?' ಎಂದು ಉತ್ತರ ಬಂದಿತಂತೆ! ಹುಡುಗರು ಹೇಳಿದಂತೆಯೇ ಕಾಮರಾಜ್ ಮಾಡಿದರು. ಇನ್ನು ಅದೇ ರಾಜ್ಯದ ಇನ್ನೊಬ್ಬ ಮುಖ್ಯಮಂತ್ರಿ ಎಮ್.ಜಿ. ರಾಮಚಂದ್ರನ್ ಶುರುಮಾಡಿದ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಭಾರತದ ಅತ್ಯಂತ ಯಶಸ್ವೀ ಯೋಜನೆಗಳಲ್ಲೊಂದು ಎಂದು ಪರಿಗಣಿಸಲಾಗುತ್ತದೆ. ಆದರೆ ಎಲ್ಲಾ ಸರ್ಕಾರಗಳೂ ಈ ಯೋಜನೆಯನ್ನು ಒಪ್ಪಿಕೊಂಡವೆಂದಲ್ಲ. ಸರ್ಕಾರಿ ಮತ್ತು ಸರ್ಕಾರಿ ನೆರವಿನ ಶಾಲೆಗಳಲ್ಲಿ ಕಡ್ಡಾಯವಾಗಿ ಬಿಸಿಯೂಟ ಪೂರೈಸಬೇಕು ಎಂದು ಸುಪ್ರೀಂ ಕೋರ್ಟ್ ನವೆಂಬರ್ 28 2001ರಂದು ನೀಡಿದ ಆದೇಶವನ್ನು ಅನೇಕ ಸರ್ಕಾರಗಳು ವಿರೋಧಿಸಿದವು.
1999ರ ಲೋಕಸಭಾ ಚುನಾವಣೆಗಾಗಿ ಮಾಡಿದ ಖರ್ಚು 880 ಕೋಟಿ ರುಪಾಯಿಗಳು. ಅಂದರೆ ಇಷ್ಟು ಹಣದಿಂದ ಸುಮಾರು 1.3 ಕೋಟಿ ಮಕ್ಕಳಿಗೆ ಇಡೀ ವರ್ಷ ಆಹಾರ ನೀಡಬಹುದಾಗಿತ್ತು! 2011ರಲ್ಲಿ ಅಂತಾರಾಷ್ಟ್ರೀಯ ಆಹಾರ ನೀತಿ ಸಂಶೋಧನಾ ಸಂಸ್ಥೆಯು, 81 ಅಭಿವೃದ್ಧಿಶೀಲ ರಾಷ್ಟ್ರಗಳ ಪೈಕಿ ಭಾರತಕ್ಕೆ ಜಾಗತಿಕ ಹಸಿವು ಸೂಚಿಯಲ್ಲಿ 67ನೇ ಸ್ಥಾನ ನೀಡಿತು. ಭಾರತವಿಂದು ಬಂಧನಕ್ಕೊಳಗಾಗಿದೆ.
ಚೀನಾ ಮತ್ತು ಅಮೆರಿಕದ ತಾಂತ್ರಿಕ ಮತ್ತು ಬೌದ್ಧಿಕ ಸವಾಲುಗಳನ್ನು ಎದುರಿಸುವ ಯಾವುದೇ ಸ್ಥಿತಿಯಲ್ಲಿಯೂ ಈಗ ನಮ್ಮ ದೇಶವಿಲ್ಲ. ನಮ್ಮ ಮಕ್ಕಳ ಮಾನಸಿಕ ಮತ್ತು ದೈಹಿಕ ಅಭಿವೃದ್ಧಿ ಹೀಗೇ ಕುಂಠಿತವಾಗುತ್ತಾ ಹೋದರೆ, ನಾವು ಆಹಾರ ಸರಪಳಿಯ ಕೊನೆಯ ಸ್ಥಾನದಲ್ಲಿ ನಿಲ್ಲಬೇಕಾಗುತ್ತದೆ. ಹಸಿದ ಮಗುವಿನ ಆದ್ಯತೆ ಗಣಿತದ ಕ್ಲಿಷ್ಟ ಸೂತ್ರಗಳನ್ನು ಬಿಡಿಸುವುದೋ ಅಥವಾ ನ್ಯಾನೋಟೆಕ್ನಾಲಜಿಯ ಬಗ್ಗೆ ಗೂಗಲ್ನಲ್ಲಿ ವಿಷಯ ಕಲೆಹಾಕುವುದಲ್ಲ. ಬದಲಾಗಿ ಹೊಟ್ಟೆ ತುಂಬಿಸಿಕೊಳ್ಳುವುದು!
ಖ್ಯಾತ ಮನೋವೈದ್ಯ ಕಾರ್ಲ್ ಜಂಗ್ ಹೇಳಿದ ಮಾತು ಭಾರತಕ್ಕೆ ಸರಿಯಾಗಿ ಅನ್ವಯವಾಗುತ್ತದೆ. "ಮಕ್ಕಳಲ್ಲಿ ಏನಾದರೂ ಬದಲಾವಣೆ ತರಬೇಕೆಂದೆನಿಸಿದರೆ, ಮೊದಲು ನಮ್ಮಲ್ಲೇನಾದರೂ ಬದಲಾವಣೆಯಾಗಬೇಕಾದ ಅಂಶವಿದೆಯೇ ಎನ್ನುವುದನ್ನು ಪರೀಕ್ಷಿಸಿಕೊಳ್ಳಬೇಕು" ಎನ್ನುತ್ತಾರೆ ಜಂಗ್. ಆದರೆ ಭಾರತದಲ್ಲಿ ಈ ಬದಲಾವಣೆ ಬರುವುದಕ್ಕೆ ಇನ್ನು ಬಹಳ ಸಮಯ ಹಿಡಿಯಲಿದೆ.
-ರವಿ ಶಂಕರ್
ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್