ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಸದಾಶಿವಂ ಸುಪ್ರೀಂ ಸುರಕ್ಷೆ!

Vishwanath S
Updated On : 23 Jul 2013, 12:42 pm

ಜಸ್ಟೀಸ್ ಪಳನಿಸ್ವಾಮಿ ಸದಾಶಿವಮ್ ಅವರು ಶುಕ್ರವಾರ ಭಾರತದ 40ನೇ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ನ್ಯಾಯಾಂಗ ವಲಯದಲ್ಲಿ ಅವರಿಗಿರುವ ಪ್ರಾಮಾಣಿಕತೆಯ ವರ್ಚಸ್ಸು ಹೊಸ ಭರವಸೆಯೊಂದನ್ನು ಮೂಡಿಸಿದೆ. ಭ್ರಷ್ಟಾಚಾರದ ಬಗ್ಗೆ ಜನತೆ ಹತಾಶರಾಗಿರುವ ಹಂತದಲ್ಲಿ ಕೊನೆಯ ಆಶಾಕಿರಣವಾಗಿರುವುದು ನ್ಯಾಯಾಂಗವೇ. ಹೀಗಿರುವಾಗ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಹುದ್ದೆಯ ಮೇಲೆ ನಿರೀಕ್ಷೆಯ ಭಾರ ಅತಿಯಾಗಿಯೇ ಇದೆ. ಜತೆಗೆ ಆತಂಕವೂ. ಏಕೆಂದರೆ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಾಗಿದ್ದವರ ಪೈಕಿ 8 ಮಂದಿ ಕಡುಭ್ರಷ್ಟರಾಗಿದ್ದರು ಎಂದು 2010ರ ಅಕ್ಟೋಬರ್‌ನಲ್ಲಿ ಖ್ಯಾತ ನ್ಯಾಯವಾದಿಗಳಾದ ಪ್ರಶಾಂತ್ ಭೂಷಣ್ ಮತ್ತು ಅವರ ತಂದೆ ಶಾಂತಿ ಭೂಷಣ್ ಅಫಡವಿಟ್ ಸಲ್ಲಿಸಿದ್ದರು. ಇದೀಗ ನಿವೃತ್ತರಾಗಿರುವ ನ್ಯಾ. ಅಲ್ತಮಸ್ ಕಬೀರ್ ಅವರೂ ಕೊನೆಕ್ಷಣದಲ್ಲಿ ತಮಗೆ ಬೇಕಾದ ನ್ಯಾಯಮೂರ್ತಿಗಳನ್ನು ಸುಪ್ರೀಂಕೋರ್ಟ್‌ಗೆ ತರುವುದಕ್ಕೆ ಪ್ರಯತ್ನಿಸಿ, ನ್ಯಾಯಮೂರ್ತಿಗಳ ತಂಡ (ಕಲೀಜಿಯಮ್)ದ ಆಕ್ಷೇಪದಿಂದ ಹಿನ್ನಡೆ ಅನುಭವಿಸಿದರು ಎಂಬ ಸುದ್ದಿ ಕಳವಳ ಹುಟ್ಟಿಸುವಂಥದ್ದು.
ಈ ಎಲ್ಲ ಹಿನ್ನೆಲೆಯಲ್ಲಿ ನೂತನ ಮುಖ್ಯ ನ್ಯಾಯಮೂರ್ತಿಗಳ ನೇಮಕವನ್ನು ಗಮನಿಸಿದಾಗ, 'ಸುಪ್ರೀಂಕೋರ್ಟ್ ಸುರಕ್ಷಿತ ವ್ಯಕ್ತಿಯ ಕೈಯಲ್ಲಿದೆ' ಎಂಬ ಭಾವನೆ ಹುಟ್ಟಿಸುವ ಹಲ ಸಂಗತಿಗಳು ಇವೆ. ಈ ಬಗ್ಗೆ 'ಹಿಂದುಸ್ತಾನ್ ಟೈಮ್ಸ್‌'ನ ವರದಿ ನೀಡಿರುವ ಚಿತ್ರಣ ಹೀಗಿದೆ...
***
64 ವರ್ಷದ ಪಿ. ಸದಾಶಿವಂ, ತಮಿಳುನಾಡಿನಿಂದ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ (ಸಿಜೆಐ) ಪಟ್ಟ ಅಲಂಕರಿಸಿದವರಲ್ಲಿ ಮೊದಲಿಗರು. ಕೃಷಿ ಕುಟುಂಬದಿಂದ ಈ ಹಂತಕ್ಕೆ ಬೆಳೆದ ಸದಾಶಿವಂ ಸಾಧನೆ ಸ್ಪೂರ್ತಿದಾಯಕವಾಗಿದೆ. 1970ರಲ್ಲಿ ಅವರು ಪದವಿ ಪಡೆದುಕೊಂಡಾಗ ತಮಿಳುನಾಡಿನ ಇರೋಡ್ ಜಿಲ್ಲೆಯ ಅವರ ಹಳ್ಳಿ ಕಡಪನಲ್ಲೂರಿನಿಂದ ಪದವಿಧರರೆನಿಸಿದ ಹಾಗೂ ಕಾನೂನು ಪದವಿ ಪಡೆದ ಮೊದಲಿಗರು ಎಂಬ ಶ್ರೇಯಸ್ಸಿಗೆ ಭಾಜನರಾಗಿದ್ದರು. 1973ರಲ್ಲಿ ಹಿರಿಯ ನ್ಯಾಯವಾದಿ ಕೆ ದೊರೈಸ್ವಾಮಿ ಅವರಿಗೆ ಸಹಾಯಕರಾಗಿ ವೃತ್ತಿ ಆರಂಭಿಸಿದರು. ನಂತರ ಮದ್ರಾಸ್ ಹೈಕೋರ್ಟ್‌ನಲ್ಲಿ ರಾಜ್ಯ ಸರ್ಕಾರವನ್ನು ಪ್ರತಿನಿಧಿಸುವ ನ್ಯಾಯವಾದಿ ಆದರು. ಸುಪ್ರೀಂಕೋರ್ಟ್‌ನ ಜಡ್ಜ್ ಆಗಿದ್ದು 2007ರ ಆಗಸ್ಟ್‌ನಲ್ಲಿ.
ಈ ನೂತನ ಸಿಜೆಐ ತಮ್ಮ ಸಮಯ ಪರಿಪಾಲನೆಗೆ ಹೆಸರುವಾಸಿ. ಅವರು ರಜೆ ತೆಗೆದುಕೊಂಡಿದ್ದೇ ವಿರಳ. ತಮ್ಮ ಸಭ್ಯತೆ, ವಿನಮ್ರತೆ ಹಾಗೂ ದೃಢತೆಗಳಿಂದ ಇವರು ವಕೀಲರು, ಅರ್ಜಿದಾರರು ಮತ್ತು ಜಡ್ಜ್‌ಗಳಿಗೆ ಆಪ್ಯಾಯಮಾನರಾಗಿದ್ದರು. ಜಡ್ಜ್ ಸ್ಥಾನದಲ್ಲಿ ಕುಳಿತು ಪ್ರಕರಣಗಳನ್ನು ಆಲಿಸುವಾಗ ಅವರೆಂದೂ ನ್ಯಾಯವಾದಿಗಳ ಸೀನಿಯಾರಿಟಿ ಗಮನದಲ್ಲಿರಿಸಿಕೊಂಡು ವ್ಯವಹರಿಸಿದ್ದಿಲ್ಲ. ಆಗತಾನೇ ತರಬೇತು ಹಂತದಲ್ಲಿರುವ ವಕೀಲರ ವಾದವನ್ನೂ ಅಷ್ಟೇ ಆಸಕ್ತಿಯಿಂದ ಆಲಿಸಿದವರು ಸದಾಶಿವಂ. ಇವರು ಸಿಜೆಐ ಆಗಿ ಪ್ರಮಾಣ ಸ್ವೀಕರಿಸುವ ಸಂದರ್ಭಕ್ಕೆ ಹಾಜರಾಗಲು ಚೆನ್ನೈನಿಂದ 300 ಲಾಯರ್‌ಗಳು ಆಗಮಿಸಿದ್ದು ಸದಾಶಿವಂ ಅವರ ಜನಪ್ರಿಯತೆಯನ್ನು ಸಾರುತ್ತದೆ.
ಸುಪ್ರೀಂಕೋರ್ಟ್‌ನಲ್ಲಿ ನ್ಯಾಯಮೂರ್ತಿಗಳಾಗಿದ್ದ ಆರು ವರ್ಷಗಳ ಅವಧಿಯಲ್ಲಿ ಹಲವು ಪ್ರಮುಖ ಪ್ರಕರಣಗಳ ತೀರ್ಪು ನೀಡಿದರು. 1993ರ ಮುಂಬೈಸ್ಫೋಟ ಪ್ರಕರಣದ ತೀರ್ಪು ಪ್ರಮುಖವಾದದ್ದು. ಜೆಸ್ಸಿಕಾ ಲಾಲ್ ಪ್ರಕರಣದಲ್ಲಿ ಮನು ಶರ್ಮಾ ಮೇಲಿನ ಶಿಕ್ಷೆಯನ್ನು ಎತ್ತಿ ಹಿಡಿದಿದ್ದು ಇವರೇ. ಅಂಬಾನಿ ಸಹೋದರರ ನಡುವಿನ ಅನಿಲ ಹಂಚಿಕೆ ವಿವಾದ ಪ್ರಕರಣವನ್ನು ಆಲಿಸಿದ ತ್ರಿಸದಸ್ಯ ನ್ಯಾಯಪೀಠದ ಸದಸ್ಯರೂ ಆಗಿದ್ದರು. ಪ್ರಣಬ್ ಮುಖರ್ಜಿಯವರು ರಾಷ್ಟ್ರಪತಿ ಹುದ್ದೆಗೆ ಸ್ಪರ್ಧಿಸುವುದನ್ನು ಪ್ರಶ್ನಿಸಿದ ಪಿ. ಎ. ಸಂಗ್ಮಾ ಅರ್ಜಿಯನ್ನು ತಿರಸ್ಕರಿಸಿದ ಸಂವಿಧಾನಿಕ ಪೀಠದಲ್ಲಿಯೂ ಇವರಿದ್ದರು.
ಸದಾಶಿವಂ ಅವರ ಇಬ್ಬರು ಪುತ್ರರ ಪೈಕಿ ಯಾರೂ ನ್ಯಾಯವಾದಿಗಳಲ್ಲ. ಒಬ್ಬ ಎಂಜಿನಿಯರ್, ಇನ್ನೊಬ್ಬ ಉದ್ಯಮಿ. ಇಬ್ಬರೂ ಕೋಯಮತ್ತೂರಿನಲ್ಲಿ ನೆಲೆಸಿದ್ದಾರೆ. ಜಸ್ಟೀಸ್ ಸದಾಶಿವಂ ಅವರ 85 ವರ್ಷದ ತಾಯಿ ತನ್ನ ಇಬ್ಬರು ಮಕ್ಕಳೊಂದಿಗೆ ಹಳ್ಳಿಯಲ್ಲೆ ಇದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement