'ಹಿಂದೂ ರಾಷ್ಟ್ರೀಯವಾದಿ' ಗಾಂಧೀಜಿಯನ್ನೂ ಕೋಮುವಾದಿಗಳ ಸಾಲಿಗೆ ಸೇರಿಸುವುದೇ?
ತರ್ಕದಲ್ಲಿ ಬಿರುಕುಂಟಾದಾಗ ವೈಚಾರಿಕ ಸಂವಾದ ಹಳಿ ತಪ್ಪುತ್ತದೆ. ಅದೇಕೆ ಮುಸ್ಲಿಂ...
ತರ್ಕದಲ್ಲಿ ಬಿರುಕುಂಟಾದಾಗ ವೈಚಾರಿಕ ಸಂವಾದ ಹಳಿ ತಪ್ಪುತ್ತದೆ. ಅದೇಕೆ ಮುಸ್ಲಿಂ ರಾಷ್ಟ್ರೀಯವಾದಿಗಳು ಎನ್ನಿಸಿಕೊಳ್ಳುವವರಿಗೆ ಚಪ್ಪಾಳೆ ಹಾಗೂ ಹಿಂದೂ ರಾಷ್ಟ್ರೀಯವಾದಿಗಳಿಗೆ ನಿಂದನೆ ಸಂದಾಯವಾಗುತ್ತದೆ? ಒಂದೋ ಇವೆರಡೂ ಕಲ್ಪನೆಗಳನ್ನು ಸರಿ ಎನ್ನಬೇಕು, ಇಲ್ಲವೇ ಎರಡೂ ಪರಿಕಲ್ಪನೆಗಳನ್ನು ತಪ್ಪು ಎಂದು ಪಕ್ಕಕ್ಕೆ ಸರಿಸಬೇಕು.
'ಮುಸ್ಲಿಂ ರಾಷ್ಟ್ರೀಯವಾದ'ಕ್ಕೆ ವಿಶ್ವಾಸಾರ್ಹತೆಯನ್ನು ದೊರಕಿಸಿಕೊಟ್ಟಿದ್ದು ಮಹಾತ್ಮ ಗಾಂಧಿ. ಖಲೀಫತ್ ಚಳವಳಿಯ ದಶಕಗಳ ನಂತರ ಗಾಂಧಿಯವರಲ್ಲಿ ನಂಬಿಕೆ ಇಟ್ಟಿದ್ದ ಮುಸ್ಲಿಮರು ಸೇರಿಕೊಂಡು 1929ರ ಜುಲೈ 27 ಮತ್ತು 28ರಂದು 'ಆಲ್ ಇಂಡಿಯಾ ನ್ಯಾಷನಲಿಸ್ಟ್ ಮುಸ್ಲಿಂ ಪಾರ್ಟಿ'ಯನ್ನು ರಚಿಸಿಕೊಂಡರು. ಅದರ ನೇತೃತ್ವ ವಹಿಸಿದ್ದು ಡಾ. ಎಂ. ಎ. ಅನ್ಸಾರಿ. ನಮ್ಮ ಇವತ್ತಿನ ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಅವರು ಇದೇ ಕುಟುಂಬಕ್ಕೆ ಸೇರಿದವರು.
ಆಧುನಿಕ ಭಾರತವನ್ನು ಬೆಸೆದ ಸಿದ್ಧಾಂತವೊಂದರ ಪಿತಾಮಹ ಗಾಂಧೀಜಿ. ಅವರ ನೈತಿಕ ಚೌಕಟ್ಟು ರಚಿತವಾಗಿದ್ದು, 'ಧರ್ಮವಿಲ್ಲದ ರಾಜಕೀಯ ಅನೈತಿಕ' ಎಂಬ ತತ್ವದ ಮೇಲೆ. ಗಾಂಧಿಯವರ ಈ ನೀತಿಯಿಂದ ಖುಷಿಗೊಂಡ ಮೊದಲಿಗರೆಂದರೆ ಮೌಲ್ವಿಗಳು. ಜಮಾತೆ ಉಲೆಮಾ ಹಿಂದ್ ಹೆಸರಿನ ಸಂಘಟನೆಯಲ್ಲಿ ನಂತರ ಅವರೆಲ್ಲ ಒಂದಾಗಿದ್ದರು. ಅಸಹಕಾರ ಚಳವಳಿ ವೇಳೆ ಅವರ ಕೊಡುಗೆ ಇತ್ತು. ಹಿಂದು ಮತ್ತು ಮುಸ್ಲಿಂ ಎನ್ನುವಂಥದ್ದು ಹುಟ್ಟಿನಿಂದ ಬಂದ ಅಸ್ತಿತ್ವದ ಚಿಹ್ನೆಗಳು. ನಾಸ್ತಿಕವಾದಿ ಆಗಿರದ ಹೊರತು ಇದು ಬದಲಾಗುವುದಿಲ್ಲ. ಆದರೆ ರಾಷ್ಟ್ರೀಯವಾದ ಎಂಬ ರಾಜಕೀಯ ಪರಿಕಲ್ಪನೆ ಆಗಾಗ ಬದಲಾಗುತ್ತಿರುತ್ತದೆ. 1915ರಲ್ಲಿ ಸಾರ್ವಜನಿಕ ಜೀವನವನ್ನು ಪ್ರವೇಶಿಸಿದ ಲಾಗಾಯ್ತಿನಿಂದ 1948ರಲ್ಲಿ ಹತ್ಯೆಯಾಗುವವರೆಗೂ ಗಾಂಧೀಜಿ ನಂಬಿದ್ದ ದಾರಿ ಎಂದರೆ ಭಾರತದಲ್ಲಿ ಎಲ್ಲ ಮತಗಳೂ ಸಹಬಾಳ್ವೆ ಮಾಡಬೇಕು ಎಂಬ 'ಸರ್ವ ಧರ್ಮ ಸಮಭಾವ' ಸಿದ್ಧಾಂತ.
ಗಾಂಧೀಜಿ ರಾಷ್ಟ್ರೀಯವಾದವು ಕೋಮುವಾದಕ್ಕೆ ಭಿನ್ನ ನೆಲೆಯಲ್ಲಿತ್ತು. ಮುಸ್ಲಿಮರ ಉನ್ನತ ವರ್ಗವು ವಿಭಜನೆಯತ್ತ ಮುಖ ಮಾಡಿರುವುದು ಅರಿವಾದಾಗ ಅವರು ಅತೀವ ನೋವುಂಡರು. ಮುಸ್ಲಿಂ ರಾಷ್ಟ್ರೀಯವಾದವನ್ನು 'ಮುಸ್ಲಿಂ ರಾಷ್ಟ್ರ'ದ ಪರಿಕಲ್ಪನೆಯನ್ನಾಗಿ ಜಿನ್ನಾ ಪರಿವರ್ತಿಸಿದ್ದು ದೇಶ ವಿಭಜನೆಗೆ ಕಾರಣವಾಯಿತು. ಅದು ತಾತ್ವಿಕವಾಗಿ, ಬೌದ್ಧಿಕವಾಗಿ, ಅಂತಿಮವಾಗಿ ಭೌಗೋಳಿಕ ನೆಲೆಯಲ್ಲಿಯೂ ಕ್ಷೀಣತೆ ಸೂಚಿಸುವ ಬೆಳವಣಿಗೆ ಆಯಿತು. ಖೈಬರ್ನಿಂದ ಚಿತ್ತಗಾಂಗ್ವರೆಗೆ ಹರಡಿದ ದೇಶದಲ್ಲಿ ಗೌರವದಿಂದ ಬದುಕುವ ಸಮಾನತೆಯ ಅವಕಾಶದ ಭರವಸೆಯನ್ನು ಗಾಂಧೀಜಿ ಮುಸ್ಲಿಮರಿಗೆ ನೀಡಿದ್ದರು. ಆದರೆ ಸಿಂಧೂ ನದಿಯ ಇಕ್ಕೆಲಗಳಲ್ಲಿ ಬೆಳ್ಳಿಯಂತೆ ಮಿನುಗು ದೇಶವೊಂದನ್ನು ನಿಮಗೆ ನೀಡುತ್ತೇನೆ ಎಂದ ಜಿನ್ನಾ ಪರಿಕಲ್ಪನೆ ಕೊನೆಗೆ ಮೂಲಭೂತವಾದ ಮತ್ತು ಅಸುರಕ್ಷತೆಗಳಲ್ಲಿ ನರಳುವ ದೇಶವೊಂದರ ಹುಟ್ಟಿಗೆ ಕಾರಣವಾಯಿತು ಅಷ್ಟೆ.
ಹಿಂದೂ ರಾಷ್ಟ್ರೀಯವಾದ ಮತ್ತು ಹಿಂದೂ ದೇಶ ಎಂಬುದರ ನಡುವಿನ ವ್ಯತ್ಯಾಸವೂ ಬಹಳ ಸ್ಪಷ್ಟ. ಹಿಂದೂ ರಾಷ್ಟ್ರೀಯವಾದಿ ಎಂದು ಕರೆಸಿಕೊಳ್ಳಲು ಇಚ್ಛಿಸಿದವನಿಗೆ ನವಿರು ಸ್ವಾಗತ ನೀಡೋಣ. ಆದರೆ 'ಹಿಂದೂ ದೇಶ' ಕಟ್ಟುತ್ತೇನೆ ಎನ್ನುವವರಿಗೆ ಧರ್ಮದ ಆಧಾರದಲ್ಲಿ ದೇಶ ನಿರ್ಮಾಣ ಪರಿಣಾಮಕಾರಿ ಅಲ್ಲ ಎಂದು ವಿವರಿಸೋಣ. ಪಾಕಿಸ್ತಾನವೇ ಇದಕ್ಕೊಂದು ಉತ್ತಮ ಉದಾಹರಣೆ. ಧರ್ಮವು ಎಲ್ಲವನ್ನೂ ಹಿಡಿದಿಡುವ ಸಾಧನ ಎಂಬುದೇ ನಿಜವಾಗಿದ್ದರೆ ಜಗತ್ತಿನಲ್ಲಿ 22 ಅರಬ್ ರಾಷ್ಟ್ರಗಳು ಯಾಕಿರುತ್ತಿದ್ದವು ಹೇಳಿ? ಗಾಂಧಿ ಕಾಲದಲ್ಲೂ ಹಿಂದು ತೀವ್ರವಾದ ಅಸ್ತಿತ್ವದಲ್ಲಿತ್ತು. ಆದರೆ ಅದು ಸಣ್ಣ ಗುಂಪೊಂದನ್ನು ಮೀರಿ ಬೆಳೆಯಲಿಲ್ಲ. ಪ್ರತ್ಯೇಕ ದೇಶ ಕೇಳುವ ಸ್ಥಿತಿಯಲ್ಲಂತೂ ಇರಲೇ ಇಲ್ಲ.
ಹಿಂದೂಯಿಸಂ ಎಂಬುದು ಸೆಕ್ಯುಲರಿಸಂ ಎಂಬುದಕ್ಕೆ ಅಡ್ಡಗಾಲಾಗುತ್ತದೆ ಎಂದು ಗಾಂಧೀಜಿ ಬಳಿ ಯಾರಾದರೂ ಹೇಳಿದ್ದರೆ ಅವರು ಖಂಡಿತ ಒಪ್ಪುತ್ತಿರಲಿಲ್ಲ. ಅವರು ಪ್ರತಿಪಾದಿಸಿದ ಹಿಂದೂಯಿಸಂ ಭ್ರಾತೃತ್ವದ ಬತ್ತದ ಬಾವಿಯಾಗಿತ್ತು. ಅವರ ಸಮಕಾಲೀನರಾದ ಮೌಲಾನಾ ಆಜಾದ್ ಸಹ ಇಸ್ಲಾಂ ಅನ್ನು ಧಾರ್ಮಿಕ ಸೌಹಾರ್ದದ ರೂಪಕದಂತೆ ಅರ್ಥೈಸಿದ್ದರು. ಇವರಿಬ್ಬರೂ ಧಾರ್ಮಿಕ ಪರಿಭಾಷೆಗಳನ್ನು ಅರಿವಿಲ್ಲದಂತೆಯೇ ಬಳಸಿದರು. ಹಿಂದೂ ಬಹುಸಂಖ್ಯಾತ ಭಾರತವು ಸೆಕ್ಯುಲರ್ ಆಗಿ ಉಳಿದಿದ್ದು ಗಾಂಧೀಜಿ ಸೆಕ್ಯುಲರ್ ಆಗಿದ್ದರು ಎಂಬ ಕಾರಣಕ್ಕಲ್ಲ. ಗಾಂಧಿ ಸೆಕ್ಯುಲರ್ ಆಗಿದ್ದರು ಏಕೆಂದರೆ ಭಾರತ ಸೆಕ್ಯುಲರ್ ಆಗಿತ್ತು ಎನ್ನುವುದೇ ಸರಿ ಹೊಂದುತ್ತದೆ.
ಗಾಂಧಿ ಹಿಂದೂ ಎಂದು ಕರೆಸಿಕೊಳ್ಳುವುದಕ್ಕೆ ಹೆಮ್ಮೆಪಟ್ಟರು. ಅವರು ಕೊಟ್ಟದ್ದು ರಾಮರಾಜ್ಯದ ಕನಸನ್ನು. ಮಾರ್ಕ್ಸ್ವಾದದಂಥ ವಿದೇಶಿ ಕಲ್ಪನೆಗಳ ನಕಲು ಅದಾಗಿರಲಿಲ್ಲ. ರಾಮರಾಜ್ಯವೆಂದರೆ ಸಮೃದ್ಧಿ, ಸಮಾನತೆ, ಶೋಷಣೆರಹಿತ ಸಮಾಜದ ಪರಿಕಲ್ಪನೆ. ಗಾಂಧಿ ತಮ್ಮ ಜಾತಿಯ ಬಗ್ಗೆಯೂ ಮುಜುಗರಪಟ್ಟುಕೊಳ್ಳಲಿಲ್ಲ. 1931ರ ಫೆಬ್ರವರಿ 22ರಂದು ಅವರು ಮುಸ್ಲಿಂ ಲೀಗ್ನ ಶಫಿ ಪಂಗಡಕ್ಕೆ ತಮಾಷೆ ಧ್ವನಿಯಲ್ಲಿ ಹೀಗೆ ಹೇಳಿದ್ದರು: 'ಸಹೋದರರೇ, ನಾನೊಬ್ಬ ಬನಿಯಾ. ಹೀಗಾಗಿ ನನ್ನ ದುರಾಸೆಗೆ ಮಿತಿಯಿಲ್ಲ. ಹೀಗಾಗಿ ಕೇವಲ 21 ಕೋಟಿ ಜನರ ಬಗ್ಗೆ ಮಾತನಾಡದೇ 30 ಕೋಟಿ ಭಾರತೀಯರ ಪರವಾಗಿ ಮಾತನಾಡುವುದೇ ಯಾವತ್ತೂ ನನ್ನ ಕನಸು ಮತ್ತು ಹೃದಯದ ಬಯಕೆ ಆಗಿದೆ.' ಅವರು ಹಿಂದೂಗಳ ಪರವಾಗಿ ಮಾತ್ರ ಮಾತನಾಡುತ್ತಾರೆ ಎಂಬ ಆರೋಪಕ್ಕೆ ಪ್ರತಿಯಾಗಿ ಹೇಳಿದ ಮಾತಾಗಿತ್ತು ಇದು.
ಗಾಂಧೀಜಿಯವರ ಅನುಯಾಯಿ ಜವಾಹರ್ಲಾಲ್ ನೆಹರು ಅವರಿಗೂ ತಮ್ಮ ಹೆಸರಿನ ಹಿಂದಿದ್ದ 'ಪಂಡಿತ್' ಎಂಬ ಶಬ್ದ ತಮ್ಮ ಸೆಕ್ಯುಲರ್ ಇಮೇಜ್ಗೆ ಧಕ್ಕೆ ತರಬಹುದು ಎಂದು ಯಾವತ್ತೂ ಅನ್ನಿಸಲಿಲ್ಲ. ವೈಯಕ್ತಿಕವಾಗಿ ನೆಹರು ಅವರಿಗೆ ನಂಬಿಕೆಯ ಆಚರಣೆ ಆಗಿಬರುತ್ತಿರಲಿಲ್ಲ. ಹಾಗೆಂದು, ಗಾಂಧೀಜಿಯವರಿಂದ ಕಲಿತ ಗುಣ ಮೈಗೂಡಿದ್ದರಿಂದ ಸಾರ್ವಜನಿಕವಾಗಿ ಅವರು ತಮ್ಮ ಬ್ರಾಹ್ಮಣ ಐಡೆಂಟಿಟಿಯನ್ನು ಅನಪೇಕ್ಷಿತ ಎಂಬಂತೆ ಕಾಣುವ ಗೋಜಿಗೆ ಹೋಗಲಿಲ್ಲ. ಇಷ್ಟಕ್ಕೂ ಭಾರತವೆಂದರೆ ನಂಬಿಗಸ್ಥರ ದೇಶ. ಪಂಡಿತ ಎಂಬ ಜಾತಿಸೂಚಕದ ಬಗ್ಗೆ ಮುಜುಗರ ಪಡುವವರು ಸೆಕ್ಯುಲರ್ ಕೋಲ್ಕತಾದ ದುರ್ಗಾಪೂಜೆಯನ್ನು ನೋಡಿಲ್ಲ ಎಂದೇ ಅರ್ಥ.
ದುರಂತವೆಂದರೆ, ತಮ್ಮ ಸಮುದಾಯದ ಐಡೆಂಟಿಟಿಯನ್ನು ಮೂಲಭೂತ ನಿಲುವಿಗೆ ಬಳಸಿಕೊಳ್ಳುವುದರಲ್ಲಿ ಒಂದಿನಿತೂ ಹಿಂಜರಿಯದ ಮುಸ್ಲಿಂ ಲೀಗ್ನ ಮುಖಂಡರು, ಗಾಂಧಿಯವರ ರಾಮರಾಜ್ಯವನ್ನು ಮಾತ್ರ ಮುಸ್ಲಿಮರನ್ನು ಗುಲಾಮರನ್ನಾಗಿ ಮಾಡುವ ಪ್ರಯತ್ನ ಎಂದು ಸುಳ್ಳು ಹರಡಿದರು. ಇದರ ಭಿನ್ನ ಭಾಗವನ್ನೆ ಇಂದೂ ನಮ್ಮ ಚರ್ಚೆಗಳಲ್ಲಿ ಕಾಣುತ್ತಿದ್ದೇವೆ. ಹೀಗೆ ಬೊಬ್ಬೆ ಹಾಕುತ್ತಿರುವವರು ಮುಸ್ಲಿಮರ ಮತಗಳನ್ನು ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕವಲ್ಲದೆ, ಹೆದರಿಕೆ ಸೃಷ್ಟಿಯ ಮೂಲಕ ಪಡೆಯುವುದರಲ್ಲಿ ನಂಬಿಕೆ ಇರಿಸಿದವರು.
1946ರ ಚುನಾವಣೆಯಲ್ಲಿ ಇದೇ ಆತಂಕದ ಬೊಬ್ಬೆಯನ್ನು ಬಳಸಿಕೊಂಡು ಪ್ರತ್ಯೇಕತಾವಾದಿ ಮುಸ್ಲಿಂ ಲೀಗ್ ಪಕ್ಷ ತನ್ನ ಅಸ್ತಿತ್ವ ಕಂಡುಕೊಂಡಿತು. ಆದರೆ ಇಲ್ಲೊಂದು ಅಂಶವನ್ನು ಪ್ರಮುಖವಾಗಿ ನಮೂದಿಸಬೇಕು. ಆಗಿನ ಜನಾಭಿಪ್ರಾಯದ ಪರಿಧಿ ಸೀಮಿತವಾಗಿತ್ತು. ಭೂಮಾಲಿಕರು, ಪದವಿಧರರು ಸೇರಿದಂತೆ ಶೇ. 11ರಷ್ಟಿದ್ದ ಉನ್ನತವರ್ಗ ಮಾತ್ರವೇ ಮತದಾನದ ಹಕ್ಕು ಚಲಾಯಿಸಿತ್ತು. ಗಾಂಧೀಜಿಯವರನ್ನು ಅನುಸರಿಸುತ್ತಿದ್ದ ಸಾಮಾನ್ಯರು ಮತ್ತು ಬಡವರ ಸಮೂಹಕ್ಕೆ ಈ ನಿರ್ಧಾರದ ಹಕ್ಕು ಕೊಟ್ಟಿದ್ದರೆ ಫಲಿತಾಂಶವೇ ಬೇರೆ ಇರಬಹುದಿತ್ತೇನೊ?
ಅನುಸರಿಸುವ ಮತ ನಮ್ಮನ್ನು ಕೋಮುವಾದಿ ಆಗಿಸುವುದಿಲ್ಲ. ಆದರೆ ಮನುಷ್ಯನ ವರ್ತನೆ ಅವನನ್ನು ಹಾಗಾಗಿಸುತ್ತದೆ. ಒಬ್ಬ ನಾಗರಿಕನಿಗಿರುವಂತೆ ರಾಜಕಾರಣಿಗೂ ಹಿಂದೂ, ಮುಸ್ಲಿಂ, ಸಿಖ್, ಕ್ರೈಸ್ತ ಎಂದೆಲ್ಲ ಗುರುತಿಸಿಕೊಳ್ಳುವ ಹಕ್ಕಿದೆ. ಅಂಥ ಅಭ್ಯರ್ಥಿಗಳ ಮೇಲೆ ಸಂದೇಹ ಕಾಡಿದಾಗ ಒಂದು ಪ್ರಶ್ನೆ ಕೇಳಿಕೊಳ್ಳಬೇಕು. ಆತ ಸರ್ವಧರ್ಮ ಸಮಭಾವಕ್ಕೆ ಬದ್ಧತೆ ತೋರುತ್ತಾನೆಯೇ? ಇದಕ್ಕೆ ನಕಾರಾತ್ಮಕ ಉತ್ತರ ಬಂದರೆ ಆ ಅಭ್ಯರ್ಥಿಗೆ ಮತ ಹಾಕಬೇಡಿ ಅಷ್ಟೆ.
ಭಾರತದಲ್ಲಿ ಭಜನೆ- ಪ್ರಾರ್ಥನೆ ನಂಬುವವರು ಆ ಆಚರಣೆಯಲ್ಲಿ ತೊಡಗಲಿ. ಬೇಡದವರು ಟಿವಿ ನೋಡುತ್ತ ಕೂರಲಿ. ಮತ- ನಂಬಿಕೆಗಳು ಒಂದು ಸ್ವಾತಂತ್ರ್ಯ. ಆ ಸ್ವಾತಂತ್ರ್ಯವನ್ನು ನಾವು ಸಂಭ್ರಮಿಸೋಣ.
(ಆಂಗ್ಲ ಲೇಖನದ ಅನುವಾದ ಲೇಖಕರ ಅನುಮತಿ ಮೇರೆಗೆ)
- ಎಂ. ಜೆ. ಅಕ್ಬರ್, ಖ್ಯಾತ ಪತ್ರಕರ್ತ