'ಹಿಂದು ತನುಮನ, ಹಿಂದು ಜೀವನ' ಎಲ್ಲಿದೆ ಈಗ?
ಒಂದು ವೇಳೆ ಹಿಂದುಗಳು ತಮ್ಮ ಮಹಾನ್ ಧರ್ಮದ ಪ್ರತಿ ಗೌರವಶೂನ್ಯರಾದರೆ ಭರತವರ್ಷದ ಪ್ರಗತಿ ಮತ್ತು ವಿಕಾಸ ಸಾಧ್ಯವಾಗುವುದೇ? ಬಹುಸಂಖ್ಯಾತ ಸಮಾಜದ ದೌರ್ಬಲ್ಯ, ದೇಶವನ್ನು ಗಟ್ಟಿಗೊಳಿಸಬಲ್ಲದೇ? ಒಂದು ವೇಳೆ ಯಾರಾದರೂ ಇಂಡಿಯನ್ ಮುಜಾಹಿದ್ದೀನ್ನಂಥ ಮಾನವದ್ವೇಷಿ ಸಂಘಟನೆ ಹುಟ್ಟಿಕೊಂಡದ್ದು ಗುಜರಾತ್ನಲ್ಲಾದ ದೌರ್ಭಾಗ್ಯಕರ ಘಟನೆಗೆ ಪ್ರತೀಕಾರವಾಗಿ ಎಂದು ಹೇಳುತ್ತಾರೆಂದರೆ, ಅಂಥ ವ್ಯಕ್ತಿಯನ್ನು ದೇಶಭಕ್ತ ಎಂದು ಕರೆಯುವುದು ಸಾಧ್ಯವೇ? ಹಾಗಿದ್ದಮೇಲೆ ದೇಶದಲ್ಲಿ ಪ್ರತಿಯೊಂದು ಆತಂಕವಾದಿ ಸಂಘಟನೆಗಳೂ ನಮ್ಮಿಂದಾಗಿಯೇ ಹುಟ್ಟಿಕೊಂಡವು ಎಂದಾಯಿತು! ಒಸಾಮಾ ಬಿನ್ ಲ್ಯಾಡೆನ್ ಆಗಲಿ ಅಥವಾ ಶಕೀಲ್ ಅಹಮದ್ ಆಗಲಿ, ಅವರೆಲ್ಲ ಯಾವುದೋ ಒಂದು ರೀತಿಯಲ್ಲಿ ಯಾರದೋ ಮೇಲಿನ ಸಿಟ್ಟನ್ನು ಅಭಿವ್ಯಕ್ತಿಗೊಳಿಸುವವುದಕ್ಕೇ ಹೀಗೇ ಮಾಡುತ್ತಾರೆ, ಮಾತನಾಡುತ್ತಾರೆ ಎನ್ನಬೇಕಾಗುತ್ತದೆ.
ದೇಶದಲ್ಲಿನ ಸುಮಾರು 98 ಪ್ರತಿಶತ ಆತಂಕವಾದಿ ಸಂಘಟನೆಗಳು ತಮ್ಮ ಶಾಸನದಲ್ಲೇ ಹುಟ್ಟಿಕೊಂಡವು ಎನ್ನುವುದನ್ನು ಕಾಂಗ್ರೆಸ್ ಮರೆತಂತಿದಿದೆ. ಇನ್ನು ಅಂಥ ಸಂಘಟನೆಗಳ ಮೇಲೆ ಪ್ರತಿಬಂಧ ಕೂಡ ಕಾಂಗ್ರೆಸ್ ಆಡಳಿತಾವಧಿಯಲ್ಲೇ ನಡೆದಿದೆ. ಕಾಂಗ್ರೆಸ್ನ ಗೃಹಮಂತ್ರಾಲಯ ಹೇಳುವ ಪ್ರಕಾರ, ಇಂಡಿಯನ್ ಮುಜಾಹಿದ್ದೀನಿ ಎನ್ನುವುದು ಸಿಮಿ(ಸ್ಟೂಡೆಂಟ್ ಇಸ್ಲಾಮಿಕ್ ಮೂಮ್ಮೆಂಟ್ ಆಫ್ ಇಂಡಿಯಾ) ಸಂಘಟನೆಯ ಬದಲಾದ ಹೆಸರು. ಸಿಮಿಯ ಸ್ಥಾಪನೆಯಾಗಿದ್ದು 30 ವರ್ಷಗಳ ಹಿಂದೆಯೇ. ಆ ಸಮಯದಲ್ಲಿ ಬಾಬ್ರಿ ಮಸೀದಿ ಗಟ್ಟಿಯಾಗೇ ಇತ್ತು, ಗುಜರಾತ್ನಲ್ಲೂ ದಂಗೆಗಳೂ ಆಗಿರಲಿಲ್ಲ! ಹಾಗಿದ್ದರೆ ಸಿಮಿಯ ಜನನಕ್ಕೆ ಯಾವ ಕಾರಣಗಳನ್ನು ಕೊಡುತ್ತಾರೆ ಕಾಂಗ್ರೆಸ್ನ ನಾಯಕರು? ಒಂದು ವೇಳೆ ಕಾರಣ ಮತ್ತು ಪರಿಣಾಮಗಳ ತಳಹದಿಯಲ್ಲೇ ಈ ವಾದವನ್ನು ನೋಡುವುದಾದರೆ, ಜಿಹಾದ್ನ ಹೆಸರಿನಲ್ಲಿ 5 ಲಕ್ಷ ಕಾಶ್ಮೀರಿ ಹಿಂದುಗಳ ಮನೆಗಳನ್ನು ಸುಟ್ಟು ಹಾಕಿದ್ದಕ್ಕೆ, ಅವರ ಹೆಣ್ಣುಮಕ್ಕಳ ಮಾನಹರಣ ಮಾಡಿದ್ದಕ್ಕೆ, ಮಕ್ಕಳು ಮತ್ತು ಮುದುಕರನ್ನು ನಿರ್ದಯವಾಗಿ ಕೊಂದುಹಾಕಿದ್ದಕ್ಕೆ ಯಾವ ಕಾರಣವನ್ನು ಕೊಡಬೇಕು? ಕೊಡುತ್ತಾರೆ? ಇಷ್ಟೆಲ್ಲ ಆದ ನಂತರವೂ ಆ ಕಾಶ್ಮೀರಿ ಹಿಂದುಗಳು, ಜಿಹಾದಿಗಳ ಮೇಲೆ ಪ್ರತೀಕಾರ ತೀರಿಸಿಕೊಳ್ಳಲು ಹಿಂದು ಮುಜಾಹಿದ್ದೀನ್ ಸಂಘಟನೆಯನ್ನೇಕೆ ಹುಟ್ಟುಹಾಕಲಿಲ್ಲ?
ಇಸ್ಲಾಮಿ ದಾಳಿಗಳಿಂದ ಹಿಂದುಗಳು ನೋವುಂಡಾಗಲೆಲ್ಲ ಸೆಕ್ಯುಲರ್ ಮತಿಹೀನರು ಕುತರ್ಕಗಳನ್ನು ಮುಂದಿಡುತ್ತಾ ಬಂದಿದ್ದಾರೆ. ಬಾಬ್ರಿ ಘಟನೆ ನಡೆದ ನಂತರ, ಪ್ರತಿಯೊಂದು ಉಗ್ರ ಕೃತ್ಯಗಳಿಗೂ ಸಮರ್ಥನೆ ನೀಡುವಂಥ ಹೇಳಿಕೆಗಳು ಮತ್ತು ಲೇಖನಗಳನ್ನು ನಾವು ನೋಡುತ್ತಲೇ ಇದ್ದೇವೆ. ಇಂಥವರನ್ನೆಲ್ಲ ಆತಂಕವಾದದ ವಕೀಲರು ಅಥವಾ ಪೋಷಕರೆಂದು ಕರೆಯುವುದು ಉಚಿತ.
ವಾಸ್ತವದಲ್ಲಿ, ರಾಷ್ಟ್ರವಾದಿಯಾಗುವುದು ಮುಸ್ಲಿಂ, ಸಿಖ್, ಕ್ರಿಶ್ಚಿಯನ್ನರಿಗೆ ಅಭಿಮಾನದ ಮತ್ತು ಗೌರವದ ವಿಷಯ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದವರ ಉದಾಹರಣೆ ಕೊಡುವಾಗ ನಾವು ಸಿಖ್ ಧರ್ಮಗುರು ತೇಗ್ಬಹಾದ್ದೂರ್ ಸಿಂಗ್ ಅಥವಾ ಗುರುಗೋವಿಂದ ಸಿಂಗ್ ಅವರ ಹೆಸರನ್ನೇ ಏಕೆ ಉಚ್ಚರಿಸುತ್ತೇವೆ? ಅವರನ್ನು
'ಹಿಂದುಸ್ತಾನದ ಕವಚ' ಎಂದೇಕೆ ಕರೆಯಲಾಗುತ್ತದೆ? ಏಕೆಂದರೆ ಅವರು ರಾಷ್ಟ್ರಧರ್ಮದ ಸರಿಯಾದ ಪಥವನ್ನು ನಮಗೆ ತೋರಿಸಿದವರು.
ಭಾರತದಲ್ಲಿ ಧರ್ಮ ಮತ್ತು ರಾಷ್ಟ್ರಕ್ಕೆ ಬಹಳ ಆಳವಾದ ಸಂಬಂಧವಿದೆ. ಹಾಗಾಗೇ ಗುರುದ್ವಾರ ಅಥವಾ ಮಂದಿರಗಳಲ್ಲಿ ಸೈನಿಕರಿಗಾಗಿ ಪ್ರಾರ್ಥನೆಗಳು ನಡೆಯುತ್ತವೆ. ಸತ್ಯಮಿತ್ರಾನಂದರಂತೂ ಹರಿದ್ವಾರದಲ್ಲಿ ಭಾರತ ಮಾತೆಯ ಮಂದಿರವನ್ನು ಸ್ಥಾಪಿಸಿದರು. ಆ ಮಂದಿರದಲ್ಲಿ ದೇಶಕ್ಕಾಗಿ ವೀರಮರಣವನ್ನಪ್ಪಿದ 'ಅಬ್ದುಲ್ ಹಮೀದ್' ಎಂಬ ವೀರನ ಪ್ರತಿಮೆಯೂ ಇದೆ. ದೇಶವಿದ್ದರೇ ಧರ್ಮವಿರುತ್ತದೆ, ದೇಶವೇ ಹಾಳಾದರೆ ಧರ್ಮ ಉಳಿಯುವ ಬಗೆಯೆಂತು? ದೇಶ ವಿಭಜನೆಯಾದಾಗ ಪಾಕಿಸ್ತಾನದಿಂದ ಅವಮಾನ ಅತ್ಯಾಚಾರ ಎದುರಿಸಿ ಭಾರತಕ್ಕೆ ಓಡಿಬಂದ ಹಿಂದು ಮತ್ತು ಸಿಖ್ಖರು ಈ ವಿಷಯವನ್ನು ನಿಮಗೆ ಸರಿಯಾಗಿ ಮನದಟ್ಟುಮಾಡಿಕೊಡಬಲ್ಲರು.
---
ಅಟಲ್ ಬಿಹಾರಿ ವಾಜಪೇಯಿಯವರನ್ನು ಭಾರತದ ನಿಜವಾದ ಸರ್ವ ಪಂಥ ಸಮಭಾವದ ಸಾಕಾರ ಮೂರ್ತಿ ಎಂದು ಕರೆಯಲಾಗುತ್ತದೆ. ಅವರ ಪ್ರಬಲ ವಿರೋಧಿಗಳೂ ಕೂಡ ಎಂದಿಗೂ ಅವರ ವಿರುದ್ಧ ಸಂಪ್ರದಾಯ ವಾದಿಯೆಂಬ ಅಥವಾ ಸಂಕೀರ್ಣ ವ್ಯಕ್ತಿಯೆಂಬ ಆರೋಪವನ್ನು ಮಾಡಲಿಲ್ಲ. ಮಾಡಲು ಅವರಿಂದ ಸಾಧ್ಯವೂ ಇಲ್ಲ! ವಾಜಪೇಯಿಯವರ ಪ್ರಸಿದ್ಧ ಕವಿತೆಯೊಂದರ ಮೊದಲ ಸಾಲುಗಳು ಹೀಗೆ ಸಾಗುತ್ತವೆ: 'ಹಿಂದು ತನ್ಮನ್, ಹಿಂದು ಜೀವನ್, ರಂಗ-ರಂಗ ಹಿಂದು ಮೇರಾ ಪರಿಚಯ್'!
ಈ ಸಾಲುಗಳಲ್ಲಿ ಯಾರಿಗಾದರೂ ಸಂಕೀರ್ಣತೆ ಕಾಣಿಸುತ್ತದೆಯೇ? ಸಾಂಪ್ರದಾಯಿಕತೆ ಕಾಣಿಸುತ್ತದೆಯೇ? ಹಿಂದುತ್ವದ ಪ್ರತಿ ಅಭಿಮಾನ ಮಾನ ಹೊಂದದ ವ್ಯಕ್ತಿ, ಭಾರತೀಯ ಸಂಸ್ಕೃತಿ ಮತ್ತು ಸಭ್ಯತೆಯ ಬಗ್ಗೆ ಎಂದಿಗಾದರೂ ಗೌರವ ಮತ್ತು ಅಭಿಮಾನ ಬೆಳೆಸಿಕೊಳ್ಳಬಲ್ಲನೇ? ಮನೋಬಲವನ್ನು ಕಳೆದುಕೊಂಡಿರುವ, ತಮ್ಮ ಪೂರ್ವಜರ ಬಗ್ಗೆ ತಿರಸ್ಕಾರ ಬೆಳೆಸಿಕೊಂಡಿರುವ, ವಿದೇಶಿ ಸಂಸ್ಕೃತಿಯ ಮೋಹಕ್ಕೆ ಸಿಲುಕಿ ತನ್ನ ಸಮಾಜ ಮತ್ತು ಅದರ ಮಹತ್ವಕ್ಕೆ ಆಘಾತ ಉಂಟುಮಾಡುತ್ತಾ ಬೆಳೆಯುತ್ತಿರುವ ವ್ಯಕ್ತಿಯಿಂದ ದೇಶಕ್ಕೆ ಒಳ್ಳೆಯದಾಗಲು ಸಾಧ್ಯವೇ?
ದುರ್ಭಾಗ್ಯವಶಾತ್ ದೇಶದಲ್ಲಿ ಸೆಕ್ಯುಲರ್ವಾದದ ವಿಷ ಹವೆ ಎಷ್ಟೊಂದು ಹರಡಿಬಿಟ್ಟಿದೆಯೆಂದರೆ, ದೇಶದ ಸಭ್ಯತೆ ಮತ್ತು ಸಂಸ್ಕೃತಿಯ ಪ್ರತೀಕವೆನಿಸಿಕೊಂಡವನನ್ನು, ಹಿಂದು ಎಂಬ ಹೆಸರು ಹೊಂದಿದವನನ್ನು ವಿರೋಧಿಸಬೇಕು ಮತ್ತು ಆತನನ್ನು ಸಂಪ್ರದಾಯವಾದಿ ಎಂದು ಕರೆಯಬೇಕು ಎಂಬ ಅಲಿಖಿತ ನಿಯಮ ಜಾರಿಯಾಗಿದೆ. ಸತ್ಯವೇನೆಂದರೆ, ತಮ್ಮನ್ನು ತಾವು ನಿಜವಾದ ಸೆಕ್ಯುಲರ್ಗಳೆಂದು ಕರೆದುಕೊಳ್ಳುವವರೇ ಸಾಂಪ್ರದಾಯಿಕ ದ್ವೇಷದ ಪೋಷಕರಾಗಿರುತ್ತಾರೆ. ಭಯೋತ್ಪಾದನಾ ದಾಳಿಗಳಾದಾಗ, ಸತ್ತವರ 'ಹಣೆಯಲ್ಲಿ ಕುಂಕುಮವಿದೆಯೇ ಅಥವಾ ತಲೆ ಮೇಲೆ ಟೋಪಿಯಿದೆಯೇ' ಎನ್ನುವ ಆಧಾರದ ಮೇಲೆಯೇ ಇವರುಗಳು ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಾರೆ. ಪೋಟಾದಂಥ ಕಾಯಿದೆಯನ್ನು ತೆಗೆಸಿಹಾಕುವುದರ ಹಿಂದೆ ಇಂಥದ್ದೇ ಮಾನಸಿಕತೆ ಕೆಲಸ ಮಾಡಿದೆ. ಸಂಸತ್ ಭವನದ ಮೇಲೆ ದಾಳಿ ಮಾಡಿದ ಉಗ್ರರಿಗೆ ಅತಿ ಹೆಚ್ಚು ಸಹಾಯ ಮಾಡಿದ್ದ ಪ್ರೊಫೆಸರ್ನ ಸಹಾಯಕ್ಕೆ ಈ ಸೆಕ್ಯುಲರ್ಗಳು ಮುಂದಾದಾಗಲೇ ಅವರ ಮುಸ್ಲಿಂ ಪ್ರೀತಿ ಮತ್ತು ಹಿಂದು ದ್ವೇಷದ ಪ್ರಮಾಣ/ಸ್ವರೂಪ ಸ್ಪಷ್ಟವಾಗಿ ಅನಾವರಣಗೊಂಡಿತ್ತು. ಬಾಟ್ಲಾ ಹೌಸ್ ದಾಳಿಯ ವೇಳೆ ಮೃತಪಟ್ಟ ಪೊಲೀಸ್ ಇನ್ಸ್ಪೆಕ್ಟರ್ ಮೋಹನ್ ಶರ್ಮಾರನ್ನು ದೂಷಿಸಿದ ಸೆಕ್ಯುಲರ್ಗಳು, ಉಗ್ರರನ್ನು ಸಮರ್ಥಿಸಿಕೊಂಡರು! ಕಾಶ್ಮೀರದಲ್ಲಿ ನಮ್ಮ ಸೇನೆಯ ಮೇಲೆ ಕಲ್ಲೆಸೆಯುವ ಪಾಕಿಸ್ತಾನಿ ಪೋಷಿತ ಪ್ರತ್ಯೇಕತಾವಾದಿಗಳ ಹಿಂದೆಯೂ ಈ ಸೆಕ್ಯುಲರ್ಗಳೇ ಇದ್ದಾರೆ. ದೇಶದ ರಕ್ಷಣೆ ಮಾಡುತ್ತಿರುವ ಸೈನಿಕರ ಪರವಾಗಿ ಒಮ್ಮೆಯೂ ಇವರುಗಳು ಮಾತನಾಡಿದ ಉದಾಹರಣೆಯಿಲ್ಲ. ಭಾರತಕ್ಕೆ ನಿಜಕ್ಕೂ ಇಂದು ಅಪಾಯವಿದೆಯೆಂದರೆ, ಅದು ಈ 'ಅಭಾರತೀಯ' ಮನಸ್ಥಿತಿಯ ವಿಕೃತ ಸೆಕ್ಯುಲರ್ ವಾದದ ಧ್ವಜವಾಹಕರಿಂದಲೇ. ತಮ್ಮ ಸ್ವಹಿತಾಸಕ್ತಿಗಾಗಿ ಇವರುಗಳು ರಾಷ್ಟ್ರೀಯ ಭದ್ರತೆ ಮತ್ತು ಸಾಮಾಜಿಕ ಏಕತೆಯೊಂದಿಗೂ ಆಟವಾಡಬಲ್ಲರು.
ಯಾರು ಹಿಂದು ಹಿತದ ಬಗ್ಗೆ ಮಾತನಾಡುತ್ತಾರೋ ಅವರೇ ದೇಶವನ್ನು ಆಳುತ್ತಾರೆ ಎಂದು ಹಿಂದೆ ಹೇಳಲಾಗುತ್ತಿತ್ತು. ಹಿಂದು ಹಿತದ ಅರ್ಥ 'ಹಿಂದುಸ್ಥಾನದ ಹಿತ' ಎಂಬುದು. ಏಕೆಂದರೆ ಹಿಂದು ಎಂಬುದು ಯಾವುದೇ ಪಂಥ ಅಥವಾ ಸಂಪ್ರದಾಯದ ಹೆಸರಲ್ಲ, ಬದಲಾಗಿ ಸಿಂಧು ನದಿಯ ಈ ಬದಿಯಿರುವ ಜನರನ್ನು,
ಸಿಂಧುಪುತ್ರರು ಅಥವಾ ಇಂಡಿಯನ್ ಎಂದು ಕರೆಯಲಾಗುತ್ತದೆ. ಸಿಂಧು ಎಂಬ ಹೆಸರು ಗ್ರೀಕ್ ಭಾಷೆಯಲ್ಲಿ ಇಂಡೀಸ್ ಎಂಬ ಅರ್ಥ ಹೊಂದಿದೆ. ಇದರಿಂದಲೇ ಇಂಡಿಯನ್ ಮತ್ತು ಇಂಡಿಯಾ ಎಂಬ ಹೆಸರು ಹುಟ್ಟಿಕೊಂಡದ್ದು. ಆದರೆ ಇಂದು? ಹಿಂದು ಹಿತದ ಬಗ್ಗೆ ಮಾತನಾಡಿದವನನ್ನೇ ಅತಿ ಹೆಚ್ಚು ತಿರಸ್ಕಾರ ಮಾಡಲಾಗುತ್ತದೆ.
ಇದೇನೇ ಇದ್ದರೂ ಒಂದು ಮಾತನ್ನು ತಳ್ಳಿಹಾಕುವುದಕ್ಕಂತೂ ಸಾಧ್ಯವೇ ಇಲ್ಲ. ಇಂದು ಈ ನೆಲದಲ್ಲಿ ಸರ್ವಪಂಥ ಸಮಭಾವ ಎನ್ನುವ ಸ್ವರೂಪ ಅಸ್ತಿತ್ವದಲ್ಲಿರುವುದಕ್ಕೆ ಮುಖ್ಯ ಕಾರಣ, ಹಿಂದುಗಳು ಬಹುಸಂಖ್ಯಾತರಾಗಿದ್ದಾರೆ ಎನ್ನುವುದು. ಇಂಥ ಹಿಂದುಗಳು ತಮ್ಮ ಧರ್ಮದ ಬಗ್ಗೆ ಅಭಿಮಾನ ತೋರಿಸಿದರೆ ಅಪಮಾನಕ್ಕೊಳಗಾಗುತ್ತಾರೆ! ಇದಕ್ಕಿಂತ ದೊಡ್ಡ ವಿಡಂಬನೆ ಇನ್ನೊಂದಿದೆಯೇ?
- ತರುಣ್ ವಿಜಯ್
anisikeprabha@gmail.com