ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಗ್ರಾಮೀಣ ಪ್ರದೇಶಕ್ಕೆ ತಳ್ಳೋ ಮಾಡೆಲ್ ಬಸ್‌ಗಳೇತಕ್ಕೆ?

Vishwanath S
Updated On : 25 Jul 2013, 12:07 pm

ತರವಲ್ಲ ಇದು. ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೀತಿ ಖಂಡನೀಯವೇ. ತಳ್ಳಿಯೇ ಸ್ಟಾರ್ಟ್ ಮಾಡಬೇಕಾದ ಕೆಟ್ಟು ಕೆರ ಹಿಡಿದು ಹೋಗಿರುವ ಡಕೋಟ ಬಸ್‌ಗಳು ಗ್ರಾಮೀಣ ಪ್ರದೇಶಕ್ಕೆ ಮೀಸಲು. ನಗರ ಪ್ರದೇಶಕ್ಕೆ ಮಾತ್ರ ಸುಸಜ್ಜಿತ ಬಸ್‌ಗಳು. ಗ್ರಾಮೀಣರೂ ಸರ್ಕಾರ ನಿಗದಿ ಪಡಿಸಿದ ದರವನ್ನು ತೆತ್ತೇ ಪ್ರಯಾಣಿಸುತ್ತಾರಲ್ಲವೇ?  ಹಾಗಿದ್ದ ಮೇಲೆ ಮಳೆ ಬಂದರೆ ಮೇಲ್ಚಾವಣಿ ಸೋರುವ, ನಾಯಿ ನಾಲಗೆಯಂತೆ ತೆಳುವಾಗಿ ಸವೆದು ಹೋದ ಟಯರ್‌ಗಳ ಮತ್ತು ಸ್ಟೇರಿಂಗ್ ರಾಡ್ ಸರಿ ಇಲ್ಲದ ಕಳಪೆ ಬಸ್‌ಗಳನ್ನು ಗ್ರಾಮೀಣ ಪ್ರದೇಶದಲ್ಲಿ ಓಡಿಸುತ್ತಿರುವುದು ಏಕೆ?
ಗ್ರಾಮೀಣ ಭಾಗದಲ್ಲಿ ಇರುವ ಕೆರೆ ಏರಿ ಮೇಲೆ ರಸ್ತೆ ನಿರ್ಮಿಸಿದ ಗುತ್ತಿಗೆದಾರರು ಮತ್ತು ಎಂಜಿನಿಯರ್‌ಗಳ ಬಂಡವಾಳವನ್ನು ಮಳೆಗಾಲ ಬಟಾಬಯಲು ಮಾಡುತ್ತದೆ. ಮಳೆ ಬಂತೆಂದರೆ ಕೆರೆ ಏರಿ, ರಸ್ತೆ ಕೆಸರು ಮಯವಾಗುತ್ತದೆ. ಈ ಪರಿಯ ರಸ್ತೆ ಮೇಲೆ ಸಂಚರಿಸುವ ಸಾರಿಗೆ ಸಂಸ್ಥೆ ಬಸ್‌ಗಳ ಟೈರ್‌ಗಳು ಮೊದಲೇ ಸವೆದು ಹೋಗಿರುವುದರಿಂದ ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಉರುಳುತ್ತವೆ. ಇಂತಹ ದುರಂತಗಳು ರಾಜ್ಯಾದ್ಯಂತ ನಡೆಯುತ್ತಲೇ ಇರುತ್ತವೆ. ದುರಂತ ನಡೆದಾಗ ದಿಢೀರನೇ ಸ್ಥಳಕ್ಕೆ ಭೇಟಿ ನೀಡಿ ಮೃತಪಟ್ಟವರ ಕುಟುಂಬಕ್ಕೆ ಸಾಂತ್ವನ ಹೇಳುವ ಮಂತ್ರಿಗಳು, ಶಾಸಕರು,  ಗ್ರಾಮೀಣ ರಸ್ತೆಗಳನ್ನು ಉತ್ತಮ ಗುಣಮಟ್ಟದಿಂದ ಇರುವಂತೆ ಮಾಡಿ, ಕೆರೆ ಏರಿಗಳ ಎಡ-ಬಲ ಭಾಗ ತಡೆಗೋಡೆಗಳನ್ನು ನಿರ್ಮಿಸಿ ಶಾಶ್ವತವಾಗಿ ದುರಂತಗಳು ನಡೆಯುವುದನ್ನು ತಪ್ಪಿಸುವ ಪ್ರಯತ್ನವನ್ನೇ ಮಾಡುವುದಿಲ್ಲ.
ಇದಕ್ಕೆ ಸ್ಪಷ್ಟ ಉದಾಹರಣೆ ಬೇಲೂರು ಸಮೀಪ ನಡೆದ ಬಸ್ ದುರಂತ. ರಾಜಕಾರಣಿಗಳು ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ ಉತ್ತಮ ರಸ್ತೆ ನಿರ್ಮಾಣ ಮಾಡದಿರುವುದು, ಕೆರೆ ಏರಿಗಳ ನಡುವೆ ತಡೆಗೋಡೆ ನಿರ್ಮಿಸಿದೇ ಇರುವುದು ಮತ್ತು ದಯನೀಯ ಸ್ಥಿತಿ ತಲುಪಿರುವ ಕೆಟ್ಟ ಬಸ್‌ನಿಂದಾಗಿಯೇ ಬೇಲೂರು ಪಟ್ಟಣಕ್ಕೆ ಹೊಂದಿಕೊಂಡಂತೆ ಇರುವ ಕೆರೆಗೆ  ಸಾರಿಗೆ ಸಂಸ್ಥೆ ಬಸ್ ಉರುಳಿ ಅಮಾಯಕ ವಿದ್ಯಾರ್ಥಿಗಳು ಸೇರಿದಂತೆ ಹಲವು ಮಂದಿ ಮೃತಪಟ್ಟು, 40 ಕ್ಕೂ ಹೆಚ್ಚು ಮಂದಿ ಗಾಯಗೊಂಡ ದುರಂತ ನಡೆಯಿತು.
ಬೇಲೂರು ಹೊಯ್ಸಳರು ಆಳಿದ ನಾಡು. ಇಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ಚನ್ನಕೇಶವ ದೇವಾಲಯ ಸೇರಿದಂತೆ ಹತ್ತಾರು ಪ್ರೇಕ್ಷಣೀಯ ಸ್ಥಳಗಳಿವೆ. ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದ ಸ್ಥಳ. ಆದರೂ ಅಗತ್ಯ ಮೂಲ ಸೌಲಭ್ಯಗಳನ್ನು ಒದಗಿಸುವಲ್ಲಿ ಈ ಕ್ಷೇತ್ರದ ಶಾಸಕರು ಮತ್ತು ಲೋಕಸಭಾ ಸದಸ್ಯರು ವಿಫಲರಾಗಿದ್ದಾರೆ. ಬೇಲೂರು ಕ್ಷೇತ್ರದ ಶಾಸಕ ವೈ.ಎನ್. ರುದ್ರೇಶ ಗೌಡರು ಯಾವ ಪುರುಷಾರ್ಥಕ್ಕಾಗಿ ಗೆದ್ದಿದ್ದಾರೋ? ಯಾವ ಕಾರಣಕ್ಕೆ ಜನರು ತಮ್ಮನ್ನು ಗೆಲ್ಲಿಸಿದ್ದು ಎಂಬುದೇ ಇಂದಿಗೂ ನಿಗೂಢ! ಒಮ್ಮೆ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿ, ಅಧ್ಯಕ್ಷರಾಗಿ, ಲೋಕಸಭೆ ಸದಸ್ಯರಾಗಿದ್ದಲ್ಲದೇ, 2ನೇ ಬಾರಿಗೆ ಶಾಸಕರಾಗಿ ಆಯ್ಕೆ ಆಗಿರುವ ಬೇಲೂರು ಶಾಸಕ ರುದ್ರೇಶ ಗೌಡರಿಗೆ, ಗ್ರಾಮೀಣ ಪ್ರದೇಶದಲ್ಲಿ ಕನಿಷ್ಠ ಉತ್ತಮ ರಸ್ತೆಗಳನ್ನು ನಿರ್ಮಿಸಲು ಸಾಧ್ಯವಾಗಿಲ್ಲ. ಮಳೆಗಾಲ ಬಂತೆಂದರೆ ಜನ, ವಾಹನಗಳು ಇರಲಿ. ಜಾನುವಾರುಗಳಿಗೂ ಕೂಡ ಓಡಾಡಲಿಕ್ಕೆ ಆಗದಷ್ಟು ರಸ್ತೆಗಳು ಹದಗೆಟ್ಟಿವೆ.  ನಾನಾ ಯೋಜನೆಗಳಡಿ ಬಂದ ಹಣ ರಸ್ತೆ ನಿರ್ಮಾಣಕ್ಕೆ, ಅಭಿವೃದ್ದಿಗೆ ವೆಚ್ಚವಾಗಿರುತ್ತದೆ. ಆದರೆ ಕಳಪೆ ಕಾಮಗಾರಿಯಿಂದ ಒಂದೆರಡು ತಿಂಗಳಲ್ಲಿ ರಸ್ತೆಗಳು ಗುಂಡಿ ಮಯ. ಬೇಲೂರಿನಲ್ಲಿ ಹೊಯ್ಸಳರು ನಿರ್ಮಿಸಿದ ದೊಡ್ಡ ಕೆರೆಗಳು ಇವೆ. ಇವುಗಳ ಮೇಲೆ ಸಂಚರಿಸಬೇಕಾದ ಅನಿವಾರ್ಯ ಇದೆ. ಸ್ಥಳೀಯರು ಮಾತ್ರವೇ ಅಲ್ಲ. ಬೇಲೂರನ್ನು ನೋಡಲಿಕ್ಕೆ ಬರುವ ದೇಶ- ವಿದೇಶಗಳ ಜನರ ವಾಹನಗಳು ಇಲ್ಲಿ ಸಂಚರಿಸುತ್ತವೆ. ಇದನ್ನು ಗಮನಿಸಿದ್ದರೂ ಜಾಣ ಕುರುಡು ಪ್ರದರ್ಶಿಸಲಾಗುತ್ತಿದೆ. ಕೆರೆಯ ಎರಡು ಅಂಚಿನಲ್ಲಿ ತಡೆಗೋಡೆಗಳನ್ನು ನಿರ್ಮಿಸಿಲ್ಲ. ಹೀಗೆ ಉತ್ತಮ ರಸ್ತೆಗಳು ಮತ್ತಿತರ ಸೌಲಭ್ಯಗಳು ಇಲ್ಲ. ಪ್ರವಾಸೋದ್ಯಮ ಇಲಾಖೆಯಾದರೂ ಪ್ರವಾಸಿ ತಾಣಗಳಿಗೆ ಹೋಗುವ ರಸ್ತೆಗಳ ಅಭಿವೃದ್ಧಿ ಯತ್ತ ನಿರ್ಲಕ್ಷ್ಯ ವಹಿಸಿವೆ.
ಇವೆಲ್ಲಾ ಕಾರಣಗಳಿಂದ ಬೇಲೂರು ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ಹಾಸನ ಜಿಲ್ಲೆಯ ಲೋಕಸಭಾ ಸದಸ್ಯರಾಗಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು, ರಸ್ತೆಗಳ ಅಭಿವೃದ್ಧಿಯತ್ತ ನಿರೀಕ್ಷಿತ ಮಟ್ಟದಲ್ಲಿ ಗಮನಹರಿಸದೇ ಇರುವುದು ಕೂಡ ವಿಷಾದನೀಯವೇ. ಬೇಲೂರು ವಿಷ್ಣು ಸಮುದ್ರ ಕೆರೆಗೆ ಬಿದ್ದ ಬಸ್ 8.60 ಲಕ್ಷ ಕಿಮೀ ಸಂಚರಿಸಿತ್ತು. ನಿಯಮದ ಪ್ರಕಾರ 7.50 ಲಕ್ಷ ಕಿಮೀ ಓಡಿದ ನಂತರ ಬಸ್‌ಗಳನ್ನು ಓಡಿಸಲು ಅನರ್ಹ ಎಂದು ತಿರಸ್ಕರಿಸಬೇಕು. ನಿಗದಿ ಮಾಡಿದಕ್ಕಿಂತ ಹೆಚ್ಚು ಕಿಲೋ ಮೀಟರ್ ಓಡಿದ ಹಳೆ ಬಸ್ ಸಂಚಾರ ಯೋಗ್ಯ ಎಂದು ಪರಿಗಣಿಸಿ ಓಡಿಸುವ ಅಯೋಗ್ಯ ತನಕ್ಕೆ ಪ್ರಯಾಣಿಕರು ಬಲಿಯಾಗುತ್ತಿದ್ದಾರೆ. ಆದರೂ ಬಸ್‌ಗಳನ್ನು ಜನರು ಅವಲಂಬಿಸಬೇಕಾಗಿದೆ. ಪರಿಣಾಮ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಪ್ರಯಾಣಿಕರನ್ನು ತುಂಬಿಕೊಂಡು ಸಂಚರಿಸುವುದು ಕೂಡ ದುರಂತಗಳು ನಡೆಯುವುದಿಕ್ಕೆ ಕಾರಣವಾಗಿದೆ. ಗ್ರಾಮೀಣರು ಎಲ್ಲರಂತೆ ಬಸ್ ಶುಲ್ಕ ನೀಡುತ್ತಾರೆ, ಕಂದಾಯ ಪಾವತಿಸುತ್ತಾರೆ. ಆದರೂ ಈ ತಾರತಮ್ಯವೇಕೆ?  ಇದನ್ನು ಯಾವುದೇ ಕಾರಣಕ್ಕೂ ಒಪ್ಪಲಾಗದು. ಸಾಲ ಮನ್ನಾ, ರುಪಾಯಿಗೆ ಕೆಜಿ ಅಕ್ಕಿ ನೀಡುವ ರಾಜ್ಯ ಸರ್ಕಾರ ಕೂಡಲೇ ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ಸ್ಥಿತಿಯಲ್ಲಿ ಇರುವ ಬಸ್‌ಗಳನ್ನು ಸಂಚರಿಸುವಂತೆ ಮಾಡಬೇಕಲ್ಲದೇ, ಉತ್ತಮ ರಸ್ತೆಗಳನ್ನೂ ನಿರ್ಮಿಸಬೇಕು. ಇಲ್ಲದಿದ್ದರೇ ಅಭಿವೃದ್ಧಿ ಎಂಬುದು ಭಾಷಣಕ್ಕೆ, ಬಜೆಟ್‌ಗೆ ಸೀಮಿತವಾಗುತ್ತದೆ ಅಷ್ಟೇ.

- ದಯಾಶಂಕರ ಮೈಲಿ, ಕನ್ನಡಪ್ರಭ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement