ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಕಾರ್ಗಿಲ್ ನೆನಪಿನಲ್ಲಿ ಕದನ ಕಲಿಗಳನ್ನು ನೆನೆಯುತ್ತಾ...

ಹದಿನಾರು ಸಾವಿರ ಅಡಿ ಎತ್ತರದ ಕಾರ್ಗಿಲ್ ಬೆಟ್ಟ ರಕ್ಷಣೆಗಾಗಿ ಕರುನಾಡಿನ ಹದಿನಾರು...

Vishwanath S
Updated On : 26 Jul 2013, 12:28 pm

ಹದಿನಾರು ಸಾವಿರ ಅಡಿ ಎತ್ತರದ ಕಾರ್ಗಿಲ್ ಬೆಟ್ಟ ರಕ್ಷಣೆಗಾಗಿ ಕರುನಾಡಿನ ಹದಿನಾರು ಯೋಧರು ಪ್ರಾಣ ಚೆಲ್ಲಿದ್ದರು...!
ದೇಶದ ಗಡಿ ರಕ್ಷಣೆಗಾಗಿ ದೇಶದ ಹಾಗೂ ರಾಜ್ಯದ ಯೋಧರನ್ನು ನೆನಪಿಸಿಕೊಳ್ಳುವ ದಿನ ಮತ್ತೆ ಬಂದಿದೆ. ಮೋಸದಿಂದ ಭಾರತದ ಗಡಿ ಆಕ್ರಮಿಸಿದ ಪಾಕ್ ಸೈನ್ಯವನ್ನು ಹಿಮ್ಮೆಟ್ಟಿಸಿ ವಿಜಯದ ನಗೆ ಬೀರಿದ ಭಾರತೀಯ ಸೈನಿಕರ ತ್ಯಾಗ ಸ್ಮರಣೆ ಮಾಡುವ ಕಾರ್ಗಿಲ್ ವಿಜಯ ದಿನ ಆರಂಭಗೊಂಡು ಜುಲೈ 26ಕ್ಕೆ ಹದಿನಾಲ್ಕು ವರ್ಷ ತುಂಬಲಿದೆ. 1999ರಲ್ಲಿ ಜಮ್ಮು-ಕಾಶ್ಮೀರದ ಉತ್ತರ ಗಡಿ ಭಾಗದಲ್ಲಿರುವ ಕಾರ್ಗಿಲ್ ಬೆಟ್ಟವನ್ನು ಯಾರಿಗೂ ಸುಳಿವು ಕೊಡದ ರೀತಿಯಲ್ಲಿ ಪಾಕಿಸ್ತಾನ ಸೇನಾಪಡೆ ವಶಪಡಿಸಿಕೊಂಡಿತು. ಬೆಟ್ಟದ ತುದಿಯಲ್ಲಿ ಬಂಕರ್ ನಿರ್ಮಿಸಿಕೊಂಡು ದೇಶದ ಸಾವಭೌಮತ್ವಕ್ಕೇ ಪ್ರಶ್ನೆ ಮಾಡಿತು. ಪಾಕ್ ಪಡೆಯನ್ನು ಹೊಡೆದೋಡಿಸುವುದು ಪ್ರತಿಕೂಲ ಹವಾಮಾನ ಸಂದರ್ಭದಲ್ಲಿ ಭಾರತೀಯ ಪಡೆಗಳಿಗೆ ಅಷ್ಟು ಸುಲಭವಾಗಿರಲಿಲ್ಲ. 60 ದಿನಗಳ ಕಾಲ ಕಾದಾಡಿದ ಭಾರತೀಯ ಯೋಧರು 1999ರ ಜುಲೈ 26ರಂದು ಪಾಕಿಸ್ತಾನ ಪಡೆಗಳನ್ನು ದೇಶದ ಗಡಿದಾಟಿಸಿ ಅಟ್ಟುವುದರಲ್ಲಿ ಯಶಸ್ವಿಯಾಗಿದ್ದರು.
ಆದರೆ ಈ ಯುದ್ಧದಲ್ಲಿ ನಮ್ಮ ಸೇನಾಪಡೆಯ 527 ಯೋಧರು ಮೃತಪಟ್ಟರು. ಸಾವಿರಾರು ಜನರು ಗಾಯಗೊಂಡರು. ದೇಶ ರಕ್ಷಣೆ ವಿಚಾರ ಬಂದಾಗ ಸದಾ ಒಂದು  ಹೆಜ್ಜೆ ಮುಂದೆ ಇರುವ ಕರ್ನಾಟಕದ ಹದಿನಾರು ಮಂದಿ ಯೋಧರು ಈ ಯುದ್ಧದಲ್ಲಿ ವೀರಸ್ವರ್ಗವನ್ನು ಅಪ್ಪಿದರು.
ಬೆಳಗಾವಿಯ ದೋಂಡಿಭಾಯ್ ದೇಸಾಯಿ, ಕೊಪ್ಪಳದ ಶಿವಬಸವಯ್ಯ, ಮಡಿಕೇರಿಯ ಎಸ್.ಕೆ.ಮೇದಪ್ಪ, ಕೊಪ್ಪಳದ ಸಿ.ಎಂ.ಮಲ್ಲಯ್ಯ, ಮಡಿಕೇರಿಯ ಪಿ.ಡಿ.ಕಾವೇರಪ್ಪ, ಬೆಳಗಾವಿಯ ಯಶವಂತ ಡಿ.ಕೋಳ್ಕರ್, ಬಾಗಲಕೋಟೆಯ ದಿಲೀಪ್ ಪಿ.ಪೂತರಾಜ್, ಬೆಳಗಾವಿಯ ಭರತ್ ಮಸ್ಕಿ, ಬಸಪ್ಪ ಚೌಗಲೆ,  ಬಾಗಲಕೋಟೆಯ ಶಂಕರಪ್ಪ ಕೋಟಿ, ಬೆಳಗಾವಿಯ ಬಾಹುಬಲಿ ಬರಮಪ್ಪ, ಮಂಡ್ಯದ ಬಿ.ಕೆ.ಸುಧೀರ್, ಬಾಗಲಕೋಟೆಯ ಅಶೋಕ ಭೀಮಪ್ಪ ಜಾದವ್, ಬೆಂಗಳೂರಿನ ಅಜಿತ್ ಭಂಡಾರ್ಕರ್, ಬಿಜಾಪುರದ ದಾವಲ್ಲಾ, ಮಡಿಕೇರಿಯ ಎಚ್.ವಿ.ವೆಂಕಟ ಸೇರಿದಂತೆ ಹದಿನಾರು ಮಂದಿ ಯೋಧರು 16 ಸಾವಿರ ಅಡಿ ಎತ್ತರದ ಶಿಖರವನ್ನು ಕಾಪಾಡಿಕೊಳ್ಳುವುದಕ್ಕಾಗಿ ಪ್ರಾಣ ತ್ಯಾಗ ಮಾಡಿದರು. ಉತ್ತರಕನ್ನಡ ಜಿಲ್ಲೆ ರಮಾಕಾಂತ್ ಸಾವಂತ್, ಧಾರವಾಡದ ಬಸಪ್ಪ ತಳವಾರ್, ಬೈಲಹೊಂಗಲದ ಮಲ್ಲಪ್ಪ ಮುನವಳ್ಳಿ ಸೇರಿದಂತೆ ಹಲವರು ಗಾಯಗೊಂಡಿದ್ದರು.
ಇವರೆಲ್ಲರ ತ್ಯಾಗ ಬಲಿದಾನಗಳನ್ನು ಮತ್ತೆ ನೆನಪಿಸುವ ದಿನವೇ ಕಾರ್ಗಿಲ್ ವಿಜಯ ದಿವಸ್. ಜುಲೈ 26ರಂದು ಕಾರ್ಗಿಲ್‌ನ ದ್ರಾಸ್‌ನಲ್ಲಿ ಹಾಗೂ ನವದೆಹಲಿಯಲ್ಲಿ ರಾಷ್ಟ್ರೀಯ ಕಾರ್ಯಕ್ರಮವಾಗಿ ವಿಜಯ ದಿವಸವನ್ನು ಆಚರಿಸಲಾಗುತ್ತದೆ. ಇಂಡಿಯಾ ಗೇಟ್ ಬಳಿ ರಾಷ್ಟ್ರದ ಪ್ರಧಾನಿ ಅಮರ್ ಜವಾನ್ ಜ್ಯೋತಿಗೆ ಗೌರವ ವಂದನೆ ಸಲ್ಲಿಸುತ್ತಾರೆ. ಇಷ್ಟು ಮಾತ್ರವಲ್ಲ ದೇಶದ ಎಲ್ಲ ಭಾಗಗಳಲ್ಲೂ ವಿಜಯ್ ದಿವಸ್ ಆಚರಿಸಲ್ಪಡುತ್ತದೆ. ಇದಕ್ಕೆ ಬೆಂಗಳೂರು ಹೊರತಲ್ಲ. ನಗರದ ಸೈನಿಕ ಸ್ಮಾರಕದಲ್ಲಿ ಅಂದು ಯೋಧರ ತ್ಯಾಗವನ್ನು ಸ್ಮರಿಸುವ ಜತೆಗೆ ರಾಷ್ಟ್ರಭಕ್ತಿಯನ್ನು ಕೆರಳಿಸುವ ಅನೇಕ ಕಾರ್ಯಕ್ರಮಗಳು ನಡೆಯಲಿವೆ.
ನಿಲ್ಲದ ಬವಣೆ: ದೇಶಕ್ಕಾಗಿ ಸೈನಿಕರು ಇಷ್ಟೆಲ್ಲ ತ್ಯಾಗ ಮಾಡಿದರೂ, ನಿವೃತ್ತ ಸೈನಿಕರ ಬವಣೆ ಮಾತ್ರ ತಪ್ಪುತ್ತಿಲ್ಲ. ವೀರಮರಣ ಹೊಂದಿದ ಎಷ್ಟೋ ಸೈನಿಕರ ಕುಟುಂಬಕ್ಕೆ ಸೂರಿಲ್ಲದ ಸ್ಥಿತಿ ಇದೆ. ಈ ಬಗ್ಗೆ ಕರ್ನಾಟಕದಲ್ಲೂ ಹೋರಾಟ ಆರಂಭಗೊಂಡಿದ್ದು, ಸೈನಿಕ ಕಲ್ಯಾಣ ಸಂಸ್ಥೆ, ಜಿಲ್ಲಾ ಸೈನಿಕ್ ಬೋರ್ಡ್ ಮೊದಲಾದ ಸಂಸ್ಥೆಗಳು ತಲೆ ಎತ್ತಿವೆ. ನಿವೃತ್ತ ಸೈನಿಕರ ಬದುಕು ಹಸನುಗೊಳಿಸುವುದಕ್ಕೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ನಿವೃತ್ತ ಬ್ರಿಗೇಡಿಯರ್ ಐ.ಎನ್.ರೈ ಅವರಂಥವರು ಹೋರಾಟ ನಡೆಸುತ್ತಿದ್ದಾರೆ. ಯುದ್ಧದಲ್ಲಿ ಮಡಿದ ಯೋಧನಿಗಾಗಿ ಕಣ್ಣೀರು ಹಾಕುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ. ಬದುಕಿನ ಅತಿ ಸಣ್ಣ ಪ್ರಾಯದಲ್ಲೇ ಸೇನೆ ಸೇರಿ ಗಡಿ ಕಾಯುವುದಕ್ಕೆ ಹೋಗುವ ಸೈನಿಕರ ಕುಟುಂಬದ ಸಮಸ್ಯೆಗೆ ಸರ್ಕಾರ ಸ್ಪಂದಿಸಬೇಕೆಂದು ಹೇಳುವ ರೈ ಅಂಥವರ ಹೋರಾಟಕ್ಕೆ ನಾಗರಿಕರು ಕೈ ಜೋಡಿಸಬೇಕಿದೆ.
ಸಮಸ್ಯೆ ತೀರಿದ ಮೇಲೆ ದೇವರನ್ನೂ, ಯುದ್ಧ ಮುಗಿದ ಮೇಲೆ ಸೈನಿಕರನ್ನು ನಿರ್ಲಕ್ಷಿಸುವ ದೇಶ ನಮ್ಮದು. ಹೀಗಾಗಿ ಸೇನೆ ಸೇರುವುದಕ್ಕೆ ಯುವಕರು ಮುಂದೆ ಬರುತ್ತಿಲ್ಲ ಎಂದು ವಿಷಾದಿಸುತ್ತಾರೆ ನಿವೃತ್ತ ಏರ್ ಕಮಾಂಡರ್ ಚಂದ್ರಶೇಖರ್.
ಸೇನಾಪಡೆ ಸೇರುವುದಕ್ಕೆ ಯುವಕರು ಹಿಂದೇಟು ಹಾಕುತ್ತಿರುವ ವಿಚಾರ ಸಂಬಂಧ ಕನ್ನಡಪ್ರಭದ ಜತೆ ಮಾತನಾಡುತ್ತ ಅವರು ಬೇಸರ ಹೊರಹಾಕಿದರು.
ದೇಶಕ್ಕಾಗಿ ಪ್ರಾಣ ಒತ್ತೆ ಇಡುವ ಸೈನಿಕರನ್ನು ಯುದ್ಧ ಮುಗಿದ ತಕ್ಷಣ ನಾವು ಮರೆತು ಬಿಡುತ್ತೇವೆ. ಸಮಸ್ಯೆ ಪರಿಹಾರವಾದ ತಕ್ಷಣ ದೇವರನ್ನೇ ಮರೆಯುವ ನಾವು ಇನ್ನು ಬಡಪಾಯಿ ಸೈನಿಕರನ್ನು ನೆನಪಿನಲ್ಲಿಟ್ಟುಕೊಳ್ಳಲು ಸಾಧ್ಯವೇ ? ಆತನ ವಿಧವಾ ಪತ್ನಿ, ತಂದೆ-ತಾಯಿ ಕುರಿತು ನಮಗೆ ಕಾಳಜಿ ಇಲ್ಲ. ಇದೆಲ್ಲವನ್ನು ಕಂಡು, ಅನುಭವಿಸಿದ ಯಾವನೇ ವ್ಯಕ್ತಿ, ತನ್ನ ಮಗ ಸೇನಾಧಿಕಾರಿಯಾಗುವುದನ್ನು ಇಷ್ಟಪಡದ, ಸೈನಿಕನಿಗೆ ತನ್ನ ಮಗಳನ್ನು ಕೊಡಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಅದೇ ರೀತಿ ನಮ್ಮ ಯುವಕರ ಆದ್ಯತೆಯೂ ಬದಲಾಗಿದೆ. ಹೊರ ಜಗತ್ತಿನಲ್ಲಿ ಕೆಲಸ ಮಾಡುವ ಶೇ.75ರಷ್ಟು ಮಂದಿ ಸೇನೆಗೆ ಸೇರಿದವರಿಗಿಂತ ಹೆಚ್ಚು ಗಳಿಸುತ್ತಾರೆ. 30 ವರ್ಷ ಸರ್ಕಾರಿ ಕೆಲಸ ಮಾಡಿ ಜಂಟಿ ನಿರ್ದೇಶಕನಾಗಿ ನಿವೃತ್ತನಾಗುವ ಐಎಎಸ್ ಅಧಿಕಾರಿ, 40 ವರ್ಷ ಸೇವೆಯಲ್ಲಿ ದುಡಿದು ಕರ್ನಲ್ ಆಗಿ ನಿವೃತ್ತನಾಗುವ ಸೈನಿಕನಿಗಿಂತ ಹೆಚ್ಚು ಪಿಂಚಣಿ ಸೌಲಭ್ಯ ಪಡೆಯುತ್ತಾನೆ. ಹೀಗಾದರೆ ಸೇನೆಗೆ ಸೇರಲು ಯಾರಾದರೂ ಮುಂದೆ ಬರಲು ಸಾಧ್ಯವೇ? ಎಂಬುದು ಅವರ ಪ್ರಶ್ನೆ. ಬೆಂಗಳೂರಿನಲ್ಲಿ ಸೈನಿಕ ಸ್ಮಾರಕ ನಿರ್ಮಿಸುತ್ತಿದ್ದಾರೆ. ಆದರೆ ಇನ್ನೂ ಪೂರ್ಣಗೊಂಡಿಲ್ಲ. 12 ತಿಂಗಳಲ್ಲಿ ಮುಕ್ತಾಯಗೊಳ್ಳಬೇಕಿದ್ದ ಕೆಲಸ ಐದು ವರ್ಷ ಕಳೆದರೂ ಪೂರ್ಣಗೊಳ್ಳುವ ಯಾವ ಲಕ್ಷಣವೂ ಕಾಣುತ್ತಿಲ್ಲ. ಏಕೆಂದರೆ ಮಡಿದ ಸೈನಿಕರಿಗೆ ಮಿಡಿಯುವುದು ಸರ್ಕಾರದ ಆದ್ಯತೆಯಾಗಿ ಉಳಿದಿಲ್ಲ. ಪರಿಸ್ಥಿತಿ ಹೀಗಿರುವಾಗ ಯುವ ಜನತೆ ಹೇಗೆ ಸೇನೆ ಸೇರಲು ಆಸಕ್ತಿ ತೋರಿಸಲು ಸಾಧ್ಯ? ಎಂಬ ಚಂದ್ರಶೇಖರ್ ಅವರ ಮಾತುಗಳು ನಮ್ಮನ್ನು ಕಳವಳಕ್ಕೆ ದೂಡುತ್ತವೆ.

ದೇಶಭಕ್ತಿಗೆ ಬರವಿಲ್ಲ, ಸೇನೆ ಸೇರುವ ಎದೆಗಾರಿಕೆಗೆ ಬರ
ಭಾರತೀಯರಲ್ಲಿ ದೇಶಭಕ್ತಿಗೆ ಬರವಿಲ್ಲ. ಆದರೆ ದೇಶ ಕಾಯುವ ಸೇನೆಗೆ ಸೇರಲು ಮಾತ್ರ ಬರ. ಹೌದು. ವಿಶ್ವದ ನಾಲ್ಕನೇ ದೊಡ್ಡ ಸೇನಾಪಡೆ ಎಂಬ ಕೀರ್ತಿಗೆ ಪಾತ್ರವಾಗಿರುವ ಭಾರತೀಯ ಸೇನೆಯಲ್ಲಿ ಈಗ ಸಾವಿರಾರು ಅಧಿಕಾರಿಗಳ ಕೊರತೆ ಕಾಡುತ್ತಿದೆ. ಹಲವು ವರ್ಷಗಳಿಂದ ಈ ಸಮಸ್ಯೆ ಹೆಚ್ಚುತ್ತಲೇ ಇದ್ದು, ಹೊರ ಜಗತ್ತಿಗೆ ಇದನ್ನು ತೋರಿಸದೇ ಇರುವುದಕ್ಕೆ ಸೇನಾ ಪಡೆಯ ಮೂರು ವಿಭಾಗಗಳು ಹರ ಸಾಹಸ ಮಾಡುತ್ತಿವೆ. ಕ್ಯಾಪ್ಟನ್ ಹುದ್ದೆಯಿಂದ ಮೇಜರ್ ದರ್ಜೆ ಅಧಿಕಾರಿಗಳ ಕೊರತೆ ಒಂದೆಡೆಯಾದರೆ, ಇನ್ನೊಂದೆಡೆ ಸೇನೆಗೆ ಸೇರಲು ಯುವ ಜನತೆ ತೀವ್ರ ಹಿಂದೇಟು ಹಾಕುತ್ತಿದೆ. ಕರ್ನಾಟಕ ಸೇರಿದಂತೆ ದೇಶದ ಬಹುತೇಕ ರಾಜ್ಯಗಳಲ್ಲಿ ಯುವಕರು ಸೇನೆ ಸೇರುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಭೂ ಸೇನಾ ಪಡೆ, ವಾಯು ಪಡೆ ಹಾಗೂ ನೌಕಾ ಪಡೆಯಲ್ಲಿ ಸಾವಿರಾರು ಹುದ್ದೆಗಳು ಖಾಲಿ ಬಿದ್ದಿವೆ. ಈ ಸಮಸ್ಯೆಗೆ ಪರಿಹಾರ ಸೃಷ್ಟಿಸಲು ರಕ್ಷಣಾ ಇಲಾಖೆ ಸಾಕಷ್ಟು ಕ್ರಮ ಕೈಗೊಂಡಿದೆ. ಸೇನಾ ಅಭಿಯಾನ, ಜಾಗೃತಿ ಕಾರ್ಯಕ್ರಗಳನ್ನು ನಡೆಸುತ್ತಿದೆ. 'ಬಿ ಆನ್ ಆರ್ಮಿ ಮ್ಯಾನ್ : ಬಿ ಎ ವಿನರ್ ಫಾರ್ ಲೈಫ್ ' ಎಂಬ ಆಕರ್ಷಕ ಜಾಹೀರಾತುಗಳ ಮೂಲಕ ಯುವಕರನ್ನು ಸೆಳೆಯಲು ಪ್ರಯತ್ನ ನಡೆಸುತ್ತಿದೆ.

ದವಲಸಾಬ ಪರಾಕ್ರಮ
ಕಾರ್ಗಿಲ್ ಯುದ್ಧದಲ್ಲಿ ವೈರಿ ಪಡೆಯೊಂದಿಗೆ ಹೋರಾಡಿ ಯುದ್ಧ ಮಾಡುತ್ತಲೇ ಹುತಾತ್ಮನಾದ ಬಿಜಾಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬಳವಾಡ ಗ್ರಾಮದ ಯುವಕ ದಾವಲಸಾಬ ನಬಿಸಾಬ ಕಂಬಾರ(27) ಎಲ್ಲರಲ್ಲೂ ದೇಶ ಭಕ್ತಿ ಉಕ್ಕಿಸುತ್ತಾರೆ.
ದ್ವಿತೀಯ ಪಿಯುಸಿ ಪಾಸಾಗಿದ್ದ ಕಂಬಾರ ಗಡಿ ರಕ್ಷಣಾ ಪಡೆ(ಬಿಎಸ್‌ಎಫ್) ಸೇರಿದ್ದರು. ಸುಮಾರು 7 ವರ್ಷಗಳವರೆಗೆ ಅವರು ಕಾರ್ಗಿಲ್ ಗಡಿ ಪ್ರದೇಶದಲ್ಲಿ ಸೇವೆ ಸಲ್ಲಿಸಿದ್ದರು. ಫೈರಿಂಗ್‌ನಲ್ಲಿ ಚಾಣಾಕ್ಷನಾಗಿದ್ದ ದಾವಲಸಾಬನಿಗೆ ವೈರಿ ಪಡೆಗಳನ್ನು ಹೊಡೆದುರುಳಿಸುವ ಜವಾಬ್ದಾರಿಯನ್ನು ನೀಡಲಾಗಿತ್ತು.  141 ಬಿಎಸ್‌ಎಫ್ ಬಟಾಲಿಯನ್‌ನಲ್ಲಿ ಕಾನ್ಸ್‌ಟೇಬಲ್ ಆಗಿದ್ದ ಇವರಿಗೆ ಯುದ್ಧದ ಸಂದರ್ಭದಲ್ಲಿಯೇ ವೈರಿ ಪಡೆಗಳು ಹಾರಿಸಿದ್ದ ಗುಂಡು ಕಾಲಿಗೆ ತಗುಲಿತ್ತು. ಆದರೂ ಧೃತಿಗೆಡದೆ ಕಾಲಿಗೆ ಕರವಸ್ತ್ರ ಕಟ್ಟಿಕೊಂಡು ಮತ್ತೆ ವೈರಿ ಪಡೆಗಳತ್ತ ಗುಂಡಿನ ಸುರಿಮಳೆಗರೆದು ಮೂವರು ವೈರಿಗಳನ್ನು ಬಲಿತೆಗೆದುಕೊಂಡಿದ್ದರು. ನಂತರ ವೈರಿ ಪಡೆಯಿಂದ ಬಂದ ಗುಂಡು ದಾವಲಸಾಬನ ಕಣ್ಣು ಗುಡ್ಡೆಯ ಮೇಲ್ಭಾಗದ ಹಣೆ ಹಾಗೂ ಎದೆಗೆ ತಗುಲಿ 13-6-1999ರಲ್ಲಿ ವೀರ ಮರಣವನ್ನಪ್ಪಿದರು. ವಿವಿಧ ಮೂಲಗಳಿಂದ 25,11,000 ಸಹಾಯ ಧನ ದಾವಲಸಾಬನ ಕುಟುಂಬಕ್ಕೆ ಹರಿದು ಬಂದಿದೆ. ದಾವಲಸಾಬನ ಮೂವರು ತಮ್ಮಂದಿರು ಮದುವೆಯಾಗಿ, ತಾಯಿಯೊಂದಿಗೆ ವಾಸವಾಗಿದ್ದಾರೆ. ಮುದ್ದೇಬಿಹಾಳದಲ್ಲಿ ತಂಗಡಗಿ ರಸ್ತೆ ಬದಿ ಬೃಹತ್ ಮನೆಯೊಂದನ್ನು ನಿರ್ಮಿಸಿಕೊಳ್ಳಲಾಗಿದೆ. ಮನೆಗೆ ವೀರಯೋಧ ದಾವಲಸಾಬ ಕಾರ್ಗಿಲ್ ಮಂಜಿಲ್ ಎಂದು ಹೆಸರಿಡಲಾಗಿದೆ. ಬಿಜಾಪುರದ ಬಿಎಲ್‌ಡಿಇ ವತಿಯಿಂದ ಸಂಸ್ಥೆಯವರು 50 ಸಾವಿರ ದೇಣಿಗೆ ನೀಡಲು ಮುದ್ದೇಬಿಹಾಳಕ್ಕೆ ತೆರಳಿದ ಸಂದರ್ಭದಲ್ಲಿ ದಾವಲಸಾಬನ ಕುಟುಂಬ ಒಬ್ಬರಿಗೆ ನೌಕರಿ ನೀಡುವಂತೆ ಕೇಳಿಕೊಂಡಿತ್ತು. ಅದ್ದರಿಂದ ದಾವಲಸಾಬನ ಕಿರಿಯ ತಮ್ಮ ಶಹಜಾನನಿಗೆ ಬಿಜಾಪುರದಲ್ಲಿ ಬಿಎಲ್‌ಡಿಇ ಎಂಜಿನಿಯರಿಂಗ್ ಕಾಲೇಜಿನಲ್ಲಿ ಗುಮಾಸ್ತ ಕೆಲಸವನ್ನೂ ನೀಡಿದೆ.
ದಾವಲಸಾಬನ ತಮ್ಮಂದಿರಾದ ಲಾಡಸಾಬ ಹಾಗೂ ನಬಿಸಾಬ ಮುದ್ದೇಬಿಹಾಳದಲ್ಲಿ ಕಾರ್ಗಿಲ್ ಅಟೋಮೊಬೈಲ್ ಗ್ಯಾರೇಜ್ ನಡೆಸುತ್ತಿದ್ದಾರೆ. ಈಚೆಗೆ ಜಮೀನನ್ನೂ ಖರೀದಿಸಿದ್ದಾರೆ. ಸಾರ್ವಜನಿಕರು ಮುದ್ದೇಬಿಹಾಳ ಹಳೆ ತಹಸೀಲ್ದಾರ್ ಕಚೇರಿ ಎದುರು ಸೈನಿಕ ಮೈದಾನ ಸ್ಮಾರಕ ನಿರ್ಮಿಸಿದ್ದಾರೆ. ಮೈದಾನದಲ್ಲಿ ವೀರಯೋಧ ದಾವಲಸಾಬನ ಹೆಸರು ಮೊದಲು ಕೆತ್ತಲಾಗಿದೆ. ಕಾರ್ಗಿಲ್ ಯುದ್ಧದಲ್ಲಿ ವೀರ ಮರಣ ಹೊಂದಿದ ವಿವಿಧೆಡೆಯ ಯೋಧರ ಹೆಸರುಗಳನ್ನೂ ಕಲ್ಲಿನಲ್ಲಿ ಕೆತ್ತಲಾಗಿದೆ.
ತನ್ನ ಪುತ್ರನ ಹೆಸರಿನಲ್ಲಿ ಒಂದು ಸ್ಮಾರಕ ಮಾಡಿಲ್ಲ. ಜಮೀನು, ನಿವೇಶನ ನೀಡುವುದಾಗಿ ಸರ್ಕಾರ ಆಶ್ವಾಸನೆ ನೀಡಿತ್ತು. ಆದರೆ ಈ ಭರವಸೆ ಇನ್ನೂ ಈಡೇರಿಲ್ಲ ಎಂದು ದಾವಲಸಾಬನ ತಾಯಿ ಚಾಂದಬಿ ಅವರು ನುಡಿಯುತ್ತಾರೆ. ಸುಖದಿಂದ ಇದ್ದೇವೆ. ಆದರೆ ಹಿರಿಯ ಪುತ್ರ ದಾವಲಸಾಬನ ನೆನಪು ಆಗಾಗ ಕಾಡುತ್ತಿದೆ ಎನ್ನುವುದು ಅವರ ನೋವು.

ಹೆಮ್ಮೆಯಿದೆ
ನಾವು ಟೈಗರ್ ಹಿಲ್ ದ್ರಾಸ್ ಸೆಕ್ಟರ್‌ನಲ್ಲಿದ್ದೆವು. ಮೊದಲು ಇಲ್ಲಿಯೇ ಯುದ್ಧ ಪ್ರಾರಂಭವಾದರೂ ನಂತರ ಅದು ಕಾರ್ಗಿಲ್‌ನಲ್ಲಿ ಅತಿಕ್ರಮಣದ ವಿರುದ್ಧ ಹೋರಾಟ ಪ್ರಾರಂಭವಾಗಿದ್ದರಿಂದ 'ಕಾರ್ಗಿಲ್ ಆಪರೇಷನ್‌' ಎಂದು ಕರೆಯಲಾಯಿತು. ನಾವು ಅಲ್ಲಿ ಪ್ರಾಣದ ಬಗ್ಗೆ ಯೋಚನೆಯನ್ನೇ ಮಾಡಲಿಲ್ಲ. ನಮ್ಮ ಮುಂದೆ ಇದ್ದ ಗುರಿ ವೈರಿಯನ್ನು ಸೆದೆಬಡಿಯುವುದೊಂದೆ. ಹೀಗಾಗಿ, ನಾವು ಸಾಯಲು ಸಿದ್ಧವಾಗಿಯೇ ಹೋರಾಟಕ್ಕೆ ಇಳಿದೆವು. ನಂತರ ಗೆದ್ದು ದೇಶದ ಗೌರವ ಕಾಪಾಡಿದ ಹೆಮ್ಮೆ ನಮ್ಮದಾಯಿತು. ಇದು ಕಾರ್ಗಿಲ್ ಆಪರೇಷನ್ ಯುದ್ಧದಲ್ಲಿ ಹೋರಾಡಿ, ನಿವೃತ್ತಿಯ ಬದುಕು ಸಾಗಿಸುತ್ತಾ ಈಗ ಡಿಆರ್‌ನಲ್ಲಿ ಪೊಲೀಸ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಕೊಪ್ಪಳ ತಾಲೂಕಿನ ಮುದ್ಲಾಪುರದ ಮಹಾಲಿಂಗಯ್ಯ ಹಿರೇಮಠ ಅವರ ಮನದಾಳದ ಮಾತು. ಇದರಿಂದ ನಮಗೆ ಗೌರವವೇ ಹೆಚ್ಚಾಯಿತು ಎನ್ನುತ್ತಾರೆ. ಗೆದ್ದ ಸಂತಸ ನಮ್ಮನ್ನು ಇನ್ನೂ ಹುರಿದುಂಬಿಸಿತು. ಅದೊಂದು ಅದ್ಭುತ ಅನುಭವ ಮತ್ತು ಶ್ರೆಯಸ್ಸು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಹಿರೇಮಠ.
***

ಸಂದೇಶವಾಹಕ...
ಯುದ್ಧಭೂಮಿಯಿಂದ ಸಂಸತ್‌ವರೆಗೆ ಕಾಲಕಾಲಕ್ಕೆ ಮಾಹಿತಿ ರವಾನಿಸುವ ಜವಾಬ್ದಾರಿ ಭಾರತೀಯ ಸೇನೆಯ ಸಂವಹನ ವಿಭಾಗದ್ದು. ಸೇನೆ ಭಾಷೆಯಲ್ಲಿ ಇದಕ್ಕೆ ಹೆಸರು ಕೋರ್ ಆಫ್ ಸಿಗ್ನಲ್ ಎಂದು ಕರೆಯಲಾಗುತ್ತದೆ. ಕಾರ್ಗಿಲ್ ರಣರಂಗದಲ್ಲಿ ಕ್ಷಣಕ್ಷಣಕ್ಕೂ ನಡೆಯುವ ವಿದ್ಯಮಾನ ಹೊರಜಗತ್ತಿಗೆ ತಿಳಿಸುವುದು ಈ ವಿಭಾಗದ ಹೊಣೆ. ಇವರು ಯುದ್ಧರಂಗದಲ್ಲೂ ಇರಬೇಕಾಗುತ್ತದೆ. ಹೋರಾಟದಲ್ಲಿ ನೇರವಾಗಿ ಭಾಗವಹಿಸದಿದ್ದರೂ ಶತ್ರು ದಾಳಿಯನ್ನು ಎದುರಿಸಿ ಸೈನಿಕರಿಗೆ ಅವಶ್ಯವಾದ ಎಲ್ಲ ವಿಧದ ಮಾಹಿತಿ, ಸಂದೇಶ ರವಾನಿಸುವ ಮಹತ್ತರ ಹೊಣೆ ಇವರ ಮೇಲಿರುತ್ತದೆ. ಈ ವಿಭಾಗದಲ್ಲಿ ಕಾರ್ಯನಿರ್ವಹಿಸಿ ಕಾರ್ಗಿಲ್ ವಿಜಯ ದುಂಧುಭಿಯನ್ನು ಬಿತ್ತರಿಸಿದವರಲ್ಲಿ ಕನ್ನಡಿಗ ಕರ್ನಲ್ ಎನ್. ಬಾಲಕೃಷ್ಣ ಕೂಡ ಒಬ್ಬರು. ಕಾರ್ಗಿಲ್ ಯುದ್ಧರಂಗದಲ್ಲಿ 27 ದಿನಗಳಕಾಲ ಸೇನಾ ಮಾಹಿತಿದಾರನಾಗಿ ಕರ್ನಲ್ ಬಾಲಕೃಷ್ಣರ ತಂಡ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಿತ್ತು. ಲಡಾಖ್ ಸ್ಕೌಟ್ ಹೆಸರಿನ ಇವರ ತಂಡ, ಏಪ್ರಿಲ್‌ನಲ್ಲಿ ಕಾರ್ಗಿಲ್‌ಗೆ ಸೇನಾ ವರಿಷ್ಠರ ಸೂಚನೆಯಂತೆ ಧಾವಿಸಿತು. ಲಡಾಕ್ ಸ್ಕೌಟ್‌ಗೆ ಸೇರಿಸುತ್ತಿದ್ದುದು ಹಿಮಪರ್ವತದ ಜನಾಂಗವನ್ನು. ಅವರಿಗೆ ಅಲ್ಲಿನ ಪರ್ವತಗಳ ಬಗ್ಗೆ ಚೆನ್ನಾಗಿ ಅರಿವಿರುತ್ತದೆ. ಎತ್ತರ ಪರ್ವತಗಳಲ್ಲಿ ಕಡಿಮೆ ವಾಯುವಿನಲ್ಲೂ ಜೀವಿಸಿದ ಅನುಭವ ಇರುತ್ತದೆ. ಈ ತಂಡಕ್ಕೆ ಮೇಜರ್ ಸೋನಂ ವಾಂಗ್ಚುಕ್ ನೇತೃತ್ವ. ಕಾರ್ಗಿಲ್‌ನ ಇಂಡಸ್ ಮತ್ತು ಶೋಕ್ ನದಿ ಮಧ್ಯೆಯ ಚೋರ್ ಬಟ್ಲಾದಲ್ಲಿ ಪಾಕ್ ಸೈನಿಕರು ಜಮಾವಣೆಯಾಗಿದ್ದರು. ಅವರನ್ನು ಹಿಮ್ಮೆಟ್ಟಿಸಲಾಯಿತು. ಆಗ ಘರ್ಷಣೆಯಲ್ಲಿ ನಮ್ಮ ಹವಾಲ್ದಾರ್‌ರೊಬ್ಬರು ವೀರಮರಣವನ್ನಪ್ಪಿದರು.
***

ಫಿರಂಗಿ ಸೇನಾನಿ
ಕಾರ್ಗಿಲ್ ಯುದ್ಧಭೂಮಿಯಲ್ಲಿ ಫಿರಂಗಿ ಸಿಡಿಸುವ ಕೆಚ್ಚೆದೆಯ ಸಾಹಸ. ಮೇಲಧಿಕಾರಿಗಳ ಸೂಚನೆಯಂತೆ ಗುರಿ ತಪ್ಪದ ಫಿರಂಗಿ ಪ್ರಯೋಗ, ವೈರಿಗಳ ಹೊಡೆಯುವಲ್ಲಿ ಯಶಸ್ಸು ಸಾಧಿಸಿದ ಕೆ. ಸುಬ್ರಹ್ಮಣ್ಯ ಹೆಬ್ಬಾರ್ 93 ಎಫ್‌ಡಿ ರೆಜಿಮೆಂಟ್‌ನ ಸೇನಾನಿ. ಅಂದರೆ ಇವರದು ತೋಫಕಾನ್ ಕೇಂದ್ರ. ಹೆಬ್ಬಾರ್ ಜೊತೆ ಯುದ್ಧಭೂಮಿಯಲ್ಲಿ ನಾಲ್ವರು ಕರ್ನಾಟಕದವರಿದ್ದರು. ಇದೆಲ್ಲ ಗೊತ್ತಾದುದು ಯುದ್ಧ ಮುಗಿದ ನಂತರ. ಯುದ್ಧ ಕಾಲದಲ್ಲಿ ಏನಿದ್ದರೂ ಶತ್ರುವನ್ನು ಸದೆಬಡಿಯುವುದಷ್ಟೇ ಗಮನ! ಫಿರಂಗಿ ಮುನ್ನಡೆಸುತ್ತಾ ಇವರಿದ್ದ 7 ಮಂದಿಯ ಉಡಿ ಘಟಕ ಗನ್ ಚಾಲನೆಯ ಜವಾಬ್ದಾರಿಯನ್ನು ನಿರ್ವಹಿಸುತ್ತಿತ್ತು. ಮೇಲಧಿಕಾರಿ ರವಾನಿಸುವ ಕರಾರುವಾಕ್ ಗುರಿಗೆ ಮದ್ದು ಗುಂಡು ಉಡಾಯಿಸುವುದಷ್ಟೇ ಇವರ ಕೆಲಸ. ಅದು ಗುರಿ ತಲುಪಿರುವುದನ್ನು ಮೇಲಧಿಕಾರಿಗಳೇ ಖಚಿತಪಡಿಸುತ್ತಿದ್ದರು. ಸೈನ್ಯಕ್ಕೆ ಪರ್ವತದ ಮೇಲೇರಲು ಉಡಿ ಘಟಕ ಅವಕಾಶ ಕಲ್ಪಿಸುತ್ತಿತ್ತು. ಕಾರ್ಗಿಲ್ ಕದನ ಮುಗಿಸಿ ಉಡಿ ಘಟಕ ಸೈನಿಕರು ಇತರರೊಂದಿಗೆ ಶ್ರೀನಗರಕ್ಕೆ ಸೇನಾ ಟ್ರಕ್‌ನಲ್ಲಿ ವಾಪಸಾಗುತ್ತಿದ್ದರು. ಕಾರ್ಗಿಲ್‌ನ ಕಡಿದಾದ ಹಾದಿಯಲ್ಲಿ ಮಳೆಯಲ್ಲಿ ಸಾಗುತ್ತಿರಬೇಕಾದರೆ ಟ್ರಕ್ ಪ್ರಪಾತಕ್ಕೆ ಜಾರಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದನ್ನೂ ನೆನಪಿಸಿಕೊಳ್ಳುತ್ತಾರೆ.

- ರಾಘವೇಂದ್ರ ಭಟ್
------------------------------------------------

ಕುಟುಂಬದ ಸದಸ್ಯರಿಗಿಲ್ಲ ಸರ್ಕಾರಿ ನೌಕರಿ
ಇದ್ದಕ್ಕಿದ್ದಂತೆ ಸಿಡಿಲು ಎರಗಿ ಬಂದಂತೆ ಕಾರ್ಗಿಲ್ ಯುದ್ಧ ಆರಂಭವಾದಾಗ ಧೃತಿಗೆಡದೆ ದೇಶದ ರಕ್ಷಣೆಗಾಗಿ ಕಾದಾಡಿ ಹುತಾತ್ಮರಾದ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ದರೂರು ಗ್ರಾಮದ ವೀರ ಯೋಧ ಬಸಪ್ಪ ಕಲ್ಲಪ್ಪ ಚೌಗಲಾ. ಈ ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ನೌಕರಿ ಕೊಡುವುದಾಗಿ ಸರ್ಕಾರ ನೀಡಿದ ಭರವಸೆ 8 ವರ್ಷಗಳಾದರೂ ಭರವಸೆಯಾಗಿಯೇ ಉಳಿದಿದೆ.
ಕಡುಬಡತನದಲ್ಲಿಯೇ ಸ್ನೇಹಿತರ ಮತ್ತು ಗ್ರಾಮಸ್ಥರ ನೆರವಿನಿಂದ ಗ್ರಾಮದ ಸರ್ಕಾರಿ ಗಂಡು ಮಕ್ಕಳ ಶಾಲೆಯಲ್ಲಿ 1 ರಿಂದ 10ನೇ ತರಗತಿಯವರೆಗೆ ಹಾಗೂ ಅಥಣಿಯ ಕೆಎಲ್‌ಇ ಸಂಸ್ಥೆಯ ಎಸ್‌ಎಂಎಸ್ ಕಾಲೇಜಿನಲ್ಲಿ ಕಲಾ ವಿಭಾಗಕ್ಕೆ ಪ್ರಥಮ ಪಿಯುಸಿ ಪ್ರವೇಶ ಪಡೆದು ಬಸಪ್ಪ ಓದು ಮುಂದುವರಿಸಿದ್ದ. ರಜೆ ಇದ್ದಾಗಲೆಲ್ಲ ಬಸಪ್ಪ ಇನ್ನೊಬ್ಬರ ಹೊಲದಲ್ಲಿ ಕೆಲಸವನ್ನೂ ಮಾಡುತ್ತಿದ್ದ. ಮದ್ಯವ್ಯಸನಿಯಾಗಿದ್ದ ತಂದೆ ಕಳೆದುಕೊಂಡ ಆಸ್ತಿಯನ್ನು ಮರಳಿ ಪಡೆಯುವ ಸಲುವಾಗಿ 1994ರಲ್ಲಿ ಭಾರತೀಯ ಸೈನ್ಯದಲ್ಲಿ ಸೈನಿಕನಾಗಿ ಸೇರಿಕೊಂಡ. 1999ರಲ್ಲಿ ಭಾರತೀಯ ಸೈನಿಕರು ವೈರಿಗಳನ್ನು ಹುಟ್ಟಡಗಿಸಿ ಇನ್ನೈದು ದಿನದಲ್ಲಿ ಪಾಪಿಗಳಿಂದ ಟೈಗರ್ ಹಿಲ್ ಅನ್ನು ತನ್ನ ವಶಕ್ಕೆ ತೆಗೆದುಕೊಳ್ಳುವವರಿದ್ದರು. ಆದರೆ, ಯುದ್ಧದಲ್ಲಿ ಮೊದಲು ಬಸಪ್ಪನ ಕಾಲಿಗೆ ವೈರಿಗಳ ಗುಂಡು ತಗುಲಿತು. ನಂತರ 21 ಜುಲೈ 1999 ರಂದು ರಕ್ಷ(ಜೆ ಆ್ಯಂಡ್ ಕೆ) ಸ್ಥಳದಲ್ಲಿ ವೈರಿಗಳ ಗುಂಡಿಗೆ ಎದೆಕೊಟ್ಟು ವೀರ ಯೋಧ ಬಸಪ್ಪ ದೇಶಕ್ಕಾಗಿ ಹುತಾತ್ಮನಾದ ಎಂದು ಬಾಲ್ಯದ ಗೆಳೆಯ ಮುತ್ತಪ್ಪ ಕೇಮಲಾಪುರ 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.
ದರೂರು ಗ್ರಾಮದ ಸರ್ಕಾರಿ ಗಂಡು ಮಕ್ಕಳ ಶಾಲೆಯಲ್ಲಿ ಯೋಧನ ಅಂತ್ಯಕ್ರಿಯೆ ನಡೆದ ಸ್ಥಳದಲ್ಲಿಯೇ ಆತನ ಸಮಾಧಿಯೂ ಇದೆ.  
ಸರ್ಕಾರಿ ನೌಕರಿ ನೀಡುವ ಭರವಸೆ ಈಡೇರಿಲ್ಲ: ಕೇಂದ್ರ ಮತ್ತು ರಾಜ್ಯ ಸರ್ಕಾರ ವೀರ ಯೋಧನ ಕುಟುಂಬಕ್ಕೆ ಘೋಷಿಸಿದ ಪರಿಹಾರ ಧನ ನೀಡಿ ಸುಮ್ಮನಾಗಿವೆ. ಕುಟುಂಬ ಸದಸ್ಯನಿಗೆ ಸರ್ಕಾರಿ ನೌಕರಿ ನೀಡುವ ಭರವಸೆ ಹಾಗೆ ಉಳಿದಿದೆ. ಸರ್ಕಾರದಿಂದ ಬಂದ ಪರಿಹಾರ ಧನದಿಂದ ಜಮೀನು ಖರೀದಿಸಿದ್ದು, ಅದರಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಬೇಕಾಯಿತು. ಹೀಗಾಗಿ ನಾನೂ ಪ್ರಥಮ ಪಿಯುಸಿಯವರೆಗೆ ಮಾತ್ರ ಓದಲು ಸಾಧ್ಯವಾಯಿತು ಎಂದು ಬಸವರಾಜ ಚೌಗಲಾ ಸಹೋದರ ಮಲ್ಲಪ್ಪ ಚೌಗಲಾ 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.
- ಶ್ರೀಧರ ಕೊಟಾರಗಸ್ತಿ

ಕ್ರೀಡಾಪಟುಗಿರುವ ಗೌರವ ಯೋಧರಿಗಿಲ್ಲ!
ಕ್ರಿಕೆಟಿಗರು ಯಾವುದಾದರೊಂದು ಮ್ಯಾಚ್ ಗೆದ್ರೆ ಕೇಂದ್ರದಿಂದ ಹಿಡಿದು ರಾಜ್ಯ ಸರ್ಕಾರಗಳು ಗೆಲವಿಗೆ ಕಾರಣರಾದ ಕ್ರೀಡಾಪಟುಗಳಿಗೆ ಲಕ್ಷಾಂತರ ರುಪಾಯಿ ನೀಡಿ ಗೌರವಿಸುತ್ತವೆ. ಆದರೆ, ನಾವು ತಾಯ್ನಾಡಿಗಾಗಿ ನಡೆದ ಯುದ್ಧದಲ್ಲಿ ಹೋರಾಡಿ ಸಾವು-ಬದುಕಿನ ಮಧ್ಯೆ ಜೀವ ಉಳಿಸಿಕೊಂಡು ಬಂದೇವಿ. ಸ್ವಂತ ಮನಿ ಇಲ್ದ ಬದ್ಕಾಕ ತ್ರಾಸ್ ಆಗೈತ್ರಿ. ಸರ್ಕಾರಗಳು ನಿಜವಾದ ಯೋಧರನ್ನು ಕಡೆಗಣಿಸುತ್ತಿರುವುದು ನೋವು ತಂದಿದೆ. ಮನೆಯ ಹಕ್ಕು ಪತ್ರ ನೀಡುವಂತೆ 12 ವರ್ಷಗಳಿಂದ ಸರ್ಕಾರಿ ಕಚೇರಿಗಳನ್ನು ಅಲೆದು ಸುಸ್ತಾಗಿದ್ದೇನೆ.
ಹೀಗೆಂದು ಮನನೊಂದು ನುಡಿದವರು ಕಾರ್ಗಿಲ್ ಯೋಧ, ನಿವೃತ್ತ ಸೇನಾನಿ ಹಾವೇರಿಯ ಮಹಮ್ಮದ ಜಹಾಂಗೀರ್ ಖವಾಸ್. ಕಾರ್ಗಿಲ್ ಯುದ್ಧದಲ್ಲಿ ವೀರ ಮರಣ ಹೊಂದಿದ ಕೆಲ ಸೇನಾನಿಗಳಿಗೆ ಸರ್ಕಾರಗಳು, ಏನೆಲ್ಲ ಸವಲತ್ತು ನೀಡಿದ್ದಾರೆ. ಇದನ್ನು ನೋಡಿದಾಗ ನಾನು ಯುದ್ಧದಲ್ಲಿ ವೀರ ಮರಣ ಹೊಂದಿದ್ದರೆ ಚೆನ್ನಾಗಿತ್ತು ಅನಿಸುತ್ತದೆ. ನಿವೃತ್ತಿ ನಂತರ ಹೆಂಡತಿ, ಮಕ್ಕಳಿಗೆ ಒಪ್ಪೊತ್ತಿನ ಊಟ ಹಾಕಲು ಪರದಾಡುವಂತಹ ಸ್ಥಿತಿಯಲ್ಲಿದ್ದೇನೆ ಎಂದು ಗದ್ಗದಿತರಾಗಿ ಖವಾಸ್ ನುಡಿದರು. 1999ರಲ್ಲಿ ನಡೆದ ಕಾರ್ಗಿಲ್ ಯುದ್ಧದಲ್ಲಿ ಶತ್ರು ಸೈನ್ಯದ ವಿರುದ್ಧ ಜೀವದ ಹಂಗು ತೊರೆದು ಹೋರಾಡಿದ್ದ ಖವಾಸ್, ಇಂದು ನಿವೇಶನದ ಪಟ್ಟಾ ನೀಡುವಂತೆ ಬೆಳಗಾವಿ ಪ್ರಾದೇಶಿಕ ಕಚೇರಿಯಿಂದ ಹಿಡಿದು ಹಾವೇರಿ ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರ್ ಕಚೇರಿಗೆ ನಿತ್ಯವೂ ಅಲೆದಾಡುವುದೇ ಕಾಯಕವಾಗಿಬಿಟ್ಟಿದೆ.
ಹುತಾತ್ಮ ಯೋಧರ ಕುಟುಂಬಗಳು ನೆಮ್ಮದಿಯ ಬದುಕು ಸಾಗಿಸಬೇಕೆಂಬ ಉದ್ದೇಶದಿಂದ ಸರ್ಕಾರ, ಪೆಟ್ರೋಲ್ ಬಂಕ್, ನೌಕರಿ, ಜಮೀನು ಎಲ್ಲವನ್ನೂ ಕೊಟ್ಟಿದೆ. ಮಾತ್ರವಲ್ಲದೆ, ಇಂಥ ಕುಟುಂಬಗಳಿಗೆ ಸಂಘ-ಸಂಸ್ಥೆಗಳು ಸಾಕಷ್ಟು ನೆರವಾಗಿರುವ ನೂರಾರು ಉದಾಹರಣೆಗಳುಂಟು. ಆದರೆ, ಯುದ್ಧದಲ್ಲಿ ಬದುಕುಳಿದ ಯೋಧರ ಕುಟುಂಬಗಳ ನೆರವಿಗೆ ಬರಲು ಸರ್ಕಾರ ಮೀನಮೇಷ ಎಣಿಸುತ್ತಿರುವುದು ನಿಜಕ್ಕೂ ವಿಪರ್ಯಾಸದ ಸಂಗತಿಯೇ.
ಇಂದು ಸೆಕ್ಯೂರಿಟಿ ಗಾರ್ಡ್: ಕಾರ್ಗಿಲ್ ಯುದ್ಧದಲ್ಲಿ ಭಾರತಾಂಬೆಯ ವೀರಪುತ್ರನಾಗಿ ಹೋರಾಡಿದ್ದ ಖವಾಸ್ ನಿವೃತ್ತಿ ನಂತರ ಕುಟುಂಬ ನಿರ್ವಹಿಸಲು ಇದೀಗ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರತಿದಿನ 200-300 ಸಂಭಾವನೆ ಈ ಕೆಲಸದಿಂದ ಪಡೆಯುತ್ತಿದ್ದಾರೆ. ಇಬ್ಬರು ಪುತ್ರಿ ಹಾಗೂ ಇಬ್ಬರು ಪುತ್ರರನ್ನು ಹೊಂದಿರುವ ಇವರು, ಒಬ್ಬ ಪುತ್ರಿಯ ವಿವಾಹ ನೆರವೇರಿಸಿದ್ದಾರೆ. ಮಿಕ್ಕ 3 ಮಕ್ಕಳನ್ನು ಗುಣಮಟ್ಟದ ಶಿಕ್ಷಣ ಕೊಡಿಸಬೇಕೆಂಬ ಮಹದಾಸೆ ಹೊಂದಿದ್ದಾರಾದರೂ ಹಣಕಾಸಿನ ಅಡಚಣೆಯಿಂದ ಇದು ಸಾಧ್ಯವಾಗುತ್ತಿಲ್ಲ. ಸೇನೆಯಲ್ಲಿ 19 ವರ್ಷ 6 ತಿಂಗಳು ಸೇವೆ ಸಲ್ಲಿಸಿರುವ ಖವಾಸ್, ಕಾರ್ಗಿಲ್ ಯುದ್ಧದ ನಂತರ ನಿವೃತ್ತಿ ಪಡೆದು ತವರಿಗೆ ಮರಳಿದ್ದರು. ಆಗ ಹೊಗಳಿದ ಜನಪ್ರತಿನಿಧಿಗಳು, ಅಧಿಕಾರಿಗಳು ಈಗ ಮೌನವಾಗಿದ್ದಾರೆ.  ಮನೆ ನೀಡುವುದಾಗಿ ಹೇಳಿದ್ದ ನಗರಸಭೆ, ಕೊಳಚೆ ಪ್ರದೇಶದಲ್ಲಿ 49್ಢ60 ಅಳತೆಯ ನಿವೇಶನ ನೀಡಿದೆ. ಆದರೆ, ಕಾರ್ಯ ಪಟಾ ನೀಡಿಲ್ಲ. ಇದರಿಂದಾಗಿ ಖವಾಸ್ ಅವರಿಗೆ ಮನೆ ಕಟ್ಟಿಕೊಳ್ಳಲು ಸಾಧ್ಯವಾಗಿಲ್ಲ. ಸರ್ಕಾರ ಜಿಲ್ಲೆಯಲ್ಲಿ ಮಾಜಿ ಸೈನಿಕರಿಗಾಗಿ 8 ಎಕರೆ ಜಮೀನು ಕಾಯ್ದಿರಿಸಿದೆ. ಈ ಪೈಕಿ 5 ಎಕರೆ ಜಮೀನು ನೀಡುವಂತೆ ನಿವೃತ್ತ ಯೋಧ ಮನವಿ ಮಾಡಿಕೊಂಡಿದ್ದಾರೆ. ಈ ಪೈಕಿ ಖವಾಸ್ ಅವರಿಗೆ ಬೆಳಗಾವಿಯ ಪ್ರಾದೇಶಿಕ ಕಚೇರಿ ಇತ್ತೀಚೆಗಷ್ಟೇ 2.5 ಎಕರೆ ಜಮೀನು ನೀಡಲು ಒಪ್ಪಿಗೆ ಸೂಚಿಸಿದ್ದಾರೆ ಎನ್ನುವ ನಿವೃತ್ತ ಸೇನಾನಿ, ಈ ಜಮೀನಿನ ಹಕ್ಕು ಪತ್ರವಾದರೂ ಯಾವಾಗ ಲಭಿಸುತ್ತದೆಯೋ ಏನೋ ಎಂದು ಆಂತಕ ವ್ಯಕ್ತಪಡಿಸಿದ್ದಾರೆ.
- ಬಿ.ಕೆ. ಮಹೇಂದ್ರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement