ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ನೆಗಡಿಯಾದರೆ ಮೂಗನ್ನೇ ಕೊಯ್ಯುತ್ತೀರಾ?

Srinivasa Murthy VN
Updated On : 27 Jul 2013, 10:17 am

ದಿನಾಂಕ 21-07-2013ರ ಕನ್ನಡಪ್ರಭ ಸಂಪಾದಕೀಯದಲ್ಲಿ ರಾಜ್ಯ ಸರ್ಕಾರ ತಂದಿರುವ ಗ್ರಾಮ ಪಂಚಾಯತ್ ಸದಸ್ಯರ ಅನೂರ್ಜಿತ ಕಾಯ್ದೆ ತಿದ್ದುಪಡಿಯನ್ನು ಸಮರ್ಥಿಸಲಾಗಿದೆ ಮತ್ತು ಬಿಜೆಪಿ ಇದರ ವಿರುದ್ಧ ಮಾಡುವ ಹೋರಾಟ ಕೈ ಬಿಡಬೇಕು, ಈ ವಿಧಿಯ ವಿರುದ್ಧ ಬಿಜೆಪಿ ರಾಜ್ಯವ್ಯಾಪಿ ಹೊರಡಿಸಿರುವ ಆಂದೋಲನವನ್ನು ಮರುಪರಿಶೀಲಿಸಲು ಸೂಚಿಸಿ, ದೇಶದ ಜನತಾಂತ್ರಿಕ ಅಧಿಕಾರವನ್ನು ಸಾಕ್ಷಾತ್ಕರಿಸುವ ವ್ಯವಸ್ಥೆಯ ಅವಹೇಳನಕ್ಕೆ ಮುಂದಾಗುವುದು ಉಚಿತವಲ್ಲ ಎಂದೂ ಹೇಳಲಾಗಿದೆ.
ಕಳೆದ ಅಧಿವೇಶನದಲ್ಲಿ ಕಾಂಗ್ರೆಸ್ ಸರ್ಕಾರ ಮಂಡಿಸಿದ ಪಂಚಾಯತ್ ರಾಜ್ ಕಾಯ್ದೆ ತಿದ್ದುಪಡಿ 2013ನ್ನು ಬಿಜೆಪಿ ವಿರೋಧಿಸಲು ಮುಖ್ಯ ಕಾರಣವೆಂದರೆ ಈ ಕಾಯ್ದೆ ಜಾರಿಯಾದರೆ ಈಗಾಗಲೇ ನಡೆಯುತ್ತಿರುವ ಗ್ರಾಮಸಭೆ ಮತ್ತು ವಾರ್ಡ್ ಸಭೆಗಳನ್ನು ಕರೆಯುವ ಜವಾಬ್ದಾರಿ ಸರ್ಕಾರಿ ಅಧಿಕಾರಿಗಳಿಂದ ಜಾರಿ ಜನಪ್ರತಿನಿಧಿಗಳಾದ ಪಂಚಾಯತ್ ಅಧ್ಯಕ್ಷರಿಗೆ ಮತ್ತು ಸದಸ್ಯರ ಹೆಗಲಿಗೆ ಬರುತ್ತದೆ ಎಂಬ ಒಂದೇ ಕಾರಣಕ್ಕಲ್ಲ. 1993ರಲ್ಲಿ ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗ ಸಂವಿಧಾನದ 73ನೇ ಕಲಂಗೆ ತಿದ್ದುಪಡಿ ತಂದು ಅಧಿಕಾರ ವಿಕೇಂದ್ರಿಕರಣ ವ್ಯವಸ್ಥೆಗೆ ಚಾಲನೆ ನೀಡಿದರು. ಈ ತಿದ್ದುಪಡಿಯ ಆಧಾರದಲ್ಲಿ ಕರ್ನಾಟಕ ಸರ್ಕಾರ ದಿನಾಂಕ 11-06-1993ರಂದು ಪಂಚಾಯತ್ ರಾಜ್ ಅಧಿನಿಯಮದ ಶಾಸನವನ್ನು ಜಾರಿಗೆ ತಂದಿತು. ಅದರ ಫಲವೇ ಇಂದು ಕರ್ನಾಟಕದಲ್ಲಿ ತ್ರಿ-ಸ್ತರದ ಆಡಳಿತವನ್ನು ನಾವು ಅನುಭವಿಸುತ್ತಿದ್ದೇವೆ.
ಮೇಲಿನ ಕಾಯ್ದೆ ಬಂದು ಸರಿಸುಮಾರು 20 ವರ್ಷಗಳಾದವು. ಈ ಎರಡು ದಶಕಗಳಿಂದ ಪಂಚಾಯತ್ ಆಡಳಿತ ವ್ಯವಸ್ಥೆ ಮತ್ತು ಆರ್ಥಿಕ ಸದೃಢತೆಯಲ್ಲಿ ಕರ್ನಾಟಕ ದೃಢ ಹೆಜ್ಜೆ ಇಟ್ಟಿರುವುದು ಕಡಿಮೆ.
ಹಿಂದಿನ ದಿನಗಳಲ್ಲೂ ನಾವು ಪ್ರತಿ ಗ್ರಾಮ ಪಂಚಾಯತ್‌ಗೆ ಕೊಡುತ್ತಿರುವ ಶಾಸನಬದ್ಧ ಅನುದಾನ 4 ಸಮಾನ ಕಂತುಗಳಲ್ಲಿ ಕೇವಲ 8 ಲಕ್ಷ ರುಪಾಯಿಗಳು. ಈ ಎಂಟು ಲಕ್ಷಗಳನ್ನು ಪಂಚಾಯತ್‌ನಲ್ಲಿರುವ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು ನೇರವಾಗಿ ಕ್ರಿಯಾಯೋಜನೆ ಮಾಡಿ ಖರ್ಚು ಮಾಡುವಂತಿಲ್ಲ. ಕಾರಣವೆಂದರೆ ರಾಜ್ಯ ಸರ್ಕಾರ ಸಮಾನ ಕಂತುಗಳಲ್ಲಿ ಬಿಡುಗಡೆ ಮಾಡುವ ಅನುದಾನದೊಂದಿಗೆ ಪಂಚಾಯತ್‌ಗೆ ಒಂದು ಸುತ್ತೋಲೆ ಕಳುಹಿಸಿ ಶಾಸನಬದ್ಧ ಅನುದಾನದ ಶೇ 60 ರಷ್ಟನ್ನು ಬಾಕಿ ಉಳಿದ ವಿದ್ಯುತ್ ಬಿಲ್‌ಗೆ ಪಾವತಿಸಲು ಆದೇಶ ನೀಡಿದೆ. ಅದೇ ರೀತಿ ಮತ್ತೊಂದು ಸುತ್ತೋಲೆ ಪಂಚಾಯತ್‌ಗೆ ಕಳುಹಿಸಿ ರಾಜ್ಯ ನೀಡುವ ಅನುದಾನದ ಶೇ 40ರಷ್ಟನ್ನು ಸಿಬ್ಬಂದಿಗಳ ವೇತನಕ್ಕೆ ಮೀಸಲಿರಿಸಲು ಸೂಚಿಸಿದೆ. ಸರಿ ತಪ್ಪು ಯಾರದ್ದೇ ಆದರೂ ಗ್ರಾಮ ಪಂಚಾಯತ್‌ಗಳನ್ನು ಗ್ರಾಮ ಸರ್ಕಾರ ಎಂದು ಕರೆಯಲು ಹೆಮ್ಮೆ ಪಡುವ ನಾವು ಅಲ್ಲಿರುವ ಸದಸ್ಯರಿಗೆ ಅಭಿವೃದ್ಧಿ ಮಾಡಲು ಕೊಟ್ಟಿರುವ ಹಣಕ್ಕೆ ನಾವೇ ಅಡ್ಡಿಪಡಿಸಿದರೆ ಅವರ ಹಕ್ಕುಗಳ ಹರಣವಲ್ಲದೆ ಮತ್ತೇನು?
ಕರ್ನಾಟಕದಲ್ಲಿ 5628 ಗ್ರಾಮ ಪಂಚಾಯತ್‌ಗಳಿವೆ. 93 ಸಾವಿರ ಗ್ರಾಮಪಂಚಾಯತ್ ಸದಸ್ಯರಿದ್ದಾರೆ. ಈ ಪೈಕಿ ಸುಮಾರು 39 ಸಾವಿರ ಮಹಿಳೆಯರಿದ್ದಾರೆ. ಒಟ್ಟು ಸದಸ್ಯರ ಪೈಕಿ 27,705 ಸದಸ್ಯರು ಪರಿಶಿಷ್ಟ ಜಾತಿ ಮತ್ತು ಪಂಗಡದವರಿದ್ದಾರೆ. ಅಚ್ಚರಿ ಪಡಬೇಡಿ, ರಾಜ್ಯ ಸರ್ಕಾರವೇ ಕೊಟ್ಟಿರುವ ಅಂಕಿ ಅಂಶಗಳ ಪ್ರಕಾರ 15823 ರಷ್ಟು ಅನಕ್ಷರಸ್ಥ ಗ್ರಾಮ ಪಂಚಾಯತ್ ಸದಸ್ಯರಿದ್ದಾರೆ. ಇವರೊಂದಿಗೆ ಗ್ರಾಮಸಭೆ ಕರೆಯದಿದ್ದರೆ 'ನಿಮ್ಮನ್ನು ಅನೂರ್ಜಿತ ಗೊಳಿಸುವ ಕಾಯ್ದೆ ತರುತ್ತೇವೆ' ಎಂದರೆ ಅವರೆಲ್ಲಾ ಒಮ್ಮೆಲೆ ಏನು ಮಾಡಿಯಾರು?
20 ವರ್ಷಗಳಿಂದಲೂ ನಿರಂತರವಾಗಿ ಗ್ರಾಮಸಭೆಗಳು ನಡೆಯುತ್ತಿರುವ ಪಂಚಾಯತ್‌ಗಳಿವೆ. (ಅವುಗಳ ಸಂಖ್ಯೆ ಏರುಪೇರಿರಬಹುದು) ಪ್ರತಿ ಗ್ರಾಮಸಭೆಯಲ್ಲಿ ನೂರಾರು ಸಾರ್ವಜನಿಕ ಬೇಡಿಕೆಗಳಿವೆ. ಪಂಚಾಯತ್ ಅಧ್ಯಕ್ಷರು ಮತ್ತು ಸದಸ್ಯರಿಗೆ ಬೇಡಿಕೆಗಳು ಬರುತ್ತಿವೆ. ಒಂದು ಗ್ರಾಮಸಭೆಯಾಗಿ 6 ತಿಂಗಳ ನಂತರ ಮತ್ತೊಂದು ಗ್ರಾಮಸಭೆಯಲ್ಲಿ ಅದೇ ಅಧ್ಯಕ್ಷ, ಸದಸ್ಯರು ಬಿಟ್ಟರೆ ಒಂದೇ ಒಂದು ಜನರ ಬೇಡಿಕೆ ಈಡೇರಿದ ಘಟನೆ ಕಡಿಮೆ ಅಥವಾ ಇಲ್ಲ.
ಹಾಗೊಂದು ವೇಳೆ ಯಾವುದೇ ಒಂದು ಬೇಡಿಕೆ ಈಡೇರಿದರೆ ಗ್ರಾಮ ಪಂಚಾಯತ್ ಸದಸ್ಯರ ಹೊರತಾಗಿ ಶಾಸಕರೋ ಅಥವಾ ಬೇರೆ ಮೇಲ್ಮಟ್ಟದ ಸದಸ್ಯರು ತಾವು ಮಂಜೂರು ಮಾಡಿದ್ದಾಗಿ ಹೇಳಿ ಅಭಿನಂದನೆ ಅನುಭವಿಸುತ್ತಾರೆಯೇ ಹೊರತು ಗ್ರಾಮ ಪಂಚಾಯತ್‌ನ ಸದಸ್ಯ, ಅಧ್ಯಕ್ಷರಿಗೆ ತಮ್ಮಿಂದ ಅಭಿವೃದ್ಧಿ ಮಾಡುವ ಆರ್ಥಿಕ ಶಕ್ತಿ ಇಲ್ಲ.
ಪ್ರತಿ ಗ್ರಾಮಸಭೆಯಲ್ಲಿ ಗ್ರಾಮದ ಶೇ 10ರಷ್ಟು ಅಥವಾ ಕನಿಷ್ಠ ನೂರು ಜನರ ಕೋರಂ ಇರಬೇಕು. ಗ್ರಾಮಸಭೆಗೆ ಹಾಜರಿರುವ ಪೈಕಿ ಶೇ 30ರಷ್ಟು ಮಹಿಳೆಯರಿರಬೇಕು. ಅನುಸೂಚಿತ ಜಾತಿ ಮತ್ತು ಪಂಗಡದವರು ತಮ್ಮ ಜನಸಂಖ್ಯೆಗನುಗುಣವಾಗಿ ಅನುಪಾತದಡಿ ಹಾಜರಿರಬೇಕು. ಇದೆಲ್ಲಾ ಅನುಷ್ಠಾನವಾಗಿ ನಿಯಮದ ಕೊರತೆಯಾಗದಂತೆ ಜವಾಬ್ದಾರಿ ಹೊರಲು 15823 ಮಂದಿ ಅನಕ್ಷರಸ್ಥರಿಂದ 27705 ಮಂದಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಸದಸ್ಯರಿಂದ ಸಾಧ್ಯವೇ? ಅದಿರಲಿ ಒಂದು ಗ್ರಾಮಸಭೆ ನಡೆಸಲು ಅಸಾಧ್ಯವಾದ ಸಂದರ್ಭದಲ್ಲಿ ಗ್ರಾಮಪಂಚಾಯತ್ ಸದಸ್ಯ ಯಾ ಅಧ್ಯಕ್ಷನ ಸದಸ್ಯತ್ವ ರದ್ದುಗೊಳಿಸುವುದಾದರೆ ಬೇರಾವ ರೀತಿಯ ಜನಪ್ರತಿನಿಧಿಗೂ ಈ ಕಾನೂನು ಅನ್ವಯಿಸದಿರುವುದು ಸರಿಯೇ?
ಶಾಸನ ಸಭೆಯಲ್ಲಿ ಭಾಗವಹಿಸದಿರುವ ಶಾಸಕರಿಗೇನು ಶಿಕ್ಷೆ ಇದೆಯೇ? ಲೋಕಸಭಾ ಅಧಿವೇಶನದಲ್ಲಿ ಭಾಗವಹಿಸದೇ ಕ್ಷೇತ್ರದ ಒಂದೇ ಒಂದು ಸಮಸ್ಯೆಯ ಬಗ್ಗೆ ಉಲ್ಲೇಖಿಸದಿರುವ ಸಂಸದರುಗಳ ಸದಸ್ಯತ್ವ ರದ್ದಾಗುವ ಯಾವ ಕಾನೂನಾದರೂ ಈ ದೇಶದಲ್ಲಿ ಕಲ್ಪಿಸಿಕೊಳ್ಳಲು ಸಾಧ್ಯವೇ?
ಇಷ್ಟಕ್ಕೂ ಈ ಗ್ರಾಮಪಂಚಾಯತ್ ಸದಸ್ಯರ ಅವಸ್ಥೆ ನೋಡಿ. ಒಂದು ಗ್ರಾಮದಲ್ಲಿ ಕುಡಿಯುವ ನೀರು ಸರಬರಾಜು ಆಗದಿದ್ದಲ್ಲಿ ಮಂತ್ರಿಯನ್ನೋ, ಸಂಸದರನ್ನೋ ಜನ ಹುಡುಕುವುದಿಲ್ಲ. ಮೊದಲ ಬೈಗುಳದ ಉದ್ಘಾಟನೆ ಗ್ರಾಮಪಂಚಾಯತ್ ಸದಸ್ಯನ ಮನೆ ಅಂಗಳದಲ್ಲಾಗುತ್ತೆ.
ಪಡಿತರಚೀಟಿ ಸಹಿತ ಎಲ್ಲಾ ಮೂಲಭೂತ ಸೌಕರ್ಯ ಅಭಿವೃದ್ಧಿಯ ಕೊರತೆಯ ಮೊದಲ ಬಿಸಿ ತಾಗುವುದೇ ಗ್ರಾಮ ಪಂಚಾಯತಿಗೆ ಮತ್ತು ಗ್ರಾಮ ಪಂಚಾಯತ್ ಸದಸ್ಯರಿಗೆ. ಸಾಲದ್ದಕ್ಕೆ ಈ ಗ್ರಾಮ ಪಂಚಾಯತ್ ಸದಸ್ಯರೂ ದಿನದ ಎಲ್ಲಾ ಸಮಯ ಬಡವರ ಮಧ್ಯೆ ಕಳೆಯುತ್ತಿದ್ದು ಸಾಮಾನ್ಯರ ಮಧ್ಯೆ ಒಡಾಡಿಕೊಂಡಿದ್ದಾರೆ. ಶಾಸಕರಿಗೆ ಸಿಗುವ ಗೌರವಧನ ಇತರ ವಗೈರೆಗಳು ಅವರವರು ರೂಪಿಸಿದ ನಿಯಮದಂತೆ ಸಿಗುತ್ತದೆ. ಗ್ರಾಮ ಪಂಚಾಯತ್ ಸದಸ್ಯರಿಗೆ ಮಾತ್ರ ಸರ್ಕಾರ ಕೊಡುವುದು ತಿಂಗಳಿಗೆ ರು. 250 ಗೌರವಧನ. ಅದೂ ಸಿಗದೇ 8 ತಿಂಗಳಾಯ್ತ ಎನ್ನುವಾಗ ಇವರ ಮೇಲೆ ಕಾಯಿದೆ ಹೇರುವ ಮೊದಲು ಅವರ ವೇತನ ಹೆಚ್ಚಳಕ್ಕೆ ಯೋಚನೆ ಮಾಡಬೇಕಲ್ಲ. ಇಷ್ಟಕ್ಕೂ ಸದಸ್ಯರ ಬದ್ಧತೆ ಇಲ್ಲದಿದ್ದರೆ ಗ್ರಾಮ ಮತ್ತು ವಾರ್ಡ್ ಸಭೆ ಯಶಸ್ವಿಯಾಗವುದು ಹೇಗೆ? ಎಂಬ ಬಗ್ಗೆ ಹೆಚ್.ಕೆ. ಪಾಟೀಲರಿಗೆ ಚಿಂತೆ ಇರಬಹುದು. ಅವರು ನನ್ನ ಮಟ್ಟಿಗೆ ತುಂಬಾ ಗೌರವಾರ್ಹರೂ ಕೂಡಾ, ಆದರೆ ಎತ್ತಿಗೆ ಜ್ವರ ಬಂದರೆ ಪಾಟೀಲರು ಎಮ್ಮೆಗೆ ಬರೆ ಎಳೆಯುವುದೇಕೆಂದು ನನಗೆ ಅರ್ಥವಾಗುತ್ತಿಲ್ಲ.
ಗ್ರಾಮ ಸಭೆಗಳನ್ನು ಸಬಲೀಕರಣಗೊಳಿಸಿ ವ್ಯವಸ್ಥಿತವಾಗಿ ನಡೆಸುವ ಜವಾಬ್ದಾರಿ ಈಗಿರುವಂತೆ ಅಧಿಕಾರಿಗಳಿಗಿದ್ದರೆ ಸಾಕು. ಆದರೆ ಪ್ರತಿ ಗ್ರಾಮ ಸಭೆಯಲ್ಲಿ ಭಾಗವಹಿಸುವ ಜವಾಬ್ದಾರಿ ಕೇವಲ ಗ್ರಾಮ ಪಂಚಾಯತ್ ಸದಸ್ಯರಿಗಷ್ಟೇ ಅಲ್ಲ ಶಾಸಕರವರೆಗಿನ ಎಲ್ಲಾ ಜನಪತ್ರಿನಿಧಿಗಳಿಗೂ ಕಡ್ಡಾಯಗೊಳಿಸಿ ಒಂದು ವಿಧಾನಸಭಾ ಕ್ಷೇತ್ರದಲ್ಲಿ ಸರಾಸರಿ 30 ಗ್ರಾಮ ಪಂಚಾಯತ್‌ಗಳು ಬರಬಹುದು. ಯೋಜನಾಬದ್ಧವಾಗಿ ನಡೆಸಿದರೆ ಶಾಸಕರಿಗೆ ಗ್ರಾಮಸಭೆಯಲ್ಲಿ ಭಾಗವಹಿಸುವುದು ಕಷ್ಟವೇನಲ್ಲ. ಹಾಗೇ ಇತರ ಎಲ್ಲ ಸ್ತರದ ಜನಪ್ರತಿನಿಧಿಗಳು ಬರುವಂತಾದರೆ ಮತ್ತು ಒಂದು ಗ್ರಾಮಸಭೆಯಲ್ಲಿ ಬಂದ ಬೇಡಿಕೆಯ ಕನಿಷ್ಠ 25ರಷ್ಟು ಕಾಮಗಾರಿಗಳು ಮತ್ತೊಂದು ಗ್ರಾಮಸಭೆಯವರೆಗೆ ಅನುಷ್ಠಾನವಾಗುವಂತಿದ್ದರೆ ಜನ ತಾವೇ ತಾವಾಗಿ ಗ್ರಾಮಸಭೆಗೆ ಬರುತ್ತಾರೆ.
ಸರ್ಕಾರ ಮಂಜೂರು ಮಾಡುವ ಪ್ರತಿ ಕಾಮಗಾರಿಗಳು ಗ್ರಾಮಸಭೆಯಿಂದ ಶಿಫಾರಸ್ಸು ಆಗಬೇಕೆಂಬ ನಿಯಮ ಜಾರಿಗೆ ತಂದರೆ ಜನರೂ ಗ್ರಾಮಸಭೆಯಲ್ಲಿ ಆಸಕ್ತಿ ತಾಳುತ್ತಾರೆ. ಯಾವುದೇ ಮಹತ್ತರ ಸವಲತ್ತುಗಳು ಗ್ರಾಮಸಭೆಯಲ್ಲಿ ಅನುಮೋದನೆ ಪಡೆಯಬೇಕೆಂಬ ಕಡ್ಡಾಯ ಗ್ರಾಮ ಸಭೆಗಳ ಶಕ್ತಿ ವೃದ್ಧಿಸುತ್ತದೆ.
ವಾರ್ಡ್ ಮತ್ತು ಗ್ರಾಮಸಭೆಗಳ ಸಬಲೀಕರಣಕ್ಕೆ ಗ್ರಾಮ ಪಂಚಾಯತ್‌ಗಳಿಗೆ ಹೆಚ್ಚು ಆರ್ಥಿಕ ಶಕ್ತಿ ನೀಡುವುದು ಗ್ರಾಮಸಭೆಗೆ ಹೆಚ್ಚು ಅಧಿಕಾರ ನೀಡುವುದೇ ಉತ್ತಮ ಹೊರತು ಎಲ್ಲಾ ಜನಪ್ರತಿನಿಧಿಗಳಂತೆ ಜನರಿಂದ ಆಯ್ಕೆಯಾದ ಮುಗ್ಧ ಗ್ರಾಮ ಪಂಚಾಯತ್ ಸದಸ್ಯರನ್ನು ಅನೂರ್ಜಿತಗೊಳಿಸುವ ಶಿಕ್ಷೆ ಜಾರಿಗೆ ತರುವುದು ಸರಿಯಲ್ಲ! ವಿಚಿತ್ರ ಹಾಗೂ ಸೂಜಿಗವೆಂದರೆ ಶೇ. 50 ರಷ್ಟು ಗ್ರಾಮ ಪಂಚಾಯತ್ ಸದಸ್ಯರಿಗೆ ತಮ್ಮ ಕೊರಳಉರುಳಾಗುತ್ತಿರುವ ಇಂತಹ ಕರಾಳ ಕಾಯ್ದೆ ಬಂದಿರುವುದೇ ಗೊತ್ತಿಲ್ಲ.
ಮಂಗಳೂರು ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಬಾರ್ಯ ಗ್ರಾಮ ಪಂಚಾಯತ್‌ನಲ್ಲಿ ನಡೆದ ನೈಜ ಘಟನೆ- ಮೇ 2010ರಲ್ಲಿ ನಡೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ರುಕ್ಮಿಣಿ ಎಂಬ ಪ. ಜಾತಿಯ ಮಹಿಳೆ ಚುನಾವಣೆಯಲ್ಲಿ ಗೆಲ್ಲುತ್ತಾಳೆ. ಒಟ್ಟು 22 ಮಂದಿ ಸದಸ್ಯರಿರುವ ಸದರಿ ಗ್ರಾಮ ಪಂಚಾಯತ್‌ನಲ್ಲಿ 19 ಮಂದಿ ಒಂದು ರಾಜಕೀಯ ಪಕ್ಷದ ಬೆಂಬಲಿತರಾಗಿದ್ದು ಇಬ್ಬರು ಪಕ್ಷೇತರರು. ಈಕೆಯೊಬ್ಬಳೆ ಮತ್ತೊಂದು ರಾಜಕೀಯ ಪಕ್ಷದ ಬೆಂಬಲದೊಂದಿಗೆ ಆಯ್ಕೆಯಾಗಿದ್ದಾಳೆ. ರುಕ್ಮಿಣಿಯ ಅದೃಷ್ಟಕ್ಕೆ ಅಧ್ಯಕ್ಷತೆಯ ಮೀಸಲಾತಿ ಪ. ಜಾತಿ ಮಹಿಳೆಗೆ ಬಂದಿತ್ತು. ರುಕ್ಮಿಣಿಗೆ ಅಧ್ಯಕ್ಷತೆಗೆ ಸ್ಪರ್ಧಿಸಲು ಸೂಚಿಸಲು ಮತ್ತೊಂದು ರಾಜಕೀಯ ಪಕ್ಷದ ಬೆಂಬಲಿಗರ ಅಡ್ಡಿ ಮಾತ್ರವಲ್ಲ, ಅಧ್ಯಕ್ಷತೆಯ ಅಭ್ಯರ್ಥಿಯಾಗುವ ಸೂಚನೆ ನೀಡಲು ನಿರಾಕರಣೆ! ಆಗ ಆಕೆಯ ಬೆಂಬಲಕ್ಕೆ ಬಂದ ಪಕ್ಷೇತರ ಸದಸ್ಯ ಬಿ.ಕೆ. ಮಹಮ್ಮದ್ ಸೂಚನೆ ನೀಡಿದ್ದರಿಂದ ಆಕೆ  ಬಹಳ ಸಂಕಷ್ಟದಲ್ಲಿ ಬಾರ್ಯ ಗ್ರಾಮ ಪಂಚಾಯತ್ ಅಧ್ಯಕ್ಷಳಾಗುತ್ತಾಳೆ. ಪರಿಶಿಷ್ಟ ಜಾತಿಯ ಅಧ್ಯಕ್ಷತೆಯನ್ನು ಸಹಿಸಲಾರದೆ ಚಡಪಡಿಕೆಯಿಂದ ಆಕೆಯ ವಿರೋಧಿ ಗುಂಪು ಆಕೆಯ ಮೇಲೆ ಅವಿಶ್ವಾಸ ಮಂಡಿಸುತ್ತದೆ.
ಸ್ವಾಭಾವಿಕವಾಗಿ ಬೆಂಬಲಿಗರಿಲ್ಲದ ಪ.ಜಾತಿ ಎಂಬ ದಲಿತ ಮಹಿಳೆ ಕೆಳಗಿಳಿಯುತ್ತಾಳೆ. ಹೊರಗಿನ ಜಾಗೃತ ಜನರ ಪ್ರತಿಭಟನೆಯಿಂದ ಅಧ್ಯಕ್ಷತೆಯ ಖಾಲಿ ಜಾಗಕ್ಕೆ ಪುನರಪಿ ಚುನಾವಣೆ ನಡೆಯುತ್ತೆ. ಪಂಚಾಯತ್ ರಾಜ್ ಯ್ದೆಯಂತೆ ಅಧ್ಯಕ್ಷರ ಆಯ್ಕೆಯ ಸಭೆಯ ಕೋರಂ ಅವಶ್ಯಕತೆಯಿದ್ದು ದಲಿತ ಮಹಿಳೆಯ ವಿರೋಧಿಗಳು ಕೋರಂ ಆಗಲೇ ಬಿಡುವುದಿಲ್ಲ. ಸಭೆಯನ್ನು ಅಧಿಕಾರಿಗಳು ಮುಂದೂಡುತ್ತಾರೆ.
ಮತ್ತೆ ಮಾಧ್ಯಮಗಳ ಸಾರ್ವಜನಿಕರ ಒತ್ತಡಕ್ಕೆ ಮಣಿದ ಸಹಾಯಕ ಕಮೀಷನರ್, ಚುನಾವಣೆಗೆ ದಿನಾಂಕ ನಿಗದಿಗೊಳಿಸಿ ಸರ್ಕಾರದ ಒಪ್ಪಿಗೆ ಪಡೆದು ಯಾವ ಸೂಚಕರೂ ಇಲ್ಲದೆ ಸಭೆಗೆ ಕೋರಂ ಆಗದಂತೆ ತಡೆದ ಶಕ್ತಿಗಳನ್ನು ನಿರ್ಲಕ್ಷಿಸಿ ದಿ. 12-04-2012ರಂದು ಪುನಃ ರುಕ್ಮಿಣಿಗೆ ಅಧ್ಯಕ್ಷತೆಯ ಅವಕಾಶ ಘೋಷಿಸಿ ಬಿಡುತ್ತಾರೆ.
ಈಗ ಹೇಳಿ- ಇಂತಹ ದಲಿತ ಸದಸ್ಯರ ಸಂಖ್ಯೆ 27705. ಇವರೆಲ್ಲಾ ಗ್ರಾಮ ಸಭೆ ಕರೆಯಲು ಹೊರಟರೆ 'ಇಂತಹವರು ಅಧಿಕಾರ ಹಿಡಿಯಲು ಬಾರದೆಂಬುವವರು' ಸುಮ್ಮನೆ ಬಿಟ್ಟಾರೆಯೇ? ಇವರನ್ನೆಲ್ಲಾ ವಜಾ ಮಾಡಿ ಯಾವ ಪುರುಷಾರ್ಥ ಸಾಧಿಸಿದಂತಾಯಿತು?

-ಕೋಟಾ ಶ್ರೀನಿವಾಸ ಪೂಜಾರಿ
ವಿಧಾನ ಪರಿಷತ್ ಸದಸ್ಯರು


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement