ಕೌಟುಂಬಿಕ ದೌರ್ಜನ್ಯ ಕೊನೆಯಾಗಬೇಕೆಂದರೆ...
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಕೆಲಸ ಮಾಡುವಾಗ ನನಗೆ ದಿನವೂ ನೂರಾರು ಪತ್ರಗಳು ಬರುತ್ತಿದ್ದವು. ಅವುಗಳಲ್ಲಿ ಮುಕ್ಕಾಲು ಪಾಲು ಪತ್ರಗಳು ಕೌಟುಂಬಿಕ ದೌರ್ಜನ್ಯಕ್ಕೆ ಸಂಬಂಧ ಪಟ್ಟವುಗಳಾಗಿರುತ್ತಿದ್ದವು. ಅವುಗಳಲ್ಲಿ ಕೆಲವು ಹೀಗಿವೆ...
- ರೇಖಾ ಮತ್ತು ರವಿ ಮದುವೆಯಾಗಿ ಏಳು ವರ್ಷಗಳಾಗಿವೆ. ಐದು ವರ್ಷದ ಒಬ್ಬ ಮಗಳಿದ್ದಾಳೆ. ಎರಡು ವರ್ಷಗಳ ಕೆಳಗೆ ರವಿಗೆ ಅಫಘಾತದಲ್ಲಿ ಕಾಲಿಗೆ ಪೆಟ್ಟಾಗಿ ಎಡಗಾಲನ್ನು ಕತ್ತರಿಸಲಾಗಿದೆ. ಅಂದಿನಿಂದ ಅವನು ಮನೆಯಲ್ಲಿಯೇ ಇರುತ್ತಾನೆ. ಮನೆಯ ನಿರ್ವಹಣೆಯ ಸಂಪೂರ್ಣ ಜವಾಬ್ದಾರಿ ರೇಖಾಳ ಮೇಲೆ ಬಿದ್ದಿದೆ. ಅವಳು ಕೆಲಸ ಮಾಡುವ ಜಾಗದಲ್ಲಿ ಬೇರೆ ಯಾರನ್ನೋ ಪ್ರೀತಿಸುತ್ತಿದ್ದಾಳೆ ಎಂಬ ಅನುಮಾನದಿಂದ ರವಿ ಅವಳನ್ನು ದಿನಾಲೂ ಹೊಡೆದು, ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾನೆ. ಇದು ಸಾಲದೆಂಬಂತೆ ಒಂದೊಂದಾಗಿ ಮನೆಯ ಸಾಮಾನುಗಳನ್ನು ಮಾರಿ ಕುಡಿಯಲು ಆರಂಭಿಸಿದ್ದಾನೆ. ಮನೆಯ ಹತ್ತಿರ ವಾಸವಿರುವ ಒಬ್ಬ ವ್ಯಕ್ತಿ ಈ ವಿಷಯದಲ್ಲಿ ರವಿಗೆ ಸಹಾಯ ಮಾಡುತ್ತಿದ್ದಾನೆ. ರೇಖಾಳಿಗೆ ಜೀವನವೇ ಬೇಡ ಎನ್ನುವಷ್ಟು ರೋಸಿ ಹೋಗಿದೆ.
- ಮಂಜು ವರದಕ್ಷಿಣೆ ಕಿರುಕುಳದಿಂದ ಹೈರಾಣಾಗಿದ್ದಾಳೆ. ಎರಡು ಸಲ ಅವಳನ್ನು ಅವಳ ಗಂಡ, ಅತ್ತೆ, ಮಾವ ಮನೆಯಿಂದ ಹೊರಗೆ ಹಾಕಿ ಅವರ ಹಣದ ಬೇಡಿಕೆ ಪೂರೈಸಿದ ನಂತರವೇ ಮನೆಗೆ ಸೇರಿಸಿದ್ದಾರೆ. ಈಗ ಮೂರನೆಯ ಬಾರಿಗೆ ದೊಡ್ಡ ಮೊತ್ತದ ಬೇಡಿಕೆಯೊಂದಿಗೆ ಅವಳನ್ನೂ, ಅವಳ ಮಗುವನ್ನೂ ಹೊರ ಹಾಕಿದ್ದಾರೆ. ಅವಳ ತಂದೆ ತಾಯಿಯರಿಗೂ ಬೇಡಿಕೆಗಳನ್ನು ಈಡೇರಿಸಲು ಸಾಧ್ಯವಿಲ್ಲ. ಮಗಳನ್ನು ಚೆನ್ನಾಗಿ ಓದಿಸದೇ ಮದುವೆ ಮಾಡಿ ತಾವು ತಪ್ಪು ಮಾಡಿದೆವೆಂದು ಕೊರಗುತ್ತಾರೆ. ಈಗಲೂ ಅವಳ ಮಗುವನ್ನು ತಾವು ಸಾಕುತ್ತೇವೆ, ಅವಳು ಮುಂದೆ ಓದಲಿ ಎನ್ನುತ್ತಾರೆ.
- ಸರಳ. ಮದುವೆಯಾಗಿ ಹತ್ತು ವರ್ಷಗಳಾಗಿವೆ. ಎಂಟು ವರ್ಷದ ಮಗಳು ಮತ್ತು ಆರು ವರ್ಷದ ಮಗ ಇದ್ದಾನೆ. ಕಳೆದ ಒಂದು ವರ್ಷದಿಂದ ಅವಳ ಗಂಡ ತನ್ನ ಕಚೇರಿಯಲ್ಲಿ ಕೆಲಸ ಮಾಡುವ ಸಹೋದ್ಯೋಗಿಯೊಂದಿಗೆ ವಿವಾಹೇತರ ಸಂಬಂಧ ಇರಿಸಿಕೊಂಡು ಮನೆಗೂ ಬರುತ್ತಿಲ್ಲ ಮತ್ತು ಆರ್ಥಿಕವಾಗಿಯೂ ಅವಳಿಗೆ ಯಾವ ಸಹಾಯವನ್ನೂ ಮಾಡುತ್ತಿಲ್ಲ. ಮನೆಗೆ ಬಂದಾಗಲೆಲ್ಲ ಅವಳಿಗೆ ಮತ್ತು ಅವಳ ಮಕ್ಕಳಿಗೆ ಹೊಡೆದು ಬಡಿದು ಮಾಡಿ, ಮನೆಯಲ್ಲಿರುವ ಬೆಲೆ ಬಾಳುವ ವಸ್ತುಗಳನ್ನೂ ತನ್ನ ಪ್ರೇಯಸಿಗೆ ಕೊಡಲು ತೆಗೆದುಕೊಂಡು ಹೋಗುತ್ತಾನೆ.
- ಕೌಟುಂಬಿಕ ಹಿಂಸೆಯಿಂದ ಮಹಿಳೆಯರನ್ನು ರಕ್ಷಿಸಲು ಕಾಯ್ದೆಯೊಂದನ್ನು ಭಾರತ ಸರ್ಕಾರ ಜಾರಿಗೆ ತಂದಿದೆ. ಸಂವಿಧಾನದಲ್ಲಿ ಖಾತ್ರಿ ಪಡಿಸಿರುವ ಮಹಿಳೆಯರ ಹಕ್ಕುಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ರಕ್ಷಣೆ ಮಾಡುವುದು ಈ ಕಾಯ್ದೆಯ ಉದ್ದೇಶ. ಕುಟುಂಬಗಳಲ್ಲಿ ನಡೆಯುವ ಯಾವುದೇ ಬಗೆಯ ಹಿಂಸೆಗೊಳಗಾದ ಮಹಿಳೆಯರಿಗೆ ಸಂಬಂಧಿಸಿದಂತೆ, ಹೆಚ್ಚು ಪರಿಣಾಮಕಾರಿಯಾದ ಸಂರಕ್ಷಣೆ ಒದಗಿಸುವುದಕ್ಕಾಗಿ ಭಾರತ ಸರ್ಕಾರವು ಕೌಟುಂಬಿಕ ಹಿಂಸೆಯಿಂದ ಮಹಿಳೆಯರನ್ನು ರಕ್ಷಿಸುವ ಅಧಿನಿಯಮ 2005 ಹಾಗೂ ನಿಯಮ 2006, ಅಕ್ಟೋಬರ್ ಇಪ್ಪತ್ತಾರರಿಂದ ಜಾರಿಗೆ ತಂದಿರುತ್ತದೆ. ಕರ್ನಾಟಕದಲ್ಲಿ ಈ ಕಾಯ್ದೆಯನ್ನು ಜೂನ್ 2007 ರಿಂದ ಅನುಷ್ಠಾನಗೊಳಿಸಲಾಗುತ್ತಿದೆ.
- ಇಲಾಖೆಯಿಂದ ಜಿಲ್ಲಾ ಮಟ್ಟದಲ್ಲಿ ಉಪನಿರ್ದೇಶಕರು, ತಾಲೂಕು ಮಟ್ಟದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳನ್ನು ದೌರ್ಜನ್ಯಕ್ಕೊಳಗಾದ ಮಹಿಳೆಯರನ್ನು ರಕ್ಷಿಸಲು ಸಂರಕ್ಷಣಾಧಿಕಾರಿಗಳೆಂದು ನೇಮಿಸಲಾಗಿದೆ. ಕಾಯ್ದೆಯ ಸಮರ್ಪಕ ಅನುಷ್ಠಾನಕ್ಕಾಗಿ ರಾಜ್ಯ, ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಸಮನ್ವಯ ಸಮಿತಿಗಳನ್ನು ರಚಿಸಲಾಗಿದೆ.
- ರಾಜ್ಯದ ಎಲ್ಲಾ ತಾಲೂಕುಗಳ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಲ್ಲಿ, ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸಹಯೋಗದೊಂದಿಗೆ ಉಚಿತ ಕಾನೂನು ಸಲಹಾ ಕೇಂದ್ರಗಳನ್ನು ದಿನಾಂಕ 26-11-2007 ರಂದು ಸ್ಥಾಪಿಸಲಾಗಿದ್ದು, ಆ ಕೇಂದ್ರಗಳಲ್ಲಿ ನುರಿತ ನ್ಯಾಯವಾದಿಗಳು ಪ್ರತಿ ಬುಧವಾರ ಮತ್ತು ಶನಿವಾರ ಉಚಿತ ಕಾನೂನು ಸಲಹೆಗಳನ್ನು ನೀಡುತ್ತಿದ್ದಾರೆ.
- ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ರಕ್ಷಣೆ, ಸಲಹೆ ಮತ್ತು ಮಾರ್ಗದರ್ಶನ ಒದಗಿಸಲು ರಾಜ್ಯದಲ್ಲಿ ಸ್ವಾಧಾರ ಕೇಂದ್ರಗಳು, ಅಲ್ಪಾವಧಿ ವಸತಿ ಗೃಹಗಳು, ಸಾಂತ್ವನ ಕೇಂದ್ರಗಳನ್ನು ರಕ್ಷಣಾ ಗೃಹಗಳೆಂದು ಅಧಿಸೂಚನೆ ಹೊರಡಿಸಲಾಗಿದ್ದು, ನೊಂದ ಮಹಿಳೆಯರು ಇಲ್ಲಿ ಸಮಾಲೋಚನೆ ಹಾಗೂ ರಕ್ಷಣೆಯನ್ನು ಪಡೆಯಬಹುದಾಗಿದೆ. ಇದಲ್ಲದೆ ನೂರಹದಿನಾರು ಸ್ವಯಂ ಸೇವಾ ಸಂಸ್ಥೆಗಳನ್ನು ನೊಂದ ಮಹಿಳೆಯರಿಗೆ ಕಾನೂನು, ವೈದ್ಯಕೀಯ ಹಾಗೂ ಇತರ ನೆರವು ನೀಡಲು 'ಸೇವಾಸಂಸ್ಥೆಗಳು' ಎಂದು ಅಧಿಸೂಚನೆ ಹೊರಡಿಸಲಾಗಿದೆ.
- ಶಾಲಿನಿ ರಜನೀಶ್, ಐಎಎಸ್
anisikeprabha@gmail.com
anisikeprabha@gmail.com