ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ನೀರು ಕೊಡುವ ಕೊಡಗಿಗೆ ನಾವು ಕೊಟ್ಟಿದ್ದೇನು?

Vishwanath S
Updated On : 31 Jul 2013, 11:55 am

ಕೊಡಗು ಜಿಲ್ಲೆ ತನ್ನ ಕಂಗೊಳಿಸುವ ಹಸಿರಿನಿಂದಾಗಿ ಕರ್ನಾಟಕದ ಕಾಶ್ಮೀರವೆಂದು ಕರೆಸಿಕೊಳ್ಳುತ್ತದೆ. ಆದರೆ ಮಳೆಗಾಲದಲ್ಲಿ ಮಳೆಯ ಅಬ್ಬರದಿಂದ ತತ್ತರಿಸುವ ಅಲ್ಲಿಯ ಜನ, 'ಕಾಶ್ಮೀರ' ಎಂಬ ಕಿರಿಟ ಬೇಡವೇ ಬೇಡ ಎನ್ನುತ್ತಾರೆ! ಒಬ್ಬರಿಗೆ ಕಷ್ಟಬಂದಿದೆ ಎಂದರೆ ಮತ್ತೊಬ್ಬರು ಅದರಿಂದ ಲಾಭ ಪಡೆಯುತ್ತಾರೆ ಎಂಬ ಸಿದ್ಧಾಂತ ಕೊಡಗಿನ ಮಳೆಗಾಲಕ್ಕೂ ಅನ್ವಯವಾಗುತ್ತದೆ.
ಕಳೆದ ಒಂದು ತಿಂಗಳಿನಿಂದಲೂ ಕೊಡಗು ಜಿಲ್ಲೆಯ ಮಡಿಕೇರಿ, ಸೋಮವಾರಪೇಟೆ, ವಿರಾಜಪೇಟೆ, ಭಾಗಮಂಡಲ, ತಲಕಾವೇರಿ, ಅಯ್ಯಂಗೇರಿ, ನಾಪ್ಲೋಕು, ಸಂಪಾಜೆ, ಶ್ರೀಮಂಗಲ, ಪೊನ್ನಂಪೇಟೆ, ಕುಶಾಲನಗರ, ಶನಿವಾರ ಸಂತೆ, ಶಾಂತಹಳ್ಳಿ, ಸುಂಟಿಕೊಪ್ಪ, ಹಾರಂಗಿ ಪ್ರದೇಶಗಳಲ್ಲಿ ಎಡಬಿಡಿದೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ರಸ್ತೆ ಸಂಪರ್ಕವೇ ಕಡಿದು ಹೋಗುವ ಅಪಾಯ ಎದುರಾಗಿದೆ. ವಾಸದ ಮನೆಗಳು, ದನಗಳ ಕೊಟ್ಟಿಗೆಗಳು, ಶಾಲೆಗಳ ಗೋಡೆಗಳು ಅನೇಕ ಕಡೆ ಕುಸಿದಿವೆ. ಜಿಲ್ಲೆಯ ಬಹುತೇಕ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿ ಹೋಗಿವೆ. ಗುಡ್ಡಗಳಿಂದ ಮಣ್ಣು ಕುಸಿಯುತ್ತಿದೆ. ಮುದಿ ಮರಗಳು ಧರಗೆ ಉರುಳುವುದಿರಲಿ ಕೆಲವೊಮ್ಮೆ ಮನೆಗಳ ಮೇಲೂ ಬಿದ್ದಿರುವ ಉದಾಹರಣೆಗಳಿವೆ.
ಹಾಗಂತ ಜಿಲ್ಲಾಡಳಿತವೇನು ಸುಮ್ಮನೆ ಕುಳಿತಿಲ್ಲ. ಸಮರೋಪಾದಿಯಲ್ಲಿ ಪರಿಹಾರ ಕಾರ್ಯಗಳನ್ನು ಮಾಡುತ್ತಿರುವ ಬಗ್ಗೆ ವರದಿಗಳು ಬಂದಿವೆ. ಮಳೆಯಿಂದ ತತ್ತರಿಸಿ, ಸಂಕಷ್ಟದಲ್ಲಿ ಸಿಲುಕಿರುವ ಜನರ ನೆರವಿಗೆ ಜಿಲ್ಲಾ ಮತ್ತು ಆಯಾ ತಾಲೂಕು ಆಡಳಿತ ಧಾವಿಸಿವೆ. ಅಗತ್ಯ ಬಂದರೆ ಗಂಜಿ ಕೇಂದ್ರಗಳನ್ನು, ವಾಸಕ್ಕೆ ತಾತ್ಕಾಲಿಕವಾಗಿ ಶೆಡ್ಡುಗಳನ್ನು ಹಾಕಿ ಕೊಡುತ್ತಾರೆ.
ಎಡಬಿಡದೇ ಸುರಿಯುವ ಮಳೆಯಿಂದಾಗಿ ಶಾಲಾ ಕಾಲೇಜುಗಳು ಬಾಗಿಲು ತೆರೆದು ವಾರಗಳೇ ಗತಿಸಿವೆ. ಮಕ್ಕಳಿಗೆ ಮನೆಯಲ್ಲಿ ಓದಿಕೊಳ್ಳೋಣ ಎಂದರೆ ಅನೇಕ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕವೇ ಕಡಿತಗೊಂಡಿದೆ. ಜನಸಾಮಾನ್ಯರಿಗೆ ಮನೆ ಬಿಟ್ಟು ಹೊರಬರುವುದೇ ಕಷ್ಟವಾಗಿದೆ. ಇನ್ನು ಕೂಲಿ ಮಾಡಿ ಅಂದಿನ, ಅನ್ನವನ್ನು ಅಂದೇ ಗಿಟ್ಟಿಸಿಕೊಳ್ಳುವ ಬಡ ಜನರಿಗಂತೂ ಮಳೆ ರೇಸಿಗೆ ಹಿಡಿಸಿದೆ. ಅಲ್ಲಿ ಬಿದ್ದ ಭಾರಿ ಮಳೆಯ ನೀರಿನಿಂದ ಲಕ್ಷಾಂತರ ಜನರಿಗೆ ಒಂದೆಡೆ ತೊಂದರೆಯಾದರೂ, ಮತ್ತೊಂದೆಡೆ ರಾಜ್ಯದ ಕೋಟ್ಯಂತರ ಜನರ, ರೈತರ ಮತ್ತು ನೆರೆಯ ತಮಿಳುನಾಡು ರೈತರ ಬದುಕು ಆ ನೀರಿನಿಂದಲೇ ಹಸನವಾಗುತ್ತದೆ ಎಂದರೆ ಎಂತಹ ವಿಡಂಬನೆ!
ಕೊಡಗಿನಲ್ಲಿ ಭಾರಿ ಮಳೆ ಬಿದ್ದರೆ ಮಾತ್ರ ಕಾವೇರಿ ನದಿ ತುಂಬಿ ಹರಿಯುತ್ತದೆ. ಮಂಡ್ಯ, ಮೈಸೂರು, ಚನ್ನಪಟ್ಟಣ ಕೆರೆ-ಕಟ್ಟೆಗಳು ಭರ್ತಿಯಾಗುತ್ತವೆ. ಕಬ್ಬು, ಬತ್ತದ ಬೆಳೆ ಸಮೃದ್ಧವಾಗುತ್ತದೆ. ಮೈಸೂರು, ಮಂಡ್ಯ, ಕನಕಪುರ, ರಾಮನಗರ, ಚನ್ನಪಟ್ಟಣ ಮತ್ತು ಬೆಂಗಳೂರಿನ ಕೋಟಿ ಜನರಿಗೆ ವರ್ಷವಿಡೀ ಯಾವುದೇ ತೊಂದರೆ ಇಲ್ಲದೇ ಕುಡಿಯಲು ನೀರು ಸಿಗುತ್ತದೆ. ಎಲ್ಲದಕ್ಕಿಂತಲೂ ಹೆಚ್ಚಾಗಿ ತಮಿಳುನಾಡಿನವರು ಕಾಲು ಕೆದರಿ ಕಾವೇರಿ ನೀರು ಬಿಡುವಂತೆ ತಗಾದೆ ಮಾಡುವುದೂ ತಪ್ಪುತ್ತದೆ. ಕೊಡಗಿನವರು ಮಳೆಯಿಂದ ಕಷ್ಟಗಳೆದುರಿಸಿದರೆ ಇಷ್ಟೆಲ್ಲಾ ಅನುಕೂಲಗಳು ಮೈಸೂರು, ಮಂಡ್ಯ, ಬೆಂಗಳೂರಿನ ಭಾಗದವರಿಗೆ ಸಿಗುತ್ತದೆ. ಆದರೆ ಇಷ್ಟೆಲ್ಲಾ ಉಪಕಾರವನ್ನು ಪಡೆದೂ ನಾವುಗಳು ಕೊಡಗಿನವರ ಕಷ್ಟಗಳಿಗೆ, ಆ ಜಿಲ್ಲೆಯ ಅಭಿವೃದ್ಧಿಗೆ ಒಂದಷ್ಟಾದರೂ ಸ್ಪಂದಿಸಿದ್ದೇವೆಯೇ? ಇದರ ಬಗ್ಗೆ ಒಂದು ಸಾರಿ ಆತ್ಮಾಲೋಕನ ಮಾಡಿಕೊಂಡರೆ ನಾವೆಲ್ಲ ಕೃತಜ್ಞರ ಸಾಲಿನಲ್ಲಿ ನಿಲ್ಲಬಹುದು!
ಪ್ರಕೃತಿ ದತ್ತವಾಗಿ ಕೊಡಗಿನ ಭಾಗದಲ್ಲಿ ಮಳೆ ಬರುತ್ತದೆ ನಿಜ. ಆದರೆ ಆ ಜಿಲ್ಲೆಯ ಅಭಿವೃದ್ಧಿ, ಪ್ರಗತಿಗೆ ಮಾರಕವಾಗಿ, ಜನರ, ರೈತಾಪಿ ವರ್ಗದ ಬದುಕಿಗೆ ಪ್ರತಿ ವರ್ಷದ ಮಳೆಯು ದುರಂತ ಅಧ್ಯಾಯವನ್ನು ಬರೆಯುತ್ತಲೇ ಇದೆ. ಹೀಗಾಗಿ, ಕೊಡಗು ಜಿಲ್ಲೆಯಲ್ಲಿ ಬೀಳುವ ಮಳೆಯಿಂದ ಸಮೃದ್ಧಿಯನ್ನು ಪಡೆದುಕೊಂಡ ಮಂಡ್ಯ, ಮೈಸೂರು, ಬೆಂಗಳೂರಿನ ಜನರಿಗೆ ಹಾಗೂ ಆಡಳಿತ ವ್ಯವಸ್ಥೆಗಳಿಗೆ ಕೊಡಗಿನ ಅಭಿವೃದ್ಧಿಗೆ ಅಥವಾ ಅಲ್ಲಿನ ಹಳ್ಳಿಗಳ ಜನರ ಸಂಕಷ್ಟಕ್ಕೆ ಸ್ಪಂದಿಸಲು ಸಾದ್ಯವಿಲ್ಲವೇ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ.
ಬೆಂಗಳೂರಿನಲ್ಲಿ ಕೋಟಿಗಟ್ಟಲೆ ಜನರು ಕಾವೇರಿ ನೀರು ಬಳಕೆ ಮಾಡಿಕೊಂಡು ಬದುಕುತ್ತಾರೆ. ಇದರಿಂದ ಜಲ ಮಂಡಳಿಗೆ ಲೆಕ್ಕವಿಲ್ಲದಷ್ಟು ಆದಾಯವೂ ಇದೆ. ಬಿಬಿಎಂಪಿ 9000 ಕೋಟಿ ಬಜೆಟ್ ಮಂಡಿಸಿ ಬೆಂಗಳೂರನ್ನು ಮಾತ್ರ ಅಭಿವೃದ್ಧಿ ಪಥದತ್ತ ಕರೆದೊಯ್ಯುತ್ತದೆ. ಬೆಂಗಳೂರು ಅಭಿವೃದ್ಧಿಗೆ ಕಾವೇರಿ ನೀರಿನ ಕೊಡುಗೆ ಇಲ್ಲ ಎನ್ನುವ ಹಾಗಿಲ್ಲ. ಆದರೆ, ಕೊಡಗಿನಲ್ಲಿ ಎಷ್ಟೇ ಮಳೆ ಸುರಿದರೂ ಸಹಿಸಿಕೊಂಡಿರುವ ಆ ಜಿಲ್ಲೆಯ ಜನರ ಭಾವನೆಗಳಿಗೆ ಸ್ಪಂದಿಸಲೇಕೆ ಸಾಧ್ಯವಾಗುತ್ತಿಲ್ಲ? ಜಲ ಮಂಡಳಿ ಹಾಗೂ ಬಿಬಿಎಂಪಿಯವರು ಜಂಟಿಯಾಗಿ ಸೇರಿಕೊಂಡು ಕೊಡಗಿನ ಕನಿಷ್ಠ 200 ಹಳ್ಳಿಗಳನ್ನಾದರೂ ದತ್ತು ಪಡೆದು ಪ್ರತಿವರ್ಷ ಮಳೆಗಾಲ ಮುಗಿದ ನಂತರ ಸಮಗ್ರವಾಗಿ ಅಭಿವೃದ್ಧಿ ಪಡಿಸಲಿ. ರಸ್ತೆ, ವಿದ್ಯುತ್ ಸಂಪರ್ಕ, ಶಾಲಾ ಕಟ್ಟಡಗಳ ಪುನರ್ ನಿರ್ಮಾಣ, ಒಡೆದು ಹೋಗುವ ಕುಡಿಯುವ ನೀರಿನ ಪೈಪ್‌ಗಳ ರಿಪೇರಿ... ಹೀಗೆ ಕೊಡಗಿನ ನೂರಾರು ಹಳ್ಳಿಗಳಿಗೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸಿದರೆ ತಪ್ಪೇನು?
ಇನ್ನು ಮಂಡ್ಯ, ಮೈಸೂರಿನ ಕಥೆ ಬಿಡಿ. ಮಂಡ್ಯ, ಮೈಸೂರಿನಲ್ಲಿ 2.50 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಕಬ್ಬು, ಬತ್ತ ಸೇರಿದಂತೆ ಸಾಕಷ್ಟು ವಿವಿಧ ಬೆಳೆಗಳನ್ನು ಬೆಳೆಯಲಾಗುತ್ತದೆ. ಮಂಡ್ಯದಲ್ಲಿ 5 ಸಕ್ಕರೆ ಕಾರ್ಖಾನೆಗಳಿವೆ. ಎರಡು ಕಾರ್ಖಾನೆಗಳನ್ನು ಹೊರತುಪಡಿಸಿ ಉಳಿದ ಮೂರು ಕಾರ್ಖಾನೆಗಳು ಸಾಕಷ್ಟು ಲಾಭದಲ್ಲಿವೆ. ಅಂದಾಜು 85 ಲಕ್ಷ ಟನ್ ಕಬ್ಬು ಬೆಳೆಯಲಾಗುತ್ತದೆ. ವರ್ಷಕ್ಕೆ ಸಾವಿರಾರು ಕೋಟಿ ರು. ವಹಿವಾಟು ನಡೆಯುತ್ತದೆ. ಇದೆಲ್ಲವೂ ಕಾವೇರಿ ಮಾತೆಯ ಕೃಪೆ. ಕೊಡಗಿನ ಜನರ ತ್ಯಾಗದಿಂದಲೇ ಸಾಧ್ಯವಾಗಿದ್ದು.
ಕೊಡಗಿನವರು ಮಳೆ ಸುರಿಸುವುದಿಲ್ಲ ಎಂಬುದು ಎಲ್ಲರಿಗೂ ಗೊತ್ತು ಸ್ವಾಮಿ. ಆದರೆ, ಪ್ರಕೃತಿ ದತ್ತವಾಗಿ ಸುರಿಯುವ ಮಳೆಯನ್ನು ಸಹಿಸಿಕೊಳ್ಳುವುದು ಕೂಡ ಒಂದು ತಪಸ್ಸು ಎನ್ನುವುದನ್ನು ನಾವು ಮರೆಯಬಾರದು. ಹೀಗಾಗಿ, ಮಂಡ್ಯ, ಮೈಸೂರಿನ ಜನ, ರೈತರು, ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿಗಳು ಹಾಗೂ ಆಯಾ ಜಿಲ್ಲಾ ಆಡಳಿತಗಳು ಕೊಡಗಿನ ಅಭಿವೃದ್ಧಿಗೆ, ಅಲ್ಲಿನ ಜನರ ಕಷ್ಟಕ್ಕೆ, ಸಮಸ್ಯೆಗೆ ಕೊಂಚವಾದರೂ ಆರ್ಥಿಕವಾಗಿ ಪರಿಹಾರದ ರೂಪದಲ್ಲಿ ನೆರವು ನೀಡುವ ಮನಸ್ಸು ಮಾಡಬೇಕು. ಯಾವುದೋ ದೂರದ ರಾಜ್ಯದಲ್ಲಿ ನೆರೆ ಹಾವಳಿಗೆ ಕೋಟಿಗಟ್ಟಲೆ ದಾನ ಮಾಡುವವರು ನೆರೆಯ ಜಿಲ್ಲೆಯಲ್ಲಿ ಮಳೆಯಿಂದಾಗಿ ಬದುಕನ್ನೇ ಕಳೆದುಕೊಂಡಾಗ ಅವರೆಲ್ಲರ ಬದುಕು ರೂಪಿಸಲು ಮುಂದಾಗಬಾರದೆ? ಮಂಡ್ಯ-ಮೈಸೂರಿನವರು ಕಾವೇರಿ ನೀರಿನಿಂದ ಸಾಕಷ್ಟು ಲಾಭ ಪಡೆಯುತ್ತಾರೆ. ಯಾರೂ ನೀರಿಗೆ (ಕುಡಿಯುವ ನೀರು ಬಿಟ್ಟು) ತೆರಿಗೆ ಕಟ್ಟಿದ ಉದಾಹರಣೆಯೇ ಇಲ್ಲ. ಹೀಗಾಗಿ, ತಮ್ಮ ಆದಾಯದಲ್ಲಿ ಕೇವಲ ಶೇ.1 ಅಥವಾ 2ರಷ್ಟು ಲಾಭದ ಭಾಗವನ್ನು ಪ್ರತಿ ವರ್ಷ ಕೊಡಗು ಜಿಲ್ಲೆಯ ಅಭಿವೃದ್ಧಿಗಾಗಿ ಅಲ್ಲಿನ ಜಿಲ್ಲಾಡಳಿತಕ್ಕೆ ನೀಡಿದರೆ, ಸರ್ಕಾರಕ್ಕೂ ನೆರವಾದಂತಾಗುತ್ತದೆ. ಕೊಡಗು ಜಿಲ್ಲೆಯು ಬೇಸಿಗೆ ಸಮಯದಲ್ಲಿ ಮಾತ್ರ ಕರ್ನಾಟಕದ ಕಾಶ್ಮೀರ. ಮಳೆಗಾಲದಲ್ಲಿ ಆ ಜಿಲ್ಲೆಗೆ ಯಾರೂ ಹೋಗುವುದಿಲ್ಲ!
ಕೃತಜ್ಞತೆ ಎನ್ನುವ ಪದಕ್ಕೆ ವಿಶಾಲ ಅರ್ಥವಿದೆ. ಮಂಡ್ಯ, ಮೈಸೂರು, ಬೆಂಗಳೂರಿನ ಜನ, ರೈತರು ಮತ್ತು ಆಡಳಿತ ವ್ಯವಸ್ಥೆಗಳು ಕೃತಜ್ಞತೆಯಿಂದ ಕೊಡಗಿನವರನ್ನು ಕೊಂಡಾಡುವುದಕ್ಕಿಂತ ತಮ್ಮ ಆದಾಯದಲ್ಲಿ ಬರುವ ಲಾಭಾಂಶದಲ್ಲಿ ಕನಿಷ್ಠ ಕೆಲವು ಭಾಗವನ್ನು ನೀಡುವುದರ ಮೂಲಕ ಆ ಜಿಲ್ಲೆಯ ಪ್ರಗತಿಗೆ ಹಾಗೂ ಜನರ ಕಷ್ಟ, ನಷ್ಟಗಳಿಗೆ ಸ್ಪಂದಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು.
ಇನ್ನು ಕೊಡಗು ಜಿಲ್ಲೆಯ ಉಸ್ತುವಾರಿ ಮಂತ್ರಿ ಡಾ. ಎಚ್.ಸಿ. ಮಹದೇವಪ್ಪ ಅವರು ಇದುವರೆಗೂ ಜಿಲ್ಲೆಗೆ ಭೇಟಿ ನೀಡಿಲ್ಲ. ಮಳೆಯಿಂದಾಗಿರುವ ಅವಾಂತರ, ಜನರ ಸಮಸ್ಯೆಗಳ ಪರಿಹಾರದ ಕ್ರಮಗಳ ಬಗ್ಗೆ ಕುಳಿತು ಚರ್ಚೆ ಮಾಡಿಲ್ಲ. ಜನರಿಗೆ ಧೈರ್ಯ ತುಂಬುವ ಕೆಲಸ ಮಾಡಿಲ್ಲ. ರಾಜ್ಯ ಸರ್ಕಾರ ಕೊಡಗು ಜಿಲ್ಲೆಗಾಗಿ ಪ್ರತ್ಯೇಕ ಪ್ಯಾಕೇಜ್ ಘೋಷಣೆ ಮಾಡಬೇಕು. ರಸ್ತೆ, ಕಟ್ಟಡಗಳು, ಜನರಿಗೆ ಪುನರ್ ವಸತಿ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ನಿರಂತರವಾಗಿ ನೀಡಬೇಕು. ಇಲ್ಲದೇ ಹೋದರೆ ಪ್ರತ್ಯೇಕ ರಾಜ್ಯದ ಕೂಗು ಹಾಕಲು ಸರ್ಕಾರವೇ ಗಂಟಲು ನೀಡಿದಂತಾಗುತ್ತದೆ!

- ಕೆ.ಎನ್. ರವಿ, ಕನ್ನಡಪ್ರಭ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement