ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಜವಾಬ್ದಾರಿ ವಹಿಸಿದ ಮೇಲೆ ಅದನ್ನು ನಿರ್ವಹಿಸಲೇಬೇಕು

ವಿಧಾನಸಭಾಧ್ಯಕ್ಷರ ಸ್ಥಾನವನ್ನು ವೈಭವೀಕರಿಸುವವರಿಗೇನೂ ಕಮ್ಮಿ ಇಲ್ಲ...

Rashmi Kasaragodu
Updated On : 2 Jun 2013, 1:26 am

ವಿಧಾನಸಭಾಧ್ಯಕ್ಷರ ಸ್ಥಾನವನ್ನು ವೈಭವೀಕರಿಸುವವರಿಗೇನೂ ಕಮ್ಮಿ ಇಲ್ಲ. ಆದರೆ, ಆಡಳಿತ ಪಕ್ಷದಲ್ಲಿ ಯಾರೂ ಆ ಹುದ್ದೆ ಬಯಸುವುದಿಲ್ಲ. ಅದೇ ರೀತಿ ಈ ಬಾರಿಯೂ ಆಗಿದೆ. ಪಕ್ಷದ ನಿರ್ಧಾರದಂತೆ ಕಾಂಗ್ರೆಸ್‌ನ ಹಿರಿಯ ಸದಸ್ಯ ಕಾಗೋಡು ತಿಮ್ಮಪ್ಪ ಅವರು ಅಧ್ಯಕ್ಷರ ಹುದ್ದೆ ಅಲಂಕರಿಸಿದ್ದಾರೆ. ವಹಿಸಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಬೇಕು. ನಿಯಮಾವಳಿ ಪ್ರಕಾರ ಕಲಾಪ ನಡೆಸಿ ವಿಧಾನಸಭೆಯನ್ನು ಮಾದರಿಯನ್ನಾಗಿ ರೂಪಿಸಬೇಕು ಎಂಬುದು ಅವರ ಮಹತ್ವಾಕಾಂಕ್ಷೆ. ಈ ಕುರಿತಂತೆ 'ಕನ್ನಡಪ್ರಭ'ಕ್ಕೆ ನೀಡಿದ ಸಂದರ್ಶನದಲ್ಲಿ ಕಾಗೋಡು ತಿಮ್ಮಪ್ಪ ಅವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.



-    ಸಚಿವ ಸ್ಥಾನ ಬಯಸಿದ್ದ ನೀವು ಸ್ಪೀಕರ್ ಆಗಿದ್ದೀರಿ. ಈ ಬಗ್ಗೆ ಬೇಸರವಿಲ್ಲವೇ?
ಹೌದು, ಸ್ಪೀಕರ್ ಸ್ಥಾನ ಬಯಸಿರಲಿಲ್ಲ. ಆದರೆ, ಕಾಂಗ್ರೆಸ್ ಪಕ್ಷದ ಒಬ್ಬ ಕಾರ್ಯಕರ್ತನಾಗಿ ಕೊಟ್ಟ ಜವಾಬ್ದಾರಿಯನ್ನು ವಹಿಸಿಕೊಂಡು ಕೆಲಸ ಮಾಡಬೇಕು. ಹೀಗಾಗಿ ಯಾವುದೇ ಬೇಸರ ಅಥವಾ ಅಸಮಾಧಾನ ಇಲ್ಲದೆ ಸ್ಪೀಕರ್ ಸ್ಥಾನ ಒಪ್ಪಿಕೊಂಡು ಕೆಲಸ ನಿರ್ವಹಿಸುತ್ತೇನೆ. ಯಾವುದೇ ಕೆಲಸ ಕೊಟ್ಟರೂ ಅದನ್ನು ಪರಿಣಾಮಕಾರಿಯಾಗಿ ಮಾಡುವುದು ನನ್ನ ಸ್ವಭಾವ. ಹೀಗಾಗಿಯೇ ಹಿಂದೆ ನನಗೆ ವಹಿಸಿಕೊಟ್ಟ ಖಾತೆಗಳಲ್ಲಿ ಒಳ್ಳೆಯ ಕೆಲಸ ಮಾಡಲು ಸಾಧ್ಯವಾಯಿತು. ಈ ಬಾರಿಯೂ ಅಂತಹ ಕೆಲಸ ಮಾಡಬೇಕು ಎಂಬ ಇಚ್ಛೆ ಇತ್ತು. ಆದರೆ, ಸಭಾಧ್ಯಕ್ಷರ ಜವಾಬ್ದಾರಿ ಕೊಟ್ಟಿದ್ದಾರೆ. ಈ ಸ್ಥಾನದ ಇತಿಮಿತಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ.

-    ಸಭಾಧ್ಯಕ್ಷರ ಹುದ್ದೆ ಉನ್ನತವಾದದ್ದು ಎಂದು ಎಲ್ಲರೂ ಹೇಳುತ್ತಾರೆ. ಆದರೆ, ಯಾರೂ ಅದನ್ನು ವಹಿಸಿಕೊಳ್ಳಲು ಸಿದ್ಧವಿರುವುದಿಲ್ಲ ಏಕೆ?
ಒಮ್ಮೆ ಸ್ಪೀಕರ್ ಹುದ್ದೆ ಅಲಂಕರಿಸಿದರೆ ನಾಲ್ಕು ಗೋಡೆಗಳ ಮಧ್ಯೆ ಕೆಲಸ ಮಾಡಬೇಕಾಗುತ್ತದೆ. ಸಕ್ರಿಯ ರಾಜಕಾರಣದಲ್ಲಿರಲು ಸಾಧ್ಯವಿರುವುದಿಲ್ಲ. ಹೀಗಾಗಿ ಕೆಲವರು ಈ ಸ್ಥಾನ ಬೇಡ ಎಂದು ಹೇಳುತ್ತಿರಬಹುದು. ಆದರೆ, ಜವಾಬ್ದಾರಿ ವಹಿಸಿದ ಮೇಲೆ ಅದನ್ನು ನಿರ್ವಹಿಸಲೇಬೇಕು.

-    ಸಕ್ರಿಯ ರಾಜಕಾರಣದಿಂದ ದೂರವಾಗುತ್ತಿರುವ ಬಗ್ಗೆ ಮತ್ತು ಕ್ಷೇತ್ರದ ಅಭಿವೃದ್ಧಿ ಬಗ್ಗೆ ನಿಮ್ಮ ಅಭಿಪ್ರಾಯವೇನು?
ರಾಜಕಾರಣಿಯಾದವನು ಯಾವತ್ತೂ ಸಕ್ರಿಯ ರಾಜಕಾರಣದಲ್ಲಿರಬೇಕು ಎಂದು ಬಯಸುತ್ತಾನೆ. ಆದರೆ, ಸ್ಪೀಕರ್ ಸ್ಥಾನ ವಹಿಸಿಕೊಂಡಿದ್ದರಿಂದ ಅದು ಸಾಧ್ಯವಿಲ್ಲ ಎಂಬುದು ಗೊತ್ತು. ಆದ್ದರಿಂದ ರಾಜಕೀಯ ಪಕ್ಷದ ವೇದಿಕೆಯಲ್ಲಿ ನಾನು ಭಾಗವಹಿಸುವುದಿಲ್ಲ. ಹಾಗೆಂದು ಈ ಬಗ್ಗೆ ನನಗೆ ಬೇಸರವೇನೂ ಇಲ್ಲ. ಏಕೆಂದರೆ, ಈ ಹುದ್ದೆಯಿಂದಾಗಿ ಕ್ಷೇತ್ರದ ಅಭಿವೃದ್ಧಿಗೇನೂ ಧಕ್ಕೆಯಾಗುವುದಿಲ್ಲ. ಜತೆಗೆ ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಈ ಸ್ಥಾನದಲ್ಲಿ ಕುಳಿತು ಬೆಳಕು ಚೆಲ್ಲಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಬಹುದು. ಆ ಮೂಲಕ ಜನರಿಗೆ ಒಳ್ಳೆಯದನ್ನು ಮಾಡಲು ಅವಕಾಶವಿದೆ. ಆದರೆ, ಕೆಲಸ ಮಾಡಬೇಕು ಎಂಬ ಮನಸ್ಥಿತಿ ಇರಬೇಕಷ್ಟೆ. ನನಗೆ ಆ ಮನಸ್ಥಿತಿ ಇದೆ.

-    ಹಿಂದಿನ ಸರ್ಕಾರದ ಅವಧಿಯಲ್ಲಿ ಸ್ಪೀಕರ್ ಸ್ಥಾನ ಎಂದರೆ ಅದು ವಿವಾದಗಳ ಕೇಂದ್ರಬಿಂದು ಎನ್ನುವಂತಾಗಿತ್ತು. ಈ ಕಳಂಕವನ್ನು ಹೇಗೆ ದೂರ ಮಾಡುತ್ತೀರಿ?
ಹಿಂದೆ ಏನಾಗಿದೆ ಎಂಬ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಮುಂದೆ ಈ ಸ್ಥಾನದ ಬಗ್ಗೆ ವಿಶ್ವಾಸ ಬರುವ ರೀತಿಯಲ್ಲಿ ಕೆಲಸ ಮಾಡುತ್ತೇನೆ. ಇದೇನೂ ಕಷ್ಟದ ಕೆಲಸ ಅನಿಸುತ್ತಿಲ್ಲ. ಸದಸ್ಯರ ವಿಶ್ವಾಸ ಗಳಿಸಿ, ಅವರ ಸಹಕಾರದಿಂದ ಸುಲಭವಾಗಿ ಸದನವನ್ನು ನಿರ್ವಹಣೆ ಮಾಡಬಹುದು.

-    ಇತ್ತೀಚಿನ ದಿನಗಳಲ್ಲಿ ಸದನದ ಘನತೆ, ಗೌರವ ಮಣ್ಣುಪಾಲಾಗುತ್ತಿದೆ ಎಂಬ ಆರೋಪ ಸಾಮಾನ್ಯವಾಗಿದೆಯಲ್ಲಾ?
ಸಾಮಾನ್ಯವಾಗಿ ಕೇಳಿಬರುವ ಮಾತುಗಳನ್ನು ನಾನು ಕೇಳುವುದಿಲ್ಲ. ರಾಜ್ಯ ವಿಧಾನಸಭೆ ಮಾದರಿಯಾಗಿರಬೇಕು ಎಂಬುದು ನನ್ನ ಇಚ್ಛೆ. ಅದಕ್ಕಾಗಿ ಒಬ್ಬ ಸ್ಪೀಕರ್ ಆಗಿ ಏನೇನು ಪ್ರಯತ್ನಗಳನ್ನು ಮಾಡಬೇಕೋ, ಅದನ್ನು ಖಂಡಿತವಾಗಿ ಮಾಡುತ್ತೇನೆ.

-    ಅದಕ್ಕಾಗಿ ನೀವು ಏನು ಕಾರ್ಯಕ್ರಮಗಳನ್ನು ರೂಪಿಸಿದ್ದೀರಿ?
ಹೊಸಬರಿಗೆ ತರಬೇತಿ ಕಾರ್ಯಕ್ರಮಗಳ್ನು ಹಮ್ಮಿಕೊಳ್ಳಲಾಗುವುದು. ಅದೇ ರೀತಿ ಎಲ್ಲಾ ಸದಸ್ಯರು ಕಲಾಪದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಈ ನಿಟ್ಟಿನಲ್ಲಿ ಅವರ ಮನಃ ಪರಿವರ್ತನೆ ಮಾಡಲು ಪ್ರಯತ್ನಿಸಲಾಗುವುದು.

-    ಸದನ ಎಂದರೆ ಗದ್ದಲ, ಕಿತ್ತಾಟ, ಜಗಳ... ಎಲ್ಲವೂ ಕಣ್ಣಮುಂದೆ ಬರುವ ಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ನಿಮ್ಮ ಅಭಿಪ್ರಾಯವೇನು?
ಸದನದಲ್ಲಿ ವಿನಾ ಕಾರಣ ಗದ್ದಲ ಉಂಟಾಗದಂತೆ ನೋಡಿಕೊಳ್ಳಲಾಗುವುದು. ಸದನ ಇರುವುದೇ ಚರ್ಚೆ ಮಾಡಲು. ಎಲ್ಲಾ ವಿಷಗಳ ಬಗ್ಗೆ ಚರ್ಚಿಸಲು ಸಂಬಂಧಪಟ್ಟ ನಿಯಮಗಳಿವೆ. ಈ ನಿಯಮಗಳಡಿ ಸಮಗ್ರ ಚರ್ಚೆಗೆ ಅವಕಾಶ ಮಾಡಿಕೊಡಲಾಗುವುದು. ಚರ್ಚೆ ನಂತರ ಸರ್ಕಾರ ಉತ್ತರ ನೀಡುತ್ತದೆ. ಅದು ಸಮಾಧಾನವಾದರೆ ಸದಸ್ಯರು ಸುಮ್ಮನಾಗುತ್ತಾರೆ. ಇಲ್ಲವಾದರೆ ನಿಯಮಾವಳಿಯೊಳಗೆ ಅವರಿಗೆ ಬೇಕಾದ ರೀತಿ ನಡೆದುಕೊಳ್ಳಲು ಅವಕಾಶವಿದೆ. ಆದರೆ, ನಿಯಮ ಮೀರಿ ಸದಸ್ಯರು ಸದನದೊಳಗೆ ವರ್ತಿಸಲು ಅವಕಾಶ ನೀಡುವುದಿಲ್ಲ.

-    ಶಾಸಕರು ಸರಿಯಾಗಿ ಸದನಕ್ಕೆ ಆಗಮಿಸುವುದಿಲ್ಲ. ಸಹಿ ಹಾಕಿ ವಾಪಸ್ ಹೋಗುತ್ತಾರೆ. ಚರ್ಚೆಗಳಲ್ಲಿ ಪಾಲ್ಗೊಳ್ಳುವುದಿಲ್ಲ ಎಂಬ ಆರೋಪಗಳು ಹೆಚ್ಚಾಗುತ್ತಿರುವುದೇಕೆ?
ಈ ಆರೋಪಗಳಲ್ಲಿ ನಿಜವಿದೆ. ವರ್ಷಪೂರ್ತಿ ಸದನ ನಡೆಯುವುದಿಲ್ಲ. ಕೆಲವೇ ದಿನಗಳು ಮಾತ್ರ ನಡೆಯುವುದರಿಂದ ಕಲಾಪದಲ್ಲಿ ಪಾಲ್ಗೊಳ್ಳುವುದು ಸದಸ್ಯರಿಗೆ ಕಷ್ಟವಲ್ಲ. ಜನ ಅವರನ್ನು ಆರಿಸಿ ಕಳುಹಿಸುವುದೇ ಸದನದಲ್ಲಿ ತಮ್ಮ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿ ಅದಕ್ಕೆ ಪರಿಹಾರ ಕೊಡಿಸಿ ಎಂದು. ಹೀಗಾಗಿ ಸದಸ್ಯರು ತಮ್ಮ ಜವಾಬ್ದಾರಿ ಅರಿತು ಕಲಾಪದಲ್ಲಿ ಪಾಲ್ಗೊಳ್ಳುವ, ಉತ್ತಮ ಚರ್ಚೆ ನಡೆಸುವ ಸಂಸ್ಕೃತಿ ಬೆಳೆಸಿಕೊಳ್ಳಬೇಕು. ಸದನದ ಪ್ರಾಮುಖ್ಯತೆಯನ್ನು ಅವರು ಅರ್ಥ ಮಾಡಿಕೊಳ್ಳಬೇಕು.

-    ಈ ಆರೋಪ ಹೋಗಲಾಡಿಸಲು ಏನು ಕ್ರಮ ಕೈಗೊಳ್ಳುತ್ತೀರಿ?
ಇದೆಲ್ಲವೂ ಹೇಳಿಕೊಡುವ ವಿಷಯವಲ್ಲ. ಅವರಾಗಿಯೇ ಅರಿತು ನಡೆದುಕೊಳ್ಳಬೇಕು. ಸದನದಲ್ಲಿ ನಾನು ಇರಬೇಕು ಎಂಬ ಭಾವನೆ ಅವರಲ್ಲೇ ಬರಬೇಕು. ಆದರೆ, ಇದುವರೆಗೆ ಕೆಲವು ಸದಸ್ಯರಲ್ಲಿ ಆ ಮನೋಭಾವ ಬಾರದೇ ಇರುವುದು ದುಖಃದ ವಿಚಾರ. ಚರ್ಚೆಯಲ್ಲಿ ಪಾಲ್ಗೊಳ್ಳುವ, ವಿಷಯಗಳನ್ನು ಅರಿತುಕೊಳ್ಳುವ ತಾಳ್ಮೆಯಾದರೂ ಶಾಸನಸಭೆಗೆ ಬಂದವನಿಗೆ ಇರಬೇಕು.

-    ಸದನದಲ್ಲಿ ನಡೆಯುವ ಚರ್ಚೆಗಳು ದಾರಿ ತಪ್ಪುತ್ತಿರುವ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಶಾಸನ ಸಭೆ ಎನ್ನುವುದು ಜನರ ಕೈಗನ್ನಡಿ ಎಂದು ಲೋಹಿಯಾ ಹೇಳುತ್ತಿದ್ದರು. ಅದೇ ಮಾತನ್ನು ಸಭಾಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲೂ ಹೇಳಿದ್ದೆ. ಸದನ ಇರುವುದು ವಿಚಾರಗಳ ಬಗ್ಗೆ ಚರ್ಚೆ ಮಾಡಲೇ ಹೊರತು ಕಾಫಿ ಕುಡಿಯಲು ಅಲ್ಲ. ಇದನ್ನು ಅರಿತು ಸದಸ್ಯರು ಕಲಾಪದಲ್ಲಿ ಪಾಲ್ಗೊಳ್ಳಬೇಕಾಗಿದೆ. ಇಲ್ಲದೇ ಇದ್ದರೆ ನಿಯಮಾವಳಿಯಡಿ ಅವರನ್ನು ಸರಿದಾರಿಗೆ ತರಬೇಕಾಗುತ್ತದೆ. ಇದಕ್ಕೂ ಸಿದ್ಧನಾಗಿ ಜವಾಬ್ದಾರಿ ನಿರ್ವಹಿಸುತ್ತೇನೆ.

-    ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರಿಗೆ ನಿಮ್ಮ ಕಿವಿಮಾತೇನು?
ಸದನದ ಕಲಾಪಗಳು ಸುಗಮವಾಗಿ ನಡೆಯಲು ಸಹಕರಿಸಿ. ಎಲ್ಲಾ ವಿಷಯಗಳ ಬಗ್ಗೆ ಉತ್ತಮ ಚರ್ಚೆಗೆ ಅವಕಾಶ ಮಾಡಿಕೊಡಿ. ಈ ಮೂಲಕ ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಿ. ಅದನ್ನು ಬಿಟ್ಟು ವಿನಾ ಕಾರಣ ರಾಜಕಾರಣ ಬೇಡ. ಇದರಿಂದ ಆಡಳಿತ ಪಕ್ಷಕ್ಕಾಗಲೀ, ಪ್ರತಿಪಕ್ಷಗಳಿಗಾಗಲೀ ಯಾವುದೇ ಲಾಭವಿಲ್ಲ. ಬದಲು ಜನರಿಗೆ ಸಮಸ್ಯೆ ಹೆಚ್ಚಾಗುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಸದನದಲ್ಲಿ ವ್ಯವಹರಿಸಬೇಕು.

-    ಸ್ಪೀಕರ್ ಆಗಿ ನಿಮ್ಮ ಮುಂದಿನ ನಡವಳಿಕೆ ಹೇಗಿರುತ್ತದೆ?

ಹಿಂದಿನವರು ಹಾಕಿಕೊಟ್ಟ ಮೇಲ್ಪಂಕ್ತಿ ಮೇಲೆ ಶಾಸಕಾಂಗದ ಘನತೆಯನ್ನು ಎತ್ತಿಹಿಡಿಯುವುದು ನನ್ನ ಸಂಕಲ್ಪ. ಈ ಸಂಕಲ್ಪವನ್ನು ಎಲ್ಲಾ ಸದಸ್ಯರ ವಿಶ್ವಾಸ ಮತ್ತು ಸಹಕಾರದೊಂದಿಗೆ ನೆರವೇರಿಸುತ್ತೇನೆ ಎಂಬ ಧೈರ್ಯ ಮತ್ತು ಭರವಸೆ ಇದೆ. ಸಮನ್ವಯದಿಂದ ಈ ಸಾಧನೆಯನ್ನು ಮಾಡಿ ತೋರಿಸುತ್ತೇನೆ.


- ಪ್ರದೀಪ್ ಕುಮಾರ್ ಎಂ., ಕನ್ನಡಪ್ರಭ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement