ಪ್ರಶ್ನೆ ಕೇಳಿದಾಗ ಮಾತ್ರ ಸೂಕ್ತ ಉತ್ತರ ದೊರೆಯುತ್ತದೆ!
ಈಗ ಸವದತ್ತಿ ತಾಲೂಕಿನ ಕರೀಕಟ್ಟಿ ಗ್ರಾಮದಲ್ಲಿ ನಡೆದ ಸಭೆ ಮತ್ತು ವಾಸ್ತವ್ಯದ ಅನುಭವವನ್ನು ನಿಮ್ಮೊಡನೆ ಹಂಚಿಕೊಳ್ಳುತ್ತೇನೆ.
ಈಗ ಸವದತ್ತಿ ತಾಲೂಕಿನ ಕರೀಕಟ್ಟಿ ಗ್ರಾಮದಲ್ಲಿ ನಡೆದ ಸಭೆ ಮತ್ತು ವಾಸ್ತವ್ಯದ ಅನುಭವವನ್ನು ನಿಮ್ಮೊಡನೆ ಹಂಚಿಕೊಳ್ಳುತ್ತೇನೆ. ದಿನಾಂಕ 7-2-2007ರಂದು ಮದ್ಯಾಹ್ನ ಮೂರರಿಂದ ಐದು ಗಂಟೆಯವರೆಗೆ ಲೆಕ್ಕಾಧಿಕಾರಿಗಳ ಸಭೆಯನ್ನು ನಡೆಸಿ, ನಂತರ ಸಂಜೆ ಐದರಿಂದ ಆರೂವರೆಯವರೆಗೆ ಸಾರ್ವಜನಿಕ ಸಭೆಯನ್ನು ಹಮ್ಮಿಕೊಂಡೆ. ಕರೀಕಟ್ಟಿ ಗ್ರಾಮದಲ್ಲಿ ಅಂದು ಒಂದು ಸಾವಿರದ ನೂರು ಮನೆಗಳಿದ್ದು ಸುಮಾರು ಆರು ಸಾವಿರ ಜನರು ವಾಸಿಸುತ್ತಿದ್ದರು. ಅಲ್ಲಿ ಸಣ್ಣ ಹಿಡುವಳಿದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಎಂಟು ಸ್ತ್ರೀಶಕ್ತಿ ಗುಂಪುಗಳು ಸಕ್ರಿಯವಾಗಿ ಕೆಲಸ ಮಾಡುತ್ತಿದ್ದವು. ನನಗೆ ಖುಷಿ ಕೊಟ್ಟ ಒಂದು ಮುಖ್ಯ ವಿಷಯವೆಂದರೆ ಆ ಗ್ರಾಮದಲ್ಲಿ ಸಾರಾಯಿಯನ್ನು ನಿಷೇಧಿಸಲು ಎಲ್ಲ ವರ್ಗಗಳ ಜನರೂ ಟೊಂಕ ಕಟ್ಟಿ ನಿಂತಿದ್ದರು ಎಂಬುದು. ಗ್ರಾಮಪಂಚಾಯತಿಯವರು ಸಹ ಇದರ ಬಗ್ಗೆ ಠರಾವನ್ನು ಹೊರಡಿಸಲು ಸನ್ನದ್ಧರಾಗಿದ್ದರು. ಜನಶಕ್ತಿಗೆ ಇದಕ್ಕಿಂತ ಉತ್ತಮ ಉದಾಹರಣೆ ಬೇಕೆ?
ಅಲ್ಲಿನ ಎಂಟೂ ಸ್ತ್ರೀಶಕ್ತಿ ಸ್ವಸಹಾಯ ಗುಂಪಿನವರು ಬ್ಯಾಂಕೊಂದರಲ್ಲಿ ಎರಡೂವರೆ ಲಕ್ಷ ಸಾಲ ಪಡೆದು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದರು. ತೆಗೆದುಕೊಂಡ ಸಾಲದ ಮರುಪಾವತಿಯೂ ಮಾಡಿದರು. ಬ್ಯಾಂಕಿನ ಅಧಿಕಾರಿಗಳು ಸಭೆಯಲ್ಲಿ ತಮ್ಮ ಮೆಚ್ಚುಗೆಯನ್ನು ವ್ಯಕ್ತ ಪಡಿಸಿ ಇನ್ನೂ ಹೆಚ್ಚಿನ ಸಾಲವನ್ನು ಹೈನುಗಾರಿಕೆಗೆ ತಾವು ನೀಡುವುದಾಗಿ ಘೋಷಿಸಿದರು. ಅದನ್ನು ಕಂಡು ನಾನು ನಮ್ಮ ಪಶುಸಂಗೋಪನಾ ಇಲಾಖೆಯವರನ್ನು ಕರೆದು, ಅವರು ಫಲಾನುಭವಿಗಳನ್ನು ಗುರುತಿಸಿ ಉತ್ತೇಜನ ಮತ್ತು ಮಾರ್ಗದರ್ಶನ ನೀಡಬೇಕೆಂದು ಕೊರಿದೆ.
'ಕರೀಕಟ್ಟಿ ಗ್ರಾಮದಲ್ಲಿ ಹೆಚ್ಚಾಗಿ ಸಣ್ಣ ಹಿಡುವಳಿದಾರರು ಇರುವುದರಿಂದ ಅವರಿಗೆ ಅನುಕೂಲವಾಗುವಂತೆ ಸಾಕಷ್ಟು ಕೃಷಿ ಹೊಂಡಗಳನ್ನು ನಿರ್ಮಿಸಿದರೆ ಅವುಗಳಲ್ಲಿ ಮಳೆಯ ನೀರನ್ನು ಶೇಖರಿಸಿ ಅದರಿಂದ ವರ್ಷದಲ್ಲಿ ಮೂರು ಬೆಳೆಗಳನ್ನು ಬೆಳೆಯಬಹುದಾಗಿದೆ. ಹಾಗೂ ಬದುವುಗಳಲ್ಲಿ ಉತ್ತಮ ತಳಿಯ ಮೇವನ್ನು ಬೆಳೆದು ಹೈನುಗಾರಿಕೆ ಉದ್ಯಮವನ್ನು ಬೆಳೆಸಬಹುದಾಗಿದೆ' ಎಂದು ರೈತರು ಹೇಳಿದರು. ಆದ್ದರಿಂದ ರೈತರ ಬೇಡಿಕೆಯಂತೆ ಜಲಾನಯನ ಇಲಾಖೆಯು ಸರಕಾರದ ಯೋಜನೆಯಡಿ ಈ ಗ್ರಾಮದ ಜಮೀನುಗಳಲ್ಲಿ ಅಗತ್ಯವಿದ್ದ ಕಡೆಗೆ ಕೃಷಿ ಹೊಂಡಗಳನ್ನು ಮೂರು ತಿಂಗಳುಗಳಲ್ಲಿ ನಿರ್ಮಿಸಿ ಸಣ್ಣ ಹಿಡುವಳಿದಾರರಿಗೆ ಅನುಕೂಲ ಆಗುವಂತೆ ಕ್ರಮ ಜರುಗಿಸಿದೆ.
ಗ್ರಾಮದಲ್ಲಿ ರೈತರೇ ಹೆಚ್ಚಾಗಿದ್ದುದರಿಂದ ಅವರು ತಮ್ಮ ಮನೆಯ ದನಗಳು ತಿಂದು ಬಿಟ್ಟ ಮೇವು ಹಾಗೂ ಸಗಣಿಯನ್ನು ಗ್ರಾಮದಲ್ಲಿ ಎಲ್ಲೆಂದರಲ್ಲಿ ಶೇಖರಿಸಿ ಗೊಬ್ಬರಮಾಡುವ ಪದ್ಧತಿ ಇದ್ದುದನ್ನು ಗಮನಿಸಿದೆ. ಇದು ಗ್ರಾಮದ ನೈರ್ಮಲ್ಯಕ್ಕೆ ಹಾಗೂ ಗ್ರಾಮಸ್ಥರ ಆರೋಗ್ಯಕ್ಕೆ ತೊಂದರೆದಾಯಕ ಎಂದು ನನಗನ್ನಿಸಿತು. ಆದ್ದರಿಂದ 'ಈ ರೀತಿ ಶೇಖರಣೆ ಮಾಡದೆ ಪ್ರತಿ ಮನೆಯವರು ಕೃಷಿ ಇಲಾಖೆಯ ಅಧಿಕಾರಿಗಳ ಸಲಹೆ ಪಡೆದು ಮೂರು ಆರು ಅಡಿ ಅಳತೆಯ ಗುಂಡಿಗಳನ್ನು ತೆಗೆದು ಎರೆಹುಳುಗಳನ್ನು ಬಳಸಿ ಗೊಬ್ಬರವನ್ನು ಮಾಡುವ ವ್ಯವಸ್ಥೆಯನ್ನು ಮಾಡಿಕೊಂಡರೆ ಉತ್ತಮ ಗುಣಮಟ್ಟದ ಗೊಬ್ಬರ ಉತ್ಪಾದನೆ ಮಾಡಬಹುದು ಮತ್ತು ಆ ಮೂಲಕ ಗ್ರಾಮದ ನೈರ್ಮಲ್ಯ ಕಾಪಾಡಬಹುದು' ಎಂಬುದನ್ನು ಗಮನಿಸಿ ಸ್ಥಳೀಯರಿಗೆ ವಿವರಿಸಿ ತಿಳಿಸಿದೆ. ಈ ಸಲಹೆಯನ್ನು ಗ್ರಾಮಸ್ಥರು ಸ್ವಾಗತಿಸಿದರು. ಅದರಂತೆ ಮಾಡುವುದಾಗಿ ಭರವಸೆ ನೀಡಿದರು.
ಅದಾಗಲೇ ಗ್ರಾಮದಲ್ಲಿ ನಿರ್ಮಿಸಿದ್ದ ಸಾರ್ವಜನಿಕ ಶೌಚಾಲಯವು ಸರಿಯಾದ ನಿರ್ವಹಣೆ ಇಲ್ಲದೆ ನಿರುಪಯುಕ್ತವಾಗಿದ್ದುದು ಕಂಡು ಬಂದಿತು. ಬಹಳಷ್ಟು ಮನೆಗಳಿಗೆ ಶೌಚಾಲಯಗಳು ಇರಲಿಲ್ಲ. ಇದರಿಂದ ಗ್ರಾಮದ ನೈರ್ಮಲ್ಯ ಕಾಪಾಡುವುದು ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ಸರಕಾರದಿಂದ ಒದಗಿಸಲಾಗುವ ಸಹಾಯಧನವನ್ನು ಪಡೆದು ಪ್ರತಿ ಮನೆಯವರು ಪ್ರತ್ಯೇಕ ಶೌಚಾಲಯವನ್ನು ನಿರ್ಮಿಸಿಕೊಳ್ಳಲು ಸಲಹೆಯನ್ನು ನೀಡಿದೆ. ಇದಕ್ಕೆ ಗ್ರಾಮಸ್ಥರಿಂದ ಉತ್ತಮ ಪ್ರತಿಕ್ರಿಯೆ ದೊರೆಯಿತು. ಗ್ರಾಮದಲ್ಲಿರುವ ಸಾರ್ವಜನಿಕ ಶೌಚಾಲಯವನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಲು ಕ್ರಮ ಜರುಗಿಸಬೇಕೆಂದು ಸ್ಥಳಿಯ ಗ್ರಾಮಪಂಚಾಯತಿ ಸಿಬ್ಬಂದಿಗೆ ನಿರ್ದೇಶನ ನೀಡಿ ನಂತರದ ದಿನಗಳಲ್ಲಿ ಶೌಚಾಲಯದ ಬಗ್ಗೆ ಜನಜಾಗೃತಿ ಉತ್ತಮವಾಗಿ ಆಗುತ್ತಿದೆ ಎನ್ನುವ ವಿಷಯ ಕೇಳಿ ಎಲ್ಲಾ ಗ್ರಾಮಗಳಲ್ಲೂ ಇದೇ ರೀತಿ ಆದರೆ ನಾವು ಮಾಡುವ ಕೆಲಸ ಸಾರ್ಥಕ ಎನಿಸಿತು.
ಗ್ರಾಮದ ನಾಲ್ಕನೇ ವಾರ್ಡ್ ಹತ್ತಿರ ಸಣ್ಣ ಕೆರೆ ಇತ್ತು. ಅದರಲ್ಲಿ ಆಗಲೂ ಮಳೆ ನೀರು ಇತ್ತು. ಆದರೆ ಹೂಳು ತುಂಬಿದ್ದರಿಂದ ಹೆಚ್ಚಿನ ಮಳೆಯ ನೀರು ಸಂಗ್ರಹಿಸಲು ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ಇದರ ಹೂಳನ್ನು ಎತ್ತಿ ಹೆಚ್ಚಿನ ಮಳೆ ನೀರನ್ನು ಸಂಗ್ರಹಿಸಲು ಅನುಕೂಲ ಮಾಡಿಕೊಡಬೇಕೆಂಬ ಬೇಡಿಕೆಯನ್ನು ಸ್ಥಳೀಯರು ನನ್ನ ಮುಂದಿಟ್ಟರು. ಈ ಕುರಿತು ಸರ್ವೇ ಮಾಡಿ ಅಗತ್ಯವೆನಿಸಿದರೆ ಇಲ್ಲಿಯ ಹೂಳು ಎತ್ತಿ ಕೆರೆಯ ಆಳ ಹೆಚ್ಚಿಸಲು ಕ್ರಮ ಜರುಗಿಸಬೇಕೆಂದು ಪಂಚಾಯತಿ ತಾಂತ್ರಿಕ ಇಲಾಖೆ ಅಭಿಯಂತರರಿಗೆ ನಿರ್ದೇಶನ ನೀಡಿದೆ. ನಂತರದಲ್ಲಿ ಹೂಳೆತ್ತಿದ್ದರಿಂದ ಮಳೆಯ ನೀರು ಸಂಗ್ರಹ ಉತ್ತಮವಾಗಿದೆ ಎಂದು ತಿಳಿದು ಬಂದಿತು.
ಗ್ರಾಮಸ್ಥರು ಕುಡಿಯುವ ನೀರಿನ ಸರಬರಾಜು ಮತ್ತು ವಿದ್ಯುತ್ ಸರಬರಾಜು ಸಮರ್ಪಕವಾಗಿಲ್ಲ ಎಂದು ದೂರಿದರು. ಗ್ರಾಮಸ್ಥರು ತಮ್ಮ ಹಕ್ಕನ್ನು ಅರಿತು ಬೇಡಿಕೆಗಳನ್ನು ಮುಂದಿಟ್ಟಾಗ, 'ಇದಲ್ಲವೇ ನಿಜವಾದ ಗ್ರಾಮ ಸ್ವರಾಜ್ಯದ ಕನಸು' ಎಂದು ಅನಿಸದೇ ಇರದು. ನಾವು ಸರ್ಕಾರಕ್ಕೆ ಕೊಡಬೇಕಾದ ತೆರಿಗೆಗಳನ್ನು ಸರಿಯಾದ ಸಮಯಕ್ಕೆ ಕಟ್ಟುತ್ತೇವೆ, ಅಂತೆಯೇ ಸರ್ಕಾರವೂ ಕೂಡ ನಮ್ಮ ಕನಿಷ್ಠ ಬೇಡಿಕೆಗಳನ್ನು ತಕ್ಷಣವೇ ಪರಿಹರಿಸಬೇಕು ಎಂದು ಕೇಳಿಕೊಳ್ಳುವುದು ನ್ಯಾಯ ಸಮ್ಮತ. ಪ್ರಜೆ ಎಚ್ಚೆತ್ತುಕೊಂಡು ಯಾವಾಗ ಪ್ರಶ್ನೆಗಳನ್ನು ಕೇಳಲಾರಂಭಿಸುತ್ತಾನೋ ಅಂದು ಉತ್ತಮ ಕೆಲಸಗಳು ಆಗಲು ಸಾಧ್ಯ. ನನ್ನ ಪ್ರತಿಯೊಂದು ಗ್ರಾಮ ಸಭೆಗಳಲ್ಲೂ ಸ್ಥಳೀಯರು ಪ್ರಶ್ನೆ ಮಾಡುವುದನ್ನು ಉತ್ತೇಜಿಸಿದೆ.
ಕರೀಕಟ್ಟಿ ಗ್ರಾಮದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರು ಹದಿನೈದು ವರ್ಷಗಳ ಹಿಂದೆಯೇ ತಮ್ಮದೇ ಆದ ಒಂದು ಸಮಾಜ ಮಂದಿರವನ್ನು ಕಟ್ಟಿಕೊಂಡಿದ್ದರು. ಅದು ಶಿಥಿಲಾವಸ್ಥೆಯಲ್ಲಿದ್ದು ಅದನ್ನು ರಿಪೇರಿ ಮಾಡಿಕೊಡಬೇಕೆಂಬ ಬೇಡಿಕೆಯನ್ನು ನನ್ನ ಮುಂದೆ ಇಟ್ಟರು. ತಕ್ಷಣವೇ ಈ ಕೆಲಸ ನಡೆಯಬೇಕೆಂದು ನಿರ್ದೇಶಿಸಿದ ಸಂತೋಷ ನನಗಿದೆ.
ನನಗೆ ಅಲ್ಲಿ ಮತ್ತೊಂದು ಅಚ್ಚರಿ ಕಾದಿತ್ತು. ಎಪ್ಪತ್ತಾರು ಮಂದಿ ಸ್ಥಳೀಯರು ನನ್ನನ್ನು ಸುತ್ತುವರೆದು ವೃದ್ಧಾಪ್ಯ ವೇತನ, ಅಂಗವಿಕಲ ವೇತನ, ವಿಧವಾ ವೇತನಗಳ ಬೇಡಿಕೆಯನ್ನು ನನ್ನ ಮುಂದಿಟ್ಟರು. ಬಹಳಷ್ಟು ಕಡೆ ಇಂಥಹ ವೇತನಗಳನ್ನು ತಾವು ಪಡೆಯಬಹುದು ಎನ್ನುವ ಪರಿವೆಯೇ ಗ್ರಾಮಸ್ಥರಿಗೆ ಇರುವುದಿಲ್ಲ. ಅವರಲ್ಲಿ ಅರ್ಹ ಫಲಾನುಭವಿಗಳಿಗೆ ವೇತನ ಮಂಜೂರಿಗಾಗಿ ಅವಶ್ಯವಿರುವ ವೈದ್ಯಕೀಯ ಹಾಗೂ ಇತರ ಪ್ರಮಾಣ ಪತ್ರಗಳನ್ನು ಸ್ಥಳದಲ್ಲಿಯೇ ನೀಡಲು ಹಾಗೂ ವೇತನಗಳನ್ನು ಮಂಜೂರು ಮಾಡುವಂತೆ ಸ್ಥಳೀಯ ಸರಕಾರಿ ವೈದ್ಯರಿಗೆ ಹಾಗೂ ಇತರ ಸಂಬಂಧಪಟ್ಟ ಅಧಿಕಾರಿಗಳಿಗೆ ಹೇಳಿದೆ. ನಂತರ ಅವಶ್ಯಕ ಕ್ರಮ ಜರುಗಿಸಲಾಗಿದೆ ಎಂಬ ಸುದ್ದಿ ನನಗೆ ಮುಟ್ಟಿದಾಗ ಸಮಾಧಾನವಾಯಿತು.
ಗ್ರಾಮದಲ್ಲಿಯ ಐದು ಜನ ರೈತರ ಹೆಸರುಗಳು ಖಾತೆ ಪುಸ್ತಕಗಳಲ್ಲಿ ಇದ್ದವು. ಆದರೆ ಅವರ ಜಮೀನುಗಳಿಗೆ ಅವರನ್ನು ಖಾತೇದಾರರೆಂದು ಗಣಕಯಂತ್ರದಲ್ಲಿ ತೋರಿಸುತ್ತಿರಲಿಲ್ಲ. ಗಣಕಯಂತ್ರದಲ್ಲಿ ಲೋಪವಿದೆ ಎಂದು ಆ ರೈತರು ದೂರನ್ನಿತ್ತರು. ಆ ಐದು ಜನ ರೈತರ ಹೆಸರುಗಳು ಖಾತೆ ಪುಸ್ತಕದಲ್ಲಿ ಇದ್ದ ಹಾಗೆ ಗಣಕ ಯಂತ್ರದಲ್ಲಿ ಅಳವಡಿಸುವಲ್ಲಿ ಇರುವ ತೊಂದರೆ ನಿವಾರಿಸಿ ಅವರಿಗೆ ಗಣಕೀಕೃತ ಉತ್ತರ ನೀಡಲು ಕ್ರಮ ಜರುಗಿಸಲಾಗಿದೆ ಎನ್ನುವ ಮಾಹಿತಿ ದೊರೆತಾಗ ಅಲ್ಲಿನ ರೈತರುಗಳ ಬಗ್ಗೆ ನನಗೆ ಮೆಚ್ಚುಗೆಯಾಯಿತು.
ಗ್ರಾಮದಲ್ಲಿ ಮೆಟ್ರಿಕ ಪೂರ್ವ ಶಿಕ್ಷಣ ಪಡೆದ ಸಾಕಷ್ಟು ನಿರುದ್ಯೋಗಿಗಳಿದ್ದು ಇವರಿಗೆಲ್ಲ ಉದ್ಯೋಗ ಒದಗಿಸುವಂತೆ ಬೇಡಿಕೆ ಇತ್ತು. ಇಂತಹ ನಿರುದ್ಯೋಗಿಗಳಿಗೆ ಉದ್ಯೋಗ ಒದಗಿಸಿಕೊಡಲು ಕೈಗಾರಿಕಾ ಇಲಾಖೆಯಲ್ಲಿ ಹಲವಾರು ಸಣ್ಣ ಕೈಗಾರಿಕಾ ಯೋಜನೆಗಳಿದ್ದವು. ಅವುಗಳಲ್ಲಿ ಪ್ರಮುಖವಾಗಿ ಸಿಮೆಂಟ್ ಹಾಲೋಬ್ಲಾಕ್ ತಯಾರಿಕೆ, ಕುಶಲ ಕುಮ್ಮಾರಿಕೆ, ಕುಶಲ ಗೌಂಡಿ, ಬಡಿಗತನ ಮುಂತಾದ ಪ್ರಮುಖ ಉದ್ಯೋಗಗಳು ಇದ್ದವು. ಯುವಕರು ಕೂಡ ಇದರ ಬಗ್ಗೆ ಆಸಕ್ತಿ ವ್ಯಕ್ತಪಡಿಸಿದರು. ಇಚ್ಛೆ ಉಳ್ಳ ನಿರುದ್ಯೋಗಿ ಯುವಕರಿಗೆ ಕೈಗಾರಿಕೆ ಇಲಾಖೆ ಮೂಲಕ ಈ ಕುರಿತು ತರಬೇತಿ ನೀಡಿ ಸ್ವಾವಲಂಬಿಗಳನ್ನಾಗಿ ಮಾಡಲು, ತರಬೇತಿ ಕಾರ್ಯಗಾರ ಏರ್ಪಡಿಸಲು ಕ್ರಮ ಜರುಗಿಸಿದೆ.
ಸಂಜೆ ಆರೂವರೆಯಿಂದ ರಾತ್ರಿ ಹತ್ತು ಗಂಟೆಯವರೆಗೆ ಗ್ರಾಮದ ರೈತರ ಹಾಗೂ ಹಿರಿಯರ ಜೊತೆ ಚರ್ಚೆ ನಡೆಸಿದೆ. ವೃದ್ಧರ ಅನುಭವದ ಮಾತುಗಳಿಂದ ನಾವು ಕಲಿಯುವುದು ಬಹಳಷ್ಟು ಇರುತ್ತದೆ. ಎಲ್ಲಾ ಗ್ರಾಮಗಳಿಗೂ ಭೇಟಿ ನೀಡಬೇಕೆಂಬ ಹಂಬಲವಿದ್ದರೂ ಅದು ಸಾಧ್ಯವಾಗದ ಮಾತಾದಾಗ ಕಿರಿಯ ಅಧಿಕಾರಿಗಳು ಪ್ರತಿ ಗ್ರಾಮಗಳಲ್ಲೂ ಮಂಗಳವಾರ ಮತ್ತು ಶುಕ್ರವಾರದಂದು ಸಭೆಗಳನ್ನು ನಡೆಸಬೇಕೆಂದು ಸೂಚಿಸಿದೆ. ಜನಜಾಗೃತಿ ಮೂಡಿಸುವುದು ಸರಕಾರದ ಮೊದಲ ಆದ್ಯತೆ.
(ಮುಂದುವರೆಯುವುದು)
- ಶಾಲಿನಿ ರಜನೀಶ್, ಐಎಎಸ್
anisikeprabha@gmail.com