ಕಲ್ಲುಗಣಿಗಾರಿಕೆ ಎಂಬ ಕರ್ಮಕಾಂಡ!
ಮೊನ್ನೆಯಷ್ಟೇ ಕಲ್ಲು ಗಣಿಗಾರಿಕೆಯೆಂಬ ಭೂತಕ್ಕೆ ನಗರದ ಪರಪ್ಪನ ಅಗ್ರಹಾರ ವ್ಯಾಪ್ತಿಯಲ್ಲಿನ ಹೊಂಡಕ್ಕೆ ಮೂರು ಮಕ್ಕಳು ಬಲಿಯಾಗಿದ್ದಾರೆ. ನೆಲವನ್ನು ಸುಮಾರು 60 ಅಡಿಗಳ ಆಳದವರೆಗೆ ತೋಡಿದ್ದೇ ಈ ದುರಂತಕ್ಕೆ ಕಾರಣವಾಗಿದೆ. ಈ ಹೊಂಡ 25 ಆಹುತಿಗಳನ್ನು ತೆಗೆದುಕೊಂಡಿರುವ ಸಂಗತಿ ನನ್ನ ಮನವನ್ನು ಇನ್ನಷ್ಟು ಕದಡಿಸಿತು. ಅಧಿಕಾರಿಗಳು ಅತ್ತ ಚಿತ್ತ ಹರಿಸದಿರುವ ಸಂಗತಿಯಿಂದಾಗಿ ಖೇದವಾಯಿತು. ಇನ್ನೂ ಅದೆಷ್ಟು ಆಹುತಿಗಳಾಗಬೇಕೋ ತಿಳಿಯದು?!
ಇತ್ತೀಚಿನ ದಿನಗಳಲ್ಲಿ ಕಲ್ಲು ಗಣಿಗಾರಿಕೆಯಿಂದಾಗುತ್ತಿರುವ ಅನಾಹುತಗಳು ಅಷ್ಟಿಷ್ಟಲ್ಲ. ಇವುಗಳಲ್ಲಿ ಬಹುತೇಕ ಗಣಿಗಾರಿಗೆ ಅಕ್ರಮವೂ ಹೌದು. ಕಾನೂನನ್ನು ಗಾಳಿಗೆ ತೂರಿ ಅಧಿಕಾರಸ್ಥರ ಮೂಗಿನಡಿಯಲ್ಲಿಯೇ ಇವು ನಡೆಯುತ್ತಿವೆ. ನನ್ನ ಹುಟ್ಟೂರು ನೆಲಮಂಗಲ ತಾಲೂಕಿನ ಮಂಚೇನಹಳ್ಳಿ ಗ್ರಾಮದ ದೊಡ್ಡ ತಾಂಡ್ಯ ಸಮೀಪ ನಡೆಯುತ್ತಿರುವ ಕಲ್ಲುಗಣಿಗಾರಿಕೆಯ ಬಗ್ಗೆ ಅಕ್ಷರಶಃ ಅರಿತು ಬಂದಿರುವೆ. ಅದರ ಕುರಿತು ಬರೆಯುತ್ತಾ ಹೋದರೆ ಅದೊಂದು ಬೃಹತ್ ಗ್ರಂಥವಾಗುತ್ತದೆ! ಸಂಕ್ಷಿಪ್ತವಾಗಿ ಓದುಗರ ಮುಂದೆ ಹಂಚಿಕೊಳ್ಳುತ್ತಿದ್ದೇನೆ.
ಅನ್ನದಲ್ಲಿ, ನೀರಿನಲ್ಲಿ, ಮಾಳಿಗೆಯ ಮೇಲೆ, ಮನೆಯೊಳೆಗೆ, ಬೆಳೆ, ಒಣ ಪೈರು... ಹೀಗೆ ಕಂಡ ಕಂಡಲ್ಲೆಲ್ಲಾ ಕಲ್ಲಿನ ಧೂಳೇ ಗೋಚರಿಸುತ್ತಿದ್ದೆ. ಒಂದು ಕಾಲಕ್ಕೆ ನೀರುಣಿಸುತ್ತಿದ್ದ ಬಾವಿಗಳು ಈಗ ಧೂಳಿನ ಹೊಂಡಗಳಾಗಿವೆ. ಈ ಧೂಳಿನ ಗೋಳು ಇಲ್ಲಿಗೇ ನಿಲ್ಲುವುದಿಲ್ಲ. ಬಡ ರೈತರು ಅಸ್ತಮಾ ಮುಂತಾದ ರೋಗಗಳಿಗೆ ತುತ್ತಾಗಿದ್ದಾರೆ. ಸಮೀಪದಲ್ಲೊಂದು ಆಸ್ಪತ್ರೆಯೂ ಇಲ್ಲದ ಕಾರಣ ರೈತರು ಮತ್ತು ಕೂಲಿ ಕಾರ್ಮಿಕರ ಆರ್ತನಾದಕ್ಕೆ ಮಿತಿಯೇ ಇಲ್ಲವಾಗಿದೆ.
ಕ್ವಾರಿ ಮಾಡುವ ವೇಳೆಯಲ್ಲಿ ಮಿತಿ ಮೀರಿದ ಡೈನಾಮೈಟ್ಗಳ ಸ್ಪೋಟದಿಂದಾಗಿ ಬಡವರ ಮನೆಗಳು ಜಖಂಗೊಂಡಿವೆ. ಅವೈಜ್ಞಾನಿಕ ಡೈನಮೈಟ್ ಸಿಡಿತಕ್ಕೆ ಕಲ್ಲುಗಳು ಹಾರಿ ಮಾಳಿಗೆಗಳನ್ನು ಸೀಳಿ ಹಾಕಿವೆ. ಅನೇಕರು ಕೂತಲ್ಲೇ ಯಮಪುರಿ ತಲುಪಿದ್ದಾರೆ. ಅಂಗಾಂಗ ಕಳೆದುಕೊಂಡು ಊನಗೊಂಡವರಿದ್ದಾರೆ. ಅಪರಿಮಿತ ಶಬ್ದದಿಂದಾಗಿ ಅನೇಕರು ಶ್ರವಣ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಶಬ್ದಕ್ಕೆ ಅಂಜಿ ಗುಬ್ಬಿ, ಕಾಗೆ, ಪಾರಿವಾಳ, ಇತರೆ ಪಕ್ಷಿ ಸಮೂಹಗಳೆಂಬ 'ರೈತ-ಮಿತ್ರರು' ಹಳ್ಳಿ ತೊರೆದಿದ್ದಾರೆ. ಇಷ್ಟೆಲ್ಲಾ ಆತಂಕಗಳ ನಡುವೆ ನಿರಾತಂಕವಾಗಿ ಕಲ್ಲುಗಣಿಗಾರಿಕೆ ನಡೆಯುತ್ತಿರುವುದು ನಾಚಿಕೆಗೇಡಿನ ಸಂಗತಿ. ಮಳೆ ತರುವ ಮಾತುರಗಳನ್ನು ತಡೆಹಿಡಿಯುವ ಶಕ್ತಿ ಅಳಿದುಳಿದ ಬಂಡೆಗಳಿಗೆ ಇಲ್ಲವಾಗಿದೆ. ಇದೆಲ್ಲವೂ ದೊಡ್ಡತಾಂಡ್ಯಕ್ಕೆ ಮಾತ್ರ ಸೀಮಿತವಲ್ಲ. ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಪ್ರತಿ ಊರಿನ/ ಹಳ್ಳಿಯ ಕಥೆಯೂ ಇದೇ ಆಗಿದೆ. ಉಚ್ಚ ನ್ಯಾಯಾಲಯದ ಮಾರ್ಗಸೂಚಿಗಳ ಪ್ರಕಾರ ಕಲ್ಲುಗಣಿಗಾರಿಕೆ ಮಾಡುವವರು ಈ ಕೆಳಗಿನ ನಿಯಮಗಳನ್ನು ಖಡಾಖಂಡಿತವಾಗಿ ಪಾಲಿಸಲೇಬೇಕು:
ರಾಷ್ಟ್ರೀಯ ಹೆದ್ದಾರಿಯಿಂದ, ಜನವಸತಿ, ದೇವಸ್ಥಾನ, ಶಾಲೆಗಳು, ನದಿಗಳಿಂದ 2 ಕಿ.ಮೀ. ದೂರದಲ್ಲಿ ಕಲ್ಲುಗಣಿಗಾರಿಕೆ ಮಾಡಬೇಕು. ರಾಜ್ಯ ಹೆದ್ದಾರಿಗಳಿಂದ 1.5 ಕಿ.ಮೀ. ದೂರದಲ್ಲಿ ಲಿಂಕ್ ರಸ್ತೆಗಳಿಂದ 500 ಮೀ. ದೂರದಲ್ಲಿರಬೇಕು. ಜಿಲ್ಲಾ ಕೇಂದ್ರಗಳಿಂದ 2.ಕಿ.ಮೀ. ದೂರದಲ್ಲಿ ಲಿಂಕ್ ರಸ್ತೆಗಳಿಂದ 500 ಮೀ. ದೂರದಲ್ಲಿರಬೇಕು. ಜಿಲ್ಲಾ ಕೇಂದ್ರಗಳಿಂದ 2 ಕಿ.ಮೀ. ಪುರಸಭೆ ವ್ಯಾಪ್ತಿಗಳಿಂದ 8 ಕಿ.ಮೀ. ದೂರ, ತಾಲೂಕು ಕೇಂದ್ರಗಳಿಂದ 2 ಕಿ.ಮೀ. ದೂರದಲ್ಲಿ ಕಲ್ಲುಗಣಿಗಾರಿಕೆ ನಡೆಯಬೇಕು. ಹೀಗೆ ನಿಯಮಗಳು ಕಟ್ಟುನಿಟ್ಟಾಗಿಯೇ ಇವೆ.
ಜನವಸತಿ ಕೇಂದ್ರದಿಂದ 2 ಕಿ.ಮೀ. ದೂರದಲ್ಲಿರಬೇಕೆಂದು ನಿಯಮಗಳಿದ್ದರೂ ಅದಕ್ಕೆ ಕವೆಡೆ ಕಾಸಿನ ಕಿಮ್ಮತ್ತಿಲ್ಲವಾಗಿದೆ. ಎಲ್ಲ ನಿಯಮಗಳನ್ನು ಗಾಳಿಗೆ ತೂರಿಬಿಡಲಾಗಿದೆ. ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳಬೇಕಾದವರೇ ಇದರಲ್ಲಿ ಶಾಮೀಲಾಗುತ್ತಿದ್ದಾರೆ. ಅದಕ್ಕೆ ದುರಂತ/ ಜ್ವಲಂತ ಸಾಕ್ಷಿಯಾಗಿಯೇ ಪರಪ್ಪನ ಹಳ್ಳಿಯ ಘಟನೆಯಿದೆ. ವಿವಿಧ ಭಾಗಗಳಲ್ಲಾಗುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆಯಿಂದಾಗಿ ಚಾಮರಾಜ ಸಾಗರ (ತಿಪ್ಪಗೊಂಡನಹಳ್ಳಿ ಜಲಾಶಯ), ಚಿಕ್ಕಬಳ್ಳಾಪುರದಲ್ಲಿ ಸರ್.ಎಂ.ವಿ. ಸ್ಮಾರಕ, ಇತಿಹಾಸ ಪ್ರಸಿದ್ಧ ಸಾದರಹಳ್ಳಿಯ ಮುನೇಶ್ವರ ದೇವಸ್ಥಾನ, ದಕ್ಷಿಣ ಕಾಶಿ ಶಿವಗಂಗೆ... ಎಲ್ಲವೂ ಅಳಿವಿನ ಅಪಾಯದಲ್ಲಿವೆ. ಸಾದರಹಳ್ಳಿ ಮುನೇಶ್ವರ ದೇವಸ್ಥಾನವಂತೂ ಅಕ್ಷರಶಃ ದ್ವೀಪವಾಗಿದೆ.
ಶಾಸಕನಾಗಿದ್ದಾಗ 2010-11ನೇ ಸಾಲಿನ ಬಜೆಟ್ ಅಧಿವೇಶನದಲ್ಲಿ ಪಾಲ್ಕೊಂಡು ಶಿವಗಂಗೆಯಲ್ಲಿ ನಡೆಯುತ್ತಿರುವ (ಅಕ್ರಮ) ಕಲ್ಲು ಗಣಿಗಾರಿಕೆಯನ್ನು ತಡೆಯುವಂತೆ ಕೋರಿದ್ದೆ. ಸಂಬಂಧಿಸಿದ ಚಿತ್ರಗಳನ್ನು ಪ್ರದರ್ಶಿಸಿದ್ದೆ. ನನ್ನ ನೋವಿನ ನುಡಿಗಳಿಗೆ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಕೂಡಲೇ 'ಬಂದ್' ಮಾಡಿಸುವುದಾಗಿ ಭರವಸೆ ನೀಡಿದ್ದರು. ಆದರೆ ಗಣಿಗಾರಿಕೆ ನಿರಾತಂಕವಾಗಿ ಇಂದಿಗೂ ಸಾಗಿದೆ.
ಈ ಅಕ್ರಮಗಳಿಗೆ ಕಡಿವಾಣ ಹಾಕಲೇಬೇಕಿದೆ. ಆರೋಗ್ಯ, ಐತಿಹಾಸಿಕ ಸ್ಮಾರಕಗಳ ರಕ್ಷಣೆಯ ದೃಷ್ಟಿಯಿಂದ ಈ ಕಾರ್ಯದತ್ತ ಸರ್ಕಾರ, ಸಂಬಂಧಿಸಿದ ಸಚಿವರು ತುರ್ತಾಗಿ ಗಮನ ಹರಿಸಬೇಕು.
-ನೆ.ಲ. ನರೇಂದ್ರ ಬಾಬು, ಮಾಜಿ ಶಾಸಕರು