ಅಂಕಣಗಳು

ಇತಿಹಾಸ ಸೇರಿದ ಚುನಾವಣೆ: ಮುಂದೇನು?

ವಿಧಾನಸಭೆ ಚುನಾವಣೆ ಎಬ್ಬಿಸಿದ ಧೂಳು ನಿಧಾನವಾಗಿ ಮಾಯವಾಗುತ್ತಿದೆ.

ವಿಧಾನಸಭೆ ಚುನಾವಣೆ ಎಬ್ಬಿಸಿದ ಧೂಳು ನಿಧಾನವಾಗಿ ಮಾಯವಾಗುತ್ತಿದೆ. ಕಾಂಗ್ರೆಸ್ಸಿನಲ್ಲಿ ಗೆದ್ದವರ ವಿಜಯೋತ್ಸವದ ಆಚರಣೆ ಅಷ್ಟೇನೂ ವೈಭವ - ವಿಜೃಂಭಣೆಯಿಂದ ನಡೆಯಲಿಲ್ಲ. ಗೆದ್ದವರು ಅವರವರ ಕ್ಷೇತ್ರಗಳಲ್ಲಿ ಸಂಭ್ರಮ ಆಚರಿಸಿಕೊಂಡಿರಬಹುದು, ಅಷ್ಟೇ. ಕೈಬಿಟ್ಟು ಹೋಗಿದ್ದ ರಾಜ್ಯಾಧಿಕಾರವನ್ನು ಮತ್ತೆ ಸರಿಪಡಿಸಿಕೊಂಡ ತೃಪ್ತಿ ಕಾಂಗ್ರೆಸ್ಸಿನಲ್ಲಿದ್ದರೂ, ಆಂತರಿಕವಾಗಿ ಅದೇನೋ ಒಂದು ರೀತಿಯ ಅಳುಕು ಪಕ್ಷವನ್ನು ಕಾಡುತ್ತಿರುವಂತಿದೆ. ನಿಜವಾಗಲೂ ಕಾಂಗ್ರೆಸ್ಸಿಗರ ಅಳುಕಿಗೆ ಈಗ ಯಾವ ಕಾರಣವೂ ಇಲ್ಲ.
ನಿಜ. ಅನೇಕ ಶಾಸಕರ ಮಂತ್ರಿಯಾಗುವ ಆಸೆ ಭಗ್ನವಾಗಿರಬಹುದು, ಕೆಲವರಿಗೆ ಕೋಪವೂ ಬಂದಿರಬಹುದು. ಭವಿಷ್ಯದಲ್ಲಿ ಎಲ್ಲವೂ ಸುಗಮವಾಗಿ ನಡೆಯುತ್ತದೆ ಎನ್ನುವ ಭಾವನೆ ಮೂಡಿರುವ ಸಮಯವಿದು. ಅದೇ ಅಧಿಕಾರದಿಂದ ದೂರವಾಗಿರುವ ಆಳುವ ಪಕ್ಷದ ಶಾಸಕರ ಗೋಳು. ಇನ್ನು ಬಹುಕಾಲ ರಾಜ್ಯದಲ್ಲಿ ರಾಜಕೀಯದಲ್ಲಿ ವಿಪ್ಲವಗಳನ್ನೇನೂ ನಿರೀಕ್ಷಿಸುವಂತಿಲ್ಲ. ಅಲ್ಲಿಗೆ ಈಗ ಮಂತ್ರಿಗಳಾದವರು ಅಲ್ಲೇ ಉಳಿಯುತ್ತಾರೆ, ಇತರರು ಇದ್ದಲ್ಲೇ ಇರುತ್ತಾರೆನ್ನುವ ಸಂಕಟವೂ ವೈಯಕ್ತಿಕವಾಗಿ ಅನೇಕರಲ್ಲಿ ಇರಬಹುದು. ಆದರೆ ಅದು ಸಾಮೂಹಿಕವಲ್ಲ.
ಈಗ ಚುನಾಯಿತರಾಗಿರುವ ಕಾಂಗ್ರೆಸ್ ಶಾಸಕರ ಮೇಲೆ ಇನ್ನೊಂದು ವರ್ಷದ ಒಳಗಾಗಿ ಬೀಳುವ ಬಹುದೊಡ್ಡ ಜವಾಬ್ದಾರಿ ಎಂದರೆ ಲೋಕಸಭೆ ಚುನಾವಣೆಯಲ್ಲಿ ಕನಿಷ್ಠ ಪಕ್ಷ ಇಪ್ಪತ್ತು ಸ್ಥಾನಗಳನ್ನಾದರೂ ಗಳಿಸುವುದು. ಅನಧಿಕೃತವಾಗಿ, ದೆಹಲಿಯಲ್ಲಿ ಕೂತು ಕಂಪ್ಯೂಟರ್‌ಗಳನ್ನು ಹಿಡಿದು ಗುಂಡಿಗಳನ್ನು ಒತ್ತುತ್ತಾ ಲೆಕ್ಕ ಹಾಕುವ ಪಂಡಿತರು ತಮ್ಮ ಮೊದಲ ಕಸರತ್ತಿನಲ್ಲಿ ಕಂಡುಕೊಂಡಿರುವ ಅಂಕಿ ಅದು. ಹೋದ ಬಾರಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಆಂಧ್ರಪ್ರದೇಶದಿಂದ ಬಂಪರ್ ಕುಯಿಲು ಸಿಕ್ಕಿತ್ತು. ತಮಿಳುನಾಡಿನಿಂದಲೂ ತೃಪ್ತಿಯಾಗುವಷ್ಟು ಸ್ಥಾನಗಳನ್ನು ಡಿಎಂಕೆಯ ಕರುಣಾ ನಿಧಿ ಅವರು ಒದಗಿಸಿಕೊಟ್ಟಿದ್ದರು. ಕರ್ನಾಟಕದಲ್ಲಿ ಕಾಂಗ್ರೆಸ್ಸಿಗೆ ಭಾರಿ ಪೆಟ್ಟು ಬಿದ್ದಿತ್ತು. ಈ ಬಾರಿ ಆಂಧ್ರದಲ್ಲಿನ ಕಾಂಗ್ರೆಸ್ಸಿನ ಒಳಜಗಳ, ಜಗನ್ಮೋಹನ ರೆಡ್ಡಿ ಅವರ ವೈಎಸ್ಸಾರ್ ಕಾಂಗ್ರೆಸ್ಸಿನ ಅಬ್ಬರದಲ್ಲಿ ಪಕ್ಷಕ್ಕೆ ಹೆಚ್ಚು ಸ್ಥಾನಗಳು ಸಿಗುವುದು ಅನುಮಾನ. ಅದೇ ರೀತಿ ತಮಿಳುನಾಡಿನಲ್ಲಿ ಡಿಎಂಕೆ- ಅಣ್ಣಾ ಡಿಎಂಕೆಗಳೆರಡೂ ಪ್ರತ್ಯೇಕ - ಪ್ರತ್ಯೇಕವಾಗಿ ಕಾಂಗ್ರೆಸ್ಸನ್ನು ವಿರೋಧಿಸಿದರೆ, ಅಲ್ಲಿಂದ ಸಿಗಬಹುದಾದ ಸ್ಥಾನಗಳ ಸಂಖ್ಯೆ ಕಡಿಮೆ.
ಆಂಧ್ರಪ್ರದೇಶ - ತಮಿಳುನಾಡುಗಳಲ್ಲಿನ ನಷ್ಟವನ್ನು ಕಾಂಗ್ರೆಸ್‌ಗೆ ಕರ್ನಾಟಕ ತುಂಬಿ ಕೊಡಬೇಕಾಗಿದೆ. ಆ ಜವಾಬ್ದಾರಿಯನ್ನು ಬಹುಮಟ್ಟಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಹೊರಬೇಕಾಗಬಹುದು. ರಾಜ್ಯದಲ್ಲಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿರುವ ರೀತಿಯನ್ನು ಗಮನಿಸಿದರೆ, ಆ ಪಕ್ಷಕ್ಕೆ ಬೇರೆ ಯಾವ ಪಕ್ಷದ ನೆರವೂ ಬೇಕಾಗಲಾರದು, ಆದರೂ ಹಿಂದೆ ಕಾಂಗ್ರೆಸ್ - ಬಿಜೆಪಿ ವಿರೋಧಿ ಶಕ್ತಿಗಳ ಏಕತೆಯ ಮಾತಾಡುತ್ತಿದ್ದ ಜನ, ಈಗ ಅಂತರಂಗದಲ್ಲಿ ಕಾಂಗ್ರೆಸ್ ವಿರುದ್ಧದ ಮಾತಾಡುವುದಿಲ್ಲ, ಅವರ ಬಾಯಲ್ಲಿ ಹೆಚ್ಚಾಗಿ ಕೇಳಿ ಬರುವುದು ಬಿಜೆಪಿಯ ವಿರುದ್ಧದ ಮಾತುಗಳೇ.

ಬಿಜೆಪಿ-ಜೆಡಿಎಸ್-ಕೆಜೆಪಿ: ಭಾರತೀಯ ಜನತಾ ಪಾರ್ಟಿ ಚುನಾವಣೆಯಲ್ಲಿ ನಿರ್ಣಾಯಕವಾಗಿ ಸೋತಿದೆ. ಅಲ್ಲಲ್ಲಿ ನಡೆದ ಸಭೆಗಳಲ್ಲಿ ಸಮಾನ ಮನಸ್ಕರು ಸೋಲಿಗೆ ಕಾರಣಗಳನ್ನು ಹುಡುಕಲು ಹೊರಟು ಗೊಂದಲದಲ್ಲಿ ಸಿಕ್ಕಿಬಿದ್ದಿದ್ದಾರೆ. ಯಡಿಯೂರಪ್ಪ ಅವರು ಬಿಜೆಪಿಯನ್ನು ಹೋಳು ಮಾಡಿ ವಿಧಾನಸಭೆಯಲ್ಲಿ ಒಂದು ದೊಡ್ಡ ಶಕ್ತಿಯಾಗಲು ಪ್ರಯತ್ನಿಸಿದ್ದು ವಿಫಲವಾದರೂ ವಾಸ್ತವದಲ್ಲಿ ಅವರು ಕಸಿದುಕೊಂಡ ಬಿಜೆಪಿಯ ಮತಗಳಿಂದ ಹಿಂದೆ ಸರ್ಕಾರದ ಸೂತ್ರಗಳನ್ನು ಹಿಡಿದಿದ್ದ ಪಕ್ಷ ಹಣ್ಣಾಗಿದೆ. ಒಂದು ರಾಜಕೀಯ ಅಂದಾಜಿನ ಪ್ರಕಾರ ಬಿಜೆಪಿಯ ನಷ್ಟ ಕನಿಷ್ಠ ಪಕ್ಷ ನಲವತ್ತು ಸ್ಥಾನಗಳು.
ನಿಜ. ಈ ಭಾರಿ ನಷ್ಟಕ್ಕೆ ಯಡಿಯೂರಪ್ಪ ಅವರೊಬ್ಬರೇ ಕಾರಣರಲ್ಲ. ಸಾಮಾನ್ಯವಾಗಿ ಬಿಜೆಪಿಯನ್ನು ಬೆಂಬಲಿಸುವ ಪೇಟೆ-ಪಟ್ಟಣಗಳ ಮಧ್ಯಮ ವರ್ಗದ ಮತಗಳು ಕಾಂಗ್ರೆಸ್ಸಿನತ್ತ ಬೇರೆ ದಾರಿ ಇಲ್ಲದೇ ಹೋದವು ಎನ್ನುವುದು ಒಂದು ಶಾಸ್ತ್ರೀಯ ಸಂಖ್ಯಾಶಾಸ್ತ್ರದ ಆಧರಿತ ಅಧ್ಯಯನ ವರದಿಯ ಅನಿಸಿಕೆ. ಈಗ ಕಳೆದು ಹೋಗಿರುವ ಮತಗಳನ್ನು ಬಿಜೆಪಿ ಮತ್ತೆ ಗಳಿಸುವುದು ಸುಲಭವಲ್ಲ. ಬಿಜೆಪಿಯ ಕಾಲಾಳುಗಳ ಪಡೆ ಎನಿಸಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ವಯಂ ಸೇವಕರು ಉತ್ಸಾಹವನ್ನು ಕಳೆದುಕೊಂಡಿದ್ದಾರೆ.
ಈಗ ರಾಜ್ಯದಲ್ಲಿ ಅಳಿದುಳಿದಿರುವ ಬಿಜೆಪಿಯ ಶಾಸಕರ ಸಭೆಯಲ್ಲಿ ಅನೇಕ ಶಾಸಕರು ಹೇಗಾದರೂ ಮಾಡಿ ಯಡಿಯೂರಪ್ಪ ಅವರನ್ನು ಮತ್ತೆ ಪಕ್ಷಕ್ಕೆ ಕರೆದುಕೊಂಡು ಬರಬೇಕೆಂದು ಹೇಳಿದರೆಂದು ವರದಿ. ಅದು ಸಾಧ್ಯವೇ?
ಆದರೆ ಈಗ ಯಡಿಯೂರಪ್ಪ ಅವರಿಗೆ ಬಿಜೆಪಿಯ ಆಲಿಂಗನ ಬೇಕಾಗಿರುವಂತಿಲ್ಲ. ಅದರಿಂದ ಅವರಿಗೆ ಈಗ ಯಾವ ರಾಜಕೀಯ ಲಾಭವೂ ಇಲ್ಲ. ಅದಕ್ಕಿಂತ ಹೆಚ್ಚಾಗಿ, ಅವರು ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪಕ್ಷದ ಸಾಧನೆ, ಈಗಿನಷ್ಟು ಕಳಪೆಯಾಗಿರಬಹುದು ಎಂದು ಊಹಿಸಿರಲಿಲ್ಲ. ಸದ್ಯಕ್ಕೆ ಅವರ ಚಿಂತೆ-ಚಿಂತನೆಗೆ ಅದೇ ಗ್ರಾಸ. ಬಿಜೆಪಿ ಹಾಗೂ ಯಡಿಯೂರಪ್ಪ ನೇತೃತ್ವದ ಕೆಜೆಪಿಗಳ ಹೀನಾಯ, ಅತಿ ಹೀನಾಯ ಸೋಲಿನ ಹಿಂದಿರುವುದು ರಾಜ್ಯದ ಪ್ರಬಲವಾದ ರಾಜಕೀಯ ಕೋಮು ಎನ್ನಲಾದ ವೀರಶೈವರಲ್ಲಿ ಒಂದು ಗಮನಾರ್ಹವಾದ ಭಾಗ, (ಕಲಿತ-ಸುಶಿಕ್ಷಿತರು) ಕಾಂಗ್ರೆಸ್ಸಿನತ್ತಲೇ ವಾಲಿದ್ದು, ಚುನಾವಣೆ ಫಲಿತಾಂಶದ ಅಂಕಿ-ಅಂಶಗಳನ್ನು ಭೂತಗನ್ನಡಿ ಹಿಡಿದು ನೋಡಿದರೆ ಗೊತ್ತಾಗುತ್ತದೆ. ಅದನ್ನೇ ಕೆಲವು ಅಧ್ಯಯನ ಆಧರಿತ ವರದಿಗಳೂ ಪುಷ್ಟೀಕರಿಸಿವೆ.
ಈ ಪ್ರವೃತ್ತಿ ಇದ್ದಕ್ಕಿದ್ದಂತೆ ಮಾಯವಾಗುವಂತಹದ್ದಲ್ಲ. ಈಗಲೂ ಬಿಜೆಪಿ-ಯಡಿಯೂರಪ್ಪ ನಡುವೆ ಯಾವುದಾದರೊಂದು ರೀತಿಯ ಒಡಂಬಡಿಕೆಯಾದರೂ, ಹಿಂದಿನ ಪ್ರಚಂಡ ವೀರಶೈವ ಬೆಂಬಲವನ್ನು ಮತ್ತೆ ಪಡೆಯುವುದು ಮರೀಚಿಕೆಯೇ. ಸಿದ್ದರಾಮಯ್ಯ ಅವರೂ ಕೂಡಾ ಅಹಿಂದ (ಅಲ್ಪಸಂಖ್ಯಾತ, ಹಿಂದುಳಿದ ದಲಿತ) ಘೋಷಣೆಗಳನ್ನು ಎಷ್ಟೇ ಜೋರಾಗಿ ಕೂಗಿದರೂ "ಮೇಲಿನ ಒತ್ತಾಯದಿಂದಲೇ ಆದರೂ" ವೀರಶೈವ ಸಮಾಜವನ್ನು ಪರೋಕ್ಷವಾಗಿ ಓಲೈಸುವ ಪ್ರಯತ್ನ ಮಾಡುವುದಂತೂ ಖಚಿತ. ಕರ್ನಾಟಕದ ಯಾವುದೇ ರಾಜಕೀಯ ಪಕ್ಷವೇ ಆಗಲಿ ವೀರಶೈವರು, ಒಕ್ಕಲಿಗರನ್ನು ದೂರವಾಗಿಡುವ ಪ್ರಯತ್ನ ನಡೆಸಿದರೆ, ಆ ಪಕ್ಷ ಅಧಿಕಾರದ ಹತ್ತಿರಕ್ಕೇ ಬರುವುದು ಅಸಾಧ್ಯ.

ಮಠಮಾನ್ಯಗಳಿಗೆ ನೆರವು:
ಯಡಿಯೂರಪ್ಪ ಅವರೂ ಇಂತಹ ಸಂಕೀರ್ಣ ಪರಿಸ್ಥಿತಿಯನ್ನು ಎಚ್ಚರಿಕೆಯಿಂದಲೇ ಗಮನಿಸುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಠಮಾನ್ಯಗಳಿಗೆ ಜಗದೀಶ ಶೆಟ್ಟರ್ ಬಜೆಟ್‌ನಲ್ಲಿ ಒದಗಿಸಿದ್ದ ಹಣದಲ್ಲಿ ಎಷ್ಟರಮಟ್ಟಿಗೆ ಕಡಿಮೆ ಮಾಡುತ್ತಾರೆ, ಇಂತಹ ಕೊಡುಗೆಗಳಿಗೆ ಶಾಸ್ತ್ರೀಯವಾದ ಕಾಯಿದೆಯ, ನಿಯಮಗಳ ಚೌಕಟ್ಟನ್ನೇನಾದರೂ ರೂಪಿಸುತ್ತಾರಾ ಎನ್ನುವುದನ್ನು ಕಾದು ನೋಡಬೇಕಾಗುತ್ತದೆ.
"ಮಠಾಧಿಪತಿಗಳೇ ಹಣ ಕೇಳದಿದ್ರೂ ಇವರೇ (ಬಿಜೆಪಿ-ಯಡಿಯೂರಪ್ಪ) ಹಣ ಕೊಟ್ಟರು" ಎನ್ನುವ ಮಾತನ್ನು ಸಿದ್ದರಾಮಯ್ಯ ಈಗಾಗಲೇ ಅನೇಕ ಬಾರಿ ಬೇರೆ ಬೇರೆ ಸಂದರ್ಭಗಳಲ್ಲಿ ಹೇಳಿದ್ದಾರೆ. ಆದರೆ ತಮ್ಮ ಸರ್ಕಾರದ ನೀತಿಯನ್ನು ಪ್ರಕಟಿಸಿಲ್ಲ. ಅಗತ್ಯ ಕಂಡು ಬಂದರೆ, ಮಠಾಧೀಶ್ವರರು ಕೇಳಿದರೆ, ನಿಯಮಗಳಿಗೆ ಅನುಗುಣವಾಗಿ ನೆರವು ನೀಡಲೂ ಬಹುದೆನ್ನುವ ಸೂಚನೆಯನ್ನು ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರು ಬಿಜೆಪಿಯನ್ನು ಹೊರತುಪಡಿಸಿ ಇತರ ಪಕ್ಷಗಳ ಜತೆ ಅವಕಾಶ ಸಿಕ್ಕಾಗ, ಅಗತ್ಯ ಕಂಡುಬಂದಾಗ, ಸಕ್ರಿಯವಾಗಿ ಸಹಕರಿಸುವ ಮಾತನ್ನು ಆಡಿರುವುದು ತುಂಬಾ ಗಮನಾರ್ಹ ಹಾಗೂ ಅರ್ಥಗರ್ಭಿತವಾದದ್ದು. ಸ್ಥಳೀಯ ಸಂಸ್ಥೆಗಳ ಪದಾಧಿಕಾರಿಗಳ ಚುನಾವಣೆಯಲ್ಲಿ ಈ ಪ್ರಯೋಗ ನಡೆದರೂ ನಡೆಯಬಹುದು. ಅದಕ್ಕಿಂತ ಹೆಚ್ಚಿನ ರೀತಿಯ ರಾಜಕೀಯ ಸಹಕಾರವನ್ನು ಕಾಂಗ್ರೆಸ್ - ಜೆಡಿಎಸ್‌ಗಳು ಯಡಿಯೂರಪ್ಪ ಅವರಿಂದ ನಿರೀಕ್ಷಿಸಿಯೂ ಇಲ್ಲ, ಆ ಪಕ್ಷಗಳಿಗೆ ಅದು ಬೇಕು ಎಂದು ಕಂಡುಬಂದಿಲ್ಲ. "ಜಾತ್ಯತೀತ ದಳದ ಚುನಾವಣೆಯಲ್ಲಿನ ಸಾಧನೆ" ನಾಯಕರಿಗೆ ಸಮಾಧಾನವನ್ನು ತಂದುಕೊಡದೇ ಇದ್ದರೂ ಪಕ್ಷದ ಕಾರ್ಯಕರ್ತರು ಹಾಗೂ ಇತರರು ಇದಕ್ಕಿಂತ ಹೆಚ್ಚಿನದೇನನ್ನೂ ನಿರೀಕ್ಷಿಸಿರಲಿಲ್ಲ. ಯಾವ ಚುನಾವಣೆ ಸಮೀಕ್ಷೆಯ ವರದಿಯಲ್ಲೂ ಜೆಡಿಎಸ್‌ಗೆ ಈಗ ಸಿಕ್ಕಿರುವ ಸ್ಥಾನಗಳ ಸಂಖ್ಯೆಗಿಂತ ಹೆಚ್ಚಿನ ಸಂಖ್ಯೆಯನ್ನು ಹೇಳಿರಲಿಲ್ಲ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಈಗ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದಾರೆ - ಹಿಂದೆ ಬಿಜೆಪಿ ಸರ್ಕಾರವಿದ್ದಾಗಲೂ ಅದನ್ನು ವಿಧಾನಮಂಡಲದ ಹೊರಗಡೆ - ಒಳಗಡೆ ಖಡಾ ಖಡಿಯಾಗಿ ಎದುರಿಸಿ ನಿಂತಿದ್ದು ಜಾತ್ಯತೀತ ಜನತಾದಳವೇ. ಇತ್ತೀಚೆಗೆ ಪ್ರಕಟವಾಗಿರುವ, ಚುನಾವಣೆ ಫಲಿತಾಂಶದ ಅಂಕಿ-ಅಂಶಗಳ ವಿವರಗಳನ್ನು ಪರಿಶೀಲಿಸಿದರೆ, ಕಾಂಗ್ರೆಸ್ಸಿಗೆ ಅಹಿಂದ ಶಕ್ತಿಗಳು ನೀಡಿರುವ ಬೆಂಬಲ ಹಿಂದಿನ ಚುನಾವಣೆಗಿಂತ ತುಂಬಾ ಹೆಚ್ಚು ಎನ್ನುವುದಕ್ಕೆ ಯಾವ ಆಧಾರವೂ ಇಲ್ಲ.

ಶ್ರೀರಾಮುಲು ಸಾಧನೆ:
ಶ್ರೀರಾಮುಲು ನೇತೃತ್ವದ ಬಿಎಸ್ಸಾರ್ ಕಾಂಗ್ರೆಸ್ ಪಕ್ಷದ ಸಾಧನೆಯನ್ನು ನಿಜವಾಗಲೂ ಕಡೆಗಣಿಸುವಂತಿಲ್ಲ. ಬಿಜೆಪಿಯನ್ನು ಸೋಲಿಸುವುದರಲ್ಲಿ ಆ ಪಕ್ಷದ ಯಶಸ್ಸು ಅನೇಕ ರಾಜಕೀಯ ಪಂಡಿತರ ನಿರೀಕ್ಷೆಗಿಂತ ಹೆಚ್ಚು. ಆದರೆ ಆ ಶಕ್ತಿ ನಿರಂತರವಾಗಿ, ಆ ಪಕ್ಷದಲ್ಲೇ ಉಳಿದು ಬಿಡುತ್ತದೆ ಎಂದೇನೂ ಅಲ್ಲ. ಸದ್ಯಕ್ಕೆ ಶ್ರೀರಾಮುಲು ಪಕ್ಷದ ಎಲ್ಲ ಸಮಿತಿಗಳನ್ನು ವಿಸರ್ಜಿಸಿದ್ದಾರೆ. ಇಲ್ಲಿ ಗಮನಿಸಬೇಕಾದ ವಿಷಯ ಎಂದರೆ ಬಿಎಸ್ಸಾರ್ ಪಕ್ಷದ ಸಾಧನೆ, ಶ್ರೀರಾಮುಲು ಅವರ ವೈಯಕ್ತಿಕ ಸಂಘಟನೆಯ ಶಕ್ತಿಯ ಸಾಧನೆ ಎನ್ನುವುದನ್ನು. ಅವರ ಗಣಿಧಣಿಗಳ ಗುಂಪಿಗೆ ಸೇರಿದ ಯಾವ ಮಿತ್ರರೂ, ಶ್ರೀರಾಮುಲು ಅವರಿಗೆ ಬಹಿರಂಗವಾಗಿ ಬೆಂಬಲ ನೀಡಿರಲಿಲ್ಲ. ಶ್ರೀರಾಮುಲು ಅವರು ನಿಜವಾಗಿಯೂ ಸಾಧಿಸಿರುವುದು ರಾಜ್ಯದ ಹಲವು ಭಾಗಗಳಲ್ಲಿ ವಾಲ್ಮೀಕಿ ಅಥವಾ ಬೇಡ ಜನಾಂಗದ ಸಂಘಟನೆ. ಆ ಶಕ್ತಿಯನ್ನು ಅವರು ಯಾವ ರೀತಿ ಬಳಸುತ್ತಾರೋ ನೋಡಬೇಕು.

ಕಿಡಿಗೇಡಿತನ: ಕಳೆದ ವಾರವೆಲ್ಲ ಕ್ರಿಕೆಟ್ ನಿಯಂತ್ರಣ ಮಂಡಳಿ, ಐಪಿಎಲ್‌ಗಳ ಭ್ರಷ್ಟಾಚಾರದ ಸುದ್ದಿ, ವಿಶ್ಲೇಷಣೆಗಳ ಸುರಿಮಳೆಯಲ್ಲೂ ದೊಡ್ಡ ಸುದ್ದಿಯನ್ನು ಮಾಡಿದ್ದು ಇನ್‌ಪೊಸಿಸ್ ಸಂಸ್ಥೆಗೆ ಅದರ ಸಂಸ್ಥಾಪಕರಲ್ಲಿ ಒಬ್ಬರಾದ ಎನ್.ಆರ್. ನಾರಾಯಣಮೂರ್ತಿ ಹಿಂತಿರುಗಿದ್ದು ಹಾಗೂ ಅದರ ಸಾಧಕ-ಬಾಧಕಗಳ ವಿಶ್ಲೇಷಣೆ. ಈ ಕಾಯಕದಲ್ಲಿ ನಿರತರಾದ ಯಾವ ಪಂಡಿತರಿಗೂ ದೇಶದ ಸರ್ಕಾರಿ ವಲಯದ ಉದ್ಯಮಗಳು ನೆಲಕಚ್ಚಿರುವುದರಲ್ಲಿ ಏನೇನೂ ಆಸಕ್ತಿಯೇ ಇಲ್ಲದಿರುವುದು ಆಶ್ಚರ್ಯವೇ ಸರಿ.

- ಸತ್ಯ
anisikeprabha@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯ ಸರ್ಕಾರಕ್ಕೆ 'ಸ್ಟಿಂಗ್ ಆಪರೇಷನ್' ಆತಂಕ: ಟ್ರ್ಯಾಪ್‌ಗೆ ಯತ್ನ ನಡೆಯುತ್ತಿದೆ, ಹುಷಾರಾಗಿರಿ ; 5 ಸಚಿವರಿಗೆ ಡಿಕೆಶಿ ಎಚ್ಚರಿಕೆ ಸಂದೇಶ

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

‘ದಯವಿಟ್ಟು ಮಲಗಬೇಡಿ, ನಮಗೆ ನೀವು ಬೇಕು’: ಸಾವಿನ ದವಡೆಯಲ್ಲಿದ್ದ ಸ್ಮಿತ್ ಮಚ್ಚರ್'ಗೆ ಧೈರ್ಯ ತುಂಬಿದ ದಂತ ವೈದ್ಯ, Flydubai ವಿಮಾನದಲ್ಲಿ ಆ 45 ನಿಮಿಷಗಳಲ್ಲಿ ನಡೆದಿದ್ದೇನು..?