ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಬೆಳಗಾವಿಯಲ್ಲಿ ಕೈಗಾರಿಕಾ ಅಭಿವೃದ್ಧಿಯೆಂಬ ಬೃಹತ್ ಹೆಜ್ಜೆ

ಯಾವುದೇ ಪ್ರದೇಶದ ಅಭಿವೃದ್ಧಿ ಆಗಬೇಕಾದರೆ ಗ್ರಾಮೀಣ ಭಾಗದಲ್ಲಿ ಕೃಷಿ ಉತ್ಪಾದಕತೆ ಹಾಗೂ ನಗರ ಪ್ರದೇಶದಲ್ಲಿ ಕೈಗಾರಿಕಾ ಅಭಿವೃದ್ಧಿ ಅತಿ ಅಗತ್ಯವಾಗಿರುತ್ತದೆ.

Rashmi Kasaragodu
Updated On : 10 Jun 2013, 12:18 pm

ಯಾವುದೇ ಪ್ರದೇಶದ ಅಭಿವೃದ್ಧಿ ಆಗಬೇಕಾದರೆ ಗ್ರಾಮೀಣ ಭಾಗದಲ್ಲಿ ಕೃಷಿ ಉತ್ಪಾದಕತೆ ಹಾಗೂ ನಗರ ಪ್ರದೇಶದಲ್ಲಿ ಕೈಗಾರಿಕಾ ಅಭಿವೃದ್ಧಿ ಅತಿ ಅಗತ್ಯವಾಗಿರುತ್ತದೆ. ಪ್ರತಿಯೊಂದು ಜಿಲ್ಲೆಯ ಜಿಲ್ಲಾಧಿಕಾರಿಗಳು ಕೈಗಾರಿಕಾ ಏಕಗವಾಕ್ಷಿ ಸಭೆಯ ಅಧ್ಯಕ್ಷರಾಗಿರುತ್ತಾರೆ. ಈ ಸಭೆಯಲ್ಲಿ ಕೈಗಾರಿಕೆ ಇಲಾಖೆಯ ಅಧಿಕಾರಿಗಳು ಹಾಗೂ ಸಣ್ಣ ಮತ್ತ ಅತಿ ಸಣ್ಣ ಕೈಗಾರಿಕಾ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿರುತ್ತಾರೆ. ಪ್ರತೀ ತಿಂಗಳು ಈ ಸಭೆಯಲ್ಲಿ ಉದ್ಯಮಿಗಳು ಬಯಸಿದ ಪ್ರಸ್ತಾವನೆಗಳನ್ನು ವಿಮರ್ಶಿಸಿ ಅವರಿಗೆ ಬೇಕಾದ ಸೂಕ್ತ ಸ್ಥಳ, ವಿದ್ಯುತ್, ನೀರು ಹಾಗೂ ಇನ್ನಿತರ ಪರವಾನಗಿಗಳನ್ನು ನೀಡಲಾಗುತ್ತದೆ. ಇಂತಹ ಒಂದು ಸಭೆಯಲ್ಲಿ ನನ್ನ ಗಮನಕ್ಕೆ ಬಂದಿರುವ ವಿಶೇಷ ಸಂಗತಿ ಏನೆಂದರೆ, ನಮ್ಮ ಜಿಲ್ಲೆಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದ ಖ್ಯಾತಿ ಪಡೆದ ಕೆಲವು ಕೈಗಾರಿಕೆಗಳು ಸುಮಾರು ವರ್ಷಗಳಿಂದ ಕಾರ್ಯನಿರತವಾಗಿವೆ. ಆದರೆ, ಈವರೆಗೂ ಅವಕ್ಕೆ ಬೇಕಾದ ಮೂಲಭೂತ ಸೌಕರ್ಯಗಳು ಲಭ್ಯವಿಲ್ಲ. ಅದೇ ರೀತಿ ಬೆಳಗಾವಿಯಲ್ಲಿ ಒಂದು ಬೃಹತ್ತಾದ ಆಟೋಮೊಬೈಲ್ ಕೇಂದ್ರವನ್ನು ಸ್ಥಾಪಿಸಬೇಕೆಂದು ತೀರ್ನಾನಿಸಿ ಸರ್ಕಾರ ಕೋಟ್ಯಂತರ ರುಪಾಯಿಗಳನ್ನು ಖರ್ಚು ಮಾಡಿದೆ. ಆದರೆ, ಆ ಉದ್ಯಮದಲ್ಲಿ ಇದ್ದವರು ಹೊಸ ಕೈಗಾರಿಕಾ ಪ್ರದೇಶಕ್ಕೆ ಹೋಗುವುದಕ್ಕೆ ಇಷ್ಟಪಡುವುದಿಲ್ಲ. ಈ ರೀತಿ ಬೇಡಿಕೆ ಮತ್ತು ಪೂರೈಕೆಯಲ್ಲಿರುವ ತಾರತಮ್ಯವನ್ನು ವೀಕ್ಷಿಸಲು ನಾನು ಸಮಿತಿಯ ಸದಸ್ಯರೊಂದಿಗೆ ಸ್ಥಳ ಪರಿಶೀಲನೆ ನಡೆಸಿದೆ.  
ಬೆಳಗಾವಿಯ ಒಂದು ಕೈಗಾರಿಕೆಯಲ್ಲಿ 'ಉಪಗ್ರಹಗಳನ್ನು ಕಳುಹಿಸುವ ಯಂತ್ರಗಳಲ್ಲಿ' ಮುಖ್ಯವಾದ ಒಂದು ಭಾಗ ನಿರ್ಮಿಸಲಾಗುತ್ತಿತ್ತು. ಆದರೆ ಅಲ್ಲಿಗೆ ಹೋಗಲು ಒಂದು ಸರಿಯಾದ ರಸ್ತೆ ಸಹ ಇರಲಿಲ್ಲ. ತಯಾರಾದ ಸಾಮಾನನ್ನು ಟ್ರಕ್‌ಗಳಿಗೆ ತುಂಬುವುದು ಅವರಿಗೆ ದಿನನಿತ್ಯದ ಸವಾಲಾಗಿತ್ತು. ಈ ಪರಿಸ್ಥಿತಿ ಇನ್ನುಳಿದ ಕೈಗಾರಿಕೆಗಳಿಗೂ ಸಹ ಇತ್ತು. ಬಹಳಷ್ಟು ಕೈಗಾರಿಕೆಗಳನ್ನು ತುಂಬಾ ಕಷ್ಟದಲ್ಲಿ ನಡೆಸಲಾಗುತ್ತಿತ್ತು. ಅವರಿಗೆ ಸಾರ್ವಜನಿಕ ಸೌಲಭ್ಯ ಕೇಂದ್ರ ಅತೀ ಅಗತ್ಯವಾಗಿ ಬೇಕಾಗಿತ್ತು. ಅದಕ್ಕೆ ಜಾಗ ಲಭ್ಯವಿರಲಿಲ್ಲ. ಅದೇರೀತಿ ಬಹಳಷ್ಟು ಕೈಗಾರಿಕೆಗಳು ಪ್ರದೂಷಣದಿಂದ ವಾತಾವರಣ ಕಲುಷಿತವಾಗುತ್ತಿತ್ತು. ಇದಕ್ಕೂ ಸಹ ಕೇಂದ್ರ ಸರ್ಕಾರದ ಕೊಳಚೆ ನೀರಿನ ಸಂಸ್ಕರಣ ಘಟಕವನ್ನು ಹಾಕಲು ಕೋಟ್ಯಂತರ ರುಪಾಯಿ ಅನುದಾನ ಲಭ್ಯವಿತ್ತು. ಆದರೆ ಕಾರಣಾಂತರಗಳಿಂದ ಅದು ಸಾಕಾರ ಆಗಿರಲಿಲ್ಲ. ಅದೇ ರೀತಿ ಕರ್ನಾಟಕ ಕೆ.ಎಸ್.ಎಸ್.ಐ.ಡಿ.ಸಿ. ರವರ ಒನ್ ವೇ-ಬ್ರಿಡ್ಜ್ ಅಲ್ಲಿ ಲಭ್ಯವಿದ್ದೂ, ಎಲ್ಲರಿಗೂ ಸೌಕರ್ಯ ಒದಗಿಸಲಾಗುತ್ತಿರಲಿಲ್ಲ. ನೂರಾರು ಕೈಗಾರಿಕೆಗಳು ಇರುವ ಈ ಪ್ರದೇಶದಲ್ಲಿ ಕೆಲಸ ಮಾಡುವ ಸಾವಿರಾರು ಕಾರ್ಮಿಕರಿಗಾಗಿ ಸರಿಯಾದ ಉಪಹಾರ ಗೃಹ, ಶೌಚಾಲಯ ಹಾಗೂ ಸಣ್ಣ ಮಕ್ಕಳಿಗೆ ಶಿಶುಕೇಂದ್ರದ ವ್ಯವಸ್ಥೆಯೂ ಇರಲಿಲ್ಲ. ಉದ್ಯಮಿಗಳು ಇವೆಲ್ಲಾ ಸೌಲಭ್ಯಗಳನ್ನು ತಾವು ನೀಡಲು ಸಿದ್ಧರಿದ್ದೇವೆಂದು ಮುಂದೆ ಬಂದಾಗ ಕೈಗಾರಿಕೆ ಪ್ರದೇಶದಲ್ಲಿ ಲಭ್ಯವಿರುವ ನಾಲ್ಕು ಎಕರೆ ಜಾಗವನ್ನು ನಾವು ಈ ಸೌಲಭ್ಯಗಳಿಗೆ ಕಾಯ್ದಿರಿಸಲು ಸ್ಥಳದಲ್ಲಿಯೇ ನಿರ್ಧರಿಸಿದೆವು.
  ನಂತರ, ಹೊಸದಾಗಿ ರಚಿಸಿದ ಆಟೋನಗರಗಳಿಗೆ ಭೇಟಿ ನೀಡಿದೆವು. ಬೃಹತ್ ರಸ್ತೆಗಳು, ಚರಂಡಿ, ಬೀದಿ ದೀಪ, ನೀರಿನ ಪೈಪ್ಗಳು ಮುಂತಾದ ಎಲ್ಲಾ ವ್ಯವಸ್ಥೆಗಳು ಅಲ್ಲಿ ಇದ್ದರೂ ಕೈಗಾರಿಕೆಗಳು ಮಾತ್ರ ಇರಲಿಲ್ಲ.  ಕೆಲವು ಜಾಗಗಳಲ್ಲಿ ಜನ ಮನೆಯನ್ನೂ ಸಹ ಮಾಡಿಕೊಂಡಿದ್ದರು. ಕಾರಣ ಏನೆಂದರೆ, ಹಳೇ ಕಾಲದಿಂದ ಆಟೋ ರಿಪೇರಿಯನ್ನು ಮಾಡುವಂಥ ಉದ್ಯಮಿಗಳು ಯಾವಾಗಲೂ ಬೆಳಗಾಂ-ಪುಣೆ ರಾಷ್ಟ್ರೀಯ ಹೆದ್ದಾರಿಯ ಮೇಲೆಯೇ ಕೆಲಸ ನಿರ್ವಹಿಸುತ್ತಾ ಬಂದಿದ್ದರು. ಆದರೆ, ಈ ಕೈಗಾರಿಕಾ ಪ್ರದೇಶ ನ್ಯಾಷನಲ್ ಹೆದ್ದಾರಿಯಿಂದ ಮೂರು ಕಿ.ಮೀ. ಒಳಗೆ ಹೋಗಿತ್ತು. 'ರಾಷ್ಟ್ರೀಯ ಹೆದ್ದಾರಿಯನ್ನು ಬಿಟ್ಟುಹೋದರೆ ನಮಗೆ ಯಾವ ವ್ಯಾಪಾರವೂ ಸಿಗುವುದಿಲ್ಲ' ಎನ್ನುವುದು ಆಟೋಮೊಬೈಲ್ ಗರಾಜಿನವರ ವಾದವಾಗಿತ್ತು.  ಆಗ ಕಂದಾಯ ಇಲಾಖೆ ಹಾಗೂ ಕೈಗಾರಿಕೆ ಇಲಾಖೆಯ ಜಂಟಿ ಸಮೀಕ್ಷೆ ನಡೆಸಿ ರಾಷ್ಟ್ರೀಯ ಹೆದ್ದಾರಿಗೆ ತಾಗಿ ಈ ಪ್ರದೇಶಕ್ಕೆ ನೇರ ಸಂಪರ್ಕ ನೀಡುವ ಒಂದು ರಸ್ತೆಗಾಗಿ ತಕ್ಷಣ ಭೂ ಸ್ವಾಧೀನ ಪ್ರಕ್ರಿಯೆಯನ್ನು ಪ್ರಾರಂಭಿಸಲು ಸೂಚಿಸಿದೆ.  ಈ ಪ್ರಕ್ರಿಯೆ ಮುಂದುವರೆಸುವಾಗ ಅಸೋಸಿಯೇಷನ್‌ನ ಮೂಲಕ ಎಲ್ಲಾ ಸದಸ್ಯರಿಗೆ ಸಮಯಬದ್ಧವಾಗಿ ಆಟೋಮೊಬೈಲ್ ಪಾರ್ಕ್‌ಗೆ ಸ್ಥಳಾಂತರ ಮಾಡಬೇಕೆಂದು ಒತ್ತಾಯಿಸಿದೆ. ಒಂದು ವೇಳೆ ಆ ಸಮಯ ಮಿತಿಯನ್ನು ಮೀರಿ ಅವರು ಸ್ಥಳಾಂತರವಾಗದೇ ಹೋದರೆ, ಮಹಾನಗರ ಪಾಲಿಕೆಯಿಂದ ಅವರ ವ್ಯಾಪಾರದ ಪರವಾನಗಿ ಹಾಗೂ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗುವುದೆಂದು ಎಚ್ಚರಿಕೆ ಸಹ ನೀಡಿದೆ. ಮಾತ್ರವಲ್ಲ,
ಉದ್ಯಮಿಗಳ ಇನ್ನೊಂದು ದೊಡ್ಡ ಬೇಡಿಕೆ ಏನೆಂದರೆ, ನಾವು ಅತ್ಯುತ್ತಮ ಗುಣಮಟ್ಟದ ಸಾಮಾನುಗಳನ್ನು ತಯಾರಿಸಿದರೂ ಸಹ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರಿಯ ಮಟ್ಟದಲ್ಲಿ ನಮಗೆ ಸರಿಯಾದ ಮಾರುಕಟ್ಟೆ ಮಾಡುವುದರಲ್ಲಿ ಕಷ್ಟವಾಗುತ್ತದೆ. ಮಾತ್ರವಲ್ಲ ಬೇರೆಬೇರೆ ಹಂತದಲ್ಲಿ ಹೊಸ ತಾಂತ್ರಿಕ ಬೆಳವಣಿಗೆಗಳನ್ನು ಹಮ್ಮಿಕೊಳ್ಳದೇ ಹೋದರೆ, ಜಾಗತಿಕ ಸ್ಪರ್ಧೆಯಲ್ಲಿ ಹಿಂದೆ ಬೀಳುತ್ತೇವೆ. ಆದುದರಿಂದ ಕೈಗಾರಿಕಾ ಚಟುವಟಿಕೆಗಳಲ್ಲಿ ಹೊಸ ಉತ್ತೇಜನ ನೀಡುವ ಸಲುವಾಗಿ ಒಂದು ವಿಚಾರ ವಿನಿಮಯ ಗೋಷ್ಠಿ ಮತ್ತು ಪ್ರದರ್ಶನಕ್ಕಾಗಿ ಸಂಕೀರ್ಣವನ್ನು ನಿರ್ಮಿಸಬೇಕಾಗಿದೆ ಎಂಬುದು. ಅದರಂತೆ ಸುಮಾರು ಹನ್ನೆರಡು ಕೋಟಿ ವೆಚ್ಚದ ಅಂತಾರಾಷ್ಟ್ರೀಯ ಮಟ್ಟದ ಸಂಕೀರ್ಣವನ್ನು ನಿರ್ಮಿಸಲು ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಪ್ರದೇಶ ಮಂಡಳಿ ಜೊತೆಗೆ ಚರ್ಚೆ ನಡೆಸಿ ಪ್ರಸ್ತಾವನೆ ತಯಾರಿಸಿದೆ. ಅದೇ ರೀತಿ ಮೂಲಭೂತ ಸೌಕರ್ಯಗಳಿಗೆ ಈಗಾಗಲೇ ಕೈಗಾರಿಕಾ ಪ್ರದೇಶಗಳಿಗೆ ಒಂದು ಪ್ರತ್ಯೇಕ ಅಧಿನಿಯಮ ಇದ್ದರೂ ಸಹ ಸುತ್ತುಮುತ್ತಲಿನ ಗ್ರಾಮ ಪಂಚಾಯ್ತಿಗಳು ಕರ ವಸೂಲಾತಿಗಾಗಿ ಹಾಗೂ ವ್ಯಾಪಾರದ ಪರವಾನಗಿಗಾಗಿ ಅನಾವಶ್ಯಕ ಕಿರುಕುಳವನ್ನು ನೀಡುತ್ತಾರೆಂದು ಉದ್ಯಮಿಗಳು ತಿಳಿಸಿದರು. ಈ ವಿಷಯವನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ಚರ್ಚಿಸಿ ಸಂಬಂಧಪಟ್ಟ ಗ್ರಾಮಪಂಚಾಯ್ತಿಗಳಿಗೆ ಸೂಕ್ತ ಸೂಚನೆಗಳನ್ನು ನೀಡಲಾಯಿತು. ಸಣ್ಣ ಕೈಗಾರಿಕೆಗಳು ಬೆಳೆಯುತ್ತಿದ್ದರೆ ನಮ್ಮ ಜನರಿಗೆ ಉದ್ಯೋಗವಕಾಶ ಸಿಗುತ್ತದೆ ಹಾಗೂ ನಮ್ಮ ಪ್ರದೇಶಕ್ಕೆ ಹೆಚ್ಚಿನ ಬಂಡವಾಳ ಮತ್ತು ಆದಾಯ ಬರುತ್ತದೆ.  ಆದುದರಿಂದ ಜನ ಸಾಮಾನ್ಯರ ಜೀವನ ಗುಣಮಟ್ಟವನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ. ಅಂತಹ ತಿಳುವಳಿಕೆಯನ್ನು ಜನ ಸಾಮಾನ್ಯರಲ್ಲಿ ಮೂಡಿಸುವುದು ತುಂಬಾ ಅಗತ್ಯ.  
ಸಣ್ಣ ಕೈಗಾರಿಕೆಗಳೊಂದಿಗೆ ದೊಡ್ಡ ಕೈಗಾರಿಕೆಗಳು ಸಹ ಇದ್ದರೆ ಆಮದು ಮತ್ತು ರಫ್ತು ಪ್ರಕ್ರಿಯೆ ಸಕ್ರಿಯವಾಗುತ್ತದೆ. ಹಾಗೂ ಹೆಚ್ಚು ಸಣ್ಣ ಕೈಗಾರಿಕೆಗಳಿಗೆ ಮತ್ತು ಕಾರ್ಮಿಕರಿಗೆ ಉದ್ಯೋಗಾವಕಾಶ ಸಿಗುತ್ತದೆ.  ಇದಕ್ಕಾಗಿ ವಿಶೇಷ ಆರ್ಥಿಕ ವಲಯ ಎಂಬ ಹೊಸ ಪ್ರಯೋಗ ಮಹಾರಾಷ್ಟ್ರದಲ್ಲಿ ಬಹಳ ಯಶಸ್ವಿಯಾಗಿ ನಡೆದಿರುವುದನ್ನು ಗಮನಿಸಿದೆ. ಇದಕ್ಕೆ ಕನಿಷ್ಠ ಮೂರು ಸಾವಿರ ಎಕರೆ ಜಮೀನು ಸರ್ಕಾರ ಒದಗಿಸಬೇಕಾಗಿತ್ತು.  ಆಗ ಒಬ್ಬ ಖಾಸಗಿ ಸಂಸ್ಥೆಯ ಜೊತೆಗೆ ಸರ್ಕಾರಿ ಖಾಸಗಿ ಸಹಭಾಗಿತ್ವದ ಮಾದರಿಯಲ್ಲಿ ಒಂದು ನಿರ್ಧಿಷ್ಟ ಕೈಗಾರಿಕೆಯನ್ನು ಬೆಳೆಸಬಹುದಾಗಿದೆ. ನಮ್ಮ ಕಂದಾಯ ಅಧಿಕಾರಿಗಳನ್ನು ಕೇಳಿದರೆ ಅಷ್ಟು ಪ್ರಮಾಣದಲ್ಲಿ ಸರ್ಕಾರಿ ಜಮೀನು ಲಭ್ಯವಿಲ್ಲವೆಂದು ತಿಳಿಸಿದರು. ಖಾಸಗಿ ಜಮೀನನ್ನು ಭೂ ಸ್ವಾಧೀನ ಮಾಡಿ ರೈತರ ಜೀವನೋಪಾಯವನ್ನು ಕಸಿದುಕೊಂಡು ಕೈಗಾರಿಕೆಯನ್ನು ಬೆಳೆಸಲು ನನಗೆ ಇಷ್ಟವಿರಲಿಲ್ಲ. ಆಗ ನನ್ನ ಕಂದಾಯ ಇಲಾಖೆಯ ಎಲ್ಲಾ ತಂಡವನ್ನು ಜೊತೆಗೆ ಕರೆದುಕೊಂಡು ನೇರವಾಗಿ ರಾಷ್ಟ್ರೀಯ ಹೆದ್ದಾರಿಯ ಸುತ್ತಮುತ್ತ ಸುತ್ತಾಡಲು ಪ್ರಾರಂಭ ಮಾಡಿದೆ. ಬೆಳಗಾಂನಿಂದ ಪುಣೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು 30-35 ಕಿ.ಮೀ. ದೂರದಲ್ಲಿ ಒಂದು ಹಳ್ಳಿ ನನಗೆ ಕಂಡಿತು. ಅಲ್ಲಿ ಸಾವಿರಾರು ಎಕರೆ ಭೂಮಿ ಖಾಲಿ ಬಿದ್ದಿತ್ತು, ಸ್ವಲ್ಪಮಟ್ಟಿಗೆ ಅದು ಗುಡ್ಡಗಾಡು ಜಮೀನಾಗಿತ್ತು. ಆದರೆ ಎಲ್ಲಿಯೂ ಜನ ವಸತಿ ಇಲ್ಲವೆಂದು ಕಂಡಾಗ ನನಗೆ ಆಶ್ಚರ್ಯವಾಯಿತು. ಆಗ ಗ್ರಾಮಲೆಕ್ಕಾಧಿಕಾರಿಯವರು ಪರಿಶೀಲಿಸಿದಾಗ ಸದರಿ ಭೂಮಿ ಹಳೇ ಆರ್.ಟಿ.ಸಿ. ಪ್ರಕಾರ ಒಂದು ಇನಾಂ ಭೂಮಿ ಆಗಿತ್ತು. ಭೂ ಸುಧಾರಣೆ ಕಾಯ್ದೆ ಬಂದಾಗ ಒಂದು ನಿರ್ದಿಷ್ಟ ಭೂಮಿ ವಿಸ್ತರಣೆಗಿಂತ ಜಾಸ್ತಿ ಭೂಮಿ ಒಬ್ಬರ ಹತ್ತಿರ ಇದ್ದರೆ ಅದು ಸರ್ಕಾರಕ್ಕೆ ವಾಪಸ್ಸು ಬರಬೇಕಾಗಿತ್ತು. ಆದರೆ, ಈ ಪ್ರಕರಣದಲ್ಲಿ ಇನಾಂ ಭೂ ಮಾಲೀಕರ ಮೊಮ್ಮಕ್ಕಳು ಮಹಾರಾಷ್ಟ್ರದಲ್ಲಿ ವಾಸ ಮಾಡುತ್ತಿದ್ದು, ಕಂದಾಯ ದಾಖಲೆಗಳಲ್ಲಿ ಇನ್ನು ಬದಲಾವಣೆಗಳನ್ನು ಮಾಡಿರಲಿಲ್ಲ. ಆದುದರಿಂದ ತಕ್ಷಣ ಭೂಮಿಯನ್ನು ಸರ್ಕಾರಕ್ಕೆ ಹಿಂಪಡೆದು ಕೈಗಾರಿಕಾ ಇಲಾಖೆಗೆ ಸದರಿ ಭೂಮಿಯನ್ನು ವಿಶೇಷ ಆರ್ಥಿಕ ವಲಯವನ್ನು ಸ್ಥಾಪಿಸಲು ಪ್ರಸ್ತಾವನೆಯನ್ನು ಕಳುಹಿಸಿದಾಗ ಇಲಾಖೆಯವರು ತುಂಬಾ ಸಂತೋಷಪಟ್ಟರು. ಅದೇ ರೀತಿ ಮಾಹಿತಿ ತಂತ್ರಜ್ಞಾನ ಆಧಾರಿತ ಕೈಗಾರಿಕೆಗಳನ್ನು ಸ್ಥಾಪಿಸಲು ತಾಂತ್ರಿಕ ವಿಶ್ವವಿದ್ಯಾಲಯದ (ವಿ. ಟಿ. ಯು) ಹತ್ತಿರ 100 ಎಕರೆ ಸರ್ಕಾರಿ ಭೂಮಿಯನ್ನು ನೀಡಿದೆ. ಯಾವುದೇ ಹಣವನ್ನು ಖರ್ಚು ಮಾಡದೇ ಸಮಯವನ್ನು ಕಳೆಯದೇ, ರೈತರನ್ನು ಸ್ಥಳಾಂತರ ಮಾಡದೇ ಬೃಹತ್ ಕೈಗಾರಿಕೆಗೆ ಅನುವು ಮಾಡಿಕೊಡುವಂಥ ಈ ಪ್ರಸಂಗ ಸ್ಥಳ ಪರಿಶೀಲನೆ ಮಾಡದೇ ಹೋಗಿದ್ದರೆ ಸಾಧ್ಯವಾಗುತ್ತಿರಲಿಲ್ಲ.  
(ಮುಂದುವರೆಯುವುದು)

- ಶಾಲಿನಿ ರಜನೀಶ್, ಐಎಎಸ್
anisikeprabha@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement