ಬುಡಕಟ್ಟು ಜನಾಂಗಗಳಲ್ಲೇ ಏಕೆ ಹೆಚ್ಚುತ್ತಿದೆ ಆತಂಕ ಮತ್ತು ವಿದ್ರೋಹ?
ನಕ್ಸಲ್ ಸಮಸ್ಯೆಯ ಬಗ್ಗೆ ಜೂನ್ 10ರಂದು ಸರ್ವದಳಗಳ ಸಭೆ ನಡೆಯಲಿದೆ. ಆದರೆ ಈ ಆತಂಕವಾದ ಮತ್ತು ಅಸಂತೋಷದ ಇನ್ನೊಂದು ಸಮಸ್ಯೆಯ ಬಗ್ಗೆ ಮಾತ್ರ ಎಲ್ಲೂ ಚರ್ಚೆಯಾಗುತ್ತಿಲ್ಲ. ದೇಶದ 98 ಪ್ರತಿಶತ ಆತಂಕವಾದ ಕೇವಲ ಬುಡಕಟ್ಟು ಪ್ರದೇಶಗಳಲ್ಲೇ ಏಕೆ ಹೆಚ್ಚಾಗಿದೆ? ಬುಡಕಟ್ಟು ಜನಾಂಗದ ಪ್ರಮಾಣ ಜನಸಂಖ್ಯೆಯ 8 ಪ್ರತಿಶತದಷ್ಟಿದೆ. ಪೂರ್ವಾಂಚಲದ ಎಂಟೂ ಪ್ರದೇಶಗಳು(ಸಿಕ್ಕಿಂ ಒಳಗೊಂಡು), ಜಾರ್ಖಂಡ್, ಛತ್ತೀಸ್ಗಢ, ಒಡಿಶಾ, ಮಧ್ಯ ಪ್ರದೇಶ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಹಿಮಾಚಲ, ಲದಾಖ್, ಅಂಡಮಾನ್-ನಿಕೋಬಾರ್ ಮತ್ತು ಲಕ್ಷದ್ವೀಪದಲ್ಲಿ ಬುಡಕಟ್ಟು ಜನರ ಸಂಖ್ಯೆ ಅತ್ಯಧಿಕವಾಗಿದ್ದರೆ, ಆಂಧ್ರ, ಗುಜರಾತ್, ಕರ್ನಾಟಕ, ಉತ್ತರ ಪ್ರದೇಶ, ಉತ್ತರಾಖಂಡ, ಕೇರಳ ಮತ್ತು ತಮಿಳುನಾಡಿನಲ್ಲಿ ಅವರ ಸಂಖ್ಯೆ ಕಡಿಮೆಯಿದೆ. ಈ ಪ್ರದೇಶಗಳಲ್ಲಿ ಸಕ್ರಿಯವಾಗಿರುವ ಸುಮಾರು 35 ಸಂಘಟನೆಗಳನ್ನು ಗೃಹ ಮಂತ್ರಾಲಯ ನಿಷೇಧಿಸಿದೆ. ಅವುಗಳಲ್ಲಿ ಬಹುತೇಕ ಸಂಘಟನೆಗಳು ಬುಡಕಟ್ಟು ಜನರ ಸಂಖ್ಯೆ ಹೆಚ್ಚಾಗಿ ಇರುವ ಪೂರ್ವಾಂಚಲ ಮತ್ತು ಛತ್ತೀಸ್ಗಢದಲ್ಲಿ ಹೆಚ್ಚು ಸಕ್ರಿಯವಾಗಿವೆ.
ನಾನು ಭಾರತೀಯ ವನವಾಸಿ ಕಲ್ಯಾಣ ಆಶ್ರಮದಲ್ಲಿ 5 ವರ್ಷ ಪೂರ್ಣಕಾಲಿಕ ಕಾರ್ಯಕರ್ತನಾಗಿ, ಮಹಾರಾಷ್ಟ್ರ, ಗುಜರಾತ್ ಮತ್ತು ನೆರೆಯ ಕೇಂದ್ರಾಡಳಿತ ಪ್ರದೇಶಗಳಾದ ದಾದರ್ ಮತ್ತು ನಾಗರ ಹವೇಲಿಯಲ್ಲಿ ಕೆಲಸ ಮಾಡಿದ್ದೇನೆ. ಅಲ್ಲಿ ಶಾಲೆಗಳನ್ನು ತೆರೆಯಲಾಯಿತು. ಜಾಗೃತಿ ಕೇಂದ್ರ, ಧರ್ಮ ಜಾಗರಣ ಕೇಂದ್ರಗಳನ್ನು ಸ್ಥಾಪಿಸಲಾಯಿತು. ಪ್ರಸಿದ್ಧ ಸಿಖ್ಖ ಇತಿಹಾಸಕಾರ ಡಾ. ಗೋಪಾಲ್ ಸಿಂಗ್ ಅವರ ಸಹಯೋಗದಿಂದ ರಾಂಧಾದಲ್ಲಿ ದೊರೆತ 100 ಎಕರೆ ಜಮೀನಿನಲ್ಲಿ ರಾಷ್ಟ್ರೀಯ ಮಟ್ಟದ ಬುಡಕಟ್ಟು ಪ್ರಶಿಕ್ಷಣ ಕೇಂದ್ರವನ್ನೂ ತೆರೆದಿದ್ದೇವೆ. ಇದರ ಉದ್ಘಾಟನೆಗಾಗಿ ಅಂದಿನ ರಾಷ್ಟ್ರಪತಿ ಜೈಲ್ ಸಿಂಗ್ ಅವರು ಬಂದಿದ್ದರು. ಆದರೆ ಈ ಕೆಲಸದಲ್ಲಿ ನಿರತವಾಗಿದ್ದಾಗ ನಮಗೆ ಯಾವಾಗಲೂ ಅನಿಸುತ್ತಿದ್ದುದೇನೆಂದರೆ ಸಮಾಜ, ಬುಡಕಟ್ಟು ಜನಾಂಗದ ಬಗ್ಗೆ ಸಂವೇದನಾರಹಿತವಾಗಿದೆ ಎಂದು. ಎಲ್ಲರಿಗಿಂತಲೂ ಹೆಚ್ಚು ಶೋಷಣೆ, ಭ್ರಷ್ಟಾಚಾರ ಮತ್ತು ಹಿಂದುಳಿಯುವಿಕೆ ಬುಡಕಟ್ಟು ಜನಾಂಗದಲ್ಲೇ ಏಕೆ ಹೆಚ್ಚಾಗಿ ಇದೆ ಎಂಬುದನ್ನು ಯೋಚಿಸಿ?
ಇಡೀ ಪ್ರಪಂಚದಲ್ಲಿ ಆಫ್ರಿಕಾದ ನಂತರ ಅತಿಹೆಚ್ಚು ಬುಡಕಟ್ಟು ಜನರಿರುವ ದೇಶ ಭರತವರ್ಷ. ಸುಮಾರು 635 ವರ್ಗಗಳು ಅಥವಾ ಜಾತಿಯಲ್ಲಿ ವಿಂಗಡಿತವಾಗಿರುವ ಈ ಸಮಾಜದಲ್ಲಿ 75 ಬುಟಕಟ್ಟು ಜಾತಿಗಳನ್ನು ಆದಿಕಾಲದ ಅಥವಾ ಪ್ರಾಚೀನ ಮಾನವ ಸಭ್ಯತೆಯೊಂದಿಗೆ ಸಂಬಂಧಿಸಿದವೆಂದು ಹೇಳಲಾಗುತ್ತದೆ. ಇಡೀ ಬುಡಕಟ್ಟು ಜನಾಂಗಗಳಲ್ಲಿ ಬಡತನ ರೇಖೆಗಿಂತ ಕೆಳಗಿರುವವರ ಸಂಖ್ಯೆಯೇ ಅಧಿಕವಿದೆ. ಬಾಲಕ ಮತ್ತು ಬಾಲಕಿಯರ ನಡುವೆ ಸುಮಾರು 50 ಪ್ರತಿಶತ ಮಕ್ಕಳು 5 ತರಗತಿಗಿಂತಲೂ ಮೊದಲೇ ಶಾಲೆಯಿಂದ ಹೊರಬೀಳುತ್ತಾರೆ. ಇಂತಹ ಕ್ಷೇತ್ರಗಳಲ್ಲಿ ಕೆಲಸ ಮಾಡಲು ಯಾವ ಅಧಿಕಾರಿಗಳಿಗೂ ಇಷ್ಟವಿರುವುದಿಲ್ಲ. ಒಂದು ವೇಳೆ ಒಬ್ಬ ಅಧಿಕಾರಿಯ ಪೋಸ್ಟಿಂಗ್ ಇಂತಹ ಸ್ಥಳಗಳಲ್ಲಿ ಆಯಿತೆಂದರೆ, ಆತ ಅದನ್ನು 'ಶಿಕ್ಷೆ' ಎಂದೇ ಭಾವಿಸುತ್ತಾನೆ. ಇನ್ನು ಶಿಶು ಮರಣ ಪ್ರಮಾಣವೂ ಈ ಜನಾಂಗದಲ್ಲಿ ಅಧಿಕವಿದೆ. ಈ ಕ್ಷೇತ್ರಗಳಲ್ಲಿ ಆದಾಯ ಕಡಿಮೆ ಇರುವುದರಿಂದ ಖರ್ಚು ಮಾಡುವವರ ಸಂಖ್ಯೆಯೂ ಕಡಿಮೆಯೇ ಇದೆ. ಇದೇ ಕಾರಣದಿಂದಾಗಿ ರಸ್ತೆ, ವಿದ್ಯುತ್, ಆಸ್ಪತ್ರೆ, ಮೊಬೈಲ್ ಫೋನ್ ಅಥವಾ ಅಂತರ್ಜಾಲ ಸೌಲಭ್ಯಗಳು ಇಲ್ಲಿ ಹೆಚ್ಚಾಗಿ ಇರುವುದಿಲ್ಲ. ಶಿಕ್ಷಣದ ಕೊರತೆಯಿಂದ ಮತ್ತು ಅಧಿಕಾರಿಗಳಿಂದ ಶೋಷಣೆಗೊಳಗಾಗಿ ಬುಡಕಟ್ಟು ಜನಾಂಗ ಯಾವಾಗಲೂ ತುಳಿತಕ್ಕೊಳಗಾಗಿಯೇ ಇರುತ್ತದೆ. ಹೀಗಾಗಲು ಇನ್ನೊಂದು ಕಾರಣವೆಂದರೆ, ಅವರ ನಾಯಕರು ನಗರದ ರಾಜಕಾರಣಕ್ಕೆ ಮಾರುಹೋಗಿ ತಮ್ಮವರನ್ನು ಮರೆತುಹೋಗುವುದು. ಇದೇ ಕಾರಣಕ್ಕಾಗಿ ಬುಡಕಟ್ಟು ಜನರಲ್ಲಿನ ಸಿಟ್ಟು, ಅಸಂತೋಷ ಮತ್ತು ಆಕ್ರೋಷ ಸ್ವಾಭಾವಿಕವೇ ಆಗಿದೆ. ಮಾವೋವಾದಿಗಳು ಇದೇ ಅಸಂತೋಷದ ಉಪಯೋಗ ಪಡೆದು ತಮ್ಮ ಪ್ರಭಾವದ ವಿಸ್ತರಣೆ ಮಾಡಿಕೊಳ್ಳುತ್ತಾರೆ.
ನೀವು ಎಂದಾದರೂ ಸಂಸತ್ತಿನಲ್ಲಿ ಬುಡಕಟ್ಟು ಜನಾಂಗದ ಸಮಸ್ಯೆಗಳ ಬಗ್ಗೆ ಚರ್ಚೆಯಾದದನ್ನು ಕೇಳಿದ್ದೀರಾ? ಉಳಿದ ಜಾತಿಗಳ ದಿಟ್ಟ ಮತ್ತು ಧನಿಕ ನಾಯಕರು ತಮ್ಮ ತಮ್ಮ ದೃಷ್ಟಿಕೋನದ ಅನುಸಾರವಾಗಿ ಸಂಸದೀಯ ಚರ್ಚೆಗಳ ರೂಪವನ್ನು ನಿರ್ಧರಿಸುತ್ತಾರೆ. ಪರಿಶಿಷ್ಟ ಜಾತಿಯ ನಾಯಕರು ಈಗ ಬಹಳಷ್ಟು ಬೆಳೆದಿದ್ದಾರೆ ಮತ್ತು ಸಂಸತ್ತಿನ ಎರಡೂ ಸದನಗಳಲ್ಲೂ ಅವರ ದನಿ ಜೋರಾಗಿಯೇ ಕೇಳಿಬರುತ್ತಿದೆ. ರಾಜನೀತಿಕ ದಳಗಳು ಅವರನ್ನು ಅಲಂಕಾರಿಕ ಬೊಂಬೆಗಳಂತೆ ಬಳಸುತ್ತಿವೆ. ನಿರ್ಣಾಯಕ, ಆದರೆ ದೊಡ್ಡ ದೊಡ್ಡ ಶಬ್ದಭಂಡಾರಗಳಿಂದ ಕೂಡಿದ ಫಾಲ್ತೂ ಪದಗಳ ಮೇಲೆ ಅವರನ್ನು ಕೂಡಿಸಿಬಿಟ್ಟರೆ ತಮ್ಮ ಕರ್ತವ್ಯ ಮುಗಿಯಿತು ಎಂದು ಭಾವಿಸುತ್ತಿವೆ. ಮಾಧ್ಯಮಗಳಲ್ಲಿ ಬುಡಕಟ್ಟು ಜನಾಂಗದ 1 ಪ್ರತಿಶತದಷ್ಟು ಜನರೂ ಕಾಣಿಸುವುದಿಲ್ಲ. ಇಡೀ ಮಾಧ್ಯಮ ವಲಯದಲ್ಲಿ ಅವರನ್ನು ಪ್ರತಿನಿಧಿಸುವವರ ಸಂಖ್ಯೆ ಚಿಟಿಕೆ ಉಪ್ಪಿನಷ್ಟೂ ಇಲ್ಲ. ಮಣಿಪುರದಂತಹ ಬುಡಕಟ್ಟು ಕ್ಷೇತ್ರಗಳ ಹೆದ್ದಾರಿಗಳನ್ನು ಆತಂಕವಾದಿಗಳು ವರ್ಷದ 100-150 ದಿನಗಳವರೆಗೆ ಬಂದ್
ಮಾಡಿರುತ್ತಾರೆ, ನಿರಂತರವಾಗಿ ಪ್ರತಿಭಟನೆಗಳನ್ನು ನಡೆಸುತ್ತಾರೆ. ಇದರಿಂದಾಗಿ ಅಲ್ಲಿನ ಜನ ಜೀವನ ದೀನ ಸ್ಥಿತಿಗೆ ಬಂದು ತಲುಪುತ್ತದೆ. ಆದರೆ ದೆಹಲಿ, ಮುಂಬೈ, ಚೆನೈನ ಮಾಧ್ಯಮಗಳಲ್ಲಿ ಇದರ ಬಗ್ಗೆ ಚಿಕ್ಕ ಉಲ್ಲೇಖವೂ ಇರುವುದಿಲ್ಲ!
ಎಲ್ಲಾ ಕಡೆಯಿಂದಲೂ ಉಪೇಕ್ಷಿತ ಮತ್ತು ತಿರಸ್ಕೃತರಾಗಿರುವ ಬುಡಕಟ್ಟು ಸಮಾಜವನ್ನು ಒಂದೋ ಮಾವೋವಾದಿಗಳು ತಮ್ಮೊಡನೆ ಸೇರಿಸಿಕೊಳ್ಳುತ್ತಾರೆ, ಇಲ್ಲವೇ ಕ್ರೈಸ್ತ ಮಿಷನರಿಗಳು ಅವರನ್ನು ತಮ್ಮತ್ತ ಸೆಳೆಯುವ ಪ್ರಯತ್ನ ಮಾಡುತ್ತವೆ. ಬುಡಕಟ್ಟು ಜನಾಂಗದ ರಕ್ಷೆ ಮತ್ತು ವಿಕಾಸದ ಪ್ರಶ್ನೆಯೆದ್ದಾಗಲೆಲ್ಲ ಸಮಾಜದ ಉಳಿದ ವರ್ಗಗಳು ಅದರ ವಿರುದ್ಧ ಷಡ್ಯಂತ್ರ ನಡೆಸತೊಡಗುತ್ತವೆ. ಸಂತ, ಮಹಂತ ಮತ್ತು ಮಠಾಧೀಶರೂ ಕೂಡ ಹೃಷೀಕೇಶ, ದೆಹ್ರಾದೂನ್, ಕೋಲ್ಕತಾ, ಮುಂಬೈ, ಔರಂಗಾಬಾದ್ನಂತಹ ನಗರಗಳ ಉಚ್ಚ ವರ್ಗದ ವ್ಯಾಪಾರಿಗಳು, ಸಾಹುಕಾರರೊಂದಿಗೆ ಹರಟೆ ಹೊಡೆಯುತ್ತಾ 'ಧರ್ಮ ಬೋಧನೆಯನ್ನು' ಮಾಡುತ್ತಾರೆ. ಬುಡಕಟ್ಟು ಜನಾಂಗದ ನಡುವೆ ಅವರಾದರೂ ಯಾಕೆ ಹೋದಾರು?!
ಮಹಾತ್ಮಾ ಗಾಂಧಿಯವರ ಪರಮ ಶಿಷ್ಯ 'ಠಕ್ಕರ್ ಬಾಪಾ' ಅವರು, ಪ್ರಸಿದ್ಧ ಕಾಂಗ್ರೆಸ್ ನಾಯಕ ಪಂಡಿತ್ ರವಿಶಂಕರ್ ಶುಕ್ಲಾ ಅವರೊಂದಿಗೆ ಒಡಗೂಡಿ ಬುಡಕಟ್ಟು ಸಮಾಜದ ವಿಕಾಸಕ್ಕಾಗಿ 'ಆದಿಮ್ ಜಾತಿ ಸೇವಕ ಸಂಘ' ಎಂಬ ಸಂಘಟನೆಯನ್ನು ಸ್ಥಾಪಿಸಿದ್ದರು. ಮೊದಮೊದಲು ಅವರ ಕಾರ್ಯಕ್ಕೆ ಯಶಸ್ಸು ಲಭಿಸಿತಾದರೂ ನಂತರ ಪೊಳ್ಳು ಸೆಕ್ಯುಲರ್ವಾದಿಗಳ ಮತ್ತು ವೋಟ್ ಬ್ಯಾಂಕ್ ರಾಜಕಾರಣದಿಂದಾಗಿ ಆ ಕೆಲಸ ಹೆಚ್ಚು ದಿನ ನಡೆಯಲಿಲ್ಲ. ಆದರೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದ್ವಿತೀಯ ಸಂಘಚಾಲಕ 'ಗುರೂಜಿ'(ಮಾಧವರಾವ್ ಸದಾಶಿವರಾವ್ ಗೊಳವಲ್ಕರ್) ಅವರಿಗೆ ಈ ಸಮಸ್ಯೆಯ ಸ್ಪಷ್ಟ ಅರಿವಿತ್ತು. ಈ ಕಾರಣದಿಂದಾಗಿ ಅವರು ಛತ್ತೀಸ್ಗಢದ ಜಶಪುರ ನಗರದಲ್ಲಿ ಬಾಳಾ ಸಾಹೇಬ್ ದೇಶ್ಪಾಂಡೆ ಅವರನ್ನು ಪ್ರೇರೇಪಿಸಿ 'ವನವಾಸಿ ಕಲ್ಯಾಣ ಆಶ್ರಮ'ವನ್ನು ಸ್ಥಾಪಿಸಲು ಕಾರಣವಾದರು. ಆ ಆಶ್ರಮದ ದೇಖ್ರೇಖಿಯನ್ನು ಬುಡಕಟ್ಟು ಜನಾಂಗದ ನಾಯಕ ವಿದ್ವಾನ್ ಜಗದೇವ್ ಉರಾಂವ್ ಈಗ ನೋಡಿಕೊಳ್ಳುತ್ತಿದ್ದಾರೆ. ಇಂದು ವನವಾಸಿ ಕಲ್ಯಾಣ ಆಶ್ರಮ ಪ್ರಪಂಚದ ಅತಿದೊಡ್ಡ ಸರ್ಕಾರೇತರ 'ಬುಡಕಟ್ಟು ವಿಕಾಸ ಸಂಘಟನೆ' ಎಂದು ಕರೆಸಿಕೊಳ್ಳುತ್ತಿದೆ. ಘನಘೋರ ಆತಂಕವಾದ ಪೀಡಿತ ಕ್ಷೇತ್ರಗಳಲ್ಲೂ ಇದು ನಿರ್ಭೀತವಾಗಿ ಶಾಲೆ-ಕಾಲೇಜು, ಆಸ್ಪತ್ರೆ ಮತ್ತು ಧರ್ಮ ಜಾಗೃತಿ ಕೇಂದ್ರಗಳನ್ನು ನಡೆಸುತ್ತಿದೆ. ಇದರ 1200ಕ್ಕಿಂತಲೂ ಹೆಚ್ಚಿನ ಪೂರ್ಣಕಾಲಿಕ ಕಾರ್ಯಕರ್ತರು, 9,000 ಗ್ರಾಮಗಳಲ್ಲಿ, ತಾಲೂಕು ಮತ್ತು ಬ್ಲಾಕ್ಗಳಲ್ಲಿ, 15,000 ಕ್ಕೂ ಅಧಿಕ ಚಿಕ್ಕ ಪುಟ್ಟ ಶಾಲೆಗಳಲ್ಲಿ, ಛತ್ರಗಳಲ್ಲಿ, ದವಾಖಾನೆಗಳಲ್ಲಿ ಸೇವೆ ಮಾಡುತ್ತಿದ್ದಾರೆ. ಆದರೆ ಇವರಿಗೆ ದೇಶದಿಂದ ಧನಸಹಾಯ ಮತ್ತು ಇನ್ನುಳಿದ ಸಹಕಾರ ಸಿಗುತ್ತಿದೆಯೇ? ಖಂಡಿತ ಇಲ್ಲ!
ಹಾಗೆ ನೋಡಿದರೆ ಈ ಆಶ್ರಮಗಳಲ್ಲಿ ಸೇವೆ ಮತ್ತು ಸಮರ್ಪಣೆಯ ಉತ್ಕೃಷ್ಟ ಉದಾಹರಣೆಗಳು ನಿಮಗೆ ಸಿಗುತ್ತವೆ. ವೈದ್ಯರು, ಇಂಜಿನಿಯರ್ಗಳು, ವಕೀಲರು ಮತ್ತು ಇನ್ನಿತರ ಕ್ಷೇತ್ರಗಳಲ್ಲಿ ಹೆಸರು ಮಾಡಿದವರೂ ಕೂಡ ಇದರಲ್ಲಿ ನಿಮಗೆ ಕಾಣಿಸುತ್ತಾರೆ. ಪೂರ್ವಾಂಚಲದ ಸೀಮಾವರ್ತಿ ಕ್ಷೇತ್ರಗಳಿಂದ ಹಿಡಿದು ಅಂಡಮಾನ್, ಛತ್ತೀಸ್ಗಢ ಮತ್ತು ಜಾರ್ಖಂಡದಂತಹ ವಿದ್ರೋಹ ಪ್ರಭಾವಿತ ಪ್ರದೇಶಗಳಿಗೆ ಇವರು ತಮ್ಮ ಜೀವನವನ್ನು ಸಂಪೂರ್ಣವಾಗಿ ಸಮರ್ಪಿಸಿದ್ದಾರೆ. ಆದರೆ ಇವರಿಗೆ ಧನ ಮತ್ತು ಜನ ಸಹಾಯ ಮಾತ್ರ ಸಿಗುತ್ತಲೇ ಇಲ್ಲ.
ಇಂತಹ ಬುಡಕಟ್ಟು ಸಮಾಜಗಳಲ್ಲಿ ವಿಕಾಸ ಮತ್ತು ದೇಶಭಕ್ತಿಯ ಭಾವದಿಂದ ಕೆಲಸ ಮಾಡುವ ಪ್ರವೃತ್ತಿ ಬೆಳೆಯಬೇಕು. ನಕ್ಸಲ್ ಸಮಸ್ಯೆಗೆ ಬಗೆಹರಿಯಬೇಕೆಂದರೆ, ಬುಡಕಟ್ಟು ಜನಾಂಗದ ವಿಕಾಸಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡದ ಹೊರತು ಬೇರೆ ಪರಿಹಾರವಿಲ್ಲ.
- ತರುಣ್ ವಿಜಯ್
anisikeprabha@gmail.com