ಮೈಸೂರು ಈಗ ಮೊದಲಿನಂತಿಲ್ಲ
ಇಂದಿನ ಮೈಸೂರು ಹಿಂದಿನಂತಿಲ್ಲ. ಅದು ತಾನು ಮಹಾರಾಜರ ಆಡಳಿತಾವಧಿಯಲ್ಲಿ ಒಂದು ವ್ಯವಸ್ಥಿತ ರೀತಿಯಲ್ಲಿ ಬೆಳೆದು, ಇತ್ತೀಚಿನ ದಿನಗಳಲ್ಲಂತೂ ಈ ಸಾಫ್ಟ್‌ವೇರ್ ದಿಗ್ಗಜರ ಆಕ್ರಮಣದಿಂದ ತನ್ನ ಸೊಗಡನ್ನು ಹಾಗೂ ಮಧ್ಯಮ ವರ್ಗದ ಜನರ ನೆಮ್ಮದಿಯ ಬದುಕನ್ನು, ತಾನು ಬಯಸಿದ ಪದಾರ್ಥವನ್ನು ಎಷ್ಟು ಬೆಲೆಯನ್ನಾದರೂ ತೆತ್ತು ಕೊಳ್ಳಲು ಸಿದ್ಧ ಎಂಬ ಕೊಳ್ಳುಬಾಕ ಸಂಸ್ಕೃತಿಯ ಮನೋಭಾವದ ಈ ಸಂತಾನವು ಆಮ್ ಆದ್ಮಿಯ ಬದುಕನ್ನು ಹೈರಾಣಾಗಿಸಿದೆ. ಇದಕ್ಕೆಲ್ಲಾ ಕಾರಣ ಮೈಸೂರನ್ನು ತನ್ನ ಮನೋಧರ್ಮಕ್ಕೆ ವಿರುದ್ಧವಾಗಿ ಅಂದರೆ ಪ್ರವಾಸಿ ತಾಣದ ಬದಲು, ಇದನ್ನು ಒಂದು ಕೈಗಾರಿಕಾ ನಗರವನ್ನಾಗಿ ಬೆಳೆಸಲು ಹೊರಟ, ಇಲ್ಲಿನ ಜನರ ನಾಡಿ ಮಿಡಿತ ಅರಿಯದಾದ ನಮ್ಮ ನಾಯಕರ ಚಿಂತನೆಗಳು.
ಇದಕ್ಕೆ ಪುರಾವೆ ಬೇಕೆಂದರೆ, ಮೈಸೂರಿನ ಹೊರ ವಲಯದಲ್ಲಿರುವ ಕೈಗಾರಿಕಾ ಪ್ರದೇಶವನ್ನು ಒಮ್ಮೆ ಸುತ್ತಿ ಬಂದರೆ, ಅಲ್ಲೊಂದು ಇಲ್ಲೊಂದು ಕೈಗಾರಿಕೆಗಳು ಉಸಿರಾಡುತ್ತಿದ್ದರೆ, ಮತ್ತೆ ಬಹುತೇಕ ಕೈಗಾರಿಕೆಗಳು ಚಿರನಿದ್ರೆಗೆ ಜಾರಿರುವುದು ಕಾಣಿಸುತ್ತದೆ. ಹಾಗೆಂದು ಈ ಷೆಡ್ ಮಾಲೀಕರು, ಅಂದರೆ ಉದ್ಯಮಿಗಳು ವ್ಯಾಪಾರವಿಲ್ಲ, ವಹಿವಾಟು ಇಲ್ಲ ಅಥವಾ ಉತ್ಪಾದನೆಯಿಲ್ಲ ಎಂದೇನೂ ತಲೆಯ ಮೇಲೆ ಬಟ್ಟೆ ಹಾಕಿಕೊಂಡು ಕುಳಿತಿಲ್ಲ. ಬಹಳಷ್ಟು ಮಾಲೀಕರ ಪಾಲಿಗೆ ಕೈಗಾರಿಕಾ ಷೆಡ್ ಒಂದು ಹೂಡಿಕೆಯಷ್ಟೆ. ಅವರೆಲ್ಲರೂ ಸಹ ಈ ಸಾಫ್ಟ್‌ವೇರ್ ದಿಗ್ಗಜರು ಮೂಡಿಸಿರುವ ರಿಯಲ್‌ಎಸ್ಟೇಟ್ ಸಂಚಲನದಿಂದ ಎಂದಾದರೂ ಒಂದು ದಿನ ಸುಲಭ ದರದಲ್ಲಿ ಗಿಟ್ಟಿಸಿರುವ ಈ ಜಾಗಗಳನ್ನು ಮಾರಿ ಕೋಟ್ಯಂತರ ಹಣ ಗಳಿಸಬಹುದು ಎಂಬ ಮಹದಾಸೆಯಿಂದ ದಿನ ದೂಡುತ್ತಿದ್ದಾರೆ. ಇವರ ಕನಸುಗಳು ಬರೀ ತಿರುಕನ ಕನಸಲ್ಲ. ಇವರ ಕನಸುಗಳು ವಾಸ್ತವಕ್ಕೆ ಬಹಳ ಹತ್ತಿರದಲ್ಲಿವೆ. ಒಮ್ಮೊಮ್ಮೆ ಕೈಗಾರೀಕರಣದ ಕನಸು ಕಂಡ ಭಾರತರತ್ನ ಸರ್ ಎಂ.ವಿ. ಅವರ ಲೆಕ್ಕಾಚಾರ ವಾಸ್ತವಕ್ಕೆ ಬಲು ದೂರ ಎಂದೆನಿಸುತ್ತದೆ. ಇಂದಿನ ಸರ್ಕಾರದ ತಪ್ಪು ಆರ್ಥಿಕ ನೀತಿಗಳು, ಸುನಾಮಿಯಂತಹ ದಿಢೀರ್ ಹಣ ದೊರೆತು, ಪಟಾಪಟಿ ಚೆಡ್ಡಿಯನ್ನು ಗದ್ದೆಯ ಬದುವಿನ ಮೇಲೆಯೇ ಕಳಚಿಟ್ಟು ನಡುವಿಗೆ ಪ್ಯಾಂಟ್ ಸಿಕ್ಕಿಸಿ, ನಡುವನ್ನೇ ಬಗ್ಗಿಸದೆ ಸದಾ ಕಾಲಹರಣ ಮಾಡುತ್ತಾ ಸಿಗರೇಟ್ ಹಾಗೂ ಇಸ್ಪೀಟಿನ ಎಲೆಗಳ ನಡುವೆ ಮುಳುಗಿಹೋಗಿ, ದಿನ ನೂಕುತ್ತಿರುವ ಬಹುತೇಕ ಯುವ ರೈತಾಪಿ ಹಾಗೂ ಕಾರ್ಮಿಕ ವರ್ಗದಿಂದ ಉಂಟಾದ ಕೃತಕ ಶಕ್ತಿ ಸಾಮರ್ಥ್ಯದ ಅಭಾವ ಹಾಗೂ ಢಾಳಾದ ಸೋಂಬೇರಿತನ, ಜಡ್ಡುಗಟ್ಟಿದ ವ್ಯವಸ್ಥೆಯ ದೂರದೃಷ್ಟಿಯ ಕೊರತೆ, ಜಾತಿ ರಾಜಕೀಯ, ಗುಂಪುಗಾರಿಕೆ, ವಿದ್ಯುತ್ತಿನ ಕಣ್ಣಾಮುಚ್ಚಾಲೆ ಇವೆಲ್ಲವೂ ಉತ್ಪಾದನೆಯನ್ನೇ ನಿಲ್ಲಿಸಿವೆ. ಆದರೂ ಸಹ ಒಂದಲ್ಲ ಒಂದು ದಿನ ಈ ಷೆಡ್‌ಗಳು ಮಾಲೀಕನ ಕಷ್ಟಕ್ಕೆ ಆಗಿ ಬರುವ ಕಾಮಧೇನುವಿನಂತೆ ಇವೆ ಎಂದರೆ ಉತ್ಪ್ರೇಕ್ಷೆಯಾಗಲಾರದು. ಇದರಲ್ಲಿ ಠೇವಣಿ ಕಳೆದುಕೊಳ್ಳುವುದು ಕೇವಲ ಸರ್ಕಾರವಷ್ಟೆ ಹೊರತು ಷೆಡ್ ಮಾಲೀಕನಲ್ಲ. ಅಂದು ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯನವರ ಧ್ಯೇಯ ವಾಕ್ಯ, 'ಇಂಡಸ್ಟ್ರಿಯಲೈಸ್ ಆರ್‌ಪೆರಿಷ್' (ಕೈಗಾರೀಕರಣ ಹೊಂದಿ ಇಲ್ಲ ನಾಶವಾಗಿ) ಎಂಬುದಾಗಿತ್ತು. ಆದರೆ ಅದನ್ನೀಗ 'ಇಂಡಸ್ಟ್ರಿಯಲೈಸ್ ಆರ್ ಫ್ಲರಿಷ್' (ಕೈಗಾರೀಕರಣ ಹೊಂದಿ ಇಲ್ಲವೇ ಅಭಿವೃದ್ಧಿ ಹೊಂದಿ) ಎಂಬುದಾಗಿ ಬದಲಾಯಿಸಿಬಿಟ್ಟಿದ್ದಾರೆ ಈ ಬುದ್ಧಿವಂತ ಉದ್ಯಮಿಗಳು!
- ನಾಗಮಂಗಲ ನರಸಿಂಹ ಮೂರ್ತಿ
ಮೈಸೂರು