ಅಂಕಣಗಳು

ರಾಜ್ಯ ಬಿಜೆಪಿ - ಯಡಿಯೂರಪ್ಪ - ನರೇಂದ್ರ ಮೋದಿ

ಅಬ್ಬಾ. ಒಂದೇ ವಾರದಲ್ಲಿ ಎಷ್ಟೊಂದು ತಹತಹ, ಎಷ್ಟೊಂದು ದಿಢೀರ್ ಬೆಳವಣಿಗೆಗಳು, ಅವಕ್ಕೆ ತತ್‌ಕ್ಷಣದ ವಿಶ್ಲೇಷಣೆ, ಸುದ್ದಿ ಪ್ರಕಟವಾಗುತ್ತಿದ್ದಂತೆಯೇ ಅದರ ಸಂಭವನೀಯ ಪರಿಣಾಮ ಕುರಿತ ಚರ್ಚೆ. ಒಂದು ರೀತಿಯಲ್ಲಿ ಇದು ಅಸಾಧಾರಣವಾದ ಬೆಳವಣಿಗೆಯೇ.
  ಗೋವಾದಲ್ಲಿ ನಡೆದ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿಯ ಸಭೆಯಲ್ಲಿ ಏನು ನಡೆಯಿತು ಎನ್ನುವುದು ಯಾರಿಗೂ ಸರಿಯಾಗಿ ಅರ್ಥವೇ ಆಗದಂತೆ, ಗುಜರಾತ್‌ನ ಹೀರೋ ನರೇಂದ್ರ ಮೋದಿ ಪಕ್ಷದ ಚುನಾವಣೆ ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ನೇಮಕಗೊಂಡರು. ಅಷ್ಟೇ ಅಲ್ಲಿ ಆಗಿದ್ದು.   ಹಿರಿಯ ನಾಯಕ ಆಡ್ವಾಣಿ ಅವರು ಪಕ್ಷದ ಸಮಿತಿಗಳಿಗೆ ರಾಜಿನಾಮೆ ನೀಡಿ ಅನಂತರ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘ ಚಾಲಕ ಮೋಹನ ಭಾಗವತ್ ಅವರ ಆದೇಶದಂತೆ ಅದನ್ನು ಹಿಂದಕ್ಕೆ ಪಡೆದರು. ಇದು ನಡೆದದ್ದು ದೆಹಲಿಯಲ್ಲಿ.
  ಅಲ್ಲಿಗೆ ಯಥಾಪ್ರಕಾರ ಎನ್ನುವಂತೆ, ಬಿಜೆಪಿಯ ಬಟ್ಟಲಲ್ಲಿ ಎದ್ದಿದ್ದ ಬಿರುಗಾಳಿ ತಣ್ಣಗಾಗಿತ್ತು. ಇದೆಲ್ಲ ಆಗುತ್ತಿದ್ದಾಗಲೇ, ಕರ್ನಾಟಕದ ಬಿಜೆಪಿಯ ಮೇಲೆ ರಾಷ್ಟ್ರೀಯ ಬಿಜೆಪಿಯಲ್ಲಿನ ಬೆಳವಣಿಗೆ ಮಾಡಬಹುದಾದ ಪರಿಣಾಮ ಕುರಿತ ಚರ್ಚೆಯೂ ಆರಂಭವಾಗಿದೆ. ಅದು ಅನಿವಾರ್ಯ.   ರಾಜ್ಯದಲ್ಲಿ, ಬಹುತೇಕ ಎನ್ನುವುದಕ್ಕೆ ಆಧಾರವಿಲ್ಲದೇ ಹೋದರೂ, ಅನೇಕ, ಬಿಜೆಪಿ ನಾಯಕರಿಗೆ ಯಡಿಯೂರಪ್ಪ ಅವರು ಪಕ್ಷದ ಜತೆಯಲ್ಲಿದ್ದರೆ, ಚುನಾವಣೆಯಲ್ಲಿ ದೊಡ್ಡ ರೀತಿಯ ನೆರವೇ ಲಭ್ಯವಾಗುತ್ತದೆ ಎನಿಸಿರುವುದು ನಿಜ. ಆದರೆ ಕರ್ನಾಟಕ ಬಿಜೆಪಿ ಕಾರ್ಯಕರ್ತರ, ಸಹಚರರ, ಬೆಂಬಲಿಗರ ಬಹುಮತದ ಅಭಿಪ್ರಾಯವೇ ಅದು ಎಂದು ಹೇಳುವುದಕ್ಕೆ ಯಾವುದೇ ಸಮೀಕ್ಷೆಯೂ ನಡೆದಿಲ್ಲ.   ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿ ಅನುಭವಿಸಿರುವ ಪರಾಭವ, ಆ ಪಕ್ಷದ ನಾಯಕರಲ್ಲಿ ಪ್ರಾಂಜಲ ಮನಸ್ಸಿನ ಚಿಂತನೆಯ ಶಕ್ತಿಯನ್ನೇ ಕುಗ್ಗಿಸಿದೆ. ಎಲ್ಲದಕ್ಕೂ ಒಂದೇ ಮಾತು; ಬಿಜೆಪಿ ಮತಗಳಲ್ಲಿ ಶೇಕಡಾ ಹತ್ತರಷ್ಟನ್ನು ಯಡಿಯೂರಪ್ಪ ಕಿತ್ತುಕೊಂಡರು. ಬಿಜೆಪಿ ಸೋತಿತು.
  ಅದಕ್ಕೂ ರಾಜಕೀಯ ಅನಿಸಿಕೆಯಷ್ಟೇ ಆಧಾರ. ಬಿಜೆಪಿ ಹಿಂದೆ ಗೆದ್ದಿದ್ದ ಈಗ ಸೋತಿರುವ ಕ್ಷೇತ್ರಗಳಲ್ಲಿ ಯಡಿಯೂರಪ್ಪ ಪ್ರಭಾವ ಎಷ್ಟಿತ್ತು ಎನ್ನುವುದನ್ನು ತಿಳಿಯುವ ಪ್ರಯತ್ನವೂ ನಡೆದಿಲ್ಲ.   ಈಗ ರಾಜ್ಯ ಬಿಜೆಪಿಯ ಅನೇಕ ನಾಯಕರಿಗೆ ಯಡಿಯೂರಪ್ಪ ಅವರ "ಶಕ್ತಿ" ಬೇಕಾಗಿದೆ. ಆದರೆ ಯಡಿಯೂರಪ್ಪ ಅವರೇ ಹೇಳಿರುವಂತೆ, ಅವರು ಸ್ಥಳೀಯ ನಾಯಕರೆನಿಸಿಕೊಂಡವರ ಮಾತಿಗೆ ಅಷ್ಟು ಬೆಲೆ ಕೊಡುವಂತಿಲ್ಲ. ಅವರಿಗೆ ಈಗಿನ ಬಿಜೆಪಿಯ ಅತಿ ಬಲಿಷ್ಠ ನಾಯಕ ನರೇಂದ್ರ ಮೋದಿ ಬೇಕು. ಅವರ ಬೆಂಬಲ ಇದ್ದರೆ ಮುಂದಿನ ಮಾತು.
ಅಂದರೇನರ್ಥ? ಯಡಿಯೂರಪ್ಪ ಅವರ ಚಿಂತನೆಯಂತೆ, ಮುಂದೆ ನರೇಂದ್ರ ಮೋದಿ ಅವರ ಅಖಂಡ ಬೆಂಬಲ ಸಿಕ್ಕರೆ, ಅನಂತಕುಮಾರ್, ಆಡ್ವಾಣಿ ಅವರು ಅಧಿಕಾರದ ದಂಡ ಪ್ರಯೋಗದ ಶಕ್ತಿಯನ್ನು ಕಳೆದುಕೊಂಡರೆ, ಇತರರನ್ನು ನಿಭಾಯಿಸುವುದು ಕಷ್ಟವಿಲ್ಲ, ಹಾಗೆಂದು ಅವರು ಭಾವಿಸಿರುವಂತಿದೆ.  ಯಡಿಯೂರಪ್ಪ ಅವರಿಗೆ ಸಿಕ್ಕಿರುವ "ಶೇಕಡಾ 10 ರಷ್ಟು ಮತಗಳು" ಬಿಜೆಪಿಯ 35 ವಿಧಾನಸಭೆ ಸ್ಥಾನಗಳನ್ನು ನುಂಗಿಹಾಕಿವೆ ಎನ್ನುವ ಮಾತೂ ಪಕ್ಷದ ನಾಯಕರು ಆಡುತ್ತಿದ್ದಾರೆ. ಅವೆಲ್ಲವೂ ಯಡಿಯೂರಪ್ಪ ಅವರನ್ನು ಶತಾಯ ಗತಾಯ ಬೆಂಬಲಿಸುವ ಲಿಂಗಾಯಿತ ಮತಗಳೇ ಏನು? ಅದನ್ನು ಲೆಕ್ಕ ಹಾಕುವುದು ಕಷ್ಟ.
  ಒಂದು ಚುನಾವಣೆಯಲ್ಲಿ ಒಂದು ಪಕ್ಷಕ್ಕೆ, ಅದರಲ್ಲೂ ಹೊಸ ಪಕ್ಷಕ್ಕೆ ಸಿಗುವ ಓಟುಗಳನ್ನು, ಆ ಪಕ್ಷಕ್ಕೇ ಮೀಸಲಾದ ಓಟುಗಳೆಂದು ಭಾವಿಸುವುದು ಮೂರ್ಖತನ.
 ರಾಜ್ಯದ ಕರಾವಳಿ ಹಾಗೂ ಘಟ್ಟದ ಸೀಮೆಯಲ್ಲಿ ಬಿಜೆಪಿಗೆ ನೆಲೆ ಇದೆ. ಆ ಭಾಗದಲ್ಲಿ ಅದೇ ನಂಬರ್ ಒನ್ ಅಥವಾ ನಂಬರ್ ಟೂ ಪಾರ್ಟಿ. ಅಲ್ಲಿ ಯಡಿಯೂರಪ್ಪ ಹಾಗೂ ಅವರಿಗೆ ಬೆಂಬಲ ನೀಡುವ ಲಿಂಗಾಯಿತರ ಪ್ರಭಾವ ತೀರ ಕಡಿಮೆ. ಅಲ್ಲೂ ಬಿಜೆಪಿ ಸೋತಿದೆ. ಲಿಂಗಾಯಿತರ ಪ್ರಬಲ ನೆಲೆ ಎನಿಸಿಕೊಂಡ ಧಾರವಾಡ ಸೀಮೆಯ ಹಾವೇರಿ, ಹಾನಗಲ್‌ನಂತಹ ಕ್ಷೇತ್ರದಲ್ಲಿ ಯಡಿಯೂರಪ್ಪ ಅವರ ಕಟ್ಟಾ ಬೆಂಬಲಿಗ ಸಿ.ಎಂ.ಉದಾಸಿ ಅವರು ಸೋತಿದ್ದಾರೆ.   ಈಗಲೂ ಕಡಲ ತೀರದ ಸಂಘಪರಿವಾರದ ಬಿಜೆಪಿಯ ಕಾರ್ಯಕರ್ತರು, ಯಡಿಯೂರಪ್ಪ ಮತ್ತೆ ಬಿಜೆಪಿಯನ್ನು ಪ್ರವೇಶಿಸುವ ವಿಚಾರದಲ್ಲಿ ವಿಪರೀತವಾದ ಆಸಕ್ತಿಯನ್ನು ತೋರಿಸುತ್ತಿಲ್ಲ. ಇವರಲ್ಲಿ ಬಹುಮಂದಿ ಆಡ್ವಾಣಿ ಅವರನ್ನು ಗೌರವ ಸ್ಥಾನದಲ್ಲಿ ಇಟ್ಟಿರುವವರು.   ಈಗ ರಾಜ್ಯದಲ್ಲಿ ಬಿಜೆಪಿ ಸೋತಿರುವ ಪಕ್ಷ. ಅದಕ್ಕೆ ಹೊರಗಿನಿಂದ ಶಕ್ತಿ ತುಂಬುವವರು ಯಾರೂ ಇಲ್ಲ. ತನ್ನ ಸಂಘಟನೆಯ ಶಕ್ತಿಯನ್ನೇ ಅದು ನಂಬಬೇಕು. ಯಡಿಯೂರಪ್ಪ ಅವರನ್ನು ಓಲೈಸುವ ಉದ್ದೇಶ ಪ್ರಾಮಾಣಿಕವಾಗಿದ್ದರೆ, ಅದನ್ನು ಬೇಗ ಮುಗಿಸಬೇಕು. ಮಾತುಕತೆ - ರಾಜಕೀಯ ವ್ಯಾಪಾರವನ್ನು ಲೋಕಾಭಿರಾಮದ ರೂಪದಲ್ಲಿ ನಿಧಾನ ಮಾಡಿದರೆ, ಮುಂದೆ  ಕಗ್ಗಂಟಾಗಬಹುದು.

ಕಾಂಗ್ರೆಸ್‌ನ ಗೊಂದಲ:  ಕಾಂಗ್ರೆಸ್ ಗೆದ್ದಿರುವ ಪಕ್ಷ. ಗೊಂದಲವೇ ಇಲ್ಲದೆ ಸಿಎಂ ಆಯ್ಕೆಯಲ್ಲೂ ಯಶಸ್ವಿಯಾಗಿರುವ ಪಕ್ಷ. ಕಾಂಗ್ರೆಸ್ಸಿಗರು ಈಗ ಆತುರದಲ್ಲಿರುವುದು ನಿಜ. ಈಗಲೇ ತಮಗೆ ಎಟುಕುವಷ್ಟು, ಸಾಧ್ಯವಿರುವಷ್ಟು ಸ್ಥಾನ-ಮಾನ, ಸವಲತ್ತುಗಳನ್ನು ಪಡೆಯುವುದರಲ್ಲಿ ಹೆಚ್ಚಿನ ಆಸಕ್ತಿ ಇರುವುದೂ ಸಹಜವೇ. ಆದರೆ ಪಕ್ಷದ ಶಾಸಕಾಂಗ ವಿಭಾಗ ಹಾಗೂ ಸಂಘಟನೆಯ ಶಕ್ತಿ ಕೇಂದ್ರಗಳ ನಡುವೆ ಸಾಮರಸ್ಯವಿದೆ ಎನ್ನುವ ಭಾವನೆ ಜನರಲ್ಲಿ ಮೂಡುವಂತೆ ಪಕ್ಷದ ಉಭಯ ವಿಭಾಗಗಳೂ ವರ್ತಿಸಿಲ್ಲ.  ಕಾಂಗ್ರೆಸ್ಸಿನ ಅಂಗರಚನೆಯಲ್ಲೇ ಸ್ಪಷ್ಟವಾಗಿರುವಂತೆ ಸಂಘಟನೆಯ ಪ್ರಮುಖರಿಗೇ ಅಗ್ರ ತಾಂಬೂಲ. ತುಂಬಾ ಹಿಂದೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯನ್ನು ಪ್ರದೇಶ ಕಾಂಗ್ರೆಸ್ ಅಧ್ಯಕ್ಷರೇ ವಹಿಸುತ್ತಿದ್ದರು. ಶಾಸಕಾಂಗ ಪಕ್ಷಕ್ಕೆ ಪಕ್ಷದ ಸಂಸತ್ ಸದಸ್ಯರೆಲ್ಲರೂ ಆಹ್ವಾನಿತರು. ಶಾಸಕರೇ ಸರ್ವಸ್ವ ಅಲ್ಲ. ಈಗ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಾ॥ ಜಿ. ಪರಮೇಶ್ವರ ಅವರು, ಚುನಾವಣೆಯಲ್ಲಿ ಸೋತಿದ್ದು ಅದರ ನೋವನ್ನು ಇನ್ನೂ ಅನುಭವಿಸುತ್ತಿರುವುದರಿಂದಲೋ ಏನೋ, ಪಕ್ಷದ ಶಾಸಕಾಂಗ ವಿಭಾಗದ ಸಭೆಗಳಿಗೆ ಹಾಜರಾಗುತ್ತಿಲ್ಲ. ಇದನ್ನು ಹಿರಿಯ ಶಾಸಕರು, ಪಕ್ಷದ ಸಭೆಯಲ್ಲೇ ಪ್ರಸ್ತಾಪಿಸಿದ್ದಾರೆ. ಸಿದ್ದರಾಮಯ್ಯ ಅವರು, ತಮಗೂ. ಪರಮೇಶ್ವರ್ ಅವರಿಗೂ ಯಾವ ವಿಚಾರದಲ್ಲೂ ಭಿನ್ನಾಭಿಪ್ರಾಯಗಳಿಲ್ಲವೆಂದೂ ಹೇಳಿದ್ದಾರೆ. ಆ ಮಾತನ್ನು ಒಪ್ಪದೇ ಇರುವುದಕ್ಕೆ, ಈಗ ಯಾವ ಆಧಾರವೂ ಇಲ್ಲ. ಸದಾಕಾಲ ಅವರಿಬ್ಬರೂ ಜನರ ಮುಂದೆ ಜೊತೆಯಲ್ಲೇ ಕಾಣಿಸಿಕೊಳ್ಳಬೇಕೆಂದೇನೂ ಇಲ್ಲ.

ತತ್‌ಕ್ಷಣದ ಸಮಸ್ಯೆಗಳು:  ಸದ್ಯಕ್ಕೆ ಸರ್ಕಾರದ ಮುಂದೆ ಕೆಲವು ತತ್‌ಕ್ಷಣದಲ್ಲೇ ಇತ್ಯರ್ಥವಾಗಬೇಕಾಗಿರುವ, ಸೂಕ್ಷ್ಮವಾದ ಸಮಸ್ಯೆಗಳಿವೆ. ಬಳ್ಳಾರಿ, ತುಮಕೂರು, ಚಿತ್ರದುರ್ಗ ಜಿಲ್ಲೆಗಳಲ್ಲಿ ಸ್ಥಗಿತವಾಗಿರುವ ಗಣಿಗಾರಿಕೆಯನ್ನು ಮತ್ತೆ ಆರಂಭಿಸಬೇಕಾಗಿದೆ. ಈಗಾಗಲೇ ಎಷ್ಟು ಗಣಿಗಳಿಗೆ ಹೊಸದಾಗಿ ಪರವಾನಗಿ ನೀಡಬಹುದೆನ್ನುವುದೂ ಗೊತ್ತಾಗಿದೆ. ಗಣಿಗಾರಿಕೆಯ ಲೈಸೆನ್ಸ್ ನೀಡಿಕೆಯಲ್ಲಿ (ಶಿಫಾರ್ಸು ಮಾಡುವುದರಲ್ಲಿ) ಈ ಸರ್ಕಾರ ಯಾವ ರೀತಿ ವರ್ತಿಸಲಿದೆ ಎನ್ನುವುದನ್ನು ಆಸಕ್ತ ಹಿತಗಳು ಕಣ್ಣಲ್ಲಿ ಕಣ್ಣಿಟ್ಟು ನೋಡುತಿವೆ. ಸ್ವಲ್ಪ ಎಚ್ಚರ ತಪ್ಪಿದರೂ ದೊಡ್ಡ ರೀತಿಯ ಅಪವಾದ ತಪ್ಪಿದ್ದಲ್ಲ. ಕಾಂಗ್ರೆಸ್ಸಿನಲ್ಲೂ ಈಗ ಗಣಿಗಾರಿಕೆಯಲ್ಲಿ ಆಸಕ್ತಿ ಇರುವ ಗುಂಪುಗಳು ಜಾಗೃತವಾಗಿವೆ. ಆದರೆ ಅದೀಗ ಹಿಂದಿನಷ್ಟು ಲಾಭದಾಯಕವಲ್ಲ. ರಾಜ್ಯದ ವಿ.ವಿ.ಗಳಲ್ಲಿನ ಅವ್ಯವಸ್ಥೆ ದೇಶವ್ಯಾಪೀ ಪ್ರಚಾರ ಪಡೆದಿದೆ - ಕರ್ನಾಟಕ ಶೈಕ್ಷಣಿಕ ಕ್ಷೇತ್ರದಲ್ಲಿ ಒಳ್ಳೆಯ ಹೆಸರನ್ನು ಪಡೆದ ರಾಜ್ಯ. ಕೆಲವು ವಿ.ವಿಗಳಲ್ಲಿ ಕುಲಾಧಿಪತಿ, ಕುಲಪತಿಗಳೇ ಅವ್ಯವಹಾರಗಳ ಆರೋಪಗಳನ್ನು ಹೊತ್ತಿದ್ದಾರೆ. ಸೆನೆಟ್-ಸಿಂಡಿಕೇಟ್ ಸಭೆಗಳಲ್ಲೂ ಇವೆಲ್ಲವೂ ಪ್ರಸ್ತಾಪವಾಗಿವೆ.   ಎಲ್ಲಕ್ಕಿಂತ ಹೆಚ್ಚಾಗಿ ರಾಜ್ಯಪಾಲ ಹಂಸರಾಜ ಭಾರದ್ವಾಜ್ ಅವರಿಗೆ ಬೇಕಾದಷ್ಟು ರಹಸ್ಯಗಳು ಗೊತ್ತು. ಅವರು ವಿ.ವಿ.ಗಳಲ್ಲಿನ ವ್ಯವಹಾರ ಕುರಿತ ಸಾಚಾ ಮಾಹಿತಿ ಸಂಗ್ರಹಕ್ಕೆ ತಮ್ಮದೇ ವ್ಯವಸ್ಥೆಯನ್ನು ಮಾಡಿಕೊಂಡಿರುವುದೂ ರಹಸ್ಯವೇನೂ ಇಲ್ಲ.
   ನಿಜ. ಸಿದ್ದರಾಮಯ್ಯ ಅವರು ತಮ್ಮ ಚೊಚ್ಚಲ ಬಜೆಟ್ ತಯಾರಿಕೆಯಲ್ಲಿ ಹೆಚ್ಚು ಸಮಯವನ್ನು ಬಳಸಬೇಕು. ಈಗತಾನೇ ಚುನಾವಣೆಯಲ್ಲಿ ಗೆದ್ದು ಅಧಿಕಾರದ ಕುರ್ಚಿಗೆ ಏರಿರುವುದರಿಂದ ಸಭೆ-ಸಮಾರಂಭ- ಸನ್ಮಾನಗಳಲ್ಲಿ ಪಾಲುಗೊಳ್ಳುವುದೂ ಅನಿವಾರ್ಯ. ಈ ಸಂಭ್ರಮದಲ್ಲಿ ಬೆಳ್ಳಿ ಗದೆ, ಖಡ್ಗ, ಗುರಾಣಿಗಳನ್ನು "ಸ್ವೀಕರಿಸುವ" ಆಮಿಷಕ್ಕೆ ಅವರು ಬಲಿಯಾಗಬಾರದು. ಆರಂಭದಲ್ಲಿ ಒಳ್ಳೆಯ ಹೆಸರು ಪಡೆದರೆ ಅದು ಬಹುಕಾಲ ಉಳಿಯುತ್ತದೆ. ಅಪಕೀರ್ತಿ ಪಡೆದರೆ, ಅದು ಶಾಶ್ವತವಾಗಿ ಕಾಡುತ್ತದೆ ಎನ್ನುವುದನ್ನು ಸಿದ್ದರಾಮಯ್ಯ ಮರೆಯಬಾರದು.

ಕಿಡಿಗೇಡಿತನ: ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅತ್ಯಂತ ಆತ್ಮೀಯ ಹಿತಚಿಂತಕರಾಗಿರುವ ಮೈಸೂರಿನ ಎಂ.ಪಿ. ಎಚ್. ವಿಶ್ವನಾಥ್ ಅವರು ಇಬ್ಬರು ಹಿಂದುಳಿದ ವರ್ಗಗಳ ವರ್ಚಸ್ವೀ ನಾಯಕರಾದ ನರೇಂದ್ರ ಮೋದಿ ಗ/ಡ ಸಿದ್ದರಾಮಯ್ಯನಡುವಣ ಸ್ಪರ್ಧೆಯ ಮಾತಾಡಿದ್ದಾರೆ. ಅಖಿಲ ಭಾರತ ಕೀರ್ತಿಯ ಬೆನ್ನತ್ತಿಹೋದ ರಾಜ್ಯದ ನಾಯಕರ ಸ್ಥಿತಿಯನ್ನು ಸಿದ್ದರಾಮಯ್ಯ ನಿರಂತರವಾಗಿ ಗಮನದಲ್ಲಿಡಬೇಕು.

- ಸತ್ಯ
anisikeprabha@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

‘ದಯವಿಟ್ಟು ಮಲಗಬೇಡಿ, ನಮಗೆ ನೀವು ಬೇಕು’: ಸಾವಿನ ದವಡೆಯಲ್ಲಿದ್ದ ಸ್ಮಿತ್ ಮಚ್ಚರ್'ಗೆ ಧೈರ್ಯ ತುಂಬಿದ ದಂತ ವೈದ್ಯ, Flydubai ವಿಮಾನದಲ್ಲಿ ಆ 45 ನಿಮಿಷಗಳಲ್ಲಿ ನಡೆದಿದ್ದೇನು..?

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ