ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಜೆಡಿಯುದಿಂದ ದೂರವಾಗುವುದರಲ್ಲೇ ಬಿಜೆಪಿಯ ಒಳಿತಿದೆ!

ಜೆಡಿಯು ಮುಖಂಡ ಹಾಗೂ ಬಿಹಾರದ ಮುಖ್ಯಮಂತ್ರಿಯಾಗಿರುವ ನಿತೀಶ್ ಕುಮಾರ್ ಅವರು ಎನ್‌ಡಿಎ ಮೈತ್ರಿಕೂಟದಿಂದ ಹೊರಬೀಳುವ ...

Rashmi Kasaragodu
Updated On : 14 Jun 2013, 12:04 pm

ಜೆಡಿಯು ಮುಖಂಡ ಹಾಗೂ ಬಿಹಾರದ ಮುಖ್ಯಮಂತ್ರಿಯಾಗಿರುವ ನಿತೀಶ್ ಕುಮಾರ್ ಅವರು ಎನ್‌ಡಿಎ ಮೈತ್ರಿಕೂಟದಿಂದ ಹೊರಬೀಳುವ ಸಂದರ್ಭ ಸನ್ನಿಹಿತವಾಗಿದೆ. ಇದರಿಂದ ಪಕ್ಷ ಹಾಗೂ ರಾಜ್ಯ, ಎರಡಕ್ಕೂ ಒಳಿತಾಗಲಿದೆ ಎಂದೇ ಹೇಳಬೇಕು.
ಚುನಾವಣಾ ಹೊಂದಾಣಿಕೆ ಹಾಗೂ ಅಧಿಕಾರ ಹಂಚಿಕೆಯ ಮಧ್ಯೆ ಬಹಳ ವ್ಯತ್ಯಾಸವಿದೆ. ಚುನಾವಣಾ ಹೊಂದಾಣಿಕೆಯ ಸಂದರ್ಭದಲ್ಲಿ ಒಂದು ಪಕ್ಷವು ಪಾಲಿಸುವ ರೀತಿ-ನೀತಿಯಲ್ಲಿ ಸಣ್ಣ ಪುಟ್ಟ ಹೊಂದಾಣಿಕೆ ಮಾಡಿಕೊಳ್ಳಲಾಗುತ್ತದೆ. ಆದರೆ, ಅಧಿಕಾರ ಹಂಚಿಕೆಯ ವಿಷಯ ಹಾಗಲ್ಲ. ಅಲ್ಲಿ ಹಲವು ವಿಷಯಗಳಿಗೆ ರಾಜಿಯಾಗಬೇಕಾಗುತ್ತದೆ. ಆ ಮೂಲಕವೇ ಅಧಿಕಾರ ಹಂಚಿಕೆಯ ಪ್ರಕ್ರಿಯೆಯೂ ಆರಂಭವಾಗುತ್ತದೆ. ಈ ಅರ್ಥದಲ್ಲಿ ಹೇಳುವುದಾದರೆ ಎನ್‌ಡಿಎ ಹಾಗೂ ಯುಪಿಎ, ಇವೆರಡೂ ಮೈತ್ರಿಕೂಟಗಳೇ. ಚುನಾವಣೆಗೂ ಮೊದಲು ಹಾಗೂ ಚುನಾವಣೆಯ ನಂತರ ಅಧಿಕಾರ ಹಂಚಿಕೆಯ ವಿಷಯವಾಗಿ ಈ ಎರಡೂ ಖಚಿತ ನಿಲುವುಗಳನ್ನು ಹೊಂದಿದ್ದವೇ ಆಗಿವೆ.
ಈಗ, ದಿಢೀರ್ ಬದಲಾದ ರಾಜಕೀಯ ಸಂದರ್ಭದಲ್ಲಿ ಜೆಡಿಯ ಪಕ್ಷವು ಎದ್ದು ಹೋಗಿರುವುದರಿಂದ ಎನ್‌ಡಿಎ ಮೈತ್ರಿಕೂಟ ಅತಂತ್ರವಾಗಿದೆ ಎಂಬುದು ನಿಜ. ಆದರೆ ಅದಕ್ಕಾಗಿ ವ್ಯಥೆ ಮಾಡಬೇಕಾದ ಅಗತ್ಯವಿಲ್ಲ. ನಿಜ ಹೇಳಬೇಕೆಂದರೆ, ಎನ್‌ಡಿಎ ಮೈತ್ರಿಕೂಟದ ಅವಿಭಾಜ್ಯ ಅಂಗದಂತಿದ್ದ ಪಕ್ಷಗಳು ಮೂರೇ: ಬಿಜೆಪಿ, ಅಕಾಲಿದಳ ಮತ್ತು ಶಿವಸೇನೆ. ಹಿಂದೂ ಧರ್ಮದ ಸಂರಕ್ಷಣೆಯೇ ನಮ್ಮ ಮೂಲ ಗುರಿ ಎಂಬುದು ಈ ಮೂರು ಪಕ್ಷಗಳ ಘೋಷ ವಾಕ್ಯವಾಗಿರುವುದು ಕಾಕತಾಳೀಯ ಅನ್ನಬೇಕು. ಎನ್‌ಡಿಎ ಮೈತ್ರಿಕೂಟದ ರೆಕ್ಕೆಗಳಂತೆ ಉಳಿದಿರುವ ಮಿಕ್ಕ ಎಲ್ಲ ಪಕ್ಷಗಳೂ ಚುನಾವಣೆಯ ಫಲಿತಾಂಶ ಮುಗಿದ ನಂತರ ಸೇರ್ಪಡೆಯಾದಂಥವು. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ಅವೆಲ್ಲಾ ಅಧಿಕಾರದ ಮಜಾ ಅನುಭವಿಸುವ ಆಸೆಯಿಂದ ಎನ್‌ಡಿಎ ಮೈತ್ರಿಕೂಟದ ಬಾಗಿಲು ಬಡಿದಂಥವು. ಆ ಸಂದರ್ಭದಲ್ಲಿ ತನ್ನ ಬಲ ಹೆಚ್ಚಿಸಿಕೊಳ್ಳುವ ಅನಿವಾರ್ಯತೆ ಎನ್‌ಡಿಎಗೂ ಇದ್ದಿದ್ದರಿಂದ ಅವುಗಳಿಗೂ ಜಾಗ ಕೊಡಲೇಬೇಕಾಯಿತು.
ಎನ್‌ಡಿಎ ಮೈತ್ರಿಕೂಟದ ಕಥೆ ಹೀಗಾದರೆ, ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟದ ಕಥೆ ಇನ್ನೊಂದು ತೆರನಾದುದು. ಬಹುಮಟ್ಟಿಗೆ ಕಾಂಗ್ರೆಸ್‌ನ ಸಿದ್ಧಾಂತಗಳನ್ನು ಪ್ರತಿಪಾದಿಸುವ ಏಕೈಕ ಪಕ್ಷವೆಂದರೆ ಶರದ್ ಪವಾರ್ ಅವರ ಎನ್‌ಸಿಪಿ. ಉಳಿದ ಎಲ್ಲ ಪಕ್ಷಗಳೂ 'ಜಾತ್ಯತೀತ ನೆಲೆಗಟ್ಟಿನ ಹಿನ್ನೆಲೆ ನಮಗಿದೆ ಎಂದು ಬೊಂಬಡಾ ಹೊಡೆಯುತ್ತ ಯುಪಿಎ ಮೈತ್ರಿಕೂಟದ ಬಿಳಿಲುಗಳನ್ನು ಅಪ್ಪಿಕೊಂಡಿವೆ. ಚೋದ್ಯವೆಂದರೆ, ಈ ಹಿಂದೆ ಎನ್‌ಡಿಎ ಮೈತ್ರಿಕೂಟದ ಸರ್ಕಾರವಿದ್ದ ಸಂದರ್ಭದಲ್ಲಿ, ಈಗ ಯುಪಿಎ ಜೊತೆಗೆ ಕೈ ಜೋಡಿಸಿರುವ ಹಲವು ಪಕ್ಷಗಳೇ ಎನ್‌ಡಿಎ, ಜೊತೆಗೂ ಕೈ ಜೋಡಿಸಿದ್ದವು. ಈಗ ಅಧಿಕಾರವೆಂಬುದು ಯುಪಿಎಯ ಅಂಗಳದಲ್ಲಿದೆ. ಹಾಗಾಗಿ 'ಜಾತ್ಯತೀತ ನಿಲುವ ಘೋಷಿಸುವ' ಸಣ್ಣಪುಟ್ಟ ಪಕ್ಷಗಳು ಯುಪಿಎ ಅಂಗಳಕ್ಕೆ ಹಾರಿ ಬಂದಿವೆ.
ಈಗ, ಎನ್‌ಡಿಎ ಮೈತ್ರಿಕೂಟದಿಂದ ಹೊರಬರುವುದಾಗಿ ಜೆಡಿಯು ಮುಖಂಡ ನಿತೀಶ್‌ಕುಮಾರ್ ಘೋಷಿಸಿದ ಸಂದರ್ಭದಲ್ಲಿಯೇ, ಸಮಾನ ಮನಸ್ಕ ನಾಯಕರು ಸೇರಿ ತೃತೀಯ ರಂಗ ಆರಂಭಿಸುವ ಸುದ್ದಿಯೂ ವೇಗ ಪಡೆದುಕೊಂಡಿದೆ. ಈಗಾಗಲೇ ಮೊದಲ ಸುತ್ತಿನ ಮಾತುಕತೆಗಳೂ ಮುಗಿದಿವೆ. ಆಂಧ್ರಪ್ರದೇಶದಲ್ಲಿ ಚಂದ್ರಬಾಬು ನಾಯ್ಡು, ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಈಗಾಗಲೇ ಮುಂಬರುವ ದಿನಗಳಲ್ಲಿ ದಿಲ್ಲಿಯ ಗದ್ದುಗೆಯಲ್ಲಿ ಅಧಿಕಾರ ಹಂಚಿಕೊಳ್ಳುವ ಮಾತುಗಳನ್ನು ಆಡುತ್ತಿದ್ದಾರೆ. ನಿತೀಶ್ ಕುಮಾರ್ ಸೇರಿದಂತೆ ಪ್ರಾದೇಶಿಕ ಪಕ್ಷಗಳ ಮುಖಂಡರೊಂದಿಗೆ ಆದಷ್ಟು ಬೇಗ ಮಾತುಕತೆ ನಡೆಸಿ ಖಚಿತ ನಿಲುವಿಗೆ ಬರುವುದಾಗಿ ಘೋಷಿಸಿದ್ದಾರೆ.

ಒಂದಂತೂ ಸ್ಪಷ್ಟ: ತೃತೀಯ ರಂಗ ಅಸ್ತಿತ್ವಕ್ಕೆ ಬರಬಹುದು. ಅಧಿಕಾರ ಹಂಚಿಕೆಯ ಆಶಯದಿಂದ ತಾವು ನಂಬಿದ ಸಿದ್ಧಾಂತಗಳಲ್ಲಿ ಕೆಲವು ಹೊಂದಾಣಿಕೆಗಳನ್ನು ಪ್ರಾದೇಶಿಕ ಪಕ್ಷಗಳ ಮುಖಂಡರು ಮಾಡಿಕೊಳ್ಳಬಹುದು. ಆದರೆ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಅಷ್ಟು ಅರ್ಹತೆ ಸಾಲುವುದಿಲ್ಲ. ಕೇಂದ್ರ ಸರ್ಕಾರವೊಂದರ ಸಾರಥಿ ಎನ್ನಿಸಿಕೊಳ್ಳುವವನಿಗೆ ವಿಪರೀತ ಸಂಯಮ, ಅಪಾರ ರಾಜಕೀಯ ತಿಳಿವಳಿಕೆ ಮತ್ತು ಪ್ರಬಲ ಇಚ್ಛಾಶಕ್ತಿ ಬೇಕು. ಕೇಂದ್ರದ ಗದ್ದುಗೆಯಲ್ಲಿ ಕುಳಿತಾಗ ಎಲ್ಲ ರಾಜ್ಯಗಳನ್ನೂ ಸಮಾನ ಆಸಕ್ತಿಯಿಂದ ನೋಡುವ ಮನಸ್ಸು ಇರಬೇಕು. ಆದರೆ, ತೃತೀಯ ರಂಗದ ರಚನೆಯ ಮಾತಾಡುತ್ತಿರುವ ಚಂದ್ರಬಾಬು ನಾಯ್ಡು ಆಗಲಿ, ನಿತೀಶ್ ಆಗಲಿ, ಮಮತಾ ಬ್ಯಾನರ್ಜಿಯಾಗಲಿ ಅಂಥದೊಂದು ವಿಶಾಲ ಮನೋಭಾವದ ದೃಷ್ಟಿಕೋನವನ್ನೇ ಹೊಂದಿಲ್ಲ. ಇವರೆಲ್ಲರಿಗೂ ತಂತಮ್ಮ ಪಕ್ಷವೇ ಮುಖ್ಯವಾಗಿದೆ. ತಮ್ಮ ಪಕ್ಷವೇ ಶ್ರೇಷ್ಠ ಎಂಬ ಮೊಂಡುವಾದ ಹೂಡುವ ಚಾಳಿ ಎಲ್ಲರಿಗೂ ಇದೆ.
 ಜೊತೆಗೆ, ತೃತೀಯ ರಂಗದ ಮಾತಾಡುತ್ತಿರುವ ಎಲ್ಲರೂ ಪ್ರಾದೇಶಿಕ ಪಕ್ಷಗಳ ಮುಖಂಡರು. ಅವರ ಜನಪ್ರಿಯತೆ ಆಯಾ ರಾಜ್ಯಗಳ ಮಟ್ಟಿಗೆ ಮಾತ್ರ ಸೀಮಿತ. ಈ ಸರಳ ಸತ್ಯ ತೃತೀಯ ರಂಗದ ಬಗ್ಗೆ ಮಾತಾಡುತ್ತಿರುವ ಎಲ್ಲ ನಾಯಕರಿಗೂ ಗೊತ್ತಿದೆ. ಆದರೂ ಅವರೆಲ್ಲ ನಾನೇ ಮುಂದಿನ ಪ್ರಧಾನಿ ಎಂಬ ಭ್ರಮೆಗೆ ಬಿದ್ದಿದ್ದಾರೆ. ಪ್ರಾದೇಶಿಕ ಪಕ್ಷಗಳ ನಾಯಕರಾದ ಮುಲಾಯಂಸಿಂಗ್ ಯಾದವ್, ಮಮತಾ ಬ್ಯಾನರ್ಜಿ, ನಿತೀಶ್ ಕುಮಾರ್, ಚಂದ್ರಬಾಬು ನಾಯ್ಡು... ಹೀಗೆ ಎಲ್ಲರಿಗೂ 'ಈಗೋ' ಪ್ರಾಬ್ಲಂ ಇರುವುದರಿಂದ, ತೃತೀಯ ರಂಗದ ಪಯಣ ಯಶಸ್ಸು ಕಾಣುವ ಕುರಿತೇ ಸಂಶಯ ಹುಟ್ಟ ತೊಡಗಿದೆ.
ಈ ಎಲ್ಲ ಸಂಗತಿಗಳನ್ನು ಗಮನಿಸಿದ ನಂತರವೇ, ಎನ್‌ಡಿಎ ಮೈತ್ರಿಕೂಟದಿಂದ ಜೆಡಿಯು ಹೊರಬಂದದ್ದು ತುಂಬ ಒಳ್ಳೆಯದಾಯಿತು ಎಂದು ನಾನು ಹೇಳಿದ್ದು. ಹೀಗೆ ಹೇಳಲು ಕಾರಣವಾದ ಐದು ಪ್ರಮುಖ ಸಂಗತಿಗಳನ್ನು ಇಲ್ಲಿ ಪಟ್ಟಿ ಮಾಡುತ್ತಿದ್ದೇನೆ.

ಮೊದಲನೆಯದು: ಎನ್‌ಡಿಎ ಹಾಗೂ ಯುಪಿಎ, ಇವೆರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಅಧಿಕಾರ ಹಂಚಿಕೆಯ ವಿಷಯ ಬಂದಾಗ, ಎರಡೂ ಕೂಟಗಳು ಹೊಂದಾಣಿಕೆಗೆ ಸಿದ್ಧವಿರುತ್ತವೆ. ಮೇಲ್ನೋಟಕ್ಕೆ ಈಗ ಕಾಂಗ್ರೆಸ್ ಹೆಚ್ಚು ಶಕ್ತವಾಗಿರುವಂತೆ ಕಾಣುತ್ತಿರಬಹುದು. ಆದರೆ ಅದರ ಶಕ್ತಿ ದಿನೇದಿನೆ ಬಿಜೆಪಿಗಿಂತ ಕಡಿಮೆಯಾಗುತ್ತಿದೆ.

ಎರಡನೆಯದು: ರಾಷ್ಟ್ರೀಯ ಅಥವಾ ಪ್ರಾದೇಶಿಕ  ಚುನಾವಣೆಯ ಸಂದರ್ಭದಲ್ಲಿ ಪಕ್ಷಗಳು ಸಿದ್ಧಾಂತ ಅಥವಾ ನೀತಿ-ನಿಲುವಿನ ಬಗ್ಗೆ ಮಾತಾಡುತ್ತವೆ. ಆದರೆ ಅಧಿಕಾರ ಹಂಚಿಕೊಳ್ಳುವ ವಿಷಯ ಬಂದಾಗ ಯಾವ ನಾಯಕನಿಗೂ ಸಿದ್ಧಾಂತವೆಂಬುದು ಮುಖ್ಯವಾಗುವುದಿಲ್ಲ. ದೇಶದ ಸಂಪತ್ತನ್ನು ಲೂಟಿ ಮಾಡಲು ಪ್ರತಿಯೊಬ್ಬ ನಾಯಕನೂ ತುದಿಗಾಲಲ್ಲಿ ನಿಂತಿರುತ್ತಾನೆ. ಈಗ, ಬಿಹಾರದಲ್ಲಿ ಎನ್‌ಡಿಎ ಮೈತ್ರಿಕೂಟದಿಂದ ಹೊರಬಂದ ಕಾರಣಕ್ಕೇ ನಿತೀಶ್‌ಕುಮಾರ್ ನೇತೃತ್ವದ ಸರ್ಕಾರ ಬಿದ್ದು ಹೋದರೆ, ಅದರಿಂದ ಬೇರಿನ್ನೇನೂ ಆಗದೇ ಹೋದರೂ, ಒಂದಿಷ್ಟು ಸಂಪತ್ತು ಲೂಟಿಯಾಗುವುದಂತೂ ತಪ್ಪುತ್ತದೆ.

ಮೂರನೆಯದು: ನಮ್ಮದು ಜಾತ್ಯತೀತ ಹಾಗೂ ಜಾತಿ ಅತೀತ ರಾಷ್ಟ್ರ. ಎರಡು ಭಿನ್ನ ಜಾತಿಯ ಜನರಲ್ಲಿ ಅಥವಾ ನಾಯಕರಲ್ಲಿ ದೀರ್ಘಕಾಲದ ಸಾಮರಸ್ಯ ಸಾಧ್ಯವಾಗುವುದೇ ಇಲ್ಲ. ಇಂಥ ಸಂದರ್ಭದಲ್ಲಿ ತೃತೀಯ ರಂಗವು ಅಸ್ತಿತ್ವಕ್ಕೆ ಬಂದರೆ, ಎಲ್ಲ ಜಾತಿ, ವರ್ಗ ಹಾಗೂ ಧರ್ಮದವರಿಗೂ ಒಪ್ಪಿಗೆಯಾಗುವಂಥ ಸೂತ್ರಗಳನ್ನು ರೂಪಿಸುವ ಹೊಣೆಗಾರಿಕೆ ನಾಯಕರ ಮೇಲಿರುತ್ತದೆ. ಇದರಲ್ಲಿ ಯಶಸ್ಸು ಸಿಕ್ಕಿತೆಂದರೆ ಮುಂದಿನ ಹತ್ತು ವರ್ಷಗಳಲ್ಲಿ ನಾವು ನೆರೆಯ ರಾಷ್ಟ್ರವಾದ ಚೀನವನ್ನು ಎಲ್ಲ ವಿಷಯದಲ್ಲೂ ಸರಿಗಟ್ಟಲು ಸಾಧ್ಯವಾಗುತ್ತದೆ. ಈ ಪ್ರಯೋಗವೇನಾದರೂ ಫೇಲ್ ಆದರೆ, ನಾವು ಒಳಜಗಳದಿಂದ ಕಚ್ಚಾಡುವುದನ್ನು ಎಲ್ಲರೂ ನೋಡುವಂತಾಗುತ್ತದೆ.

ನಾಲ್ಕನೆಯದು: ಇತ್ತೀಚಿನ ದಿನಗಳಲ್ಲಿ ರಾಜ್ಯಗಳ ಮಟ್ಟದಲ್ಲಿ ಪ್ರಭಾವಿ ಎನ್ನಿಸಿರುವ ನಾಯಕರ ಹೆಚ್ಚಿನ ಬೆಳವಣಿಗೆಗೆ ಕಾಂಗ್ರೆಸ್ ಕತ್ತರಿ ಹಾಕಿದೆ. ಹಾಗಾಗಿ, ಪ್ರಾದೇಶಿಕ ಪಕ್ಷಗಳ ನಾಯಕರು ಅನ್ನಿಸಿಕೊಂಡವರೆಲ್ಲ ಬಿಜೆಪಿಯ ಕಡೆಗೆ ಆಸೆಯಿಂದ ನೋಡುತ್ತಿದ್ದಾರೆ. ಲೋಕಸಭಾ ಚುನಾವಣೆಗಳು ಸಮೀಪಿಸುತ್ತಿರುವ ಈ ಸಂದರ್ಭವನ್ನು ಸದುಪಯೋಗ ಮಾಡಿಕೊಂಡರೆ, ಪ್ರಮುಖ ಪಕ್ಷವಾಗಿ ಮೆರೆಯಬಲ್ಲ ಎಲ್ಲ ಅವಕಾಶಗಳೂ ಬಿಜೆಪಿಗಿದೆ. ಈಗ ಬಿಜೆಪಿಯ ಪ್ರಚಾರ ಸಮಿತಿಯ ಸಾರಥ್ಯವನ್ನು ನರೇಂದ್ರ ಮೋದಿ ವಹಿಸಿರುವುದರಿಂದ ನಿರೀಕ್ಷೆಗಳು ಮತ್ತಷ್ಟು ಹೆಚ್ಚಿವೆ.

ಐದನೆಯದು: ಈ ಕೆಳಗಿನ ಮೂರು ಅಂಶಗಳ ಬಗ್ಗೆ ಹೆಚ್ಚಿನ ಆಸಕ್ತಿ ತೋರಿದರೆ, ಮುಂದೆ ಬಿಜೆಪಿಯನ್ನು ಕೇಂದ್ರದಲ್ಲಿ ಅಧಿಕಾರಕ್ಕೆ ತರುವ ಸದವಕಾಶ ಕೂಡ ನರೇಂದ್ರ ಮೋದಿಯ ಪಾಲಿಗಿದೆ.

1. ರಾಜ್ಯಗಳ ಮಟ್ಟದಲ್ಲಿ ಮತಗಳನ್ನು ತಂದು ಕೊಡಬಲ್ಲ, ಅಭ್ಯರ್ಥಿಗಳನ್ನೂ ಗೆಲ್ಲಿಸಬಲ್ಲ ಶಕ್ತಿಯಿರುವ ಶಿವರಾಜ್ ಸಿಂಗ್, ರಾಜಸ್ತಾನದ ವಸುಂಧರ ರಾಜೇ ಅರಸ್, ಛತ್ತೀಸ್‌ಗಡದ ರಮಣ್‌ಸಿಂಗ್, ಕರ್ನಾಟಕದ ಬಿ.ಎಸ್. ಯಡಿಯೂರಪ್ಪ, ಹಿಮಾಚಲ ಪ್ರದೇಶದ ಪ್ರೇಮ್‌ಕುಮಾರ್ ಧಮಾಲ್, ಬಿಹಾರದ ಸುಶೀಲ್ ಮೋದಿಯವರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಪಕ್ಷ ತೊರೆದವರನ್ನು ಮತ್ತೆ ಸೇರಿಸಿಕೊಂಡು ಪೂರ್ಣ ಶಕ್ತಿಯೊಂದಿಗೆ ಚುನಾವಣಾ ರಂಗಕ್ಕೆ ಇಳಿಯುವುದು.
2. ಒಂದು ವೇಳೆ ಬಿಜೆಪಿ ಅಧಿಕಾರಕ್ಕೆ ಬಂದರೆ, ಎಲ್ಲ ರಾಜ್ಯಗಳಿಗೆ ಸಮಾನ ಪ್ರಾಶಸ್ತ್ಯ ನೀಡುವುದಾಗಿ, ತಾರತಮ್ಯವಿಲ್ಲದೆ ಸಂಪನ್ಮೂಲಗಳನ್ನು ಹಂಚುವುದಾಗಿ ವಾಗ್ದಾನ ಮಾಡುವುದು.
3. ಬಿಜೆಪಿ ಅಧಿಕಾರದಲ್ಲಿಲ್ಲದ ಉತ್ತರಪ್ರದೇಶ, ಬಿಹಾರ, ಆಂಧ್ರಪ್ರದೇಶ, ಕೇರಳ, ಪಶ್ಚಿಮ ಬಂಗಾಳ, ತಮಿಳುನಾಡು ಮುಂತಾದ ರಾಜ್ಯಗಳಲ್ಲಿ ಪ್ರವಾಸ ಮಾಡಿ ಗೆಲ್ಲುವ ಅಭ್ಯರ್ಥಿಗಳನ್ನು ಗುರುತಿಸುವುದು ಹಾಗೂ ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ತುಂಬುವುದು.
ಇಷ್ಟೆಲ್ಲ ಪ್ರಯತ್ನಿಸಿದ ನಂತರವೂ, ಒಂದು ವೇಳೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆಯಲು ಸಾಧ್ಯವಾಗಲಿಲ್ಲ ಅಂದುಕೊಳ್ಳಿ. ಅಂಥ ಸಂದರ್ಭದಲ್ಲಿ, ಈಗಿರುವುದಕ್ಕಿಂತ ಎರಡು ಪಟ್ಟು ಹೆಚ್ಚಿನ ಪ್ರಬಲ ಪಕ್ಷವಾಗಿ ಬಿಜೆಪಿ ಖಂಡಿತ ಬದಲಾಗಿರುತ್ತದೆ. ಒಂದು ರಾಜಕೀಯ ಸ್ಥಿತ್ಯಂತರಕ್ಕೆ ಅದೇ ಕಾರಣವೂ ಆಗುತ್ತದೆ. ಆನಂತರದಲ್ಲಿ, ಅಂದರೆ ಈಗಲ್ಲದಿದ್ದರೆ ಮತ್ತೊಂದು ಮರು ಚುನಾವಣೆಯಲ್ಲಾದರೂ ಬಿಜೆಪಿಗೆ ಭಾರಿ ಬಹುಮತ ಲಭಿಸಿ ಕೇಂದ್ರದಲ್ಲಿ ಅಧಿಕಾರದ ಗದ್ದುಗೆ ಏರುವ ಸಂದರ್ಭ ಸೃಷ್ಟಿಯಾಗೇ ತೀರುತ್ತದೆ.
ಈ ಹಿಂದೆ, ಅಡ್ವಾಣಿಯವರ ಸಾರಥ್ಯದಲ್ಲಿ ಬಿಜೆಪಿ 180 ಸ್ಥಾನಗಳನ್ನು ಪಡೆದಿತ್ತು. ಈಗ, ನರೇಂದ್ರ ಮೋದಿ ಸಾರಥ್ಯದಲ್ಲಿ ಅದೇ ಪಕ್ಷ 272 ಲೋಕಸಭಾ ಸ್ಥಾನಗಳನ್ನು ಪಡೆವ ಸಂದರ್ಭ ಬರಬಾರದೇಕೆ?

- ಆರ್. ಜಗನ್ನಾಥನ್
anisikeprabha@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement