ಅಂಕಣಗಳು

ಕನ್ನಡದಲ್ಲಿ ತಂತ್ರ ಸಾಹಿತ್ಯ

ವಿಮರ್ಶಕ ಜಿ. ಬಿ. ಹರೀಶ್ ಅವರ 'ತಂತ್ರದರ್ಶನ' ಕೃತಿ ಬೆಂಗಳೂರಿನ ಬಸವನಗುಡಿಯ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನಲ್ಲಿ ಭಾನುವಾರ ಬಿಡುಗಡೆಯಾಗಲಿದೆ. ಕೃತಿಯ ಮುನ್ನುಡಿಯಲ್ಲಿ ಪ್ರಸ್ತಾಪಿತವಾದ ಕೆಲ ಅಂಶಗಳನ್ನು ಸಾಹಿತ್ಯಾಸಕ್ತರಿಗೆಂದು ಇಲ್ಲಿ ನೀಡಲಾಗಿದೆ.
---
ಕಳೆದ ಒಂದು ದಶಕದಿಂದ ದೈವವು ತಂತ್ರ-ಶಾಸ್ತ್ರ ಸಾಹಿತ್ಯದ ಅಧ್ಯಯನವನ್ನು ನನ್ನಿಂದ ಮಾಡಿಸುತ್ತಿದೆ. ಅನೇಕ ಊರುಗಳಿಗೆ ನಾನಾಗಲಿ ನನ್ನ ಶ್ರೀಮತಿ ಗಿರಿಜಾ ಆಗಲಿ ಹೋದಾಗಲೆಲ್ಲ ಶಾಕ್ತ ತಂತ್ರ ಸಾಹಿತ್ಯ ಅಥವಾ ವಾಸ್ತುಶಿಲ್ಪ ಇತ್ಯಾದಿಯನ್ನು ಕುತೂಹಲ, ಗೌರವದಿಂದ ಹುಡುಕುವ ಅಭ್ಯಾಸ ಇಟ್ಟುಕೊಂಡಿದ್ದೇವೆ. ಹಾಸನ, ದೊಡ್ಡಗದ್ದವಳ್ಳಿ, ಕೊಲ್ಹಾಪುರ, ಹಂಪಿ, ಬೆಂಗಳೂರು, ಕೋಲಾರ, ಧಾರವಾಡ ಕನಕಗಿರಿ-ಮಲೆಯೂರು, ಮಧ್ಯ ಪ್ರದೇಶದ 64 ಯೋಗಿನಿ ದೇವಾಲಯ ಇತ್ಯಾದಿ ಕಡೆಗಳಲ್ಲಿ ನಾನು ಅಥವಾ ಗಿರಿಜಾ ಓಡಾಡಿದ್ದೇವೆ. 2002ರಲ್ಲಿ 'ಆಧುನಿಕರಿಗಾಗಿ ತಂತ್ರ ದೀಪಿಗೆ' ಎಂಬ ಕಿರುಹೊತ್ತಗೆ (ಅನುವಾದ) ಪ್ರಕಟವಾಯಿತು. 2008ರಲ್ಲಿ ಹಂಪಿ ಕನ್ನಡ ವಿವಿಯ ಪ್ರಸಾರಾಂಗದ ಅಂದಿನ ನಿರ್ದೇಶಕರಾಗಿದ್ದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರು ನನ್ನಿಂದ ತಂತ್ರಶಾಸ್ತ್ರದ ಪಕ್ಷಿನೋಟ ಬೀರುವ ತಂತ್ರಶಾಸ್ತ್ರ ಕೃತಿ ಬರೆಸಿದರು. ಅವರೇ ಅದನ್ನು ಕನ್ನಡ ವಿವಿಯಿಂದ ಪ್ರಕಟಿಸಿದರು. ಪ್ರೊ. ಎಸ್.ಕೆ. ರಾಮಚಂದ್ರರಾಯರ 'ಇನ್ನರ್ ಯಜ್ಞ' ಕೃತಿಯನ್ನು ಕನ್ನಡಕ್ಕೆ 'ಅಂತರ್ಯಜ್ಞ' ಎಂದು ಅನುವಾದಿಸಿದ್ದೆ.
ಮುಂದೆ ಕೆಲ ವರ್ಷಗಳ ನಂತರ ನನ್ನ ವೇದ-ತಂತ್ರ-ಸಂಸ್ಕೃತಿ ಗ್ರಂಥ ಹೊರಬಂದಿತು. ಡಾ. ಬಸವರಾಜ ಕಲ್ಗುಡಿ ಅವರು ಈ ಕೃತಿ ಬಗ್ಗೆ ಮೆಚ್ಚಿ ಮಾತನಾಡಿದ್ದನ್ನು ವಿಶೇಷವಾಗಿ ಸ್ಮರಿಸಬಯಸುತ್ತೇನೆ. ಮುಂದೆ ಸಿದ್ಧ ಸಾಹಿತ್ಯ, ನಾಥಪಂಥ, ವಿವಿಧ ತಾಂತ್ರಿಕ ಸಂಪ್ರದಾಯ ಗಳನ್ನು ಸ್ವಯಂಮಾಸಕ್ತಿಯಿಂದ ಮಾಡತೊಡಗಿದಂತೆ ನಾನು ನಿಬ್ಬೆರಗಾಗುವ ಹಾಗೆ ನನ್ನನ್ನು ತಂತ್ರಾಧ್ಯಯನ ವ್ಯಾಪಿಸಿಕೊಂಡಿತು. ಮಂತ್ರ-ತಂತ್ರ-ಯಂತ್ರ, ವಿವಿಧ ದೇವಿಯರು, ವಿವಿಧ ಬೌದ್ಧ, ಶೈವ, ವೈಷ್ಣವ, ಶಾಕ್ತ ತಂತ್ರ ಸಾಹಿತ್ಯ ನನ್ನನ್ನು ಆಕರ್ಷಿಸಿತು.
ಕಳೆದ ಕೆಲ ವರ್ಷಗಳಲ್ಲಿ ಎಷ್ಟೋ ತಿಂಗಳು ಓದಲು ಕೈಹಾಕಿದ ಕಡೆಯಲ್ಲೆಲ್ಲಾ ಬರೀ ತಂತ್ರ ಗ್ರಂಥಗಳೇ ಸಿಕ್ಕವು. ಇವೆಲ್ಲದರ ನಡುವೆ ಕನ್ನಡದಲ್ಲಿ ತಂತ್ರವನ್ನು ಕುರಿತು ಬಿಡಿಬಿಡಿಯಾದ ಬರೆಹ, ಅನುವಾದ ಅಲ್ಲಲ್ಲಿ ಬಂದಿದ್ದರೂ ಒಂದು ಪರಿಪ್ರೇಕ್ಷ್ಯದಲ್ಲಿ ಅದನ್ನು ಹೇಳುವ ಪ್ರಯತ್ನ ನಡೆದಿಲ್ಲವೆಂದೇ ನನಗೆ ಅನಿಸಿತು. ನನ್ನಿಂದ ಸಾಧ್ಯವಾಗುವ ಆಕಾರದಲ್ಲಿ ಕನ್ನಡದಲ್ಲಿ ಮೂಲದಲ್ಲಿ ಮತ್ತು ಅನುವಾದದ ಮೂಲಕ ಕನ್ನಡಕ್ಕೆ ಒದಗಿಬಂದಿರುವ ತಾಂತ್ರಿಕ ಸಾಹಿತ್ಯವನ್ನು ಒಂದು ಚೌಕಟ್ಟಿಗೆ ಅಳವಡಿಸಲು  ಇಲ್ಲಿ ಪ್ರಯತ್ನಿಸಿದ್ದೇನೆ. ನನ್ನ ಯತ್ನವನ್ನು ಅಂಕಿತ ಪುಸ್ತಕದ ಪ್ರಕಾಶ್ ಕಂಬತ್ತಳ್ಳಿ ಅವರಲ್ಲಿ ಪ್ರಸ್ತಾಪಿಸಿದಾಗ ಅವರು ಸಂತೋಷದಿಂದ ಈ ಕೃತಿಯನ್ನು ಪ್ರಕಟಿಸಲು ಒಪ್ಪಿದರು. ಇನ್ನು ಪ್ರಕೃತ ಸಂಪಾದನೆಯನ್ನು ಕುರಿತು ಕೆಲವು ಮಾತುಗಳು. ಮೊದಲು ತಂತ್ರವನ್ನು ಕುರಿತಂತೆ ವ್ಯಾಪಕವಾದ ದೃಷ್ಟಿಯುಳ್ಳ ಲೇಖನಗಳ ಪಟ್ಟಿ ಮಾಡಲಾಯಿತು. ಅದರಲ್ಲಿ ಆದಷ್ಟೂ ಪುನರಾ ವರ್ತನೆ ಆಗದಂತೆ ಎಚ್ಚರಿಕೆ ವಹಿಸಲಾಯಿತು. ಮೂಲ ಗ್ರಂಥ ಅಥವಾ ಲೇಖನಗಳ ಲೇಖಕ ಲೇಖಕಿಯರಿಗೆ ಪತ್ರ ಬರೆದು ಅವರಿಂದ ಅನುಮತಿ ಪಡೆಯಲಾಯಿತು. ಕೆಲವು ಲೇಖನಗಳಿಗೆ ಅನುಮತಿ ದೊರಕದ ಕಾರಣ ಅವು ಈ ಪ್ರಕೃತ ಸಂಪಾದಿತ ಗ್ರಂಥಕ್ಕೆ ಅತ್ಯಗತ್ಯವಾದರೂ ಅವುಗಳನ್ನು ಸೇರಿಸಿಕೊಳ್ಳಲಾಗಲಿಲ್ಲ. ಇದರ ಬಗ್ಗೆ ನನಗೆ ವಿಷಾದವಿದೆ.
ಒಂದು ಸ್ಥೂಲ ಚೌಕಟ್ಟನ್ನು ನಾನು ಸಿದ್ಧಪಡಿಸಿಕೊಂಡ ಮೇಲೆ ಪ್ರೊ. ಕೆ.ಜಿ. ನಾಗರಾಜಪ್ಪ ನವರ ಬಳಿ ಚರ್ಚಿಸಿದೆ. ಡೇವಿಡ್ ಗೋರ್ಡನ್ ವೈಟ್ (ತಂತ್ರ ಇನ್ ಪ್ರಾಕ್ಟೀಸ್) ಮುಂತಾದವರ ಸಂಪಾದಿತ ಗ್ರಂಥಗಳನ್ನು ಗಮನಿಸಿದ್ದೇನೆ. ಆದರೂ ಲೇಖನಗಳ ಆಯ್ಕೆ ಅದರ ಹಿಂದಿನ ತಾತ್ತ್ವಿಕ ಗ್ರಹಿಕೆ ಮತ್ತು ಒಂದು ವಿನ್ಯಾಸದಲ್ಲಿ ಜೋಡಿಸಿರುವ ಕ್ರಮ ನನ್ನದೇ ಆಗಿದೆ.

- ಜಿ.ಬಿ ಹರೀಶ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಸ್ಪರ್ಧೆಗೆ ಯಾರೇ ಬರಲಿ, ಹೆದರುವ ಪ್ರಶ್ನೆಯೇ ಇಲ್ಲ, ಕಾನೂನು ಪಾಲನೆ ಕಡ್ಡಾಯ: ಎಲಾನ್ ಮಸ್ಕ್ 'ಏಕಸ್ವಾಮ್ಯ' ಆರೋಪಕ್ಕೆ Reliance ತಿರುಗೇಟು..!'

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಶತ್ರುತ್ವ ತೀವ್ರ ಕಳವಳಕಾರಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಅಸಮಾಧಾನ..!

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ

ಕಬ್ಬು ಬೆಳೆಗಾರರೇ ತಾಳ್ಮೆಯಿಂದಿರಿ, ಸಮಸ್ಯೆ ಬಗೆಹರಿಸುವೆ: ಸಿಎಂ ಡಿಕೆ ಶಿವಕುಮಾರ್ ಭರವಸೆ