ರುಪಾಯಿ ಏಕೆ ಝಣ ಝಣಿಸೋಲ್ಲ?
'ಕನ್ನಡಪ್ರಭ'ದಲ್ಲಿ ಸದ್ದಿಲ್ಲದೇ ಸುದ್ದಿ ಮಾಡುತ್ತಿರುವ ವಿಭಾಗವೆಂದರೆ 'ಕಸ ರಸ' ಅಂಕಣ. ಗೃಹಿಣಿಯರ ಮೆಚ್ಚಿನ ಕೈಪಿಡಿಯಿದು. ಈ ಅಂಕಣದಲ್ಲಿ ತುಂಬಾ ಉಪಯುಕ್ತ ವಿಷಯಗಳು ಬರುತ್ತಿದ್ದು, ಮನೆ ಮತ್ತು ಶರೀರದ ನಿರ್ವಹಣೆಯಲ್ಲಿ ಧುತ್ತನೆ ಎದುರಾಗುವ ಸಮಸ್ಯೆಗಳಿಗೆ ರಾಮಬಾಣ ಕಂಡುಕೊಳ್ಳುವಲ್ಲಿ ಓದುಗರು ಯಶ್ವಸಿ ಆಗಿದ್ದಾರೆ. ನಾನಿರುವ ವಾಸ ಪ್ರದೇಶ ಗೆದ್ದಲು ಪ್ರಧಾನ ಭೂಮಿ. ಗೆದ್ದಲು ಹುಳುಗಳ ಸಹಮಿತ್ರರೆಂದೆನಿಸಿದ ಇರುವೆಗಳು ಮತ್ತು ಗೊದ್ದಗಳ ಕಾಟ ಇರುತ್ತಲೇ ಇತ್ತು. ಸಿಹಿ ಪದಾರ್ಥಗಳಿಗೆ ಮುತ್ತಿಗೆ ಹಾಕುತ್ತಿದ್ದ ಇವುಗಳ ಕಾಟ ನನಗೆ ಸಾಕು ಸಾಕಾಗಿತ್ತು. 'ಕಸ ರಸ'ದಲ್ಲಿ ಇದರ ಕುರಿತಂತೆ ಒಂದು ಮಾಹಿತಿ ಬಂದಿತ್ತು. ನಾನು ಅದನ್ನು ಚಾಚೂ ತಪ್ಪದೆ ಅನುಸರಿಸಿದೆ. ಇರುವೆ, ಗೊದ್ದಗಳ ಕಾಟ ಇನ್ನಿಲ್ಲವಾಯ್ತು. ಕಡಿಮೆ ಖರ್ಚಿನಲ್ಲಿ ಬೃಹತ್ ಕಾರ್ಯಾಚರಣೆ ನಡೆಯಿತು. ಒಂದಾದರು ಇರುವೆಯಾಗಲಿ, ಗೊದ್ದವಾಗಲಿ ಸಾಯಲಿಲ್ಲ. ಆದರೆ ಆ ಜಾಗದಿಂತ ಕಾಲ್ಕಿತ್ತವು. ಅಹಿಂಸಾ ವ್ರತ ಪರಿಪಾಲನೆ! ಜೊತೆಗೆ ಸ್ವಕಾರ್ಯ ಸಾಧನೆ!!
-ಎಸ್.ಆರ್. ಅನುಷಾ, ಕೃಷ್ಣಮೂರ್ತಿಪುರಂ, ಮೈಸೂರು
----
ಒಂದೆರಡು ವರ್ಷಗಳ ಹಿಂದೆ ವಿತ್ತಪ್ರಭ ನಾಲ್ಕು ಪುಟಗಳಲ್ಲಿ ಬ್ರಾಡ್-ಷೀಟ್ನಲ್ಲಿ ಮೈ ತುಂಬಿ ಬರುತ್ತಿದ್ದು, ಓದುಗರು ಕಾತುರದಿಂದ ಕಾಯುತ್ತಿದ್ದರು. ರೇಡಿಯೋ ಕಾಲ ಮುಗಿದು ಟ್ರಾನ್ಸಿಸ್ಟರ್ ಕಾಲ ಬಂದಿದೆ ಎಂದು ಇದನ್ನು ಟ್ಯಾಬ್ಲಾಡ್ ಆಕಾರಕ್ಕೆ ಇಳಿಸಲಾಯಿತು. ಓದುಗರ ಪುಣ್ಯ ಮತ್ತು ನಿಮ್ಮ ದೊಡ್ಡತನ...ಮೊಬೈಲ್ ಕಾಲ ಬಂದಿದೆ ಎಂದು ಇದನ್ನು ಮೊಬೈಲ್ ಆಕಾರಕ್ಕೆ ಇಳಿಸಲಿಲ್ಲ. ವಾರಕ್ಕೊಮ್ಮೆ ಬರುತ್ತಿದ್ದ ವಿತ್ತಪ್ರಭ ಈಗ ಹೆಸರು ಬದಲಾಯಿಸಿಕೊಂಡು ಹದಿನೈದು ದಿನಕ್ಕೊಮ್ಮೆ ಬರುತ್ತಿದೆ. ಹಣಕಾಸು ಪ್ರಪಂಚದಲ್ಲಿ ದಿನಕ್ಕೆ ಕನಿಷ್ಟ ನಾಲ್ಕು ಪುಟಗಳಷ್ಟು ಬೆಳವಣಿಗೆ ಮತ್ತು ಬದಲಾವಣೆಯಾಗುತ್ತಿದ್ದು ಹದಿನೈದು ದಿನಕ್ಕೊಮ್ಮೆ ಒಂದೆರಡು ಪುಟಗಳು ಸಾಕೆ? ಪತ್ರಿಕೆಯೊಂದಿಗೆ ಬರುವ ಟ್ಯಾಬ್ಲಾಡ್ ಪುರವಣಿಯನ್ನು ಯಾರೂ ಗಂಭೀರವಾಗಿ ಪರಿಗಣಿಸುವುದಿಲ್ಲ. ಬ್ರಾಡ್ಷೀಟ್ನಲ್ಲಿ ಬಂದಾಗಲೇ ಅದು ಅರ್ಥಪೂರ್ಣವಾಗಿರುತ್ತದೆ.
-ರಮಾನಂದ ಶರ್ಮಾ,28, 1ನೇ ಎ ಕ್ರಾಸ್,ಸಿಲ್ವರ್ ಓಕ್ ಕಾಲ್ನಿ
ಜೆ.ಪಿ. ನಗರ, 2ನೇ ಹಂತ, ಬೆಂಗಳೂರು.
----
ಪ್ರತಾಪ್ ಅವರೇ, ನೀವು ಮೋದಿ ಫ್ಯಾನ್. ನಾನು ಅವರ ಕಟ್ಟಾ ವಿರೋಧಿ. ಈತ ಸಮಾಜದ ದೃಷ್ಟಿಯಲ್ಲಿ ಕೊಲೆಗಾರ (ಅತೀ ಕೋಮುವಾದಿ-ಭಯಂಕರ ಕೂಡ!) ಜಾತೀಯತೆಯ ಅಹಂಕಾರದಲ್ಲಿ ಆರ್ಎಸ್ಎಸ್ ಮತ್ತು ಬಿಜೆಪಿಯ, 'ಹೀನ ಹಿಂದುತ್ವದ 'ಅಮಾನವೀಯ' ನೆರಳಿನಲ್ಲಿ ಬದುಕುತ್ತಿರುವಾತ ಮೋದಿ. ಇಂತಹವನು ಭಾರತದ ಪ್ರಧಾನಿಯಾಗುವುದು ಎಂದರೆ ಸಂವಿಧಾನದ ಕೊಲೆ ಹತ್ತಿರವಾಗುತ್ತದೆ. ನಾನು ಹಿಂದೂವಾದರೂ, ಮುಸ್ಲಿಮನಾಗಿ ಸಾಯಬೇಕೆಂದಿರುವ, "ದಲಿತ". ಕಾರಣ, ಉನ್ನತ ದರ್ಜೆಯ ಬ್ರಾಹ್ಮಣಿಕೆ, ಕಂಡರಿಯದ ನನ್ನಂತಹವರ ಮೇಲೆ ನಡೆಸಿರುವ ಕ್ರೌರ್ಯ.
-ನಿಮ್ಮವನಲ್ಲದ, ಕೆ. ಎಂ. ತ್ಯಾಗರಾಜ, ಬೆಂಗಳೂರು
----
ಜೂನ್ 11ರಂದು ಆಡ್ವಾಣಿ ರಾಜಿನಾಮೆಯ ಮುಖಪುಟದ ಸುದ್ದಿಗೆ ಬಳಸಿದ ಅವರ ಭಾವಚಿತ್ರ ಸೂಕ್ತವಾಗಿತ್ತು. ಅದನ್ನು ನೋಡಿದಾಗ ಈ ಸಾಲುಗಳು ಸ್ಫುರಿಸಿದವು.
'ಕನ್ನಡಕಗಳು ಕಣ್ಣನ್ನು ಮಾತ್ರ
ಅಡಕಗೊಳಿಸಬಹುದೆ ಹೊರತು
ಕಣ್ಣ ಹನಿಯನ್ನಲ್ಲ!'
ಎಂದು ತೋರಿಸಿದ ಕಣ್ಣು:
ಕೆಮರಾ ಕಣ್ಣು ಹಾಗೂ ಅದರ ಹಿಂದಿನ ಕಣ್ಣು!
ಇಬ್ಬರಿಗೂ ಅಭಿನಂದನೆಗಳು..
ಹೊರಬಂದ ಆ ಹನಿ
ಹನಿಯೋ? ಸುನಾಮಿ ಮರಿಯೋ?
......ಮುಂದೆ ಗೊತ್ತಾಗಬಹುದು!
-ಇಟಗಿ ಈರಣ್ಣ
---
ಇತ್ತೀಚೆಗೆ ನಿಮ್ಮ ಪತ್ರಿಕೆಯ ಅಂಕಣಗಳು ಕೇವಲ ಮೋದಿ ಹೊಗಳುಭಟರಿಗೆ ಮೀಸಲಿಟ್ಟಿರುವುದು ಸ್ಪಷ್ಟ. ಬರಲಿರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಹುದ್ದೆಯ ಪ್ರಬಲ ಆಕಾಂಕ್ಷಿಯಾಗಿರುವ ಮೋದಿಯವರ ಬಗ್ಗೆ ಲೇಖನಗಳು ಬರುವುದು ಸಹಜ. ಆದರೆ ಮೋದಿಯನ್ನು ಒಬ್ಬ ದೇವ ಮಾನವನಂತೆ ಯಾವುದೇ ವೈಫಲ್ಯ, ಇತಿಮಿತಿ ಇಲ್ಲದ ಸೂಪರ್ಮ್ಯಾನ್ ಎಂಬಂತೆ ನಂಬಿಸುವುದೇ ನಿಮ್ಮ ಕೆಲಸ ಆಗಿದೆ. ಮೋದಿಯನ್ನು ಹೊಗಳುವ ನೆಪದಲ್ಲಿ ಆಡ್ವಾಣಿ ಮತ್ತು ಇತರ ನಾಯಕರನ್ನು ಹೇಸಿಗೆಯಾಗುವಷ್ಟು ತೆಗಳ್ತಾ ಇರುವುದು ಪತ್ರಿಕೆಗೆ ಶೋಭೆ ತರುವಂತಹದಲ್ಲ. ಕೇವಲ ಮೋದಿಯನ್ನು ತೆಗಳುವುದೇ ಕೆಲವು ಪತ್ರಿಕೆಗಳ ಕೆಲಸ ಆಗಿರುವುದು ನಿಜ. ಆದರೆ ಯಾವುದೇ ಪತ್ರಿಕೆ ಈ ತರಹದ ಅತಿರೇಕಗಳನ್ನು ಮೀರಿ ಒಂದು ಆರೋಗ್ಯಕರ ಚರ್ಚೆಗೆ ಅವಕಾಶ ಕೊಡಬೇಕು. ಕಳೆದ ಒಂದು ತಿಂಗಳಿಂದ ನಿಮ್ಮ ಪತ್ರಿಕೆಯ ಅಂಕಣಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಈ ಅಭಿಪ್ರಾಯ ತಿಳಿಸಬೇಕೆನಿಸಿತು.
-ರಾಹುಲ್ ರಾಯ್, ಬೆಂಗಳೂರು
rahul.roy@gmail.com