1995ರಲ್ಲಿ ಎಲ್. ಕೆ. ಆಡ್ವಾಣಿ ಮತ್ತು ಜಾರ್ಜ್ ಫರ್ನಾಡಿಂಸ್ರಿಂದಾಗಿ ರೂಪ ತಾಳಿದ ಬಿಜೆಪಿ-ಜೆಡಿ(ಯು) ನಲ್ಲಿ ಇತ್ತೀಚಿನ ವರ್ಷಗಳಲ್ಲಿ ಹೇಳಿಕೊಳ್ಳುವಂಥದ್ದೇನೂ ಉಳಿದಿರಲಿಲ್ಲ. ಆದರೆ ಬಿಜೆಪಿ-ಜೆಡಿ(ಯು) ಮೈತ್ರಿಕೂಟ ಒಂದೊಮ್ಮೆ ಬಹಳ ಬಲಿಷ್ಠವಾಗಿತ್ತು ಎನ್ನುವುದಂತೂ ನಿಜ. ಬಿಹಾರದಲ್ಲಿ 15 ವರ್ಷಗಳಿಂದ ಅಧಿಕಾರ ನಡೆಸುತ್ತಿದ್ದ ಲಾಲು ಪ್ರಸಾದ್ ಯಾದವ್ ಮತ್ತು ಆರ್ಜೆಡಿಯನ್ನು ಕೆಳಕ್ಕಿಳಿಸಿದ್ದೇ ಈ ಮೈತ್ರಿಕೂಟ. ನಿರಂತರ ಎರಡು ಅವಧಿಗೆ ಅವು ಸರ್ಕಾರ ರಚಿಸಿ ಮೆರೆದವು. ಆದರೆ ಈಗದೆಲ್ಲವೂ ಇತಿಹಾಸ. ನರೇಂದ್ರ ಮೋದಿ ವಿಷಯವನ್ನೇ ನೆಪವಾಗಿಟ್ಟುಕೊಂಡು ನಿತೀಶ್ ಕುಮಾರ್ ಅವರು ಇಷ್ಟು ವರ್ಷಗಳ ತಮ್ಮ ಬಿಜೆಪಿಯೊಂದಿಗಿನ ಮೈತ್ರಿಯನ್ನು ಮುರಿದುಕೊಂಡಿದ್ದಾರೆ.
ಈ ಪ್ರಕ್ಷುಬ್ಧ ಸ್ಥಿತಿಯಲ್ಲಿಯೂ ಇವೆರಡೂ ಪಕ್ಷಗಳು ಕೆಚ್ಚೆದೆಯನ್ನೇ ತೋರುತ್ತಿವೆ. ಬೇರೆಯಾಗುವುದರಿಂದ ಇಬ್ಬರಿಗೂ ತಮ್ಮದೇ ಆದ ರೀತಿಯಲ್ಲಿ ಒಳ್ಳೆಯದಾಗಲಿದೆ ಎಂದು ಹೇಳುತ್ತಿವೆ. ನರೇಂದ್ರ ಮೋದಿಯವರನ್ನು ತಮ್ಮ ಸಾರಥಿಯನ್ನಾಗಿ ಮಾಡಿಕೊಳ್ಳಲು ಹೊರಟಿರುವ ಬಿಜೆಪಿಗೆ, ತಮ್ಮ ರಸ್ತೆಗೆ ಅಡ್ಡವಾಗಿದ್ದ ಕಲ್ಲೊಂದನ್ನು ಪಕ್ಕಕ್ಕೆ ಎತ್ತಿಹಾಕಿದ ನಿರುಮ್ಮಳತೆ ಅನುಭವಿಸುತ್ತಿದೆ. ಇನ್ನು ನರೇಂದ್ರ ಮೋದಿ ವಿಚಾರವನ್ನು ಹಿಡಿದುಕೊಂಡು 'ಜಾತ್ಯತೀತ ರಾಜಕೀಯ' ಉತ್ತಮವಾಗಿ ನಿಭಾಯಿಸಿದ್ದಕ್ಕಾಗಿ ತಾನು ಮುಸ್ಲಿಂ ಸಮುದಾಯದ ಮನಗೆಲ್ಲಬಹುದು ಎಂಬ ಖುಷಿ ಜೆಡಿ(ಯು)ಗೆ. 2014ರ ಚುನಾವಣೆಗಳಲ್ಲಿ ನಿತೀಶ್ ಕುಮಾರ್ರ ಪಕ್ಷ ಕಿಂಗ್ಮೇಕರ್ ಆಗಿ ಹೊರಹೊಮ್ಮುವ ಸಾಧ್ಯತೆಗಳೂ ಕಾಣಿಸಿಕೊಳ್ಳುತ್ತಿವೆ. ಅಥವಾ ಅದು ಮಮತಾ ಬ್ಯಾನರ್ಜಿಯವರು ಹೇಳುತ್ತಿರುವ ತೃತೀಯ ರಂಗದ ಭಾಗವಾದರೂ ಆಗಬಹುದು.
ಬಿಜೆಪಿ-ಜೆಡಿ(ಯು) ಮೈತ್ರಿಕೂಟದಿಂದ ಅತಿ ಹೆಚ್ಚು ಲಾಭ ಪಡೆದವರು ನಿತೀಶ್ ಕುಮಾರ್ ಎಂದು ಕೆಲವರು ಹೇಳುತ್ತಾರೆ. ಆದಾಗ್ಯೂ ಈ ಎರಡೂ ಪಕ್ಷಗಳೂ ಒಂದಾದಾಗ, ಕೇಂದ್ರ ಎನ್ಡಿಎ ಸರ್ಕಾರ ನಿತೀಶ್ ಅವರನ್ನು ಕೃಷಿ ಸಚಿವರನ್ನಾಗಿ, ನಂತರ ರೇಲ್ವೇ ಸಚಿವರನ್ನಾಗಿ ಮಾಡಿತ್ತು. ಅದಾದ ನಂತರ ಅವರು ಬಿಹಾರದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. 2005ರ ಚುನಾವಣಾ ಫಲಿತಾಂಶದ ಬಳಿಕ ನಿತೀಶ್ರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂಬ ಜೆಡಿ(ಯು)ನ ಇಚ್ಛೆಗೆ ಬಿಜೆಪಿ ವಿರೋಧ ವ್ಯಕ್ತಪಡಿಸಲಿಲ್ಲ. ಅದಾಗಲೇ ನಿತೀಶ್ ಕುಮಾರ್ ಕೇಂದ್ರ ಸರ್ಕಾರದ ಎರಡು ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದ್ದರಿಂದ, ಚತುರ ಆಡಳಿತಗಾರ ಎಂಬ ಹೆಸರು ಪಡೆದಿದ್ದರು. ಈಗ ಮೋದಿಯವರನ್ನು ರಾಷ್ಟ್ರೀಯ ಅಖಾಡದಲ್ಲಿ ಇಳಿಸುವುದನ್ನು ಅವರು ವಿರೋಧಿಸುತ್ತಿರುವುದು 'ಸಮಯಸಾಧಕತನ'ವೆಂದೇ ಬಿಜೆಪಿ ಭಾವಿಸುತ್ತಿದೆ.
ತಮ್ಮ ರಾಜಕೀಯ ಆಸೆಗಳನ್ನು ಈಡೇರಿಸಿಕೊಳ್ಳಲು ನಿತೀಶ್ ಈ ರೀತಿಯ ಹೆಜ್ಜೆಯಿಟ್ಟುರುವುದು ಇದೇ ಮೊದಲೇನಲ್ಲ. ಬಿಹಾರ ಜನತಾ ದಳದ ಮಹಾಕಾರ್ಯದರ್ಶಿಯಾಗಿದ್ದ ಅವರು 1994ರಲ್ಲಿ ತಮ್ಮ ಬಹುಕಾಲದ ಸಹೋದ್ಯೋಗಿ ಲಾಲು ಪ್ರಸಾದ್ ಯಾದವ್ರ ಜೊತೆಗಿನ ಸಖ್ಯ ಕಡಿದುಕೊಂಡು ಬೇರೆಡೆಗೆ ಹೊರಟರು. ಪರಿಣಾಮವಾಗಿ, ಬಿಹಾರದಲ್ಲಿ ಸಮತಾ ಪಾರ್ಟಿ ಮತ್ತು ಜೆಡಿ(ಯು) ಹುಟ್ಟಿಕೊಂಡವು. ಲಾಲು ಅವರೊಂದಿಗೆ ನಿತೀಶ್ ದೂರವಾಗಿದ್ದಕ್ಕೆ ಕಾರಣವಿಲ್ಲವೆಂದಲ್ಲ. ಅವರ 'ಮಂತ್ರಿಗಿರಿಯ ಕನಸಿಗೆ' ಆಗ ಬಿಜೆಪಿ ರೆಕ್ಕೆ ಪುಕ್ಕ ಕಟ್ಟಿತ್ತು! ಎನ್ಡಿಎ ಸರ್ಕಾರದಡಿಯಲ್ಲಿ ಕೇಂದ್ರ ಸಚಿವರಾಗಿ ದುಡಿದ ನಿತೀಶ್ ನಂತರ ಬಿಹಾರದ ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತರು. ಹಾಗಾಗೇ ಮೋದಿಯವರ ವಿರುದ್ಧ ನಿತೀಶ್ ಕತ್ತಿ ಮಸಿಯುತ್ತಿರುವುದರ ಹಿಂದೆಯೂ, ಇಂಥ 'ಹೆಬ್ಬಯಕೆ'ಗಳೇ ಕೆಲಸ ಮಾಡಿರಬಹುದು.
ಆದರೆ ಒಂದು ವಿಷಯವನ್ನು ನಾವು ಅರ್ಥಮಾಡಿಕೊಳ್ಳಬೇಕು. ನಿತೀಶ್, ಲಾಲು ಪ್ರಸಾದ್ ಅವರೊಂದಿಗೆ ಸಖ್ಯ ಮುರಿದುಕೊಂಡಿದ್ದರ ಮತ್ತು ಬಿಜೆಪಿಯೊಂದಿಗೆ ಬಂಧನ ಕಡಿದುಕೊಂಡಿದ್ದರ ಹಿಂದಿನ ರಾಜಕೀಯ ಸನ್ನಿವೇಶಗಳು ಸಂಪೂರ್ಣ ಭಿನ್ನವಾಗಿವೆ.
ಬಿಹಾರದಲ್ಲಾಗಲೇ ಲಾಲು ಪ್ರಸಾದ್ ಅವರ ಸರ್ಕಾರ ಹೆಸರು ಕೆಡಿಸಿಕೊಂಡಿತ್ತು, ಬಲಹೀನಗೊಂಡಿತ್ತು. ನಿತೀಶ್ ಕುಮಾರ್ ಭ್ರಷ್ಟಾಚಾರ, ಹಿಂಸಾಚಾರ ಮತ್ತು ಅಭಿವೃದ್ಧಿ ಕಾಣದೇ ನಾರುತ್ತಿದ್ದ ಬಿಹಾರಕ್ಕೆ ಸ್ವಚ್ಛಗಾಳಿಯಂತೆ ಬಂದರು. ಈಗ ಅವರು 'ಅಭಿವೃದ್ಧಿ ಮತ್ತು ಏಳಿಗೆ'ಯ ಪರ್ಯಾಯ ಪದವೆಂದು ಹೇಳಲಾಗುತ್ತಿರುವ ಮೋದಿಯವರ ವಿರುದ್ಧ ತೋಳೇರಿಸಿಕೊಂಡು ನಿಂತಿದ್ದಾರೆ.
ಇನ್ನು, ನರೇಂದ್ರ ಮೋದಿ ಬೆಂಬಲಿಗರಲ್ಲಿ ಮೇಲ್ವರ್ಗದವರೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಒಂದೆಡೆ ತಮ್ಮ ಅಭಿವೃದ್ಧಿ ಯೋಜನೆಗಳ ದ್ಯೋತಕವಾಗಿ ಬಿಹಾರಕ್ಕೆ ವಿಶೇಷ ಸ್ಥಾನಮಾನ ಕೊಡಬೇಕೆಂದು ನಿತೀಶ್ ಕೇಳಿಕೊಳ್ಳುತ್ತಿದ್ದರೆ, ಇನ್ನೊಂದೆಡೆ ಅಭಿವೃದ್ಧಿಯಿಂದ ಸದ್ದು ಮಾಡುತ್ತಿರುವ ನರೇಂದ್ರ ಮೋದಿಯಿದ್ದಾರೆ. ನಿತೀಶ್ ಕುಮಾರ್ರಂತೆ ಮೋದಿ ಕೂಡ ಹಿಂದುಳಿದ ವರ್ಗದವರೇ ಆದರೂ ಅವರೆಂದೂ ಮತ ಗಳಿಸುವುದಕ್ಕೋಸ್ಕರ ಆ ಅಂಶವನ್ನು ಬಳಸಿಕೊಂಡವರಲ್ಲ. ಆದರೂ, ಮುಂಬರುವ ದಿನಗಳಲ್ಲಿ ಮೋದಿ ಬಿಹಾರಕ್ಕೆ ಭೇಟಿ ನೀಡಲಿರುವುದರಿಂದ ಹಿಂದುಳಿದ ವರ್ಗಗಳಲ್ಲೂ ಕೆಲವು ಜನ ಅವರತ್ತ ವಾಲಬಹುದು ಎಂದೆಣಿಸಲಾಗುತ್ತಿದೆ. ಇದೇ ವಿಷಯವನ್ನು ಹಿಡಿದುಕೊಂಡು ಬಿಜೆಪಿ ನಾಯಕ ಸುಶಿಲ್ ಕುಮಾರ್ ಮೋದಿ ಆಗಲೇ ಸದ್ದು ಮಾಡತೊಡಗಿದ್ದಾರೆ. ಒಂದು ಹೆಜ್ಜೆ ಮುಂದಕ್ಕೆ ಹೋಗಿರುವ ಅವರು, 'ಹಿಂದುಳಿದ ವರ್ಗದ ವ್ಯಕ್ತಿಯನ್ನು ಪ್ರಧಾನಿಯನ್ನಾಗಿ ಮಾಡಬೇಕಾದ ಸಮಯ ಬಂದಿದೆ(ನರೇಂದ್ರ ಮೋದಿಯವರನ್ನು)' ಎಂದು ಹೇಳುತ್ತಿದ್ದಾರೆ.
ಒಂದು ವೇಳೆ ಜಾತಿಯಾಧಾರದ ಮೇಲೆ ಪ್ರಧಾನಮಂತ್ರಿಗಳ ಆಯ್ಕೆಯಾಯಿತೆಂದರೆ ನಿತೀಶ್ಗಿಂತ ಹೆಚ್ಚು ಲಾಭ ನರೇಂದ್ರ ಮೋದಿಯವರಿಗೇ ಆಗಲಿದೆ. ಬಿಜೆಪಿಯೊಂದಿಗೆ ದೂರವಾಗುವ ಮುನ್ನವೇ ನಿತೀಶ್ ತೃತೀಯ ರಂಗದ ಬಗ್ಗೆ ಮಾತನಾಡತೊಡಗಿದ್ದರು. ರಾಷ್ಟ್ರ ರಾಜಕಾರಣದಲ್ಲಿ ದೊಡ್ಡ ಪಾತ್ರವನ್ನು ವಹಿಸಲು ತಾವೂ ಶಕ್ತರು ಎಂದು ಜನತೆಗೆ ಮನದಟ್ಟು ಮಾಡಲು ಪ್ರಯತ್ನಿಸುತ್ತಿದ್ದರು ಎನ್ನುವುದು ಇದರಿಂದ ಅರ್ಥವಾಗುತ್ತದೆ.
ನಿತೀಶ್ ಕುಮಾರ್ ಮಾಡಿದ ಹಾನಿಯನ್ನು ಸರಿಪಡಿಸುವ ಕೆಲಸ ಅದಾಗಲೇ ಬಿಜೆಪಿಯಲ್ಲಿ ಶುರುವಾಗಿದೆ. ಜೆಡಿ(ಯು)ನ ಮಾಜಿ ನಾಯಕ ಉಪೇಂದ್ರ ಖುಷ್ವಾಹಾರೊಂದಿಗೆ ತುಸು ಅಡ್ಜಸ್ಟ್ಮೆಂಟ್ ಮಾಡಿಕೊಳ್ಳಲು ಅದು ಯೋಚಿಸುತ್ತಿದೆ. ಖುಷ್ವಾಹಾ ಅವರಿಗೆ ಬಹಳಷ್ಟು ನಿಷ್ಠಾವಂತ ಬೆಂಬಲಿಗರಿದ್ದಾರೆ. ಒಂದು ವೇಳೆ ಖುಷ್ವಾಹ್ರೊಂದಿಗೆ ಕೈ ಜೋಡಿಸಿದರೆ ಇದೇ ಮೊದಲ ಬಾರಿಗೆ ಬಿಜೆಪಿಗೆ 35-40 ಸ್ಥಾನಗಳಿಗೆ ಸ್ಪರ್ಧಿಸುವ ಅವಕಾಶ ಸಿಗಲಿದೆ.
ಜೆಡಿ(ಯು) ಮೇಲ್ನೋಟಕ್ಕೆ ಧೈರ್ಯ ಪ್ರದರ್ಶನ ಮಾಡುತ್ತಿದೆಯಾದರೂ, ಬಿಜೆಪಿಯಿಲ್ಲದೇ ತಾವು ಉಳಿಯಬಲ್ಲೆವಾ ಎನ್ನುವ ಹೆದರಿಕೆ ಅದರ ನಾಯಕರನ್ನು ನಡುಗಿಸುತ್ತಿದೆ. ಬಿಜೆಪಿಯಿಂದಾಗಿ ತಮಗೆ ಬರಬಹುದಾಗಿದ್ದ ಮತಗಳು ಎಲ್ಲಿ ತಪ್ಪಿಹೋಗುವವೋ, ಎಲ್ಲಿ ತಮ್ಮ ಸಂಸತ್ ಸ್ಥಾನ ಕೈತಪ್ಪಲಿದೆಯೋ ಎನ್ನುವ ಭಯ ಅವರನ್ನು ಕಾಡುತ್ತಿದೆ.
ಮೋದಿ ಮತ್ತು ನಿತೀಶ್ ಕಾಳಗದಿಂದಾಗಿ ಆ ಪಕ್ಷಗಳು ಬಹಳಷ್ಟು ನಿದ್ದೆಗೆಟ್ಟಿರಬಹುದು. ಆದರೆ ಕಾಂಗ್ರೆಸ್ನ ಮುಖದಲ್ಲಿ ಮಾತ್ರ ಬೃಹತ್ ಮಂದಹಾಸ ಮೂಡಿದೆ. ಏಕೆಂದರೆ, ಜೆಡಿ(ಯು) ತನ್ನಂತೆಯೇ 'ಓಟ್ ಬ್ಯಾಂಕ್ ಜಾತ್ಯಾತೀತತೆಯ' ಸಾಲಿನಲ್ಲಿ ನಿಲ್ಲಬೇಕೆಂದು ಅದು ಬಹಳ ಕಾಲದಿಂದ ಕಾಯುತ್ತಲೇ ಇತ್ತು.
- ಸಂಜಯ್ ಸಿಂಗ್
ಅಂಕಣಕಾರರು