ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಜೈರಾಮ್ ರಮೇಶ್ ಅವರು ಉದ್ಯೋಗ ಖಾತ್ರಿ ಯೋಜನೆ, ಬಯಲು ಸೀಮೆ ಜಲಾನಯನ ಪ್ರದೇಶದ ಅಭಿವೃದ್ದಿ ಇತ್ಯಾದಿ ಗ್ರಾಮೀಣಾಭಿವೃದ್ಧಿ ಯೋಜನೆಗಳಿಗೆ ಹಣ ಬಿಡುಗಡೆಯ ಆದೇಶದ ಪ್ರತಿಯನ್ನು ಸಿದ್ದರಾಮಯ್ಯನವರಿಗೆ ಒಪ್ಪಿಸಿರುವುದಾಗಿ ವರದಿಯಾಗಿದೆ. ಇದನ್ನು ಕೇಂದ್ರ ಮಂತ್ರಿ ಜೈರಾಮ್ ರಮೇಶ್ ಅವರಿಗೆ ರಾಜ್ಯದ ಮೇಲಿರುವ ಪ್ರೀತಿಯೆಂದೂ, ಕೇಂದ್ರದಿಂದ ನಾಡಿಗೆ ಸಿಗುತ್ತಿರುವ ಬಂಪರ್ ಕೊಡುಗೆಯಂತಲೂ, ಕೇಂದ್ರ ನಾಡಿಗೆ ಮಾಡುತ್ತಿರುವ ದೊಡ್ಡ ಉಪಕಾರವೆಂಬಂತೆಯೂ ಬಿಂಬಿಸಲಾಗುತ್ತಿದೆ. ಮತ್ತೊಂದೆಡೆ ಇದು ಮುಂಬರುವ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ನ ತಂತ್ರ ಎಂಬುದೂ ಹಲವರ ಅಭಿಪ್ರಾಯ. ಈ ಅನುದಾನ ಬಿಡುಗಡೆಯಿಂದ ರಾಜ್ಯದಲ್ಲಿ ಕೆಲ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ನೆರವಾಗುವುದಂತೂ ನಿಜ. ಆದರೆ ಕೇಂದ್ರದಿಂದ ರಾಜ್ಯಗಳಿಗೆ ನೆರವು, ನೆರೆ ಪರಿಹಾರ ಎಂಬಂತಹ ವ್ಯವಸ್ಥೆಗಳ ಬಗ್ಗೆ ಅವಲೋಕಿಸಬೇಕಿದೆ.
ಕೇಂದ್ರದಿಂದ ರಾಜ್ಯಗಳಿಗೆ ಅನುದಾನದ ಹೆಸರಿನಲ್ಲಿ ಸಿಗುವ ಹಣ ರಾಜ್ಯಗಳು ಕೇಂದ್ರಕ್ಕೆ ನೇರ ತೆರಿಗೆ, ಅಪ್ರತ್ಯಕ್ಷ ತೆರಿಗೆ, ತೆರಿಗೆಯೇತರ ಆದಾಯ ಎನ್ನುವ ಬಗೆಗಳಲ್ಲಿ ಸಂಗ್ರಹಿಸಿ ಕೊಡುವಂಥದ್ದು. ಕೇಂದ್ರವು ರಾಜ್ಯಗಳಿಂದ ಹೀಗೆ ಪಡೆದ ಹಣದಲ್ಲಿಯೇ ಇಂತಿಷ್ಟು ಹಣವನ್ನು ಅನುದಾನದ ರೂಪದಲ್ಲಿ ರಾಜ್ಯಗಳಿಗೆ ಮರಳಿ ಕೊಡುತ್ತದೆ. ಹಾಗಾಗಿ ಇದರಲ್ಲಿ ಕೇಂದ್ರದ ಉಪಕಾರದ ಮಾತೆಲ್ಲಿ ಬಂತು? ಕರ್ನಾಟಕವು ಕೇಂದ್ರಕ್ಕೆ ಹೆಚ್ಚಿನ ತೆರಿಗೆ ಕೊಡುತ್ತಿರುವ ಮೂರು ಮತ್ತೊಂದು ರಾಜ್ಯಗಳಲ್ಲೊಂದು. 2010-2011ರಲ್ಲಿ ನೇರ ತೆರಿಗೆ, ಅಪ್ರತ್ಯಕ್ಷ ತೆರಿಗೆ, ತೆರಿಗೆಯೇತರ ಆದಾಯ ಎಂಬಂತೆ ಒಟ್ಟು ಕರ್ನಾಟಕದಿಂದ ಕೇಂದ್ರಕ್ಕೆ ಹರಿದು ಹೋದ ಮೊತ್ತ 1,11,418 ಕೋಟಿ ರುಪಾಯಿ! ಇದಕ್ಕೆ ಪ್ರತಿಯಾಗಿ ಕರ್ನಾಟಕಕ್ಕೆ ಪ್ರತೀ ಸಾರಿ ದೇಶದಲ್ಲೇ ಅತೀ ಕಡಿಮೆ ಹಣ ಕೇಂದ್ರದಿಂದ ಬಿಡುಗಡೆಯಾಗುತ್ತದೆ. ವಾಸ್ತವ ಹೀಗಿರುವಾಗ ನಮ್ಮಿಂದಲೇ ಪಡೆದ ಒಂದು ಲಕ್ಷದ ಹನ್ನೊಂದು ಸಾವಿರದ ನಾನೂರ ಹದಿನೆಂಟು ಕೋಟಿ ರುಪಾಯಿ ಹಣದಲ್ಲಿ ಚೂರು-ಪಾರು ಹಣವನ್ನು ಕಂತಿನ ರೂಪದಲ್ಲಿ ಹಿಂತಿರುಗಿ ಕೊಡುವುದನ್ನು ಕೇಂದ್ರವು ರಾಜ್ಯಕ್ಕೆ ಮಾಡುತ್ತಿರುವ ದೊಡ್ಡ ಉಪಕಾರವೆಂದೇಕೆ ಬಣ್ಣಿಸಬೇಕು, ಬೀಗಬೇಕು?
ಈಗಿನ ಕೇಂದ್ರೀಕೃತ ವ್ಯವಸ್ಥೆಯಿಂದಾಗಿ ನಮ್ಮ ರಾಜ್ಯದಲ್ಲಿ ರೈಲ್ವೇ ಹಳಿ ಹಾಕಲು, ಹೊಸದೊಂದು ಉದ್ದಿಮೆ ನಡೆಸಲು ಹೀಗೆ ಎಲ್ಲದಕ್ಕೂ ಕೇಂದ್ರದಿಂದ ಅಪ್ಪಣೆ, ಅನುದಾನಕ್ಕಾಗಿ ಕೈಕಟ್ಟಿ ನಿಲ್ಲಬೇಕು, ಲಾಬಿ ನಡೆಸಬೇಕು. ಕೇಂದ್ರವು ರಕ್ಷಣೆ, ವಿದೇಶಿ ವ್ಯವಹಾರದಂತಹ ಕೆಲ ಜವಾಬ್ದಾರಿಗಳನ್ನು ವಹಿಸಿಕೊಂಡು ಹೆಚ್ಚಿನ ಅಧಿಕಾರವನ್ನು ರಾಜ್ಯಗಳಿಗೆ ಬಿಟ್ಟುಕೊಟ್ಟಿದ್ದರೆ ರಾಜ್ಯಗಳು ತಮ್ಮಾಳ್ವಿಕೆಯಿಂದ ವ್ಯವಸ್ಥಿತವಾಗಿ ಗಟ್ಟಿಗೊಳ್ಳುತ್ತಿದ್ದವು. ಕೇಂದ್ರದಿಂದ ಉಪಕಾರವೆನ್ನುವ ನಾಟಕೀಯ ತೋರ್ಪಡಿಕೆಗೆ ಅವಕಾಶವಿರುತ್ತಿರಲಿಲ್ಲ ಅಲ್ಲವೇ? ಬಲಿಷ್ಠ ರಾಜ್ಯಗಳಿಂದಲೇ ಭಾರತವೆನ್ನುವ ಬಲಿಷ್ಠ ಒಕ್ಕೂಟ ನಿರ್ಮಾಣವಾಗಲು ಸಾಧ್ಯ ಎನ್ನುವುದನ್ನು ಅರಿಯಬೇಕಿದೆ.
- ಮಲ್ಲೇಶ ಬೆಳವಾಡಿ